ಪುಟ:Vimoochane.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆ ಮಾತುಗಳಲ್ಲಿ ತಿರುಳಿರಲಿಲ್ಲವೆನ್ನುವುದು ನನಗೆ ಗೊತ್ತಿತ್ತು. ನನ್ನ ಅಜ್ಜಿಯ ಕೊನೆಯ ಘಳಿಗೆ ಸಮೀಪಿಸುತ್ತಲಿತ್ತು. ಸಾವು ನನಗೆ ಅಪರಿಚಿತವಾಗಿರಲಿಲ್ಲ. ತಂದೆಯ ಸುತ್ತಲೂ ಬಲು ಸುಲಭವಾಗಿ ಅದು ಬಲೆ ಬೀಸಿ ಆತನ ಜೀವ ಹಿಂಡಿದ್ದನ್ನು ನಾನು ಕಂಡಿದ್ದೆ. ಈಗ ಇನ್ನೊಂದು ಜೀವ. ಇದಾದ ಮೇಲೆ ನನ್ನವರೆನ್ನುವ ಒಬ್ಬರು ಈ ಪ್ರಪಂಚದಲ್ಲಿ ಇಲ್ಲವೇ ಇಲ್ಲ. ಆಗ ನಾನು ಏಕಾಕಿ. ಈ ಪ್ರಪಂಚ ಒತ್ತಟ್ಟಿಗೆ--ನಾನು ಒತ್ತಟ್ಟಿಗೆ.

ಮರು ದಿನ ದೂರದ ಊರಿನಿಂದ ಇಬ್ಬರು ಬಂದರು. ಒಬ್ಬರ ಜುಟ್ಟು ಶಾಲುಗಳು ವಿಭೂತಿ ನಾಮಗಳು ಅವರ ಮಡಿವಂತಿಕೆಯನ್ನು ತೋರಿಸುತ್ತಿದ್ದವು. ಇನ್ನೊಬ್ಬ ಎಳೆಯ ಹುಡುಗ--ಆ ಮಡಿವಂತಿಕೆಯ ಮರಿ. ತಾವು ಅಜ್ಜಿಯ ಸಂಬಂಧಿಕರೆಂದು ಇವರು ಜಾಹೀರು ಮಾಡಿಕೊಂಡರು. ನನ್ನನ್ನು ಆ ವ್ಯಕ್ತಿ ಕೆಂಗಣ್ಣಿನಿಂದ ನೋಡಿದ. ನಶ್ಯ ತೀಡುತ್ತಾ ನೆರೆ ಮನೆಯವರ ಎಡುರು ನನ್ನನ್ನು ಉದ್ದೇಶಿಸಿ, "ಯಾವುದು ಇದು--ಮುಂಡೇದು?" ಎಂದು ಕೇಳಿದ.

ಕಾಹಿಲೆಯಿಂದ ನರಳುತ್ತಿದ್ದ ಅಜ್ಜಿ ಅಲ್ಲದೆ ಇರುತ್ತಿದ್ದರೆ,ಈ ಮುಂಡೇದು ಯಾವುದೆಂಬುನ್ನು ಆತನಿಗೆ ಬಲು ಸುಲಭವಾಗಿ ತೋರಿಸಿಕೊಡುತ್ತದ್ದೆ.

ಆದರೆ ಅಜ್ಜಿಯೇ ನನ್ನ ಪಾಲಿನ ಕೆಲಸ ಮಾಡಿದರು.

"ಶಂಕರಾ " ಎಂದು ಆಕೆ ಆ ಮನುಷ್ಯನನ್ನು ಕರೆದರು. ಆ ಶಂಕರ ಅವಳೆಡೆಗೆ ಬಂದು ಕುಳಿತ.

"ಇಲ್ನೋಡು, ಸಂಸಾರ ಸಂಬಂಧ ಅವರು ಹೋದ ದಿವಸವೇ ಹರಿದು ಹೋಯ್ತು. ಈಗ ಉಳಿದದ್ದೇನೂ ಇಲ್ಲ. ನೀವು ಬೇರೆ, ನಾನು ಬೇರೆ."

ಆ ಮನುಷ್ಯ ಅಷ್ಟು ಸುಲಭವಾಗಿ ಅಜ್ಜಿಯ ಮಾತಿಗೆ ತಲೆ ಬಾಗುವ ಹಾಗಿರಲಿಲ್ಲ.

"ಎಲ್ಲಾದರೂ ಉಂಟೆ? ಕಡೆ ಘಳಿಗೇಲಿ ನಾವಾಗದೆ ಇನ್ಯಾರು ಆಗ್ತಾರೆ? ಆ ಮುಂಡೇದರ ಕೈಲಿ ಕ್ರಿಯೆ ಮಾಡಿಸ್ಕೊಳ್ತಿ ಏನು?"