ಮಹಾಕ್ಷತ್ರಿಯ/ಎರಡು ತೂಕದ ಕತ್ತಿ
==೨೯.ಎರಡು ತೂಕದ ಕತ್ತಿ==
ನೂತನ ದೇವೇಂದ್ರನು ದರ್ಶನಮಂದಿರದಲ್ಲಿ ವಿರಜಾದೇವಿಯೊಡನೆ ಶಚೀದೇವಿಗಾಗಿ ಕಾಯುತ್ತಿದ್ದಾನೆ. ಆಕೆಯು ಇಂದ್ರದರ್ಶನಕ್ಕೆ ಬರುವುದಾಗಿ ಹೇಳಿ ಕಳುಹಿಸಿದ್ದಾಳೆ. ಇಂದ್ರನಿಗೆ ಆಶ್ಚರ್ಯ. “ಹಿಂದಿನ ಇಂದ್ರನು ಹೊರಟು ಹೋದಂದಿನಿಂದ, ಅವನು ಅದೃಶ್ಯನಾದ ವೇಳೆಯಿಂದ, ಆತನಿಗಾಗಿ ಕಣ್ಣೀರಲ್ಲಿ ಕೈತೊಳೆಯುತ್ತ, ಅಂತಃಪುರವನ್ನು ಬಿಟ್ಟು ಈಚೆಗೇ ಬರದಿದ್ದವಳು, ಈ ದಿನ ಇಲ್ಲಿಗೆ ಬರುವಳೇ? ಆಕೆಯು ದೇವಸಭೆಯ ನಿರ್ಣಯವನ್ನು ನಿಜವಾಗಿ ಗೌರವಿಸುವಳೆ? ಆ ಗರ್ವಗಂಧಿನಿಯು ಹೊಸ ಇಂದ್ರನನ್ನು ಸೇವಿಸಲು ಒಪ್ಪುವಳೆ? ಅಥವಾ ದೇವಸಭೆಯ ನಿರ್ಣಯವು ಶಿರೋಧಾರ್ಯವೆಂದು, ಒಪ್ಪಲೇಬೇಕಾದುದೆಂದು, ಅದನ್ನು ಗೌರವಿಸಲು ತನ್ನ ವೈಯಕ್ತಿಕ ಭಾವನೆಗಳನ್ನೆಲ್ಲ ಹತ್ತಿಟ್ಟು ಸಿದ್ಧವಾಗಿರುವಳೇ?” ಹಾಗೆಯೇ ಆತನ ಭಾವನೆಗಳೆಲ್ಲ ವಿಸ್ಮಯದಿಂದ ಕೂಡಿ, ಆತನನ್ನು ಎಲ್ಲಿಯೋ ಹೊತ್ತುಕೊಂಡು ಹೋಗುತ್ತಿವೆ.
ವಿರಜಾದೇವಿಯೂ ಈ ಸುದ್ದಿಯನ್ನು ಕೇಳಿ ವಿಸ್ಮಿತಳಾಗಿದ್ದಾಳೆ. ಆಕೆಯು ಶಚಿಹೃದಯದ ಸ್ಥಿತಿಯನ್ನು ಊಹಿಸಬಲ್ಲಳು. ಹೆಣ್ಣು ತನ್ನ ಹೆಣ್ಣುತನವನ್ನು ಬಿಟ್ಟು ತನ್ನ ಕೈಹಿಡಿದವನನ್ನು, ತನ್ನನ್ನು ಹೆಣ್ಣೆಂದು ಮೊದಲ ಸಲ ತೋರಿಸಿಕೊಟ್ಟು ತನ್ನ ಬಾಳಿಗೊಂದು ಪೂರ್ಣತೆಯನ್ನು ಕೊಟ್ಟು ಗೌರವಿಸಿದವನನ್ನು ಬಿಟ್ಟು ಪರಪುರುಷನನ್ನು ಓಲೈಸಲು ಸಿದ್ಧಳಾಗುವಳೆಂದು ನಂಬಲೂಲಾರಳು. ಅಲ್ಲದೆ ಆಕೆಗೆ ಇನ್ನೂ ಒಂದು ಯೋಚನೆ : “ಎಷ್ಟೇ ಆಗಲಿ, ಶಚಿಯು ಪರಸ್ತ್ರೀಯಲ್ಲವೆ? ತನ್ನ ಗಂಡನು, ಆಕೆಯನ್ನು ಏನೇ ಕಾರಣದಿಂದಾಗಲಿ ಕೈ ಹಿಡಿದರೆ, ಆತನಿಗೆ ಈ ಪದವಿ, ಐಶ್ವರ್ಯಗಳು ಉಳಿಯುವುದೇ? ಆತನಿಗೇಕೆ ಈ ಯೋಚನೆ ಬಂತು?”
ಬಹುದಿನದ ಸಹವಾಸದಿಂದ ಉಂಟಾಗುವ ಅಭಿಮಾನ ಸಾಮೀಪ್ಯ ಮಮತೆಗಳಿಂದ ಆಕೆಯು ಗಂಡನನ್ನು ಕೇಳಿಯೂಬಿಟ್ಟಳು : “ದೇವ, ಇದುವರೆಗೂ ತಮಗೆ ಇಲ್ಲದ ಸ್ತ್ರೀ ಚಾಪಲ್ಯವು ಈಗೇಕೆ ಬಂತು ?”
ಇಂದ್ರನು ಏನೋ ಯೋಚನೆಯಲ್ಲಿದ್ದನು. ವಿರಜಾದೇವಿಯಾಡಿದ ಮಾತನ್ನು ಕೇಳಿ ಅವನು ಬೆಚ್ಚಿದನು : “ಇಲ್ಲ ದೇವಿ, ನನಗೆ ಯಾವಾಗಲೂ ಸ್ತ್ರೀ ಚಾಪಲ್ಯವಿಲ್ಲ ವಲ್ಲ” ಎಂದನು.
“ಹಾಗಾದರೆ ಈಗ ಈ ಶಚೀಪ್ರಸಂಗವೇನು?”
“ಇದೇ ವಿಚಿತ್ರವಾಯಿತು ದೇವಿ. ನಾನು ಅಧಿಕಾರ ಪೂರ್ಣವಾಗಿದೆಯೇ ಎಂದು ಪ್ರಸಂಗವಶವಾಗಿ ಕೇಳಿದೆ. ನನ್ನ ಅಭಿಪ್ರಾಯವಿದ್ದುದು ‘ನನ್ನ ಮತರ್ಯ್‌ತ್ವವನ್ನು ತೆಗೆದಿದ್ದೀರಾ? ನಾನು ಕೊನೆಯವರೆಗೂ ಇಂದ್ರನಾಗಿರುವೆನೆ?’ ಎಂದು. ದೇವಗುರುಗಳು ಅದಕ್ಕೆ ‘ಶಚೀಪತಿತ್ವವು ಲಭಿಸುವವರೆಗೂ ಅಧಿಕಾರವು ಪೂರ್ಣವಾಗುವುದಿಲ್ಲ’ ಎಂದರು. ನಾನು ಮಾತಿನ ಭರದಲ್ಲಿ ‘ಹಾಗಾದರೆ ಅಧಿಕಾರವನ್ನು ಪೂರ್ಣಮಾಡಿಕೊಡಿ’ ಎಂದೆ. ಅದು ಇಷ್ಟೆಲ್ಲ ರಾದ್ಧಾಂತಕ್ಕಿಟ್ಟುಕೊಂಡಿದೆ. ಇದು ಹೇಗೆ ಮುಗಿಯುವುದೋ ನೋಡಬೇಕು.”
“ಶಚೀದೇವಿಯು ಹೇಳಿಕಳುಹಿಸಿರುವುದನ್ನು ನೋಡಿದರೆ, ಆಕೆಯು ಒಪ್ಪುವಂತಿದೆಯಲ್ಲಾ? ಒಪ್ಪಿದರೆ ಏನು ಮಾಡುವಿರಿ?”
“ಅದೆ ನನ್ನ ಧರ್ಮಸಂಕಟ. ಆಕೆಯು ಒಪ್ಪಿದರೂ ಕಾರ್ಯ ಕೆಟ್ಟಿತು. ಇದುವರೆಗೆ ದೇವಲೋಕದ ಅಪ್ಸರೆಯರನ್ನು ಅವರು ಲಭ್ಯವಾಗಿದ್ದರೂ ಕಣ್ಣೆತ್ತಿಯೂ ನೋಡದ ನಾನು ಶಚಿಯನ್ನು ಹೇಗೆ ಒಪ್ಪಿಕೊಳ್ಳಲಿ? ಆಕೆಯು ಒಪ್ಪಿಕೊಳ್ಳದಿದ್ದರೆ ದೇವಋಷಿಪಿತೃಗಳೆಲ್ಲ ನನ್ನನ್ನು ಹಂಗಿಸುವರಲ್ಲಾ ಏನು ಮಾಡಲಿ? ಇದೆ ನನಗೆ ಯೋಚನೆಯಾಗಿದೆ.”
ವಿರಜಾದೇವಿಗೆ ತನ್ನ ಗಂಡನು ಮತ್ತೆ ಯಾವ ಸ್ತ್ರೀಯನ್ನೂ ಕಾಮುಕನಾಗಿ ನೋಡಲಿಲ್ಲವೆಂದು ಏನೋ ಒಂದು ಹೆಮ್ಮೆ. ಈ ಶಚೀಪ್ರಸಂಗವು ಎರಡು ತೂಕದ ಕತ್ತಿಯಾಗಿದ್ದು ಹಾಗೂ ಕತ್ತರಿಸುವುದು, ಹೀಗೂ ಕತ್ತರಿಸುವುದು. ಮುಂದೇನಾಗುವುದೋ ಎಂದು ದಿಗಿಲು. ಆದರೂ ತನ್ನ ಗಂಡನು ಮನಃಪೂರ್ವಕವಾಗಿ ಆಕೆಯನ್ನು ಬಯಸಿಲ್ಲವೆಂದು ಒಂದು ಸಮಾಧಾನ. ಅದೇ ಏನು ಹೆಣ್ಣು ಹೃದಯ? ತಾನೊಲಿದಿರುವ ಗಂಡು ಇನ್ನೊಂದು ಹೆಣ್ಣನ್ನು ಬಯಸಿಲ್ಲ ಎಂದರೆ ಏಕೆ ಸಮಾಧಾನವಾಗಬೇಕು?
ಅಂತೂ ಇನ್ನೆರಡು ಸಲ ಅವರು ನಿಟ್ಟುಸಿರುಬಿಡುವುದರೊಳಗಾಗಿ ಶಚೀದೇವಿಯು ಬಂದಳು. ಇಂದ್ರಾಣಿಯೆಂದು ಆಡಂಬರವೇನೂ ಇಲ್ಲ. ಶಾಂತಿದೂತನಂತೆ ಬಿಳಿಯ ವಸ್ತ್ರವನ್ನುಟ್ಟಿದ್ದಾಳೆ. ಆ ವಸ್ತ್ರವು ಆಕಾಶಮಾರ್ಗದಲ್ಲಿ ಚಂದ್ರಮನ ಐಸಿರಿಯು ದಿಗಂತಗಳವರೆಗು ವ್ಯಾಪಿಸಿ ಶೋಭಿಸುತ್ತಿರುವಾಗ ಮೆರೆಯುವ ನಕ್ಷತ್ರಪಥದಂತೆ ವಜ್ರಕಣವಿಶೋಭಿತವಾಗಿದೆ. ಕೆನೆಯ ಬಣ್ಣದ ರವಿಕೆಯನ್ನು ಧರಿಸಿದ್ದಾಳೆ. ಅದರ ಮೇಲೆ ಚುಮಕಿಸಿದಂತೆ ಕೆತ್ತಿರುವ ನವರತ್ನಗಳು ಮೃಗಶಿರಾ ನಕ್ಷತ್ರಪುಂಜದಂತೆ ಥಳಥಳ ಎನ್ನುತ್ತಿವೆ. ಕಿವಿಯಲ್ಲಿರುವ ವಜ್ರದ ಓಲೆಗಳು ಪುನರ್ವಸು ಪುಂಜದ ಯೋಗತಾರೆಯಂತೆ, ಎರಡು ದೀಪಗಳನ್ನು ಇಟ್ಟಂತೆ ಬೆಳಗುತ್ತಿವೆ. ಕೊರಳಲ್ಲಿ ಕಟ್ಟಿಕೊಂಡಿರುವ ತಾಳಿಯು ತನ್ನ ಸುತ್ತಲೂ ಇರುವ ಜೀವರತ್ನಗಳಿಗಿಂತ ಪ್ರಕಾಶವಾಗಿ ಮೆರೆಯುತ್ತಿವೆ. ಕೈಯಲ್ಲಿರುವ ರತ್ನದ ಬಳೆಗಳು ಜಂಗಮ ದೇಹಕಾಂತಿಯಂತೆ ಹೊಳೆಯುತ್ತಿವೆ. ಎಡಗೈಯ ಬೆರಳಿನಲ್ಲಿ ಹರಳಿನುಂಗುರವೊಂದು. ಇದರ ಹರಳು ಪೂರ್ವಾಕಾಶದಲ್ಲಿ ಚಂದ್ರನಿಲ್ಲದಿರುವಾಗ ಮೆರೆಯುವ ಸ್ವಾತೀ ನಕ್ಷತ್ರದಂತೆ ವಿರಾಜಿಸುತ್ತಿದೆ. ನಡುವಿನಲ್ಲಿ ಒಂದು ಸಿಂಹ ಮೇಖಲೆ. ತಲೆಯ ಮೇಲೆ ಧರಿಸಿದ ರತ್ನಕಿರೀಟವೂ, ಹಣೆಯ ಮೇಲಿರುವ ಜೀವರತ್ನವೂ, ಹೊದ್ದಿರುವ ವಿದ್ಯುನ್ಮಾಲಾ ಸುಂದರವಾದ ತೆಳುಮೋಡದಂತಿರುವ ಹೊದಿಕೆಯು ಆಕೆಯ ಅಂತಸ್ತನ್ನು ಉದ್ಘೋಷಿಸುತ್ತಿವೆ. ಪ್ರಹರಿಯು ಆಕೆಯನ್ನು ರಾಜಸನ್ನಿಧಾನದಲ್ಲಿ ಬಿಟ್ಟು ನೆಲಮುಟ್ಟಿ ಪ್ರಣಾಮ ಮಾಡಿ ಬಾಗಿಲಿನಿಂದಾಚೆಗೆ ಹೋದಳು.
ಶಚೀದೇವಿಯು ಇಂದ್ರನಿಗೆ ಬಗ್ಗಿ ಪ್ರಣಾಮ ಮಾಡಿದಳು. ವಿರಜಾದೇವಿಯತ್ತ ತಿರುಗಿ ಪ್ರಣಾಮ ಮಾಡುವುದರೊಳಗಾಗಿ ಆಕೆಯೇ ಬಂದು ಶಚೀದೇವಿಯನ್ನು ಆಲಿಂಗಿಸಿ, “ದೇವಿಗೆ ಜಯವಾಗಲಿ ! ನಿನ್ನನ್ನು ಪೂಜಿಸಿ, ನಿನ್ನ ಕೃಪೆಯಿಂದ ದೊಡ್ಡವರಾದವರು ನಾವು. ನಮಗೆ ಆಶೀರ್ವಾದ ಮಾಡಬೇಕು ತಾಯಿ !” ಎಂದು ವಿನಯವಾಗಿ ಆಕೆಯನ್ನು ಮೃದುವಾಗಿ ಆಲಿಂಗಿಸಿ ತನ್ನ ಜೊತೆಯಲ್ಲಿ ತನ್ನ ಆಸನದ ಮೇಲೆ ಕುಳ್ಳಿರಿಸಿಕೊಂಡಳು. ಇಂದ್ರನು ಆ ವೇಳೆಗೆ ಆಸನದಲ್ಲಿ ಮಂಡಿಸಿರುವುದನ್ನು ನೋಡಿ ಶಚಿಯು ತಾನೂ ಕುಳಿತಳು.
ನಹುಷನು ಆಕೆಯನ್ನು ನೋಡಿ ಆಶ್ಚರ್ಯಪಟ್ಟನು. ಉಜ್ಜಲವಾದರೂ ಶಾಂತವಾದ ಆ ರೂಪರಾಶಿಯನ್ನು ಆ ಅಂಗಸೌಷ್ಠವವನ್ನು ಮಿತಿಯನ್ನು ಯಾವ ರೀತಿಯಲ್ಲೂ ಮೀರದಂತೆ, ಜೋಡಿಸಿಟ್ಟಿರುವಂತೆ ಮೆರೆಯುತ್ತಿರುವ ಅಂಗಾಂಗಗಳ ಸೌಭಾಗ್ಯವನ್ನು ನೋಡಿ ವಿಸ್ಮಿತನಾದನು. ಮನುಷ್ಯಲೋಕದಲಿರಲಿ, ದೇವಲೋಕದಲ್ಲಿಯೂ ಅಂತಹ ರೂಪಸೌಭಾಗ್ಯ ಸಂಪನ್ನೆಯಿನ್ನೊಬ್ಬಳಿಲ್ಲ. ರಂಭೆ, ಮೇನಕೆ, ಊರ್ವಶಿ, ತಿಲೋತ್ತಮೆ, ಯಾರೂ ಆಕೆಯ ಬಳಿಯೂ ನಿಲ್ಲುವಂತಿಲ್ಲ. ಆತನಿಗೆ ಎನ್ನಿಸಿತು ; “ಹೌದು, ಈ ಪುಣ್ಯವಂತೆಯನ್ನು ಪಡೆಯದೆ ಇಂದ್ರಾಧಿಕಾರವು ಯಾವ ರೀತಿಯಲ್ಲೂ ಪೂರ್ಣವಲ್ಲ. ಚೆನ್ನಾಗಿ ಸವಾರಿಯನ್ನು ಬಲ್ಲವನು ಸೊಗಸಾದ ಕುದುರೆಯನ್ನು ನೋಡಿ, ‘ಇದನ್ನೇರಿ ವಿಹರಿಸದಿದ್ದರೆ ನಾನು ಸವಾರಿಯನ್ನು ಕಲಿತೇನು ಫಲ?’ ಎಂಬಂತೆ, ಆ ದಿವ್ಯಸ್ತ್ರೀಯನ್ನು ನೋಡಿ, ಆಕೆಯ ಸೌಭಾಗ್ಯಾತಿಶಯವನ್ನು ಕಂಡು, ಆತನ ಮನಸ್ಸು ಒಮ್ಮೆ ತೊನೆಯಿತು. ಕೂಡಲೇ ಆ ಮನಸ್ಸು ಧರ್ಮದತ್ತ ತಿರುಗಿ, ಧರ್ಮಪತ್ನಿಯಾದ ವಿರಜಾದೇವಿಯನ್ನು ಕಂಡು, “ಹೌದು ನದಿಯಲ್ಲಿ ಸಮುದ್ರದಷ್ಟು ನೀರಿಲ್ಲ. ಆದರೂ ಬಾಯಾರಿದವರಿಗೆ ಬೇಕಾದುದು ನದಿಯ ನೀರೇ !” ಎಂದುಕೊಂಡನು.
ಶಚಿಯು ತಾನೇ ಮೊದಲು ಮಾತನಾಡಿದಳು : ದೇವೇಂದ್ರನಿಗೆ ವಿಜಯವಾಗಲಿ ! ದೇವಸಭೆಯು ನಾನು ಇಂದ್ರನನ್ನು ಕಾಯ ವಚಸಾ ಮನಸಾ ಸೇವಿಸಬೇಕೆಂದು ನಿರ್ಣಯಮಾಡಿದೆ. ಆ ಸಭೆಯು ಮಾಡಿದ ನಿರ್ಣಯವೆಂದರೆ ಅದು ನಮ್ಮೆಲ್ಲರಿಗೂ ಶಿರೋಧಾರ್ಯವಾದುದು. ಆದರೆ ಒಂದು ಅಡ್ಡಿಯಿದೆ. ನಾನು ಇಂದ್ರನನ್ನು ಪತಿಯೆಂದು ಸೇವಿಸಿದ್ದೆನು. ಆತನು ಹೊರಟು ಹೋಗುವಾಗ ನಮಗೆ ಯಾರಿಗೂ, ನನಗೂ ಹೇಳದೆ ಹೊರಟುಹೋಗಿರುವುದು ಇನ್ನೂ ಆಶ್ಚರ್ಯವಾಗಿದೆ. ಆತನು ದುಡುಕಿದನೆಂದು ನಾನೂ ದುಡುಕುವುದು ಸ್ತ್ರೀಸ್ವಭಾವಕ್ಕೆ ಸರಿಹೋಗುವುದಿಲ್ಲ. ಅದರಿಂದ, ಧರ್ಮಶಾಸ್ತ್ರದಲ್ಲಿ ದೇಶಾಂತರಗತನಾದ ಪತಿಯನ್ನು ಪತ್ನಿಯಾದವಳು ಎಷ್ಟು ದಿನ ನಿರೀಕ್ಷಿಸಬೇಕು ಎಂದು ಹೇಳಿದೆಯೋ ಅಷ್ಟು ದಿನ ನಿರೀಕ್ಷಿಸಲು ಅಪ್ಪಣೆಯಾಗಬೇಕು.”
ನಹುಷನು ಆಕೆಯ ಮಾತಿನಲ್ಲಿರುವ ಅರ್ಥವನ್ನು ಪೂರ್ಣವಾಗಿ ಗ್ರಹಿಸಿದನು. ಈ ಭಾಮಿನಿಯು ಸ್ಪಷ್ಟವಾಗಿ ಆಡಿರುವ ಮಾತುಗಳಲ್ಲಿ ಶಂಕೆಗೆ ಏನೂ ಕಾರಣವಿಲ್ಲ. “ದೇವೇಂದ್ರನಿಗೆ ವಿಜಯವಾಗಲಿ.” ಆ ಮಾತು ಇಂದಿನ ಇಂದ್ರನಿಗಾದರೂ ಅನ್ವಯಿಸಬಹುದು : ಹಿಂದಿನ ಇಂದ್ರನಿಗಾದರೂ ಅನ್ವಯಿಸಬಹುದು. “ದೇವ ಸಬೆಯು ನಾನು ಇಂದ್ರನನ್ನು ಕಾಯಾ ವಚಸಾ ಮನಸಾ ಸೇವಿಸಬೇಕೆಂದು ನಿರ್ಣಯ ಮಾಡಿದೆ.” ಆದೂ ಅಷ್ಟೆ ! ಉಭಯರಿಗೂ ಅನ್ವಯಿಸುತ್ತದೆ. “ಆದರೆ ನಾನು ಇಂದ್ರನನ್ನು ಪತಿಯೆಂದು ಸೇವಿಸಿದ್ದೇನೆ.” ಅಲ್ಲಿದೆ ವಿಷ. “ನಾನು ಆತನನ್ನು ಪತಿಯೆಂದು ಸೇವಿಸಿರಲು ನಿನಗೆ ಪರಪತ್ನಿ. ಎಚ್ಚರಿಕೆ ! ನಿನ್ನ ಅಧಿಕಾರಬಲದಿಂದ ನೀನು ನನ್ನನ್ನು ಆಕ್ರಮಿಸಿದರೆ, ಈ ಇಂದ್ರಲಕ್ಷ್ಮಿಯು ನಿನಗೆ ದೂರವಾದಾಳು” ಎಂದು ಸ್ಪಷ್ಠಾರ್ಥ. ಇದರ ಮೇಲೆ, ಧರ್ಮಶಾಸ್ತ್ರಿದ ಮಾತೂ ಇದಕ್ಕೆ ಅನುಗುಣವಾಗಿಯೇ ಇದೆ. “ಆಕೆಯು ಈಗ ಮಾಡುವುದು ಪತಿನಿರೀಕ್ಷೆ. ಒಪ್ಪದಿದ್ದರೆ ಧರ್ಮದ್ರೋಹ. ಒಪ್ಪಿದರೆ ಆತ್ಮದ್ರೋಹ. ಆಕೆಯ ನಿರೀಕ್ಷೆಯು ಸಫಲವಾದರೂ ನಮಗೆ ಇಂದ್ರಪದವಿಯಿಲ್ಲ ; ವಿಫಲವಾದರೆ ನಾವಾಗಿ ಕಳೆದುಕೊಳ್ಳಲು ದಾರಿ ಮಾಡಿಕೊಂಡಂತಾಯಿತು. ಅಂತೂ ಈಕೆಯು ಬಂದು, ‘ನೀನು ಇಂದ್ರನಾಗಿರುವುದು ಕೆಲವು ದಿನ ಮಾತ್ರ’ ಎಂದು ಕಾಲಕ್ಕೆ ಅಂಚು ಕಟ್ಟಿಟ್ಟಂತಾಯಿತು ಎಂದು ವಿಷಣ್ಣನಾಗಿ ಕರದಲ್ಲಿ ಕಪೋಲವನ್ನಿಟ್ಟು ಚಿಂತಿಸಿದನು. ವಿರಜಾದೇವಿಯು ರತ್ನರಾಶಿಯ ಮುಂದೆ ಪೆಚ್ಚಾಗಿರುವ ಏಕರತ್ನದಂತೆ ಸಂಕುಚಿತಮನಸ್ಕಳಾಗಿ, ಎಲ್ಲಾ ವಿಧದಲ್ಲೂ ಸಂಕೋಚಮಾಡಿಕೊಂಡು ಕುಳಿತಿದ್ದಳು.
ಶಚಿಯು ಒಂದೇ ನಿಮಿಷದಲ್ಲಿ ಅರಸನ ಧರ್ಮಸಂಕಟವನ್ನು ತಿಳಿದಳು. ಬೇಟೆಗೆ ಆಳವಾದ ಗಾಯವನ್ನು ಮಾಡಿದ್ದರೂ, ಬೇಟೆಯು ಓಡಿಹೋದರೂ ಬದುಕುವುದಿಲ್ಲವೆಂದು ಗೊತ್ತಾಗಿದ್ದರೂ, ಆಟವಾಡುತ್ತ ಬೇಟೆಯ ಗಾಯಕ್ಕೆ ಮದ್ದು ಬಳಿಯುವ ಬೇಟೆಗಾರನಂತೆ, ಅರಸನ ಮನೋಭಿಪ್ರಾಯವನ್ನು ಬೇರೆಯಾಗಿ ಅರ್ಥಮಾಡಿಕೊಂಡಿರುವ ಮುಗ್ಧೆಯಂತೆ ಹೇಳಿದಳು; “ಇಂದ್ರನು ಸರ್ವಜ್ಯೇಷ್ಠನು. ಎಲ್ಲರನ್ನೂ ಧರ್ಮದಲ್ಲಿ ನಡೆಯುವಂತೆ ಪ್ರೇರಿಸುವವನಾತನು. ಆತನು ಇದು ಧರ್ಮವೆಂದು ಬೇರೆ ದಾರಿಯನ್ನು ತೋರಿಸಿದರೂ ನಾನು ನಡೆಯುವುದಕ್ಕೆ ಸಿದ್ಧಳಾಗಿರುವೆನು !” ಆ ಮಾತಿನಲ್ಲಿ “ನಾನು ಗೆದ್ದೆನು ದಿಗಿಲಿಲ್ಲ” ಎಂಬ ಚತುರೆಯ ನಂಬಿಕೆಯಿತ್ತು. “ಘಾತವು ಮಾರ್ಮಿಕವಾಗಿದೆ. ಬೇಟೆಯಲ್ಲಿ ಗೆದ್ದೆ” ಎಂಬ ಬೇಟೆಗಾರನ ಆತ್ಮಶ್ರದ್ಧೆ ಇತ್ತು.
ಅರಸನು ಶಚೀವಾಕ್ಯಗಳಿಂದ ಮರ್ಮಾಹತನಾಗಿದ್ದರೂ, ರೇಗಿದ್ದರೂ ಕಾರಣಾಂತರಗಳಿಂದ ಶಾಂತವಾಗಿರಬೇಕಾದ ನಾಗರಾಜನಂತೆ ಒಳಗೇ ಪರಿತಪಿಸುತ್ತಿದ್ದಾನೆ. “ಇವಳು ನಾರಿಯಲ್ಲ ಮಾರಿ” ಎನ್ನುವುದು ಮನಸ್ಸಿಗೆ ಚೆನ್ನಾಗಿ ಅರ್ಥವಾಗಿ ಪ್ರತಿಕ್ರಿಯೆ ಮಾಡಬೇಕೆನ್ನುವ ಘಟ್ಟಕ್ಕೆ ಅದು ಏರುತ್ತಿದೆ. ಆದರೂ ತಾನು ಇಂದ್ರ, ಇಂದ್ರನ ಗೌರವಕ್ಕೆ ಚ್ಯುತಿಯಿಲ್ಲದಂತೆ ನಡೆಯಲೇಬೇಕು ಎಂಬ ನಿರ್ಧಾರವು ಎಲ್ಲದಕ್ಕಿಂತ ಬಲವಾಗಿ ಕುಳಿತಿದೆ. ಆದರೂ, ಶಚಿಯು ಅಂತಃಪ್ರಾಣ ಘಾತಿನಿಯಾಗದಿದ್ದರೂ ಬಹಿಃಪ್ರಾಣವಾದ ಅರ್ಥವನ್ನು ಘಾತಿಸುವಳೆಂದು ಪ್ರತ್ಯಕ್ಷವಾಗಿದೆ. ಇನ್ನು ಮಾತೇಕೆ?
ಅರಸನು ಒಂದು ಗಳಿಗೆ ನಿರುತ್ತರನಾಗಿದ್ದು ಹೇಳಿದನು : “ಶಚೀದೇವಿ ಇಂದ್ರನು ಧರ್ಮವಿರೋಧಿಯಲ್ಲ. ಅವರವರು ಧರ್ಮವೆಂದು ಒಪ್ಪಿಕೊಂಡಿರು ವುದನ್ನೇ ಪಾಲಿಸಬೇಕಾದುದು ಇಲ್ಲಿಯ ಧರ್ಮ. ಅದರಿಂದ ನೀನು ಪತಿಯೆಂದು ಗ್ರಹಿಸಿರುವ ಇಂದ್ರನನ್ನು ಪತ್ರೀಕ್ಷಿಸಲು ಕಾಲಾವಧಿಯುಂಟು. ಅದು ನಿನಗೆ ಲಭಿಸಿರುವುದು. ಅಷ್ಟೇ ಅಲ್ಲ. ನಿನ್ನ ಪತಿಯನ್ನು ನೀನು ಹುಡುಕಲೂ ನಿನಗೆ ಅಧಿಕಾರವುಂಟು. ಹುಡುಕು, ಹುಡುಕಿಸು, ಹೋಗಿ ಬಾ” ಎಂದು ಸಮಚಿತ್ತನಾಗಿ ಹೇಳಿದನು.
ಶಚಿಯು ಈ ಉತ್ತರಕ್ಕೆ ಬದ್ಧಳಾಗಿರಲಿಲ್ಲ. ಆಕೆಯ ದೃಷ್ಟಿಯಲ್ಲಿ ನಹುಷನು ‘ಅರ್ಥಪರಃ ಕಾಮಚಪಲ; ಅದರಿಂದ ತನ್ನನ್ನು ಬಯಸಿದನು’ ಎಂದಿತ್ತು. ಆದರೂ ತಾನೇ ಎದುರಿಗೆ ಬಂದಿದ್ದರೂ ಯಾವ ಕಾರ್ಪಣ್ಯಕ್ಕೂ ಎಡಗೊಡದೆ ಸಮಚಿತ್ತನಾಗಿರುವುದನ್ನು ನೋಡಿ ಆಶ್ಚರ್ಯವಾಯಿತು. ಅದುವರೆಗೂ ನಹುಷನೆಂದರೆ ಒಬ್ಬ ಮಾನವ ಎನ್ನುತ್ತಿದ್ದ ಆಕೆ, ಸಮ್ಮುಖದಲ್ಲಿ ನಹುಷನನ್ನು ಕಂಡು, ಆತನ ಆಚಾರವನ್ನು ನೋಡಿ, ಆತನ ಅಂತಸ್ಥವನ್ನು ತಿಳಿದು ವಿಸ್ಮಿತಳಾಗಿದ್ದಾಳೆ. ಋಷಿಪತ್ನಿಗಾಗಿ ಬಾಯಿ ಬಾಯಿ ಬಿಟ್ಟ, ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಏನು ಬೇಕಾದರೂ ಮಾಡುವುದಕ್ಕೆ ಸಿದ್ಧನಾಗಿದ್ದ ತನ್ನ ಪತಿಯೊಡನೆ ಆತನನ್ನು ಹೋಲಿಸಿ, “ನಹುಷನು ನಿಜವಾಗಿ ಮಹಾನುಭಾವ !” ಎಂಬ ಸಿದ್ಧಾಂತಕ್ಕೆ ಬಂದಿದ್ದಾಳೆ. “ಈತನು ಇಂದ್ರನಾಗಿರುವುದು ಮೂರು ಲೋಕದ ಸೌಭಾಗ್ಯ ! ಆದರೆ, ಆದರೆ, ಹುಂ ವಿಧಿಯಾಟ. ಈ ಮಹಾಪುರುಷನನ್ನು ಈ ಪದವಿಯಿಂದ ಉರುಳಿಸುವ ದೌರ್ಭಾಗ್ಯ ನನ್ನ ಹಣೆಯಲ್ಲಿ ಬರೆದಿದೆಯೋ ಏನೋ?” ಎಂದು ವಿಷಾದಪಡುತ್ತಿದ್ದಾಳೆ. “ಈ ಇಂದ್ರನು ನಿಜವಾಗಿ ಧರ್ಮಪರಾಯಣ” ಎಂದು ಮನಸ್ಸು ಹರ್ಷಗೊಂಡಿದೆ.
ನಹುಷನು ಮತ್ತೊಂದು ಮಾತನ್ನೂ ಆಡದೆ ಮೇಲಕ್ಕೆದ್ದನು. ಅದನ್ನು ಕಂಡು ವಿರಜಾದೇವಿಯು ಮೇಲಕ್ಕೆದ್ದು ಸಡಗರದಿಂದ ಮಂಗಳದ್ರವ್ಯಗಳನ್ನೂ ಫಲತಾಂಬೂಲಗಳನ್ನೂ ಇಟ್ಟಿದ್ದ ರತ್ನದ ತಟ್ಟೆಗಳನ್ನು ತಂದು ಶಚಿದೇವಿಗೆ ಒಪ್ಪಿಸಿದಳು. ಅದೆಲ್ಲವನ್ನೂ ನೋಡಿ ಶಚಿಗೆ ಆನಂದವು ತಾನೇತಾನಾಗಿ ಕಣ್ಣಲ್ಲಿ ನೀರಾಗಿ ಹರಿಯಿತು. ವಿರಜಾದೇವಿಯನ್ನು ಬಾಚಿ ತಬ್ಬಿಕೊಂಡು “ತಂಗೀ, ನಿನ್ನ ವೈಭವವು ಅಖಂಡವಾಗಿ ಇರಲಿ” ಎಂದು ಆಶೀರ್ವಾದ ಮಾಡಿ, ಇಂದ್ರನಿಗೆ ಮತ್ತೆ ಬಗ್ಗಿ ನೆಲಮುಟ್ಟಿ ನಮಸ್ಕಾರಮಾಡಿ ಹೊರಟುಹೋದಳು.
ಆಕೆಯು ಹೊರಕ್ಕೆ ಹೋಗಿ ಕಣ್ಮರೆಯಾದ ಮೇಲೆ, ನಹುಷನು ವಿರಜೆಯನ್ನು ಆಲಿಂಗಿಸಿಕೊಂಡು, “ದೇವಿ, ದೇವತೆಗಳು ತಮ್ಮ ಆಟವನ್ನು ಚೆನ್ನಾಗಿ ಆಡಿದರು” ಎಂದನು. ದೇವಿಯು ಏನು ಎಂದು ತಲೆಯೆತ್ತಿ ನೋಡಲು, ಅರಸನು “ದೇವಿ ದೇವತೆಗಳು ಯಾವಾಗಲೂ ವಿಷಮಿಶ್ರಿತವಾದ ಮೃಷ್ಟಾನ್ನವನ್ನು ವರವಾಗಿ ನಮಗೆ ಕೊಡುವರು. ನಾವು ಆ ಮೃಷ್ಟಾನ್ನವನ್ನು ನೋಡುವೆವೇ ಹೊರತು ಅದರಲ್ಲಿರುವ ವಿಷಯವನ್ನು ಕಾಣಲಾರೆವು. ಅದು ನಮ್ಮ ದುರದೃಷ್ಟ !” ಎಂದನು.
ಅಲ್ಲಿಗು ವಿರಜಾದೇವಿಯು ಅರ್ಥಮಾಡಿಕೊಳ್ಳದಿರಲು, “ಹೋಗಲಿ ಬಿಡು, ಅನಿತ್ಯವಾದ ಅರ್ಥಕ್ಕೆ ಹಾನಿಯಾದರೂ, ನಿತ್ಯವಾದ ಧರ್ಮವನ್ನು ಪಾಲಿಸಿದಂತಾಯಿತು’ ಎಂದನು.
`ವಿರಜಾದೇವಿಯು ಅನ್ಯಮನಸ್ಕಳಾಗಿದ್ದವಳು “ನಿಜ ಶಚಿಯು ಸಿಕ್ಕಿದರೂ ಕೆಲಸ ಕೆಟ್ಟಿತು. ಸಿಕ್ಕದಿದ್ದರೂ ಕೆಲಸ ಕೆಟ್ಟಿತು. ಅದಿರಲಿ, ತಮ್ಮನ್ನು ಶಚಿಯು ಒಲಿದರೆ ನನ್ನ ಗತಿಯೆನು ?” ಎಂದಳು.
`ಅರಸನಿಗೆ ಹೋಗಿದ್ದ ಅಸುವು ಬಂತು : “ಶಚಿಯು ಒಲಿದರೂ ನಾನು ಒಲಿಯುವುದಿಲ್ಲ. ನಾನು ಗ್ರಹಚಾರವಶನಾಗಿ ಒಲಿದರೂ, ಅವಳು ಅರ್ಥಪತ್ನಿ, ನೀನು ಧರ್ಮಪತ್ನಿ. ಹಾನಿಯೆಲ್ಲ ನನ್ನದು. ನಿನಗೆ ಎಳ್ಳಷ್ಟೂ ಹಾನಿಯಿಲ್ಲ. ಇದು ನನ್ನ ವರ ಸಾಕೇ?”
`* * * *