ಪುಟ:Vimoochane.pdf/೮೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಪೋಲೀಸರು ಶೋಧೆಗೆ ಹೋದಾಗ ಮನೆಯಲ್ಲಿ ಅಗಿರಬಹುದಾದ ಅವಾಂತರವನ್ನು ಊಹಿಸಿಕೊಳ್ಳುತ್ತ ಕುಳಿತೆ. ನಿನ್ನೆ ಸಂಜೆ ಆ ದೊಡ್ಡ ಮನುಷ್ಯರ ಪಾಕೀಟು ಕಳೆದುಹೋದುದರಿಂದ ಆರಂಭವಾಗಿ ಈ ವರೆಗಿನ ಎಲ್ಲ ಘಟನೆಗಳಲ್ಲಿ ನಮ್ಮ ಮನೆಯ ಶೋಧೆಯೊಂದೆ ನನಗೆ ತಿಳಿ ಯದ ಅಂಶವಾಗಿತ್ತು.......

ನನಗೆ ಎಚ್ಚರವಾಗಿತ್ತು. ಆದರೆ ಸ್ಟೇಷನ್ ಇನ್ನೂ ಎದ್ದಿರಲಿಲ್ಲ. ಆಗ-

"ಸ್ವಾಮಿ......ಪೋಲಿಸಪ್ಪನೋರೇ.....ಸ್ವಾಮಿ."ಅದು ನನ್ನ ತಂದೆಯ ಸ್ವರ. ಮನೆಯಿಂದ ಮತ್ತೆ ಬಂದಿದ್ದ ನೇನೋ ಹಾಗಾದರೆ?

"ಏನೋ ಅದು ಗಲಾಟೆ? ರಾತ್ರೆ ಸಹೇಬರು ಹೋದ್ಮೇಲೂ ಮರದ ಕೆಳಗೆ ಮುದುರುಕೊಂಡು ಬಿದ್ದಿದ್ಯಲ್ಲೊ. ನಿನ್ಮಗ ಹುಡುಗೀ ಅಂತ ತಿಳ್ಕೊಂಡ್ಯೇನೊ.ಯಾರು ಮೈಮುಟ್ತಾರೆ ಅವನ್ನ?"

ಹಾಗಾದರೆ ನನ್ನ ತಂದೆ ಮನೆಗೆ ಹೋಗಿಯೇ ಇರಲಿಲ್ಲ! ಮಗನ ಬಿಡುಗಡೆಯ ಹಾದಿ ನೋಡುತ್ತಾ ಆ ರಾತ್ರಿಯನ್ನೆಲ್ಲಾ ಆತ ಸ್ಟೇಷನ್ನಿನ ಎದುರಿಗಿದ್ದ ಮರದ ಕೆಳಗೇ ಕಳೆದಿದ್ದ!

ಮತ್ತೆ ಹೊತ್ತು ಬಲು ನಿಧಾನವಾಗಿ ಕಳೆಯಿತು. ಆ ಅಧಿಕಾರಿಯನ್ನು ನೋಡಿ, "ನನ್ನ ಪೇಪರು ಮತ್ತು ಹಣ" ಎಂದೆ.

"ಏನು?" ಎಂದು ಆತ ಬುಸುಗುಟ್ಟಿದ.

"ನಿನ್ನ್ವೆ ತಾವುಗಳು ನನ್ನನ್ನು ಅರೆಸ್ಟ್ ಮಾಡಿದಾಗ ನನ್ನ ಜೇಬಿನಲ್ಲಿದ್ದ ಒಂದೂವರೆ ರೂಪಾಯಿ ಚಿಲ್ಲರೆಯನ್ನೂ ಉಳಿದಿದ್ದ ಪೇಪರ್‌ಗಳನ್ನೂ ಭದ್ರತೆಗಾಗಿ ವಶಪಡಿಸ್ಕೊಂಡ್ರಲ್ಲ ಸಾರ್?"

ನನ್ನ ಮಾತಿನಲ್ಲಿ ನನಗರಿಯದ ಹಾಗೆಯೇ ವ್ಯಂಗ್ಯ ಬೆರೆಯುತ್ತಿತ್ತು.

ಅಧಿಕಾರಿಗೆ ಅದು ಸಹನೆಯಾಗಲಿಲ್ಲ.