ಮಹಾಕ್ಷತ್ರಿಯ/ಏರುವುದು ಬೀಳುವುದಕ್ಕೆ
==೨೭.ಏರುವುದು ಬೀಳುವುದಕ್ಕೆ==
ನಹುಷನು ಇಂದ್ರನಾಗಿ ಅಧಿಕಾರವನ್ನು ವಹಿಸಿಕೊಂಡನು. ಅಗ್ನಿ ವಾಯುಗಳನ್ನು ಹಿಂದಿನಂತೆ ಅವರವರ ಅಧಿಕಾರದಲ್ಲಿಟ್ಟು ಅವರ ಮುಖಾಂತರವಾಗಿ ತ್ರೈಲೋಕ್ಯಾಧಿಪತ್ಯವನ್ನು ನಿರ್ವಹಿಸಿದನು. ಹಿಂದಿನ ಇಂದ್ರನಿಗೂ ಈ ಇಂದ್ರನಿಗೂ ವ್ಯತ್ಯಾಸವೆಂದರೆ, ಈತನು ನಿತ್ಯ ದಾನಮಾಡುವನು.ಆ ದಾನದ್ರವ್ಯವು ಮಾತ್ರ ಅಲ್ಲಿ ವಿನಿಯೋಗವಾಗದೆ ಮಧ್ಯಮ ಲೋಕದಲ್ಲಿ ಪ್ರಕಾರಾಂತವಾಗಿ ವಿನಿಯೋಗವಾಗುವುದು.
ಅಗ್ನಿ ವಾಯುಗಳು ಇಂದ್ರನಿಗೆ ಹೇಳಿದರು : “ಇದು ಕೇವಲ ಅಧಿಕಾರ ಸ್ಥಾನವಲ್ಲ, ಇಲ್ಲಿರುವವನು ಒಂದು ಹೆಜ್ಜೆಯನ್ನು ಪೂರ್ಣಪದದಲ್ಲಿಟ್ಟು ಆ ಕಡೆ ತಿರುಗಿರಬೇಕು. ಇನ್ನೊಂದು ಹೆಜ್ಜೆ ಅಧಿಕಾರ ಸ್ಥಾನದಲ್ಲಿರಬೇಕು ಅಥವ ರೂಪಕವಾಗಿ ಹೇಳಬೇಕೆಂದರೆ ನನ್ನಂತೆ ಎರಡು ಮುಖ ಮಾಡಿಕೊಂಡು ಕರ್ಮಬ್ರಹ್ಮಗಳೆರಡನ್ನೂ ಆರಾಧಿಸಬೇಕು ಮತ್ತು ವಾಯುವಿನಂತೆ ಸದಾಗತಿಯಾಗಿದ್ದು ತೀರದವರೆಗೂ ಅಲೆಗಳನ್ನು ಕಳುಹಿಸುವ ಸಮುದ್ರದಂತೆ, ಎಲ್ಲಿ ಯಾವುದು ನಡೆದರೂ ಅದನ್ನು ಗಮನಿಸಿ ಅದನ್ನು ಅದರದರ ಯೋಗ್ಯತಾನುಸಾರ ಪೂರ್ಣತೆಗೆ ಕೊಂಡೊಯ್ಯುವವನಾಗಬೇಕು.”
ನಹುಷನು ಕೇಳಿದನು : ``ಹಾಗಾದರೆ ಲೋಕದಲ್ಲಿ ಎಲ್ಲವೂ, ಪ್ರತಿಯೊಂದೂ ಪೂರ್ಣವೆ ?”
ಅಗ್ನಿಯು ಹೇಳಿದನು : “ದೇವ ಪ್ರತಿಯೊಂದು ಪೂರ್ಣವೇ. ಪೂರ್ಣದಿಂದ ಬಂದ ಜಗತ್ತಿನಲ್ಲಿರುವ ಪ್ರತಿಯೊಂದು ಪೂರ್ಣವೇ. ಆದರೆ, ಒಂದು ಇನ್ನೊಂದನ್ನು ಅಪೂರ್ಣವೆನ್ನುತ್ತ ತಾನು ಬೇರೆಯೆಂದುಕೊಂಡು ತನ್ನ ಪೂರ್ಣತೆಗೊಂದು ಮಿತಿಯನ್ನು ಹಾಕಿಕೊಂಡಿರುವುದು. ಆದರೂ ತಾನು ಎಂಬುದೊಂದುಂಟು ಎಂದುಕೊಂಡುದು, ತನ್ನದೊಂದು ವಿಷಯ ಪ್ರತ್ಯೇಕ, ಎಲ್ಲರಂತಲ್ಲ ಎಂದು ಕ್ಷೇತ್ರವನ್ನು ವಿಂಗಡಿಸಿಕೊಂಡಿರುವುದು. ಅದನ್ನೇ ಅಹಂಕಾರವೆನ್ನುವರು. ಆ ಅಹಂಕಾರದ ಅಧಿನಾಥನು ಇಂದ್ರನು. ಆತನು ಅದನ್ನು ಪೋಷಿಸುವವನು. ಆತನ ಅಪ್ಪಣೆಗನುಸಾರವಾಗಿ ದೇವತೆಗಳು ಅದನ್ನು ಅಳೆಯುವರು. ಅದು
ತಕ್ಕಷ್ಟು ದೊಡ್ಡದಾದರೆ ಅದನ್ನು ಲೋಕದ ಶುಭಾಶುಭಗಳಿಗೆ ವಿನಿಯೋಗಿಸುವರು.”“ಸರಿ”
“ಅದರಿಂದಲೇ ಪ್ರಪಂಚವೆಲ್ಲವೂ ದೇವತೆಗಳ ಕೈಯಲ್ಲಿರುವುದು ಎನ್ನುವರು.”
“ಸರಿ”
“ಈ ದೇವತೆಗಳನ್ನು ಕಾಲವು ಪ್ರಚೋದಿಸುವುದು. ಕಾಲವು ಶುಭಾಶುಭ ಪ್ರವರ್ತಕವೆಂದು ನಮ್ಮ ಭಾವನೆ. ಕಾಲವನ್ನು ಬಲ್ಲವನು ಕಾಲಸ್ವರೂಪನಾದ ಮಹಾವಿಷ್ಣುವು ಒಬ್ಬನೇ. ನಮಗೆ ಮನ್ವಂತರದ ಕೊನೆಯವರೆಗೂ ಆಳುವ ಅಧಿಕಾರವುಂಟು. ಪ್ರತಿಯೊಂದು ಮನ್ವಂತರದಲ್ಲೂ ದೇವತೆಗಳು, ಋಷಿಗಳು, ಪಿತೃಗಳು, ಮನು ಎಲ್ಲರೂ ಹೊಸಬರಾಗುವರು.”
“ಸರಿ ಹಾಗಾದರೆ, ಹಿಂದಿನ ಇಂದ್ರನು ಇಂದ್ರಪದವಿಯನ್ನು ಬಿಟ್ಟು ಓಡಿ ಹೋದುದೇಕೆ ?”
“ಆತನೇಕೆ ಹೋದನೆನ್ನುವುದು ಇನ್ನೂ ಸರಿಯಾಗಿ ಯಾರಿಗೂ ತಿಳಿಯದು. ನಾವೆಲ್ಲರೂ ಆತನು ಮಾಡಿದ ವೃತ್ರಹತ್ಯೆಯು ಆತನಿಗೆ ಸಹಿಸುವುದಕ್ಕೆ ಆಗದಷ್ಟು ದೊಡ್ಡದಾಗಿ ಆತನು ಓಡಿಹೋದನು ಎಂದುಕೊಂಡಿರುವೆವು. ನಾವಂದುಕೊಂಡಿರುವುದು ನಿಜವಾದರೆ ಆತನೆಲ್ಲಿಯೋ ತಪಸ್ಸು ಮಾಡುತ್ತಿರಬೇಕು. ಆತನ ತಪಸ್ಸು ಫಲವಾಗಿ ಆತನು ನಿರ್ದೋಷಿಯಾಗುವವರೆಗೂ ತಲೆ ಮರೆಸಿಕೊಂಡಿರುವನು.”
“ಆತನನ್ನು ನಿರ್ದೋಷಿಯನ್ನಾಗಿ ಮಾಡಿ ಹಿಂತಿರುಗುವಂತೆ ಮಾಡಲು ಸಾಧ್ಯವಿಲ್ಲವೆ?
ಯಜ್ಞೇಶ್ವರನು ನಕ್ಕು ಹೇಳಿದನು ; “ಸಾಧ್ಯ. ಆದರೆ ಹಾಗೆ ಮಾಡಿದರೆ, ಇಬ್ಬರು ಇಂದ್ರರಾಗುವರು. ಶಾಶ್ವತವಾದ ಇಂದ್ರನು ಬಂದರೆ, ತತ್ಕಾಲಕ್ಕೆ ಇಂದ್ರನು ಅಧಿಕಾರವನ್ನು ಬಿಟ್ಟುಕೊಡಬೇಕಾಗುವುದು. ಅದರಿಂದ.....”
"ಸುಮ್ಮನಿರುವುದು ಒಳಿತು ಎಂದು ನಿನ್ನ ಅಭಿಪ್ರಾಯ ?”
“ಹೌದು”
“ಹಾಗಾದರೆ, ಈ ನನ್ನ ಪದವಿಯು ಶಾಶ್ವತವಲ್ಲವೆಂದು ನಿನ್ನ ಅಭಿಪ್ರಾಯವೇ?”
“ದೇವ, ದೇವತೆಗಳ ಯಾವ ಪದವಿಯನ್ನು ಶಾಶ್ವತವೆನ್ನೋಣ ? ನಾವು ಚತುರ್ಮುಖ ದೃಷ್ಟಿಯಿಂದ ನೋಡಿದರೆ ಅಲ್ಪಾಯುಗಳು. ಮಾನವರ ದೃಷ್ಟಿಯಿಂದ ನೋಡಿದರೆ ದೀರ್ಘಾಯುಗಳು. ಅದರಿಂದ, ಈ ಕಾಲವೆನ್ನುವುದು ಒಬ್ಬೊಬ್ಬರಿಗೆ ಒಂದೊಂದು ಪ್ರಮಾಣವುಳ್ಳದ್ದಾದುದರಿಂದ ಶಾಶ್ವತವೆನ್ನುವುದರಲ್ಲಿ ಅರ್ಥವಿಲ್ಲ.”
ನಹುಷನು “ಭಲೆ” ಯೆಂದನು. “ನನ್ನ ಈ ಪದವಿಯು ಅಶಾಶ್ವತವೆಂಬುದನ್ನು ಪ್ರದಕ್ಷಿಣವಾಗಿ ಹೇಳಿದೆ. ಆಯಿತು, ಈ ರಹಸ್ಯ ಯಾರಿಗೆ ಗೊತ್ತು ? ಯಾರನ್ನು ಕೇಳಿದರೆ ಇದು ತಿಳಿಯುವುದು ?”
“ದೇವಾ ಈ ರಹಸ್ಯವನ್ನು ತಿಳಿಸಿ ಆಗುವುದೂ ಆಗಬೇಕಾದುದೂ ಯಾವುದೂ ಇಲ್ಲ. ಆದರೆ, ತಮಗೆ ಮಾತು ಕೊಟ್ಟಿರುವಂತೆ, ನಾವು ಇದನ್ನು ಹೇಳಿಯೇ ತೀರಬೇಕಾಗಿ ಹೇಳುತ್ತೇವೆ. ದೇವಗುರುಗಳೊಬ್ಬರು ಇದನ್ನು ಬಲ್ಲರು.”
“ಸರಿ.”
ಇಂದ್ರನು ಅಗ್ನಿ ವಾಯುಗಳಿಬ್ಬರಿಗೂ ಅಪ್ಪಣೆಯನ್ನಿತ್ತು ವಿಸರ್ಜಿಸಿ, ತಾನು ನೇರವಾಗಿ ಬೃಹಸ್ಪತಿಯ ಬಳಿಗೆ ಬಂದನು. ಹಠಾತ್ತಾಗಿ ಇಂದ್ರನು ಬಂದನೆಂದು ಆಚಾರ್ಯನು ತಾನಾಗಿ ಬಾಗಿಲಿಗೆ ಬಂದು ಆತನನ್ನು ಒಳಗೆ ಕರೆದುಕೊಂಡು ಹೋದನು. ಇಂದ್ರನು ಆ ಮಾತು ಈ ಮಾತು ಆಡುತ್ತ “ದೇವ, ನನಗೆ ಇಂದ್ರಪಟ್ಟವನ್ನು ಕಟ್ಟಿರುವರಲ್ಲಾ ಅದು ಪೂರ್ಣವಾಗಿದೆಯೆ ?” ಎಂದು ಕೇಳಿದನು. ಇಂದ್ರನು ಪೂರ್ಣವೆಂಬ ಶಬ್ದವನ್ನು ಪೂರ್ವಕಾಲ ಎಂಬರ್ಥದಲ್ಲಿ ಉಪಯೋಗಿಸಿದುದು ಬೃಹಸ್ಪತಿಗೆ ಅಧಿಕಾರ ಪೂರ್ಣವಾಗಿದೆಯೇ ಎಂದು ಅರ್ಥವಾಯಿತು. ಆತನು ಇಂದ್ರನನ್ನು ನೋಡಿ, “ನಿನಗೆ ಅಪಾರವಾದ ಲಾಭವಾಗಿದೆ. ಹೀಗಿರಲು ಈ ಪ್ರಶ್ನೆಯೇಕೆ ? ಇದನ್ನು ನೀನು ಕೇಳದಿದ್ದರೆ ಒಳ್ಳೆಯದು” ಎಂದನು.
“ಏಕೆ ? ಕೇಳಬಾರದೆ ?”
“ನೀನು ತಿಳಿಯಬೇಕೆಂದ ರಹಸ್ಯವನ್ನು ನಿನಗೆ ಹೇಳುವೆವು ಎಂದು ನಾವು ವರವನ್ನು ಕೊಟ್ಟಿದ್ದೇವೆಯಾಗಿ ಹೇಳಲೇಬೇಕು. ಆದರೆ ಅದನ್ನು ತಿಳಿದು ನಿನಗೆ ಆಗಬೇಕಾದುದೇನು ?”
“ಅಧಿಕಾರವು ಪೂರ್ಣವಾಗಲು ಏನು ಮಾಡಬೇಕೋ ಅದನ್ನು ಮಾಡಿರೆಂದು ತಮ್ಮನ್ನೇ ಕೇಳುವುದು.”
"ಕಾಲವನ್ನು ಕುರಿತು ಆಗಲೇ ಹೇಳಿದ್ದೇವೆ. ನೀನಾಗಿ ಮಾನವತ್ವವನ್ನು ಒಪ್ಪಿಕೊಂಡಿರುವೆಯಾಗಿ ಕಾಲದಲ್ಲಿ ಅದು ಅಪೂರ್ಣ. ಕಾಲದೃಷ್ಟಿಯಿಂದ ಅಪೂರ್ಣವಾದ ಅಧಿಕಾರವು ಎಷ್ಟು ಪೂರ್ಣವಾಗಬಹುದೋ ಅಷ್ಟನ್ನು ನಾವು ಕೊಟ್ಟೇ ಇದ್ದೇವೆ.”
“ಹಾಗಾದರೆ, ಇಂದ್ರಾಧಿಕಾರವು ನನಗೆ ಪೂರ್ಣವಾಗಿ ಬಂದಿಲ್ಲ ಎಂದಂತಾಯಿತು. ಅದು ಪೂರ್ಣವಾಗಲು ಏನಾಗಬೇಕು ? ದಯವಿಟ್ಟು ಅಪ್ಪಣೆ ಕೊಡಿಸಬೇಕು.”
ಬೃಹಸ್ಪತಿಯು ಯೋಚನಾಪರನಾದನು. “ಈತನೇಕೆ ಈ ರಹಸ್ಯವನ್ನು ಭೇದಿಸಬೇಕು ಎಂದಿರುವನು ? ಇಲ್ಲಿಯೇ ಈತನ ಪತನಬೀಜವಿದೆಯೋ? ಎನ್ನಿಸಿತು. ಆದರೆ ‘ಹೇಳದಿರುವುದು ಹೇಗೆ ? ವರವನ್ನು ಕೊಟ್ಟಾಗಿದೆ. ಹುಂ ! ಬೇಕಾದುದಾಗಲಿ, ಭವಿತವ್ಯಕ್ಕೆ ನಾನೇನು ಹೊಣೆಯೆ ?’ ಎಂದುಕೊಂಡು ಹೇಳಿದನು “ಇಂದ್ರತ್ವವು ಶಚೀಪತಿಯಾಗುವವರೆಗೂ ಪೂರ್ಣವಾಗುವುದಿಲ್ಲ”
“ಹಾಗದರೆ ಶಚಿಯು ಇಂದ್ರಾಣಿಯಲ್ಲದೆ ಇಂದ್ರಪತ್ನಿಯಲ್ಲ ?”
“ಹೌದು. ಪರಿಸ್ಥಿತಿಯಿಂದ ಹಾಗೇ ಅರ್ಥವಾಗುವುದು. ಆದರೆ ಇದುವರೆಗೆ ಇಂದ್ರನು ಬೇರೆಯಾಗಿದ್ದರೂ ಶಚಿಪತಿಯು ಬೇರಾಗಿರಲಿಲ್ಲ. ಈಗ ಶಚೀಪತಿಯು ಇಂದ್ರನೋ? ಅಥವಾ ಶಚೀದೇವಿಯು ಇಂದ್ರನ ಅಧಿಕಾರದ್ಯೋತಕವಾದ ಪ್ರತೀಕವೋ? ಅಥವಾ ಇಂದ್ರನ ಪತ್ನಿಯಾಗಿ ಆತನ ವೈಯಕ್ತಿಕ ಸಂಬಂಧ ಉಳ್ಳವಳೋ ಎಂಬುದನ್ನು ಗೊತ್ತುಮಾಡಬೇಕಾಗಿದೆ.”
“ಅದನ್ನು ಗೊತ್ತುಮಾಡುವವರು ಯಾರು ?”
“ದೇವಸಭೆ.”
“ಹಾಗಾದರೆ ದೇವಸಭೆಯನ್ನು ಸೇರಿಸಿ ಈ ಅಂಶವನ್ನು ಗೊತ್ತು ಮಾಡಿಕೊಡಬೇಕು.”
style="text-indent: 1cm;">ಸುರಾಚಾರ್ಯನು ಏನೋ ಹಿಂಸೆಗೊಳಗಾದವನಂತೆ ಹೃದಯವನ್ನು ಹಿಂಡಿಕೊಳ್ಳುತ್ತಾ “ಆಗಲಿ” ಎಂದನು.ಇಂದ್ರನು ಅದನ್ನು ಕಂಡಾದರೂ ಆ ರಹಸ್ಯವು ಹಾಗಿರಲಿ ಎನ್ನಬಹುದಾಗಿತ್ತು; ಎನ್ನಲಿಲ್ಲ. ವಿನಯವಾಗಿ, ಗಂಭೀರವಾಗಿ ಗುರುಗಳಿಗೆ ನಮಸ್ಕಾರಮಾಡಿ, ಅವರ ಅಪ್ಪಣೆ ಪಡೆದು ಹಿಂತಿರುಗಿದನು.
ಬೃಹಸ್ಪತಿಯು ಕುಳಿತಿದ್ದೆಡೆಯನ್ನು ಬಿಡದೆ, ಕುಳಿತಲ್ಲಿಯೇ ಕುಳಿತು ಯೋಚಿಸಿದನು. ‘ಈಗ ದೇವಸಭೆಯನ್ನು ಕರೆಯುವುದೇನೋ ಆಗುವುದು. ಆದರೆ ಅಲ್ಲಿ ಸಿದ್ಧಾಂತಕ್ಕೆ ಬರುವವರು ಯಾರು ? ಅವರೂ ನನ್ನನ್ನೇ ಕೇಳುವರು. ಏನು ಹೇಳಬೇಕು ?’ ಎಂದು ಬಹಳವಾಗಿ ಯೋಚಿಸಿದನು. ಕೊನೆಗೆ ಅಲ್ಲಿಂದ ಎದ್ದು ‘ನಾನೇಕೆ ವ್ಯಥಿಸಲಿ ? ಇದು ಮಹಾವಿಷ್ಣುವಿನ ಅಪ್ಪಣೆಯಂತೆ ಆಗುತ್ತಿದೆ. ಆತನು ಒಳಗೆ ಕುಳಿತು ಏನು ಹೇಳಿಸುವನೋ ಹಾಗೆಯೇ ಹೇಳುವುದು. ಫಲಾಫಲಗಳನ್ನು ಕಾದು ನೋಡುವುದು’ ಎಂದು ಅಲ್ಲಿಂದ ಹೊರಟುಹೋದನು. ಹೋಗುವಾಗ ಆಳುಗಳನ್ನು ಕರೆದು. “ಚಿತ್ರರಥ ಗಂಧರ್ವರಾಜನನ್ನು ಬರಹೇಳು” ಎಂದು ಆಜ್ಞೆ ಮಾಡಿದನು.
ಇನ್ನೊಂದು ಗಳಿಗೆಗೆ ಚಿತ್ರರಥನು ಕಾಣಿಸಿಕೊಂಡನು. ಬೃಹಸ್ಪತಿಯು “ಗಂಧರ್ವರಾಜ ಈ ಇಂದ್ರನು ಇನ್ನೊಂದು ಗೊಂದಲವೆಬ್ಬಿಸಿದ್ದಾನೆ. ಇದೇ ಈತನ ಪತನಕ್ಕೆ ಕಾರಣವಾದೀತೋ ಏನೋ ? ಏನಾದರಾಗಲಿ, ದೇವಸಭೆಯನ್ನು ಕರೆ. ಶಚೀದೇವಿಯಿಲ್ಲದೆ ಇಂದ್ರಾಧಿಕಾರವು ಪೂರ್ಣವಾಗುವುದಿಲ್ಲ. ಅದರಿಂದ ಆಕೆಯು ಇಂದ್ರಾಣಿಯೋ ಇಂದ್ರಪತ್ನಿಯೋ ಗೊತ್ತುಮಾಡಬೇಕು” ಎಂದನು.
ಚಿತ್ರರಥನು ಏನೋ ಹೇಳುವುದಕ್ಕೆ ಹೋದನು. ದೇವಗುರುವು “ಆ ವಿಚಾರ ನಾನೂ ನೀನೂ ಚರ್ಚಿಸುವುದು ಬೇಡ. ಅದನ್ನು ದೇವಸಭೆಯೇ ವಿಚಾರಿಸಿ, ಚರ್ಚಿಸಿ ಗೊತ್ತು ಮಾಡಲಿ. ನಾವಿಬ್ಬರೂ ತಲೆಮರೆಸಿಕೊಂಡಿರುವ ಇಂದ್ರನ ಕಡೆಯವರು” ಎಂದು ಏನೋ ಬೇಸರದಿಂದ ಎಲ್ಲವನ್ನೂ ಮುಕ್ತಾಯ ಮಾಡಿದನು.
ಚಿತ್ರರಥನೂ ಏನೋ ಅಸಂತೋಷದಿಂದ “ಸರಿ” ಎಂದು ಕೈಮುಗಿದು ಆಜ್ಞವಾಹಕನಾಗಿ ಹೊರಟುಹೋದನು.
* * * *