ಪುಟ:Rangammana Vathara.pdf/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

157

"ಆದರೆ ಅವನಣ್ಣ ಒಬ್ಬನಿದಾನಲ್ಲಾ ವಿಘ್ನೇಶ್ವರ?"
"ಯಾರು ಗುಂಡಣ್ನೆ? ಅವನಿಗೊಂದು ಮದುವೆ ಬೇರೆ!"
ಅದೂ ಹೌದೆನ್ನಿಸಿತು ಚಂಪಾವತಿಗೆ. ಅಹಲ್ಯೆಗೆ ತಾನು ಬೆಂಬಲವಾಗಿ ನಿಂತು
ಆಕೆಯನ್ನು ಸುಖಿಯಾಗಿ ಮಾಡಲು ಯತ್ನಿಸಬೇಕೆಂದು ತೀರ್ಮಾನಿಸಿ ಚಂಪಾ ನಿದ್ದೆ
ಹೋದಳು.
...ಹಾಗೆ ಬೆಂಬಲವಾಗಿ ನಿಲ್ಲಲು ಅವಕಾಶವೇ ಇಲ್ಲದ ಹಾಗೆ ಆನಿರೀಕ್ಷಿತವಾ
ದುದು ನಡೆದು ಹೋಯಿತು.
ಆ ಸಂಜೆ. ಹೊರಗೆ ಹಿತ್ತಲಲ್ಲಿ ಬೀದಿಯ ಬಳಿ ಉಪಾಧ್ಯಾಯರ ಹೆಂಡತಿ
ಮಗುವನ್ನಾಡಿಸುತ್ತ ನಿಂತಿದ್ದಳು. ಒಬ್ಬರ ಮುಖ ಇನ್ನೊಬ್ಬರಿಗೆ ಅಸ್ಪಷ್ಟವಾಗಿ ಮಾತ್ರ
ಕಾಣಿಸುವಷ್ಟು ಕತ್ತಲಾಗಿತ್ತು. ಬೀದಿಯ ದೀಪಗಳು ಹತ್ತಿಕೊಂಡಿದ್ದುವು. ಬೀದಿ
ಯುದ್ದಕ್ಕೂ ಕೆಳಕ್ಕೆ ನೋಡುತ್ತಿದ್ದ ಉಪಾಧ್ಯಾಯರ ಹೆಂಡತಿ ಅವರಿಬ್ಬರನ್ನೂ
ಕಂಡರು. ಅಹಲ್ಯಾ ಮತ್ತು ವೆಂಕಟೇಶ, ಪರಸ್ಪರ ಮುಟ್ಟಿಕೊಂಡೇ ಇದ್ದರೇನೋ
ಎನ್ನುವಂತೆ ಒಬ್ಬರಿಗೊಬ್ಬರು ಸಮೀಪವಾಗಿಯೇ ನಡೆದು ಬರುತ್ತಿದ್ದರು.
ಬೇರೆ ಯಾರಾದರು ಇರಬಹುದೆಂದು ಸಂಶಯ ಬಂದು ಮತ್ತೂ ಸ್ವಲ್ಪ ಹೊತ್ತು ಆಕೆ ತಡೆ
ದಳು. ಅವರೇ. ಸಂದೇಹವೇ ಇರಲಿಲ್ಲ. ಆಕೆಯ ಮೆದುಳು ಬೇಗ ಬೇಗನೇ ಕೂಡಿಸಿ
ಕಳೆದು ನೋಡಿತು. ಹೌದು! ಸಂಜೆಯೆಲ್ಲಾ ಅಹಲ್ಯೆಯನ್ನು ಆಕೆ ವಠಾರದಲ್ಲಿ
ನೋಡಿಯೇ ಇರಲಿಲ್ಲ. ಆತನಿಗಂತೂ ಭಾನುವಾರ. ಪ್ರತಿಯೊಂದು ಸ್ಪಷ್ಟ
ವಾಗಿತ್ತು!
ವೆಂಕಟೇಶನನ್ನು ಬಿಟ್ಟು ಅಹಲ್ಯೆಯೊಬ್ಬಳೆ ಈಗ ಬೇಗನೆ ನಡೆಯುತ್ತಿದ್ದಂತೆ
ಕಂಡಿತು.
ಉಪಾಧ್ಯಾಯರ ಹೆಂಡತಿ ಮಗುವನ್ನೆತ್ತಿಕೊಂಡು ರಾಜಮ್ಮನ ಮನೆಗೆ ಧಾವಿಸಿ
ದಳು. ಗುಂಡಣ್ಣ ಅಲ್ಲಿರಲಿಲ್ಲ. ಇದ್ದವಳು ಮುದುಕಿ ಒಬ್ಬಳೇ.
"ರಾಜಮ್ಮ!ರಾಜಮ್ಮ!"
"ಯಾರು? ಏನು?"
ಬಲು ಪ್ರಯಾಸದಿಂದ ಉಸಿರು ಬಿಡುತ್ತ, ಆಕೆ ತಾನು ಕಂಡುದನ್ನು ರಾಜಮ್ಮ
ನಿಗೆ ಹೇಳಿದಳು. ಕೊಳಾಯಿಯ ಬಳಿ ತನಗೆ ಅವಮಾನವಾದ ದಿನದಿಂದ ಉಗುಳು
ನುಂಗಿಯೇ ಇದ್ದ ರಾಜಮ್ಮ್ ಹೆಡೆ ಮೆಟ್ಟಿದ ನಾಗಿಣಿಯಾದಳು. ಆಕೆ ಬಾಗಿಲ ಬಳಿ
ಬಂದು ನಿಂತಳು. ಉಪಧ್ಯಾಯರ ಹೆಂಡತಿ ತನ್ನ ಮನೆ ಗೋಡೆ ಬಾಗಿಲ ಹಿಂದೆ
ಆವಿತಕೊಂಡಳು.
ಅಹಲ್ಯಾ ಅಂಗಳಕ್ಕೆ ಬಂದು, ಬೇಗ ಬೇಗನೆ ನಡುಮನೆಯ ಹಾದಿಯನ್ನು
ದಾಟಿ ಓಣಗಿಳಿದಳು. ಕತ್ತಲಲ್ಲಿ ನಾಲ್ಕು ಕಣ್ಣುಗಳು ತನ್ನನೇ ನೋಡುತ್ತಿದ್ದುದು

ಆಕೆಗೆ ಕಾಣಿಸಲಿಲ್ಲ.