ಬಲ್ಲಿದ ಬಲ್ಲಿದರೆಂಬವರು ತಮ್ಮಿಂದ ತಾವಾದ ಸ್ವತಂತ್ರಶೀಲರೆ ? ಅಲ್ಲ. ಬ್ರಹ್ಮ ಬಲ್ಲಿದನೆಂದಡೆ
ಶಿರ ಹೋಗಲದೇನು ? ಹರಿ ಬಲ್ಲಿದನೆಂದಡೆ
ಹಲವು ಭವಕ್ಕೆ ಬರಲದೇನು ? ಅಂಧಕಾಸುವ ಬಲ್ಲಿದನೆಂದಡೆ ಹರನ ಅಂಗಾಲ ಕೆಳಗೆ ಇರಲೇನು ? ದಕ್ಷ ಬಲ್ಲಿದನೆಂದಡೆ
ಹೋಮಕ್ಕೆ ಗುರಿಯಾಗಲದೇನು ? ಕೋಪಾಗ್ನಿರುದ್ರನೆಂಬ ಜಮದಗ್ನಿ ಬಲ್ಲಿದನೆಂದಡೆ ಆತನ ತಲೆಯನರಿಯಲದೇನು ? ಪರಶುರಾಮ ಬಲ್ಲಿದನೆಂದಡೆ ತನ್ನ ಬಿಲ್ಲ ಬಿಟ್ಟು ಹೋಗಲದೇನು ? ಸಹಸ್ರಾರ್ಜುನ ಬಲ್ಲಿದನೆಂದಡೆ
ತೋಳು ತುಂಡಿಸಲದೇನು ? ಅಂಬುಧಿ ಬಲ್ಲಿತ್ತೆಂದಡೆ
ಅಪೋಶನಕ್ಕೊಳಗಾಗಲದೇನು ? ಅಗಸ್ತ್ಯ ಬಲ್ಲಿದನೆಂದಡೆ ಅರಣ್ಯದೊಳಗೆ ತಪವ ಮಾಡಲದೇನು ? ನಳರಾಜ ಬಲ್ಲಿದನೆಂದಡೆ ತನ್ನ ಸತಿಯನಿಟ್ಟು ಹೋಗಲದೇನು ? ಕೃಷ್ಣ ಬಲ್ಲಿದನೆಂದಡೆ
ಬೇಡನ ಅಂಬು ತಾಗಲದೇನು ? ರವಿ ಶಶಿಗಳು ಬಲ್ಲಿದರೆಂದಡೆ
ರಾಹುಕೇತು ಗ್ರಹಿಸಲದೇನು ? ಶ್ರೀರಾಮ ಬಲ್ಲಿದನೆಂದಡೆ
ತನ್ನ ಸತಿ ಕೋಳುಹೋಗಲದೇನು ? ಪಾಂಡವರು ಬಲ್ಲಿದರೆಂದಡೆ ತಮಗೆ ಹಳುವಟ್ಟು ಹೋಗಲದೇನು ? ಹರಿಶ್ಚಂದ್ರ ಬಲ್ಲಿದನೆಂದಡೆ
ಸ್ಮಶಾನವ ಕಾಯಲದೇನು ? ಹರನೆ ನೀ ಮಾಡಲಿಕೆ ರುದ್ರರು
ನೀ ಮಾಡಲಿಕೆ ದೇವರ್ಕಳು
ನೀ ಮಾಡಲಿಕೆ ಬಲ್ಲಿದರು
ನೀ ಮಾಡಲಿಕೆ ವೀರರು
ನೀ ಮಾಡಲಿಕೆ ಧೀರರು. ಅಮೂರ್ತಿ
ಮೂರ್ತಿ
ನಿರಾಕಾರ
ನಿರ್ಮಾಯ_ ಇಂತು ಬಲ್ಲಿದರೆಂಬವರ ಇನ್ನಾರುವ ಕಾಣೆ ನಿಮ್ಮ ತಪ್ಪಿಸಿ ಕೂಡಲಚೆನ್ನಸಂಗಮದೇವಾ