ಮಹಾಕ್ಷತ್ರಿಯ/ಪಾಪವು ಪರಿಹಾರವಾಯಿತೆ?

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

೯.ಪಾಪವು ಪರಿಹಾರವಾಯಿತೆ?[ಸಂಪಾದಿಸಿ]

ಸಮೀಪದಲ್ಲಿ ಅಜ್ಞಾತರಾಗಿ ನಿಂತಿದ್ದ ಅಗ್ನಿವಾಯುಗಳು ಮೂರ್ಛಿತವಾಗಿ ಬಿದ್ದಿದ್ದ ದೇವರಾಜನನ್ನು ಕೂಡಲೇ ಹಾಗೆಯೇ ಹೊತ್ತುಕೊಂಡು ಬಂದು ಶಚಿಯ ಅಂತಃಪುರದಲ್ಲಿ ಇಳಿಸಿದರು. ಬಿಟ್ಟಕಣ್ಣು ಬಿಟ್ಟುಕೊಂಡು ನಿಶ್ಚೇಷ್ಟನಾಗಿ ಬಿದ್ದಿರುವ ದೇವಪತಿಯು ಮತ್ತೆ ಸಚೇತನನಾಗಲು ಅಷ್ಟು ಹೊತ್ತಾಯಿತು. ಶಚಿಯು ಸ್ವಂತವಾಗಿ ಉಪಚಾರಮಾಡಿ, ಆತನಿಗೆ ಬಲತರವಾದ ಆಸವಾದಿಗಳನ್ನು ಕೊಟ್ಟು ಪೂರ್ವದಂತೆ ಮಾಡಿದಳು.

ಆದರೂ ಆತನಿಗೆ ಆ ಭ್ರಾಂತಿಯು ಬಿಟ್ಟಿಲ್ಲ. “ಅದೋ ! ವಿಶ್ವರೂಪನು ಬಂದನು! ನನಗೆ ಶಾಪ ಕೊಡುವುದಾಗಿ ಹೆದರಿಸುತ್ತಿದ್ದಾನೆ. ಯಾರಲ್ಲಿ? ಮೊದಲು ಅವನನ್ನು ಹೊರ ನೂಕಿ! ಹೊರ ನೂಕಿ” ಎಂದು ಕಿರುಚುತ್ತಾನೆ.

ಆ ಕೂಡಲೇ ಅಲ್ಲಿ ಬೃಹಸ್ಪತ್ಯಾಚಾರ್ಯನು ಕಾಣಿಸಿಕೊಂಡನು. ಕೈಯಲ್ಲಿ ಅಭಿಮಂತ್ರಿತವಾದ ಉದಕವುಳ್ಳ ಕಲಶವನ್ನೂ ದರ್ಭಕೂರ್ಚಗಳನ್ನೂ ತೆಗೆದುಕೊಂಡು ಶಾಂತಿಮಂತ್ರವನ್ನು ಪಠಿಸುತ್ತಾ ದೇವರಾಜನಿಗೆ ಆ ಕಲಶೋದಕದಿಂದ ಮಾರ್ಜನವನ್ನು ಮಾಡಿದನು. ಆತನಿಂದ ಧೂಮರೂಪವಾಗಿ ಒಂದು ಆಕೃತಿಯೆದ್ದು ಬಂದು ಹೊರಗೆ ನಿಂತಿತು. ಅದನ್ನು ನೋಡುತ್ತಿದ್ದ ಹಾಗೆಯೇ ಯಾರೂ ಹೇಳದೆ, ಅದರ ವಿಕಟಾಕೃತಿಯಿಂದಲೇ, ಇದು ಪಾಪ ಪರುಷ ಎಂದು ಗೊತ್ತಾಗುವಂತಿತ್ತು. ಕೂಡಲೇ ಬೃಹಸ್ಪತಿ ಪ್ರಚೋದನದಿಂದ ಇಂದ್ರನೆದ್ದು ಅದನ್ನು ತನ್ನ ಖಡ್ಗದಿಂದ ನಾಲ್ಕು ಪಾಲು ಮಾಡಿದನು. ಪೂರ್ವದಲ್ಲಿಯೆ, ಗೊತ್ತಾಗಿದ್ದಂತೆಯೇ ಭೂಮಿ, ಜಲ, ವೃಕ್ಷ, ಸ್ತ್ರೀದೇವಿಯರು ಬಂದು ಅದನ್ನೂ ಅದಕ್ಕಿಂತ ಉಜ್ವಲವಾಗಿ ಬೆಳಗುತ್ತಿದ್ದ ವರಗಳನ್ನೂ ತೆಗೆದುಕೊಂಡು ಹೋದರು. ಇಂದ್ರನಿಗೆ ಮನಸ್ಸು ಸ್ವಸ್ಥವಾಯಿತು.

ಮತ್ತೆ ಬೃಹಸ್ಪತ್ಯಾಚಾರ್ಯನು ಇಂದ್ರನಿಂದ ನಾರಾಯಣ ಬಲಿಯನ್ನು ಮಾಡಿಸಿದನು. ಇಂದ್ರನು ರಾಹುಮುಕ್ತನಾದ ಚಂದ್ರನಂತೆ, ತನ್ನ ಪೂರ್ವದ ತೇಜಸ್ಸಿನಿಂದ ಕೂಡಿದನು.

ಆದರೂ ಇಂದ್ರನಿಗೆ ಆ ತಲೆಗಳ ಯೋಚನೆಯು ತಪ್ಪಲಿಲ್ಲ. ಅರಮನೆಯ ಬಡಗಿಯನ್ನು ಕರೆಸಿದನು. “ವಿಶ್ವರೂಪಾಚಾರ್ಯನ ಮನೆಯಲ್ಲಿ ಅವನ ತಲೆಗಳು ಬಿದ್ದಿವೆ. ಅವು ಏಕವಾಗಿರದಂತೆ ಮೂರಾಗಿ ಕಡಿದು ಬಾ. ನಿನಗೆ ಬೇಕಾದುದನ್ನು ಕೊಡುವೆನು” ಎಂದು ಅವನಿಗೆ ಪ್ರಲೋಭವನ್ನು ಹುಟ್ಟಿಸಿ, ಅವನಿಗೆ ಇಷ್ಟವಿಲ್ಲದಿದ್ದರೂ, ಅವನನ್ನು ಬಲವಂತವಾಗಿ ಆ ಕಾರ್ಯಕ್ಕೆ ನಿಯೋಜಿಸಿದನು.

ಬಡಗಿಯು ಹೋಗಿ ನೋಡಿದನು. ವಧೆಯಾಗಿ ಅಷ್ಟು ಹೊತ್ತಾಗಿದೆ. ರುಂಡವೂ ಮುಂಡವೂ ಪ್ರತ್ಯೇಕವಾಗಿ ಬಿದ್ದಿವೆ. ಅವುಗಳಿಂದ ಸುರಿದ ನೆತ್ತರೂ ಹೆಪ್ಪು ಕಟ್ಟಿಕೊಂಡಿದೆ. ಇಷ್ಟಾದರೂ ಮುಖದ ತೇಜಸ್ಸು ಕಂದಿಲ್ಲ. ಬಿಟ್ಟ ಕಣ್ಣುಗಳು ಎದುರು ಬಂದವನನ್ನು ಅಂಜಿಸುವಂತಿವೆ. ಬಡಗಿಗೆ ಇನ್ನೂ ಆಚಾರ್ಯನು ಬದುಕಿರುವನೋ ಎಂದು ಸಂದೇಹ ಬರುವಂತಿದೆ.

ಅವನು ತಾನೊಬ್ಬನೇ ಆ ಕಾರ್ಯವನ್ನು ಮಾಡಲಾರದೆ ಅಲ್ಲಿಂದ ಓಡಿ ಹೋದನು. ಆದರೂ ಇಂದ್ರನಪ್ಪಣೆ, ಮೀರುವಂತಿಲ್ಲ. ಅದರಿಂದ ಇನ್ನೊಬ್ಬನನ್ನು ಕರೆದುಕೊಂಡು ಬಂದು, ಇಬ್ಬರೂ ಸೇರಿ ಮುಂಡವನ್ನು ಇನ್ನೊಂದೆಡೆಗೆ ಸಾಗಿಸಿದರು. ರುಂಡವನ್ನು ಅಭಿಮುಖವಾಗಿ ಬೇರ್ಪಡಿಸಲಾರದೆ, ಅದನ್ನು ಮೊಗವಡಿಮಾಡಿ, ಕೊಡಲಿಯಿಂದ ಕಡಿದು ಅದನ್ನು ಬೇರ್ಪಡಿಸಿದರು.

ಇಂದ್ರನಿಗೆ ಶತ್ರುನಾಶವಾಯಿತೆಂದು ಸಂತೋಷವಾಗಿದ್ದರೂ, ದೇವಕುಲವೆಲ್ಲವೂ ತನ್ನ ಕಾರ್ಯವನ್ನು ಒಪ್ಪಿಕೊಳ್ಳುವುದೆಂಬ ನಂಬಿಕೆಯಿದ್ದರೂ, ಇನ್ನೂ ಏನೋ ದಿಗಿಲು. ಬೃಹಸ್ಪತ್ಯಾಚಾರ್ಯನು ಮತ್ತೆ ಧರ್ಮಾಚಾರ್ಯ ನಾದನೆಂದು ಒಂದು ಸಮಾಧಾನವಿದ್ದರೂ ದೈತ್ಯರು ಈ ಸಂಧಿಯನ್ನು ಸಾಧಿಸಿ ಮತ್ತೇನು ಕುತಂತ್ರವನ್ನು ಹೂಡುವರೋ ಎಂದು ಪ್ರಬಲವಾದ ಸಂದೇಹ.

ಹೀಗೆ ಡೋಲಾಯಮಾನಚಿತ್ತನಾಗಿ ಅಗ್ನಿವಾಯುಗಳನ್ನು ಕರೆಸಿಕೊಂಡನು. ಪಾತಾಳದಲ್ಲಿ ದಾನವಕುಲವು ಏನು ಮಾಡುತ್ತಿರುವುದು ಎಂಬುದನ್ನು ತಿಳಿಯಬೇಕು ಎಂದು ಕೂತೂಹಲ. ಅಗ್ನಿಯು “ಮೊದಲು ವಿಶ್ವರೂಪನ ಕಳೇಬರವನ್ನು ಅವನ ತಂದೆಯಾದ ತ್ವಷ್ಟೃಬ್ರಹ್ಮನ ಬಳಿಗೆ ನಾವೇ ಕಳುಹಿಸಿಬಿಡೋಣ, ಇನ್ನೆಲ್ಲಿಂದಲೋ ಆತನಿಗೆ ವರ್ತಮಾನ ತಿಳಿಯುವುದಕ್ಕಿಂತ ಮುಂಚೆ ನಾವೇ ತಿಳಿಸುವುದೇ ಸರಿ” ಎಂದು ಹೇಳಿದನು. ಇಂದ್ರನು ಅದನ್ನು ಒಪ್ಪಿಕೊಂಡು ಆತನ ಮುಖಾಂತರವೇ ಆ ಕಳೇಬರವನ್ನೂ ರುಂಡ ಮುಂಡಗಳನ್ನೂ ಪ್ರತ್ಯೇಕವಾಗಿಟ್ಟು ತ್ವಷ್ಟೃಬ್ರಹ್ಮನ ಬಳಿಗೆ ಕಳುಹಿಸಿದನು. ಆ ಕಳೇಬರಕ್ಕೆ ಚಂದನಾದಿ ಸುಗಂಧದ್ರವ್ಯಗಳನ್ನು ಲೇಪಮಾಡಿ, ಆತನ ಅಂತಸ್ತಿಗೆ ತಕ್ಕಂತೆ ವಸ್ತ್ರಭೂಷಣಗಳನ್ನು ಅಳವಡಿಸಲಾಗಿತ್ತು.

ಇತ್ತ ವಾಯುವು ಇಂದ್ರನಾಜ್ಞೆಯಂತೆ, ಪಾತಾಳಲೋಕಕ್ಕೆ ಹೋಗಿಬಂದನು. “ದಾನವರೆಲ್ಲರೂ ಸೇರಿ ವಿಶ್ವರೂಪನ ವಿಶ್ವಾಸದಿಂದ ತಮಗೆ ಲಭಿಸಿದ ತೇಜಸ್ಸನ್ನೆಲ್ಲಾ ಸಮೂಹಗೊಳಿಸಿ, ಅದನ್ನು ತಮಗೆ ಜಯಪ್ರಾಪ್ತಿಯಾಗುವಂತೆ ಪ್ರಾರ್ಥಿಸಿದರು. ಆ ತೇಜಸ್ಸು “ನಾನು ಏನಿದ್ದರೂ ನಿಮ್ಮನ್ನು ಕಾಪಾಡಬಲ್ಲೆನಲ್ಲದೆ, ದೇವತೆಗಳ ತೇಜಸ್ಸನ್ನು ನುಂಗುವಷ್ಟು ಶಕ್ತಿ ನನಗಿಲ್ಲ. ನೀವು ಹೋಗಿ ತ್ವಷ್ಟೃಬ್ರಹ್ಮನನ್ನು ರೇಗಿಸಿ, ಆತನಿಗೆ ಇಂದ್ರಶತ್ರುವೊಬ್ಬನು ಹುಟ್ಟುವಂತೆ ಒಂದು ಯಾಗ ಮಾಡಿಸಿ, ಅಂಥವನು ಬಂದರೆ, ಆತನಿಗೆ ತನ್ನ ಬಲವನ್ನೂ ಕೊಟ್ಟು ನಿಮ್ಮನ್ನು ಗೆಲ್ಲಿಸುವೆನು’ ಎಂದಿತು. ಈಗ ದಾನವೇಂದ್ರರೆಲ್ಲಾ ತ್ವಷ್ಟೃವಿನ ಬಳಿ ಹೋಗಲಿರುವರು” ಎಂದು ಹೇಳಿದನು.

ಇಂದ್ರನು ಅದನ್ನು ಕೇಳಿ ದಾನವಪ್ರಯತ್ನವು ನಡೆಯದಂತೆ, ತಾನೇ ವಸ್ತ್ರಭೂಷಣಾದ್ಯಲಂಕಾರಗಳನ್ನು ತೆಗೆದುಕೊಂಡು ತ್ವಷ್ಟೃಬ್ರಹ್ಮನ ದರ್ಶನ ಮಾಡಿ ಅ ದಂಪತಿಗಳನ್ನು ಸಾಂತ್ವವಚನಗಳಿಂದ ಆರಾಧಿಸಿ ಅವರ ಕೋಪವನ್ನು ನೀಗಿ ಬರುವುದು ಎಂದುಕೊಂಡನು.

* * * *