ಬಾರದ ಮಳೆ

ವಿಕಿಸೋರ್ಸ್ ಇಂದ
Jump to navigation Jump to search


ಹೊಸ ವರ್ಷದ ಮೊದಲಿನಿಂದ ಮಳೆ ಬಾರದೆ ಹೋಗಿದೆ,
ಬೇಲಿ ಸುಟ್ಟು ಹೂವು ಬೆಂದು ಹಾದಿ ಕೆಂಡವಾಗಿದೆ,
ನೀರಿಲ್ಲದ ಕೆರೆಗಳಲ್ಲಿ ಜಲಚರಗಳು ಸತ್ತಿವೆ,
ಬತ್ತಿದ ಮೊಲೆಯನ್ನು ಚೀಪಿ ಮಕ್ಕಳು ಮರಿ ಅಳುತಿವೆ.

ಬಿಸಿಲಿನಲ್ಲಿ ಸಾಲು ಸಾಲು ಹೆಣ್ಣು ಗಂಡು ಹೊರಟಿವೆ,
ಬಾಯಾರಿದ ಬಾವಿಯೊಳಗೆ ನೀರಿಲ್ಲದ ಬಿಂದಿಗೆ,
ಎಷ್ಟು ದೂರ ಹೋಗಬೇಕೊ ಒಂದು ಚಮಚ ನೀರಿಗೆ,
ಎಲ್ಲರ ಜಪ, ಎಲ್ಲರ ತಪ 'ನೀರು ಬರುವುದೆಂದೆಗೆ?'

ಹೆಣ್ಣ ಹಣಿಯ ಕುಂಕುಮಕ್ಕೆ ಬೆವರಿವ ಹನಿ ಇಳಿದಿದೆ,
ಉಟ್ತ ಸೀರೆ ಬೆವರಿನಿಂದ ಪೂರ್ತಿ ಒದ್ದೆಯಾಗಿದೆ,
ನೆರಳಿನಲ್ಲಿ ಕುಳಿತು ಬರೆದ ಕವಿತೆಯಲ್ಲಿ ಏನಿದೆ,
ಕವಿತೆಯೇನೊ ಕೈಚಾಚಿದೆ ಪಾತಾಳದ ಆಳಕೆ !

ಬಾರದ ಮಳೆಗೊಂದು ಹೆಸರಿಟ್ಟರೇತಕೊ ಹಿರಿಯರು,
ಅದರಂತೆಯೆ ಮಾಡುತಿಹರು ನಮ್ಮೂರಿನ ಕಿರಿಯರು,
ಪಂಚಾಂಗದ ಹಾಗೆ ಈಗ ಮಳೆಯು ಬಾರದೆನ್ನಲೆ,
ನೀರಿಲ್ಲದ ಕವನದಲ್ಲಿ ಕನಸೊಂದನು ಹುಡುಕಲೆ ?

"https://kn.wikisource.org/w/index.php?title=ಬಾರದ_ಮಳೆ&oldid=3577" ಇಂದ ಪಡೆಯಲ್ಪಟ್ಟಿದೆ