ಮನವ ಬಂಧನಕ್ಕೊಳಗುಮಾಡಿ ನಿಲಿಸಿಹೆನೆಂದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮನವ ನಿಲಿಸಿಹೆನೆಂದು ನುಡಿವ ಅಣ್ಣಗಳ ಕಣ್ಣಗೆಡಿಸಿ ಬಣ್ಣಗುಂದಿಸಿ ಬಂಧನಕ್ಕೊಳಗುಮಾಡಿ ಭವದಲ್ಲಿ ಸೆರೆಹಿಡಿದಿರ್ಪುದು ನೋಡಾ ಮನವು. ಅದೆಂತೆಂದೊಡೆ : ವ್ರತವುಳ್ಳವರ ಭ್ರಾಂತುಗೆಡಿಸಿತ್ತು ನೋಡಾ ಮನವು. ಯತಿಗಳೆಂಬವರ ಮತಿಹೀನರ ಮಾಡಿತ್ತು ನೋಡಾ ಮನವು. ಕಣ್ಣುಮುಚ್ಚಿ ಧ್ಯಾನಿಸುವ ಅಣ್ಣಗಳ ಕಳವಳಗೊಳಿಸಿತ್ತು ನೋಡಾ ಮನವು. ಏಕಾಂತವಾಸಿಗಳೆಲ್ಲರ ಹಿಡಿತಂದು ಲೋಕದ ಮಧ್ಯದೊಳಗಿರಿಸಿ ಕಾಕುತನದಲ್ಲಿ ಕಾಡಿ ಏಡಿಸಿತ್ತು ನೋಡಾ ಮನವು. ಯೋಗಿಗಳೆಂಬವರ ಭೋಗಕ್ಕೊಳಗುಮಾಡಿ ಕಾಡಿತ್ತು ನೋಡಾ ಮನವು. ಇಂತೀ ಮನವ ನಿಲಿಸಿಹೆವೆಂದು ನುಡಿದು ಮತಿಗೆಟ್ಟು ಮಣ್ಣುಮಸಿಯಾಗಿ ಹೋದರು ನೋಡಾ ಹಲಕೆಲಬರು. ಅವರಂತಿರಲಿ. ಇನ್ನು ಮನವ ನಿಲಿಸುವ ಭೇದವ ಹೇಳಿಹೆ ಕೇಳಿರೆ. ಆದಿ-ಅನಾದಿ
ಸುರಾಳ-ನಿರಾಳ
ಶೂನ್ಯ-ನಿಃಶೂನ್ಯ
ಸಾಕಾರ-ನಿರಾಕಾರ
ಸಗುಣ-ನಿರ್ಗುಣ
ಮೂರ್ತಿ-ಅಮೂರ್ತಿ
ಶಿವ-ಶಕ್ತಿ
ನಾಮ-ರೂಪು-ಕ್ರಿಯೆ ಸಕಲ ಬ್ರಹ್ಮಾಂಡ ಸಚರಾಚರಾದಿ ನಾನಾ ತೋರಿಕೆಯೆಲ್ಲವು ತಾನೆ ಎಂದು ತಿಳಿಯಲು ಆ ತಿಳಿದಮಾತ್ರದಲ್ಲಿಯೆ ಮನದ ಕಲ್ಪಿತವಳಿದು ಕಾಯಿ ಹಣ್ಣಾದಂತೆ
ಆ ಮನವು ಮಹಾಘನಪರಬ್ರಹ್ಮವೆ ಅಪ್ಪುದು. ಆ ಮನವು ಮಹಾಘನವಾದಲ್ಲಿಯೆ ಶರಣನ ಹುಟ್ಟು ಹೊಂದು ನಷ್ಟವಾಗಿರ್ಪುದು. ಆ ಶರಣನ ಹುಟ್ಟು ಹೊಂದು ನಷ್ಟವಾದಲ್ಲಿಯೆ ಅಖಂಡೇಶ್ವರನೆಂಬ ಕುರುಹು ನಿರ್ವಯಲು ನೋಡಾ.