ಪುಟ:Rangammana Vathara.pdf/೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
ರಂಗಮ್ಮನ ವಠಾರ
59
 

ರಂಗಮ್ಮ ಬೊಟ್ಟ ಮಾಡಿದತ್ತ ದಂಪತಿ ನೋಡಿದರು. ಹಾಸಿಗೆಯ ಕೆಳಗಿತ್ತು
ಗುಂಡುಕಲ್ಲು. ಅದರ ತಲೆ ಮಾತ್ರ ಕಾಣಿಸುತ್ತಿತ್ತು.
"ಓ! ಇದೆಯಪ್ಪ ಸದ್ಯಃ! ಸುಮ್ನೆ ತೊಂದರೆ ಕೊಟ್ಟ ಹಾಗಾಯ್ತಮ್ಮ ನಿಮಗೆ."
"ಅಯ್ಯೋ, ಇದೇನು ಮಹಾ ತೊಂದರೆ? ನಮ್ಮ ಮನೆಯೊಳಗೇ ನಾವು ಅಲ್ಲಿ
ಇಲ್ಲಿ ಓಡಾಡ್ದೆ ಇರೋಕಾಗುತ್ಯೆ?...ಅಲ್ವೆ ಗುಂಡುಕಲ್ಲನ್ನ ಯಾರು ತಗೊಂಡು
ಹೋಗ್ತಾರೆ ಹೇಳು?"
"ಹೇಳೋಕಾಗಲ್ಲಮ್ಮ ಈಗಿನ ಕಾಲ್ದಲ್ಲೀ..." ರಂಗಮ್ಮನಿಗಿಂತ ತಾನೇ ಹೆಚ್ಚು
ಅನುಭವಿ ಎನ್ನುವಂತೆ ಚಂಪಾ ಅಂದಳು.ಅಂಗಮ್ಮ, ಒಂದು ಕ್ಷಣ ಸುಮ್ಮನಾಗಿ,
ಮತ್ತೆ ಹೇಳಿದರು;
“ಅದೂ ನಿಜಾ ಅನ್ನು. ಆದರೆ, ಇಲ್ಲಿ ಯಾರನ್ನು ಬೇಕಾದರೂ ನೀನು ಕೇಳು
ನಮ್ಮ ವಠಾರದಲ್ಲಿ ಕಳ್ಳತನ ಆಗೋದೂಂತ್ಲೇ ಇಲ್ಲ, ಅಪ್ಪಿ ತಪ್ಪಿ ಹುಡುಗರೇನಾ
ದರೂ ಆಚೆ ಈಚೆಗೆ ಪಾತ್ರೆ ಗೀತ್ರೆ ಇಡ್ಬೇಕೇ ಹೊರತು-"
ಶಂಕರನಾರಾಯಣಯ್ಯನಿಗೆ ತಾಳ್ಮೆ ತಪ್ಪಿತ್ತು.ಆತ ಮನಸ್ಸನಲ್ಲೇ ರೇಗತೊಡ
ಗಿದ್ದ ಕೇಳಿಸುತ್ತಿದ್ದ ಒಣ ಹರಟೆಯನ್ನು ಸಹಿಸಲಾರದೆ ರಂಗಮ್ಮನ ಮಾತನ್ನು
ನಡುವಿನಲ್ಲೆ ಆತ ತಡೆದ:
"ಅಯ್ಯೋ! ವಠಾರ ಅಂದ್ಮಲೆ ಅದೆಲ್ಲಾ ಇಲ್ದೆ ಇರುತ್ಯೆ?...ಮನೇಲೆ
ಇರೀಮ್ಮ ನೀವು. ಬೇಗ್ನೆ ನೀರಿಗೆ ಬಂದ್ಬಿಡ್ತೀವಿ."
ಗಂಡನ ಅವಸ್ಥೆಯನ್ನು ಕಂಡು ಒಳಗಿಂದೊಳಗೇ ಸಂತೋಷಪಡುತ್ತಿದ್ದ ಚಂಪಾ
ರಂಗಮ್ಮನನ್ನು ಮತ್ತೂ ಸ್ವಲ್ಪ ಹೊತ್ತು ಅಲ್ಲಿಯೇ ನಿಲ್ಲಿಸಿಕೊಳ್ಳಲು ಬಯಸಿದಳು.
ಆಕೆ ಗೃಹಕೃತ್ಯಕ್ಕೆ ಸಂಬಂಧಿಸಿ ಕೇಳಿ ತಿಳಿದುಕೊಳ್ಳಬೇಕಾದ ಎಷ್ಟೋ ವಿಷಯಗಳಿದ್ದವು.
-"ಇಲ್ಲಿ ವರ್ತನೆ ಹಾಲು ಹಾಕ್ತಾರೆಯೆ?"
-"ಸೌದೆ ಡಿಪೋ ಎಲ್ಲಿದೆ?"
—"ಅಂಗಡಿ ಬೀದಿ ಎಷ್ಟು ದೂರ?"
-"ಅಲ್ಲಿ ತರಕಾರಿ ಸಿಗುತ್ತೇನು?"
ರಂಗಮ್ಮ ತಾಳ್ಮೆಯಿಂದ ಉತ್ತರವಿತ್ತು ಪ್ರತಿಯೊಂದಕ್ಕೂ ವಠಾರ ಎಷ್ಟೊಂದು
ಅನುಕೂಲವಾಗಿದೆ ಎಂಬುದನ್ನು ಮನಗಾಣಿಸಿ ಕೊಡಲು ಪ್ರಯತ್ನಪಟ್ಟರು.
ಹೊರಗೆ, ಈ ಸಂಭಾಷಣೆಗೆ ಕಿವಿಗೊಡುತ್ತ ನಿಂತಿದ್ದವರು, ಹೊಸಬಳ
ಧೈರ್ಯಕ್ಕೆ ಬೆರಗಾಗದಿರಲಿల్ల.
ಆಗಿನ್ನೂ ಆರು ಘಂಟೆ, ದೀಪ ಹಾಕಲು ಬಹಳ ಹೊತ್ತಿತ್ತು. ಅಲ್ಲದೆ,
ಪಶ್ಚಿಮದ ಸೂರ್ಯನ ಕೃಪೆಯಿಂದ ದೊರೆಯುತ್ತಿದ್ದ ಸ್ವಲ್ಪ ಬೆಳಕೂ ಅಲ್ಲಿ ಇಲ್ಲದೆ
ಇರಲಿಲ್ಲ, ಆದರೂ ಚಂಪಾ ತನ್ನದೊಂದು ಕೇಳಿಕೆಯನ್ನು ಮುಂದಿಟ್ಟು, ರಂಗಮ್ಮನಿಗೆ
'ಚುರುಕು ಮುಟ್ಟಿಸಿದಳು.