ವಿಷಯಕ್ಕೆ ಹೋಗು

ಮಹಾಕ್ಷತ್ರಿಯ/ಇಂದ್ರನು ಓಡಿಹೋದನು

ವಿಕಿಸೋರ್ಸ್ದಿಂದ

==೨೨.ಇಂದ್ರನು ಓಡಿಹೋದನು==

ಇಂದ್ರನು ಶಚಿಯ ಅರಮನೆಯಲ್ಲಿ ಸುಖಾಸನದಲ್ಲಿ ದಿಂಬಿಗೆ ಒರಗಿಕೊಂಡು ಕುಳಿತಿದ್ದಾನೆ. ಆತನಿಗೆ ನೆಮ್ಮದಿಯಿದ್ದಂತಿಲ್ಲ. ಏನೋ ಮುಜುಗರವಾಗಿ, ಆತನ ಮನಶ್ಯಾಂತಿಯು ಕೆಟ್ಟಿದೆ. ಏಕಾಂತದಲ್ಲಿ ಇರಲು ಆ ವೀರವರನಿಗೆ ದಿಗಿಲು. ವೃತ್ರನು ಸತ್ತಿರುವುದು ನಿಜವಾದರೂ ಅವನೆಲ್ಲಿ ಹಿಂತಿರುಗಿ ಬರುವನೋ ಎಂದು ಅಂಜಿಕೆ. ಅದರಲ್ಲೂ ಸಿಂಹಾಸನದೇವಿಯು ಹೇಳಿದ ವೃತ್ರಹತ್ಯೆಯು ತನ್ನನ್ನು ಅಂಟಿಕೊಂಡಿರುವುದು ತನಗೂ ತಿಳಿದಿದೆ. ಎಲ್ಲಿದ್ದರೂ ಅಶೌಚದವನಂತೆ ಮೈಲಿಗೆ ಮೈಲಿಗೆಯಾಗಿರುವಂತೆ ಕಾಣುತ್ತದೆ. ಆಚಾರ್ಯನೂ ಮಂತ್ರೋದಕಮಾರ್ಜನಾದಿ ಗಳನ್ನೆಲ್ಲಾ ಮಾಡಿದ್ದಾನೆ. ಆದರೂ ಇಂದ್ರನಿಗೆ ಮೊದಲಿನಂತಿಲ್ಲ. ಏನು ಮಾಡಿದರೆ ಸರಿಹೋದೀತು ಎಂದು ಯೋಚಿಸುತ್ತಿದ್ದಾನೆ. ವಿಶ್ವರೂಪನನ್ನು ವಧಿಸಿದಾಗ ಬಂದ ಹತ್ಯೆಯನ್ನು ಹಂಚಿ ಹಾಕಿದಂತೆ ಈಗಲೂ ಮಾಡೋಣ ಎಂದರೆ ಸಾಧ್ಯವಿಲ್ಲ. ಎಲ್ಲರೂ ವೃತ್ರನ ಪೌರುಷವನ್ನು ಬಲ್ಲರು. ಯಾರೂ ಅ ಹತ್ಯೆಯನ್ನು ಒಪ್ಪಿಕೊಳ್ಳುವಂತಿಲ್ಲ. ತಾನೇ ಅದನ್ನು ಅನುಭವಿಸಿ ತೀರಬೇಕು. ಅದು ಯಾವ ರೂಪದಲ್ಲಿ ಯಾವಾಗ ಕಾಣಿಸಿಕೊಳ್ಳುವುದೋ ತಿಳಿಯದು. ಸರ್ವಜ್ಞನಾದ ಸುರಾಚಾರ್ಯನು ಮಾತ್ರ “ಅದು ನಾವು ಯಾರೂ ಇಲ್ಲದಾಗ ಬಂದರೆ, ಕೂಡಲೇ ನೀನು ಇಂದ್ರತ್ವವನ್ನು ಬಿಟ್ಟು ಪೂರ್ಣತ್ವವನ್ನು ಧ್ಯಾನಿಸು. ಆ ವೇಳೆಗೆ ನಾನೆಲ್ಲಿದ್ದರೂ ಬರುವೆನು, ಮುಂದೆ ನೋಡೋಣ” ಎಂದು ಅವನಿಗೆ ಅಭಿವಚನವನ್ನು ಕೊಟ್ಟಿದ್ದಾನೆ.

ಆಚಾರ್ಯನೂ ಅಗ್ನಿವಾಯುಗಳೂ ಆತನ ದರ್ಶನಕ್ಕೆ ಬರುವ ಹೊತ್ತು. ಇಂದ್ರನೂ ಅವರನ್ನು ಕಾಣಲು ಕಾತರನಾಗಿ ಕಾದಿದ್ದಾನೆ. ಇಂದ್ರನಿಗೆ ಕುಳಿತಿರಲು ಸಾಧ್ಯವಾಗಲಿಲ್ಲ. ಎದ್ದು ಓಡಾಡಲು ಆರಂಭಿಸಿದನು. ಶಚಿಯು ಕಾಲುಕಡೆ ಕುಳಿತಿದ್ದವಳು ಎದ್ದು ಕಿಟಕಿಯನ್ನು ಒರಗಿಕೊಂಡು ನಿಂತಿದ್ದಳು. ಯಾರೋ ಸುಳಿದಂತಾಯಿತು. ಯಾರೆಂದು ಇಂದ್ರನು ನೋಡುವುದರೊಳಗಾಗಿ, ಶಚಿಯು ‘ಅಯ್ಯೋ !’ ಎಂದಳು. ಇಂದ್ರನು ಏನೆಂದು ಅತ್ತ ತಿರುಗುವುದರೊಳಗಾಗಿ ಶಚಿಯು “ಯಾರೋ.....” ಎಂದಳು. ಮುಂದಕ್ಕೆ ಏನು ಹೇಳುತ್ತಿದ್ದಳೋ ಅಷ್ಟರೊಳಗಾಗಿ ಆಕೆಗೆ ಪ್ರಜ್ಞೆಯು ತಪ್ಪಿತು. ಬಿದ್ದುಹೋಗಬೇಕು ಅಷ್ಟರೊಳಗಾಗಿ ಇಂದ್ರನು ಆಕೆಯನ್ನು ಹಿಡಿದುಕೊಂಡು, ಹಾಗೆಯೇ ತಂದು ಸುಖಾಸನದಲ್ಲಿ ಮಲಗಿಸಿದನು. ಶಚಿಯ ಮೈಯಲ್ಲಿ ಯಾವಾಗಲೂ ಘಮಘಮವೆಂದು ಸುವಾಸನೆಯು ಪುಷ್ಪಗುಚ್ಛದಲ್ಲಿರುವುದಕ್ಕಿಂತ ಹೆಚ್ಚಾಗಿ ಮಸಗುತ್ತಿರಬೇಕು. ಅದಕ್ಕೆ ಪ್ರತಿಯಾಗಿ ಏನೋ ದುರ್ವಾಸನೆಯು ಮೂಗಿಗೆ ತೋರುತ್ತಿದೆ. ಬರಬರುತ್ತ ಅದೂ ಬಲವಾಗುತ್ತಿದೆ. ಇಂದ್ರನಿಗೆ ಏನು ಮಾಡಬೇಕೋ ತೋರದಿದೆ.

ಆ ಹೊತ್ತಿಗೆ ಸರಿಯಾಗಿ ಅಗ್ನಿವಾಯುಗಳೂ ಆಚಾರ್ಯನೊಡನೆ ಬಂದರು. ಆಚಾರ್ಯನು ಶಚಿಯನ್ನು ನೋಡುತ್ತಿದ್ದ ಹಾಗೆಯೇ “ಇಂದ್ರ, ತೆಗೆದುಕೋ, ನಿನ್ನ ವಜ್ರಾಯುಧವನ್ನು ತೆಗೆದುಕೋ... ಹೊಡೆ, ಹೊಡೆ, ಅದೋ ನೋಡು. ವೃತ್ರನ ಪ್ರೇತವು ಪೃಥ್ವೀ ಭೂತವನ್ನು ಹಿಡಿದಿದೆ. ಅದರಿಂದಲೇ ಈ ದುರ್ಗಂಧ ! ಮೊದಲು ಹೊಡೆ...” ಎಂದನು.

ಇಂದ್ರನು ವಜ್ರಾಯುಧವನ್ನು ಅನುಸಂಧಾನ ಮಾಡಿದನು. ಹಾಗೆಯೇ ಪೃಥ್ವೀಭೂತವನ್ನು ಅನುಸಂಧಾನ ಮಾಡಿದನು. ಪೃಥ್ವೀಭೂತವೂ ದೃಗ್ಗೋಚರವಾಯಿತು. ನೇರಿಲೆಯ ಹಣ್ಣಿನ ಬಣ್ಣವಾಗಿ, ಗಂಧವೇ ಪ್ರಧಾನಲಕ್ಷಣವಾಗಿರುವ ಪೃಥ್ವೀಭೂತಕ್ಕೆ ಕೆಟ್ಟ ಕಪ್ಪು ಬಡಿದಿದೆ. ತಮೋರಾಶಿಯೋ ಎಂಬಂತಾಗಿದೆ. ವಜ್ರವನ್ನು ಎಲ್ಲಿ ಪ್ರಯೋಗ ಮಾಡಬೇಕು? ಖನಿಜ, ಉದ್ಭಿಜ, ಸ್ವೇದಜ, ಅಂಡಜ, ಜರಾಯುಜ ಸಮೇತವಾದ ಪಂಚೀಕೃತ ಭೂಮಂಡಲವೊಂದು ಕಡೆ ಕಾಣಿಸುತ್ತಿದೆ. ಅಪಂಚೀಕೃತವಾದ ಶುದ್ಧ ಪೃಥ್ವೀಮಂಡಲವೊಂದು ಕಡೆ ಕಾಣುತ್ತಿದೆ. ಇಂದ್ರನು ಯಾವುದರ ಮೇಲೆ ವಜ್ರವನ್ನು ಪ್ರಯೋಗಿಸಬೇಕು? ವಜ್ರಾಹುತಿಗೆ ಸಿಕ್ಕಿ ಭೂಮಿಯಲ್ಲಿರುವ ಲೋಕಲೋಕಗಳೆಲ್ಲ ಧ್ವಂಸವಾಗಿ ಹೋದರೆ? ಅವುಗಳಲ್ಲಿ ತಾನೂ ಒಬ್ಬ ಶಚಿಯೂ ಒಬ್ಬಳು. ದೇವಲೋಕವು ಒಂದು ಭಾಗ. ಏನು ಮಾಡಬೇಕೋ ತಿಳಿಯದೆ ಇಂದ್ರನು ಮುಗ್ಧನಾಗಿದ್ದಾನೆ ಅಷ್ಟೇ ಅಲ್ಲ ತನಗೆ ಏನೂ ತಿಳಿಯದಾಗಿದೆಯೆಂಬುದನ್ನು ಹೇಳಲೂ ತೋರದೆ ಸುಮ್ಮನಿದ್ದಾನೆ.

ಆಚಾರ್ಯನು ಆತನ ಅಂತಃಸಂಕಟವನ್ನು ತಿಳಿದನು. “ಇಂದ್ರ, ಮಹಾಕಾಶದಲ್ಲಿ ನಿಂತು, ‘ದೇವಶತ್ರುವಾಗಿ ಈಗ ಪೃಥ್ವಿಭೂತವನ್ನು ಹಿಡಿದಿರುವ ವೃತ್ರನ ಮೇಲೆ ಈ ಪ್ರಯೋಗ’ ಎಂದು ಸಂಕಲ್ಪಿಸಿ ಪ್ರಯೋಗಿಸು” ಎಂದನು. ಇಂದ್ರನು ಪರಪ್ರಚೋದಿತನಾಗಿ ಕಾರ್ಯಮಾಡುವವನಂತೆ ಆಚಾರ್ಯನ ನಿರ್ದೇಶದಂತೆ ಸಂಕಲ್ಪಮಾಡಿ, ಸಂಕಲ್ಪಪೂರ್ವವಾಗಿ, ವೃತ್ರನನ್ನು ಗುರಿಗೈದು ಶುದ್ಧ ಪೃಥ್ವೀಭೂತ, ಪಂಚೀಕೃತ ಪೃಥ್ವೀಭೂತ, ಎರಡರ ಮೇಲೆಯೂ ವಜ್ರವನ್ನು ಪ್ರಯೋಗಿಸಿದನು. ಭೂಕಂಪವಾಯಿತು. ಕುಲಾಚಲ ಪರ್ವತಗಳೂ ನಡುಗಿಹೋದವು. ಎಲ್ಲಿಂದಲೋ ‘ಅಯ್ಯೋ’ ! ಎಂಬ, ನೂರು ಸಿಡಿಲುಗಳು ಒಂದೇ ಸಲ ಬಿದ್ದರೆ ಆಗುವಂತಹ ಘೋರವಾದ ಸದ್ದಾಯಿತು. ಅದನ್ನೇ ಕೇಳಿ ಅಗ್ನಿವಾಯುಗಳೂ ಹೆದರಿದರು. ಇಂದ್ರನು ತಲ್ಲಣಿಸಿದನು. ಶಚಿಯು ಒದ್ದಾಡಿಹೋದಳು. ಆಚಾರ್ಯನೊಬ್ಬನು ಧೀರನಾಗಿ ಕುಳಿತಿದ್ದಾನೆ.

ಆತನಿಗೂ ಒಳಗೊಳಗೆ ದಿಗಿಲಾಯಿತೊ ಏನೋ ? “ಇರಲಿ ಸಮಯಕ್ಕೆ ಬೇಕಾದೀತು” ಎಂದು ಸಪ್ತರ್ಷಿಗಳನ್ನು ನೆನೆದನು. ಅವರೂ ಅವಸರ ಅವಸರವಾಗಿ “ಏನು ? ಏನು ?” ಎಂದು ಬಂದರು. ಆಚಾರ್ಯನು ನಡೆದುದು ಎಲ್ಲವನ್ನೂ ಅವರಿಗೆ ಅರಿಕೆ ಮಾಡಿ, “ಏನಾದರೂ ಆಗಲಿ, ನೀವು ಇರುವುದು ಒಳ್ಳೆಯದು ಎಂದು ತಮ್ಮನ್ನು ಬರಮಾಡಿಕೊಂಡೆ” ಎಂದನು. ಅವರೂ “ಹೌದು, ಹೌದು, ಅಕಾಲದಲ್ಲಿ ಆದ ಈ ಮಹಾಶಬ್ದವನ್ನು ಕೇಳಿ ನಮಗೂ ಕುತೂಹಲವಾಗಿ, ನೋಡಿದೆವು. ಇದು ಆ ಹತನಾದ ವೃತ್ರನ ಶಬ್ದ ಎಂದು ತಿಳಿಯಿತು. ನಾವು ಮಹೇಂದ್ರನ ರಕ್ಷಣೆಗೆ ಬರಬೇಕು ಎಂದುಕೊಂಡೆವು. ಅಷ್ಟರಲ್ಲಿ ಆಚಾರ್ಯನಿಂದ ಕರೆಯೂ ಬಂತು” ಎಂದರು.

ವಜ್ರಘಾತದಿಂದ ನೊಂದ ವೃತ್ರನು ತನ್ನದೊಂದು ಆವರಣವನ್ನು ಕಳೆದುಕೊಂಡುದು ಎಲ್ಲರಿಗೂ ಗೊತ್ತಾಯಿತು. ವೃತ್ರನು ಸಾಯಲಿಲ್ಲ. ಪೃಥ್ವೀಭೂತದಿಂದ ನೆಗೆದನು. ಎಲ್ಲರೂ ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡಿದರು. ಎಲ್ಲರಿಗೂ ಬಾಯಿ ಅಂಟುಅಂಟಾಗಿದೆ. ಏನೋ ಕೆಟ್ಟ ರುಚಿ. ಆಚಾರ್ಯನು ಅನುಸಂಧಾನ ಮಾಡಿ ನೋಡಿದನು. ಶಚಿಯು ಇತ್ತ ಕುಗ್ಗುತ್ತಿದ್ದಾಳೆ. ಎಳೆಯ ಬಾಳೆಯ ಸುಳಿಯು ಬೆಂಕಿಯ ಝಳಕ್ಕೆ ಸಿಕ್ಕಿದರೆ ಒಣಗುವಂತೆ ಒಣಗುತ್ತಿದ್ದಾಳೆ. ಇಂದ್ರನು “ಆಚಾರ್ಯ, ಇದೇನು ? ಇಲ್ಲಿ ನೋಡಿ, ಏನೋ ಆಗಿಹೋಗುತ್ತಿದೆ” ಎಂದು ಕೂಗಿಕೊಂಡನು. ಆಚಾರ್ಯನು ಕಣ್ಣುಬಿಟ್ಟು ನೋಡಿದನು. ಸಪ್ತರ್ಷಿಗಳು ನಕ್ಕು “ದಿಗಿಲಿಲ್ಲ. ನೋಡು, ನೋಡು” ಎಂದರು. ಆಚಾರ್ಯನು ನೋಡಿದನು. ವೃತ್ರನು ಜಲಭೂತವನ್ನು ಹಿಡಿದಿದ್ದಾನೆ.

ಆಚಾರ್ಯನ ಅಪ್ಪಣೆಯಂತೆ ಇಂದ್ರನು ಆಪೋದೇವಿಯರನ್ನು ಪ್ರಾರ್ಥಿಸಿದನು. ಶುದ್ಧಜಲವು ಅರ್ಧಚಂದ್ರಮಂಡಲಾಕಾರವಾಗಿ ಕಾಣಿಸಿತು. ಪಂಚೀಕೃತ ಜಲಮಂಡಲವು ತನಗೆ ಏನೋ ರೋಗ ಬಂದಂತೆ ಒದ್ದಾಡುತ್ತಿದೆ. ಶುದ್ಧ ಜಲಮಂಡಲವು ಬೆಳ್ಳಗೆ ಬೆಳ್ಳಿಯ ಗುಂಡಿನಂತೆ ಮೆರೆಯಬೇಕಾಗಿದ್ದುದು ಪೆಚ್ಚಾಗಿ ಏನೋ ಹಿಂಸೆಯಲ್ಲಿರುವಂತೆ ನಿಸ್ತೇಜವಾಗಿದೆ.ಅದರಲ್ಲಿರುವ ಪ್ರಧಾನ ಗುಣವಾದ ರಸವು ಕೆಟ್ಟುಹೋಗಿದೆ. ದೇವಗುರುವಿನ ಅಪ್ಪಣೆಯಂತೆ ದೇವರಾಜನು ಮತ್ತೆ ವೃತ್ರಾರ್ಥವಾಗಿ ವಜ್ರವನ್ನು ಪ್ರಯೋಗಿಸಿದನು. ಅಲ್ಲಿಯೂ ಮೊದಲಿನಂತೆ ಮಹಾಶಬ್ದವಾಯಿತು. ಲೋಕಲೋಕಗಳೆಲ್ಲವೂ ಸ್ವಸ್ಥಾನಗಳನ್ನು ಬಿಟ್ಟು ಚಲಿಸಿದವೋ ಎಂಬಂತಾಯಿತು. ಅಲ್ಲಿಯೂ ವೃತ್ರನ ಆವರವೊಂದು ಕಳಚಿ ಬಿತ್ತು. ವೃತ್ರನು ಇನ್ನೂ ಸಾಯಲಿಲ್ಲ. ಅಲ್ಲಿಂದಲೂ ನೆಗೆದು ಹೋದನು.

ಆಚಾರ್ಯನು ಶಚಿಯತ್ತ ತಿರುಗಿದನು. ಶಚಿಗೆ ಇನ್ನೂ ಜ್ಞಾನ ಬಂದಿಲ್ಲ. ಕಣ್ಣಿನಲ್ಲಿ ಇರುವ ತೇಜಸ್ಸಿಲ್ಲ. ಮಹಾಸೌಂದರ್ಯವತಿಯಾದ ಆಕೆಯ ರೂಪವು ನೋಡುತ್ತಿದ್ದಂತೆಯೇ ಕರಾಳವಾಗುತ್ತಿದೆ. ಎತ್ತೆತ್ತಲೋ ದೇಹವು ವಿಕಾರವಾಗುತ್ತಿದೆ. ಕೂಡಲೇ ಆಚಾರ್ಯನು ವೃತ್ರನೆಲ್ಲಿರುವನು ಎಂದು ಹುಡುಕಿ ನೋಡಿದನು. ವೃತ್ರನು ಅಗ್ನಿಭೂತವನ್ನು ಹಿಡಿದಿದ್ದಾನೆಯೆಂದು ತಿಳಿಯಿತು. ಇಂದ್ರನಿಗೆ ಅನುಸಂಧಾನ ಮಾಡಲು ಹೇಳಿದನು. ಕೆಂಪಗೆ ಮನೋಹರವಾಗಿ ತ್ರಿಕೋಣಾಕಾರವಾಗಿ ಶುದ್ಧ ತೇಜೋಮಂಡಲವೂ, ಪಂಚೀಕೃತ ತೇಜೋಮಂಡಲವೂ ಕಣ್ಣೆದುರಾಗಿ ನಿಂತುವು. ಆ ಶುದ್ಧ ಮಂಡಲದ ಮನೋಹರತೆಯು ಶುದ್ಧವಾಗಿಲ್ಲ. ಏನೋ ಆಗಿ ಅದು ತನ್ನ ಸ್ವರೂಪತೆಯನ್ನು ಕಳೆದುಕೊಳ್ಳುತ್ತಿದೆ. ಒಡಕು ಹರವಿಯಲ್ಲಿಟ್ಟಿರುವ ನೀರು ನೋಡುನೋಡುತ್ತಿದ್ದ ಹಾಗೆಯೇ ಸೋರಿ ಹೋಗುವಂತೆ ಆ ಮಂಡಲದ ಮನೋಹರತೆಯು ಹೋಗಿ ಭೀಕರತೆಯೂ ವಿಕಾರತೆಯೂ ಅಲ್ಲಿ ಮೂಡುತ್ತಿದೆ. ದೇವಪತಿಯು ಆಚಾರ್ಯನಿಂದ ಅಪ್ಪಣೆ ಪಡೆದು ಅಲ್ಲಿಯೂ ವೃತ್ರಾರ್ಥವಾಗಿ ಸಂಕಲ್ಪಪೂರ್ವಕವಾಗಿ ವಜ್ರವನ್ನು ಪ್ರಯೋಗಿಸಿದನು. ಮತ್ತದೆ ಹಿಂದಿನಂತೆಯೇ ಶಬ್ದ. ಈ ಸಲ ಇಂದ್ರನನ್ನು ಯಾರೋ ಒದ್ದಂತಾಯಿತು. ಇಂದ್ರನು ‘ಅಯ್ಯೋ’ ಎಂದು ಹಿಂದಕ್ಕೆ ಬಿದ್ದನು. ಶಚಿಯು ಪೂರ್ವದಂತಾದಳು.

ಕೂಡಲೇ ಆಚಾರ್ಯನು ಸಪ್ತರ್ಷಿಗಳಿಗೆ ನಮಸ್ಕಾರಮಾಡಿ, ಇಂದ್ರನನ್ನು ತೋರಿಸಿದನು. ಅವರು ಅಭಿಮಂತ್ರಿಸಿದರು. ಇಂದ್ರನು ಪ್ರಕೃತಿಸ್ಥನಾದನು. ಇತ್ತ ಅಗ್ನಿವಾಯುಗಳಿಗೂ ಆಚಾರ್ಯನಿಗೂ ರಕ್ಷಣೆಯನ್ನು ಕೊಟ್ಟು ಅವರು “ಆಚಾರ್ಯ, ಜಾಗ್ರತೆ ಮಾಡು, ವೃತ್ರನೆಲ್ಲಿ ಹೋದನೋ ನೋಡು. ನನಗಿನ್ನು ಅಧಿಕಾರವಿಲ್ಲವೆನ್ನಬೇಡ. ಅತ್ತ ನೋಡು. ಶಚೀದೇವಿಯ ಕಡೆ ದೃಷ್ಟಿಯಿರಲಿ” ಎಂದರು. ನೋಡಿದರೆ ಶಚೀದೇವಿಯ ಕೈಕಾಲುಗಳೂ ದೇಹವೂ ಸೊರಟಿಕೊಳ್ಳುತ್ತಿವೆ. ಅಗ್ನಿವಾಯುಗಳೂ ಗಾಬರಿಯಾಗುತ್ತಿದ್ದಾರೆ. ಸಪ್ತರ್ಷಿಗಳೂ ಖಿಲವಾದ ವೇದಮಂತ್ರಗಳನ್ನು ಮತ್ತೆ ಹಾಡುತ್ತಿದ್ದಾರೆ.

ಆಚಾರ್ಯನು ವೃತ್ರನು ವಾಯುಮಂಡಲವನ್ನು ಹಿಡಿದಿರುವುದನ್ನು ನೋಡಿದನು. ಇಂದ್ರನು ಆತನ ಅಪ್ಪಣೆಯಿಂದ ವಾಯುಭೂತವನ್ನು ಅನುಸಂಧಾನ ಮಾಡಿದನು. ದೀರ್ಘಚತುರಶ್ರಾಕಾರವಾದ ಶುದ್ಧವಾಯುಮಂಡಲವು ಅನುಭವ ಗೋಚರವಾಯಿತು. ಪಂಚೀಕೃತ ವಾಯುಮಂಡಲವು ದೃಗ್ಗೋಚರವಾಯಿತು. ಅಲ್ಲಿಯೂ ಎಲ್ಲವೂ ಸೊಟ್ಟಸೊಟ್ಟಾಗಿದೆ. ವಾಯುವಿನ ಪ್ರಧಾನಗುಣವಾದ ಚಲನೆಯೇ ನಿಂತಂತಾಗಿದೆ. ಆಚಾರ್ಯನ ಅಪ್ಪಣೆಯಂತೆ ಇಂದ್ರನು ಅಲ್ಲಿಯೂ ವೃತ್ರಾರ್ಥವಾಗಿ ವಜ್ರವನ್ನು ಪ್ರಯೋಗಿಸಿದನು. ಅಲ್ಲಿ ಮತ್ತೆ ಅದೇ ಶಬ್ದವಾಯಿತು. ಈ ಸಲವಂತೂ ಬ್ರಹ್ಮಾಂಡವೇನಾದರೂ ಒಡೆದುಹೋಯಿತೋ ಎನ್ನುವಷ್ಟು ಶಬ್ದ. ಸಪ್ತರ್ಷಿಗಳ ಅನಗ್ರಹದಿಂದ ಉಳಿದವರೆಲ್ಲರೂ ಉಳಿದರು. ಶಚಿಯು ಪ್ರಕೃತಿಸ್ಥಳಾದಳು.

ಸಪ್ತರ್ಷಿಪ್ರಚೋದಿತನಾದ ಆಚಾರ್ಯನು ವೃತ್ರನನ್ನು ಅನುಸಂಧಾನ ಮಾಡಿದನು. ಇಂದ್ರನು ವಜ್ರವನ್ನು ಹಿಡಿಯಲು ಅಶಕ್ತನಾಗಿದ್ದಾನೆ. ಎಲ್ಲವೂ ಹೂ ಅರಳಿದಂತೆ ಅರಳುತ್ತಿದೆ. ಶಚಿಯು ಬೆಂಕಿಯ ಸಂಬಂಧವಿಲ್ಲದೆ ಅರಳಾಗುವ ಭತ್ತದಂತೆ ಅರಳುತ್ತಿದ್ದಾಳೆ. ಅಗ್ನಿವಾಯುಗಳೂ ಅರಳುತ್ತಿದ್ದಾರೆ. ಆಚಾರ್ಯನು ಸಪ್ತರ್ಷಿಗಳನ್ನು ಮುಂದಿಟ್ಟುಕೊಂಡು, ಇಂದ್ರನಿಗೆ ಶಕ್ತಿಪ್ರಧಾನಮಾಡಿ, “ಹೂಂ, ಹೊಡೆ” ಎನ್ನುತ್ತಾನೆ. ಇಂದ್ರನು ಬಹು ಕಷ್ಟದಿಂದ ವಜ್ರವನ್ನು ಈ ಸಲವೂ ಪ್ರಯೋಗಿಸುತ್ತಾನೆ. ಈ ಸಲವೂ ವಜ್ರದ ಏಟಿಗೆ ಸಿಕ್ಕಿದರೂ ವೃತ್ರನು ಹತನಾಗದೆ, ಇಂದ್ರನ ಮೇಲೆಯೇ ಬೀಳುತ್ತಾನೆ. ಆ ಆಘಾತಕ್ಕೆ ಇಂದ್ರನು ಕೆಳಗೆ ಬೀಳುತ್ತಾನೆ. ‘ಅಯ್ಯೋ’ ಎಂದು ಅಳಲು ಮೊದಲುಮಾಡುತ್ತಾನೆ. ಏಕೆ ಎನ್ನುವುದನ್ನೇ ತಿಳಿಯದೆ ಅಗ್ನಿವಾಯುಗಳೂ ಅಳುತ್ತಾರೆ. ಶಚಿಗೆ ಎಚ್ಚರವಾಗಿದೆ. ಆಕೆಯೂ ಅಳುತ್ತಾಳೆ. ಆಚಾರ್ಯನಿಗೂ ಅಳು ಬರುತ್ತಿದೆ.

ಸಪ್ತರ್ಷಿಗಳು ತಮ್ಮ ಪ್ರಭಾವವನ್ನು ತೋರಿಸಿದರು. ತಮ್ಮಲ್ಲೆಲ್ಲ ಶ್ರೇಷ್ಠನಾದ ವಸಿಷ್ಠನನ್ನು ಸಂಬೋಧಿಸಿ, “ವಿಪ್ರೇಂದ್ರ, ಇದು ನಿನ್ನ ಸರದಿ. ವೃತ್ರನು ಇಂದ್ರನ ಅಹಂಕಾರವನ್ನು ಹಿಡಿದಿದ್ದಾನೆ. ಇದು ಶುಕ್ರಾಚಾರ್ಯನ ಸಂಜೀವಿನೀ ವಿದ್ಯೆಯ ಬಲ. ಇದನ್ನು ಅಹಂಕಾರವನ್ನು ಗೆದ್ದ ನೀನಲ್ಲದೆ, ಇನ್ನು ಯಾರೂ ಸರಿಮಾಡಲಾರರು. ಕೃಪೆಮಾಡು” ಎನ್ನುತ್ತಾರೆ. ಆತನು ನಸುನಕ್ಕು ರಥಂತರ ಸಾಮವನ್ನು ಹಾಡುತ್ತಾನೆ. ಮಿಕ್ಕವರೂ ಆತನನ್ನು ಅನುಸರಿಸಿ ಸಾಮಗಾನ ಮಾಡುತ್ತಾರೆ. ಅವರು ಸಾಮಗಾನ ಮಾಡಿದಂತೆಲ್ಲ ಇಂದ್ರನನ್ನು ಹಿಡಿದಿದ್ದ ವೃತ್ರನು ಕ್ರಮಕ್ರಮವಾಗಿ ಈಚೆಗೆ ಬರುತ್ತಾನೆ. “ನಾನು ಈ ಸಾಮವನ್ನು ಸಹಿಸಲಾರೆ. ನಿಲ್ಲಿಸಿ, ನೀವು ಹೇಳಿದಂತೆ ಕೇಳುತ್ತೇನೆ. ನಿಲ್ಲಿಸಿ, ನಿಲ್ಲಿಸಿ” ಎಂದು ಅಂಗಲಾಚುತ್ತಾನೆ. ಇಂದ್ರನು ಸ್ವಸ್ಥನಾಗುವವರೆಗೂ ಸಾಮಗಾನ ಮಾಡಿ ಸಪ್ತರ್ಷಿಗಳು ನಿಲ್ಲಿಸುತ್ತಾರೆ.

ಆ ವೇಳೆಗೆ ಅ ಸಾಮಗಾನಪ್ರಭಾವದಿಂದ ಮೂರ್ಛಿತನಾಗಿದ್ದ ವೃತ್ರನು ಮೆತ್ತಗೆ ಚೇತರಿಸಿಕೊಂಡು ಎದ್ದು ಸಪ್ತರ್ಷಿಗಳಿಗೆ ನಮಸ್ಕಾರಮಾಡಿ “ನನಗೊಂದು ವರವನ್ನು ಕೊಡಬೇಕು” ಎಂದು ಯಾಚಿಸುತ್ತಾನೆ. ಅವರು ‘ಆಗಬಹುದು’ ಎನ್ನಲು, ಅವನು “ನನಗಿನ್ನೂ ಆಯುಸ್ಸಿದೆ. ಅದು ಕಳೆಯುವವರೆಗೂ ಇಂದ್ರನನ್ನು ಮಾತ್ರ ಪೀಡಿಸುತ್ತೇನೆ. ನನಗೆ ಅಪ್ಪಣೆ ಕೊಡಬೇಕು” ಎನ್ನುತ್ತಾನೆ. ಸಪ್ತರ್ಷಿಗಳು ‘ಆಗಬಹುದು’ ಎನ್ನುತ್ತಾರೆ. ವೃತ್ರನು ಅಂತರ್ಧಾನನಾಗುತ್ತಾನೆ. ಇಂದ್ರನು “ಅಯ್ಯೋ! ಹತ್ಯೆ ! ಹತ್ಯೆ” ಎಂದು ಓಡಿಹೋಗುತ್ತಾನೆ. ಆಚಾರ್ಯನೂ ಅಗ್ನಿವಾಯುಗಳು ಶಚಿಯೂ ಕೂಗುತ್ತಿದ್ದರೂ ನಿಲ್ಲದೆ ಓಡುತ್ತಾನೆ. ಎತ್ತಹೋದನೋ ತಿಳಿಯದೆ ಎಲ್ಲರೂ ವ್ಯಥಿಸುತ್ತಾರೆ.

* * * *