ಪುಟ:Rangammana Vathara.pdf/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

162

ಸೇತುವೆ

ಬಾಡಿತು. ಗೆಳತಿ ಹೊರಟುಹೋದಳೆಂದು ಅಳುತ್ತಲಿದ್ದ ರಾಧೆಯನ್ನು ಅವಳ ಪಾಡಿಗೆ
ಬಿಟ್ಟು, ಕೆರೆಯಾಚೆ ಇದ್ದ ಬಂಡೆ ಕಲ್ಲುಗಳ ಗುಡ್ಡದತ್ತ ಆತ ಸಾಗಿದ.
ವಠಾರದ ಇತಿಹಾಸದಲ್ಲಿ ಇದು ಮೂರನೆಯ ಮದುವೆಯಾದರೂ, ಇಂತಹ
ಹಿನ್ನೆಲೆಯಲ್ಲಿ ಸಮಾರಂಭ ಹೀಗೆ ಜರಗಿದ್ದು ಇದೇ ಮೊದಲು. ಹೀಗಾಗಿ ರಂಗಮ್ಮ
ನಿಗೆ ತುಂಬಾ ಬೇಸರವಾಯಿತು. ಆ ದಿನವೆಲ್ಲಾ ಅವರು ಏನನ್ನೋ ಗೊಣಗುತ್ತಲೇ
ಇದ್ದರು.
ರಾಜಮ್ಮ ಅಡುಗೆ ಮನೆಯಿಂದ ಹೊರಗೆ ಬರಲಿಲ್ಲ.
ಜಯರಾಮುವಿನ ತಾಯಿ ರಾಧೆಯನ್ನು ನೋಡುತ್ತ ಜೋಲುಮೋರೆ ಹಾಕಿ
ಕುಳಿತಳು.
ವೆಂಕಟೇಶ ಆ ಬಳಿಕ ಸ್ವಲ್ಪ ದಿನ ಮೌನವಾಗಿದ್ದ. ಕ್ರಮೇಣ ಚೇತರಿಸಿಕೊಂಡು
ಹಿಂದಿನಂತೆ ಓಡಾಡಿದ. ಆದರೆ ಸಿಡುಕುತನವೊಂದು ಆತನಿಗೆ ಗಟ್ಟಿಯಾಗಿ ಅಂಟಿ
ಕೊಂಡಿತು. ಆತ ತಾಯಿಯೊಡನೆ ಸದಾ ಕಾಲವೂ ಒರಟಾಗಿಯೇ ವರ್ತಿಸಿದ.

೧೭
ಬೇರು ಕಿತ್ತು ಬೇರೆ ಕಡೆ ಮಣ್ಣು ಪಾತ್ರೆಯಲ್ಲಿ ನೆಟ್ಟ ಗಿಡ ಎಷ್ಟೆಂದರೂ ಅಷ್ಟೆ.
ಸರಿಯಾದ ಆರೈಕೆ ಇಲ್ಲದ ಮೇಲಂತೂ ಅವರ ಅವಸ್ಥೆ ಹೇಳುವುದು ಬೇಡ.
ವಠಾರದ ಹೆಚ್ಚಿನ ಸಂಸಾರಗಳೆಲ್ಲ ಅಂಥವು. ಹಲವರು ಕೆಲವು ತಲೆಮಾರು
ಗಳಿಂದ ಬೆಂಗಳೂರಲ್ಲೇ ಒಂದಲ್ಲ ಒಂದು ಕಡೆ ಬದುಕಿದವರು. ಕೆಲವರು ಹಳ್ಳಿಗಳಿಂದ
ಬಂದು ನೆಲೆಸಿದವರು. ಆದರೆ ಅಂಥವರಲ್ಲಿ ಹೆಚ್ಚಿನವರು ತಮ್ಮಹಿಂದೆ ಏನನ್ನೂ
ಬಿಟ್ಟು ಬಂದವರಲ್ಲ.
ಇದಕ್ಕೆ ಅಪವಾದವಾಗಿದ್ದ ಒಂದು ಸಂಸಾರವೆಂದರೆ ರಂಗಮ್ಮನ ಬಲಬದಿಗೆ
ಇದ್ದ ತಾಯಿ_ಮಕ್ಕಳು. ಕೋಲಾರದ ಕಡೆಯ ಆ ಕುಟುಂಬ ತೇಲುತ್ತಿದ್ದ ದೋಣಿ
ಯಾಗಿರಲಿಲ್ಲ. ಅವರಿಗೆ ಒಂದಿಷ್ಟು ಜಮೀನಿತ್ತು. ಆದರೆ ಅವರು ಶ್ರೀಮಂತರೇನೂ
ಅಲ್ಲ.
ಶ್ರೀಮಂತರು ಆ ವಠಾರದಲ್ಲಿ ನೆಲೆಸುವುದಿಲ್ಲವೆಂಬುದು ರಂಗಮ್ಮನಿಗೂ
ಗೊತ್ತಿತ್ತು. ಇತರ ಸಂಸಾರಗಳಿಗೂ ಗೊತ್ತಿತ್ತು. ಆದರೆ ವೆಂಕಟಸುಬ್ಬಮ್ಮನದು
ಜಮೀನ್ದಾರರ ಕುಟುಂಬ ಎಂಬ ಅಂಶವನ್ನು ಅವರು ಗನಮನಿಸಿದ್ದರು. ಆ ಜಮೀನು
ದಾರಿಕೆ ವೆಂಕಟಸುಬ್ಬಮ್ಮನ ಸೀರೆಯಲ್ಲಿ ಆಭರಣದಲ್ಲಿ ಕಂಡು ಬರದೆ, ಅವರೆಲ್ಲರಿಗೆ

ನಿರಾಸೆಯಾಗಿತ್ತು.