ಭಕ್ತಿಯ ಸ್ಥಳಕುಳವನರಿಯದೆ ಬರಿದೆ ಭಕ್ತರೆನಿಸಿಕೊಂಬ ಮುಕ್ತಿಗೇಡಿಗಳನೇನೆಂಬೆನಯ್ಯ. ಅನಾದಿಪರಶಿವನು ತನ್ನ ಲೀಲೆಯಿಂದೆ ತಾನೆ ಗುರುಲಿಂಗಜಂಗಮವಾಗಿ ಬಂದನೆಂದರಿದು ತನುಮನಧನವ ಸಮರ್ಪಿಸಿ ಘನಮುಕ್ತಿಯ ಪಡೆಯಲರಿಯದೆ
ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳನೆ ಭುಂಜಿಸಿ
ಸಂಸಾರವಿಷಯರಸವೆಂಬ ನೀರನೆ ಕುಡಿದು
ಮಾಯಾಮೋಹವೆಂಬ ಮದವು ತಲೆಗೇರಿ ಸೊಕ್ಕಿದೆಕ್ಕಲನಂತೆ ತಿರುಗುವ ನರಕಜೀವಿಗಳ ಭಕ್ತರೆನಬಹುದೇ ಅಖಂಡೇಶ್ವರಾ ?