ವಿಷಯಕ್ಕೆ ಹೋಗು

ಮಹಾಕ್ಷತ್ರಿಯ/ಧರ್ಮಾಸನದಲ್ಲಿ ಅರಸ

ವಿಕಿಸೋರ್ಸ್ದಿಂದ

==೨೩.ಧರ್ಮಾಸನದಲ್ಲಿ ಅರಸ==

ನಹುಷಚಕ್ರವರ್ತಿಯು ಧರ್ಮಾಸನಾಸೀನನಾಗಿದ್ದಾನೆ. ನ್ಯಾಯಸ್ಥಾನದ ನಿರ್ಣಯವನ್ನು ವಿರೋಧಿಸಿದ ಮೂವರು ಅರಸನ ಬಳಿಗೆ ಬಂದಿದ್ದಾರೆ. ಧರ್ಮ ವಿಚಾರವನ್ನು ಚಕ್ರವರ್ತಿಯ ಎದುರಿನಲ್ಲಿ ನಿವೇದಿಸಲು ಅರಮನೆಯ ಧರ್ಮಾಧಿಕಾರಿಗಳು ಬಂದಿದ್ದಾರೆ. ರಾಜಪುರೋಹಿತ, ರಾಜಗುರು ಇಬ್ಬರೂ ಅವರವರ ಸ್ಥಾನಗಳಲ್ಲಿದ್ದಾರೆ. ಸಭೆಯು ಮಿತವಾಗಿದೆ.

ಮೊದಲನೆಯ ವಾದಿ ಜನ್ಮತಃ ಬ್ರಾಹ್ಮಣ. ಆದರೆ ಆತ ಬ್ರಾಹ್ಮಣ ಧರ್ಮವನ್ನು ಗೌರವಿಸದೆ ಅದು ಬೇಡವೆಂದವನು. ನ್ಯಾಯಾಸ್ಥಾನವು “ಇವನು ಪತಿತ ಸಾವಿತ್ರೀಕ. ಗಾಯತ್ರಿ, ಅಗ್ನಿ, ವೇದಗಳನ್ನು ಬಿಟ್ಟವನು. ಆದ್ದರಿಂದ, ಇವನಿಗೆ ದಾಯವನ್ನು ಕೊಟ್ಟರೂ ಧರ್ಮವೂ ಅಗ್ನಿಯೂ ವೃದ್ಧಿಯಾಗುವುದಿಲ್ಲವಾದ್ದರಿಂದ, ಇವನು ದಾಯಭಾಗಕ್ಕೆ ಅರ್ಹನಲ್ಲ. ಇವನು ಪ್ರಾಯಶ್ಚಿತ್ತಗಳನ್ನು ಮಾಡಿಕೊಂಡು ಸಾವಿತ್ರಿಯನ್ನು ಅಂಗೀಕರಿಸಿದರೆ ಮಾತ್ರ ದಾಯಭಾಗಕ್ಕೆ ಅರ್ಹನು” ಎಂದು ನಿರ್ಣಯಿಸಿದೆ. ಅವನು ವಿರೋಧಿಸಿ ತನಗೆ ದಾಯಭಾಗ ಬೇಕೆಂದು ಅರಸನ ಬಳಿಗೆ ಬಂದಿದ್ದಾನೆ.

ಮತ್ತೊಬ್ಬನು ತಾನು ದೇಶಾಂತರದಲ್ಲಿ ನೆಲಸಬೇಕಾಗಿರುವುದರಿಂದ ತನ್ನ ಆಸ್ತಿಯನ್ನು ಅಲ್ಲಿಗೆ ತೆಗೆದುಕೊಂಡು ಹೋಗಬೇಕೆನ್ನುತ್ತಾನೆ. ನ್ಯಾಯಾಸ್ಥಾನವು “ಇವನು ದೇಶವನ್ನೇ ಬಿಟ್ಟು ಹೋಗುವವನಾದ್ದರಿಂದ ಈ ಆಸ್ತಿಯಲ್ಲಿ ಈತನಿಗೆ ಒಂದು ವರ್ಷಕ್ಕೆ ಬೇಕಾಗುವಷ್ಟು ಮಾತ್ರ ತೆಗೆದುಕೊಂಡು ಹೋಗಬೇಕಲ್ಲದೆ, ಹೆಚ್ಚಾಗಿ ತೆಗೆದುಕೊಂಡು ಹೋದರೆ ನಮ್ಮ ದೇಶದ ಆಸ್ತಿಯು ಅಷ್ಟು ಕಡಿಮೆಯಾಗುವುದರಿಮದ ಅದು ಕೂಡದು. ಅಲ್ಲದೆ, ಉಪಭೋಗಕ್ಕೆ ಎಂದರೆ, ಧರ್ಮಾರ್ಥಕಾಮೋಪಭೋಗಕ್ಕೆ, ತನ್ನ ಆಸ್ತಿಯನ್ನು ಉಪಯೋಗಿಸಲು ಎಲ್ಲರಿಗೂ ಅಧಿಕಾರವುಂಟು. ಆದರೆ ಅದನ್ನು ಪೋಲು ಮಾಡಲು, ದೇಶಾಂತರಕ್ಕೆ ಕೊಂಡೊಯ್ಯಲು ಅಧಿಕಾರವಿಲ್ಲ” ಎಂದು ನಿರ್ಣಯಿಸಿದೆ. ಅದನ್ನು ವಿರೋಧಿಸಿರುವ ವಾದಿ ವೈಶ್ಯ. ಇನ್ನೊಬ್ಬನು ಅದಮ್ಯನಾದ ದುಷ್ಟ ಪಾಳೆಯಗಾರ, ಸಾಹಸಿ. ತನ್ನ ಪ್ರಾಂತ್ಯದಲ್ಲಿ ಕಳ್ಳಕಾಕರಾದಿಯಾಗಿ ದುಷ್ಟರು ಯಾರಿಗೂ ಅವಕಾಶ ಕೊಡದವನು. ತನ್ನ ಪ್ರಾಂತ್ಯದ ನೆರೆಹೊರೆಯವರಲ್ಲಿ ತಾನೇ ದುಷ್ಟನಾಗಿ ವರ್ತಿಸುತ್ತಿದ್ದಾನೆ. ನಾಲ್ಕೈದು ಸಲ ಶಿಕ್ಷೆಯನ್ನು ವಿಧಿಸಿದ್ದಾಯಿತು. ಕೊನೆಗೆ ಈಗ ಚಕ್ರವರ್ತಿಗಳ ಸನ್ನಿಧಾನಕ್ಕೆ ಕಳುಹಿಸಲಾಗಿದೆ. ಅವನು ಕ್ಷತ್ರಿಯ.

ಅರಸನು ವಿಚಾರಣೆಯನ್ನು ಆರಂಭಿಸಿದನು. ಮೊದಲು ಬ್ರಾಹ್ಮಣನು ಬಂದನು. ಅರಿಕೆ ಮಾಡಿದನು ; “ದೇವರು ಚಿತ್ತವಿಸಬೇಕು. ನನಗೆ ತಾವು ಹೇಳುವ ಧರ್ಮದಲ್ಲಿ ವಿಶ್ವಾಸವೂ ಇಲ್ಲ : ಶ್ರದ್ಧೆಯಿಲ್ಲ ; ಭಕ್ತಿಯಿಲ್ಲ ಆದ್ದರಿಂದ, ನನಗೆ ತೋರಿದಂತೆ ನಾನು ಇರಲು ಅಪ್ಪಣೆಯಾಗಬೇಕು.”

ಅರಸನು ಧರ್ಮಾಧಿಕಾರಿಯ ಮುಖವನ್ನು ನೋಡಿದನು. ಅತನು ಎದ್ದು ನಿಂತು ಧರ್ಮಾಸನಕ್ಕೆ ಕೈಮುಗಿದು ಹೇಳಿದನು : “ಧರ್ಮಪುರಷನಿಗೂ ಚಕ್ರವರ್ತಿಗೂ ಜಯವಾಗಲಿ. ಈತನು ತನಗೆ ಧರ್ಮದಲ್ಲಿ ವಿಶ್ವಾಸವಿಲ್ಲ ಶ್ರದ್ಧೆಯಿಲ್ಲ ಭಕ್ತಿಯಿಲ್ಲ ಎಂದ ಮಾತ್ರಕ್ಕೆ ಸ್ವತಂತ್ರವಾಗುವುದು ಮೋಕ್ಷವಿಚಾರದಲ್ಲಿಯೇ ಹೊರತು ಧರ್ಮವಿಚಾರದಲ್ಲಲ್ಲ. ಧರ್ಮವಿಚಾರದಲ್ಲಿ ಪುರುಷನು ಸ್ವತಂತ್ರನಲ್ಲ. ಜನ್ಮ ವಿಚಾರದಲ್ಲಿ ಎಷ್ಟು ಮಟ್ಟಿಗೆ ಪುರುಷನು ಪರತಂತ್ರನೋ ಧರ್ಮವಿಚಾರದಲ್ಲಿಯೂ ಪುರುಷನು ಅಷ್ಟೇ ಮಟ್ಟಿಗೆ ಪರತಂತ್ರನು. ದೀಕ್ಷಾಚಾರದವರೂ ಇದನ್ನು ಮೌನವಾಗಿ ಅಂಗೀಕರಿಸಿ ಹುಟ್ಟಿದ ಮಕ್ಕಳಿಗೇ ದೀಕ್ಷೆಯನ್ನು ಕೊಟ್ಟು ಧರ್ಮವಿಚಾರದಲ್ಲಿ ಪುರುಷನ ಪಾರತಂತ್ರ್ಯವನ್ನು ಒಪ್ಪಿಕೊಳ್ಳುವರು. ಆ ಪಾರತಂತ್ರ್ಯವೇ ಸಕಲ ಸಂಪ್ರದಾಯಗಳ ಮೂಲವು. ಅದರಿಂದ ಅದನ್ನು ವಿರೋಧಿಸಿದರೆ ಸಮಾಜದ ಅಸ್ತಿಭಾರವೇ ಸಡಿಲವಾಗುವುದರಿಂದ ಸಾಮಾನ್ಯವಾಗಿ ಯಾರೂ ಅದನ್ನು ವಿರೋಧಿಸಕೂಡದು. ಹಾಗೆಂದರೆ ಪುರುಷನಿಗೆ ಧರ್ಮಾಂತರ ಮಾಡಿಕೊಳ್ಳಲು ಅವಕಾಶವಿಲ್ಲವೇ? ಹಾಗಾದರೆ ಧರ್ಮವು ಪ್ರಗತಿಯ ವಿರೋಧಿಯೇ? ಎಂದರೆ ಒಂದು ಧರ್ಮದಲ್ಲಿ ಹುಟ್ಟಿದವನು ಆ ಧರ್ಮವನ್ನು ಬಿಡಬೇಕಾದರೆ, ಆ ಧರ್ಮವನ್ನು ವಿರೋಧಿಸಲು, ತಿರಸ್ಕರಿಸಲು, ತ್ಯಾಗಮಾಡಲು, ತಕ್ಕಷ್ಟು ಕಾರಣಗಳನ್ನು ತನ್ನ ದಾಯಾದಿಗಳ ಎದುರು ವಿವರಿಸಿ, ಅದನ್ನು ತ್ಯಾಗಮಾಡಬೇಕು. ತಮ್ಮ ಸಮಾಜವು ಧರ್ಮಕಾಮಿಯೂ, ಧರ್ಮೇಚ್ಛುವೂ, ಧರ್ಮಿಷ್ಠವೂ ಆದುದರಿಂದ, ಧರ್ಮಾಂತರವನ್ನು ಇಚ್ಚಿಸುವವನು ಪರಧರ್ಮವನ್ನು ಬಯಸುವಾಗ, ಪೂರ್ವಧರ್ಮದ ಆಶ್ರಮದಲ್ಲಿ ಇಲ್ಲದಿದ್ದರೆ ತನಗೆ ಪ್ರಾಪ್ತವಾಗುತ್ತಿದ್ದ ಪ್ರೇಯೋಭಾಗವನ್ನು ಬಯಸಕೂಡದು. ಈತನು ತಾನು ಧರ್ಮದಲ್ಲಿ ತೋರಿಸುವ ಅವಿಶ್ವಾಸ, ಅಶ್ರದ್ಧೆ ಅಭಕ್ತಿಗಳ ಕಾರಣವನ್ನು ದಾಯಾದಿಗಳ ಎದುರಿನಲ್ಲಿ ವಿವರಿಸಿಲ್ಲವಾದ್ದರಿಂದ, ಈತನು ಅಪೇಕ್ಷಿಸುವುದು ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಒಂದು ಪಾಲು. ಆದ್ದರಿಂದ, ಈತನು ಕುಟುಂಬದಲ್ಲಿ ಪಿಂಡಭಾಗಿಯಾಗಬಹುದೇ ಹೊರತು ದಾಯಭಾಗಿಯಾಗಲು ಅರ್ಹನಲ್ಲ. ಅಲ್ಲದೆ, ಇನ್ನೂ ಒಂದು ಮಾತು. ಅವಿಶ್ವಾಸ, ಅಶ್ರದ್ಧೆ, ಅಭಕ್ತಿ ಎಂಬುದು ಕುರುಡು, ಕಿವುಡು, ಹೆಳವುಗಳಂತೆ ಒಂದು ವ್ಯಾಧಿ. ಅದನ್ನು ಶಾಸ್ತ್ರಾಧ್ಯಯನ, ವೃದ್ಧೋಪಸೇವೆಗಳಿಂದ ನಿವಾರಿಸಿಕೊಳ್ಳಲು ಸಾಧ್ಯ. ಅವನ್ನೂ ಈತನು ಮಾಡಿಲ್ಲ. ಅದರಿಂದ ಈತನು ದಾಯಭಾಗಕ್ಕೆ ಅರ್ಹನಲ್ಲ.”

ವಾದಿಯು ಅರಿಕೆ ಮಾಡಿದನು : “ದೇವ, ಯಾರೂ ನನಗೆ ಹೇಳಿಕೊಡಲಿಲ್ಲ.”

ಅರಸನು ದೃಢವಾಗಿ ಗುಡುಗಿನಂತೆ ಮೊಳಗುವ ಕಂಠದಲ್ಲಿ ಹೇಳಿದನು: “ಅದು ಸರಿಯಲ್ಲ. ನೀನು ಧರ್ಮವನ್ನು ಅರಸಿಕೊಂಡು ಹೋಗಬೇಕು. ಪುರುಷನು ಅರ್ಥಕಾಮಗಳ ಸಂಪಾದನೆಗೆ ತಾನಾಗಿ ಸಹಜವಾಗಿ ತೊಡಗುವಂತೆ, ಧರ್ಮಕ್ಕಾಗಿ ಪ್ರಯತ್ನಪುರಸ್ಸರವಾಗಿ ತೊಡಗಬೇಕು. ಇಂದ್ರಿಯಾರ್ಥಗಳನ್ನು ಸಾಧಿಸುವಂತೆ ಅದನ್ನು ಸಾಧಿಸಬೇಕು. ಅಭ್ಯಾಸಮಾಡಬೇಕು. ವೃದ್ಧರನ್ನು ಸೇವಿಸಿ ತಿಳಿಯಬೇಕು. ಅಧ್ಯಯನ, ಶ್ರವಣ, ಮನನಗಳಿಂದ ಧರ್ಮವನ್ನು ಒಲಿಸಿಕೊಳ್ಳಬೇಕು. ಹಾಗೆ ಮಾಡಲೆಂದೇ ಪ್ರೇಯೋವಿಚಾರಕ್ಕಿಂತ ಶ್ರೇಯೋವಿಚಾರವನ್ನು ಹೆಚ್ಚಾಗಿ ಗೌರವಿಸುವನೆಂದೇ ಬ್ರಾಹ್ಮಣನಿಗೆ ಸಮಾಜವು ಗೌರವದ ಅಗ್ರಸ್ಥಾನವನ್ನು ಕೊಟ್ಟಿರುವುದು. ನೀನು ಹಾಗೆ ಮಾಡದೆ ಹೋದರೆ, ನಿನಗೆ ಅಗ್ರಜನ ಸ್ಥಾನಮಾನಗಳು ಸಲ್ಲುವುದಿಲ್ಲ. ಆಯಿತು ನೀನು ಈಗ ಈ ಆಸ್ತಿಯನ್ನು ತೆಗೆದುಕೊಂಡು ಏನು ಮಾಡುವೆ ?”

“ಕುಟುಂಬಿಯಾಗಿ ಸುಖಜೀವನ ಮಾಡುವೆನು.”

“ಹಾಗೆಂದರೆ ಪಶುಜೀವನ ಮಾಡುತ್ತ ಸೋಮಾರಿಯಾಗಿರುವೆನೆಂದಾಯಿತು. ಪುರುಷಧರ್ಮವು ಯಾವಾಗಲೂ ಧರ್ಮಕರ್ಮಪ್ರಧಾನವು. ನೀನು ಅದನ್ನು ಬೇಡ ಎನ್ನುವೆ. ನಮ್ಮ ರಾಜ್ಯದಲ್ಲಿ ಧರ್ಮಾರ್ಥಗಳನ್ನು ಅಭಿವೃದ್ಧಿ ಮಾಡುವವರಿಗೆ ಮಾತ್ರ ಸ್ಥಾನವು. ಅದರಿಂದ ನೀನು ಈ ಎರಡರಲ್ಲಿ ಒಂದನ್ನು ಹಿಡಿಯಬೇಕು. ಇಲ್ಲವಾದರೆ ಪಿಂಡಭಾಗಿಯಾಗಿ ಅವಿಭಕ್ತ ಕುಟುಂಬದಲ್ಲಿ ಬಿದ್ದಿರಬೇಕು. ಅದರಿಂದ ನನ್ನ ಮಾತು ಕೇಳು. ನೀನು ಜಾತ್ಯಾ ಬ್ರಾಹ್ಮಣನು. ನಿನ್ನ ಮನೋಬುದ್ಧಿ ಅಹಂಕಾರಗಳು ಸಂಸ್ಕಾರ ಸಂಪನ್ನವಾದರೆ ಧರ್ಮದ ಕಡೆಗೆ ನುಗ್ಗುವವು. ಅರ್ಥಾರ್ಜನಕ್ಕೆ ನಿನಗೆ ಶಕ್ತಿಸಾಲದು ಅದರಿಂದ ನೀನು ಪ್ರಾಯಶ್ಚಿತ್ತ ಮಾಡಿಕೊಂಡು ಸಂಸ್ಕಾರಸಂಪನ್ನರಾಗಿ ಬರುವ ವರ್ಷಕ್ಕೆ ಬಾ. ಅಥವಾ ನ್ಯಾಯ ನಿರ್ಣಯವನ್ನು ಒಪ್ಪಿಕೊ.”

“ದೇವ ಸಂಸ್ಕಾರಗಳಿಂದ ನನಗೆ ಉಪಯೋಗವಾಗುವುದು ಎಂಬುದನ್ನು ಅರಿಯಿಸಿಕೊಡಬೇಡವೇ ?”

ಚಕ್ರವರ್ತಿಗೆ ಭಗವಾನರ ಮಾತು ನೆನಪಿಗೆ ಬಂತು : ಸವಿಚಾರವಾಗಿ ಎದುರು ಕಡೆಯವರು ಒಪ್ಪುವಂತೆ ಧರ್ಮವನ್ನು ನಿರೂಪಿಸಬೇಕು. ಆದರೆ ತಾನು ಕುಳಿತಿರುವುದು ವಿಚಾರವೇದಿಕೆಯಲ್ಲ : ವಿಧಿವೇದಿಕೆ. ಏನು ಮಾಡಬೇಕು? ಅರಸನು ಒಂದು ಗಳಿಗೆ ಯೋಚಿಸಿ ರಾಜಪುರೋಹಿತರ ಮುಖವನ್ನು ನೋಡಿದನು.

ಆತನು ಎದ್ದು ನಿಂತು ಧರ್ಮಾಸನಕ್ಕೆ ಕೈಮುಗಿದು ಹೇಳಿದನು : “ಧರ್ಮಕ್ಕೆ ಜಯವಾಗಲಿ. ರಾಜಾಜ್ಞೆಯಂತೆ ವಿಧಿವೇದಿಕೆಯ ಮುಂದೆ ವಿಚಾರವನ್ನು ಮಂಡಿಸುತ್ತಿದ್ದೇನೆ. ಮನುಷ್ಯನಿಗೆ ಸ್ಥೂಲ, ಸೂಕ್ಷ್ಮ, ಕಾರಣಗಳೆಂದು ಮೂರು ದೇಹಗಳು. ಸ್ಥೂಲದೇಹಕ್ಕೆ ಬರುವ ರೋಗರುಜಿನಗಳನ್ನು ನಿವಾರಿಸಲು ಆಯುರ್ವೇದವು ಔಷಧ, ಪಂಥ್ಯ, ಅನುಪಾನಗಳನ್ನು ಹೇಳುವುದು. ಅದರಂತೆಯೇ ಸೂಕ್ಷ್ಮದೇಹವಾದ ಮನೋಬುದ್ಧಿ ಅಹಂಕಾರಗಳಿಗೆ ಬರುವ ರೋಗರುಜಿನಗಳನ್ನು ನಿವಾರಿಸಿಕೊಳ್ಳಲು ಶ್ರುತೀ ಭಗವತಿಯು ಸಂಸ್ಕಾರಗಳನ್ನು ಅಪ್ಪಣೆಕೊಡಿಸಿರುವಳು. ಇದನ್ನು ಆಂತರಿಕವಾಗಿ ಬಾಹ್ಯವಾಗಿ ತಿಳಿದುಕೊಳ್ಳುವ ಸಾಧನೆಗಳನ್ನು ಯೋಗಶಾಸ್ತ್ರವು ನಿರೂಪಿಸಿರುವುದು. ಲೋಕದಲ್ಲಿ ಪ್ರತಿಯೊಂದು ಸಿದ್ಧಿಯೂ ಜನ್ಮ ಮಣಿ, ಮಂತ್ರ, ಔಷಧಗಳಿಂದ ಸಾಧ್ಯವು. ಪಕ್ಷಿಗಳು ಪಕ್ಷಿಗಳಾಗಿ ಹುಟ್ಟಿದ ಮಾತ್ರದಿಂದಲೇ ಆಕಾಶದಲ್ಲಿ ಹಾರಾಡುವುವು. ಮೀನುಗಳೂ ಹುಟ್ಟುತ್ತಿದ್ದಂತೆಯೇ ಈಜು ಕಲಿತಿರುವುವು. ಇವು ಜನ್ಮಸಿದ್ಧಿಗಳು. ಔಷಧಸೇವನದಿಂದ ಗುಣದೋಷಗಳು ಉಂಟಾಗುವುದು ಅನುಭವಸಿದ್ಧವು. ಇವೆರಡನ್ನೂ ಕಂಡವರು ಮಣಿಮಂತ್ರಗಳೂ ಹೀಗೆಯೇ ಸಿದ್ಧಿಪ್ರದಗಳೆಂದು ತಿಳಿದುಕೊಳ್ಳಬಹುದು : ಅಥವಾ ಬೇಕೆಂದರೆ ಅದಕ್ಕಾಗಿ ಪ್ರಯತ್ನಿಸಿ ಪ್ರತ್ಯಕ್ಷವಾಗಿ ಕಂಡುಕೊಳ್ಳಬಹುದು : ಆದರೂ ಮಣಿ, ಔಷಧಗಳು ಜಡಗಳು, ಅದರಿಂದ ಪುರುಷ ಪ್ರಯತ್ನಾಂತರವಿಲ್ಲದೆ ಸಿದ್ಧಿಯನ್ನು ಕೊಡುವುವು. ಆದರೆ ಮಂತ್ರಗಳು ಹಾಗಲ್ಲ, ಮಂತ್ರವು ತತ್ಸಿದ್ಧನಾದವನಿಂದ ಬರುವ ಶಕ್ತಿವಾಹಿನಿಯು. ಅದನ್ನು ಗುರುವು ಅನುಗ್ರಹಿಸಿದ ಬೀಜಶಕ್ತಿಯನ್ನು ಮಹಾವೃಕ್ಷವಾಗಿ ಬೆಳೆಸಿಕೊಳ್ಳುವುದು ಶಿಷ್ಯನ ಕೈಯಲ್ಲಿರುವುದು ಆದ್ದರಿಂದಲೇ, ಬೀಜಶಕ್ತಿಯನ್ನು ಕೊಡುವನೆಂದೇ ಮಂತ್ರಪ್ರದನನ್ನು ತಂದೆ ಎಂದು ಆತನ ಋಣವನ್ನು ಒಪ್ಪಿಕೊಳ್ಳುವುದು. ಮಂತ್ರವೆನ್ನುವುದು ಮನನದಿಂದ ಪ್ರಕಟವಾಗುವ ಶಕ್ತಿಸಂಪುಟವು. ಮಂತ್ರವು ನದಿಯ ನೀರನ್ನು ತಂದೊದಗಿಸುವ ಕಾಲುವೆಯೂ ಹೌದು. ಕಾಲಾಂತರದಲ್ಲಿ ತಾನೇ ನದಿಯೂ ಆಗಬಲ್ಲುದು. ಇದಿಷ್ಟೂ ವಿಚಾರವೇದಿಕೆಯು. ಇನ್ನು ಕ್ರಿಯಾವೇದಿಕೆಯ ವಿಚಾರ. ಬೇಕೆಂದರೆ ಅನುಭವಿಸುವುದಕ್ಕೆ ಸಿದ್ಧನಾಗಬೇಕು. ಇಷ್ಟವಿದ್ದರೆ ಅದೂ ಕೂಡ ಆಗಬಹುದು.”

“ದೇವ, ಇದಿಷ್ಟೂ ಮಾಯೆಯಲ್ಲ ಎನ್ನುವುದು ಹೇಗೆ ?”

“ಈ ಪ್ರಶ್ನವೇ ಅತಿಪ್ರಶ್ನವು. ಅಶ್ರದ್ಧಾಜಾಡ್ಯದಿಂದ ಬೆಳೆದ ಸಂಶಯವೆಂಬ ವಿಷಬೀಜದ ವೃಕ್ಷಸ್ವರೂಪವು ಇದು. ಆದರೂ ಉತ್ತರ ಕೊಡೋಣ. ಮಾಯೆಯೆಂಬುದು ವಸ್ತುತಂತ್ರವಾದರೆ ಕ್ಷಣಕ್ಕೊಂದು ರೂಪವನ್ನು ತಾಳುತ್ತ ನಿಯತ ರೂಪವಿಲ್ಲದೆ ಪ್ರತಿಭಾಸವಾಗುವುದು. ಸತ್ಯವು ತೋರಿದ ಕ್ಷಣದಲ್ಲಿ ಅಡಗುವುದು ಅದು. ಪುರುಷತಂತ್ರವಾದರೆ, ಮಾಯಿಕನ ಬಲವಿರುವವರೆಗು ಇದ್ದು ಅಡಗುವುದು. ಮಂತ್ರವು ಹಾಗಲ್ಲ. ಸತ್ಯಾರ್ಥದರ್ಶನಕ್ಕಾಗಿಯೇ ಜನ್ಮವೆತ್ತಿರುವುದು. ಪುರುಷತಂತ್ರವಾಗಿ ಒಬ್ಬರಿಂದ ಒಬ್ಬರಿಗೆ ಬಂದರೂ, ವಸ್ತುತಂತ್ರವಾಗಿ ಬೆಳೆಸಿದಷ್ಟು ಬೆಳೆದರೂ, ಸತ್ಯಾರ್ಥದರ್ಶನ ಮಾಡಿಸಿಯೂ ಇನ್ನೂ ಇರುವುದಾಗಿ, ನಾಶಗಳಲ್ಲಿ ಯಾವುದೊಂದಕ್ಕೂ ವಶವಾಗುವುದಿಲ್ಲವಾಗಿ, ಮಂತ್ರವು ಮಾಯೆಯಲ್ಲ.”

“ಇದು ಬೇಡ ಎನ್ನುವುದಕ್ಕೆ ನನಗೆ ಅಧಿಕಾರವುಂಟೋ ? ಇಲ್ಲವೋ ?”

“ಆ ಅಧಿಕಾರವು ನೀನು ಸಂಪಾದಿಸಿಕೊಂಡರೆ ಉಂಟು. ಇಲ್ಲದಿದ್ದರೆ ಇಲ್ಲ. ನಿನಗೆ ಜನ್ಮತಃ ಬಂದಿರುವ ಅಧಿಕಾರ ನಿನ್ನ ತಂದೆಯ ಮಗನೆಂದು ಬಂದ ಅಧಿಕಾರ. ಈ ಅಧಿಕಾರವೆನ್ನುವುದು ಕಾಲುವೆಯ ಹಾಗೆ, ನಿನ್ನ ಜನ್ಮಬಲದಿಂದ ನಿನಗೆ ಬಂದ ಅಧಿಕಾರ ತೋಡಿದ ಕಾಲುವೆಯ ಹಾಗೆ. ಅದರಲ್ಲಿ ನೀರು ಹರಿಯಬೇಕಾದರೆ ನಿನ್ನ ಪ್ರಯತ್ನದಿಂದ ಆಗಬೇಕು. ನೀರು ಬಂದರೂ ಅದು ಕಾಲುವೆಯ ಎರಡು ದಡಗಳ ನಡುವೆ. ಕಾಲುವೆಯ ಆಳ, ಅಗಲಗಳಿಗೆ ತಕ್ಕಷ್ಟು ಮಾತ್ರ ಹರಿಯುವಂತೆ, ಆ ಅಧಿಕಾರವು ಜನ್ಮಸಿದ್ಧವಾದ ವರ್ಣಧರ್ಮ, ದೇಶಕಾಲಧರ್ಮಗಳೆಂಬ ಎರಡು ದಡಗಳ ನಡುವೆ ಹರಿಯುವುದು. ಅದನ್ನು ಬಿಟ್ಟು ನಿನಗೆ ಅಧಿಕಾರವೇ ಇಲ್ಲ.”

“ದಯವಿಟ್ಟು ನನಗೆ ಅದನ್ನು ವಿವರಿಸಿ ಹೇಳುವಿರಾ ?

“ನೀನು ವಿನಯದಿಂದ ಕೇಳಿರುವೆಯಾಗಿ ನಿನಗೆ ಹೇಳಬೇಕು. ಧರ್ಮಕಾಮನಲ್ಲದವನಿಗೆ ಈ ವಿಷಯವು ಬರುವುದಿಲ್ಲ. ನೀನು ಅಜ್ಞಾನದಿಂದ ಧರ್ಮವನ್ನು ತಿರಸ್ಕರಿಸಿರುವೆಯೆಂದು ಈ ವಿಷಯವು ಹೇಳುವುದಾಗಿ, ನಿನಗೆ ಹೇಳಬೇಕು, ಕೇಳು. ಸಮಾಜವು ಸೋಪಾನಪಂಕ್ತಿಯಂತೆ, ಗೋಪುದರಂತೆ ಇದೆ. ಸಮಾಜವು ಸ್ವಂತವಾದ ಒಂದು ರೂಪವಿಲ್ಲದ್ದಾದರೂ ಈ ಮೆಟ್ಟಿಲುಮೆಟ್ಟಿಲಾಗಿರುವಿಕೆಯು, ಉಚ್ಚ ನೀಚ ಭಾವವು ಅದರಲ್ಲಿ ಇದ್ದೇ ಇರುವುದು. ಈ ಸೋಪಾನಕ್ರಮವನ್ನು ನಿರಾಕರಿಸಿದವರದೂ ಒಂದು ಗುಂಪುಂಟು. ಅದು ಏಕಪಿಂಡ, ಏಕಜಾತಿ, ಅಲ್ಲಿ ಕೇವಲ ವಯಸ್ಸಿನಿಂದ ಹಿರಿಯತನ. ಅಲ್ಲಿ ಭೋಗಾಧಿಕಾರ ಉಂಟಾದರೂ ಸ್ವತ್ತಾಧಿಕಾರವಿಲ್ಲ. ಸ್ವತ್ತು ಏನಿದ್ದರೂ ಅದು ಕುಲದ್ದು. ಕುಲದವರು ಕೊಟ್ಟಷ್ಟು ತಿಂದುಂಡು ತಾನು ಸಂಪಾದಿಸಿದುದನ್ನೆಲ್ಲಾ ಕುಲಕ್ಕೆ ಕೊಟ್ಟು ಹೋಗಬೇಕು. ಈ ಸೋಪಾನಕ್ರಮವನ್ನು ಅಂಗೀಕರಿಸಿದವರು ವರ್ಣಾಶ್ರಮಧರ್ಮಸಂಪನ್ನರು. ಕೆಲವರು ಜಾತಿಯ ಜನ್ಮದಿಂದ ಲಭ್ಯವಾಗುವುದು ಎಂದರೆ, ಇನ್ನು ಕೆಲವರು ಗುಣದಿಂದಲೂ ವಿದ್ಯಾತಪಸ್ಸುಗಳಿಂದಲೂ ಅದನ್ನು ನಿರ್ಣಯಿಸಬೇಕು ಎನ್ನುವರು. ಕುದುರೆಯ ಮರಿಯು ಕುದುರೆಯೇ ಎನ್ನುವಂತೆ ಮಾತಾಪಿತೃಗಳಿಂದಲೇ ಜಾತಿಯು ಮಕ್ಕಳಿಗು ಸಂಕ್ರಮಿಸುವುದಾದರೂ, ಮನುಷ್ಯ ವಿಷಯದಲ್ಲಿ ಮಾತ್ರ ಆ ಅಧಿಕಾರವು ಸ್ಪಷ್ಟ ಅಸ್ಪಷ್ಟ ಎಂದು ಎರಡು ವಿಧವಾಗಿರುವುದು. ಹುಟ್ಟುತ್ತ ಬರುವ ಅಸ್ಪಷ್ಟಾಧಿಕಾರವು ಆನುವಂಶಿಕ ಗುಣವಾಗಿ ಊರ್ಜಿತವಾಗಲು ಸಂಸ್ಕಾರವನ್ನು ಅಪೇಕ್ಷಿಸುವುದು. ಅದಿಲ್ಲದಿದ್ದರೆ ಸಹಜವಾಗಿ ಗಟ್ಟಿಯಾಗಿ ಕಬ್ಬಿಣವು ಉಪಯೋಗಿಸದೆ ಇಟ್ಟಿದ್ದರೆ, ಇಟ್ಟಕಡೆಯಲ್ಲಿಯೇ ತುಕ್ಕು ಹಿಡಿಯುವಂತೆ, ಸಂಸ್ಕಾರಬಲದಿಂದ ಆನುವಂಶಿಕ ಗುಣವು ಮಸಳಿಸಿ ಹೋಗುವುದು. ಸಂಸ್ಕಾರಬಲದಿಂದ ಇಲ್ಲದ ಗುಣವನ್ನು ಹುಟ್ಟಿಸಬಹುದಾದರೂ, ಸಂಸ್ಕಾರವು ಸಾಮಾನ್ಯವಾಗಿ ಇದ್ದ ಗುಣವನ್ನೇ ವೃದ್ಧಿಪಡಿಸುವುದು. ವೈದ್ಯನು ಪ್ರಾಣಾಪಹಾರಕವಾದ ವಿಷಯವನ್ನು ಪ್ರಾಣದಾಯಕವಾದ ರಸಾಯನವಾಗಿ ಮಾಡಬಲ್ಲನು ಎಂಬ ತತ್ವವನ್ನು ಅಂಗೀಕರಿಸಿದ ಎರಡನೆಯ ಗುಂಪಿನವರು ಇಲ್ಲದ ಗುಣವನ್ನು ಹುಟ್ಟಿಸುವ ವಿಶೇಷ ಗುಣವನ್ನೇ ಸಂಸ್ಕಾರವೆನ್ನದೆ ದೀಕ್ಷೆಯೆನ್ನುವರು. ಈ ದೀಕ್ಷಾಸಂಪ್ರದಾಯದವರು ‘ಮನುಷ್ಯರಿಗೆ ದೇಹತತ್ವಕ್ಕಿಂತಲೂ ಮನಸ್ತತ್ತ್ವ ಹೆಚ್ಚು ಮನೋಬುದ್ಧಿ ಅಹಂಕಾರಗಳೇ ಮುಖ್ಯವಾದ್ದರಿಂದ ಮಾತೃತಃ ಪಿತೃತಃ ಬರುವ ದೇಹಕ್ಕಿಂತಲೂ ಗುರುವಿನಿಂದ ಸಂಸ್ಕಾರವಶನಾಗಿ ಬರುವ ಅಂತಃಕರಣಶುದ್ಧಿಯೇ ಮುಖ್ಯವಾದ್ದರಿಂದ, ಆ ಅಂತಃಕರಣಶುದ್ಧಿಯಿಂದಲೇ ಜಾತಿ ನಿರ್ಣಯವೆನ್ನುವರು.

ವರ್ಣಾಶ್ರಮಧರ್ಮಸಂಪನ್ನರು ಇದನ್ನು ಒಪ್ಪದೆ, ಅಸ್ಪಷ್ಟಾಧಿಕಾರವನ್ನು ಸ್ಪಷ್ಟಾಧಿಕಾರವನ್ನು ಮಾಡುವ, ಒಂದನ್ನು ನೂರುಮಾಡುವ ಸಂಸ್ಕಾರವನ್ನು ಮಾತ್ರ ಅಂಗೀಕರಿಸುವರು. ಅಂತಃಕರಣದ ಶುದ್ಧಿ - ಅಶುದ್ಧಿಗಳು ಗೋಚರವಾಗುವುದು ಯಾವುದೋ ಒಂದು ವಯಸ್ಸಿಗೆ ಬಂದಾಗ. ಅದು ಕನ್ಯೆಯು ಋತುಮತಿಯಾಗಿ ಸ್ತ್ರೀ ಆದಂತೆ. ಅದುವರೆಗೆ ವ್ಯವಸ್ಥೆ ಇಲ್ಲದಿದ್ದರೆ ಹೇಗೆ ? ಅಲ್ಲದೆ, ಜೊತೆಗೆ ಆನುವಂಶಿಕ ಗುಣಗಳಿಂದಲೇ ಎಲ್ಲವೂ ಸಿದ್ಧವಾಗುವುವು. ಕುದುರೆ, ಒಂಟೆ, ಕುರಿಗಳು ಹಾಲು ಕರೆದರೂ, ಆ ಹಾಲು ಬಿಟ್ಟು ಮತ್ತೇನನ್ನೂ ಉಪಯೋಗಿಸದವರೇ ಇದ್ದರೂ ಅವು ಹಸುಗಳಲ್ಲ. ಅದರಿಂದ, ಮಾತೃತಃ ಪಿತೃತಃ ಬರುವ ಜಾತಿಯೇ ಜಾತಿ ಎಂಬ ತತ್ತ್ವವನ್ನೇ ಅಂಗೀಕರಿಸಿ, ‘ಜನ್ಮಶುದ್ಧಿಯಿಲ್ಲದಿದ್ದಲ್ಲಿ ಸಂಸ್ಕಾರವು ಏನೂ ಮಡಲಾರದು. ಅದರಿಂದ, ಈ ತಜ್ಜಾತರಿಗೆ ಸಂಸ್ಕಾರ’ ಎನ್ನುವರು ಇವರು.

`ನಾವೆಲ್ಲರೂ ಈ ಸಿದ್ಧಾಂತವನ್ನು ಅಂಗಿಕರಿಸಿದವರು. ಜೊತೆಗೆ ಧರ್ಮಕಾಮ ನಲ್ಲದವನಿಗೆ ಸಮಾಜದಲ್ಲಿ ಸ್ಥಾನವಿಲ್ಲ ಎಂಬ ತತ್ತ್ವವನ್ನು ಅಂಗೀಕರಿಸಿದವರು. ಈಗ ನೀನು ತಜ್ಜಾತನಾದುದರಿಂದ ನೀನು ತತ್ಸಂಸ್ಕಾರ ಸಂಪನ್ನನಾಗಬೇಕು. ಸಂಸ್ಕಾರದಿಂದಲೇ ಫಲವಾಗದೇ ಹೋದರೋ ಎಂದರೆ ಒಂದೊಂದು ವೇಳೆ ಸಂಸ್ಕಾರಫಲವು ಸದ್ಯದಲ್ಲಿ ಕಾರಣಾಂತರಗಳಿಂದ ಗೋಚರಿಸದೆ ಹೋದರೂ, ಅದು ಅಪೂರ್ವವಾಗಿದ್ದುಕೊಂಡು ಕಾಲದೇಶಗಳು ಅನುಕೂಲವಾದಾಗ ಮುಂದಿನ ಸಂತಾನದಲ್ಲಿ ಪ್ರಕಟವಾಗುವುದು. ಅದರಿಂದ ಆನುವಂಶಿಕ ಗುಣೋತ್ತೇಜಕವಾದ ಸಂಸ್ಕಾರವನ್ನು ನೀನೂ ಪಡೆದು ಅದನ್ನು ಅನುಷ್ಠಾನ ಮಾಡುವುದಾದರೆ, ನೀನು ದಾಯಾರ್ಹನು.

`ಮೇಲೆ ಹೇಳಿದ ಎರಡು ಗುಂಪುಗಳಲ್ಲಿ ಇನ್ನೊಂದು ವಿಶೇಷವುಂಟು. ಏಕಪಿಂಡ ಜಾತಿಯು ಸಾಮಾಜಿಕ ವ್ಯವಸ್ಥೆಯನ್ನು ಕಾಪಾಡುವುದಕ್ಕೆ ಅತ್ಯವಶ್ಯವಾದ ನಯ ವಿನಯರೂಪವಾದ ಸಾಮಾನ್ಯ ಧರ್ಮವನ್ನು ಅಂಗೀಕರಿಸುವುದು. ಅಲ್ಲಿ ಸೌಜನ್ಯವೇ ಧರ್ಮ. ಹತ್ತು ಜನರು ಸೇರಿ ಮಾಡಿಕೊಂಡ ಕಟ್ಟಳೆಯೇ ಧರ್ಮ. ಆದರೆ ಸೋಪಾನಕ್ರಮದವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ ‘ಸಮಾಜವು ವ್ಯಕ್ತಿಯಂತೆಯೇ ದೇಶ ಕಾಲ ಕರ್ಮಾನುಗುಣವಾಗಿ ಭಿನೈಸಿದರೂ ಅದು ವಿಶ್ವದ ಒಂದು ಅಂಗ. ಅದರಿಂದ ಸಮಾಜದ ಉತ್ತಮವ್ಯಕ್ತಿಯು ವಿಶ್ವದ ಪ್ರತಿನಿಧಿಯಾಗಿ, ತನ್ನ ಸ್ವಧರ್ಮದ ಪ್ರತೀಕವಾಗಿ ಕಾಲ, ದೇಶ, ಜಾತಿ, ಕುಲಗಳನ್ನು ಮಾತ್ರವಲ್ಲದಲೆ, ವಿಶ್ವಕುಟುಂಬವನ್ನೂ ಲಕ್ಷ್ಯದಲ್ಲಿಟ್ಟುಕೊಂಡು ತನ್ನ ಕಾರ್ಯವನ್ನು ನಿರೂಪಿಸಿಕೊಂಡು, ಆಚರಿಸಬೇಕು. ಈ ಲಕ್ಷ್ಯವು ಮೇಲುಮೆಲಕ್ಕೆ ಹೋಗುತ್ತಾ ಹೆಚ್ಚು ಹೆಚ್ಚು ಪ್ರಕಟವಾಗಿ, ಕೊನೆಯ ಅಂತಸ್ತಿನಲ್ಲಿ ಕಾಣಿಸುವ ಗೋಪುರದ ಶಿಖರದಂತಿರುವುದು. ಗೋಪುರದ ಕಲಶಗಳು, ಆ ಗೋಪುರದ ಅಂತಸ್ತು ಅಂತಸ್ತಿನ ಬಲದಿಂದ ನಿಂತಿರುವಂತೆ, ಸಮಾಜದ ಉತ್ತಮ ವ್ಯಕ್ತಿಯು ಸಮಾಜದ ಸಂಬಂಧವೆನ್ನುವುದನ್ನು ಮರೆಯಬಾರದು’ ಎನ್ನುವರು.

`“ನೀನು ಈಗ ಬ್ರಾಹ್ಮಣನು. ನೀನು ನಿನ್ನ ನಿತ್ಯನೈಮಿತ್ತಿಕ ಕರ್ಮಗಳನ್ನು ಮಾಡುತ್ತ ವಿಶ್ವದ ಯೋಗಕ್ಷೇಮಗಳನ್ನು ನೋಡಿಕೊಳ್ಳುವುದು ನಿನ್ನ ಕರ್ತವ್ಯವು. ಅದರಿಂದಲೇ, ಆ ರೀತಿಯಾದ ಗುರುತಮ ಭಾರವನ್ನು ವಹಿಸಿದುದರಿಂದಲೇ ನಿನ್ನನ್ನು ಮೂರ್ಧಾಭಿಷಿಕ್ತನಾದ ರಾಜನೂ ನಮಸ್ಕಾರಾದಿಗಳಿಂದ ಗೌರವಿಸುವುದು. ಯೋಧನ ಕತ್ತಿಯಂತೆ ನೀನು ಯಾವಾಗಲೂ ಕರ್ತವ್ಯಸಿದ್ಧನಾಗಿರಬೇಕು. ಬೆಂಕಿಯು ಯಾವಾಗಲೂ ಉರಿಯುತ್ತಲೇ ಇರುವಂತೆ, ನೀನು ಯಾವಾಗಲೂ ಲಕ್ಷ್ಯಾನುಸಂಧಾನದಲ್ಲಿಯೇ ಇರಬೇಕು. ಇಲ್ಲದಿದ್ದರೆ ಆರಿದ ಬೆಂಕಿಯ ಗುರುತಾದ ಬೂದಿ ಇದ್ದಿಲುಗಳನ್ನು ಹೊರಕ್ಕೆಸೆಯುವಂತೆ, ಸಮಾಜವು ನಿನ್ನನ್ನು ಹೊರಕ್ಕೆ ಎಸೆಯಬಾರದೇಕೆ ? ಆಸ್ತಿಯು ನಿನ್ನ ತಂದೆಯದೇ ಆದರೂ ನಿನಗದು ಇಲ್ಲ ಎಂಬುದೇ ಈ ಎಸೆಯುವಿಕೆ. ಮಹಾಸ್ವಾಮಿಯವರು ಕೃಪೆಮಾಡಿ, ನಿನಗೆ ಆಸ್ತಿಯನ್ನು ಸಂಪಾದಿಸಿಕೊಳ್ಳುವುದಕ್ಕೆ ಅವಕಾಶವನ್ನು ಕೊಟ್ಟಿರುವರು. ಯಾವನೊಬ್ಬನೇ ಆಗಲಿ ಜನ್ಮಮಾತ್ರದಿಂದ ಸಂಪಾದಿಸುವುದು ಕೆಲವು ಅಸ್ಪಷ್ಟಾಧಿಕಾರಗಳನ್ನು ಮಾತ್ರ. ಆ ಅಧಿಕಾರಗಳು ಅವನವನ ಕರ್ಮಗಳಿಂದ ಊರ್ಜಿತವಾಗಬೇಕು. ಅದರಿಂದ, ನೀನು ಈ ಅಸ್ಪಷ್ಟಾಧಿಕಾರವನ್ನು ಹಿಡಿದು ‘ನನ್ನ ತಂದೆಯ ಆಸ್ತಿಗೆ ನಾನು ಭಾಗಿ’ಯೆನ್ನುವುದಕ್ಕಿಂತ, “ನನಗೆ ಅರ್ಹತೆಯಿರುವುದರಿಂದ ಇದು ನನಗೆ ಬರಬೇಕು’ ಎನ್ನುವುದು ಸರಿ.”

`ವಾದಿಯು ಅದನ್ನು ಕೇಳಿ ನಿರುತ್ತರನಾಗಿ, ರಾಜಾಜ್ಞೆಯನ್ನು ಪಾಲನೆ ಮಾಡುವುದಾಗಿ ಮಾತುಕೊಟ್ಟು ಅಪ್ಪಣೆ ಪಡೆದು ಹೊರಟುಹೋದನು.

`ಎರಡನೆಯ ವಾದಿಯು ಬಂದನು. ಅರಸನು ಕೇಳಿದನು : “ನಿನ್ನ ಮಾತೇನು?” ವಾದಿಯು ಹೇಳಿದನು : “ದೇವ, ದೇಶಾಂತರದಲ್ಲಿನ ವ್ಯಾಪಾರಿಯೊಬ್ಬನಿರುವನು. ಆತನು ನನ್ನನ್ನು ಮೆಚ್ಚಿಕೊಂಡು, ನಾನು ಅಲ್ಲಿಯೇ ನಿಲ್ಲುವುದಾದರೆ ನನ್ನ ಮಗಳನ್ನೂ ಆಸ್ತಿಯನ್ನೂ ಕೊಡುವುದಾಗಿ ವಾಗ್ದಾನ ಮಾಡಿರುವನು. ನಾನು ಅಲ್ಲಿಗೆ ಹೋಗಬೇಕೆಂದಿರುವೆನು. ಆದ್ದರಿಂದ ಇಲ್ಲಿರುವ ನನ್ನ ಪಾಲಿನ ಆಸ್ತಿಯನ್ನು ಕೊಡಿಸಿಕೊಡಬೇಕು.”

`“ನಿನಗೆ ಅಣ್ಣ ತಮ್ಮಂದಿರು ಇರುವರೋ?”

`“ಒಬ್ಬ ಅಣ್ಣ. ಒಬ್ಬ ತಮ್ಮ ಇದ್ದಾರೆ ಮಹಾಪ್ರಭು.”

`“ನಿಮ್ಮ ಆಸ್ತಿಯೆಷ್ಟು?”

“ಒಂದು ಕೋಟಿಯಷ್ಟಾದೀತು, ಮಹಾಸ್ವಾಮಿ”

“ಅವರಿಬ್ಬರೂ ಕುಲಧರ್ಮವನ್ನು ಕಾಪಾಡಿಕೊಂಡು ಬರುತ್ತಿರುವರೋ?”

“ಹೌದು, ಮಹಾಸ್ವಾಮಿ.”

“ಪ್ರತಿಯೊಬ್ಬನ ಆಸ್ತಿಯ ಮೇಲೆ ರಾಜ್ಯಾಧಿಕಾರಿಗೆ ಅಧಿಕಾರವುಂಟು. ಆಯಾ ಕುಟುಂಬದವರು ಅದನ್ನು ಅನುಭವಿಸಿಕೊಂಡು ಬರುತ್ತಿರುವುದು ಕುಲಧರ್ಮವನ್ನು ಪಾಲಿಸುವೆನೆಂದು ಒಪ್ಪಿಕೊಂಡಿರುವುದರಿಂದ. ದೇವರಕ್ಷಕನಾದ ಅರಸನು ಧರ್ಮರಕ್ಷಕನೂ ಹೌದು. ಅದರಿಂದ, ಕುಲಧರ್ಮದಂತೆ ನಡೆಯುತ್ತಿರುವವರ ಆಸ್ತಿಯನ್ನೂ ಕುಲವನ್ನೂ, ದೇಶವನ್ನೂ ತ್ಯಜಿಸಿ, ಆಸ್ತಿಯ ಲೋಭ, ಸ್ತ್ರೀವ್ಯಾಮೋಹಗಳಿಂದ ದೇಶಾಂತರಕ್ಕೆ ಹೋಗಬೇಕೆಂದಿರುವವನಿಗೆ ಕೊಡಿಸಲು ಶಕ್ತನಲ್ಲ. ಅದರಿಂದ, ಈಗ ನೀನು ಇರುವ ರೀತಿಯಲ್ಲಿ ಒಂದು ವರ್ಷಕಾಲ ಇರಲು ಬೇಕಾಗುವ ಧನವನ್ನು ನಿನಗೆ ಕೊಡಬೇಕೆಂಬ ನ್ಯಾಯಾಸ್ಥಾನದ ನಿರ್ಣಯವು ಸರಿ. ಜೊತೆಗೆ, ನೀನು ಇಲ್ಲಿಂದ ನಿನ್ನ ಉದ್ದಿಷ್ಟ ಸ್ಥಳಕ್ಕೆ ಹೋಗಲು ನಿನ್ನ ಯೋಗ್ಯತೆಗೆ ತಕ್ಕಂತೆ ಆಗುವ ಹಾದಿಯ ವೆಚ್ಚವನ್ನು ಕೊಡಿಸಲಾಗುವುದು. ಇಲ್ಲಿ ಆಸ್ತಿಯ ಮೇಲೆ ನಿನಗಾಗಲಿ ನಿನ್ನ ಸಂತಾನಕ್ಕಾಗಲಿ ಏನೂ ಅಧಿಕಾರವಿಲ್ಲವೆಂಬ ಬಂಧ ವಿಮೋಚನೆಯ ಪತ್ರವನ್ನು ಬರೆದುಕೊಡತಕ್ಕದ್ದು.”

ಹೀಗೆಂದು ರಾಜನು ಧರ್ಮಾಧಿಕಾರಿ, ಪುರೋಹಿತ, ಗುರುಗಳ ಮುಖವನ್ನು ನೋಡಿದನು. ಅವರೆಲ್ಲರೂ ಸರಿಯೆಂದು ಅಂಗೀಕಾರವನ್ನು ಸೂಚಿಸಿದರು. ವಾದಿಯು ನಿರುತ್ತರನಾಗಿ ನ್ಯಾಯಪೀಠಕ್ಕೆ ಕೈಮುಗಿದು ಹೊರಟುಹೋದನು.

ಮೂರನೆಯವರನು ಬಂದನು. ಅವನು ಅಪರಾಧಿ : ವಾದಿಯಲ್ಲ. ಅದರಿಂದ ಧರ್ಮಾಧಿಕಾರಿಯು ಅವನ ಮೇಲಿದ್ದ ಆರೋಪಗಳನ್ನು ಹೇಳಿದನು : “ಮಹಾ ಸ್ವಾಮಿ, ಈತನು ದುಷ್ಟಕ್ಷತ್ರಿಯ, ತನ್ನ ರಾಜ್ಯದಲ್ಲಿ ಸರಿಯಾಗಿದ್ದರೂ ನೆರೆ ಹೊರೆಯ ರಾಜ್ಯಗಳಲ್ಲಿ ಹಾವಳಿ ಮಾಡುತ್ತಿದ್ದಾನೆಂದು, ಸಾರ್ವಭೌಮರ ಆಜ್ಞೆಯನ್ನು ನಿರಾಕರಿಸಿದ್ದಾನೆಂದು ದಂಡ್ಯನಾಗಿದ್ದಾನೆ.”

ಅರಸನು ಅಪರಾಧಿಯ ಮುಖವನ್ನು ನೋಡಿದನು. ಒಳ್ಳೆಯ ತೇಜಸ್ಸಿ, ದೃಢಾಂಗ, ನಯವಿನಯ ಭಯಭಕ್ತಿಗಳಿಂದ ನಿಂತಿದ್ದಾನೆ. ಒಂದು ಗಳಿಗೆ ಯೋಚಿಸಿ, ಅರಸನು ಕೇಳಿದನು ; “ನೀನು ಏನು ಹೇಳುವೆ ?”

ಅವನು ವಿನಯವನ್ನು ಬಿಡದೆ ತೇಜೋವೃದ್ಧನನ್ನು ಕಂಡಾಗ ಸಹಜವಾಗಿ ಬರುವ ಭಯಭಕ್ತಿಗಳನ್ನು ಅಂಗಾಂಗಳೆಲ್ಲವೂ ಪ್ರದರ್ಶಿಸುತ್ತಿದ್ದರೂ, ತನ್ನ ತೇಜಸ್ಸನ್ನು ಮರೆಯದವನ ಗರ್ವವನ್ನೂ ಬಿಡಲಾರದೆ, ಕೈಮುಗಿದುಕೊಂಡು ಹೇಳಿದನು : “ಮಹಸ್ವಾಮಿ, ನನ್ನ ಮೇಲಿನ ಆರೋಪಗಳನ್ನು ನಾನು ಸುಳ್ಳೆನ್ನುವುದಿಲ್ಲ. ಆದರೂ ನಾನು ನನ್ನ ರಾಜ್ಯದಲ್ಲಿ ಪ್ರಜೆಗಳನ್ನು ವತ್ಸಲನಾಗಿ ಕಾಪಾಡುತ್ತಿದ್ದೇನೆಂಬುದನ್ನು ಆರೋಪಿಗಳೇ ಹೇಳುತ್ತಿದ್ದಾರೆಂಬುದನ್ನು ತಮ್ಮ ಅವಗಾಹನಕ್ಕೆ ತರುತ್ತೇನೆ. ನಾನು ಕ್ಷತ್ರಿಯ, ನನಗೆ ಯುದ್ಧವಿಲ್ಲದೆ ಒಂದು ದಿನವೂ ಇರಲಾಗುವುದಿಲ್ಲ. ನನ್ನ ಅಂತಃಪುರದಲ್ಲಿ ನಾನು ಎಷ್ಟು ಅಭಿಮಾನಪಡುವೆನೋ, ಅದೇ ಅಭಿಮಾನದಿಂದ ನಾನು ನನ್ನ ಸೇನೆಯನ್ನು ನೋಡುತ್ತಿದ್ದೇನೆ. ನನಗೆ ಯುದ್ಧವು ನಿತ್ಯಕರ್ಮವಾಗಿ ಹೋಗಿದೆ. ಅದಿಲ್ಲದಿದ್ದರೆ ಬದುಕುವುದಕ್ಕೇ ಸಾಧ್ಯವಿಲ್ಲ. ಅದರಿಂದ ಹೀಗೆ ಮಾಡುತ್ತಿದ್ದೇನೆ. ಪರರು ಯಾವಾಗಲೂ ಪರರೇ ! ಸಾಧ್ಯವಾಗಿದ್ದರೆ ಅವರು ನನ್ನನ್ನು ಹಿಂದಕ್ಕೆ ಅಟ್ಟುತ್ತಿದ್ದರು. ಅದು ಸಾಧ್ಯವಿಲ್ಲೆಂದು ಸಾರ್ವಭೌಮರಾದ ತಮ್ಮಲ್ಲಿ ದೂರಿದ್ದಾರೆ. ಸಮುದ್ರವು ಹಗಲು ಇರುಳು ಎನ್ನದೆ ತರಂಗ ಚಂಚಲವಾಗಿರುವಂತೆ, ನನಗೆ ನಿದ್ದೆಯಲ್ಲಿಯೂ ಕೂಡ ಆಯುಧ ಸಂಚಾಲನದ ಕನಸುಗಳೇ ಆಗುವಷ್ಟು ಕದನ ಕುತೂಹಲ ಇದ್ದುದನ್ನು ಮಹಾಪಾದಗಳಲ್ಲಿ ಬಿನ್ನವಿಸಿದ್ದೇನೆ. ಯಥಾಯೋಗ್ಯವಾಗಿ ಆಜ್ಞೆಯಾಗಬಹುದು.

“ಆಜ್ಞೆಯನ್ನು ಪಾಲಿಸುವೆಯೋ ?”

“ನನ್ನ ಸ್ವಭಾವವನ್ನು ಪರಿಗಣಿಸಿ ನಾನು ಪಾಲಿಸುವುದಕ್ಕೆ ಆಗುವಂತಹ ಆಜ್ಞೆಯನ್ನೇ ಮಹಾಸ್ವಾಮಿಯವರು ಮಾಡುವರು ಎಂಬ ನಂಬಿಕೆಯಿದೆಯಾಗಿ ಅದನ್ನು ಪಾಲಿಸಿ ಕೃತಾರ್ಥನಾಗುವೆನೆಂಬ ನಂಬಿಕೆಯೂ ಇದೆ.”

ಅರಸನು ತಲೆದೂಗಿದನು : “ಚಿನ್ನದ ಒರೆಯಲ್ಲಿ ಇರಬೇಕಾದ ತೀಕ್ಷ್ಣಖಡ್ಗ ಬಟ್ಟೆಯ ಒರೆಯಲ್ಲಿ ನಿಲ್ಲುವುದಾದರೂ ಎಂತು ?” ಎಂದುಕೊಂಡನು. ಕೂಡಲೇ ಮಂತ್ರಿಯು ಬರಲು ಅಪ್ಪಣೆಯಾಯಿತು. ಅರಸನು ಕೇಳಿದನು : “ಮಾಲ್ಯವಂತ ಪರ್ವತದ ಪಾರ್ವತೇಯರು ಅಜೇಯರಾಗಿದ್ದಾರೆಂದು ವರದಿ ಬಂದಿದೆಯಲ್ಲವೇ?”

“ಹೌದು ಮಹಾಸ್ವಾಮಿ”

“ಏನು ಯೋಚಿಸಿದ್ದೀರಿ ?”

“ಅಲ್ಲಿಗೆ ಯುದ್ಧಕಾಮನಾಗಿ ಬಲಿಷ್ಠನಾದ ದಳಪತಿಯೊಬ್ಬನನ್ನು ಕಳುಹಿಸಬೇಕೆಂದಿದ್ದೇವೆ.”

“ಸರಿ. ಅಲ್ಲಿಗೆ ಐದು ಸಾವಿರ ಅಶ್ವದಳವು ಹೋಗಲಿ.”

“ಅಲ್ಲಿ ಆಗಲೇ ಹತ್ತು ಸಾವಿರ ಪದಾತಿಗಳೂ ಮೂರುಸಾವಿರ ಅಶ್ವಗಳೂ ಇವೆ.” “ಈತನು ಯುದ್ಧಕಾಮಿ. ಪೌರುಷವಂತ. ಅದರಿಂದ ಈತನನ್ನು ಅಲ್ಲಿಗೆ ಕಳುಹಿಸಿ, ಇದುವರೆಗೆ ಅಲ್ಲಿದ್ದು ಆಯಾಸಪಟ್ಟಿರುವ ದಳವನ್ನು ಹಿಂದಕ್ಕೆ ಕರೆಯಿಸಿಕೊಂಡು ಈತನ ಕೈಕೆಳಗೆ ಹೊಸ ದಳವನ್ನು ಕಳುಹಿಸಿಕೊಡಿ.”

“ಈ ದಳವು ಸಾಲದೆ ಹೋಗಬಹುದು.”

“ಮಂತ್ರಿಗಳೇ, ಗೆಲ್ಲುವುದು ದಳವಲ್ಲ, ದಳಪತಿ. ಈತನನ್ನು ಅಲ್ಪದಳ ಕೊಟ್ಟು ಕಳುಹಿಸುವುದರಲ್ಲಿ ನಮಗೆ ಬಹಳ ಪ್ರಯೋಜನವುಂಟು. ದುರ್ದಾಂತವಾಗಿರುವ ಈತನ ಕದನಕುತೂಹಲವು ಅಂಕೆಗೆ ಬಂದರೆ ನಮಗೂ ಶೂರನೂ ಅನುಭವಿಯೂ ಆದ ದಂಡನಾಯಕನೊಬ್ಬನು ಲಭಿಸುವನು. ಈತನ ರಾಜ್ಯದ ನೆರೆಹೊರೆಯು ಸುಖವಾಗಿರುವುದು. ಆತನಿಗೆ ಬೇಕುಬೇಕಾದ ಸಿದ್ಧತೆಗಳನ್ನೆಲ್ಲಾ ಮಾಡಿಕೊಟ್ಟು ಆತನನ್ನು ಕಳುಹಿಸಿ. ಸೈನ್ಯವು ಮಾತ್ರ ನಾವು ಹೇಳಿದಷ್ಟೇ! ಏನೆನ್ನುವೆ?”

“ಮಹಾಸ್ವಾಮಿಯವರ ಮಾತು ನಿಜ. ಗೆಲ್ಲುವುದು ದಳವಲ್ಲ. ಅಷ್ಟೇ ಸೈನ್ಯವು ಸಾಕು. ನನ್ನ ಉತ್ಸಾಹವನ್ನು ಸೈನಿಕರಲ್ಲಿ ತುಂಬಿ ಗೆದ್ದು ಬರುವೆನು ಮಹಾಸ್ವಾಮಿ!” ಅರಸನ ಅಪ್ಪಣೆಯಾಯಿತು. ಆತನಿಗೆ ತೊಡಿಸಿದ್ದ ಅಪರಾಧಸೂಚಕವಾದ ವಸ್ತ್ರವನ್ನು ತೆಗೆದು ಪರಿಜನರು ಅಲ್ಲಿಯೇ ಆತನಿಗೆ ನೂತನ ಪದವಿಯನ್ನು ಸೂಚಿಸುವ ಉಡುಗೊರೆಯನ್ನು ತಂದು ತೊಡಿಸಿದರು. ಅರಸನು ತನ್ನ ಹಸ್ತದಿಂದಲೇ ವೀರತಾಂಬೂಲವನ್ನು ಕೊಟ್ಟು ಸಂಭಾವಿಸಿ ಕಳುಹಿಸಿಕೊಟ್ಟನು.

* * * *