ಪೃಥ್ವ್ಯಾದಿಪಂಚತತ್ವಕ್ಕೆ ಇಪ್ಪತ್ತೈದು ಗುಣಂಗಳು ಸಹಿತ ಮೂವತ್ತನೊಳಗು ಮಾಡದೆ ಪ್ರಾಣಾದಿ ಪಂಚವಾಯುವಂ ಸತ್ಪ್ರಾಣವಂ ಮಾಡಿ
ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ಈ ಐವರನು ಭೂತಗ್ರಾಮಂಗಳಿಂದರಿದು
ಶ್ರೋತ್ರದಿಂ ಪಂಚಜ್ಞಾನೇಂದ್ರಿಯಂಗಳ ವ್ಯವಹಾರವನರಿದು ಮುಂದರಿವುದು
ನಾದ ಅನಾದ ಸುನಾದ ಮಹಾನಾದ ಅನಾಹತನಾದವೆಂಬ ನಾದಪಂಚಕದಿಂದ ನಿರತನಾಗಿ
ಗರ್ಭ ಸಂಸಾರ ದೇಹ ದಾರಿದ್ರ ದುಮ್ಮಲವೆಂಬ ಪಂಚ ಉಪಾಯಂಗಳ ಹೊದ್ದಲೀಯದೆ
ದೇಹ ಶಿರ ಮುಖ ಪಾಣಿ ಚರಣವೆಂಬ ಪಂಚಾಂಗ ಹೀನನಾಗದೆ ಅವಯವ ಸಂಪೂರ್ಣನಾಗಿ
ಇಂತೀ ಪಂಚತತ್ವದ ಗುಣ ಇಪ್ಪತ್ತೈದು
ಪಂಚಸಂಪಾದನೆ ನಾಲ್ವತ್ತೈದು
ಇದರ ಅನುಭಾವಿ ಬಸವಣ್ಣ
ಮಹಾನುಭಾವಿ ಪ್ರಭುದೇವರು. ಇವರಿಬ್ಬರ ಸಂಗದಿಂದ ನಾನು ಸ್ವಯಾನುಭಾವಿಯಾದೆನು ಕಾಣಾ ಕೂಡಲಚೆನ್ನಸಂಗಮದೇವಾ