ಆಕೆ ಆ ಸಂಜೆಯೆಲ್ಲ ವಿಚಿತ್ರವಾಗಿ ತನ್ನನ್ನು ನೋಡುತ್ತಿದ್ದುದು, ಪದ್ಮನಾ
ಭಯ್ಯನ ಮಗಳ_ಅಳಿಯನ ಪ್ರಸ್ತಾಪ, ಪ್ರತಿಯೊಂದೂ ಆತನಿಗೆ ಅರ್ಥವಾಯಿತು.
ಮೊದಲೇ ತಿಳಿಯದೆ ಹೋದೆನೆಂದು ತನ್ನ ಬಗ್ಗೆ ತಾನೇ ರೇಗುತ್ತ ಆತನೆಂದ:
"ಏನೂ ಇಲ್ಲ. ಅದಕ್ಕೆ?"
"ಇನ್ನೇನು ಹೇಳ್ಬೇಕು ನಿಮಗೆ?"
"ಕೆಟ್ಟವಳು!"
"ನೀವೇ ಕೆಡಿಸ್ದೋರು!"
ಮತ್ತೂ ಸ್ವಲ್ಪ ಸಂದೇಹಿಸುತ್ತ ಆತ ಕೇಳಿದ:
"ನಿಜವೇನೆ ಹಾಗಾದರೆ?"
"ಅಷ್ಟು ತಿಳೀದೇನೋ ನಿಮಗೆ!"
ಚಂಪಾ ನಕ್ಕಳು. ಆತ ಆ ನಗುವನ್ನು ನಿಲ್ಲಿಸಿದ. ತನಗೆ ನಿದ್ದೆ ಬಂದಿಲ್ಲವೆಂದು
ಮಗು ಅತ್ತಿತು.
....ಊರೂರು ಸುತ್ತಿ ಆಗ್ಗಾಗೆ ಬರುತ್ತಿದ್ದ ಕಮಲಮ್ಮನ ಗಂಡ, ಹೆಂಡತಿ
ಯನ್ನು ಪ್ರೀತಿಸುವುದಿತ್ತು_ಮನಸ್ಸು ತೃಪ್ತಿಯಾಗುವವರೆಗೆ. ಆ ಬಳಿಕ ಕಮಲಮ್ಮನ
ಪಾಡು ಕಮಲಮ್ಮನಿಗೆ. ಆತ ಮಧ್ಯ ವಯಸ್ಸಿನ ಕಟುಮಸ್ತಾದ ಆಸಾಮಿ.
ಕಮಲಮ್ಮನನ್ನು ಬಿಟ್ಟುಬಿಡುವ,ಬೇರೆ ಮದುವೆ ಮಾಡಿಕೊಳ್ಳುವ,ಯೋಚನೆ
ಆತನಿಗೆ ಎಷ್ಟೋ ಸಾರೆ ಬಂದಿತ್ತು. ಆದರೆ ಯಾವುದೋ ಸಂಸ್ಕಾರ ಅಡ್ಡ ಬಂದು,
"ಛೆ! ಹಾಗೆ ಮಾಡಬಾರದು"ಎಂದಿತ್ತು ಪ್ರತಿಸಲವೂ.
ಅದೇ ಸಂಸ್ಕಾರದ ಫಲವಾಗಿಯೇ ಒಮ್ಮೊಮ್ಮೆ, ಕ್ರೂರವಾಗಿದ್ದರೂ ಸತ್ಯ
ವಾಗಿದ್ದ ಮಾತುಗಳು ಆತನ ಬಾಯಿಯಿಂದ ಹೊರಡುತ್ತಿದ್ದುವು.
"ವೈದಿಕ ವೃತ್ತಿ ಹುಂ!ನಿಜವಾಗಿ ನೋಡಿದರೆ ಇದು ತಿರುಪೆ ಎತ್ತೋದು."
ಅಥವಾ...
"ಹಾಡಿದ್ದೇ ಹಾಡ್ಕೊಂಡು ಬರೋಲ್ವೆ ತಂಬೂರಿ ದಾಸ? ಹಾಗೆ ನಮ್ಮ ಮಂತ್ರ
ಪಠಣ."
ಆತನಿಗೆ ಹೆಚ್ಚಿನ ವಿದ್ವತ್ತಿರಲಿಲ್ಲ. ಸಂಸ್ಕೃತ_ಕನ್ನಡ_ಯಾವುದರಲ್ಲೂ ಆಳವಾದ
ಅಭ್ಯಾಸವಿರಲಿಲ್ಲ.ತನ್ನ ವೃತ್ತಿ ಸಾಗಿಸಿಕೊಂಡು ಹೋಗಲು ಎಷ್ಟು ಬೇಕೋ ಅಷ್ಟೆ.
ಆದರೆ ತನ್ನ ವೈಯಕ್ತಿಕ ಇರುವಿಕೆಗಾಗಿ ಲೋಕದ ಮೇಲೆಯೇ ಮುನಿದುಕೊಂಡಿದ್ದ.
ಆತ ವಕ್ರಾಚಾರ್ಯನಾಗಿದ್ದ. ಸ್ನೇಹಿತರು, ಸಂಬಂಧಿಕರು ಇಲ್ಲವೆ ಕಮಲಮ್ಮನೊಡನೆ
ಮಾತನಾಡಿದಾಗಲೆಲ್ಲ ಆತನ ಮಾತು ವಕ್ರವಾಗಿರುತ್ತಿತ್ತು.
ಇನ್ನು ತಮಗೆ ಮಕ್ಕಳಾಗುವುದಿಲ್ಲವೆಂಬುದು,ಮಕ್ಕಳಾದರೂ ಉಳಿಯುವುದಿಲ್ಲ
ವೆಂಬುದು, ಕಮಲಮ್ಮನಿಗೆ ಖಚಿತವಾಗಿತ್ತು. ಹೆಂಗಸರ ಕಾಹಿಲೆಗಳನ್ನೆಲ್ಲ ಗುಣ
ಪಡಿಸುವ ದೊಡ್ಡ ಲೇಡಿ ಡಾಕ್ವರೊಬ್ಬರ ವಿಷಯ ಒಮ್ಮೆ ಯಾರೋ ಪ್ರಸ್ತಾಪಿಸಿದ್ದರು.