ಮಹಾಕ್ಷತ್ರಿಯ/ಪ್ರತಿಷ್ಠಾನದ ಎರಡು ಮಾತು

ವಿಕಿಸೋರ್ಸ್ ಇಂದ
Jump to navigation Jump to search

==ಪ್ರತಿಷ್ಠಾನದ ಎರಡು ಮಾತು==

ಕನ್ನಡದ ಓದುಗರಿಗೆ ದೇವುಡು ನರಸಿಂಹ ಶಾಸ್ತ್ರಿಗಳು, ದೇವುಡು ಎಂದೇ ಪರಿಚಿತರು. ಸಾಹಿತ್ಯದ ಎಲ್ಲಾ ಕ್ಷೇತ್ರದಲ್ಲೂ ಕೈ ಆಡಿಸಿ, ಸೈ ಎನಿಸಿಕೊಂಡ ಧೀಮಂತ ಸಾಹಿತಿ. ದೇವುಡು ಅವರು ರಚಿಸಿರುವ ಮಹಾಬ್ರಾಹ್ಮಣ, ಮಹಾಕ್ಷತ್ರಿಯ, ಮಹಾದರ್ಶನ ಕನ್ನಡ ಕಾದಂಬರಿ ರಂಗದಲ್ಲಿ ನವಮನ್ವಂತರವನ್ನೇ ಸಾರಿವೆ. ೧೯೬೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ರಾಷ್ಟ್ರೀಯ ಪಾರಿತೋಷಕವನ್ನು ಪಡೆದ ಕೃತಿ ``ಮಹಾಕ್ಷತ್ರಿಯ’’.

``ಮಹಾಕ್ಷತ್ರಿಯ’’ ಒಂದು ಪೌರಾಣಿಕ ಕಾದಂಬರಿ. ದೇವುಡು ಅವರ ಸುವರ್ಣ ಲೇಖನಿಯಿಂದ ರೂಪುತಾಳಿ ನಿಂತ ಅತಿ ಸುಂದರವಾದ ಕಾದಂಬರಿ. ಕನ್ನಡಕ್ಕೆ ಹೊಸತಾದ, ಅಷ್ಟೇ ಏಕೆ, ಭಾರತೀಯ ಸಾಹಿತ್ಯ ಭಂಡಾರಕ್ಕೆ ರತ್ನಪ್ರಾಯವಾದ ಕೃತಿ. ನಮ್ಮ ಭಾರತೀಯ ಸಂಸ್ಕೃತಿಯ ಸಾರವನ್ನೆಲ್ಲಾ ಎರಕ ಹೊಯ್ದಿದ್ದಾರೆ ದೇವುಡು ಅವರು.

``ಮಹಾಕ್ಷತ್ರಿಯ’’ ಹಿಂದಿ ಭಾಷೆಗೆ ಭಾಷಾಂತರವಾಗಿದ್ದು, ಉತ್ತರ ಪ್ರದೇಶದ ಸಾಹಿತ್ಯ ಅಕಾಡೆಮಿಯು ಇದನ್ನು ಹೊರತಂದಿದ್ದಾರೆ ಎಂದು ಓದುಗರಾದ ತಮ್ಮಲ್ಲಿ ನಮ್ಮ ಸಂತಸವನ್ನು ಹಂಚಿಕೊಳ್ಳಲು ``ದೇವುಡು ಪ್ರತಿಷ್ಠಾನ’’ಕ್ಕೆ ಹೆಮ್ಮೆಯ ವಿಷಯ.

ಕನ್ನಡಿಗರ ಪ್ರೋತ್ಸಾಹ ಈ ಕೃತಿಯ ಇಪ್ಪತ್ತನೆಯ ಮುದ್ರಣವನ್ನು ಹೊರತರಲು ಕಾರಣವಾಗಿ ಪ್ರತಿಷ್ಠಾನವು ಕನ್ನಡ ಅಭಿಮಾನಿಗಳಿಗೆ ಆಭಾರಿಯಾಗಿರುತ್ತದೆ.

ಇದರ ಮುದ್ರಣವನ್ನು ಅಂದವಾಗಿ ಹೊರತರಲು ಕಾರಣರಾದ, ಆತ್ಮೀಯ ಮಿತ್ರರೂ ಹಾಗೂ ವೆಂಕಟೇಶ್ವರ ಪ್ರಿಂಟಿಂಗ್ ಪ್ರೆಸ್ಸಿನ ಮಾಲೀಕರೂ ಆದ ಶ್ರೀ ಸಿ.ಆರ್.ಜನಾರ್ದನ ಅವರಿಗೂ ಈ ಕೃತಿಯ ಪ್ರಕಾಶನಕ್ಕೆ ಕಾರಣರಾದ ಟಿ.ಎನ್. ಕೃಷ್ಣಯ್ಯಶೆಟ್ಟಿ ಅಂಡ್ ಸನ್ ಸಂಸ್ಥೆಯ ಮಾಲೀಕರಾದ ಆತ್ಮೀಯರಾದ ಶ್ರೀ ಸುರೇಶ್ ಅವರಿಗೂ ಪ್ರತಿಷ್ಠಾನವು ಆಭಾರಿಯಾಗಿದೆ.

ಈ ಮಹಾಕೃತಿಯನ್ನು ಹಾಗೂ ಅವರ ಇತರ ಕೃತಿಗಳನ್ನೂ ಆದರದಿಂದ ಬರಮಾಡಿಕೊಂಡು ಅವುಗಳ ಪುನರ್ ಮುದ್ರಣಕ್ಕೆ ಅವಕಾಶ ಮಾಡಿಕೊಡುತ್ತಿರುವ ಕನ್ನಡ ಸಾಹಿತ್ಯಾಭಿಮಾನಿಗಳಿಗೆ ನಾವು ಚಿರಋಣಿಗಳು. ಮಹಾಕ್ಷತ್ರಿಯ ಇಪ್ಪತ್ತನೆಯ ಮುದ್ರಣವನ್ನು ಕಂಡಿರುವುದು ತಮ್ಮ ಅಭಿಮಾನದಿಂದ. ಇದಕ್ಕಾಗಿ ಪ್ರತಿಷ್ಠಾನವು ಕನ್ನಡಿಗರಿಗೆ ಆಭಾರಿಯಾಗಿರುತ್ತದೆ.

ಗಂಗಾಧರ್ ದೇವುಡು

ಅಧ್ಯಕ್ಷರು,

ದೇವುಡು ಪ್ರತಿಷ್ಠಾನ