ಭವತೀ ಕಾತ್ಯಾಯನೀ/೩೮ನೆಯ ಗ್ರಂಥ/೪ ನೆಯಪ್ರಕರಣ

ವಿಕಿಸೋರ್ಸ್ ಇಂದ
Jump to navigation Jump to search
28

೪ ನೆಯಪ್ರಕರಣ.

ವರಪ್ರದಾನ.

ಸಂತಕಾಲನ; ಚೈತ್ರಪೌರ್ಣಿಮೆಯ ರಾತ್ರಿಯ ಮೂರುತಾಸಿನ ಸಮಯ;

ಹಿಟ್ಟು, ಚಲ್ಲಿದಹಾಗೆ ಬೆಳದಿಂಗಳು ಬಿದ್ದಿದೆ. ಭಗವಾನ್ ಯಾಜ್ಞವಲ್ಕ್ಯರ ಪುಣ್ಯಾಶ್ರಮದ ಉಪವನದಲ್ಲಿ ಸುಳಿದಾಡಿ ಪವಿತ್ರವಾಗುವನೆವದಿಂದ ಮಂದಮಾರುತನು ಸುಳ್ಳ ಸುಳ್ಳನೆ ಸುಳಿದಾಡುತ್ತಲಿದ್ದಾನೆ. ಮಲ್ಲಿಗೆ, ಪಾರಿಜಾತ, ಪಾಟಲ ಮೊದಲಾದವುಗಳ ಅರಳ ಮೊಗ್ಗೆಗಳು ಮೆಲ್ಲ ಮೆಲ್ಲನೆ ಅರಳಹತ್ತಿ ಸುತ್ತಲು ಸುಗಂಧವನ್ನು ಬೀರುತ್ತಲಿವೆ. ಆಶ್ರ ಮದ ಮುಂಭಾಗದ ಪ್ರಶಸ್ತವಾದ ಅಂಗಳವನ್ನು ಸಾರಿಸಿ ಹಾಕಿದ ರಂಗವಲ್ಲಿಗಳು, ಅದೇ ಕಸಬೊಳೆದದ್ದರಿಂದ ಮಸಮಸಕಾಗಿ ತೋರುತ್ತಲಿವೆ. ಕೃಷ್ಣಾಜಿನ, ದರ್ಭಾಸನಾದಿಗಳು ಸುವ್ಯವಸ್ಥೆಯಿಂದ ಹಾಕಿವೆ. ಅಲ್ಲಿಯೇ ಸಮೀಪದಲ್ಲಿ ಆಶ್ರಮಸ್ಥ ಗೋಗಳು, ಹರಿಣ ಗಳು ಸ್ವಚ್ಛಂದದಿಂದ ಮೆಲಕಾಡಿಸುತ್ತ ಮಲಗಿಕೊಂಡಿವೆ. ಸತ್ಕರ್ಮ, ಸದ್ವಿಚಾರ, ಸದ್ಬೋಧ, ಸದಾನಂದಗಳಸಮಿಾಚೀನತೆಯಿಂದ ಆ ಆಶ್ರಮಪದವು ಶಾಂತಿರಸದಿಂದ ತುಂಬಿ ತುಳುಕುತ್ತಲಿದೆ. ಶ್ರೀ ಯಾಜ್ಞವಲ್ಕ್ಯರ ಶಿಷ್ಯವೃಂದದ ಸದ್ವಿದ್ಯಾವ್ಯಾಸಂಗವು ಆಸ್ಥೆ ಯಿಂದ ಸಾಗಿದೆ. ಚತುರ್ವೇದಗಳ, ಬ್ರಾಹ್ಮಣಗಳ, ಉಪನಿಷತ್ತುಗಳ ಪವಿತ್ರವಾದ ಮಂಜುಲಧ್ವನಿಯ ಕಿವಿಗೆ ಇಂಪಾಗಿ ದೂರದಿಂದ ಕೇಳುತ್ತಲಿದೆ. ಲೋಕಕಲ್ಯಾಣೇ ಚ್ಛುಗಳಾದ ಭಗವಾನ್ ಯಾಜ ವಲ್ಕ್ಯರು ಅದೇಬಂದು ಸುಖಾಸನದಲ್ಲಿ ವಿಶ್ರಮಿಸಿದ್ದಾರೆ. ಒಂದು ಚಿಗರೆಯಮರಿಯು ಅವರ ಆಸನದ ಬಳಿಯಲ್ಲಿ ಮಲಗಿಕೊಂಡು ಮೆಲಕು ಹಾಕುತ್ತಲಿದೆ. ಅಂಗಳದಲ್ಲಿ ಆಕಳಕರಗಳು, ಸ್ವಚ್ಛಂದದಿಂದ ಹಾರಾಡುತ್ತಿರಲು, ಅವುಗಳ ತಾಯಿಗಳು ಪ್ರೇಮಭರದಿಂದ ಕಿವಿಚಾಚಿ ನೋಡುತ್ತ ಮೆಲಕಾಡಿಸುತ್ತಲಿವೆ. ನಡನಡುವೆ ನವಿಲು, ಗಿಳಿ, ಮೊದಲಾದ ಆಶ್ರಮಸ್ಥ ಪಕ್ಷಿಗಳ ಮಂಜುಲಧ್ವನಿಗಳು ಇಂ ಪಾಗಿ ಕೇಳುತಲಿವೆ. ಅಷ್ಟರಲ್ಲಿ ಭಗವತೀ-ಕಾತ್ಯಾಯನಿಯು ಗೃಹಕೃತ್ಯಗಳನ್ನೆಲ್ಲ ತೀರಿ ಸಿಕೊಂಡು ಮಕ್ಕಳನ್ನು ಮಲಗಿಸಿ, ನಗೆಮೊಗದಿಂದ ಪತಿಯ ಸನ್ನಿಧಿಗೆ ಪ್ರಾಪ್ತವಾದಳು. ಆ ಪ್ರೇಮಲಸ್ವಭಾವದ ಸಾಧ್ವಿಯನ್ನು ನೋಡಿ ಯಾಜ್ಞವಲ್ಕ್ಯರಿಗೆ ಪರಮಾನಂದವಾ ಯಿತು. ಅವರು ಅತ್ಯಂತ ಆದರದಿಂದ ತಮ್ಮ ಪ್ರಿಯ ಅರ್ಧಾಂಗಿಯನ್ನು ಕುರಿತು---- "ದೇವೀ, ಗೃಹಕೃತ್ಯಗಳೆಲ್ಲ ತೀರಿದವಷ್ಟೆ ? ನಿನ್ನಂಥ ಕರ್ತವ್ಯನಿಷ್ಠರಾದ ಪ್ರೇಮಲ ಹೃ ದಯದ ಸಾಧ್ವಿಯರ ಪ್ರಾಪ್ತಿಯಿಂದಲೇ ಸಂಸಾರವು ಸುಖಮಯವಾಗುವದುಕಂಡೆಯಾ! ಅಸಾರವಾದ ಸಂಸಾರವು ನಿಮ್ಮಂಥವರ ಯೋಗದಿಂದಲೇ ಸಾರಮಯವಾಗುವಲ್ಲಿ ಸಂಶಯ ವಿಲ್ಲ. ಭಗವತೀ, ಬಾ, ಕುಳಿತುಕೋ. ಕಾರ್ಯದಕ್ಷಳಾದ ನಿನಗೆ ಕೆಲಸದ ದಣಿವಾಗ ದಿದ್ದರೂ, ನನ್ನ ಹೃದಯವು ಸದಾ ಕೃತಜ್ಞತಾಪೂರ್ಣವಾಗಿರುತ್ತದೆ. ನಿನ್ನ ಯೋಗ

ದಿಂದ ನನ್ನ ಗೃಹಸಾ ಶ ಮದ ಮಾರ್ಗವು ಅತ್ಯಂತ ಸುಗಮವಾಗಿ ಹೋಗಿದೆ.” ಎಂದು
29

ನುಡಿಯುತ್ತಿರಲು, ಕಾತ್ಯಾಯನಿಯು ಮುಗುಳುನಗೆನಗುತ್ತ--" ಇದೆಲ್ಲ ತಮ್ಮ ಮಹಾ ಮಹಿಮೆಯ ಪ್ರಭಾವವಲ್ಲದೆ ಮತ್ತೇನು? ಕಾತ್ಯಾಯನಿಯು ಹ್ಯಾಗಿದ್ದರೂ, ಕಾತ್ಯಾಯನಿಯ ಆಶ್ರಯಸ್ಥಾನವು ಭದ್ರವೂ, ಮಂಗಲಕರವೂ ಆಗಿರುವದಷ್ಟೆ ? ಆಶ್ರಯಸ್ಥಾನದ ಗುಣ

ಗಳೇ ಆಶ್ರಿತರಲ್ಲಿ ಬರುವವು.” ಎಂದು ನುಡಿಯುತ್ತ, ಮುನಿಗಳ ಬಳಿಯ ಆಸನದಲ್ಲಿ ಕುಳಿತುಕೊಂಡಳು

ಮೊದಲೇ ಕಾತ್ಯಾಯನಿಯು ಅತ್ಯಂತ ಪತಿಭಕ್ತಿಪರಾಯಣಳು; ಅದರಲ್ಲಿ ಮೈತ್ರೇ

ಯಿಯ ಸಹವಾಸದಿಂದ ತನ್ನ ಪತಿಯಗಂಭೀರವಾದ ಯೋಗ್ಯತೆಯ ಜ್ಞಾನವಾಗ ಹತ್ತಿ ದ್ದರಿಂದ, ಆಕೆಯ ಪತಿ ಭಕ್ತಿ ಪರಾ ಯ ಣ ತೆ ಯು ಪವಿತ್ರ ಜ್ಞಾನಮೂಲವಾಗ ತೊಡಗಿತ್ತು. ತಾನು ಧರ್ಮಾರ್ಥ-ಕಾಮ-ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥ ಗಳನ್ನು ಕೊಡುವ ಕಲ್ಪವೃಕ್ಷರೂಪವಾದ ತಪೋಧನನನ್ನೇ ಆಶ್ರಯಿಸಿದ್ದರಿಂದ, ಧನ್ಯ ಳೆಂದು ಕಾತ್ಯಾಯನಿಯು ಯಾವಾಗಲೂ ಭಾವಿಸುತ್ತಲಿದ್ದಳು. ಆ ಪವಿತ್ರದಂಪತಿ ಗಳು ಪರಸ್ಪರರ ಗುಣಗಣಳನ್ನು ಗೌರವಿಸುತ್ತಿರುವಾಗ, ಪರಸ್ಪರರಿಗೆ ಪರಸ್ಪರರು ಅತ್ಯಂತ ಮನೋಹರವಾಗಿ ತೋರಹತ್ತಿದರು. ಭಗವಾನ್ ಯಾಜ್ಞವಲ್ಕ್ಯರು ಮೂವ ತು ವರ್ಷದ ವಯಸ್ಸಿನವರಾಗಿದ್ದರು. ಕಾತ್ಯಾಯನಿಯ ವಯಸ್ಸು ಇಪ್ಪತ್ತೈದು ವರ್ಷದ ಹೊರಗೊಳಗಿರಬಹುದು. ಆ ವೈದಿಕಕಾಲದಲ್ಲಿ ಪ್ರೌಢವಿವಾಹವು ಪ್ರಚಾರದಲ್ಲಿ ತ್ತೆಂದು ವಾಚಕರಿಗೆ ನಾವು ಬರೆದುತಿಳಿಸಲವಶ್ಯವಿಲ್ಲ. ಹೀಗೆ ಪ್ರಬುದ್ಧಸ್ಥತಿಯಲ್ಲಿತಮಗೆ ಅನುರೂಪರಾದವರನ್ನು ಆರಿಸಿಕೊಂಡು ದಾಂಪತ್ಯವನ್ನುಂಟುಮಾಡಿಕೊಳ್ಳುತಿದ್ದವರ ಸಂಸಾರಸುಖವನ್ನು, ಈಗಿನ ಹೀನಕಾಲದ ಮೂಢರಾದ ನಾವು ವರ್ಣಿಸಲು ಶಕ್ತರಾಗ ಬಹುದೆ ? ಇರಲಿ. ನಮ್ಮ ಪೂಜ್ಯರಾದ ಆ ತರುಣ ಋಷಿದಂಪತಿಗಳು ಮೌನದಿಂದ ಪರ ಸ್ಪರರನ್ನು ಅಭಿನಂದಿಸುತ್ತಿರಲು, ಭಗವತೀಕಾತ್ಯಾಯನಿಯು ತನ್ನಪತಿಯನ್ನು ಕುರಿತು-

ಕಾತ್ಯಾಯನಿ-- ಭಗವನ್, ಏನಾದರೂ ನಾನು ತಮಗೆ ತಕ್ಕ ಹೆಂಡತಿಯಲ್ಲ.

ತಾವು ಬ್ರಹ್ಮಜ್ಞಾನಿಗಳಲ್ಲಿ ಅತ್ಯಂತ ಶ್ರೇಷ್ಠರಾಗಿದ್ದು, ನಾನು ಅತ್ಯಂತ ಸಂಸಾರಾಸಕ್ತ ಳಾಗಿರುವೆನು. ಸಂಸಾರವು ನಶ್ವರವಾದದ್ದೆಂತಲೂ, ಸಾಂಸಾರಿಕ ಸುಖಗಳೆಲ್ಲ ಐಂದ್ರ ಜಾಲದಂತೆ ತೋರಿ ಅಡಗತಕ್ಕವೆಂತಲೂ, ಒಬ್ಬ ಆತ್ಮನು ನಿತ್ಯನೆಂತಲೂ ತಾವು ಜನ ರನ್ನು ಬೋಧಿಸುತಿ ರುವದನ್ನು ನಾನು ಎಷ್ಟು ಸಾರೆ ಕೇಳಿರುವೆನೋ ಏನೋ! ಆದರೆ ದಿನದಿನಕ್ಕೆ ನನ್ನ ಸಂಸಾರಾಸಕ್ತಿಯು ಹೆಚ್ಚುತ್ತಿರುವದಲ್ಲದೆ, ಕಡಿಮೆಯೆಲ್ಲಿ ಆಗುತ್ತಿರು ವದು ? ಅಜ್ಞಾನಿಗಳಾದ ಕೂಸುಗಳ ಲೀಲೆಯನ್ನು ನೋಡಿ ಜ್ಞಾನಿಗಳು ಕೌತುಕಪಡು ವಂತೆ, ಜ್ಞಾನಿವರ್ಯರಾದ ತಾವು ಪಾಮರಳಾದ ನನ್ನ ಸಂಸಾರಾಸಕ್ತಿಯನ್ನು ನೋಡಿ ಕೌತುಕಪಡುತ್ತಿರಬಹುದು; ಆದರೆ ಅಷ್ಟರಿಂದ ತಮ್ಮ ಅರ್ಧಾಂಗವೆನಿಸಲಿಕ್ಕೆ ನಾನು ಸರ್ವಥಾ ಅಯೋಗ್ಯಳೇ ಸರಿ!

ಯಾಜ್ಞವಲ್ಕ ( ಆಶ್ಚರ್ಯದಿಂದ)--ದೇವಿ, ನಿನ್ನ ಬುದ್ಧಿ ಭೇದವು ಇಂದು ಯಾ-

ರಿಂದಾಯಿತು? ಕರ್ತವ್ಯನಿಷ್ಠೆಯಿಲ್ಲದೆ ವೇದಾಂತದ ಬರಿಯ ಹಾಳುಮಾತುಗಳನ್ನಾಡು
30

ವದರಿಂದ ಏನೂ ಪ್ರಯೋಜನವಿಲ್ಲೆಂಬದನ್ನು ಚನ್ನಾಗಿ ಲಕ್ಷದಲ್ಲಿಡು . ಭೂತಗಳಲ್ಲಿ ಪ್ರಾಣಿಗಳು , ಪ್ರಾಣಿಗಳಲ್ಲಿ ಬುದ್ಧಿಯುಳ್ಳವು,. ಬುದ್ಧಿಯುಳ್ಳವುಗಳಲ್ಲಿ ಮನುಷ್ಯರು, ಮನುಷ್ಯರಲ್ಲಿ ಬ್ರಾಹ್ಮಣರು, ಬ್ರಾಹ್ಮಣರಲ್ಲಿ ವಿದ್ವಾಂಸರು, ವಿದ್ವಾಂಸರಲ್ಲಿ ಸುಸಂಸ್ಕೃತ ಬುದ್ಧಿಯುಳ್ಳವರು, ಸುಸಂಕೃತಬುದ್ಧಿಯುಳ್ಳವರಲ್ಲಿ ಕರ್ತೃತ್ವಶಾಲಿಗಳು, ಕರ್ತೃತ್ವ ಶಾಲಿಗಳಲ್ಲಿ ಬ್ರಹ್ಮಜ್ಞಾನಿಗಳು ಶ್ರೇಷ್ಥರಿರುವದರಿಂದ, ಕರ್ತೃತ್ವಶಾಲಿಯಾದ ನೀನು ಬ್ರಹ್ಮ ಜ್ಞಾನಕ್ಕೆ ತೀರ ಸಮಿಾಪಿಸಿರುತ್ತೀ. ನೀನು ಯೋಗ್ಯತಾಸಂಪನ್ನಳಾದ್ದರಿಂದಲೇ ನಿನ್ನನ್ನು ನಾನು ಲಗ್ನವಾಗಿರುವೆನು. ವಶಿಷ್ಠರಿಗೆ ಅರುಂಧತಿಯಂತೆ ನೀನು ನನಗೆ ತಕ್ಕ ಹೆಂಡತಿ ಯಾಗಿರುತ್ತೀ! ನಿನ್ನ ಯೋಗ್ಯತೆಯು ಸಾಮಾನ್ಯವೆಂದು ತಿಳಿಯಬೇಡ. ನೀನು ನನ ಶಕ್ತಿಸರ್ವಸ್ವವಾಗಿರುತ್ತೀ. ನಿನ್ನಂಥ ಕಾರ್ಯದಕ್ಷಳ ಸಹಾಯವಿರುವದರಿಂದಲೇ ನಾನು ಗೃಹಸ್ಥಾಶ್ರಮಿಯಾಗಿರುವೆನು. ನಿನ್ನಂಥ ಗೃಹಿಣಿಯ ಸಹಾಯದಿಂದಲೇ ಯೋಗ್ಯವಾದ ಸಂಸಾರದ ಮಾದರಿಯನ್ನು ಲೋಕಕ್ಕೆ ತೋರಿಸಲಿಕ್ಕೆ ನಾನು ಸಮರ್ಥನಾಗಿರುತ್ತೇನೆ. ದೇಹವಿರುವದರೊಳಗಾಗಿ ಅಭಿಮಾನಬಿಡುವದು ಮಹತ್ವವಾಗಿರುವಂತೆ, ಸಂಸಾರದಲ್ಲಿದ್ದು ಸಂಸಾರಪರಿತ್ಯಾಗ ಮಾಡುವದು ಮಹತ್ವದ್ದಾಗಿರುತ್ತದೆ.

ಕಾತ್ಯಾಯನಿ--ಭಗವನ್, ಪತಿತರನ್ನು ಕ್ಷಣದಲ್ಲಿ ಉದ‍್ಧರಿಸಲು ಸಮರ್ಥರಾದ

ತಮಗೆ ಯಾವದು ತಾನೆ ಅಸಾಧ್ಯವು! ಸಂಸಾರದಲ್ಲಿದ್ದೂ ತಾವು ಸಂಸಾರ ಪರಿತ್ಯಾಗ ವನ್ನು ಮಾಡಿರಬಹುದು; ಆದರೆ ಸಂಸಾರವು ಅಸಾರವಾದದ್ಧೂ, ತಿರಸ್ಕರಣೀಯವಾ ದದ್ದೂ ಎಂದು ಜ್ಞಾನಿಗಳು ಹೇಳುವರಲ್ಲ! ಅದರ ಮರ್ಮವೇನು?

ಯಾಜ್ಞವಲ್ಕ್ಯ----ದೇವಿ, ಇರುವಹಾಗೆಇದ್ದರೆ ಯಾವದೂ ಕೆಡಕಲ್ಲ ನೋಡು.

ನಿಜವಾದ ಸಂಸಾರಕ್ಕೂ, ನಿಜವಾದ ಪಾರಮಾರ್ಥಕ್ಕೂ ಭೇದವಿಲ್ಲೆಂತಲೂ, ಸಂಸಾರವನ್ನು ಬಿಟ್ಟು ಪರಮಾರ್ಥವನ್ನು ಹಿಡಿಯುವವನೂ, ಪರಮಾರ್ಥವನ್ನು ಬಿಟ್ಟು ಸಂಸಾರ ವನ್ನುಹಿಡಿಯುವವನೂ ಜ್ಞಾನಿಯಲ್ಲೆಂತಲೂ ಅದೇ ಜ್ಞಾನಿಗಳೇ ಹೇಳಿರುವರು. ಸಂಸಾ ರವು ಹೇಯವಾಗಿದ್ದರೆ ವಶಿಷ್ಯಾದಿಗಳು ಸಂಸಾರದ ಅವಲಂಬನವನ್ನು ಯಾಕೆ ಮಾಡುತ್ತಿ ದ್ದರು? ಯಾವ ಸಂಸಾರದಲ್ಲಿ ಆಲಸ್ಯ-ದುರಾಚರಣೆಗಳಿಗೆ ಆಸ್ಪದವಿರುವದಿಲ್ಲವೋ, ಯಾವ ಸ೦ ಸಾ ರ ವು ಅತಿಸಂಚಯದಿಂದ ದೂಷಿತವಾಗಿರುವದಿಲ್ಲವೋ, ಯಾವ ಸಂಸಾರವು ಪ್ರೇಮ-ದಯೆಗಳ ಆಗರವಾಗಿರುವದೋ, ಯಾವ ಸಂಸಾರದಲ್ಲಿ ದೇವ,-ಗುರು,-ಪಿತೃ,- ಅತಿಥಿಗಳ ಪೂಜಾ-ಸತ್ಕಾರಗಳು ಯಥಾಸ್ಥಿತವಾಗಿ ಸದಾ ಆಗುತ್ತಿರುವವೋ, ಆ ಸಂಸಾ ರವು ಪರಮಧನ್ಯವೂ, ಅತ್ಯಂತ ಸಾರಯುಕ್ತವೂ, ಶ್ರೇಷ್ಥಗತಿಪ್ರದವೊ ಆಗಿರುವದು. ಭಗವತೀ, ಹೇಳು, ನಿನ್ನಯೋಗದಿಂದ ನಮ್ಮ ಸಂಸಾರದಲ್ಲಿ ಯಾವಮಾತಿನಕೊರತೆಯದೆ? ಸಂಸಾರದ ತಿರಸ್ಕಾರವನ್ನು ನಾನು ಎಂದಾದರೂ ನಿನ್ನ ಮುಂದೆ ಮಾಡಿರುವೆನೆ ?ಯಾಕೆ ಮಾಡಲಿ? ನಿನ್ನಯೋಗದಿಂದ ಸಂಸಾರದಲ್ಲಿ ನನಗೆ ಸ್ವರ್ಗಸುಖವು ಪ್ರಾಪ್ತವಾಗಿರುವದು!

ಕಾತ್ಯಾಯನಿ (ಕೈ ಜೋಡಿಸಿ)--ಋಷಿವರ್ಯರಿಗೆ ಈ ದಾಸಳ ಅನಂತ ಪ್ರಣಾ

ಮಗಳಿರಲಿ! ಭಗವನ್, ಸಂನಾರಧರ್ಮಗಳನ್ನು ನಾನು ಅರಿತವಳಲ್ಲ' ಚರಣಸೇವೆಯ
31

ಪ್ರಭಾವವು ನನ್ನನ್ನು ಪ್ರೇರೇಪಿಸಿದಂತೆ ನಾನು ನಡೆದುಕೊಳ್ಳುತ್ತಿರುವೆನು; ಆದರೆ ದೇ- ಹಾದಿ ಬಾಹ್ಯವಸ್ತುಗಳ ವಿಚಾರದಲ್ಲಿಯೇ ನನ್ನ ಕಾಲಹರಣವಾಗುತ್ತಿರುವದರಿಂದಲೂ, ಅನುಭವದಿಂದ ನಶ್ವರವಾಗಿರುವ ವಸ್ತುಜಾಲಗಳ ಪ್ರಾಪ್ತಿಯಲ್ಲಿಯೇ ನನ್ನ ಮನಸ್ಸು ರಮಿಸುತ್ತಿರುವದರಿಂದಲೂ ಶಾಶ್ವತವಸ್ತುವಿನ ವಿಚಾರದ ಕಡೆಗೆ ನನ್ನ ಮನಸ್ಸು ತಿರು ಗುವದೇ ಇಲ್ಲ. ಈ ಸ್ಥಿತಿಯು ನನಗೆ ಹಿತಕರವಾಗಿ ತೋರದಾಗಿದೆ. ಆತ್ಮರೂಪಸತ್ಯ ವಸ್ತುವಿನ ಚರ್ಚೆಯು ಈ ಪುಣ್ಯಾಶ್ರಮದಲ್ಲಿ ಸದಾ ನನ್ನ ಕಿವಿಗೆ ಬೀಳುತ್ತಿದ್ದರೂ, ಅದರ ಕಡೆಗೆ ನನ್ನ ಮನಸ್ಸು ಹೊರಳದಿರುವದು ಸೋಜಿಗವಲ್ಲವೆ? ಭಗವನ್, ಗುರು ವರ, ಹೀಗೆ ನಾನು ಆತ್ಮವಿಚಾರ ವಿಮುಖಳಾಗಿರುವದು ಹಿತಕರವಾಗಬಹುದೋ?

ಯಾಜ್ಞವಲ್ಕ್ಶ--ದೇವಿ, ಹಿತಕರವಾಗುವದೆಂದು ನಾನು ಹೇಗೆ ಹೇಳಲಿ? ನಿತ್ಯ

ವಸ್ತುವಾದ ಆತ್ಮನ ಜ್ಞಾನವನ್ನು ಪಡೆಯದವರಿಗೆ, ಆ ನಿತ್ಯವಸ್ತುವಿನ ವಿಕಾರಗಳೆನಿ ಸುವ ಬಾಹ್ಯವಸ್ತುಗಳ ನಿಜವಾದ ಜ್ಞಾನವು ಹ್ಯಾಗಾಗಬೇಕು? ತನ್ನ ಜ್ಞಾನವೇ ತನ ಗಿಲ್ಲದವನಿಗೆ ಪರರಜ್ಞಾನವಾಗಬಹುದೆ? ಮೂಲ ವಸ್ತುವಿಗಿಂತಲೂ ಮೂಲ ವಸ್ತುವಿನ ವಿಕಾರದ ಕಡೆಗೆ ಲೋಕದ ಒಲವು ವಿಶೇಷವಾಗಿರುವದು. ಬಂಗಾರಕ್ಕಿಂತ ಬಂಗಾರದ ಒಡವೆಗಳಲ್ಲಿ ಆಸಕ್ತಿಯು ಹೆಚ್ಚು ಇರುವಂತೆ, ಹತ್ತಿಗಿಂತ ಹತ್ತಿಯಿಂದಾದ ಮನೋಹರ ವಸ್ತ್ರಗಳಲ್ಲಿ ಆಸಕ್ತಿಯು ಹೆಚ್ಚು ಇರುವಂತೆ, ಮೂಲವಾದ ಆತ್ಮವಸುವಿ ಗಿಂತ ಆತ್ಮದ ವಿಕಾರಗಳೆನಿಸುವ ಸೃಷ್ಟ ಪದಾರ್ಥಗಳಲ್ಲಿ ಲೋಕದ ಆಸಕ್ತಿಯು ಹೆಚ್ಚು ಇರುವದು. ಈ ಲೌಕಿಕಾಸಕ್ತಿಯಿಂದ ನೀನು ವಿಮುಖಳಾಗಿ ನಿತ್ಯವಸ್ತುವಿನ ಜ್ಞಾನದ ಕಡೆಗೆ ಮನಸ್ಸು ಮಾಡಿದ್ದನ್ನು ನೋಡಿ ನನಗೆ ಬಹಳ ಸಂತೋಷವಾಗುತ್ತದೆ.

ಕಾತ್ಯಾಯನಿ--ಇದಕ್ಕೆಲ್ಲ ತಮ್ಮ ಪುಣ್ಯಪ್ರಭಾವವೇ ಕಾರಣವು; ಆದರೆ

ತಮಂಥವರ ಚಿರಸಹವಾಸದಲ್ಲಿದ್ದು ಈ ಮೊದಲೆ ನನ್ನ ಮನಸ್ಸು ನಿತ್ಯವಸ್ತುವಿನ ಜ್ಞಾನದ ಕಡೆಗೆ ತಿರುಗದೆಯಿದ್ದದ್ದಕ್ಕಾಗಿಯೂ, ನನ್ನನ್ನು ಬುದ್ಧಿಪೂರ್ವಕ ತಾವು ಜಾಗ್ರತಗೊಳಿಸದೆಯಿದ್ದದ್ದಕ್ಕಾಗಿಯೂ ನನಗೆ ಚಡಪಡಿಕೆಯಾಗಿದೆ; ಸಥಿಯ ಮೂಲಕ ನಾನು ಹೀಗೆ ಆಡುವದು ಅಪರಾಧವಾಗಿರುವದು.

ಯಾಜ್ಞವಲ್ಕ್ಶ-- ದೇವಿ, ಅಪರಾಧವೆಂದು ಭಾವಿಸಬೇಡ. ನನ್ನ ಮಾತನ್ನು

ಲಕ್ಷವಿಟ್ಟು ಕೇಳು. "नाप्ट्सष्ट: कसश्य्चिद़बयाद़” ಅಂದರೆ ಕೇಳದೆ ಏನೂ ಹೇಳಬಾರದೆಂಬ ಮನುವಚನದಂತೆ, ಕೇಳದೆ ಹೇಳುವದು ತಪ್ಪಿನಲ್ಲಿ ಬರುವದು. ಕಸಕಾಯನ್ನು ಒತ್ತಿ ಹಣ್ಣು ಮಾಡಿದರೆ ಹಣ್ಣಾಗಬಲ್ಲದೆಯೆ? ಮಾವಿನ ಸಸಿಯು ಬೇಗನೆ ಫಲಕೊಡಬೇ ಕೆಂದು ಚಡಪಡಿಸಿದರೆ ಅದಕ್ಕೆ ಫಲಗಳಾಗಬಹುದೆ? ಯಾವದಕ್ಕಾದರೂ ತಕ್ಕ ಸಮ ಯವು ಒದಗಬೇಕಾಗುತ್ತದೆ. ಈ ಬುದ್ದಿಯು ನನಗೆ ಈಮೊದಲೆ ಹುಟ್ಟಲಿಲ್ಲೆಂದು ನೀನು ಚಡಪಡಿಸುವದು ಹ್ಯಾಗೆ ಯೋಗ್ಯವಾಗುವದು ಹೇಳು! ವಸ್ತಾಲಂಕಾರಗಳಲ್ಲಿ,

ಸಂತತಿ-ಸಂಪತ್ತುಗಳಲ್ಲಿ ಅತ್ಯಂತ ಆಸಕ್ತರಾದ ಹೆಣ್ಣುಮಕ್ಕಳ ಸಂಸಾರವಾಸನೆಯು ವೇದಾಂತಶ್ರವಣದಿಂದ ನಷ್ಟವಾಗಬಹುದೆ?
82

ಕಾತ್ಯಾಯನಿ--ಭಗವನ್, ಅಜ್ಞಾನದ ಮೂಲಕ ಮತ್ತೆ ಪ್ರಶ್ನೆ ಮಾಡುವದ

ಕ್ಕಾಗಿ ಕ್ಷಮೆ ಬೇಡುವೆನು. ಕಾಲಕ್ಕನುಸರಿಸಿ ಎಲ್ಲ ತಾನೇ ಆಗುತ್ತದೆಂದಬಳಿಕ, ಬಾಹ್ಯಾನುಕೂಲತೆಗಳು ವ್ಯರ್ಥವೆಂದು ಹೇಳಬೇಕಾಯಿತಲ್ಲ!

ಯಾಜ್ಞವಲ್ಕ್ಯ--ಬಾಹ್ಯಾನುಕೂಲತೆಗಳು ವ್ಯರ್ಥವೆಂದು ಹೇಳಬಹುದೇ ?

ಮಾವಿನ ಸಸೆ ಹಚ್ಚಿ ಅದಕ್ಕೆ ನೀರು-ಗೊಬ್ಬರಗಳನ್ನು ಒದಗಿಸಿಕೊಡದೆ, ತಾನೇ ದೊಡ್ಡದಾಗುವದೆಂದು ಬಿಟ್ಟುಬಿಟ್ಟರೆ ಅದು ದೊಡ್ಡದಾಗಿ ಫಲ ಕೊಡಬಹುದೇ? ಅದರಂತೆ , ಪ್ರಾರಬ್ಧಕರ್ಮಾನುಸಾರಿಯಾಗಿರುವ ಬುದ್ಧಿರೂಪ ವೃಕ್ಷಕ್ಕೆ ಸತ್ಸಮಾಗ ಮವೆಂಬ ದಿವ್ಯಜಲವನ್ನೂ, ತಪಶ್ಚರ್ಯವೆಂಬ ಸಾರಯುಕ್ತ ಗೊಬ್ಬರವನ್ನೂ ಅನು ಕೂಲಿಸಿ ಕೊಡದಿದ್ದರೆ, ಆ ಬುದ್ಧಿರೂಪ ವೃಕ್ಷಕ್ಕೆ ಮೋಕ್ಷರೂಪ ಫಲವು ಹ್ಯಾಗೆ ಬಿಟ್ಟೀತು? ನಿನಗೆ ಇವೆರಡರ ಅನುಕೂಲತೆಯೂ ಪರಿಪೂರ್ಣವಾಗಿರುವದರಿಂದಲೇ ನಿನ್ನ ಬುದ್ಧಿರೂಪ ವೃಕ್ಷವು ಈಗ ಮುಮುಕ್ಷುತ್ವವೆಂಬ ಹೂವು ಬಿಡುತ್ತಿರುವದು.

ಕಾತ್ಯಾಯನಿ--ಅದು ಏನೇ ಇರಲಿ, ಮೈತ್ರೇಯಿಯೆಂಬ ನನ್ನ ಸಖಿಯ ಸಹ

ವಾಸದಿಂದ ಈ ಬುದ್ದಿಯು ನನಗೆ ಹುಟ್ಟಿದ್ದರಿಂದ, ಆಕೆಯ ವಿಯೋಗವು ನನಗೆ ಎಂದೂ ಒದಗದಂತೆ ಮುನಿಗಳು ಅನುಗ್ರಹಿಸಬೇಕು.

ಯಾಜ್ಞವಲ್ಯ್ಕ--ಕಾತ್ಯಾಯನಿ, ಇದೇನು ನಿನ್ನ ಬೇಡಿಕೆಯು! ಮೈತ್ರೇ

ಯಿಯ ವಿಯೋಗವಾಗದಂತೆ ನಾನು ಅನುಗ್ರಹಿಸುವದು ಹ್ಯಾಗೆ? ನಾಳೆ ವಿವಾಹಾ ನಂತರ ಮೈತ್ರೇಯಿಯು ತನ್ನ ಪತಿಯನ್ನು ಹಿಂಬಾಲಿಸಿ ಹೋಗತಕ್ಕವಳಲ್ಲವೆ?

ಕಾತ್ಯಾಯನಿ--ಭಗವನ್, ನನ್ನ ಅತಿಪ್ರಸಂಗದೋಷವನ್ನು ಎಣಿಸಬಾರದು.

ಮೈತ್ರೇಯಿಯು “ಮಾಡಿದರೆ ತಮ್ಮ ಪಾಣಿಗ್ರಹಣವನ್ನೇ ಮಾಡಬೇಕು, ಇಲ್ಲದಿದ್ದರೆ ಆಜನ್ಮಬ್ರಹ್ಮಚರ್ಯದಿಂದ ಇರಬೇಕು” ಎಂದು ನಿಶ್ಚಯಿಸಿರುವಂತೆ ನಾನು ಅನ್ಯಮುಖ ದಿಂದ ಕೇಳಿದ್ದೇನೆ; ಯೋಗ್ಯಪತಿಯು ದೊರೆಯದಿದ್ದರೆ, ನಾನು ನನ್ನ ಅಬಚಿಯಾದ ಗಾರ್ಗಿಯಂತೆ ಬ್ರಹ್ಮಚರ್ಯದಿಂದಲೇ ಇರುವೆನೆಂದು ಸ್ವತಃ ಮೈತ್ರೇಯಿಯೇ ನನ್ನ ಮುಂದೆ ಹೇಳಿದ್ದಾಳೆ. ಅಂದಬಳಿಕ ತಾವು ಮೈತ್ರೇಯಿಯ ಪಾಣಿಗ್ರಹಣವನ್ನು ಮಾಡಿ ನನಗೆ ಆಕೆಯ ಚಿರಸಹವಾಸವನ್ನು ಯಾಕೆ ಒದಗಿಸಿಕೊಡಬಾರದು?

ಯಾಜ್ಞವಲ್ಕ್ಯ(ಆಶ್ಚರ್ಯದಿಂದ)--ಇದೊಂದು ನಿನ್ನ ವಿಲಕ್ಷಣಬೇಡಿಕೆಯು!

ನೀನು ಜಾಲಿಯಬಿತ್ತಿಕಾಲಿಗೆಮೂಲಮಾಡಿಕೊಳ್ಳುತ್ತಿರುವಂತೆ ನನಗೆ ತೋರುತ್ತದೆ, ಇಬ್ಬರು ಹೆಂಡಿರಿಂದ ಸಂಸಾರದ ಸವಿಯೇ ಕೆಟ್ಟು ಹೋಗುವದೆಂಬುದು ನಿನಗೆ ಗೊತ್ತಿಲ್ಲವೆ? ಕಾತ್ಯಾ ಯನೀ, ನಾನು ಮೈತ್ರೇಯಿಯ ಪಾಣಿಗ್ರಹಣ ಮಾಡಿದರೆ ನಿನಗೆ ಸಮ್ಮತವಾಗುವದೆ?

ಕಾತ್ಯಾಯನಿ--ಸಮ್ಮತವಾಗದೇನುಮಾಡುವದುಮಹಾರಾಜ, ಈ ಸುಯೋ

ಗವು ಒದಗಿದರೆ ನನ್ನ ಸಖಿಯ ಮನೋದಯವು ಪೂರ್ಣವಾದಂತಾಗಿ, ನನಗೆ ಆಕೆಯ ಚಿರಸಹವಾಸವು ಒದಗಿದಹಾಗಾಗುವದು. ಈ ಯೋಗವು ಒದಗದಿದ್ದರೆಮಾತ್ರ ನನಗೆ ಒಂದು ಬಗೆಯ ವ್ಯಸನವಾಗುವದು.
33

ಯಾಜ್ಞವಲ್ಕ್ಯ--ದೇವೀ, ವಿಚಾರಮಾಡು. ಸವತಿಮತ್ಸರವು ಕೆಟ್ಟದು. ನಾನು

ಮೈತ್ರೇಯಿಯ ಪಾಣಿಗ್ರಹಣಮಾಡುವದರಿಂದ ನಿನ್ನಲ್ಲಿ ಆಕೆಯ ವಿಷಯದ ಮತ್ಸರವು ನಿಶ್ಚಯವಾಗಿ ಉತ್ಪನ್ನವಾಗುವದು.

ಕಾತ್ಯಾಯನಿ--ದ್ವೈತಭಾವವಿದ್ದರೆ ಸವತಿಮತ್ಸರವಷ್ಟೆ? ನನಗೂ ಮೈತ್ರೇ

ಯಿಗೂ ದ್ವೈತಭಾವವು ಉತ್ಪನ್ನವಾಗುವ ಹಾಗೆಯೇ ಇಲ್ಲ. ವಿಷಯಸುಖಾಪೇಕ್ಷಿಗಳಲ್ಲಿ ಮತ್ಸರವು. ಅದೆಮೂಲತಃ ನಮ್ಮಲ್ಲಿರುವದಿಲ್ಲ. ನಾನು ಪತಿಯು ದೈವತವೆಂದು ತಿಳಿದು, ಪತಿಮೂಲವಾದ ಸಂಸಾರವನ್ನು ಪತಿಸೇವೆಯೆಂದು ತಿಳಿದು ಅತ್ಯಾಸಕ್ತಿಯಿಂದ ನಡಿಸುತ್ತಿರುವೆನು. ಮೈತ್ರೇಯಿಯಂತು ಜ್ಞಾನಲುಬ್ಧಳಾಗಿ ಕೇವಲ ನಿಮ್ಮಮೇಲಿನ ಭಕ್ತಿಯಿಂದ ನಿಮ್ಮ ಪಾಣಿಗ್ರಹಣಮಾಡುವಳು; ನಾನು ಇನ್ನುಮೇಲೆ ಮೈತ್ರೀಯಿಯ ಹೆಜ್ಜೆಯಮೇಲೆ ಹೆಜೆ ಯನ್ನಿಟ್ಟು ನಡೆಯತಕ್ಕವಳು. ಅಂದಬಳಿಕ ನಮ್ಮಲ್ಲಿ ಮಾತ್ಸರ್ಯವು ಹ್ಯಾಗೆ ಉತ್ಪನ್ನವಾಗುವದು? ಮೇಲಾಗಿ ನನ್ನಮೇಲೆ ತಮ್ಮ ಅಪಾರವಾದ ಪ್ರೇಮವಿರುತ್ತದೆಂಬದನ್ನು ನಾನು ಒಲ್ಲೆನು. ನನ್ನಮೇಲಿನ ತಮ್ಮ ಪ್ರೇಮವು ಯಾತರಿಂದಲೂ ಕಡಿಮೆಯಾಗುವಹಾಗಿಲ್ಲ. ಇದರಿಂದಲೂ ಮಾತ್ಸರ್ಯದ ಉತ್ಪತ್ತಿಗೆ ಆಸ್ಪದವು ದೊರೆಯುವಹಾಗಿಲ್ಲ!

ಯಾಜ್ಞವಲ್ಕ್ಯ - ದೇವೀ, ವಿಚಾರಕ್ಕೂ ಪ್ರತ್ಯಕ್ಷಆಚಾರಕ್ಕೂ ಅಂತರವಿರು

ವದು. ನಿನ್ನ ಮಾತುಗಳು ಕೇಳಲಿಕ್ಕೆ ಬಲು ಸಮರ್ಪಕವಾಗಿವೆ. ಅದರಂತೆ ನಡೆಯಲುಮಾತ್ರ ಶಕ್ಯವಾಗಿರುವದಿಲ್ಲ. ನಿನ್ನಂತ ಮೈತ್ರೇಯಿಯನ್ನು ನಾನು ವಿಶೇಷವಾಗಿ ಪ್ರೀತಿಸಲಿಕ್ಕಿಲ್ಲವೆಂದು ನೀನು ಹ್ಯಾಗೆ ತಿಳಿದುಕೊಳ್ಳುವೆ? ಈ ತಿಳುವಳಿಕಿಯಿಂದಲೇ ನೀನು ಮೋಸಹೋದೀ! ಕದಾಚಿತ್ ನನ್ನ ಪ್ರೇಮವು ಮೈತ್ರೇಯಿಯಮೇಲೆ ದಿನದಿನಕ್ಕೆ ಹೆಚ್ಚುತ್ತ ಹೋಗಿ, ಅದರಿಂದ ನಿನ್ನಲ್ಲಿ ಮಾತ್ಸರ್ಯವು ಉತ್ಪನ್ನವಾಗುವ ಸಂಭವವಿರುತ್ತದೆ.

ಕಾತ್ಯಾಯನಿ--ಭಗವನ್ ಕ್ಷಮಿಸಬೇಕು. ಮೈತ್ರೇಯಿಯ ವಿಷಯವಾಗಿ

ನಾನು ಹೊಟ್ಟೇಕಿಚ್ಚುಪಡುವದು ಸರ್ವಥಾ ಶಕ್ಯವಿರುವದಿಲ್ಲ. ನಿಮ್ಮ ಕಾತ್ಯಾಯನಿಯು ಅಷ್ಟು ಗ್ರಾಮ್ಯಸ್ತ್ರೀಯಾಗಿರಬಹುದ? ಮುನಿವರ್ಯ, ಪತಿಗೆ ಅತ್ಯಂತಪ್ರಿಯವಾದ ವಸ್ತುವಿನ ವಿಷಯವಾಗಿ ಸತಿಯು ಮತ್ಸರಪಡುಬಹುದೆ ? ಹೀಗೆ ಪತಿಯ ಒಲವಿನ ವಿರುದ್ಧವಾಗಿ ನಡೆಯುವವಳು ಸತಿಯು ಹ್ಯಾಗೆ? ಸತಿ-ಪತಿಗಳ ದೇಹಗಳು ಭಿನ್ನವಾಗಿದ್ದರೂ ಅವರ ಆತ್ಮಗಳಲ್ಲಿ ಏಕರೂಪತೆಯಿರುವದಷ್ಟೆ? ಅಂದಬಳಿಕ, ಮೈತ್ರೇಯಿಯ ಮೇಲೆ ನಿಮ್ಮ ಪ್ರೇಮವು ಹೆಚ್ಚಾದಮಾನದಿಂದ, ಮೈತ್ರೇಯಿಯ ಮೇಲಿನ ನನ್ನ ಪ್ರೇಮವು ಹೆಚ್ಚದೆ ಹ್ಯಾಗೆಯಿದ್ದೀತು! ನಾನು ತಮ್ಮ ಸಹಧರ್ಮಿಣಿಯಲ್ಲವೆ? ನಿಮಗೆ ಪ್ರಿಯವಾದದ್ದು ನನಗೆ ಪ್ರಿಯವು, ನಿಮಗೆ ಅಪ್ರಿಯವಾದದ್ದು ನನಗೆ ಅಪ್ರಿಯವು!

ಯಾಜ್ಞವಲ್ಕ್ಯ-- ದೇವೀ,ನಿನ್ನ ಮಾತನ್ನು ನಾನು ಅಲ್ಲಗಳಿಯಲಾರೆನು. ನೀನು

ಅಂಥ ಸಜ್ಜನಳೆಂಬದನ್ನು ನಾನು ಬಲ್ಲೆನು; ಆದರೆ ಮೈತ್ರೇಯಿಯು ತಾರುಣ್ಯದಮೂಲಕ ಅವಿವೇಕಿಯಾಗಿ ಮಾತ್ಸರ್ಯತಾಳಿದರೆ ಮಾಡುವದೇನು?
34

ಕಾತ್ಯಾಯನಿ--ಆದಂತು ಶಕ್ಯವೇ ಇರುವದಿಲ್ಲ. ನನಗಿಂತಲೂ ಮೈತ್ರೇ-

ಯಿಯು ಹೆಚ್ಚಿನಯೋಗ್ಯತೆಯವಳೆಂಬದನ್ನು ನಾನು ಬಲ್ಲೆನು. ಆಕೆಯ ಸಹವಾಸದಿಂದಲೇ ನನಗೆ ಪಾರಮಾರ್ಥಿಕ ಜಾಗ್ರತಿಯು ಉತ್ಪನ್ನವಾಗಿರುತ್ತದೆ. ಇದರಮೇಲೆಯೂ ತಾರುಣ್ಯದಮೂಲಕ ಆಕೆಯು ಅವಿವೇಕಿಯಾಗಿ ನಡೆದುಕೊಂಡರೆ, ಭಗವನ್, ತಮ್ಮ ಸಹವಾಸದ ಮಹಿಮೆಯು ಆಕೆಯಲ್ಲಿ ವಿವೇಕವನ್ನು ಹುಟ್ಟಿಸದೆಯಿರುವದೆ ? ತಮ್ಮ ಸಹವಾಸಕ್ಕೆ ಹಣಿಯದಂಥ ಯೋಗ್ಯತಾಹೀನಳು ಮೈತ್ರೇಯಿಯು ಆಗಿದ್ದರೆ; ಆಕೆಯು ಶೀಯಾಜ್ಞವಲ್ಕ್ಯಪತ್ನಿಯ, ಕಾತ್ಯಾಯನಿಯ ಸಂಸಾರಾಸಕ್ತಮನಸ್ಸನ್ನು ಜಾಗ್ರತಗೊಳಿಸಲು ಸಮರ್ಥಳಾಗಬಹುದೆ ?

ಯಾಜ್ಞವಲ್ಕ್ಯ--ಸರಿಸರಿ, ನಿನ್ನ ಮಾತು ಒಪ್ಪತಕ್ಕದ್ದು! ಆದರೂ ಇನ್ನಷ್ಟು

ವಿಚಾರಮಾಡು. ಮಹತ್ವದ ಕಾರ್ಯದಲ್ಲಿ ದುಡುಕುವದು ಹಿತಕರವಾಗದು . ಇಬ್ಬರು ಹೆಂಡಿರನ್ನು ಮಾಡಿಕೊಳ್ಳುವದು, ನನಗಂತು ಹಿತಕರವಾಗಿ ತೋರುವದಿಲ್ಲ. ಏಕಪತ್ನೀ ವ್ರತದ ಮಹತ್ವವು ಹೆಚ್ಚಿನದಿರುತ್ತದೆ.

ಕಾತ್ಯಾಯನಿ--ಭಗವನ್, ಕಾತ್ಯಾಯನಿಯಾದರೂ ಏಕಪತ್ನೀವ್ರತದ ಮಹಿಮೆ

ಯನ್ನು ಅರಿಯದೆ ಇರಬಹುದೆ ? ಬಹುಪತ್ನೀಕರ ಸಂಸಾರವು ಸ್ವಾರಸ್ಯಹೀನವಾಗುವದೆಂ ಬದು ಪ್ರಸಿದ್ದವು. ಅಂಥ ಅಯೋಗ್ಯ ವ್ಯವಹಾರಕ್ಕೆ ಶ್ರೀ ಯಾಜ್ಞವಲ್ಕ್ಯರ ಪತ್ನಿಯು ಸರ್ವಥಾ ಉತ್ತೇಜನ ಕೊಡಲಾರಳು.

ಯಾಜ್ಞವಲ್ಕ್ಯ--ಹಾಗಾದರೆ ಮೈತ್ರೇಯಿಯ ಪಾಣಿಗ್ರಹಣಮಾಡಲಿಕ್ಕೆ ನನ್ನ

ಮನಸ್ಸನ್ನು ತಿರುಗಿಸಲು ಯಾಕೆ ಯತ್ನಿಸುವೆ ?

ಕಾತ್ಯಾಯನಿ--ಅದರಿಂದ ಏಕಪತ್ನೀವ್ರತಕ್ಕೆ ಭಂಗಬರುವದಿಲ್ಲೆಂದು !

ಯಾಜ್ಞವಲ್ಕ್ಯ--ಅದು ಹ್ಯಾಗೆ ?

ಕಾತ್ಯಾಯನಿ--ಭಗವನ್, ಪಾಮರಳಾದ ಪತ್ನಿಯಲ್ಲಿ ತಮ್ಮ ಪ್ರೇಮವಾತ್ಸಲ್ಯ

ಗಳೆಷ್ಟು ! ಸರ್ವಜ್ಞರಾದ ತಾವು ಬಾಲಭಾವದ ನನ್ನ ಉತ್ತರದಿಂದ ಕೌತುಕ ಪಡುವದ ಕ್ಕಾಗಿ ಗೊತ್ತಿಲ್ಲದವರಂತೆ ಪ್ರಶ್ನೆಮಾಡುವಿರಲ್ಲ! ಅಜ್ಞಾನವನ್ನು ದೂರಮಾಡಿಕೊಳ್ಳಲಿಕ್ಕೆ ಇದಕ್ಕೂ ಹೆಚ್ಚಿನ ಸುಪ್ರಸಂಗವು ನನಗೆ ಬೇರೆ ಯಾವದು ಒದಗಬಹುದು ? ತಮ್ಮ ಪ್ರಶ್ನೆಗೆ ಉತ್ತರಕೊಡುವಾಗ ನನ್ನ ಮನೋವೃತ್ತಿಯು ಉಜ್ಜಲಭಾವನಾಯುಕ್ತವಾದದ್ದರಿಂದ ನನಗೆ ಪರಮಾನಂದವಾಗಿರುವದು. ಮುನಿವರ್ಯ, ದೇವ-ದ್ವಿಜಾಗ್ನಿ ಸಾಕ್ಷಿಯಿಂದ ಪಾಣಿಗ್ರಹಣಮಾಡಿ ಪತ್ನಿಯರೆಂಬ ಗೌರವದ ಪದವಿಯನ್ನು ಪಡೆದ ನಾವಿಬ್ಬರು, ಗಂಗಾ ಯಮುನೆಗಳ ಪ್ರವಾಹಗಳು ಸಮುದ್ರಗಮನ ಭರದಲ್ಲಿ ತಮ್ಮ ದ್ವೈತಭಾವದ ಪರಿವೆಯಿ ಲ್ಲದೆ ಏಕರೂಪಹೊಂದಿ ಕಡೆಗೆ ಸಮುದ್ರದಲ್ಲಿ ಲೀನವಾಗಿ ಹೋಗುವಂತೆ, ತಮ್ಮ ಸೇವೆ ಯಿಂದ ಕೃತಾರ್ಥರಾಗುವ ಭರದಲ್ಲಿ ನಾವು ಸ್ವತ್ವವನ್ನು ಮರೆತು ಏಕರೂಪರಾಗಿ ಕಡೆಗೆ ತಮ್ಮಲ್ಲಿ ಲೀನವಾಗಿ ಹೋಗುವೆವು! ಅಂದಬಳಿಕ, ಕಾತ್ಯಾಯನಿಯೂ, ಮೈತ್ರೇಯಿಯೂ ಈಗ ಭಿನ್ನ ವ್ಯಕ್ತಿಗಳಾಗಿ ತೋರಿದರೂ ಮೈತ್ರೇಯಿಯ ವಿವಾಹಾನಂತರ ಅವರು ತತ್ವತಃ
35

ಭಿನ್ನವಾಗಿ ಹ್ಯಾಗೆ ಉಳಿದಾರು ? ಅಂದಬಳಿಕ ನಮ್ಮಿಬ್ಬರ ವಿವಾಹದಿಂದ ತಾವು ಬಹು ಪತ್ನೀಕರು ಹ್ಯಾಗಾಗುವಿರಿ ?

ಯಾಜ್ಞವಲ್ಕ್ಯ--ಕಾತ್ಯಾಯನೀ, ನೀನು ಧನ್ಯಳಂಬದಿಷ್ಟೇ ಅಲ್ಲ, ನಿನ್ನ ಪಾಣಿ

ಗ್ರಹಣ ಮಾಡಿದ ನಾನೂ ಪರಮಧನ್ಯನು ! ನಿಮ್ಮಂಥ ಸಾಧ್ವಿಯರು ಯೋಗದಿಂದ ಗೃಹಸ್ಥಾಶ್ರಮವೂ ಧನ್ಯವಾಗಿ ಹೋಗಿರುವದು; ಆದರೆ ನಿನ್ನ ಮಾತು ವ್ಯವಹಾರದಲ್ಲಿ ಅನುಭವಕ್ಕೆ ಬರುತ್ತಿರುವದೆಯೆ ?

ಕಾತ್ಯಾಯನಿ--ಬರುತ್ತಿರುವದೆಂದು ಹ್ಯಾಗೆ ಹೇಳಲಿ ಮಹಾರಾಜ! ತಮ್ಮಂಥ

ಮಹನೀಯರಲ್ಲದ ಸ್ವಾರ್ಥಪರಾಯಣರಾದ ಏಕಪತ್ನೀಕರುಕೂಡ ಬಹುಪತ್ನೀಕರಂತೆ ದುಃಖಪಡುವದನ್ನು ನೋಡುತ್ತಿರುವಾಗ, ಬಹು ಕನ್ಯಾಪಾಣಿಗ್ರಹಣವು ಹಿತಕರವಾಗು ವದೆಂದು ಹೇಳಲಿಕ್ಕೆ ನನ್ನ ಬಾಯಿಯಾದರೂ ಹ್ಯಾಗೆ ಏಳಬೇಕು? ಎಲ್ಲ ಬಗೆಯಿಂದ ಗಂಡ ನನ್ನು ಅನುಸರಿಸಿ ಅಭೇದವಾಗಿ ವರ್ತಿಸಿದ ಸ್ವಾರ್ಥಪರಾಯಣಳಾದ ಹೆಂಡತಿಯು, ಗಂಡನೊಡನೆ ಒಮ್ಮೆ ಪ್ರೇಮದಿಂದ, ಒಮ್ಮೆ ಸಿಟ್ಟಿನಿಂದ, ಒಮ್ಮೆ!ಔದಾಸೀನ್ಯದಿಂದ, ಒಮ್ಮೆ ದುರಭಿಮಾನದ ಅಹಂಕಾರದಿಂದ, ಮತ್ತೊಮ್ಮೆ ಮತ್ತೊಂದು ವಿಧದಿಂದ ವರ್ತಿಸು ವದರಿಂದ, ಬಹುರೂಪಿಯಾಗಿ ಏಕಪತ್ನೀತ್ವಕ್ಕೆ ಬಾಧೆ ತರುವಳು! ಭಗವನ್ ಈ ದೃಷ್ಟಿ ಯಿಂದ ವಿಚಾರ ಮಾಡಿದರೆ, ಜಗತ್ತಿನಲ್ಲಿ ಏಕಪತ್ನೀತ್ವವು ಅಪರೂಪವೆಂದು ಹೇಳಬೇಕಾ ಗುವದು. ಸಮುದ್ರನಾಥನು ಎಲ್ಲ ನದೀಪತ್ನಿಯರನ್ನು ಸಮನಾಗಿ ಪ್ರೀತಿಸಿ, ಅವರೆಲ್ಲ ರನ್ನೂ ತನ್ನ ಗಾಂಭೀರ್ಯದಿಂದ ಏಕೀಕರಿಸಿ ತನ್ನೊಳಗೆ ಲೀನಮಾಡಿಕೊಳ್ಳುವಂತೆ, ಮಹಾಮಹಿಮರಾದ ಮುನೀಂದ್ರರು ತಾವು ನಮ್ಮಿಬ್ಬರನ್ನು ಏಕೀಕರಿಸಿ ಲೀನಮಾಡಿ ಕೊಳ್ಳಲು ಸಮರ್ಥರಿರುವಾಗ, ಬಹುಪತ್ನೀಕತ್ವದ ದೋಷವು ಹ್ಯಾಗೆ ಬಾಧಿಸುವದು? ಎಲ್ಲ ಹೆಂಡಿರನ್ನು ಸರಿಯಾಗಿ ಪ್ರೀತಿಸಲು ಸಮರ್ಥನಾದ ಪತಿಯು, ವಿಶೇಷತರದ ಉದಾ ತ್ತೋದ್ದೇಶದಿಂದ ಎಷ್ಟು ಜನ ಹೆಂಡಿರನ್ನು ಮಾಡಿಕೊಂಡರೇನು ? ಮೈತ್ರೇಯಿಯಂಥ ಉದಾತ್ತ ವಿಚಾರದ ಸಖಿಯು ಬ್ರಹ್ಮಚರ್ಯದಿಂದಿರುವದಕ್ಕಿಂತ ತಮ್ಮಂಥ ಮಹಾತ್ಮರ ಪಾಣಿಗ್ರಹಣಮಾಡಿ ಗೃಹಸ್ಥಾಶ್ರಮಿಯಾಗಿರುವದು ನನಗೆ ಸಮರ್ಪಕವಾಗಿ ತೋರುವದು. ಮೈತ್ರೇಯಿಯು ತಮ್ಮ ಪಾಣಿಗ್ರಹಣವನ್ನು ಮನಃಪೂರ್ವಕವಾಗಿ ಬಯಸುವಳು. ಅದು ಸಾಧಿಸದ ಪಕ್ಷದಲ್ಲಿ ಬ್ರಹ್ಮಚರ್ಯದಿಂದ ಕಾಲಹರಣ ಮಾಡುವಳು. ಹೀಗೆ ಅನನ್ಯಗತಿಕಳಾಗಿರುವ ಗುಣಾರ್ಢ್ಯಳಾದ ಅಬಲೆಗೆ ಆಶ್ರಯವಿತ್ತು , ಆಕೆಯನ್ನು ಕೃತಾರ್ಥಳಾಗ ಮಾಡುವದು ತಮ್ಮಂಥ ದಯಾಸಾಗರರಿಗೆ ಭೂಷಣವಾಗಿರುವದು. ಮಹಾಜ್ಞಾನಿಗಳಾದ ತಾವು ಲೋಕಕ್ಕೆ ಗೃಹಸ್ಥಾಶ್ರಮದ ಪ್ರಶಸ್ತ ಮಾರ್ಗವನ್ನು ತೋರಿ ಸುವದಕ್ಕಾಗಿಯೇ ಗೃಹಸ್ಥಾಶ್ರಮಿಗಳಾಗಿರುವದರಿಂದ, ಇಂದಿನ ವರೆಗೆ ಏಕಪತ್ನೀಕರಾಗಿ ಏಕಪತ್ನೀವ್ರತವನ್ನು ಪಾಲಿಸಿ ತೋರಿಸಿದಂತೆ, ಇನ್ನೂ ಮೇಲೆ ಬಹುಪತ್ನೀಕರಾಗಿಯೂ ಏಕಪತ್ನೀವ್ರತದಿಂದ ಆಚರಿಸುವ ಗಂಭೀರ ಮಾರ್ಗವನ್ನೂ ಜಗತ್ತಿಗೆ ತೋರಿಸಬೇಕೆಂದು ಪಾಮರಳಾದ ನಾನು ಅತ್ಯಂತವಾದ ಸಥಿಯಿಂದ ಸೆರಗೊಡ್ಡಿಬೇಡಿಕೊಳ್ಳುವೆನು. ಭಗ
36

ವನ್, 'ನೀವಲ್ಲದೆ ಮತ್ತೆ ಯಾರು ಈ ಗಂಭೀರ ಮಾರ್ಗವನ್ನು ತೋರಿಸಲು ಸಮರ್ಥ ರಾಗುವರು?

ಯಾಜ್ಞವಲ್ಕ್ಯ--ದೇವೀ, ಅತ್ಯಂತ ವಿನಯಶೀಲಳಾದ ನೀನು ಪತಿಯಾದ ನನ್ನ

ಮಹಿಮೆಯನ್ನು ವರ್ಣಿಸಿದ್ದು ಸ್ವಾಭಾವಿಕವೇ ಸರಿ; ಆದರೆ ನಿನ್ನ ಯೋಗದಿಂದಲೇ ಪವಿತ್ರನಾಗಿ ಗೃಹಸ್ಥಾಶ್ರಮದ ಕರ್ತವ್ಯಗಳನ್ನೆಲ್ಲ ಅಬಾಧಿತವಾಗಿ ನಡೆಸುವ ನಾನು , ನಿನ್ನ ಘನತರವಾದ ಯೋಗ್ಯತೆಯನ್ನು ವರ್ಣಿಸುವದು ನಿನಗೆ ಸಂಕೋಚಕರವಾಗಿ ತೋರೀತು! ನಿನ್ನ ಉದಾತ್ತವಿಚಾರಕ್ಕಾಗಿ ನಾನು ಪರಮ ಸಂತುಷ್ಟನಾಗಿದ್ದೇನೆ . ಸತೀಶಿರೋಮಣಿಯಾದ ಅರುಂಧತಿಯೊಡನೆ ಪುಣ್ಯಾಹವಾಚನದಲ್ಲಿ ನಿನ್ನ ಪರಿಗಣನೆ ಯಾಗಲಿ! ಭಗವತಿ, ನಿನ್ನಂಥ ಸತಿಯರ ಯೋಗ್ಯತೆಯು ಸಾಮಾನ್ಯವಾದದ್ದಲ್ಲ. ಪರ್ಯಾಯದಿಂದ ನಿನ್ನ ಮುಖದಿಂದಲೇ ಅದು ಪ್ರಕಟವಾಗಿರುವದರಿಂದ ಅದನ್ನು ನಾನು ಮತ್ತೆ ವರ್ಣಿಸುವುದಿಲ್ಲ. ಆಗಲಿ, ನಾನು ಅವಶ್ಯವಾಗಿ ಮೈತ್ರೇಯಿಯ ಪಾಣಿಗ್ರಹಣ ಮಾಡುವೆನು. ಸಾಕ್ಷಾತ್ತ್ರಿಪುರಾರಿಯನ್ನು ಪಾರ್ವತಿಯೂ, ಭೋಗವತಿಯೂ ಆಶ್ರಯಿಸಿ ಶೋಭಿಸುತ್ತಿರುವಂತೆ, ನೀವಿಬ್ಬರೂ ನನ್ನನ್ನು ಆಶ್ರಯಿಸಿ ಶೋಭಿಸಿರಿ!

ಕಾತ್ಯಾಯನಿ-- ಭಗವನ್ , ಅಲಭ್ಯವರಪ್ರದಾನಪೂರ್ವಕವಾಗಿ ತಾವು ಮೈತ್ರೇ

ಯಿಯ ಪಾಣಿಗ್ರಹಣಕ್ಕೆ ಒಪ್ಪಿದ್ದರಿಂದ ನಾನು ಕೃತಕೃತ್ಯಳಾದೆನು. ನಮ್ಮ ಈ ಕಲ್ಯಾಣಪ್ರದವವಾದ ಸಂವಾದವು ನಿಮ್ಮ ಪ್ರಸಾದರೂಪವಾಗಿರುವದರಿಂದ ಅದನ್ನು ಓದುವವರ ಇಷ್ಟಾರ್ಥಗಳು ಸಿದ್ಧಿಸಲಿ !!

ಯಾಜ್ಞವಲ್ಕ್ಯ--ಆಗಲಿ , ಇಷ್ಟಾರ್ಥಪ್ರದರೂಪವಾದ ನಿನ್ನಂಥ ಸಾದ್ವೀಶ್ರೇ

ಷ್ಡರ ಪರಂಪರೆಯು ಈ ಭರತಭೂಮಿಯಲ್ಲಿ ಸ್ಥಿರವಾಗಿರಲಿ ! ಮನೆಮನೆಗೆ ಕಾತ್ಯಾಯನಿಯ ಗುಣಪ್ರಭಾವವು ಪ್ರಕಾಶಿಸಲಿ !!

೫ ನೆಯ ಪ್ರಕರಣ.

ತರುಣೋಪಾಯ.

--೧೦-co--೦--

ಗವಾನ್ ಯಾಜ್ಞವಲ್ಕ್ಯರು ಮೈತ್ರೇಯಿಯ ಪಾಣಿಗ್ರಹಣ ಮಾಡಿ ಇಬ್ಬರ

ಹೆಂಡಿರೊಡನೆ ಅತ್ಯುಜ್ವಲತೆಯಿಂದ ಗೃಹಸ್ಥಾಶ್ರಮ ಧರ್ಮವನ್ನು ಪಾಲಿಸಹತ್ತಿದರು ಮಹಾತ್ಮರ ಮನಸ್ಸಿನಲ್ಲಿ, ಮಾತಿನಲ್ಲಿ, ಕೃತಿಯಲ್ಲಿ ಏಕರೂಪತೆ ಇರುವದೆಂಬದುಸುಳ್ಳಲ್ಲ ಭಗವತೀ ಕಾತ್ಯಾಯನಿಯು ತಾನು ಪತಿಯ ಮುಂದೆ ಪತಿಧರ್ಮವನ್ನು ಪ್ರತಿಪಾದಿಸಿ


• ಬ್ರಾಹ್ಮಣರು ಪ್ರಣ್ಯಾಸವಾಚನದಲ್ಲಿ "ಅರುಂಧತೀ ಪುರೋಗಾ ಏಕಪತ್ನ್ಯ: ಪ್ರೀಯಂತಾಂ, ಭಗ

ವತೀಕಾತ್ಯಾಯನಿ ಪ್ರೀಯತಾಂ” ಎಂದು ಪಠಿಸುವದು ಪ್ರಸಿದ್ದವಾಗಿರುವದ'

37

ದಂತೆ ಅಕ್ಷರಶಃ ಕಡೆತನಕ ನಡೆದಳು. ಮೈತ್ರೇಯಿಯೂ ಕಾತ್ಯಾಯನಿಯ ವಿಷಯವಾಗಿ ಮಾತ್ಸರ್ಯತಾಳಲಿಲ್ಲ. ಅವರ ಪರಸ್ಪರರ ಪ್ರೇಮಭಾವವು ಕಡೆತನಕ ಅಖಂಡವಾಗಿ ಉಳಿಯಿತು. ನಿಸ್ಪೃಹರಾದ ಮಹಾತ್ಮರ ಆಚರಣೆಯು ಹೀಗೆಯೇ ಸರಿ. ಇಂಥ ಉದಾತ್ತಭಾವದ ಪತ್ನಿಯರ ಸಹವಾಸದಿಂದ ಯಾಜ್ಞವಲ್ಕ್ಯರ ಗೃಹಸ್ಥಾಶ್ರಮ ಆನಂದಕರವಾಗಿಯೂ, ಲೋಕಾದರಣೀಯವಾಗಿಯೂ ನಡೆಯಿತು. ಸಾಧಾರಣವಾಗಿ ಮೂವತ್ತು ವರ್ಷದ ವಯಸ್ಸಿನಲ್ಲಿ ಮೈತ್ರೇಯಿಯ ಲಗ್ನವಾದ ಆ ಮಹಾತ್ಮರು ವೃದ್ಧಾ ಪ್ಯವು ಪ್ರಾಪ್ತವಾಗುವವರೆಗೆ ಗೃಹಸ್ಥಾಶ್ರಮಿಗಳಾಗಿದ್ದರು . ಅವರು ತಮ್ಮ ಪತ್ನಿಯರೊಡನೆ ಆಧ್ಯಾತ್ಮಿಕ ವಿಷಯವನ್ನು ಕುರಿತು ದಿನಾಲು ಚರ್ಚಿಸುತ್ತಿದ್ದರು. ಮೈತ್ರೇಯಿಯೊಡನೆ ಕಾತ್ಯಾಯನಿಯ ಆಧ್ಯಾತ್ಮಿಕ ಜ್ಞಾನವೂ ದಿನದಿನಕ್ಕೆ ಹೆಚ್ಚಹತ್ತಿ, ಆಕೆಯ ಸಂಸಾರಾಸಕ್ತಿಯು ದಿನದಿನಕ್ಕೆ ಕಡಿಮೆಯಾಗಹತ್ತಿತು. ಒಂದುದಿನ ಯಾಜ್ಯವಲ್ಕ್ಯರು ಹೋಮಶಾಲೆಯಲ್ಲಿ ಕುಳಿತಿದ್ದರು. ಅವರ ಮುಖಮುದ್ರೆಯು ಶಾಂತವೂ, ತೇಜಸ್ವಿಯೂ ಇದ್ದದ್ದರಿಂದ ಪಂಚಾಗ್ನಿಯಿಂದ ಯುಕ್ತವಾದ ಆ ಹೋಮಶಾಲೆಯಲ್ಲಿ ಆರನೆಯ ಅಗ್ನಿಯಂತೆ ಅವರು ಒಪ್ಪುತ್ತಿದ್ದರು . ಸ್ವಾಹಾ-ಸ್ವಧೆಯರಂತೆ ಇದ್ದ ಅವರ ಇಬ್ಬರು ಪತ್ನಿಯರು ಬಳಿಯಲ್ಲಿ ಕುಳಿತಿದ್ದರು. ಸಾಯಂಕಾಲದ ಹೋಮವು ಅದೇ ಮುಗಿದು, ಸ್ಧ೦ಡಿಲದಿಂದ ಹೊರಡುವ ಹೋಮ ಧೂಮವು ಅಲ್ಲಿಯೇ ಸುತ್ತುತ್ತಿದ್ದರಿಂದ, ಹವಿರ್ಗಂಧವು ಹೋಮಶಾಲೆಯಲ್ಲೆಲ್ಲ ಇಡಗಿತ್ತು. ಯಜಮಾನನ ಇಚ್ಛೆಯಂತೆ ಹೋಮ ಧೂಮವು ದೇವತೆಗಳನ್ನು ಸಂತೋಷಪಡಿಸುವದಕ್ಕಾಗಿ ಸ್ವರ್ಗಲೋಕಕ್ಕೆ ಹೋಗುತ್ತಲಿತ್ತು. ಹೀಗೆ ದೇವತೆಗಳನ್ನು ಸಂತೋಷಪಡಿಸಿ ಅವರು ಆನಂದದಿಂದ ಕುಳಿತಿರಲು, ಯಾಜ್ಞವಲ್ಕ್ಯರು ತಮ್ಮ ಪ್ರೀಯಪತ್ನಿಯರನ್ನು ಕುರಿತು- "ಈ ವರೆಗೆ ನಾನು ನಿಮ್ಮ ಯೋಗದಿಂದ ಗೃಹಸ್ತಾಶ್ರಮದ ವೈಭವದಲ್ಲಿದ್ದೆನು. ಈಗ ವೃದ್ದಾಪ್ಯವು ಪ್ರಾಪ್ತವಾಗಿರುವದರಿಂದ, ಚತುರ್ಥಾಶ್ರಮವನ್ನು ಸ್ವೀಕರಿಸುವದು ಅವಶ್ಯ ವಾಗಿರುತ್ತದೆ; ಆದ್ದರಿಂದ ಏನಾದರೂ ನಿಮ್ಮ ವ್ಯವಸ್ಥೆಯನ್ನು ಮಾಡಬೇಕಾಗಿರುವುದು. ಈ ವರೆಗೆ ನಾನು ಸಂಪಾದಿಸಿರುವ ಧನವನ್ನು ನೀವಿಬ್ಬರೂ ಹಂಚಿಕೊಂಡು ಸುಖದಿಂದ ಕಾಲಹರಣ ಮಾಡಿರಿ." ಎಂದು ಹೇಳಿದರು. ಅವರ ಆಶ್ರಮಸ್ವೀಕಾರದ ವಿಚಾರವು ಅವರ ಇಬ್ಬರು ಪತ್ನಿಯರಿಗೂ ಯೋಗ್ಯವಾಗಿ ತೋರಿತು. ಅವರು ಹಟಮಾರಿತನದಿಂದ ತಮ್ಮ ಪತಿಯನ್ನು ಸಂಸಾರದ ಬಲೆಯಲ್ಲಿ ಬಿಗಿಯುವ ಗೊಡವಿಗೆ ಹೋಗಲಿಲ್ಲ. ಕಾತ್ಯಾಯನಿಯ ಮೊದಲಿನ ಸಂಸಾರಾಸಕ್ತಿಯು ಸಂಪೂರ್ಣವಾಗಿ ಅಳಿದು ಹೋಗಿತ್ತು. ಮೈತ್ರೇಯಿಯಂತು ಮೊದಲಿನಿಂದಲೇ ವಿರಕ್ತಳಾಗಿದ್ದಳು. ಅವರಿಬ್ಬರೂ ತಮ್ಮ ಪತಿಯನ್ನು ಕುರಿತು- "ಭಗವನ್, ತಮ್ಮ ಮನೆಯಲ್ಲಿ ಧನವೇನಿರುತದೆಂಬದು ನಮಗೆ ಗೊತ್ತೇ ಇರುತ್ತದೆ: ಆದರೆ ಆ ಧನದಿಂದ ನಮಗೆ ಅಮರರಾಗಲಿಕ್ಕೆ ಬರಬಹುದೋ?

ಯಾಜ್ಞವಲ್ಕ್ಯ-–ಛೇ, ಛೇ, ಹೀಗೆ ಹೇಗೆ ಕೇಳುವಿರಿ? ಎಲ್ಲಿಯಾದರೂ ಧನ

ದಿಂದ ಅಮರತ್ವವು ಪ್ರಾಪ್ತವಾಗಬಹುದೆ? ಧನವಂತರಿಗೆ ಆಗುವ ಸುಖವು ಮಾತ್ರ ನಿಮಗೆ
38

ಧನದಿಂದ ಆಗಬಹುದು. ದ್ರವ್ಯವು ಜಡವಿರುವದರಿಂದ ಬಹಳವಾದರೆ ಅದು ಈ ಜಡ ದೇಹದ ಪರಿಪೋಷಣವನ್ನು ಮಾಡೀತು. ದ್ರವ್ಯವಿಲ್ಲದೆ ಸಂಸಾರಯಾತ್ರೆಯು ನಡೆಯಲಾರದು. ಸಂಸಾರದಲ್ಲಿ ಮುಕ್ತಿಯ ಹೆಸರನ್ನು ಎತ್ತಲಾಗದು.

ಕಾತ್ಯಾಯನಿ--ಮಹಾರಾಜ, ಶರೀರವು ಪುಷ್ಟವಾದ ಮಾತ್ರದಿಂದ ನಮ್ಮ ಕರ್ತ

ವ್ಯವು ಮುಗಿದಂತಾಗಲಿಲ್ಲ. ಅಮರತ್ವವನ್ನು ದೊರಕಿಸಿಕೊಡದೆಯಿದ್ದ ಧನವನ್ನು ತಕ್ಕೊಂಡು ನಾವು ಮಾಡುವದೇನು? ಅದರಿಂದ ನಮಗಾಗುವ ಹಿತವೇನು?

ಮೈತ್ರೇಯಿ--ಭಗವಾನ್, ಅಮರಪದಪ್ರಾಪ್ತಿಗೆ ಬೇಕಾದದ್ದನ್ನಷ್ಟು ನಮಗೆ

ಕೊಟ್ಟು ಹೋಗಬೇಕು. ಉಳಿದದ್ದೇನು ನಮಗೆ ಬೇಡ. ಜನ್ಮಮರಣಗಳ ಘರ್ಷಣದಿಂದ, ಹಾಗು ತಾಪತ್ರಯಾಗ್ನಿಗಳ ತಾಪದಿಂದ ಬೇಯುವ ನಮ್ಮನ್ನು ಭವಸಾಗರದಿಂದ ಮುಕ್ತವಾಗಮಾಡಿರಿ. ನಮಗೆ ಶಾಂತಿಯನ್ನು ಕೊಡುವವರು ತಮ್ಮ ಹೊರತು ತ್ರೈಲೋಕ್ಯದಲ್ಲಿ ಮತ್ತೆ ಯಾರೂ ನಮಗೆ ಕಾಣುವದಿಲ್ಲ .

ಈ ಮಾತುಗಳನ್ನು ಕೇಳಿ ಯಾಜ್ಞವಲ್ಕ್ಯರಿಗೆ ಪರಮಾನಂದವಾಯಿತು. ಅವರು

ತಮ್ಮ ಪತ್ನಿಯರನ್ನು ಕುರಿತು-- "ನೀವಿಬ್ಬರೂ ನನಗೆ ಅತ್ಯಂತ ಪ್ರಿಯರಾಗಿರುವಿರಿ. ನನಗೆ ಪ್ರಿಯವಾದ ಮಾತುಗಳನ್ನೇ ನೀವು ಆಡಿದಿರಿ. ನಾನು ನಿಮಗೆ ಅಮರತ್ವವು ಪ್ರಾಪ್ತವಾಗುವದಕ್ಕಾಗಿ ಹೇಳುವ ಮಾತುಗಳನ್ನು ಲಕ್ಷಪೂರ್ವಕವಾಗಿ ಕೇಳಿರಿ. ಈ ವರೆಗೆ ಗೃಹಸ್ಥಾಶ್ರಮದ ಧರ್ಮಗಳಂತ ಆಚರಿಸಿ ನೀವು ಧನ್ಯರಾಗಿರುವಿರಿ. ನಿಮಗೆ ಮೋಕ್ಷೋಪಾಯಗಳನ್ನು ಕುರಿತು ಸಾಮಾನ್ಯವಾಗಿ ಇಂದು ನಿಮ್ಮನ್ನು ಬೋಧಿಸುವೆನು. ನಿಮಗೆ ಶಾಶ್ವತ ಶಾಂತಿಯ ಪ್ರಶಸ್ತವಾದ ಮಾರ್ಗವನ್ನು ತೋರಿಸಿಯೇ ನಾನು ಚತುರ್ಥಾಶ್ರಮವನ್ನು ಸ್ವೀಕರಿಸುವೆನು; ಮುಂದೆ ತಪಶ್ಚರ್ಯದಿಂದ ಆ ಮಾರ್ಗವನ್ನು ಕ್ರಮಿಸಿ, ಶಾಶ್ವತಶಾಂತಿಸಾಮ್ರಾಜ್ಯವ ಮುಟುವ ಕೆಲಸವನ್ನು ನೀವೇ ಮಾಡಬೇಕಾಗುವದು; . ಅಲ್ಲಿ ಅನ್ಯರ ಸಹಾಯವು ವಿಶೇಷವಾಗಿ ಉಪಯೋಗಿಸುವದಿಲ್ಲ. ಅಧಿಕಾರ ಸಂಪನ್ನರೂ, ಆಜ್ಞಾಪಾಲನ ಧುರೀಣರೂ ಆದ ನಿಮಗೆ ಸವಿಸ್ತರ ಬೋಧವು ಅನವಶ್ಯಕವಾದ್ದರಿಂದ ಸಂಕ್ಷೇಪವಾಗಿಯೇ ಹೇಳುವದನ್ನು ಹೇಳುವೆನು. ಸತಿಯರ ಮುಖ್ಯ ಧರ್ಮವು ಪತಿಯ ಅನುಸರಣವು. ಸತಿಗೆ ಪತಿಯೇ ದೈವತವು. ಆತನೇ ಸದ್ಗುರುವು. ಆತನ ವೇದೋಕ ಕರ್ಮಾಚರಣೆಯ ಅನುಸರಣದಿಂದ ಚಿತ್ತಶುದ್ಧಿಯೂ, ಆತನ ಆಜ್ಞಾಪಾಲನರೂವವಾದ ಔಪಾಸನೆಯಿಂದ ಚಿತ್ತೈಕಾಗ್ರತೆಯೂ ಆಗುವವು. ಇವೇ ಬ್ರಹ್ಮಜ್ಞಾನದ, ಅಥವಾ ಸ್ವಾನಂದಸಾಮ್ರಾಜ್ಯದ ಪ್ರಾಪ್ತಿಗೆ ಮುಖ್ಯ ಸಾಧನಗಳಾಗಿರುವವು . ಸದ್ಗುರು ರೂಪನಾದ ಪತಿಯ ಕೃಪಾಸಂಪಾದನವೇ ಬ್ರಹ್ಮಜ್ಞಾನ ಪ್ರಾಪ್ತಿಯು. ಹೀಗೆ ಸತಿಗೆ ಪತಿಯ ಹೊರತು ಅನ್ಯಗತಿಯಿಲ್ಲ. ಸತಿಯು ಸತ್ಯ, ಶಾಂತಿ, ಕ್ಷಮಾ, ಧೈರ್ಯ, ಸಂತೋಷ, ಅಕ್ರೋಧ, ನಿರಭಿಮಾನ, ನಿರ್ಮಾತ್ಸರ್ಯ, ಪ್ರಾಣಿಜಾತಗಳಲ್ಲಿ ಭಗವದ್ರೂಪಭಾವನೆ, ಆರ್ಜನ ಈ ಗುಣಗಳನ್ನು ಪ್ರಯತ್ನವೂರ್ವಕ ಸಂಪಾದಿಸಬೇಕು. ಮೋಕ್ಷಾಪೇಕ್ಷಿಯು ಈ ಜಗತ್ತು, ಬಹಳಹೇಳುವದೇನು , ಈ
39

ದೇಹವು ಕೂಡ ನನ್ನದಲ್ಲವೆಂದು ಭಾವಿಸಬೇಕು. ಇದಕ್ಕೇ ಋಷಿಗಳು ತ್ಯಾಗವೆನ್ನು ವರು. ದೇಹಬುದ್ದಿಯವರಿಗೆ ಈ ತ್ಯಾಗವು ದುಷ್ಕರವಾಗಿರುವದು. ಯಾವತ್ತು ವಿಷಯಜಾತವನ್ನು ವಮನದಂತೆ ತಿಳಿಯುವವರಿಗೇ ವೈರಾಗ್ಯವು ಪ್ರಾಪ ವಾಗುವದು. ವಿರಾಗಿಯೇ ಮೋಕ್ಷಾಧಿಕಾರಿಯು. ಆತ್ಮನು ಸರ್ವತ್ರವ್ಯಾಪಕನಾಗಿದ್ದು, ಸ್ತ್ರೀ-ಪುತ್ರಾದಿ ಗಳಿಗಿಂತ ಆತನು ಅತ್ಯಂತಪ್ರಿಯನಾಗಿರುವನು. ಪತಿ-ಪುತ್ರಾದಿಗಳನ್ನು ಪ್ರೀತಿಸು ವದು ಅವರಸಲುವಾಗಿಯಲ್ಲ, ತನ್ನ ಸಲುವಾಗಿ ! ಇದೇಮಾತು ಶರೀರ, ಪಶು, ದೇವ ತೆಗಳು, ಎಲ್ಲಪ್ರಾಣಿಜಾತಗಳು ಇವುಗಳ ವಿಷಯದ ಪ್ರೇಮಭಕ್ತಿಗಳಿಗೂ ಸಂಬಂಧಿ ಸುವದು; ಆದರೂ ಆತ್ಮನು ಅಭೇದ್ಯನೆಂದು ನಿಃಸಂಶಯದಿಂದ ತಿಳಿಯಲಿಕ್ಕೆ ಈಪತಿ-ಪುತ್ರಾ ದಿಕರೇ ಸಾಧನಗಳಾಗಿರುವರು. ಸಮುದ್ರವು ಯಾವತ್ತು, ಜಲಗಳ . ಆಧಾರವಾಗಿ ರುವಂತೆ ಆತ್ಮನು ಯಾವತ್ತು ಜಗತ್ತಿನ ಆಧಾರವಾಗಿರುವನು.

ಬ್ರಹ್ಮದೇವನಿಂದ ಕ್ರಿಮಿಕೀಟಕಾದಿ ಕ್ಷುದ್ರಜೀವಿಗಳವರೆಗೆ ಒಬ್ಬನೇ ಆತ್ಮನು

ವ್ಯಾಪಕನಾಗಿರುವನೆಂಬ ಅನುಭವವನ್ನು ಪಡೆಯುವದೇ ಜ್ಞಾನವು. ಹಸಿಕಟ್ಟಗೆಯು ಸುಡುವಾಗ ಬೆಂಕಿ-ಹೊಗೆಗಳು ಬೇರೆಬೇರೆಯಾಗಿ ಕಾಣಿಸುವಂತೆ, ಆತ್ಮನು ಸಂಕಲ್ಪ ಯುಕ್ತನಾದರೆ ಈ ಜಗತ್ತು ಭಿನ್ನವಾಗಿ ತೋರುವರು. ಸುಮಂಗಲೆಯರೇ , ಅಜ್ಞಾನ ಮೂಲವಾದ ದೈವತವು ದುಃಖಕ್ಕೆ ಕಾರಣವು . ನಿಮಗೆ ದ್ವೈತದ ಭಾಸವಾಗಲಿಕ್ಕೆ ನಿಮ್ಮ ಸಂಕಲ್ಪವೇ ಕಾರಣವು. ನೀವು ಸಂಕಲ್ಪಾತೀತರಾದರೆ ಆತ್ಮನಸ್ವರೂಪರೇ ಇರುವೆವೆಂಬ ಅನುಭವವು ನಿಮಗೆ ಆಗುವದು; ಆದ್ದರಿಂದ ಯಾವತ್ತು ಸಂಕಲ್ಪಗಳ ನಿರೋಧಮಾಡಿ, ನಾವೇ ಆತ್ಮಸ್ವರೂಪರೆಂಬ ಅಖಂಡಭಾವನೆಯನ್ನು ಹೃದಯದಲ್ಲಿ ಧಾರಣಮಾಡಿರಿ; ಅಂದರೆ ಆಯುಷ್ಯವಿರುವವರೆಗೆ ಜೀವನ್ಮುಕ್ತಿದಶೆಯು ಪ್ರಾಪ್ತವಾಗಿ ಕಡೆಗೆ ಆತ್ಮಸ್ವರೂ ಪದಲ್ಲಿ ನೀವು ಕೂಡಿಹೋಗುವಿರಿ. ಸ್ವಪ್ನಕ್ಕೆ ಸಂಕಲ್ಪವು ಕಾರಣವಾಗಿರುವಂತೆ, ಜಾಗ್ರತಿಗೂ ಸಂಕಲ್ಪವೇ ಕಾರಣವಾಗಿರುವದು. ಸ್ವಪ್ನದಲ್ಲಿ ಸಂಕಲ್ಪದನಾಶವಾದ ಕೂಡಲೆ ಗಾಢನಿದ್ರೆಯೂ ಹತ್ತುವಂತೆ, ಜಾಗ್ರತಿಯಲ್ಲಿ ಸಂಕಲ್ಪದ ನಾಶವಾದರೆ ಸಮೃದ್ಧಿಯು ಲಭಿಸುವದು. ಆತ್ಮನು ಸಂಗರಹಿತನಾಗಿದ್ದು ಎಲ್ಲವನ್ನು ನೋಡು ವನು ; ಆದರೆ ಆತ್ಮನನ್ನು ಮಾತ್ರ ಯಾರೂ ನೋಡಲಾರರು. ಆತ್ಮನು ಅವಸ್ಥಾಶ್ರಯದಲ್ಲಿಯೂ ಸಾಕ್ಷೀಭೂತನಾಗಿದ್ದು, ಸ್ವಯಂಪ್ರಕಾಶಕನಾಗಿರುವನು. ಈ

ಆತ್ಮನೇ ಅಜ್ಞಾನಾವೇಷ್ಟಿತನಾಗಿ ನಾನು ಕರ್ತವ್ಯವೆಂದು ಭಾವಿಸಿ ಬದ್ಧನಾಗುವನು. ಅದೇ ಆತ್ಮನೇ ತಾನು ಅಸಂಗನೂ, ಅಕರ್ತೃವೂ ಎಂದು ತಿಳಿದರೆ ಮುಕ್ತನಾಗುವನು, ಕನ್ನಡಿಯಲ್ಲಿ ಪ್ರತಿಬಿಂಬಿಸಿರುವ ತನ್ನ ಸ್ವರೂಪವನ್ನೆ ಬಾಲಕನು ಭಿನ್ನವಾಗಿ ಕಲ್ಪಿಸುವಂತೆ, ಮಾಯಾಮ್ಮೊಹಿತನಾದ ಆತ್ಮನು ವಿಷಯಗಳನ್ನು ತನ್ನಿಂದ ಭಿನ್ನವಾಗಿ ಕಲ್ಪಿಸುವನು. ಸುಮಂಗಲೇಯರೇ, ನೀವು ಶಾಂತವೃತ್ತಿಯವರಾಗಿ ಆತ್ಮನಹೊರತು ಬೇರೆಯಾವದರ ವಿಚಾರವನ್ನು ಮಾಡದೆ ಜೀವನ್ಮುಕ್ತರಾಗಿ ಪ್ರಾರಬ್ದಕ್ಷಯವಾಗು ವರೆಗೆ ಸುಖಿಗಳಾಗಿ ಇರ್ರಿ, ಈ ಆತ್ಮಶೋಧಕ್ಕಾಗಿಯೇ ಎಷ್ಟೋಜನರು ಸರ್ವಸಂಗ
40

ಪರಿತ್ಯಾಗಮಾಡಿ ಭಿಕ್ಷಾವೃತ್ತಿಯಿಂದ ತಿರುಗುತ್ತಿರುವರು ; ಆದ್ದರಿಂದ ನೀವು ನಿರಿಚ್ಛರಾಗಿ ಆತ್ಮನಿಷ್ಠರಾಗಿರಿ. ಮಾಡಿದಕರ್ಮಗಳನ್ನು ಸ್ಮರಿಸಬೇಡಿರಿ. ಪ್ರಾರಬ್ಧಾನು ಸಾರವಾಗಿ ಮಾಡಬೇಕಾದ ಕರ್ಮಗಳನ್ನು ನೀವು ಅನಾಸಕ್ತರಾಗಿ ಮಾಡಿರಿ; ಆದರೆ ಕರ್ತೃತ್ಯದ ಅಹಂಕಾರಕ್ಕೆ , ಹೃದಯದಲ್ಲಿ ಸರ್ವಥಾ ಆಸ್ಪದಕೊಡಬೇಡಿರಿ. ಒಬ್ಬ ನೊಬ್ಬ ಹುಡುಗನು ಅಹಂಕಾರರಹಿತವಾಗಿ ಕರ್ಮಮಾಡುತ್ತಿರುವಂತೆ ನೀವು ಕರ್ಮ ಮಾಡಿ ಮುಕ್ತರಾಗಿರಿ, ಎಷ್ಟು ಹೇಳಿದರೂ ಅಪ್ಟೇ, ಪ್ರಿ ಯ ತ ಮೆ ಯ ರೇ, ಸದ್ಗುರುವಿಗೆ ಶರಣುಹೋಗಿ, ಆತನನು, ಏಕನಿಷ್ಠೆಯಿಂದ ಸೇವಿಸಿ ಆತನ ಅನುಗ್ರಹ ಸಂಪಾದಿಸದಹೊರತು ಮೋಕ್ಷವು ಸಾಧಿಸದು. ನೀವು ಪರಮ ಧನ್ಯರಾದ್ದರಿಂದಲೇ ಪತಿ ರೂಪ ಸದ್ಗುರುವನ್ನು ಸೆ:ವಿಸಿ, ಆತನ ಅನುಗ್ರಹಕ್ಕೆ ಪಾತ್ರರಾಗುವಿರಿ !

ಈಮೇರೆಗೆ ಬೋಧಿಸಿ ಯೋಗೀಶ್ವರರಾದ ಶ್ರೀ ಯಾಜ್ಞವಲ್ಕ್ಯೆ ರು ಸನ್ಯಾಸ

ಗ್ರಹಣ ಮಾಡಿದರು. ಏಕನಿಷ್ಠೆಯಿಂದ ತಮ್ಮನ್ನು ಸ್ಮರಿಸುವವರನ್ನು ಉದ್ಧರಿಸುವದ ಕ್ಕಾಗಿ ಆ ಮಹಾತ್ಮರು ಈಗಲೂ ಭೂತಲದಲ್ಲಿ ವಾಸಿಸುತ್ತಿರುವರು. ಇಹ-ಪರ ಸೌಖ್ಯಸಾ ಧಕವಾದ ಈ ಭಗವತೀಕಾತ್ಯಾಯನಿಯ ಸವ್ರಸಪೂರ್ಣ ಚಾರಿತ್ರ್ಯವನ್ನು ಓದುವವರ, ಹಾಗು ಕೇಳುವವರ ಇಷ್ಟಾರ್ಥಗಳು ಸಾಧಿಸುವವು. ಈ ಅಲ್ಬಗ್ರಂಥರೂಪ ಪುಷ್ಪಾಂಜಲಿ ಯನ್ನು ನಮ್ಮ ಪೂಜ್ಯ, ಮಾತೃವರ್ಗಕ್ಕೂ, ಪ್ರಿಯ ಭಗಿನೀವರ್ಗಕ್ಕೂ ಅರ್ಪಿಸಿ, ಅವರ ಇಷ್ಟಾರ್ಥಗಳನ್ನು ಪೂರ್ಣಮಾಡುವದಕ್ಕಾಗಿ ಶ್ರೀ ಕಾತ್ಯಾಯನೀ-ಯಾಜ್ಞವಲ್ಕ್ಯರನ್ನು ಪ್ರಾರ್ಥಿಸುವೆವು ! ! ||ಓಂ ಶಾಂತಿಃ ಶಾಂತಿಃ ಶಾಂತಿ..!!