ಬಟ್ಟೆಯ ಬಡಿವ ಕಳ್ಳಂಗೆ
ಬೇಹು ಸಂದು ಕಳವು ದೊರಕಿದಂತಾಯಿತ್ತು. ಕುರುಡನು ಎಡಹುತ್ತ ತಡಹಿ ಹಿಡಿದು ಕಂಡಂತಾಯಿತ್ತು. ನಿರ್ಧನಿಕ ಧನದ ಬಯಕೆಯಲ್ಲಿ ನಡೆವುತ್ತ ಎಡಹಿದ ಕಲ್ಲು ಪರುಷವಾದಂತಾಯಿತ್ತು. ಅರಸುವಂಗೆ ಅರಿಕೆ ತಾನಾದಂತಾಯಿತ್ತು. ಎಲೆ ಗುಹೇಶ್ವರಾ ನೀನು ಎನಗೆ ದೊರಕುವುದೆಂಬುದು
ನಾ ಮುನ್ನ ಮಾಡಿದ ಸುಕೃತದ ಫಲ ! ಏನ ಬಣ್ಣಿಪೆ ಹೇಳಾ ?