ಭಕ್ತ ಮಹೇಶ ಪ್ರಸಾದಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಎಂದಿಂತು ಷಟ್‍ಸ್ಥಲವಾರು: ಭಕ್ತ ಮಹೇಶ ಈ ಎರಡು ಗುರುಸ್ಥಲ; ಪ್ರಸಾದಿ ಪ್ರಾಣಲಿಂಗಿ ಈ ಎರಡು ಲಿಂಗಸ್ಥಲ; ಶರಣ ಐಕ್ಯ ಈ ಎರಡು ಜಂಗಮಸ್ಥಲ. ಇವಕ್ಕೆ ಅಂಗಂಗಳಾವವೆಂದಡೆ: ಭಕ್ತಂಗೆ ಪೃಥ್ವಿಯೆ ಅಂಗ
ಮಹೇಶ್ವರಂಗೆ ಅಪ್ಪುವೆ ಅಂಗ
ಪ್ರಸಾದಿಗೆ ಅಗ್ನಿಯೆ ಅಂಗ
ಪ್ರಾಣಲಿಂಗಿಗೆ ವಾಯುವೆ ಅಂಗ
ಶರಣಂಗೆ ಆಕಾಶವೆ ಅಂಗ
ಐಕ್ಯಂಗೆ ಆತ್ಮವೆ ಅಂಗ. ಈ ಅಂಗಂಗಳಿಗೆ ಹಸ್ತಂಗಳಾವವೆಂದಡೆ: ಭಕ್ತಂಗೆ ಸುಚಿತ್ತವೆ ಹಸ್ತ
ಮಹೇಶ್ವರಂಗೆ ಸುಬುದ್ಧಿಯೆ ಹಸ್ತ
ಪ್ರಸಾದಿಗೆ ನಿರಹಂಕಾರವೆ ಹಸ್ತ
ಪ್ರಾಣಲಿಂಗಿಗೆ ಸುಮನವೆ ಹಸ್ತ
ಶರಣಂಗೆ ಸುಜ್ಞಾನವೆ ಹಸ್ತ
ಐಕ್ಯಂಗೆ ಸದ್ಭಾವವೆ ಹಸ್ತ. ಈ ಹಸ್ತಂಗಳಿಗೆ ಲಿಂಗಂಗಳಾವವೆಂದಡೆ: ಸುಚಿತ್ತಹಸ್ತಕ್ಕೆ ಆಚಾರಲಿಂಗ ಸುಬುದ್ಧಿಹಸ್ತಕ್ಕೆ ಗುರುಲಿಂಗ
ನಿರಹಂಕಾರಹಸ್ತಕ್ಕೆ ಶಿವಲಿಂಗ
ಸುಮನಹಸ್ತಕ್ಕೆ ಚರಲಿಂಗ
ಸುಜ್ಞಾನ ಹಸ್ತಕ್ಕೆ ಪ್ರಸಾದಲಿಂಗ
ಸದ್ಭಾವಹಸ್ತಕ್ಕೆ ಮಹಾಲಿಂಗ
ಈ ಲಿಂಗಂಗಳಿಗೆ ಮುಖಂಗಳಾವವೆಂದಡೆ: ಆಚಾರಲಿಂಗಕ್ಕೆ ಘ್ರಾಣ
ಗುರುಲಿಂಗಕ್ಕೆ ಜಿಹ್ವೆ
ಶಿವಲಿಂಗಕ್ಕೆ ನೇತ್ರ
ಚರಲಿಂಗಕ್ಕೆ ತ್ವಕ್ಕು
ಪ್ರಸಾದಲಿಂಗಕ್ಕೆ ಶ್ರೋತ್ರ
ಮಹಾಲಿಂಗಕ್ಕೆ ನಿರ್ಭಾವ. ಈ ಮುಖಂಗಳಿಗೆ ಅರ್ಪಿತಂಗಳಾವವೆಂದಡೆ: ಘ್ರಾಣಕ್ಕೆ ಗಂಧ
ಜಿಹ್ವೆಗೆ ರುಚಿ
ನೇತ್ರಕ್ಕೆ ರೂಪು
ತ್ವಕ್ಕಿಗೆ ಸ್ಪರ್ಶನ
ಶ್ರೋತ್ರಕ್ಕೆ ಶಬ್ದ
ನಿರ್ಭಾವಕ್ಕೆ ನಿರ್ವಯಲು. ಇಂತೀ ಸರ್ವೇಂದ್ರಿಯ ಸಮ್ಮತ ನಿರ್ವಿಕಲ್ಪ ಮಹಾಲಿಂಗಾಂಗಭಾವದ ಸುಚಿತ್ತಲೇಪಗ್ರಾಹಕ ಭಕ್ತ ಗುರುಲಿಂಗವಾದ. ಗುರುಲಿಂಗಾಂಗ ಸುಬುದ್ಧಿಲೇಪಗ್ರಾಹಕ ಮಹೇಶ್ವರ ಶಿವಲಿಂಗವಾದ. ಶಿವಲಿಂಗಾಂಗ ನಿರಹಂಕಾರಲೇಪಗ್ರಾಹಕ ಪ್ರಸಾದಿ ಜಂಗಮಲಿಂಗವಾದ. ಜಂಗಮಲಿಂಗಾಂಗ ಸುಮನಲೇಪಗ್ರಾಹಕ ಶರಣ ಮಹಾಲಿಂಗವಾದ. ಪ್ರಸಾದಲಿಂಗಾಂಗ ಸುಜ್ಞಾನಲೇಪಗ್ರಾಹಕ ಐಕ್ಯ ಅಭೇದಾನಂದ ಪರಿಪೂರ್ಣಮಯವಾದ. `ನಿಶ್ಶಬ್ದಂ ಬ್ರಹ್ಮ ಉಚ್ಯತೇ' ಎಂಬ ಶ್ರುತಿಯ ಮೀರಿ ನಿಂದ ಅಖಂಡಮಹಿಮಂಗೆ
ಸುನಾದಯುಕ್ತಂಗೆ ಶಬ್ದ ನಷ್ಟವಾದಲ್ಲಿ_ ಆಚಾರಲಿಂಗವಿಲ್ಲ ಭಕ್ತಂಗೆ
ಗುರುಲಿಂಗವಿಲ್ಲ ಮಹೇಶ್ವರಂಗೆ
ಶಿವಲಿಂಗವಿಲ್ಲ ಪ್ರಸಾದಿಗೆ
ಚರಲಿಂಗವಿಲ್ಲ ಪ್ರಾಣಲಿಂಗಿಗೆ
ಪ್ರಸಾದಲಿಂಗವಿಲ್ಲ ಶರಣಂಗೆ
ಜಡದೇಹ ಧರ್ಮ ಭಾವವಿಲ್ಲ ಐಕ್ಯಂಗೆ. ಇದು ಕಾರಣ
ಕೂಡಲಚೆನ್ನಸಂಗಯ್ಯಾ
ನಿಮ್ಮ ಷಟ್‍ಸ್ಥಲದ ಪರಿಯಾಯವ ನೀವೆ ಬಲ್ಲಿರಿ. ಉಳಿದ ಅಜ್ಞಾನಿಜೀವಿಗಳೆತ್ತ ಬಲ್ಲರು ?