ಮಹಾಕ್ಷತ್ರಿಯ/ಪೀಠಿಕೆ

ವಿಕಿಸೋರ್ಸ್ ಇಂದ
Jump to navigation Jump to search

==ಪೀಠಿಕೆ==

ಮಹಾಕ್ಷತ್ರಿಯ ಒಂದು ಪೌರಾಣಿಕ ಕಾದಂಬರಿ. ಖ್ಯಾತನಾಮರಾದ ಶ್ರೀ ದೇವುಡು ನರಸಿಂಹಶಾಸ್ತ್ರಿಗಳ ಸುವರ್ಣ ಲೇಖನಿಯಿಂದ ರೂಪುತಾಳಿದ ಅಚ್ಚುಕಟ್ಟಾದ ಸುಂದರ ಕಾದಂಬರಿ. ಕನ್ನಡಕ್ಕೆ ಹೊಸತಾದ, ಅಷ್ಟೇ ಏಕೆ, ಭಾರತೀಯ ಸಾಹಿತ್ಯ ಭಂಡಾರಕ್ಕೆ ರತ್ನಪ್ರಾಯವಾದ ಕೃತಿ. ನಮ್ಮ ಸಂಸ್ಕೃತಿಯ ಸಾರವನ್ನೆಲ್ಲಾ ಎರಕ ಹೊಯ್ದಿದ್ದಾರೆ ದೇವುಡು. ವಸ್ತು ಪೌರಾಣಿಕವಾದರೂ, ಅದನ್ನು ಸರಳ ಸುಂದರ ಶೈಲಿಯಲ್ಲಿ ಬೆಳೆಸಿಕೊಂಡು ಹೋಗಿದ್ದಾರೆ.

ದೇವುಡು ಸಂಸ್ಕೃತದಲ್ಲಿಯೂ, ಇಂಗ್ಲಿಷಿನಲ್ಲಿಯೂ ಉದ್ದಾಮ ಪಂಡಿತ ರಾಗಿದ್ದರು. ಮಹಾಮಹೋಪಾಧ್ಯಾಯ ಶ್ರೀ ವೈದ್ಯನಾಥಶಾಸ್ತ್ರಿಗಳ ಬಳಿಯಲ್ಲಿ ಮೀಮಾಂಸಾಶಾಸ್ತ್ರವನ್ನು ಅಭ್ಯಾಸ ಮಾಡಿದ್ದರು. ಸಾಹಿತ್ಯ, ಪುರಾಣ, ವೇದಾಂತ ಎಲ್ಲವನ್ನೂ ಆಳವಾಗಿ ಅಭ್ಯಾಸ ಮಾಡಿ ಅರಗಿಸಿಕೊಂಡಿದ್ದರು. ಅವರ ಲೇಖನಿಯಿಂದ ಇಂತಹ ಒಂದು ಅಮೋಘಕೃತಿ ಹೊರಬಂದುದು ಕನ್ನಡಿಗರ ಭಾಗ್ಯವೆಂದೇ ಹೇಳ ಬೇಕು. ದೇವುಡು ಅವರ ಬಹುಮುಖ ಪಾಂಡಿತ್ಯದ ಬಗೆಗೆ ಒಂದು ಸಂದರ್ಭವನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

೧೯೪0ನೇ ವರ್ಷದ ಅಕ್ಟೋಬರ್ ತಿಂಗಳಿರಬಹುದು. ದೇವುಡು ಚನ್ನರಾಯ ಪಟ್ಟಣದ ಕರ್ನಾಟಕ ಸಂಘದ ಆಶ್ರಯದಲ್ಲಿ ತಮ್ಮ ``ಅಕ್ಷರ ಪ್ರಚಾರ’’ ಯೋಜನೆಗೆ ಕಾರ್ಯಕರ್ತರನ್ನು ತರಪೇತಿ ಮಾಡಲು ಒಂದು ಶಿಬಿರವನ್ನು ನಡೆಸುತ್ತಿದ್ದರು. ಸುಮಾರು ೬0-೭0 ಮಂದಿ ಕಾರ್ಯಕರ್ತರು ಅಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಆ ಹಾಸನದ ಜಿಲ್ಲಾಧಿಕಾರಿಗಳಾಗಿದ್ದ ದಿವಂಗತ ಶ್ರೀ ಟಿ.ರಾಮಯ್ಯನವರು ಕರ್ನಾಟಕ ಸಂಘಗಳಿಗೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ದೇವುಡು ಅವರ ಪ್ರಚಾರ ಕಾರ್ಯಕ್ಕೆ ಸರ್ಕಾರದಿಂದ ಸ್ವಲ್ಪ ಧನಸಹಾಯವನ್ನೂ ಅವರು ಕೊಡಿಸಿದ್ದರು. ಅದೇ ಕಾಲದಲ್ಲಿ ಅಲಹಾಬಾದ್ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿದ್ದ ಡಾ|| ಅಮರನಾಥ ಝಾ ಅವರು ಮೈಸೂರು ವಿಶ್ವವಿದ್ಯಾನಿಲಯದ ಆ ವರ್ಷದ ಘಟಿಕೋತ್ಸವಕ್ಕೆ ದಯಮಾಡಿಸಿದ್ದರು. ಶ್ರವಣಬೆಳಗೊಳಕ್ಕೆ ಹೋಗುವ ಮಾರ್ಗದಲ್ಲಿ ಜಿಲ್ಲಾಧಿಕಾರಿಗಳು ಸ್ವಲ್ಪ ಹೊತ್ತು ಡಾ|| ಝಾರವರಿಗೂ, ಕಾರ್ಯಕರ್ತರಿಗೂ ಭೇಟಿ ಏರ್ಪಡಿಸಿದ್ದರು.

ದೇವುಡು, ಝಾರವರ ನಡುವೆ `ಭಾರತೀಯ ದರ್ಶನ’ದ ಬಗ್ಗೆ ವಿಚಾರ ವಿನಿಮಯ ನಡೆಯಿತು. ಅದೊಂದು ರಸದೌತಣ. ದೇವುಡುರವರ ಜ್ಞಾನ ಸಂಪತ್ತನ್ನೂ ವಾಗ್ವೈಖರಿಯನ್ನೂ ಕಂಡು ಡಾ|| ಅಮರನಾಥ ಝಾ ಮುಗ್ಧರಾಗಿ ಹೋದರು. ``ನಮ್ಮ ತಂದೆ ದೊಡ್ಡ ಸಂಸ್ಕೃತ ವಿದ್ವಾಂಸರಾಗಿದ್ದರು. ಆದರೆ ನನಗೆ ಮೀಮಾಂಸೆ ಏನೂ ಗೊತ್ತಿಲ್ಲ’’ ಎಂದು ಸಂಕೋಚದಿಂದ ನುಡಿದರು. ``ನಿಮ್ಮ ಪಾಂಡಿತ್ಯ ಅಗಾಧ ವಾದುದು. ಅದನ್ನೆಲ್ಲಾ ಜನರಿಗೆ ಕೊಡುವ ಪ್ರಯತ್ನ ಮಾಡಿ’’ ಎಂದು ಸೂಚಿಸಿ ದೇವುಡು ಅವರನ್ನು ಅಭಿನಂದಿಸಿದರು.

ಜನಸಾಮಾನ್ಯರಿಗೆ ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ತಿಳಿಸಲು ದೇವುಡು ಆದಷ್ಟು ಪ್ರಯತ್ನ ಮಾಡಿದರು. ಚನ್ನರಾಯಪಟ್ಟಣದ ತಾಲ್ಲೂಕಿನಲ್ಲಿಯೇ ಅವರು ಪ್ರವಾಸ ಮಾಡಿ ಗೀತೆ, ಉಪನಿಷತ್ತು, ಪುರಾಣಗಳು ಹಾಗೂ ಮಹಾ ಕಾವ್ಯಗಳನ್ನು ಕುರಿತು ಉಪನ್ಯಾಸ ಮಾಡಿದರು. ಜನತೆಗೆ ನಮ್ಮ `ದರ್ಶನ’ದ ಪರಿಚಯ ಮಾಡಿಸಲು ಅವರು ತವಕಿಸುತ್ತಿದ್ದರು. ಅವರೊಂದಿಗೆ ಸಂಭಾಷಿಸುವು ದೆಂದರೆ ಅದೊಂದು ದೊಡ್ಡ ಹಬ್ಬ. ವಾದದಲ್ಲಿ, ಸರಸ ಸಂಭಾಷಣೆಯಲ್ಲಿ ಚತುರರು ದೇವುಡು. ಕಾಲ, ದೇಶಗಳ ಪರಿವೆಯಿಲ್ಲದೆ ಗಂಟೆಗಟ್ಟಲೆ ಸಂಭಾಷಣೆಯಲ್ಲಿ ತೊಡಗಿರುತ್ತಿದ್ದ ಅವರ ಪ್ರತಿಭೆ ಅನನ್ಯ; ಅಸಾಧಾರಣವಾದುದು.

ಸಾಹಿತ್ಯ, ವೇದಾಂತ, ನಾಟಕ, ರಾಜಕಾರಣ, ಕಾಮಶಾಸ್ತ್ರದಿಂದ ಹಿಡಿದು ಗೀತಾಶಾಸ್ತ್ರದ ತನಕ ಅವರಿಗೆ ಅದ್ಭುತ ಪರಿಶ್ರಮವಿತ್ತು. ನಾಟಕ, ಸಿನಿಮಾ ಕ್ಷೇತ್ರಗಳಲ್ಲಿಯೂ ಅವರು ಹೆಸರು ಸಂಪಾದಿಸಿದ್ದರು. `ಮಂಡೋದರಿ’ ನಾಟಕದಲ್ಲಿ ರಾವಣನ ಪಾತ್ರ ಅವರದು. ಬ್ರಹ್ಮವಾದಿ, ನಚಿಕೇತ ಮುಂತಾದ ಸಿ.ಕೆ.ವಿ. ಅವರ ನಾಟಕಗಳಲ್ಲಿಯೂ ಅವರು ಪಾತ್ರ ವಹಿಸಿದ್ದರು. `ರಂಗಭೂಮಿ’ ಮತ್ತು `ನಮ್ಮ ಪುಸ್ತಕ’ ಪತ್ರಿಕೆಗಳ ಸಂಪಾದಕರಾಗಿಯೂ ಕೆಲಸ ಮಾಡಿದ್ದರು. ದಾರಿಯಲ್ಲಿ ಸಿಕ್ಕಿದರೆ ಸಾಕು ಅವರಿಂದ ಬಿಡಿಸಿಕೊಂಡು ಪಾರಾಗಲು ಸಾಧ್ಯವಾಗುತ್ತಲೇ ಇರಲಿಲ್ಲ. ಸಾಕ್ರೆಟೀಸನ ಹಾಗೆ ಸಂಭಾಷಣೆಯಲ್ಲಿ ತೊಡಗುತ್ತಿದ್ದರು. ಹಿಂದೆ ಇದ್ದ ಸಾಕ್ರೆಟೀಸ್ ಕುರೂಪಿ. ಆದರೆ ಈ ನವ ಸಾಕ್ರೆಟೀಸ್ ತೇಜಸ್ವಿ; ಆಜಾನುಬಾಹು, ಕಂಚಿನಂತಹ ಕಂಠ. ಅವರು ಸ್ನೇಹಿತರನ್ನು ತಮ್ಮ ತೋಳಿನಲ್ಲಿ ಬಾಚಿ ಅಪ್ಪಿಕೊಂಡರೆ ಅವರ ಗತಿ ತೀರಿದ ಹಾಗೆ.

ಜೀವನದಲ್ಲಿ ದೇವುಡು ಅಷ್ಟೇನು ಭಾಗ್ಯಶಾಲಿಯಾಗಿರಲಿಲ್ಲ. ಆರ್ಥಿಕ ದೃಷ್ಟಿಯಿಂದ ಅವರ ಸ್ಥಿತಿ ಒಮ್ಮೊಮ್ಮೆ ಕಠಿಣವಾಗಿರುತ್ತಿತ್ತು. ಎಂತಹ ಸಂದರ್ಭದಲ್ಲಿಯೂ ಅವರು ಇನ್ನೊಬ್ಬರಿಗೆ ತಲೆಬಾಗಲು ಇಚ್ಛಿಸುತ್ತಿರಲಿಲ್ಲ. ಹಂಗಿನ ಬಾಳು ಅವರಿಗೆಂದೂ ಹಿಡಿಸಲಿಲ್ಲ. ಸ್ವಾತಂತ್ರ್ಯ ಅವರ ಜನ್ಮಸಿದ್ಧವಾದ ಹಕ್ಕು. ಎಂ.ಎ. ಪದವೀಧರರಾಗಿದ್ದ ಅವರು ಯಾವ ಹುದ್ದೆಗೆ ಸೇರಿದ್ದರೂ ಕೊನೆಯ ವೇಳೆಗೆ ೪00-೫00 ರೂ. ವೇತನ ಪಡೆಯುವದು ಸಾಧ್ಯವಾಗಿತ್ತು. ಅವರು ಅದಕ್ಕಾಗಿ ಒದ್ದಾಡಲಿಲ್ಲ. ಯಾಚಿಸಲಿಲ್ಲ. ``ನನ್ನ ಸೇವೆ ಬೇಡವಾದರೆ ನಷ್ಟ ದೇಶಕ್ಕೆ ಹೊರತು `ದೇವುಡು’ವಿಗಲ್ಲ’’ ಎಂದು ಒಮ್ಮೊಮ್ಮೆ ಮಾತಾಡುತ್ತಿದ್ದುದುಂಟು.

ತಮ್ಮ ಸಲುವಾಗಿ ದೇವುಡು ಯಾರನ್ನೂ ಬೇಡಲಿಲ್ಲ. ಸ್ನೇಹಿತರಿಗಾಗಿ ಇದ್ದು ಬದ್ದುದನ್ನೆಲ್ಲಾ ವೆಚ್ಚ ಮಾಡಿ ಬರಿಕೈ ಮಾಡಿಕೊಳ್ಳುವ ಚಟ ಅವರದು. ಐದು ರೂಪಾಯಿ ತಮ್ಮಲ್ಲಿದ್ದರೆ ಸಾಕು. ಇದ್ದಬದ್ದ ಸ್ನೇಹಿತರಿಗೆಲ್ಲಾ ತಿಂಡಿತೀರ್ಥಗಳ ಸಮಾರಾಧನೆ! ಎದುರಿಗೆ ಬಂದ ಸ್ನೇಹಿತರನ್ನೆಲ್ಲಾ ಕರೆದುಕೊಂಡು ಫಲಾಹಾರ ಮಂದಿರಕ್ಕೆ ಹೋಗುತ್ತಿದ್ದರು. ದೇವುಡು ಸ್ನೇಹಪರರು. ಅವರು ಪಾಂಡಿತ್ಯದಲ್ಲಿ ಅನುಭವದಲ್ಲಿ ಬಲುದೊಡ್ಡವರಾದರೂ, ಸರಳತೆಯ ಮೂರ್ತಸ್ವರೂಪವೆನಿಸಿದ್ದರು. ಅವರಿಗೆ ಅಹಂಕಾರವೂ ಇರಲಿಲ್ಲ. ಹಾಗೆಯೇ ದಾಕ್ಷಿಣ್ಯಪರತೆಯೂ ಇರಲಿಲ್ಲ.

`ಮಹಾಕ್ಷತ್ರಿಯ’ ಕಾದಂಬರಿಕರ್ತೃಗಳಾದ ದೇವುಡು ಅವರ ಮನಃಪರಿಪಾಕ ವ್ಯಕ್ತಿತ್ವ ಇಂತಹುದು. `ಸರಳ ಜೀವನ, ಉದಾತ್ತ ವಿಚಾರಗಳ ಚಿಂತನೆ’ ಅವರ ವ್ಯಕ್ತಿತ್ವದ ವಿಶೇಷ ಗುಣ. ದೇವುಡು ಸ್ವಭಾವವನ್ನು ಚೆನ್ನಾಗಿ ತಿಳಿದುಕೊಳ್ಳದೆ, ಅವರ ಗ್ರಂಥಗಳ ಶ್ರೇಷ್ಠತೆಯನ್ನು ಒರೆಹಚ್ಚುವುದು ಸುಲಭವಲ್ಲ.

ಈ ಕಾದಂಬರಿಯಲ್ಲಿ ನಾಯಕ ನಹುಷನು ಮಹಾಕ್ಷತ್ರಿಯನೆನಿಸಿಕೊಂಡಿದ್ದಾನೆ. ಮಾನವೇಂದ್ರನಾದ ಆತನು, ಮಾನವಲೋಕದ ಹಿರಿಮೆಯನ್ನು ದೇವಲೋಕದಲ್ಲಿ ಸ್ಥಾಪಿಸಿದ ಮಹಾನುಭಾವ. ಈ ಮಾನವೇಂದ್ರನ ಮುಂದೆ ದೇವೇಂದ್ರ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಕಾಣುತ್ತಾನೆ. ದೇವಲೋಕದಲ್ಲಿ ತನಗೆ ದೊರೆತ ಅವಕಾಶವನ್ನು ತನ್ನ ಕುಲದ ಶ್ರೇಷ್ಠತೆಯನ್ನು ಹೆಚ್ಚಿಸಿಕೊಳ್ಳಲು ಉಪಯೋಗಿಸಿಕೊಂಡನು. ಚ್ಯವನಾದಿ ಮಹರ್ಷಿಗಳ ಉಪದೇಶದಿಂದ, ಧರ್ಮಾಚರಣೆಯಿಂದ ತಾನು ಮೊದಲೇ ಪಡೆದಿದ್ದ ಅಮೂಲ್ಯವಾದ ಜ್ಞಾನದ ಭಂಡಾರವನ್ನು ಇನ್ನೂ ಶ್ರೀಮಂತವನ್ನಾಗಿ ಮಾಡಿಕೊಂಡನು. ಇಂದ್ರನಿಂದ, ಯಮನಿಂದ, ಬೃಹಸ್ಪತಿಯಿಂದ, ಸಪ್ತರ್ಷಿಗಳಿಂದ ತನಗೆ ಬೇಕಾದುದ ನ್ನೆಲ್ಲಾ ಸಂಗ್ರಹಿಸಿಕೊಂಡು, ತನ್ನ ಜೀವನವನ್ನು ಸಾರ್ಥಕಪಡಿಸಿಕೊಂಡನು. ದೇವಲೋಕ ದಲ್ಲಿದ್ದರೂ, ಮಾನವಧರ್ಮವನ್ನು ಮಾತ್ರ ಬಿಡದೇ ಜಾಗರೂಕನಾಗಿದ್ದನು.

ದೇವತೆಗಳಿಗೆ ಆಡಳಿತವೂ ಬಾರದು. ಇಂದ್ರನು ಬರಿಯ ಸುಖಲೋಲುಪನಾಗಿ, ಆಡಳಿತದಲ್ಲಿ ಹೆಚ್ಚಿನ ಆಸಕ್ತಿ ಇಟ್ಟಿರಲಿಲ್ಲವೇನೋ ಎನಿಸುತ್ತದೆ. ಅಲ್ಲದೆ ದೇವತೆಗಳಿಗೂ ಅಸೂಯೆ ತಪ್ಪಿದ್ದಲ್ಲ. ಸಮಯಬಂದಾಗ ಉಪಯೋಗಿಸಿಕೊಂಡು, ಬೇಡವಾದಾಗ ತಳ್ಳಿಬಿಡುವ ದೇವತೆಗಳ ಕ್ಷುಲ್ಲಕತನವನ್ನು ಬಯಲಿಗೆಳೆದು ಅವರಿಗೆ ಬುದ್ಧಿಗಲಿಸಿದ. ಅವರ ಒಳಸಂಚಿಗೆ ತಾನು ಒಳಗಾಗದೇ ತನ್ನ ಆಡಳಿತದ ಸಾಮಥರ್ಯ್‌ವನ್ನೂ, ವಿವೇಚನಾ ಶಕ್ತಿಯನ್ನೂ ಚೆನ್ನಾಗಿ ಪ್ರಕಟಿಸಿ `ಭಲೆ ನಹುಷ! ಅಧಿಕಾರವಿದ್ದರೆ ದೊಡ್ಡದಲ್ಲ. ಅದನ್ನು ಸರಿಯಾಗಿ ಉಪಯೋಗಿಸುವದಕ್ಕೂ ಸಾಮಥರ್ಯ್‌ ಬೇಕು’ ಎಂದು ಸ್ವತಃ ದೇವತೆಗಳಿಂದಲೇ ಹೊಗಳಿಸಿಕೊಳ್ಳುವ ಪುಣ್ಯ ಅವನಿಗಿತ್ತು.

ದೇವೇಂದ್ರನ ಧರ್ಮಪತ್ನಿ ಶಚೀದೇವಿ, ನಹುಷೇಂದ್ರನ ದೊಡ್ಡತನವನ್ನು ಮೆಚ್ಚಿಕೊಂಡಳು. ಬೃಹಸ್ಪತ್ಯಾಚಾರ್ಯರು, ಶುಕ್ರಾಚಾರ್ಯರು ಆತನನ್ನು ಹೊಗಳಿದರು. ನಹುಷನ ನ್ಯಾಯನಿಷ್ಠೆಗೆ, ಮನಸ್ಸಿನ ಸಮತೆಗೆ ಸಪ್ತರ್ಷಿಗಳೂ ಚಕಿತರಾದರು. ಪರಿಗ್ರಹಕ್ಕಿಂತ ತ್ಯಾಗವೇ ದೊಡ್ಡದು. ಭೋಗದಿಂದ ಶಕ್ತಿ ಕ್ಷಯ, ತೇಜಸ್ಸಿನ ಹ್ರಾಸ. ಭೋಗವನ್ನು ನಿರಾಕರಿಸಿ ತ್ಯಾಗವನ್ನು ಎತ್ತಿಹಿಡಿದ ನಹುಷನು `ಅತೀಂದ್ರ’ ಎನ್ನಿಸಿ ಕೊಂಡನು. ತನ್ನ ಪತಿ ದೇವೇಂದ್ರನಿಗಿಂತಲೂ ನಹುಷನು ಹೆಚ್ಚು ಎಂಬ ಭಾವನೆ ಶಚಿಯಲ್ಲಿ ಅಂಕುರಗೊಳ್ಳುವಂತೆ ಆತನ ನಡತೆ ನಿರ್ದುಷ್ಟಮುಕ್ತ. ಭಯಗ್ರಸ್ಥಳಾದ `ಪರವಧು’ವಿಗೆ ಅಭಯದ ವಜ್ರಕವಚವಿಟ್ಟು ಆಕೆಯಿಂದಲೂ ವರಗಳನ್ನು ಪಡೆದುಕೊಂಡನು.

ದೇವುಡು ಅವರ ಈ ಕಲ್ಪನೆ ಅದ್ಭುತರಮ್ಯವಾಗಿದೆ. ನಹುಷನು ವಿಷಯ ಲಂಪಟನಾಗಿ ಶಚಿಯನ್ನು ಬಯಸಿ ಶಾಪಗ್ರಸ್ಥನಾದನೆಂಬ ಸಾಮಾನ್ಯ ಪ್ರಚಲಿತ ಸಂದರ್ಭವನ್ನು ಕೈಬಿಟ್ಟು, ನಹುಷನ ನಿಜವಾದ ವ್ಯಕ್ತಿತ್ವದ ಪ್ರಕಾಶನಕ್ಕೆ ಎಡೆ ಮಾಡಿ ಕೊಟ್ಟಿರುವುದು ಉಚಿತವಾಗಿಯೇ ಇದೆ. ನಹುಷ ಧರ್ಮಪ್ರಭು; ಏಕಪತ್ನೀ ವ್ರತಸ್ಥ. ವಿರಜಾದೇವಿಯಂತಹ ಭಾಗ್ಯಶಾಲಿನಿಯಾದ ಸಾಧ್ವೀಮಣಿ ಆತನ ಛಾಯಾನುವರ್ತಿ ಯಾಗಿರುವಾಗ, ನಹುಷನು ದಾರಿತಪ್ಪಿದನೆಂದು ಹೇಳುವುದು ಆ ರಾಜರ್ಷಿಯ ಧವಳಕೀರ್ತಿಯನ್ನು ಮಲಿನಗೊಳಿಸಿದಂತಾಗುತ್ತದೆ. ಇದು ಅಸಂಭವ. ಕುತೂಹಲಕ್ಕಾಗಿ ಆತನು `ಶಚೀ’ ರಹಸ್ಯವನ್ನರಿಯಲು ಆಶಿಸಿದ. ದೇವತೆಗಳ ಮೋಸದ ಮುಖ ವಾಡವನ್ನು ಕಳಚಿ, ಅವರ ನಿಜಸ್ವರೂಪವನ್ನು ಪ್ರಕಟಿಸುವುದೇ ಆತನು ಹಾಗೆ ಮಾಡಿದುದರ ಉದ್ದೇಶವೆಂಬ ಕಲ್ಪನೆ ಸಾಧುವಾಗಿದೆ. ಶಚಿಗೆ ಪತಿಯನ್ನು ದೊರಕಿಸಿ ಕೊಟ್ಟನು. ಮೂಲೆಗುಂಪಾಗಿ ಎಲ್ಲಿಯೋ ಅವಿತಿದ್ದ, ಇಂದ್ರನನ್ನು ಮಹಾವಿಪತ್ತಿನಿಂದ ಪಾರುಮಾಡಿ, ಆತನನ್ನು ಅಮರಾವತಿಗೆ ಕರೆಸಿಕೊಂಡನು. ತನ್ನ ಅಧಿಕಾರವನ್ನು ಪ್ರಯೋಗಿಸುವ ಇಚ್ಛೆ ಆತನಿಗೆ ಸಾಮಾನ್ಯವಾಗಿರಲಿಲ್ಲ. ಆದರೆ ಪರಿಸ್ಥಿತಿಯ ಒತ್ತಾಯದಿಂದ ಅದನ್ನು ಪ್ರಯೋಗಿಸಬೇಕಾಗಿ ಬಂದಾಗ, ಸ್ವಲ್ಪವೂ ಧೃತಿಗೆಡದೆ, ದೃಢವಾದ ನಿರ್ಧಾರವನ್ನು ಕೈಗೊಂಡುದು ಆತನ ಆಡಳಿತ ಸಾಮಥರ್ಯ್‌ವೆಷ್ಟು ಎಂಬುದನ್ನು ತೋರಿಸುತ್ತದೆ. ತನ್ನ ಪರಮಾಧಿಕಾರವನ್ನು ಉಪಯೋಗಿಸಿ ಹತ್ಯೆಯನ್ನು ಧ್ವಂಸಮಾಡಿ, ಇಂದ್ರನನ್ನು ಕರೆಸಲೇಬೇಕೆಂದು ಆತನು ಘೋಷಿಸಿದಾಗ ದೇವ ಲೋಕವೆಲ್ಲ ಒಮ್ಮೆ ಕಂಪಿಸಿತು. ಆಚಾರ್ಯದ್ವಯರು ಸ್ತಂಭಿತರಾದರು. ಅಗ್ನಿ ವಾಯುಗಳಿಗೆ ತಮ್ಮ ಅಧಿಕಾರಗಳ ಸ್ವಸ್ವರೂಪ ಜ್ಞಾನ ಉದಯಿಸಿತು. ಹತವೀರ್ಯರಾಗಿದ್ದ ಅವರು ಧೈರ್ಯಸಾಹಸಗಳನ್ನು ತಂದುಕೊಂಡು, ``ಮೊದಲೇ ಹೀಗೆ ಆಜ್ಞೆ ಮಾಡಿದ್ದರೆ ನಾವು ತಪ್ಪದೇ ನೆರವೇರಿಸುತ್ತಿದ್ದೆವು. ಈ ಮೊದಲೇ ಇಂತಹ ಅನುಜ್ಞೆ ಕೊಟ್ಟವರೇ ಇಲ್ಲ’’ ಎಂದುಕೊಂಡು ಕರ್ತವ್ಯ ತತ್ಪರರಾದರು.

ದೇವತೆಗಳಿಗೂ ತೋಚದೆ ಪೆಚ್ಚುಮೋರೆ ಹಾಕಿಕೊಂಡು ಕುಳಿತಿದ್ದ ಸಂಧಿ ಕಾಲದಲ್ಲಿ ನಹುಷ ಅಧಿಕಾರವನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟ. ದೇವೇಂದ್ರನು ಬಂದಾಗ ನಹುಷನು ಏನು ಮಾಡುವನೋ ಎಂದು ಚಿಂತಿಸುತ್ತಿದ್ದಾಗ ತಾನೇ ಅವನಿಗಾಗಿ ಸಿಂಹಾಸನವನ್ನು ತ್ಯಾಗ ಮಾಡಿದನು.

ವಿರಜಾದೇವಿ ನಹುಷನ ಧರ್ಮಪತ್ನಿ. ದೇವಕನ್ಯೆಯಾದರೂ ಮನುಷ್ಯ ಲೋಕದ ಧರ್ಮವನ್ನು ಬಿಡಲಿಲ್ಲ. ನಹುಷನನ್ನು ಸದಾ ಅನುಸರಿಸುತ್ತ ಆತನ ಧರ್ಮ ಸಂಪಾದನಾ ಕಾರ್ಯದಲ್ಲಿ ನೆರವಾಗಿದ್ದಳು. ಪತಿಗೆ ಇಂದ್ರಪದವಿ ಬಂದುದು ಅವಳಿಗೆ ಸಂತೋಷ. ಅದನ್ನು ಬಿಡಬೇಕಾಗಿ ಬಂದಾಗ ಆಕೆಯು ತನ್ನ ಸಮ್ಮತಿಯನ್ನು ನೀಡಲು ಹಿಂಜರಿಯಲಿಲ್ಲ. ಇಂದ್ರಪದವಿಯನ್ನು ಬಿಟ್ಟಮೇಲೆ, ತಾನು ಮತ್ತೆ ರಾಜ್ಯವಾಳಲು ನಹುಷನು ಸಿದ್ಧನಾಗಿರಲಿಲ್ಲ. ಮಗನಾದ ಯಯಾತಿಗೆ ಅದನ್ನು ಬಿಟ್ಟುಕೊಟ್ಟಿದ್ದನು. ನಹುಷನು ಆರಿಸಿಕೊಂಡದ್ದು ತಪಸ್ಸು ಅರಣ್ಯವಾಸ. ವಿರಜಾದೇವಿಗೆ ಅದೂ ಸಂತೋಷಕರವಾಗಿಯೇ ಇತ್ತು. ವಿರಜೆಯಂತಹ ಸತೀರತ್ನವನ್ನು ಪಡೆದಿದ್ದ ನಹುಷನು ಇಂದ್ರಪತ್ನಿಯಾದ ಶಚೀದೇವಿಯನ್ನು ಬಯಸಿದನೆಂದು ಭಾವಿಸುವುದು ಮೂರ್ಖತನದ ಪರಮಾವಧಿಯಲ್ಲವೆ?

ಸಪ್ತರ್ಷಿ ಶಿಬಿಕಾರೋಹಣ ಕಾಲದಲ್ಲಿ ಆತನಿಗೆ ಸಮಾಧಿ ಭಂಗವಾಗುವಂತೆ ನಿಯತಿ ಏರ್ಪಡಿಸಿದ್ದಳು. ವಿಧಿಯ ಇಚ್ಛೆಗೆ ತಲೆಬಾಗಿ, ಸ್ವಲ್ಪ ಸಮಾಧಿಭಂಗಕ್ಕೆ ಆತನು ಒಪ್ಪಬೇಕಾಯಿತು. ಸ್ವಸಂತೋಷದಿಂದಲೇ ಅದನ್ನು ಅವನು ಅಂಗೀಕರಿಸಿದ. ಏಳನೇ ದಿನ ಸಮಾಧಿ ಭಂಗವಾಯಿತು. ಇಂದ್ರನಾದುದರಿಂದ ತನಗೆ ತಾನೇ ಶಿಕ್ಷೆ ವಿಧಿಸಿಕೊಳ್ಳಬೇಕಾಯಿತು. ಋಷಿಗಳು ಆ ಕೆಲಸವನ್ನು ಮಾಡದೆ ನಹುಷನಿಗೆ ಒಂದು ಪರೀಕ್ಷೆಯನ್ನು ಒಡ್ಡಿದರು. ಅದರಲ್ಲಿಯೂ ಆತನು ಜಯಶಾಲಿಯಾದನು. ಸರ್ಪ ಜನ್ಮವೇ ಯೋಗ್ಯವೆಂದು ನಿರ್ಧರಿಸಿ ಆ ರೀತಿ ಶಿಕ್ಷೆ ವಿಧಿಸಿಕೊಂಡನು. ಭೂಲೋಕದಲ್ಲಿ ನ್ಯಾಯವಿತರಣೆ ಮಾಡಿ ಧರ್ಮಪ್ರಭುವೆಂಬ ಖ್ಯಾತಿಪಡೆದಿದ್ದ ಆತನು ಇಂದ್ರಪದವಿ ಯಲ್ಲಿಯೂ ಇದೇ ರೀತಿ ನ್ಯಾಯನಿಷ್ಠೆಯನ್ನು ಪರಿಪಾಲಿಸಿದನು. ಬೇರೆಯವರಲ್ಲಿ ನಡೆಯುವಂತೆಯೇ, ತನ್ನ ವಿಷಯದಲ್ಲಿಯೂ ನಡೆದುಕೊಂಡನು. ಆ ಬಗೆಯ ಸಮಚಿತ್ತತೆ ಸಾಮಾನ್ಯರಿಗೆ ಬರುವದಿಲ್ಲ. ದೇವತೆಗಳೇ ಆತನನ್ನು ತಮ್ಮ ನಾಯಕನನ್ನಾಗಿ ಆರಿಸಿಕೊಂಡರೆಂದರೆ ಅದೇನು ಸಾಮಾನ್ಯ ವಿಷಯವೆ?

ಆತನಿಗೆ ಇಂದ್ರನಾದುದರಿಂದ ಮೂರು ಬಗೆಯ ಲಾಭಗಳು ದೊರಕಿದವು; (೧) ತನ್ನ ಜ್ಞಾನಭಂಡಾರವನ್ನು ಮತ್ತಷ್ಟು ತುಂಬಿಕೊಂಡನು. (೨) ಶಾಪ ವಿಮೋಚನೆ ಯಾದ ಮೇಲೆ ನಹುಷ ದಂಪತಿಗಳು ದೇವಲೋಕದಲ್ಲಿ ಇಂದ್ರಸಖರಾಗಿ ನಿರಂತರವಾಗಿ ವಾಸಿಸುವ ಆಹ್ವಾನವನ್ನು ಒಪ್ಪಿಕೊಂಡನು. (೩) ಇಂದ್ರನಾದುದರಿಂದ ಸರ್ಪಕ್ಕೆ ಜಾತಿಸ್ಮರತ್ವ, ಇಂದ್ರಾನಂದ ಎರಡೂ ಇರತಕ್ಕದೆಂದು ವರಪಡೆದನು.

ಶಾಪ ವಿಮೋಚನೆ ಮಾಡಲು ಬಂದಾಗ ಇಂದ್ರನನ್ನು ಕುರಿತು ಹೇಳಿದ; ``ನಾನಾಗಿ ಕೇಳಿದಾಗ ಶಾಪ ವಿಲೋಪಮಾಡುವಿಯಂತೆ. ಈಗ ನಾನೇನು ಬೇಡಲಿಲ್ಲವಷ್ಟೇ’’ ಎಂದು ವಿನಯದಿಂದ ಆತನ ಹಂಗನ್ನು ನಿರಾಕರಿಸಿದನು. ಪರರಿಗೆ ಎಲ್ಲವನ್ನು ದಾನ ಮಾಡಬಲ್ಲವನು, ಬೇರೊಬ್ಬರಿಂದ ದಾನ ಪಡೆಯುವುದೆ? ಇಲ್ಲಿಯೂ ನಹುಷನದೇ ಮೇಲುಗೈ. ಹೇಗೆ ನೋಡಿದರೂ ನಹುಷನು ಅತೀಂದ್ರ!

ಇನ್ನು ದೇವುಡು ಅವರ ಶೈಲಿಯ ಬಗೆಗೆ ಒಂದು ಮಾತು. ಸಂಸ್ಕೃತಕ್ಕೆ ಒಪ್ಪುವಂತಹ, ಕನ್ನಡಕ್ಕೆ ಆಕರ್ಷಕವಾಗಬಲ್ಲ ಒಂದು ಹೊಸಪರಿಯನ್ನು ಅವರು ಕಂಡುಕೊಂಡಿದ್ದಾರೆ. ತಿಳಿಯಾದ, ಹದವಾದ ಗಂಭೀರಶೈಲಿ, ಮಾತು ತುಂಬಾ ಸರಳವಾದರೂ ಬಂಧದಲ್ಲಿ ಬಿಗುವಿದೆ. ವಿದಗ್ಧೆಯಾದ ಮಹಿಳಾಮಣಿಯಂತೆ ಗಂಭೀರವಾಗಿದೆ ಅವರ ಶೈಲಿ.

ವೇದಾಂತದ ಪ್ರಕ್ರಿಯೆಗಳನ್ನು ಸರಳವಾಗಿ ಹೇಳಲು ಪ್ರಯತ್ನಮಾಡಿದ್ದಾರೆ. ಬಲುಮಟ್ಟಿಗೆ ಯಶಸ್ಸನ್ನು ಗಳಿಸಿದ್ದಾರೆ. ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರಕಿದ ಈ ಗ್ರಂಥ ನಮ್ಮ ಸಂಸ್ಕೃತಿಯನ್ನು ಯಥಾವತ್ತಾಗಿ ಪ್ರತಿಬಿಂಬಿಸುವ ಅಮೋಘ ಕೃತಿ. ವೇದೋಪನಿಷತ್ತುಗಳಲ್ಲಿ, ಶ್ರುತಿಸ್ಮೃತಿಗಳಲ್ಲಿ ಹೇಳಿರುವುದರ ಸಾರವನ್ನೆಲ್ಲಾ ಸುಲಭವಾದ ಮಾತುಗಳಲ್ಲಿ ತಿಳಿಸಲು ಅವರು ಮಾಡಿರುವ ಪ್ರಯತ್ನಗಳು ಅಭಿನಂದನೀಯ. ಜ್ಞಾನ, ಅನುಭವದ ಮೂಸೆಯಲ್ಲಿ ಬೆಂದಾಗ ತನ್ನ ಕೊಳೆಯನ್ನೆಲ್ಲಾ ಕಳೆದುಕೊಂಡು ಅಪರಂಜಿಯಾಗುತ್ತದೆ. ಈ ಅಪರಂಜಿಯೇ ``ಮಹಾಕ್ಷತ್ರಿಯ.’’

ಮೂವರು ಇಂದ್ರರು

ದೇವಲೋಕವನ್ನು ಮೂವರು ಇಂದ್ರರು ಆಳಿದರು. ಅವರಲ್ಲಿ ನಿತ್ಯವಾದ ಮಹೇಂದ್ರ, ಸ್ವಲ್ಪಕಾಲ ವೃತ್ರನು ಇಂದ್ರಪದವಿಯಲ್ಲಿದ್ದನು. ಮಧ್ಯಮ ಲೋಕದ ಚಕ್ರವರ್ತಿಯಾದ ನಹುಷನು ಮೂರನೇ ಇಂದ್ರ. ಇವರಲ್ಲಿ ಯಾರು ಹೇಗೆ ಹೇಗೆ ಆಳಿದರು? ಅವರು ನಮ್ಮ ದೃಷ್ಟಿಯಲ್ಲಿ ಎಂತಹವರು? ಎಂಬುದನ್ನು ಈ ಕೃತಿ ಸ್ಪಷ್ಟಗೊಳಿಸುತ್ತದೆ.

ಒಮ್ಮೆ ಇಂದ್ರನು ದೇವಗುರು ಬೃಹಸ್ಪತಿಗಳ ವಿಚಾರದಲ್ಲಿ ನಡೆದುಕೊಂಡ ರೀತಿಯೇ ಎಲ್ಲಾ ಅನರ್ಥಗಳಿಗೂ ಕಾರಣವಾಯಿತು. ಮಹರ್ಷಿಗಳಿಗೆ ಯಾವುದೋ ವಿಚಾರದಲ್ಲಿ ಸಂದೇಹವುಂಟಾಯಿತು. ಅದನ್ನು ದೇವೇಂದ್ರನೇ ನಿವಾರಿಸಬೇಕೆಂದೂ ಸಪ್ತರ್ಷಿಗಳ ಅಪ್ಪಣೆಯಾಯಿತು. ``ದೇಹವು ನಾನಲ್ಲ ಎಂದು ತಿಳಿದಿದ್ದರೂ, ದೇಹಗತ ವಾಗಿರುವ ಮನೋಬುದ್ಧಿಗಳನ್ನು ಪ್ರತ್ಯೇಕಿಸುವುದೆಂತು?’’ ಎಂಬುದಾಗಿ ಮಹರ್ಷಿಗಳು ಪ್ರಶ್ನಿಸಿದರು.

ದೇವೇಂದ್ರನು ಉತ್ತರ ಹೇಳಲು ಸಿದ್ಧನಾಗಿ, ಅದಕ್ಕೆ ಬೇಕಾದ ಅನುಗ್ರಹ ಮುದ್ರೆಯನ್ನು ಧಾರಣೆ ಮಾಡಿದನು. ಆ ವೇಳೆಗೆ ದೇವಗುರು ಅಲ್ಲಿಗೆ ಬಂದರು. ಇಂದ್ರನನ್ನು ಹರಸಲು ಕೈಯೆತ್ತಿ ``ವಿಜಯೀ...’’ ಎನ್ನುವಷ್ಟರಲ್ಲಿ ಇಂದ್ರನು ತಮ್ಮ ಬಗೆಗೆ ಉದಾಸೀನನಾಗಿದ್ದಾನೆಂದು ಅವರು ಭಾವಿಸಿ ನಿಂತಲ್ಲಿಯೇ ಅಂತರ್ಧಾನ ಹೊಂದಿದ್ದರು. ದೇವತೆಗಳ ಸಂದೇಹವನ್ನು ನಿವಾರಿಸಿ ಬೀಳ್ಕೊಟ್ಟುದೇನೋ ಆಯಿತು. ಆದರೆ ಇಂದ್ರನಿಗೆ ತಾನು ಮಾಡಿದ್ದು ಸರಿಯಲ್ಲವೆಂದು ಭಾವನೆ ಉಂಟಾಯಿತು. `ಧರ್ಮಬ್ರಹ್ಮ ಪ್ರಶ್ನೆ’ಯನ್ನು ಧರ್ಮಾಂಗಣದಲ್ಲಿ ಬಿಡಿಸದೆ, ದೇವಸಭೆಯಲ್ಲಿ ವಿಮರ್ಶಿಸ ಹೊರಟಿದ್ದು ತಪ್ಪು ಎಂದು ಆತನಿಗೆ ತೋರಿತು. ಪೂರ್ಣಧ್ಯಾನದಲ್ಲಿದ್ದು `ಪುರಂದರ ಪ್ರಶ್ನೆ’ಯನ್ನು ಬಿಡಿಸುವದು ಅನಿವಾರ್ಯವಾಗಿತ್ತು. ದೇವಾಚಾರ್ಯರು ಅಷ್ಟುಹೊತ್ತಿಗೆ ಅಲ್ಲಿಗೆ ಬರಬೇಕೆ? ಧ್ಯಾನಮುದ್ರೆ ಬದಲಿಸಿದರೆ ಮಹರ್ಷಿ ಗಣಕ್ಕೆ ಕೋಪ ಬರಬಹುದು, ಹಾಗೆಯೇ ಇದ್ದುದರಿಂದ ಬೃಹಸ್ಪತಿಗಳಿಗೆ ಅಸಮಾಧಾನ, ತನ್ನ ತಪ್ಪು ತಿದ್ದಿಕೊಳ್ಳ ಬೇಕೆಂದು ಆತನು ನಿರ್ಧರಿಸಿದನು.

ಧರ್ಮಾಚಾರ್ಯನಿಲ್ಲದೆ ತ್ರಿಲೋಕಾಧಿಪತ್ಯವನ್ನು ಕಾಪಾಡಿಕೊಳ್ಳುವುದು ಕಷ್ಟ. ನಿಯತಕಾಲಿಕವಾದ ಕರ್ಮಗಳನ್ನು ಕಾಲವರಿತು ಮಾಡಿಸುವವನೇ ದೇವಗುರು. ಆತನಿಲ್ಲದೆ ಕರ್ಮಾಚರಣೆ ಎಲ್ಲಿ? ಕರ್ಮಲೋಪದಿಂದ ಧರ್ಮಲೋಪ. ಧರ್ಮ ಲೋಪದಿಂದ ಅಧರ್ಮದ ಪ್ರಾದುರ್ಭಾವ. ಅಸುರರಿಗೆ ಉಚ್ಛ್ರಾಯ ಕಾಲ. ಸೃಷ್ಟಿಕಾಲದಲ್ಲಿ ತಮಗೆ ದತ್ತವಾದ ಜಗತ್ತಿನ ಭೋಗ ಭಾಗ್ಯಗಳಾದ ಸಾಮಗ್ರಿಗಳನ್ನೆಲ್ಲ ಎಲ್ಲರಿಗೂ ಹಂಚುವ ಕೆಲಸವೂ ದೇವತೆಗಳದೇ. ಆದುದರಿಂದ ದೇವತೆಗಳಿಂದ ಜಗತ್ತಿಗೆ ಸುಖ. ಅಸುರರಿಂದ ದುಃಖ. ದೇವತೆಗಳು ಸುಖವನ್ನೂ, ಸುಖವನ್ನು ಅನುಭವಿಸುವ ಶಕ್ತಿಯನ್ನೂ, ಕೊನೆಗೆ ಆನಂದವಾಗುವ ಶಕ್ತಿಯನ್ನೂ ಕೊಡಬಲ್ಲರು. ರಾಕ್ಷಸರು ದುಃಖವನ್ನೂ, ಕೊನೆಗೆ ಎಲ್ಲವನ್ನೂ ದುಃಖದಲ್ಲಿಯೇ ಮುಗಿಸುವ ಶಕ್ತಿಯನ್ನೂ ಪೋಷಿಸುವರು. ದೇವತೆಗಳಂತೆಯೇ ರಾಕ್ಷಸರೂ ಹವ್ಯಾದಿಗಳಿಂದ ಆರಾಧಿತರಾದರೂ ಅವರು ಸುಖವನ್ನು ಕೊಡಲಾರರು. ರಕ್ಕಸರನ್ನು ತುಳಿದಿರಿಸಿ, ದೇವತೆಗಳಿಗೆ ಅಜರಾಮರತ್ವವನ್ನು ಕೊಟ್ಟರೆ ನಿಸರ್ಗ. ಈ ಒಂದು ಸ್ಥಿತಿಯ ಪರಿಪಾಲನೆಗೆ ಧರ್ಮಾಚಾರ್ಯನ ಅವಶ್ಯಕತೆಯುಂಟು.

ಬೇರೊಬ್ಬ ಧರ್ಮಾಚಾರ್ಯನನ್ನು ಹುಡುಕುವ ಕೆಲಸ ನಡೆಯಿತು. ಅಸುರರು ದೇವತೆಗಳ ಮೇಲೆ ಯುದ್ಧಮಾಡಲು ಅಣಿಮಾಡಿಕೊಳ್ಳುತ್ತಿರುವರೆಂಬ ಕಳವಳಕರವಾದ ಸುದ್ದಿ ಬೇರೆ. ಅಸುರ ಸೇನಾಡಂಬರದ ವಿಚಾರವಾಗಿ ಗೂಢಚಾರರು ಬಗೆಬಗೆಯ ವರದಿಗಳನ್ನು ತಂದರು. ಅಲ್ಲಿ ಹೋರಾಟವೂ ನಡೆಯಿತೆಂದು ಸುದ್ದಿ ಬೇರೆ. ``ಯಾರನ್ನಾದರೂ ಕೆಡಿಸಬೇಕಾದರೆ ಅವರಿಗೆ ಧರ್ಮಲೋಪ ಮಾಡಿಸಬೇಕು’’ ಎಂಬ ಗಾದೆಯ ಅರ್ಥವನ್ನು ದೇವತೆಗಳು ಚೆನ್ನಾಗಿ ಬಲ್ಲರು. ರಾಕ್ಷಸರು ಯಮಧರ್ಮ ರಾಯನ ರಾಜಧಾನಿ ಸಂಯಮಿನೀ ಪುರದತ್ತ ಧಾಳಿ ಮಾಡಲಾರಂಭಿಸಿದರೆಂದು ಸುದ್ದಿ ಹೊರಟಿತು. ಕೊನೆಗೆ ಬ್ರಹ್ಮದೇವನ ಬಳಿಗೆ ದೇವೇಂದ್ರನು ಬಂದನು. ಬೇರೊಬ್ಬನನ್ನು ಗೊತ್ತು ಮಾಡಿಕೊಡುವಂತೆ ಕೇಳಿಕೊಂಡನು. ಬೃಹಸ್ಪತಿ ಕುಪಿತ ನಾದುದು ಬ್ರಹ್ಮದೇವನಿಗೆ ತಿಳಿದಿತ್ತು. ತೃಷ್ಟೃಬ್ರಹ್ಮನ ಮಗನಾದ ವಿಶ್ವರೂಪಾಚಾರ್ಯನೇ ಆ ಕೆಲಸಕ್ಕೆ ಯೋಗ್ಯನೆಂದು ಬ್ರಹ್ಮನು ಸೂಚಿಸಿದನು. ಆತನು ಉಭಯಕುಲಗಳಿಗೂ ಬೇಕಾದವನು. ಬೃಹಸ್ಪತಿಯಷ್ಟೇ ವೇದಾಧ್ಯಯನಸಂಪನ್ನ. ಆದರೆ ಸುರಾಪಾನ ಮಾತ್ರ ಅವನಿಗೆ ಅಂಟಿಕೊಂಡಿದ್ದ ಜಾಡ್ಯ. ಅದನ್ನು ಮಾತಾಮಹರಿಂದ ಪಡೆದಿದ್ದನು. ಅವನ ತಾಯಿ ರಾಕ್ಷಸ ಕುಲದವಳು.

ತೃಷ್ಟೃಬ್ರಹ್ಮನ ಮಗನಾದ ವಿಶ್ವರೂಪಾಚಾರ್ಯನು ದೇವಗುರು ಪೀಠವನ್ನೇರಿದ. ಅಮರಾವತಿಗೆ ರಾಕ್ಷಸರು ಧೈರ್ಯವಾಗಿ ಬರಲು ಆರಂಭವಾಯಿತು. ಆದರೆ ವಿಶ್ವ ರೂಪನಿಗೆ ಉಭಯತ್ರರಿಗೂ ಒಳಿತನ್ನುಂಟುಮಾಡಬೇಕೆಂಬ ಆಸೆ ಇತ್ತು. ದೇವಾಸುರರ ದ್ವೇಷ ಸೃಷ್ಟಿಕಾಲದಿಂದ ಬಂದದ್ದು. ಇಂದ್ರನು ವಿಶ್ವರೂಪಾಚಾರ್ಯನ ಬಗೆಗೆ ಸಂದೇಹಗಳನ್ನು ಬಿಡಲಿಲ್ಲ. ಗೂಢಾಚಾರರನ್ನು ಇಟ್ಟು ಅವನ ಚಟುವಟಿಕೆಗಳನ್ನೆಲ್ಲಾ ಸೂಕ್ಷ್ಮವಾಗಿ ಪರಿಶೀಲಿಸುತ್ತಾ ಬಂದ. ಅಂತೂ ಅವರಿಬ್ಬರಿಗೂ ಒಗ್ಗಿ ಬರಲಿಲ್ಲ. ಸುರಾಪಾನದ ಬದಲು ಸೋಮಪಾನ ಮಾಡಬೇಕೆಂದು ಇಂದ್ರನು ಸಲಹೆ ಮಾಡಿದನು. ವಿಶ್ವರೂಪನಿಗೆ ಅಸಾಧ್ಯವಾದ ಕೋಪ ಬಂತು. ಈ ವೇಳೆಗೆ ಬೃಹಸ್ಪತಿಗೂ ಬೇಸರವಾಗಿತ್ತು. ಇಂದ್ರನಿಗೂ ವಿಶ್ವರೂಪನು ಬೇಡವಾಗಿದ್ದನು. ಗುಟ್ಟಾಗಿ ಬೃಹಸ್ಪತಿ ಇರುವ ವಿಚಾರವನ್ನು ತಿಳಿದು, ತನ್ನ ದೂತರನ್ನು ಅಟ್ಟಿದನು. ಉಪಾಯವಾಗಿ ವಿಶ್ವರೂಪಾಚಾರ್ಯನನ್ನು ಪದಚ್ಯುತಿಗೊಳಿಸಿದಲ್ಲಿ ತಾನು ಬರಲು ಅಡ್ಡಿಯಿಲ್ಲವೆಂದು ದೇವಗುರು ಹೇಳಿದ. ಅಂತೂ ಇಂದ್ರನೂ ವಿಶ್ವರೂಪನನ್ನು ವಧೆ ಮಾಡಿಬಿಟ್ಟ. ಬ್ರಹ್ಮಹತ್ಯೆಯ ಪಾಪ ಅವನನ್ನು ಹಿಂಬಾಲಿಸಿತು. ತೃಷ್ಟೃಬ್ರಹ್ಮನು ವೃತ್ರಾಸುರನನ್ನು ಸೃಷ್ಟಿಸಿ, ಇಂದ್ರನ ಮೇಲೆ ಬಿಟ್ಟನು. ವೃತ್ರನನ್ನು ಎದುರಿಸಲಾಗದೇ ಇಂದ್ರನು ಅವನಿಗೆ ತನ್ನ ಪದವಿಯನ್ನು ಬಿಟ್ಟುಕೊಟ್ಟು ಅವನ ಸ್ನೇಹಿತನಾಗಿರುವುದಾಗಿ ಹೇಳಿದ. ದೇವತೆಗಳೂ, ಅಗ್ನಿವಾಯುಗಳೂ, ಬೃಹಸ್ಪತಿಯೂ ತಮ್ಮ ತಮ್ಮ ಮರ್ಯಾದೆ ಉಳಿದರೆ ಸಾಕೆಂದು ಹೇಗೋ ಇರತೊಡಗಿದರು. ಆದರೂ ಇಂದ್ರನೂ ದೇವತೆಗಳೂ ವೃತ್ರನನ್ನು ಸಂಹರಿಸಲು ಹೊಂಚು ಕಾಯುತ್ತಿದ್ದರು. ದಧೀಚಿಯಿಂದ ಆತನ ಮೂಳೆಗಳನ್ನು ಪಡೆದ ಇಂದ್ರನು, ವಿಶ್ವಕರ್ಮನಿಂದ ವಜ್ರಾಯುಧವಾಗಿ ಅವುಗಳನ್ನು ಮಾರ್ಪಡಿಸಿ ಕೊಂಡನು. ವೃತ್ರನು ಪಾನಮತ್ತನಾಗಿ ದೇವತೆಗಳ ಕಪಟವನ್ನರಿಯದೇ ದೇವೇಂದ್ರ ನೊಂದಿಗೆ ವಿನೋದವಾಗಿ ಮಲ್ಲಯುದ್ಧಕ್ಕೆ ನಿಂತನು. ವಜ್ರಾಯುಧವನ್ನು ಪ್ರಯೋಗಿಸಿ ಇಂದ್ರನು ವೃತ್ರನನ್ನು ವಧೆ ಮಾಡಿದನು. ವೃತ್ರವಧೆಯೇ ಎಲ್ಲಕ್ಕೂ ಮೂಲವಾಯಿತು. ಹತ್ಯೆ ಇಂದ್ರನ ಬೆನ್ನು ಹತ್ತಿತ್ತು. ಆತನು ಅದನ್ನು ಕಳೆದುಕೊಂಡಲ್ಲದೆ ಸಿಂಹಾಸನವನ್ನು ಏರಲಾಗದೆಂದು ಸಿಂಹಾಸನದ ಅಧಿದೇವತೆ ಹೇಳಿದಳು. ಕೆಲವು ಕಾಲ ಇಂದ್ರಸಿಂಹಾಸನ ಶೂನ್ಯವಾಗಿಯೇ ಉಳಿಯುವ ಪರಿಸ್ಥಿತಿ ಒದಗಿತು. ದೇವತೆಗಳು ಚಿಂತಾಕ್ರಾಂತರಾದರು. ಇಂತಹ ಸನ್ನಿವೇಶದಲ್ಲಿ ನಹುಷನು ಇಂದ್ರ ಪದವಿಯನ್ನು ವಹಿಸಿಕೊಳ್ಳಬೇಕಾಯಿತು.

ದಾನಶೌಂಡನೂ, ನಿತ್ಯಾಗ್ನಿಹೋತ್ರಿಯೂ ಆದ ನಹುಷನು ಒಪ್ಪಿಕೊಂಡರೆ ಆತನನ್ನು ಇಂದ್ರನನ್ನಾಗಿ ಮಾಡಲು ಎಲ್ಲರೂ ಒಪ್ಪಿದರು. ನಹುಷನು ಒಪ್ಪುತ್ತಾನೋ ಇಲ್ಲವೊ ಎಂಬ ಸಂದೇಹ ಅವರಿಗಿತ್ತು. ವಿಶೇಷ ವರಗಳನ್ನಾದರೂ ಕೊಟ್ಟು ಅವನನ್ನು ಇಂದ್ರಪದವಿಗೆ ತರಬೇಕೆಂದು ಕೆಲವರು ಅಭಿಪ್ರಾಯಪಟ್ಟರು. ಬೃಹಸ್ಪತಿಯ ನೇತೃತ್ವದಲ್ಲಿ ಬಂದ ದೇವತೆಗಳ ನಿಯೋಗವು ನಹುಷನನ್ನು ಭೇಟಿ ಮಾಡಿ ತನ್ನ ಮನೋಗತವನ್ನು ತಿಳಿಸಿತು.

ನಹುಷನಿಗೆ ಒಂದು ಸಂದೇಹ, ``ಮನುಷ್ಯರು ದೇವತೆಗಳ ಮೇಲೆ ಅಧಿಕಾರವನ್ನು ಚಲಾಯಿಸುವುದು ಹೇಗೆ?’’ ಎಂದು ಆತನು ಕೇಳಿದನು. ``ಪಿತೃಗಳು ನಿನ್ನ ಮಾನವತ್ವವನ್ನು ತೆಗೆದು ದೇವತ್ವವನ್ನು ಸ್ಥಾಪಿಸುವರು’’ ಎಂದು ಭರವಸೆ ನೀಡಿದರು ದೇವತೆಗಳು. ಆನಂದದಿಂದ, ಆನಂದಭೋಗದಿಂದ ಅದರ ಅರಿವು ಆತನಿಗಾಗುವು ದೆಂದು ಸಹ ಅವರು ಹೇಳಿದರು.

ಅಧಿಕಾರ, ಆನಂದ ಎರಡನ್ನೂ ಕೊಟ್ಟು ಆತನನ್ನು ದೇವತೆಗಳು ಇಂದ್ರನನ್ನಾಗಿ ಮಾಡಿದರು. ಆದರೆ ನಹುಷ ಬುದ್ಧಿವಂತ. ಅಷ್ಟರಿಂದಲೇ ಆತನಿಗೆ ಸಮಾಧಾನ ವಾಗಲಿಲ್ಲ. ಅವನು ಹಾಕಿದ ಷರತ್ತುಗಳು ಹೀಗೆ ಇದ್ದವು; ``ವಿರಜಾದೇವಿ ಅಲ್ಲಿಯೂ ತನಗೆ ಪತ್ನಿಯಾಗಿರಬೇಕು; ಅರಮನೆಯಲ್ಲಿ ನಡೆಯುವ ಎಲ್ಲಾ ಧರ್ಮಗಳೂ ಅಲ್ಲಿಯೂ ನಡೆಯಬೇಕು. ತಾನು ಕೇಳುವ ಯಾವುದೇ ರಹಸ್ಯವನ್ನು ತನಗೆ ತಿಳಿಸಬೇಕು.’’

ನಹುಷೇಂದ್ರನು ಇಂದ್ರಾಧಿಕಾರವನ್ನು ಚೆನ್ನಾಗಿಯೇ ನಿರ್ವಹಿಸಿದನು. ನಹುಷೇಂದ್ರನು ನಿತ್ಯಾದಾನಶೀಲ, ಧರ್ಮಗಳನ್ನು ಮಾಡುತ್ತಿದ್ದನು. ಆ ಧರ್ಮಗಳು ದೇವಲೋಕದ ಬದಲು, ಭೂಲೋಕದಲ್ಲಿ ವಿನಿಯೋಗವಾಗುತ್ತಿದ್ದವು. ಇಂದ್ರನು ಹತ್ಯೆಗೆ ತಲೆಮರೆಸಿಕೊಂಡು ಎಲ್ಲಿಯೋ ಓಡಿಹೋಗಿರುವನೆಂಬ ಸುದ್ದಿ ಪ್ರಚಲಿತವಾಗಿತ್ತು. ಈ ವಿಚಾರವನ್ನು ನಹುಷನು ಅಗ್ನಿಯೊಡನೆ ಪ್ರಸ್ತಾಪಿಸಿದನು. ``ಇಂದ್ರನು ಹಿಂದಿರುಗುವವರೆಗೂ ಕಾಯಬೇಕು. ಎಷ್ಟು ದಿವಸಗಳಾಗುವುದೋ ಹೇಳಲು ಸಾಧ್ಯವಿಲ್ಲ’’ ಎಂದು ಅಗ್ನಿ ಹೇಳಿದನು. ``ಹಾಗಾದರೆ ಅವನನ್ನು ಕರೆಸಲು ಸಾಧ್ಯವಿಲ್ಲವೆ?’’ ಎಂದು ನಹುಷನು ಮತ್ತೆ ಕೇಳಿದನು. ``ಇಬ್ಬರು ಇಂದ್ರರಾಗುವಂತಿಲ್ಲ’’ ಎಂದು ಹೇಳಿ ಅಗ್ನಿ ಸುಮ್ಮನಾದನು.

`ಇಂದ್ರಪದವಿ ಶಾಶ್ವತವಲ್ಲ’ ಎಂಬುದು ನಹುಷನಿಗೆ ಚೆನ್ನಾಗಿ ಅರ್ಥವಾಯಿತು. ಬೃಹಸ್ಪತಿಯನ್ನು ಕರೆಸಿ ಕೇಳಿದ: ``ನನ್ನ ಇಂದ್ರಪದವಿ ಪುರ್ಣವಾಗಿದೆಯೆ’’ ಎಂದು. ದೇವಗುರು ಹೇಳಿದ ``ನೀನಾಗಿ ಮಾನವತ್ವವನ್ನು ಒಪ್ಪಿಕೊಂಡಿರುವೆಯಾಗಿ ಅದು ಅಪುರ್ಣ. ಕಾಲದೃಷ್ಟಿಯಿಂದ ಪುರ್ಣವಾಗುವಷ್ಟು ಅಧಿಕಾರ ನಿನಗಿದೆ. ಶಚೀಪತಿ ಯಾಗುವವರೆಗೂ ಇಂದ್ರತ್ವವು ಪುರ್ಣವಾಗುವಂತಿಲ್ಲವೆಂಬ ರಹಸ್ಯವನ್ನು ದೇವಗುರು ಬಯಲು ಮಾಡಿದ. ಇಂದ್ರನೂ, ಶಚೀಪತಿಯೂ ಒಬ್ಬನೇ ಆಗಿದ್ದುದರಿಂದ ಈ ಸಮಸ್ಯೆ ಇದುವರೆಗೆ ತಲೆದೋರಿರಲಿಲ್ಲ. ಈ ವಿಚಾರ ಈಗ ಇತ್ಯರ್ಥವಾಗಿ ಬಿಡಬೇಕೆಂದು ನಹುಷನು ಹೇಳಿದ. ದೇವಸಭೆ ನಡೆದು, ಶಚೀದೇವಿ ಅಧಿಕಾರ ನಿಮಿತ್ತ ಇಂದ್ರಾಣಿಯೆಂಬ ತೀರ್ಮಾನಕ್ಕೆ ಬಂದಿತು. ಶಚೀದೇವಿಯ ಸ್ಥಿತಿ ಶೋಚನೀಯ ವಾಯಿತು. ಬೃಹಸ್ಪತಿ ದುಡುಕಿ ತೆಗೆದುಕೊಂಡ ನಿರ್ಣಯದಿಂದ ಇಲ್ಲದ ಗೊಂದಲಕ್ಕೆಡೆ ಯಾಯಿತು.

ದೇವಾಚಾರ್ಯನ ಸೂಚನೆಯಂತೆ ಶಚೀದೇವಿ ನಹುಷನನ್ನು ಭೇಟಿ ಮಾಡಲು ನಿಶ್ಚಯಿಸಿದಳು. ಆಕೆ ಭಯ ಸಂದೇಹಗಳಿಂದಲೇ ಆತನ ಬಳಿಗೆ ಹೋದಳು. ಶಾಸ್ತ್ರದಲ್ಲಿ ಹೇಳಿರುವಷ್ಟು ಕಾಲ ತನ್ನ ಪತಿಯನ್ನು ಹುಡುಕಿಸಲು ತನಗೆ ಅವಕಾಶ ಬೇಕೆಂದು ಕೇಳಿದಳು. ನೂತನ ಇಂದ್ರನು ಮಹಾನುಭಾವನೆಂಬ ಅರಿವು ಆಕೆಗೆ ಉಂಟಾಯಿತು. ನಹುಷನು ಇಂದ್ರನಾಗಿರುವುದು ಮೂರು ಲೋಕಗಳ ಸೌಭಾಗ್ಯವೆಂದು ತನ್ನಲ್ಲಿ ಭಾವಿಸಿಕೊಂಡಳು.

``ದೇವತೆಗಳು ಯಾವಾಗಲೂ ವಿಷಮಿಶ್ರಿತವಾದ ಮೃಷ್ಟಾನ್ನವನ್ನೇ ವರವಾಗಿ ಕೊಡುವರು. ನಾವು ಮೃಷ್ಟಾನ್ನವನ್ನು ಕಾಣುವೆವೇ ಹೊರತು ವಿಷವನ್ನಲ್ಲ’’ ಎಂದು ತನ್ನ ಪತ್ನಿಗೆ ಹೇಳಿದನು ನಹುಷ. ``ಅನಿತ್ಯವಾದ ಅರ್ಥಕ್ಕೆ ಹಾನಿಯಾದರೂ ಚಿಂತೆಯಿಲ್ಲ. ನಿತ್ಯವಾದ ಧರ್ಮವನ್ನು ಪಾಲಿಸಿದರಾಯಿತು’’ ಎಂದು ಹೇಳಿದ ಆತನು ವಿರಜೆಗೆ ``ಶಚಿ ಒಲಿದರೂ ಆಕೆ ಅರ್ಥಪತ್ನಿಯೇ ಹೊರತು ಧರ್ಮಪತ್ನಿ ಯಾಗಲಾರಳು’’ ಎಂದು ಭರವಸೆ ನೀಡಿದ.

``ಎಷ್ಟು ಕಾಲವಾದರೂ ನಿನ್ನ ಪತಿಯನ್ನು ಹುಡುಕಿಸು’’ ಎಂದು ಅಭಯವಿತ್ತು ಶಚಿಯನ್ನು ಗೌರವದಿಂದ ಬೀಳ್ಕೊಟ್ಟ. ಶಚಿ ಹಿಗ್ಗುತ್ತ ತನ್ನ ಅರಮನೆಗೆ ಧಾವಿಸಿದಳು.

ಪರಿಗ್ರಹಕ್ಕಿಂತ ತ್ಯಾಗವೇ ಹೆಚ್ಚು

ದೇವತೆಗಳು ಅನತಿ ಕಾಲದಲ್ಲಿಯೇ ತನ್ನನ್ನು ಉರುಳಿಸಿಬಿಡುವರೆಂಬ ಭಾವನೆ ನಹುಷನಿಗೆ ಉಂಟಾಗಲು ಬಹಳ ಕಾಲ ಹಿಡಿಯಲಿಲ್ಲ. ಇಂದ್ರಪದವಿಯಿಂದ ತನಗೇನೂ ಹೆಚ್ಚಿನ ಲಾಭವಾಗಲಿಲ್ಲವೆಂದು ಅವನಿಗೆ ತೋರಿತು. ``ದೀಪದ ಪ್ರಕಾಶ ಹೆಚ್ಚಿದಷ್ಟು ಕತ್ತಲೆ ದಟ್ಟವಾಗುವುದು. ಹಾಗಾಯಿತು ನಾವು ಇಂದ್ರಪದವಿಯನ್ನು ಒಪ್ಪಿಕೊಂಡದ್ದು. ಆನಂದ ಲಭಿಸಿತು. ಆದರೆ ದುಃಖಾನುಭಾವವು ಮಾತ್ರ ಬರಲಿಲ್ಲ. ಬರುವುದೂ ಇಲ್ಲ. ಹೇಗಾದರೂ ಇವರು ನಮ್ಮನ್ನು ಉರುಳಿಸಿಯೇ ತೀರುತ್ತಾರೆ. ಇಂದ್ರನು ಮಾಡದಿದ್ದ ಕೆಲಸ ಏನಾದರೂ ಮಾಡಿ, ಇಂದ್ರಪದವಿಯನ್ನು ನಾವಾಗಿ ಬಿಟ್ಟುಬಿಡೋಣ. ಹಾವಿನ ಹೆಡೆಯ ನೆರಳಿನಲ್ಲಿ ವಾಸಮಾಡುವುದು ಸಾಕು. ಅದಕ್ಕೆ ನೀನೇನೆನ್ನುವೆ?’’ ಎಂದು ವಿರಜಾದೇವಿಯನ್ನು ಆತನು ಪ್ರಶ್ನಿಸಿದ. ಪತಿಪರಾಯಣೆ, ಸಾಧ್ವಿ ವಿರಜಾದೇವಿ ಹೇಳಿದಳು; ``ಇದರಲ್ಲಿ ಸಂಪತ್ತಿಗಿಂತ ವಿಪತ್ತೇ ಹೆಚ್ಚು. ನನಗೆ ತಮ್ಮ ಪಾದಸೇವೆಯೊಂದೇ ಸಾಕು. ನನ್ನ ಪತಿದೇವನು ಇಂದ್ರನಾದರೆ ಪಡುವ ಆನಂದವನ್ನು ಆತನು ಯಃಕಶ್ಚಿತನಾದರೂ ಪಡೆಯುವೆನೆಂಬ ನಂಬಿಕೆ ನನಗಿದೆ. ನೀನು ಯೋಚಿಸಿರುವುದು ಸರಿ.’’

``ಇಂದ್ರನು ಮಾಡಲು ಹಿಂತೆಗೆಯುತ್ತಿದ್ದುದನ್ನು ಮಾಡೋಣ. ಭೂಲೋಕದಿಂದ ಮಕ್ಕಳು, ಮೊಮ್ಮಕ್ಕಳು ಬರಲಿ. ಅದನ್ನು ನೆರವೇರಿಸಿದ ಮೇಲೆ ಇಂದ್ರ ಪದವಿಯನ್ನು ಬಿಡೋಣ’’ ಎಂದನು. ವಿರಜೆ ಒಪ್ಪಿದಳು.

ಇಂದ್ರನನ್ನು ಹುಡುಕಿಸುವ ಪ್ರಯತ್ನ ಎಷ್ಟರಮಟ್ಟಿಗೆ ಸಫಲವಾಗಿದೆ ಎಂಬುದನ್ನು ತಿಳಿಯಲು ಆತನು ಬಯಸಿದನು. ದೇವಾಚಾರ್ಯನು ಮಹಾವಿಷ್ಣುವಿನ ಬಳಿಗೆ ಹೋಗಿರುವ ವಿಚಾರವನ್ನು ಶಚಿ ನಹುಷನಿಗೆ ವಿಜ್ಞಾಪಿಸಿದಳು. ``ನಮ್ಮಿಂದ ಏನಾದರೂ ಆಗಬೇಕಾದರೆ ಸಂಕೋಚವಿಲ್ಲದೆ ಹೇಳಬೇಕು’’ ಎಂದು ನಹುಷನು ಹೇಳಿದಾಗ ಶಚಿಗೆ ಪರಮಾಶ್ಚರ್ಯವಾಯಿತು. ದೇವಸಭೆಯು ಕೊಟ್ಟಿರುವ ಇಂದ್ರ ಪದವಿಯ ಅವಧಿ ಮುಗಿಯುವ ತನಕ ಕಾಯಬೇಕೆಂದು ಶಚಿ ಹೇಳಿದಳು. ನಾನು ಈಗ ಹೇಳಿರುವ ಉದ್ದೇಶ ಸಫಲವಾದರೆ ತಾವು ಕಾಲಾಯಾಪನೆ ಮಾಡ ಬೇಕಾಗಿಲ್ಲ. ಇಂದ್ರಪತ್ನಿಯೆಂದು ಸಂಬೋಧಿಸಿ ನಾನು ಇಂದ್ರಪದವಿ ಬಿಡುತ್ತೇನೆ. ಇಂದ್ರನು ಮಾಡದೇ ಇದ್ದ ಕೆಲಸವನ್ನು ಮಾಡಿ, `ನ ಭೂತೋ ನ ಭವಿಷ್ಯತಿ’ ಎನ್ನಿಸಿಕೊಂಡು ಇಂದ್ರತ್ವವನ್ನು ಬಿಟ್ಟು ವಾನಪ್ರಸ್ಥನಾಗುವೆನು’’ ಎಂದನು.

ಸಪ್ತರ್ಷಿ ಶಿಬಿಕಾರೋಹಣ ಇಂದ್ರನಿಗೆ ಮಾತ್ರ ಸಲ್ಲುವ ಮರ್ಯಾದೆ. ಮನ್ವಂತರದವರೆಗೂ ವೇದರಕ್ಷಣೆಯ ಹೊರೆ ಹೊತ್ತಿರುವ ಸಪ್ತರ್ಷಿಗಳೇ ಬಂದು ಇಂದ್ರನನ್ನು ಪಲ್ಲಕ್ಕಿಯಲ್ಲಿ ಕೂರಿಸಿ ತಾವು ವಾಹಕರಾಗಿರುವರು. ಸಪ್ತರ್ಷಿಗಳ ಮೇಲಿನ ಗೌರವದಿಂದ ಇಂದ್ರನು ಏರಿದಂತೆ ಮಾಡಿ ಅಲ್ಲಿ ಬಿಡುವನು. ಅದಕ್ಕಿಂತ ಹೆಚ್ಚಿನ ಗೌರವ ಇಂದ್ರನಿಗಿಲ್ಲ. ಶಚಿ ಕೆಲವು ಎಚ್ಚರಿಕೆಯ ಮಾತನ್ನು ಹೇಳಿದಳು. ``ಭೋಗ ಭೋಗವೂ ಅನುಭವಿಸಿದಂತೆಲ್ಲಾ ಕರ್ತನ ತೇಜಸ್ಸನ್ನು ತಿನ್ನುವುದು. ದೇವಲೋಕದಲ್ಲಿರುವ ದೇವತೆಗಳಿಗಂತೂ ಅದು ತಪ್ಪಿದ್ದಲ್ಲ. ಸಪ್ತರ್ಷಿ ಶಿಬಿಕಾರೋಹಣ ದೇವತೆಗಳಿಗೂ ತೇಜೋಹಾನಿ ಉಂಟುಮಾಡದಿರದು.’’ ಆದರೆ ನಹುಷನ ಜ್ಞಾನ ಇನ್ನೂ ಹೆಚ್ಚು ಪಕ್ವವಾದುದು. ಪ್ರತಿಯೊಂದು ಕರ್ಮವೂ ಅಧಿದೈವ, ಅಧಿಯಜ್ಞ ಆದಾಗ ತೇಜೋಹಾನಿ ಆಗದೆ ವೃದ್ಧಿಯಾಗುವುದು ಎಂದು ಆತನು ಬಲ್ಲ. ಶಚಿ ಅವನ ಪ್ರಶ್ನೆಗೆ ಉತ್ತರಿಸಲಿಲ್ಲ.

ಹತ್ಯಾಭೀತಿಯಿಂದ ತಲೆಮರೆಸಿಕೊಂಡಿದ್ದ ಇಂದ್ರನು ಶುದ್ಧಿಯಾಗುವುದಂತೂ ಖಚಿತವಾಗುತ್ತಾ ಬಂತು. ಆ ವೇಳೆಗೆ ಅಂದರೆ ಉತ್ತರಾಯಣ ಪುಣ್ಯಕಾಲದ ಮರುದಿನ ಶಿಬಿಕಾರೋಹಣ ನಡೆಯತಕ್ಕದ್ದೆಂದು ನಿಶ್ಚಯವಾಯಿತು. ಆ ವೇಳೆಗೆ ದೇವೇಂದ್ರನು ಬಂದರೆ ಇಂದ್ರಾಭಿಷೇಕವನ್ನೂ ನೆರವೇರಿಸುವುದಾಗಿ ನಹುಷ ನಿರ್ಧರಿಸಿದ. ಶಚಿ ಎಂದಳು: ``ಇಂದು ದೇವತ್ವಕ್ಕಿಂತ ಮನುಷ್ಯತ್ವ ಶ್ರೇಷ್ಠವಾಯಿತು. ಇದುವರೆಗೂ ದೇವತೆಗಳು ಮಾನವರಿಗೆ ವರ ಕೊಡುತ್ತಿದ್ದರು. ಈಗ ಮಾನವನು ದೇವತೆಗಳಿಗೆ ವರ ಕೊಡುವಂತಾಯಿತು. ಅರ್ಥಾತ್ ನೀವು ನಮಗೆ ಪುಜ್ಯರಾದಿರಿ.’’ ಇಂದ್ರನ ಉತ್ತರ ಸಿದ್ಧವಾಗಿಯೇ ಇತ್ತು: ``ನಮಗೆ ಬೇಡವಾದುದನ್ನು ಬಿಡುವುದು, ಇತರರಿಗೆ ವರವಾದೀತೆ?’’ ಎಂದನು. ಆತನು ಮುಂದುವರಿದು ಹೇಳಿದ:

``ಶಾಸ್ತ್ರಗಳಲ್ಲಿ ಗಾರ್ಹಸ್ಥ್ಯಕ್ಕಿಂತ ವಾನಪ್ರಸ್ಥವೇ ಹೆಚ್ಚೆಂದು ಹೇಳಿದೆ. ಶಾಸ್ತ್ರಗಳು ಹೇಳಿರುವುದು ನಿಜವಾದರೆ ಪರಿಗ್ರಹಕ್ಕಿಂತ ತ್ಯಾಗವೇ ಹೆಚ್ಚು. ಪದವಿಗಳಲ್ಲೆಲ್ಲಾ ಇಂದ್ರಪದವಿ ಅಧಿಕವಾದುದು. ಅಂತಹುದು ಸಿಕ್ಕಿತು. ಇಂದ್ರನಿಗಿಂತ ಹೆಚ್ಚಾಗುವ ಉಪಾಯವನ್ನು ನೀವು ಹೇಳಿಕೊಟ್ಟಿರಿ. ಈಗ ಉಳಿದಿರುವುದು ತ್ಯಾಗ ತಾನೆ?’’

ಶಚಿ ತನ್ನಲ್ಲಿಯೇ ಹೀಗೆ ಹೇಳಿಕೊಂಡಳು: ``ಭೋಗವೆಂದರೆ ಅಂಟಿಗಿಂತಲೂ ಹೆಚ್ಚಾಗಿ ಅಂಟಿಕೊಳ್ಳುವ ದೇವತ್ವಕ್ಕಿಂತಲೂ, ತ್ಯಾಗವನ್ನು ಆರಾಧಿಸುವ ಮನುಷ್ಯತ್ವವು ಹೆಚ್ಚು ಎನ್ನಬೇಕು. ಭೋಗಕ್ಕಿಂತ ತ್ಯಾಗ ಹೆಚ್ಚು ಎಂಬುದನ್ನು ಒಪ್ಪಿಕೊಳ್ಳಲು ಚಿತ್ತಶುದ್ಧಿಯು ಬೇಕೋ ಏನೋ...”

ವಿಶ್ವಜಿದ್ ಯಜ್ಞ

ಸಪ್ತರ್ಷಿ ಶಿಬಿಕಾರೋಹಣವನ್ನು ``ವಿಶ್ವಜಿದ್ ಯಜ್ಞ’’ ಎಂದು ಕರೆದ ಭರದ್ವಾಜರು ``ಇದನ್ನು ಮಾಡುವವರು ಅಹಂಕಾರವನ್ನು ಬಿಡಬೇಕು. ಅಭಿಮಾನವನ್ನು ತ್ಯಜಿಸಬೇಕು. ಶತ್ರು ಮಿತ್ರ ಭೇದವನ್ನು ಬಿಡಬೇಕು. ರಾಗ ದ್ವೇಷಗಳನ್ನು ಬಿಡಬೇಕು’’ ಎಂದು ಹೇಳಿದರು. ಧರ್ಮವಾಗಿ ಬಿಡಬಹುದಾದ್ದನ್ನೆಲ್ಲಾ ಬಿಡುವುದಾಗಿ ಒಪ್ಪಿದ.

ನಹುಷನು ತನ್ನ ಪತ್ನಿಯನ್ನು ಹೇಗೆ ತ್ಯಾಗ ಮಾಡಬೇಕು? ಧರ್ಮದ ಲೋಪವಾಗುವಂತಹ ಯಾವುದನ್ನೂ ಮಾಡಲು ಸಿದ್ಧನಿಲ್ಲ ಆತ. ರಾಗದ್ವೇಷಗಳನ್ನು ಪುರ್ತಿಯಾಗಿ ಬಿಡಲೊಲ್ಲ. ಅಸಾಧ್ಯ. ಅವುಗಳ ಬಗ್ಗೆ ಉದಾಸೀನರಾಗಿದ್ದು ಧರ್ಮವನ್ನು ಮಾತ್ರ ಆಚರಿಸಬೇಕು. ರಾಗದ್ವೇಷಗಳನ್ನು ಹದ್ದಿನಲ್ಲಿಡಬಹುದು.

``ಶಿಬಿಕೆಯಲ್ಲಿ ಕುಳಿತಿರುವಾಗ ಮಹಾವಿಷ್ಣುವಿನಲ್ಲಿ ಮನಸ್ಸಿಟ್ಟು ಸರ್ವವನ್ನು ಆತನಿಗೊಪ್ಪಿಸಿರಬೇಕಲ್ಲ.’’ ಆಗ ಅದು ವಿಶ್ವಜಿದ್ ಯಜ್ಞವಾಗುವುದೆಂದು ಹೇಳಿದರು. ``ಶಿಬಿಕಾರೋಹಣ ಇಂದ್ರತ್ವದ ಪರಮಾವಧಿ ಸಗುಣ ಮೂರ್ತೀಕರಿಸಿ, ನಿರ್ಗುಣ ವಾಗಿರಬೇಕು. ತ್ರಿಪುಟೀರಹಿತನಾಗಿ ಶಿಬಿಕಾರೋಹಣ ಮಾಡಬೇಕು. ಶಿಬಿಕೆ ಯಲ್ಲಿರುವಾಗ ತ್ರಿಪುಟಿಯು ಉದಯವಾದರೆ ಅನರ್ಥವಾಗುವುದು’’ ಎಂದು ಮಹರ್ಷಿಗಳು ಹೇಳಿದರು.

ಉತ್ಸವಕ್ಕೆ ಸರ್ವಸಿದ್ಧತೆಯೂ ನಡೆಯಿತು. ದಾನವ ಗುರು ಶುಕ್ರಾಚಾರ್ಯನು ಹೇಳಿದಂತೆ ಎಲ್ಲರಿಗೂ ಆಹ್ವಾನಗಳನ್ನು ಕಳುಹಿಸಿಕೊಟ್ಟನು. ಹೊಸ ಇಂದ್ರನ ಸೌಜನ್ಯದಿಂದ ಅಸುರಾಚಾರ್ಯನು ಮುಗ್ಧನಾಗಿ ಹೋದನು. ಭೂಲೋಕದಿಂದ ಯಯಾತಿ, ಆತನ ಮಡದಿ ಮಕ್ಕಳು ಬಂದರು. ಅಮರಾವತಿ ಅತಿಥಿಗಳಿಂದ ಕಿಕ್ಕಿರಿಯಿತು. ಬ್ರಹ್ಮವಿದ್ಯೆಯನ್ನು ಮತ್ತಷ್ಟು ಚೆನ್ನಾಗಿ ತಿಳಿಯಲು ನಹುಷನಿಗೆ ಆಸೆಯಾಯಿತು. ನಿರ್ವಿಕಲ್ಪ ಸಮಾಧಿಯ ಬಗ್ಗೆ ಹೆಚ್ಚಾಗಿ ತಿಳಿಸಲು ಸಮರ್ಥರು ಮೂವರು. ಪ್ರಜಾಪತಿಯಿಂದ ಅವಸ್ಥಾತ್ರಯ ಪುರ್ವಕವಾದ ಬ್ರಹ್ಮವಿದ್ಯೆಯನ್ನು ಇಂದ್ರನು ಪಡೆದನು. ಹೃದಯಗ್ರಂಥಿ ವಿಚ್ಛೇದನಾರೂಪವಾದ ಬ್ರಹ್ಮವಿದ್ಯೆಯನ್ನು ಯಮಧರ್ಮನು ಬಲ್ಲ. ವರುಣನು ಪಂಚಕೋಶಾತ್ಯಯಪೂರ್ವಕ ಬ್ರಹ್ಮವಿದ್ಯೆಯನ್ನು ಬಲ್ಲ. ಈ ಮೂವರಲ್ಲಿ ಯಾರಿಂದಲಾದರೂ ಬ್ರಹ್ಮವಿದ್ಯೆಯನ್ನು ಕಲಿಯಬೇಕೆಂದು ಬೃಹಸ್ಪತಿ ನಹುಷನಿಗೆ ಹೇಳಿದ.

ಮೂವರನ್ನು ಕರೆಯಿಸಲು ಇಂದ್ರನು ನಿರ್ಧರಿಸಿದ. ನಹುಷೇಂದ್ರನ ಪ್ರಶ್ನೆಯನ್ನು ಕೇಳಿ ದೇವಾಚಾರ್ಯನು ತಬ್ಬಿಬ್ಬಾದನು. ಇಂದ್ರನು ಹತ್ಯೆಯನ್ನು ನಿವಾರಿಸಿ, ದೇವೇಂದ್ರನನ್ನು ಕರೆತರಲು ಕಠಿಣವಾದ ಆಜ್ಞೆ ಮಾಡಿದ. ಇಂದ್ರನನ್ನು ಕರೆತರಲು ಇಂದ್ರನ ಸೇನಾನಿಗಳು ಅಣಿಯಾಗಿ ನಿಂತರು. ಆಯುಧಗಳು ಸಜ್ಜಾಗಿ ನಿಂತವು. `ಇಂದ್ರನು ಇಲ್ಲಿಗೆ ಬರಲೇಬೇಕು’ ಎಂದು ನಹುಷೇಂದ್ರನ ಅಪ್ಪಣೆ. ಕ್ಷಣ ಮಾತ್ರದಲ್ಲಿ ಆಡಳಿತಗಾರನಾದ ನಹುಷೇಂದ್ರನ ಗರ್ಜನೆ ಕೆಲಸವನ್ನು ಆರಂಭಿಸಿತು. ``ಅಧಿಕಾರವನ್ನು ಉಪಯೋಗಿಸುವುದಕ್ಕೂ ಶಕ್ತಿಬೇಕು’’ ಎಂದು ದೇವಾಚಾರ್ಯ ನುಡಿದ. “ಭಲೆ, ಪ್ರಭುವೆಂದರೆ ಹೀಗಿರಬೇಕು” ಎಂದು ಶುಕ್ರಾಚಾರ್ಯನು ಹೇಳಿದ. ಅವನ ಪ್ರತಿಭಟನೆಯೇ ಇಲ್ಲದಂತಾಯಿತು. ಅಮರಾವತಿಯ ಬಾಗಿಲಲ್ಲಿ ಇಂದ್ರನ ಸ್ವಾಗತಕ್ಕೆ ಸಂಭ್ರಮದ ಏರ್ಪಾಡುಗಳಾದವು. ಆಚಾರ್ಯರೆಲ್ಲರೂ “ನಹುಷ, ನೀನು ಇಂದ್ರನಲ್ಲ, ಅತೀಂದ್ರ. ಪ್ರಭುತ್ವವು ಒಂದು ತೂಕವಾದರೆ, ಅದನ್ನು ಉಪಯೋಗಿಸಲು ಬೇಕಾದ ಬುದ್ಧಿ ಸಾಮಥರ್ಯ್‌ಗಳು ಎರಡರಷ್ಟು ತೂಕ. ನೀನು ಇಂದ್ರನಾಗುವುದಕ್ಕೆ ಮಾತ್ರವಲ್ಲ, ಅತೀಂದ್ರನಾಗಿ ಇಂದ್ರಗಣವನ್ನು ಆಳಬಲ್ಲವನು’’ ಎಂದು ಹೊಗಳಿದರು.

ಯಮನು ಹೃದಯಗ್ರಂಥಿ ವಿಚ್ಛೇದನಾರೂಪವಾದ ಬ್ರಹ್ಮವಿದ್ಯೆಯನ್ನು ಬೋಧಿಸಿ, ಅದರ ಅನುಭವವನ್ನು ಮಾಡಿಕೊಟ್ಟ ನಿರ್ವಿಕಲ್ಪ ಸಮಾಧಿಯೆಂದರೇನು ಎಂಬುದನ್ನು ತಿಳಿದು ನಹುಷ ಆನಂದಿಸಿದ. ವರುಣನು ಪಂಚಕೋಶಾತ್ಯಯ ಪೂರ್ವಕವಾದ ಬ್ರಹ್ಮವಿದ್ಯೆಯನ್ನು ವಿವರಿಸಿ ನಿರ್ವಿಕಲ್ಪ ಸಮಾಧಿಯ ಪರಿಚಯ ಮಾಡಿಕೊಟ್ಟ. ಜ್ಞಾನ, ಅನುಭವ ಎರಡೂ ಒಂದಾಗಲು ನಹುಷನು ಆನಂದ ತುಂದಿಲನಾದನು.

ನಿಯತಿಯ ಇಚ್ಛೆಯಂತೆ ಏಳನೇ ದಿವಸ ನಿರ್ವಿಕಲ್ಪ ಸಮಾಧಿಯ ಭಂಗ ಮಾಡಿಕೊಳ್ಳಲು ಆತನು ಒಪ್ಪಿದ. ಇಂದ್ರ ಶಚಿಯರು ಓಡಿಬಂದು ನಹುಷನ ಕಾಲಿಗೆರಗಿದರು. ``ನಿತ್ಯೇಂದ್ರನು ನೈಮಿತ್ತಿಕೇಂದ್ರನಿಗೆ ನಮಸ್ಕಾರ ಮಾಡಬಾರದು” ಎಂದು ನಹುಷನು ತನ್ನ ವಿನಯವನ್ನು ಪ್ರಕಟಿಸಿದನು. “ಬುದ್ಧಿಯಲ್ಲಿ, ಪ್ರಭಾವದಲ್ಲಿ, ಸಾಮಥರ್ಯ್‌ದಲ್ಲಿ ಪ್ರತಿಯೊಂದರಲ್ಲೂ ನೀನು ನನಗಿಂತ ಹೆಚ್ಚು. ಅಲ್ಲದೆ, ಹತ್ಯೆಯ ಕೈಗೆ ಸಿಕ್ಕಿ ಗೋಳಿಡುತ್ತಿದ್ದ ನನ್ನನ್ನು ಉದ್ಧರಿಸಿದೆ. ಇಂತಹ ಪರಮೋಪಕಾರಕ್ಕೆ ನಾನೇನು ಮಾಡಲಿ?’’

“ಹತ್ಯೆಯನ್ನು ನಿವಾರಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೂ ನನಗೆ ಬುದ್ಧಿ ಓಡಲಿಲ್ಲ. ಆದ್ದರಿಂದ ನೀನು ಬುದ್ಧಿಯಲ್ಲಿ ಜ್ಯೇಷ್ಠನು.’’ ಶಚೀದೇವಿಯು “ನೀನೇ ಇಂದ್ರ ಪದವಿಗೆ ತಕ್ಕವನು. ಇಂದ್ರಾಣೀತ್ವವನ್ನು ವಿರಜಾದೇವಿಗೆ ಒಪ್ಪಿಸುವೆನು. ದೇವತೆಗಳಿಗೆ ಅನುಗ್ರಹಿಸಿರುವ ಈ ತ್ರೈಲೋಕಾಧಿಪತ್ಯ ನಿನ್ನದಾಗಿರಲಿ’’ ಎಂದು ಬೇಡಿಕೊಂಡಳು.

ಭೋಗದ ಪರಾಕಾಷ್ಠೆಯನ್ನು ಅನುಭವಿಸಿದ ಮೇಲೆ ಬೇಕಾಗಿರುವುದು ತ್ಯಾಗವೇ ಹೊರತು, ಭೋಗವಲ್ಲ. ಮನುಷ್ಯ ದೇಹದಲ್ಲಿ ದಿವ್ಯಮನಸ್ಸನ್ನು ಧರಿಸಿ ಮನುಷ್ಯಾನಂದಕ್ಕೆ ಕೋಟಿಪಾಲು ಮಿಗಿಲಾದ ಆನಂದವನ್ನು ಅನುಭವಿಸಿದ್ದೂ ಆಯಿತು. ಆದ್ದರಿಂದ ನಹುಷ ದಂಪತಿಗಳು `ಇಂದ್ರಪದವಿ’ಯನ್ನು ಖಂಡಿತವಾಗಿ ಒಪ್ಪಲಿಲ್ಲ.

ಸಪ್ತರ್ಷಿ ಶಿಬಿಕಾರೋಹಣದ ಏಳನೇ ದಿನ ನಹುಷನು ಶಿಥಿಲ ಸಮಾಧಿಯ ಅಪರಾಧಕ್ಕೆ ಪಕ್ಕಾದನು. ಗುರುತರವಾದ ಅಪರಾಧಕ್ಕೆ ಯೋಗ್ಯವಾದ ಶಿಕ್ಷೆಯನ್ನೆ ಆತನು ವಿಧಿಸಿಕೊಂಡನು. ಇಂದ್ರಾದಿಗಳು ದಿಗ್ಭ್ರಾಂತರಾದರು. ಸರಿಯಾದ ಶಿಕ್ಷೆ ವಿಧಿಸಿಕೊಂಡನೆಂದು ಎಲ್ಲರೂ ಒಪ್ಪಿಕೊಂಡರು. ಆದರೆ ಶಿಕ್ಷೆಯ ವಿಲೋಪಕ್ಕೆ ನಹುಷನು ಒಪ್ಪಲಿಲ್ಲ. ಎಲ್ಲರಿಗೂ ಸಮಾಧಾನ ಹೇಳಿ ಇಂದ್ರಾಭಿಷೇಕದಲ್ಲಿ ಪಾಲ್ಗೊಳ್ಳಲು ಎಲ್ಲರನ್ನೂ ಪ್ರೋತ್ಸಾಹಪಡಿಸಿದನು.

ಹಲವಾರು ವೇದಾಂತದ ಪ್ರಕ್ರಿಯೆಗಳನ್ನು ವಿವರಿಸಲು ಕಾಲದೇಶಗಳ ಪರಿಮಿತಿಗೆ ಒಳಪಟ್ಟು ಈ ಸಣ್ಣ ಲೇಖನದಲ್ಲಿ ಸಾಧ್ಯವಿಲ್ಲ. ಅಂತಾಗಿಯೇ ಇಲ್ಲಿ ಅದರ ಬಗ್ಗೆ ವಿವರವಾಗಿ ಏನನ್ನೂ ಹೇಳಿಲ್ಲ. ಆದರೆ ಒಂದು ವಿಷಯ ಸುಸ್ಪಷ್ಟ. ಈ ಕಾದಂಬರಿ ಯನ್ನು ಓದಿದ ಮೇಲೆ ಮನಸ್ಸಿಗೆ ನೆಮ್ಮದಿಯುಂಟಾಗುತ್ತದೆ. ತೃಪ್ತಿ ತುಂಬಿ ಬರುತ್ತದೆ. ಅಲ್ಲದೆ ಇದನ್ನು ಮತ್ತೆ ಮತ್ತೆ ಓದಬೇಕು ಎನ್ನಿಸುತ್ತದೆ. ಇದು ಅಡಿಯಿಂದ ಮುಡಿಯವರೆಗೂ ಸರ್ವಾಂಗಸುಂದರವಾದ ಕಾದಂಬರಿ. ಕನ್ನಡಿಗರು ಹೆಮ್ಮೆ ಪಡುವಂತಹ ಕಾದಂಬರಿ. ಭಾರತೀಯ ಸಂಸ್ಕೃತಿಯನ್ನು ಪ್ರೀತಿಸುವವರಿಗೆಲ್ಲಾ ಇದೊಂದು ಅಮೂಲ್ಯ ಕಾಣಿಕೆ.

ತರುಣ ಜನಾಂಗದ ಕಣ್ತೆರೆಸುವ, ಹಿರಿಯರು ಹೆಮ್ಮೆಪಡುವ, ಅಮೋಘ ಕೃತಿ. ಮಹಿಳೆಯರಿಗೆ ಇದು ಮಾಣಿಕ್ಯ. ಇದನ್ನು ಮತ್ತೆಮತ್ತೆ ಓದಿ ಲಾಭ ಪಡೆಯಲಿ ನಮ್ಮ ಜನ. ಓದುವವರ ಧರ್ಮಾಭಿಮಾನ ಹೆಚ್ಚಾಗಲಿ. ದೇವುಡು ಬಯಸಿದಂತೆ ಸಂಹಿತೆ, ಇತಿಹಾಸ, ಪುರಾಣ ಇವುಗಳಲ್ಲಿ ಬರುವ ಕತೆಗಳನ್ನು ಅಧ್ಯಯನ ಮಾಡಿ, ಉಪಬೃಂಹಣ ಮಾಡಿ ವಿಸ್ತಾರವಾಗಿ, ಸಮಂಜಸವಾಗಿ ಹೇಳುವ ಪುಣ್ಯವಂತರ ಪಡೆಯು ಹೆಚ್ಚಾಗಲಿ, ಭಾರತೀಯ ಪುರ್ವವೈಭವವು ಮತ್ತೆ ಗೋಚರಿಸಲಿ!

- ಸಿ.ಆರ್. ಶ್ರೀನಿವಾಸ ಅಯ್ಯಂಗಾರ್