ಪೃಥ್ವಿಯೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು
ಭಿನ್ನಗಂಧದ ಹಂಗುಹರಿದು
ಆಚಾರಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ಘ್ರಾಣವು. ಅಪ್ಪುವೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು
ಭಿನ್ನರುಚಿಯ ಹಂಗುಹರಿದು
ಗುರುಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ಜಿಹ್ವೆಯು. ಅಗ್ನಿಯೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು
ಭಿನ್ನರೂಪದ ಹಂಗುಹರಿದು
ಶಿವಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ನೇತ್ರವು. ಪವನವೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು
ಭಿನ್ನಸ್ಪರ್ಶದ ಹಂಗುಹರಿದು
ಜಂಗಮಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ಸರ್ವಾಂಗವು. ಆಕಾಶವೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು
ಭಿನ್ನಶಬ್ದದ ಹಂಗುಹರಿದು
ಪ್ರಸಾದಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ಕರ್ಣವು. ಆತ್ಮವೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು
ಭಿನ್ನತೃಪ್ತಿಯ ಹಂಗುಹರಿದು
ಮಹಾಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ಹೃದಯವು. ಇಂತೀ ಷಡ್ವಿಧ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು
ಷಡ್ವಿಧ ಭಿನ್ನಪದಾರ್ಥದ ಹಂಗುಹರಿದು ಷಡ್ವಿಧ ಇಂದ್ರಿಯಂಗಳು ಷಡ್ವಿಧಲಿಂಗಕ್ಕೆ ಷಡ್ವಿಧ ವದನಂಗಳಾಗಿ ಅಖಂಡೇಶ್ವರಾ
ನಾನೆ ನೀನಾದೆನಯ್ಯಾ.