ಮಹಾಕ್ಷತ್ರಿಯ/ಬೀಳುವುದು ಏಳುವುದಕ್ಕೆ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

==೨೮.ಬೀಳುವುದು ಏಳುವುದಕ್ಕೆ==

ದೇವಸಭೆಯು ದೇವಾಚಾರ್ಯನ ಅಧ್ಯಕ್ಷತೆಯಲ್ಲಿ ಸೇರಿದೆ. ಪಿತೃಗಣಗಳೂ ಋಷಿಗಣಗಳೂ ವಿಶೇಷಾಹ್ವಾನದ ಮೇಲೆ ಬಂದಿದ್ದಾರೆ. ಅಗ್ನಿ ವಾಯುಗಳು ಮಾತ್ರ ಕಾರಣಾಂತರದಿಂದ ತಾವು ಬರುವುದಕ್ಕಾಗುವುದಿಲ್ಲವೆಂದೂ, ಸಭೆಯ ನಿರ್ಣಯಗಳಿಗೆ ತಮ್ಮ ಒಪ್ಪಿಗೆಯುಂಟೆಂದೂ ಬಿನ್ನವಿಸಿಕೊಂಡಿದ್ದಾರೆ. ಸಭೆಯು ಸಕಾಲದಲ್ಲಿ ಆರಂಭವಾಯಿತು.

ಅಧ್ಯಕ್ಷರು ಎದ್ದು ಸಭೆಯನ್ನು ಸಂಬೋಧಿಸಿ, “ಮಾನ್ಯರೆ, ಇಂದು ಈ ಸಭೆಯು ಸೇರಿರುವ ಉದ್ದೇಶವು ತಮಗೆಲ್ಲ ತಿಳಿದೇ ಇದೆ. ಈಗಿನ ದೆವೇಂದ್ರನು ತನ್ನ ಅಧೀಕಾರ ಪೂರ್ಣವಾಗಿದೆಯೇ ಎಂಬ ಪ್ರಶ್ನವನ್ನು ಎತ್ತಿದ್ದಾನೆ. ಆತನು ನನ್ನನ್ನು ಕೇಳಿದಾಗ, ‘ನಾನು ಶಚೀಪತಿತ್ವವಿಲ್ಲದ ಇಂದ್ರತ್ವವು ಪೂರ್ಣವಾಗುವುದಿಲ್ಲ’ ಎಂದು ಹೇಳಬೇಕಾಯಿತು. ಹೇಳಿದೆ. ಈಗ ಆ ಇಂದ್ರತ್ವವು ಪೂರ್ಣವಾಗಬೇಕಾದರೆ ಏನು ಮಾಡಬೇಕೋ ಅದನ್ನು ಗೊತ್ತು ಮಾಡುವುದು ಈ ಸಭೆಯ ಕೆಲಸ” ಎಂದು ಹೇಳಿ ಕುಳಿತನು.

ಒಬ್ಬ ದೇವತೆಯು ಎದ್ದು ಹೇಳಿದನು : “ಇಂದ್ರಪದವಿಗೆ ಬೇಕಾದ ಅಧಿಕಾರವೂ ಗೌರವವೂ ಪೂರ್ಣವಾಗಿದೆಯೆಂದೇ ನನ್ನ ನಂಬಿಕೆ. ಪ್ರತಿದಿನವೂ ದೇವಗಂಗಾದಿಗಳು ಸ್ನಾನಕ್ಕೆ ನೀರನ್ನು ಒದಗಿಸುತ್ತಿವೆ. ಕಲ್ಪವೃಕ್ಷಗಳು ದಿನವೂ ಬೇಕಾದ ದಿವ್ಯವಸ್ತ್ರಗಳನ್ನು ತಂದೊಪ್ಪಿಸುತ್ತಿವೆ. ಚಿಂತಾಮಣಿಯು ಬೇಕಾದ ದಿವ್ಯಾಭರಣಗಳನ್ನು ತಂದು ನೀಡುತ್ತಿದೆ. ಅಪ್ಸರೆಯರು ತಮ್ಮನ್ನೇ ಒಪ್ಪಿಸಿಕೊಂಡು ಆರಾಧಿಸುತ್ತಿದ್ದಾರೆ. ಗಂಧರ್ವಗಣಗಳು ನೃತ್ಯಗೀತಾದಿ ಸೇವೆಯನ್ನು ಒಪ್ಪಿಸುತ್ತಿವೆ. ಪಿತೃಗಣಗಳು ಓಲೈಸುತ್ತಿದ್ದಾರೆ. ಋಷಿಗಣವು ಆಶೀರ್ವಾದ ಮಾಡುತ್ತಿವೆ. ಕರ್ಮಬ್ರಹ್ಮಸ್ವರೂಪನಾದ ಅಗ್ನಿಯೂ ಮಾತರಿಶ್ವನಾದ ವಾಯುವೂ ಸೇವಿಸುತ್ತಿದ್ದಾರೆ. ಇನ್ನೇನಾಗಬೇಕು ! ಮಾನವೇಂದ್ರನು ಮಹೇಂದ್ರನಾದಾಗ ಏನೇನು ಅಧಿಕಾರಗಳನ್ನು ಕೊಡಬಹುದೋ ಅದೆಲ್ಲವನ್ನೂ ಕೊಟ್ಟೇ ಇದೆ. ಅದರಿಂದ ಈ ಪ್ರಶ್ನವೇ ಏಳುವುದಿಲ್ಲ.”

ಇನ್ನೊಬ್ಬರು ಹೇಳಿದರು : “ಇಂದ್ರತ್ವವು ಪೂರ್ಣವಾಗಿದೆಯೇ ಎಂದು ಪ್ರಶ್ನೆ. ಅದಕ್ಕೆ ನಮ್ಮ ಮಿತ್ರರು ಉತ್ತರ ಕೊಟ್ಟಿದ್ದಾರೆ. ಮಾನವರು ದೇವಸಿಂಹಾಸನವನ್ನು ಏರಿದಾಗ ಏನೇನು ಕೊಡಬಹುದೋ ಅದೆಲ್ಲವನ್ನೂ ಕೊಡಲಾಗಿದೆ. ಇನ್ನು ಶಚೀಪತಿತ್ವದ ಮಾತು. ಅದು ಈ ಸಂದರ್ಭದಲ್ಲಿ ಎತ್ತಬೇಕಾಗಿಲ್ಲ. ಶಚೀದೇವಿಯು ಆ ಇಂದ್ರನ ಪತ್ನಿ. ನಾವು ದುಡುಕಿದರೆ ಅನ್ಯಪತ್ನಿಯನ್ನು ವಿನಿಯೋಗ ಮಾಡಿದ ಅಕಾರ್ಯವನ್ನು ಮಾಡಿದವರಾದೇವು.”

ಋಷಿಗಳು ಒಬ್ಬರು ಎದ್ದು ಹೇಳಿದರು : “ಈಗ ನಮ್ಮ ಮುಂದಿರುವ ಪ್ರಶ್ನವಿದು. ಇಂದ್ರತ್ವ ಪೂರ್ಣವಾಗಬೇಕಾದರೆ ಶಚೀಪತಿತ್ವವೂ ಸೇರಬೇಕು. ಇದುವರೆಗೆ ಇನ್ನೊಬ್ಬ ಇಂದ್ರನನ್ನು ನಾವು ವರಿಸಿರಲಿಲ್ಲ. ಈಗ ವರಿಸಿದ್ದೇವೆ. ಆತನ ಅಧಿಕಾರ ಪೂರ್ಣವಾಗಬೇಕು. ಶಚಿಯಿಲ್ಲದೆ ನಡೆಯುವುದಿಲ್ಲ. ಅದರಿಂದ ಈ ಶಚಿಯು ಅಧಿಕಾರಪ್ರಯುಕ್ತವಾಗಿ ಇಂದ್ರನರ್ಧ ಸಿಂಹಾಸನವನ್ನು ಪಡೆದಿರುವ ಇಂದ್ರಾಣಿಯೇ? ಅಥವಾ ಮನ್ವಂತರದ ಆದಿಯಲ್ಲಿ ಅಧಿಕಾರಕ್ಕೆ ಬಂದ ಇಂದ್ರನನ್ನು ಮದುವೆಯಾದ ಪತ್ನಿಯೇ? ಇದನ್ನು ಈಗ ಇತ್ಯರ್ಥಮಾಡಬೇಕು. ನಾನೇನೋ ‘ಶಚೀದೇವಿಯು ಅಧಿಕಾರ ಪ್ರಯುಕ್ತಳಾದವಳು. ಇಂದ್ರನ ಪಟ್ಟಕ್ಕೆ ಬಂದವರ ಸ್ವತ್ತಾಗಿರಬೇಕು’ ಎಂದು ಅಭಿಪ್ರಾಯಪಡುತ್ತೇನೆ.

ಸಭೆಯಲ್ಲಿ ಗದ್ದಲವೋ ಗದ್ದಲವಾಯಿತು. ಕೆಲವರು “ಇದು ಸ್ತ್ರೀವಿಷಯಕವಾದ ಪ್ರಶ್ನೆ. ಸ್ತ್ರೀಯನ್ನು ಒಮ್ಮೆ ವಿನಿಯೋಗ ಮಾಡಬಹುದೇ ಹೊರತು ಮತ್ತೊಮ್ಮೆ ವಿನಿಯೋಗ ಮಾಡಲು ಯಾರಿಗೂ ಅಧಿಕಾರವಿಲ್ಲ. ಆಕೆಯು ಬೇಕಾದರೆ, ತನ್ನ ಮೇಲೆ ಇತರರದು ಏನೂ ಅಧಿಕಾರವಿಲ್ಲವೆಂದು ಸ್ಪಷ್ಟವಾದ ಮೇಲೆ, ತನ್ನನ್ನು ತಾನು ತನ್ನಿಚ್ಛೆಯಂತೆ ವಿನಿಯೋಗಿಸಿಕೊಳ್ಳಬಹುದು. ಆದರದು ಕಾಮ ವಿನಿಯೋಗವಾಗುವುದೇ ಹೊರತು ಧರ್ಮವಾಗುವುದಿಲ್ಲ” ಎಂದರು.

ಇನ್ನೊಬ್ಬರು ಎದ್ದು ಹೇಳಿದರು : “ಇಲ್ಲಿ ಧರ್ಮಕಾಮಗಳ ಪ್ರಸ್ತಾಪವಿಲ್ಲ. ಅಧಿಕಾರವು ಅರ್ಥಸ್ಥಾನ. ಶಚಿಯು ಆ ಸ್ಥಾನಕ್ಕೆ ಬದ್ಧಳಾಗಿದ್ದರೆ ಆ ಸ್ಥಾನಕ್ಕೆ ಬಂದವರಿಗೆಲ್ಲ ಆಕೆಯಿಂದ ಸೇವೆಯು ಸಲ್ಲಬೇಕು. ಹಾಗಿಲ್ಲದೆ, ಆಕೆಯು ಇಂದ್ರನ ಧರ್ಮಪತ್ನಿಯಾದರೆ ಆ ಮಾತೇ ಬೇರೆ. ಅದನ್ನು ಗೊತ್ತುಮಾಡಿ.”

ಸಭೆಯಲ್ಲಿ ದೀರ್ಘಕಾಲದ ಚರ್ಚೆಯಾಯಿತು. ಕೊನೆಗೆ “ಶಚಿಯು ಅಧಿಕಾರ ಸ್ಥಾನಬದ್ಧಳು. ಅದರಿಂದ ಶಚೀಪತಿತ್ವವೆನ್ನುವುದು ಅಧಿಕಾರ ಸಂಕೇತವೇ ಹೊರತು ಮತ್ತೇನೂ ಅಲ್ಲ. ಅದರಿಂದ ಶಚೀದೇವಿಯು ಹೊಸ ಇಂದ್ರನನ್ನು ಕಾಯೇನ ವಚಸಾ ಮನಸಾ ಸೇವಿಸಲೇಬೇಕು” ಎಂದು ಗೊತ್ತಾಯಿತು.

ದೇವಗುರುವು ಇಷ್ಟವಿಲ್ಲದಿದ್ದರೂ ಸಭೆಯ ನಿರ್ಣಯವನ್ನು ಅಂಗೀಕರಿಸಬೇಕಾಯಿತು. ಸಭೆಯು ಈ ನಿರ್ಣಯವನ್ನು ಹೊಸ ಇಂದ್ರನಿಗೂ ಶಚೀದೇವಿಗೂ ಕಳುಹಿಸುವ ಭಾರವನ್ನು ದೇವಗುರುಗಳಿಗೆ ಒಪ್ಪಿಸಿತು. ಹಾಗೆಯೇ ಆ ನಿರ್ಣಯದಂತೆ ವ್ಯಕ್ತಿಗಳು ನಡೆಯುವಂತೆ ನೋಡಿಕೊಳ್ಳುವ ಭಾರವನ್ನೂ ಆತನಿಗೇ ವಹಿಸಿತು.

ಬೃಹಸ್ಪತಿಯು ಚಿಂತಾಭಾರದಿಂದ ಕುಗ್ಗಿದವನಂತೆ ನಿಧಾನವಾಗಿ ಮಂದಿರಕ್ಕೆ ಬಂದನು. ಆತನಿಗೆ ಆವೊತ್ತು ರಥವೇರಿ ಬರುವುದಕ್ಕೂ ಇಷ್ಟವಿಲ್ಲ. ದಾರಿಯುದ್ದಕ್ಕೂ ಒಂದೇ ಯೋಚನೆ; “ಛೇ, ಅವಿವೇಕವಾಯಿತು. ಈಗ ಶಚಿಯನ್ನೇನೋ ದೇವಸಭೆಯು ಇಂದ್ರನಿಗೆ ಕೊಟ್ಟುಬಿಟ್ಟಿತು. ಆದರೆ ಆಕೆ ಒಪ್ಪುವಳೇ? ಆಕೆಯು ಆಗುವುದಿಲ್ಲವೆಂದರೆ ಸಭೆಯ ನಿರ್ಣಯವೇನಾಗಬೇಕು? ಏನು ದನವೇ? ಹೊಡೆದು, ಬಡಿದು, ಎಳೆದುಕೊಂಡು ಹೋಗಿ ಮತ್ತೊಂದು ಮನೆಯಲ್ಲಿ ಕಟ್ಟಿ ಬರೋಣವೆನ್ನುವುದಕ್ಕೆ ? ನಿಜವಾಗಿಯೂ ಇದರಿಂದ ಏನೋ ಅನರ್ಥವಾಗಲಿದೆ. ಅಥವಾ ನಾನೇಕೆ ಇಷ್ಟು ಯೋಚಿಸಲಿಲ್ಲ? ಎಲ್ಲರ ಹೃದಯದಲ್ಲೂ ಕುಳಿತು ಆಟವಾಡಿಸುವ ಆ ಮಹಾವಿಷ್ಣುವಿನದು ಈ ಕೆಲಸ. ಆತನು ಮಾಡಿದಂತಾಗಲಿ.”

ಹೋಗುತ್ತಿದ್ದ ದೇವಾಚಾರ್ಯನು ಹಾಗೆಯೇ ನಿಂತನು : “ತಡೆ, ಇದನ್ನೇ ಏಕೆ ಹಳೆಯ ಇಂದ್ರನನ್ನು ಹಿಂತಿರುಗಿ ಕರೆದು ತರಲು ಉಪಯೋಗಿಸಿ ಕೊಳ್ಳಬಾರದು! ಹೌದು. ಶಚಿಯು ಏನಾದರೂ ಮಾಡಿ ಈ ಇಂದ್ರನಿಂದ ಒಂದು ಅವಧಿಯನ್ನು ಪಡೆಯಬೇಕು. ಅಷ್ಟರೊಳಗೆ ಇಂದ್ರನೆಲ್ಲಿರುವನೋ ಕಂಡುಹಿಡಿಯಬೇಕು. ಆತನು ಮತ್ತೆ ಪವಿತ್ರನಾಗುವಂತೆ, ಆತನಿಗೆ ಈಗ ಬಂದಿರುವ ಹತ್ಯೆಯಿಂದ ಬಿಡುಗಡೆಯಾಗುವಂತೆ ಏನಾದರೂ ಮಾಡಿಸಬೇಕು. ಆದರೆ, ಇದು ನನಗೆ ಏನೂ ತಿಳಿಯದಂತೆ ಇರಬೇಕು. ಇಲ್ಲವಾದರೆ ಈ ಇಂದ್ರನು ಕೇಳಿದರೆ ಹೇಳಲೇಬೇಕಾಗುವುದು ಸರಿ” ಎಂದು ತಲೆದೂಗುತ್ತ ಮತ್ತೆ ಉತ್ಸಾಹಗೊಂಡು ಮಂದಿರಕ್ಕೆ ಬಂದನು.

ಆತನು ಮಂದಿರಕ್ಕೆ ಬರುತ್ತಿದ್ದ ಹಾಗೆಯೇ ಪ್ರಹರಿಯು ಬಂದು ವಂದಿಸಿ “ಶಚೀದೇವಿಯು ದರ್ಶನಕ್ಕೆ ಬಂದಿದ್ದಾರೆ” ಎಂದನು. ಬೃಹಸ್ಪತಿಯು “ಒಳ್ಳೆಯದಾಯಿತು” ಎಂದು ನೇರವಾಗಿ ಆಕೆಯನ್ನು ನೋಡಲು ಹೋದನು.

ಶಚೀದೇವಿಯು ಇಂದ್ರನು ಓಡಿಹೋದಾಗಿನಿಂದ ಭೂಮಿಗೆ ಇಳಿದು ಹೋಗಿದ್ದಳು. ದೇವತೆಗಳು ಇಂದ್ರನನ್ನು ಪಿಶಾಚಗ್ರಸ್ಥರಾದಂತೆ ಹುಡುಕಿದುದು, ಮೂರು ಲೋಕಗಳಲ್ಲಿಯೂ ಆತನೆಲ್ಲಿರುವನು ಎಂಬ ಗುರುತೂ ಸಿಕ್ಕುದುದು, ಅಗ ಯತ್ನವಿಲ್ಲದೆ ದೇವರ್ಷಿಪಿತೃಗಣಗಳು ಇನ್ನೊಬ್ಬ ಇಂದ್ರನನ್ನು ಅರಸಿ ತಂದು ಆತನಿಗೆ ಇಂದ್ರಾಭಿಷೇಕ ಮಾಡಿದುದು, ಆತನು ಅಧಿಕಾರಪೂರ್ಣತೆಯನ್ನು ಬಯಸಿದುದು, ಇಷ್ಟೂ ಆಕೆಗೆ ಗೊತ್ತು. ಆಕೆಯು ಅಂತಃಪುರವನ್ನು ಬಿಟ್ಟು ಈಚೆಗೆ ಬರದಿದ್ದರೂ ಇಂದಿನ ದೇವಸಭೆಯಲ್ಲಿ ನಿರ್ಣಯವಾಗುತ್ತಿದ್ದ ಹಾಗೆಯೇ ಆಕೆಗೆ ತಿಳಿದಿದೆ. ಶಚಿಯಾದರೂ ಮೂರು ಲೋಕದ ಒಡೆಯನ ಒಡತಿಯಾದರೂ, ಆಕೆಯು ಹೆಣ್ಣಲ್ಲವೆ ? ಆದ ನಿರ್ಣಯವನ್ನು ಕೇಳಿ ಆಕೆಗೆ ಎದೆ ಒಡೆದಂತಾಯಿತು. ‘ತಾನು ಇನ್ನೊಬ್ಬನನ್ನು ಸೇವಿಸಬೇಕೆ ? ಹಾಗೆಂದು ವಿಧಿಸುವವನೂ, ಆ ವಿಧಿಯು ಆಚರಣಕ್ಕೆ ಬರುವಂತೆ ನೋಡಿಕೊಳ್ಳುವವನೂ ದೇವಗುರು ! ಯಾವ ಗುರುವನ್ನು ತಾವು ಇಂದ್ರದಂಪತಿಗಳು ದಿನವೂ ಅರ್ಚಿಸುತ್ತಿದ್ದರೋ, ಆತನಿಂದು ತನ್ನನ್ನು ಇನ್ನೊಬ್ಬನಿಗೆ ವಿನಿಯೋಗ ಮಾಡಲು ಕರ್ತ ! ಅಯ್ಯೋ ನನ್ನ ಹಣೆಯಲ್ಲಿ ಏನು ಬರೆಯಿತು?”

ಬೃಹಸ್ಪತಿಯನ್ನು ಕಂಡು ಶಚಿಯು ಮತ್ತೆ ಗೊಳೋ ಎಂದು ಅತ್ತಳು. ದೇವಾಚಾರ್ಯನು ಆಕೆಯ ಕಣ್ಣಲ್ಲಿ ನೀರು ಬಂದಿದ್ದುದನ್ನು ನೋಡಿರಲಿಲ್ಲ. ಆತನಿಗೂ ಕಣ್ಣಲ್ಲಿ ನೀರು ಬಂತು. “ಶಚೀದೇವಿ, ನೀನು ನನಗೆ ಮಗಳಂತೆ ! ನೀನು ಕಣ್ಣೀರು ಬಿಡುವುದನ್ನು ನಾನು ನೋಡಲಾರೆ. ದೇವಸಭೆಯು ದುಡುಕಿದೆ. ಅದನ್ನು ಸರಿಮಾಡೋಣವಂತೆ, ನೀನು ಅಳಬೇಡ” ಎಂದು ಸಮಾಧಾನ ಹೇಳಿದನು.

ಶಚಿಯು ಕಣ್ಣೀರು ಒರೆಸಿಕೊಂಡು ಬಿಕ್ಕಳಿಸುತ್ತಾ ಕೇಳಿದಳು : “ದೇವಸಭೆಯು ದೇವರಾಜನ ಅಧಿಕಾರ ಪೂರ್ಣವಾಗುವುದನ್ನು ಮಾತ್ರ ನೋಡಿತು. ನಾನು ಸ್ತ್ರೀ, ನನಗೆ ಪ್ರತ್ಯೇಕವಾದ ಅಧಿಕಾರವೊಂದಿದೆಯೆಂಬುದನ್ನು ಮಾತ್ರ ಗಮನಿಸಲಿಲ್ಲ.”

ದೇವಗುರುವು ವಿಷಣ್ಣನಾಗಿ ಹೇಳಿದನು : “ಅಮ್ಮಾ ಈ ಸಭೆಗೆ ನಾನು ಅಧ್ಯಕ್ಷನಾಗಬಾರದಿತ್ತು. ಯತ್ನವಿಲ್ಲ. ನಡೆದುಹೋಯಿತು. ಚಿಂತಿಸಬೇಡ, ಆ ನಿರ್ಣಯದಿಂದ ನಿನಗೆ ಹಾನಿಯಾಗದಂತೆ ನೋಡಿಕೊಳ್ಳೋಣ.”

ಶಚೀದೇವಿಗೆ ಅರ್ಧ ಧೈರ್ಯವಾಯಿತು. ಆದರೂ ಕೋಪವಿಳಿದಿಲ್ಲ. “ದೇವ ಸಭೆಯನ್ನು ಕರೆಯಬೇಕೇಕೆ? ಅಲ್ಲಿ ನಿರ್ಣಯವನ್ನು ಮಾಡಿಸಬೇಕೇಕೆ? ಅನಂತರ ಅದರಿಂದ ‘ನಿನಗೆ ಹಾನಿಯಾಗದಂತೆ ನೋಡಿಕೊಳ್ಳೋಣ’ ಎಂಬ ಮಾತೇಕೆ? ಮೊದಲೇ ದೇವಸಭೆಯಲ್ಲಿ ನಿರ್ಣಯವೇ ಆಗದಂತೆ ತಡೆಯಬಾರದಾಗಿತ್ತೆ? ಅಥವಾ ದೇವಸಭೆಯೇ ಸೇರದಂತೆ ನೋಡಿಕೊಳ್ಳಬಾರದಾಗಿತ್ತೆ?” ಎಂದು ಆಕೆಯ ಸಂಕಟ. ಬಹುದಿನದಿಂದ ತಾನೂ ತನ್ನೊಡೆಯನೂ ಗೌರವಿಸುತ್ತಿದ್ದಾತನಲ್ಲಿ ಈ ಮಾತನ್ನು ಕಂಠೋಕ್ತವಾಗಿ ಹೇಳಿ ನಿಷ್ಠುರಪಡಿಸುವುದೆಂತು? ಆದರೂ ಆತನನ್ನೇ ನೋಡುತ್ತಿರುವ ಕಣ್ಣು ಏನೇನೋ ಹೇಳುತ್ತಿತ್ತು.

ಆತನೂ ನೆಲವನ್ನು ನೋಡುತ್ತ ಕುಳಿತಿದ್ದಾನೆ. ಏನೋ ಯೋಚನೆಯಲ್ಲಿ ಅನ್ಯಮನಸ್ಕನಾಗಿದ್ದಾನೆ. ಇಲ್ಲದಿದ್ದರೆ ಶಚೀದೇವಿಯ ಯೋಚನೆಗಳನ್ನು ಆತನು ಅರ್ಥಮಾಡಿಕೊಳ್ಳುತ್ತಿದ್ದನೋ ಏನೋ? ಅಂತೂ ಇಬ್ಬರೂ ಬಹಳ ಹೊತ್ತು ಮಾತನಾಡಲಿಲ್ಲ.

ಕೊನೆಗೆ ದೇವಗುರುವು ಮಾತನಾಡಿ : “ದೇವಿ, ಅದರ ಇತ್ಯರ್ಥವು ನಿನ್ನ ಕೈಯ್ಯಲ್ಲಿದೆ. ನಾನು ಏನೂ ತಿಳಿಯದವನಂತೆ ನಿರ್ಣಯವನ್ನು ನಿನಗೂ ಆತನಿಗೂ ಕಳುಹಿಸಿಕೊಡುತ್ತೇನೆ. ನೀನು ನಿರ್ಣಯವನ್ನು ತೆಗೆದುಕೊಂಡು ಆತನ ಬಳಿಗೆ ಹೋಗು. ಆತನಿಗೆ ಹೇಳು : ‘ಇದುವರೆಗೂ ನಾನು ಹಳೆಯ ಇಂದ್ರನನ್ನು ಗಂಡನೆಂದೇ ವ್ಯವಹಾರ ಮಾಡಿದ್ದೇನೆ. ಅದರಿಂದ, ನಾನು ನನ್ನನ್ನು ಯಥೇಚ್ಛವಾಗಿ ವಿನಿಯೋಗಿಸಿಕೊಳ್ಳಬಹುದು. ಆದರೆ, ಧರ್ಮಶಾಸ್ತ್ರದ ಅಡ್ಡಿಯೊಂದಿದೆ. ಸ್ತ್ರೀಯು ದೇಶಾಂತರಗತನಾದ ಪುರುಷನಿಗಾಗಿ ಎಷ್ಟು ದಿನ ಕಾಯಬೇಕು ಎಂದು ಶಾಸ್ತ್ರ ಹೇಳುವುದೋ ಅಷ್ಟು ದಿನ ಕಾದು ನೋಡುವುದಕ್ಕೆ ಅಪ್ಪಣೆಯಾಗಬೇಕು’ ಎಂದು ನಮಸ್ಕರಿಸು, ಆತನು ತಪ್ಪದೆ ಆಗಲೆನ್ನುವನು. ಅಷ್ಟರೊಳಗೆ ವಿಶ್ವಪ್ರಯತ್ನಮಾಡಿ ನಮ್ಮ ಇಂದ್ರನನ್ನು ಹುಡುಕಿಸೋಣ.”

ಶಚಿಗೆ ಮನಸ್ಸು ಏನೋ ಹಗುರವಾದಂತಾಯಿತು. ಆದರೂ ಇನ್ನೂ ಬೆದರಿಕೆ ತಪ್ಪಲಿಲ್ಲ. ಕೇಳಿದಳು : “ಒಂದು ವೇಳೆ ಆತನು ದುಡುಕಿದರೆ? ಹುಡುಕಿದರೂ ಇಂದ್ರನು ಸಿಕ್ಕದೆ ಹೋದರೆ?”

ಬೃಹಸ್ಪತಿಯು ಧೀರಭಾವದಿಂದ ಹೇಳಿದನು : “ಧರ್ಮವನ್ನು ಮೀರುವುದಕ್ಕೆ ಯಾರಿಗೂ ಸಾಧ್ಯವಿಲ್ಲ. ಧರ್ಮದಿಂದಲೇ ಎಲ್ಲವೂ ನಿಂತಿರುವುದು. ಮಹಾವಿಷ್ಣುವನ್ನು ನಾವು ಪೂಜಿಸುವುದು ಧರ್ಮಮಯನೆಂದು. ನೀನು ಹೋಗುವಾಗ ಲಕ್ಷ್ಮೀನಾರಾಯಣನನ್ನು ಪೂಜೆಮಾಡಿ ಹೋಗು. ಆತನು ನೀನು ಹೇಳಿದ ಹಾಗೆ ಕೇಳುವನು. ಅದಕ್ಕಿಂತಲೂ ನೀನು ಹೇಳಿದ ಎರಡನೆಯ ವಿಷಯ ಹೆಚ್ಚು ಗಂಭೀರವಾದುದು. ಬೇಡ ಎಂದಾಗ ತಲೆಮರೆಸಿಕೊಳ್ಳುವುದು ದೇವತೆಗಳಲ್ಲಿ ಹುಟ್ಟುತ್ತಲೆ ಬಂದಿರುವ ಶಕ್ತಿ. ಆದರೆ, ಮರೆಯಾಗಿರುವವರನ್ನು ಕಂಡುಹಿಡಿಯಲು ಏನು ಮಾಡಬೇಕು ಎಂಬುದು ಇಂದ್ರನಿಗೆ ಮಾತ್ರ ಗೊತ್ತು. ಆತನೇ ತಪ್ಪಿಸಿಕೊಂಡಿರಲು, ಇನ್ನು ಯಾರನ್ನು ಕೇಳುವುದು? ಅದನ್ನು ಯೋಚಿಸಬೇಕಾದುದು.”

ಶಚಿಗೆ ಥಟ್ಟನೆ ಇಂದ್ರನು ಹೇಳಿದ್ದ ಮಾತು ನೆನಪಾಯಿತು. ಆದರೆ ಆತನು ಹೇಳಿರುವ ರಹಸ್ಯವನ್ನು ಆತನಪ್ಪಣೆಯಿಲ್ಲದೆ ಇತರರಿಗೆ ಹೇಳುವುದೆಂತು? ಅದರಿಂದ ಅದನ್ನು ಮುಚ್ಚಿಕೊಳ್ಳಲು, “ಬೇಕಾದರೆ ನಾನೇ ಹುಡುಕಲು ಹೋಗುವೆನು. ನನ್ನ ಮೇಲಿನ ಅಭಿಮಾನದಿಂದಲಾದರೂ ಆತನು ಪ್ರಕಟವಾಗುವನೇನೋ ನೋಡೋಣ.” ಎಂದಳು.

ಬೃಹಸ್ಪತಿಯು ತನ್ನ ಸಲಹೆಯನ್ನು ಶಚೀದೇವಿಯು ಒಪ್ಪಿಕೊಂಡಿರುವಳೆಂದು ಸಂತೋಷಿತವಾಗಿ, “ನೀನು ಸೌಭಾಗ್ಯವತಿ. ನಿಮ್ಮಂಥವರಿಗೆ ಬಂದ ಕಷ್ಟಗಳು ಬಹುಕಾಲವಿರುವುದಿಲ್ಲ ಇರಲಿ, ನೋಡೋಣ. ನಮ್ಮ ಕೈಯಲ್ಲಾಗದಾಗ ಚತುರ್ಮುಖನ ಮೊರೆ ಹೊಕ್ಕರಾಯಿತು” ಎಂದನು.

ಶಚಿಯು ಧೈರ್ಯವಾಗಿ ನಕ್ಕಳು.

* * * *