ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಪಿಡಿದು

ವಿಕಿಸೋರ್ಸ್ದಿಂದ



Pages   (key to Page Status)   

ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಪಿಡಿದು ಅಂತಃಕರಣಚತುಷ್ಟಯವೆಂಬ ಪಶುವಂ ಕಟ್ಟಿ ಓಂಕಾರವೆಂಬ ಶಿಣಿಗೋಲಂ ಪಿಡಿದು ವ್ರತ ಕ್ರಿಯವೆಂಬ ಸಾಲನೆತ್ತಿ ನಿರಾಶೆಯೆಂಬ ಕುಂಟೆಯಂ ತುರುಗಿ ದುಷ್ಕರ್ಮಂಗಳೆಂಬ ದುರ್ಮಲರಿಗಳಂ ಕಳೆದು ನಾನಾ ಮೂಲದ ಬೇರಂ ಕಿತ್ತು ಜ್ಞಾನಾಗ್ನಿಯೆಂಬ ಬೆಂಕಿಯಂ ಸುಟ್ಟು ಈ ಹೊಲನ ಹಸನಮಾಡಿ ಬಿತ್ತುವ ಪರ್ಯಾಯವೆಂತೆಂದೊಡೆ ನಾದ ಬಿಂದು ಕಳೆ ಮೊಳೆ ಹದ ಬೆದೆಯನರಿದು ಸ್ಥೂಲವೆಂಬ ದಿಂಡಿಂಗೆ ಶ್ರೀದೇವರೆಂಬ ತಾಳನಟ್ಟು ಸುಷುಮ್ನನಾಳವೆಂಬ ಕೋವಿಯಂ ಜೋಡಿಸಿ ಮೇಲೆ ತ್ರಿಕೂಟಸ್ಥಾನವೆಂಬ ಬಟ್ಟೆಯಂ ಬಲಿದು ಕುಂಡಲಿಯ ಸರ್ಪನ ಹಗ್ಗವಂ ಬಿಗಿದು ಹಂಸನೆಂಬ ಎತ್ತಂ ಕಟ್ಟಿ ಪ್ರಣವವೆಂಬ ಬೀಜವ ಪಶ್ಚಿಮ ಮುಖಕ್ಕೆ ಬಿತ್ತಿ ಸಂತೋಷವೆಂಬ ಬೆಳೆಯಂ ಬೆಳೆದು ಈ ಬೆಳೆಯ ಕೊಯಿದುಂಬ ಪರ್ಯಾಯವೆಂತೆಂದೊಡೆ ಬಾಗುಚಂದನೆಂಬ ಕುಡುಗೋಲಂ ಪಿಡಿದು ಜನನದ ನಿಲವಂ ಕೊಯಿದು
ಮರಣದ ಸೂಡಂ ಕಟ್ಟಿ ಆಕಾಶವೆಂಬ ಬಣಬೆಯ ಒಟ್ಟಿ ಅಷ್ಟಾಂಗಯೋಗವೆಂಬ ಜೀವಧನದಿಂದಮೊಕ್ಕಿ ತಾಪತ್ರಯವೆಂಬ ಮೆಟ್ಟನಂ ಮೆಟ್ಟಿಸಿ ಪಾಪದ ಹೊಟ್ಟ ತೂರಿ ಪುಣ್ಯದಜರ ಹಮ್ಮನುಳಿಯೆ ನಿರ್ಮಲನೆಂಬ ಘನರಾಶಿಯಂ ಮಾಡಿ ಚಿತ್ರಗುಪ್ತರೆಂಬ ಶಾನುಭೋಗರ ಸಂಪುಟಕ್ಕೆ ಬರಹಂ ಬರೆಸದೆ ವ್ಯವಹಾರಂ ಕದ್ದು ನಮ್ಮ ಶ್ರೀಶೈಲ ಚೆನ್ನಮಲ್ಲಿಕಾರ್ಜುನನಲ್ಲಿ ಭಾನುಗೆ ಒಂದೆ ಮುಖವಾದ ಒಕ್ಕಲುಮಗನ ತೋರಿಸಯ್ಯ ನಿಮ್ಮ ಧರ್ಮ ಶ್ರೀಶೈಲಚೆನ್ನಮಲ್ಲಿಕಾರ್ಜುನಪ್ರಭುವೆ.