ಪ್ರವೃತ್ತಿ ನಿವೃತ್ತಿಯೆಂದು ಎರಡು ತೆರನಾಗಿಹುದೆಂಬರು. ಪ್ರವೃತ್ತಿಯೇ ಶಕ್ತಿಮಯವೆಂದೆಂಬರು. ನಿವೃತ್ತಿಯೇ ಭಕ್ತಿಮಯವೆಂದೆಂಬರು. ಪ್ರವೃತ್ತಿಯೇ ಮಾಯೆಯೆಂದೆಂಬರು. ನಿವೃತ್ತಿಯೇ ನಿರ್ಮಾಯೆಯೆಂದೆಂಬರು. ಪ್ರವೃತ್ತಿ ನಿವೃತ್ತಿಗೆ ಪರಮ ಕಾರಣವಾಗಿ ಪರಶಿವನೆಂದೆಂಬರು. ಇದುಕಾರಣ
ಎನಗೆ ಪ್ರವೃತ್ತಿಯೂ ಇಲ್ಲ; ನಿವೃತ್ತಿಯೂ ಇಲ್ಲ; ಪರಮ ಕಾರಣನೆಂಬುದೂ ಇಲ್ಲ. ಶಿವ ಶರಣನೆಂಬೆರಡೂ ಏಕಾರ್ಥವಾಗಿ ನಿರಾಕಾರ ಪರವಸ್ತು ತಾನೊಂದೆಯಾಯಿತ್ತಾಗಿ ತನ್ನಿಂದನ್ಯರಾಗಿ ಉಂಟೆಂಬುದೇನನು ಹೇಳಲಿಲ್ಲ. ತಾನೆ ಪರಾಪರವಸ್ತು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.