ಮನ ಘನವಸ್ತುವಾದ ಬಳಿಕ
ಮನ ವಚನ ಕಾಯವೆಂಬ ತ್ರಿಕರಣ ಶುದ್ಧಾತ್ಮನೆಂಬೆ. ನಿತ್ಯ ಮುಕ್ತನೆಂಬೆ. ನಿರಾಲಂಬಿಯೆಂಬೆ. ಆತನ ತನು ಶುದ್ಧವಾಗಿ ತನುವೇ ಗುರು; ಆತನ ಮನ ಶುದ್ಧವಾಗಿ ಮನವೇ ಲಿಂಗ. ಆತನ ಭಾವ ಶುದ್ಧವಾಗಿ ಭಾವವೇ ಮಹಾನುಭಾವ ಚರಲಿಂಗ ನೋಡಾ. ಇಂತೀ ಜ್ಞಾನವೇ ಗುರು. ಆರುಹೇ ಶಿವಲಿಂಗ
ಮಹಾನುಭಾವವೇ ಜಂಗಮ. ಇಂತೀ ತ್ರಿವಿಧವು
ತನ್ನ ತ್ರಿವಿಧಾತ್ಮ ನೋಡಾ. ಜ್ಞಾನ ಗುರುವೆಂದರೆ ತನ್ನ ಜೀವಾತ್ಮ. ಅರುಹೆಂಬ ಶಿವಲಿಂಗವೆಂದರೆ ತನ್ನ ಅಂತರಾತ್ಮ. ಮಹಾನುಭಾವ ಜಂಗಮವೆಂದರೆ ತನ್ನ ಪರಮಾತ್ಮ. ಇಂತ್ರೀ ತ್ರಯಾತ್ಮ ಏಕಾತ್ಮವಾದರೆ ಸಚ್ಚಿದಾನಂದ ನಿರಂಜನ ಪರಾಪರವಸ್ತು ನೀನೇ. ಅಲ್ಲಿ ನಾ ನೀನೆನಲಿಲ್ಲ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.