ಮಹಾಕ್ಷತ್ರಿಯ/ಬೆಂಕಿಯು ಹೊತ್ತಿತು

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

೧೦.ಬೆಂಕಿಯು ಹೊತ್ತಿತು[ಸಂಪಾದಿಸಿ]

ತ್ವಷ್ಟೃಬ್ರಹ್ಮನು ಪುತ್ರವಧವೃತ್ತಾಂತವನ್ನೆಲ್ಲಾ ಕೇಳಿದನು. ಆತನಿಗೆ ಕೋಪವು ಮಿತಿಮೀರಿತು. “ಇಂದ್ರನು ಇಂತಹ ಅಕಾರ್ಯವನ್ನು ಮಾಡಿದನೆ ! ಮತ್ತೆ ಲೋಕದಲ್ಲಿ ಇಂದ್ರನೇ ಇಲ್ಲದಂತೆ ಮಾಡದಿದ್ದರೆ ನಾನೇಕಾದೇನು ?” ಎಂದು ಹಾರಾಡಿದನು. ಆತನ ಹೆಂಡತಿಯ ದುಃಖವಂತೂ ಹೇಳತೀರದು.

ಆಕೆಗೆ ಎಲ್ಲಿ ನೋಡಿದರೂ ಮಗನೇ ಕಾಣಿಸುತ್ತಾನೆ. ಕೂಡಲೇ ಕಣ್ಣಲ್ಲಿ ನೀರು ಪ್ರವಾಹವಾಗಿ ಬರುತ್ತದೆ. ಮೈಯೆಲ್ಲಾ ಹಿಡಿದಂತೆ ನೋವಾಗಿ, ಆ ನೋವೆಲ್ಲವೂ ಎದೆಗೆ ಬಂದು, ಭಾರವಾಗಿ, ಆ ಭಾರವನ್ನು ತಡೆಯಲಾರದವಳಂತೆ ಎಲ್ಲೆಂದರಲ್ಲಿ ಧೊಪ್ಪನೆ ಬಿದ್ದು ಹೋಗುತ್ತಾಳೆ. ಬೀಳುವಾಗ ಕಲ್ಲು ಗೋಡೆ, ಮರ, ಏನೂ ತೋರದೆ ಎಲ್ಲೆಂದರಲ್ಲಿ ಮಗನೇ ಎಂದು ಬೀಳುವ ಮಡದಿಯನ್ನು ನೋಡಿ ತ್ವಷ್ಟೃವಿಗೆ ಇವಳು ಏನಾಗುವಳೋ ಎಂದು ಭೀತಿಯಾಗುತ್ತದೆ. ಮಗನನ್ನು ಕೊಂದವನ ಮೇಲೆ ಕೋಪ, ಹೆಂಡತಿಯೇನಾಗುವಳೋ ಎಂಬ ಭೀತಿ, ಎರಡೂ ಸೇರಿ ಆತನಿಗೆ ಮೈಮೇಲೆ ಅರಿವೇ ಇಲ್ಲವಾಗುತ್ತದೆ. ಅರಿವು ಬಂದಾಗ, ``ಇಂದ್ರನು ನನ್ನ ಮಗನನ್ನು ತಾನಾಗಿ ಕರೆದುಕೊಂಡು ಹೋಗಿ ಹೀಗೆ ಮಾಡಿದನಲ್ಲ! ಅವನಿರಬಾರದು ಎಂದು ರೇಗುತ್ತಾನೆ. ಪುತ್ರಶೋಕದಿಂದ ಗಂಡಹೆಂಡಿರಿಬ್ಬರೂ ಬೆಂಕಿಗೆ ಬಿದ್ದು ಈಚೆಗೆ ಬಂದ ಹುಳುವಿನಂತೆ ಒದ್ದಾಡುತ್ತಿದ್ದಾರೆ. ಅಳುತ್ತಿದ್ದರೆ ಏನೋ ಒಂದು ಸಮಾಧಾನ. ಅಳು ಒಂದು ಗಳಿಗೆ ನಿಂತರೆ ಮೈಯ್ಯೆಲ್ಲಾ ಉರಿಯುವಂತಾಗುತ್ತದೆ. ತಣ್ಣೀರಿನ ಸ್ನಾನ, ಒದ್ದೆಬಟ್ಟೆ ಏನೂ ಆ ಉರಿಯನ್ನು ಶಮನಗೊಳಿಸಲಾರದು.

ಕಶ್ಯಪನು ಇಂದ್ರನ ಕಡೆಯಿಂದ ಬಂದನು. ಕಾಮಧೇನುವಿನ ಮಕ್ಕಳು, ನಂದನದಿಂದ ಕಲ್ಪವೃಕ್ಷದ ಸಸಿಗಳು, ಚಿಂತಾಮಣಿಯ ಸಂತಾನ, ಎಲ್ಲವನ್ನೂ ತಂದು ತ್ವಷ್ಟೃವಿಗೆ ಕಾಣಿಕೆ ಮಾಡಿ, ಮಗನನ್ನು ಕಾಪಾಡಬೇಕೆಂದು ಕೇಳಿಕೊಳ್ಳಲು ಆತನು ಬಂದಿದ್ದಾನೆ.

ತ್ವಷ್ಟೃವು ಅವುಗಳನ್ನು ಕಣ್ಣೆತ್ತಿ ನೋಡಲೂ ಇಲ್ಲ. “ಕಶ್ಯಪ ! ಇವುಗಳಿಂದಲೇ ನಿನ್ನ ಮಗನಿಗೆ ಅಹಂಕಾರವು ಬಂದು, ಅವನು ಅಂತಹ ಅಕಾರ್ಯವನ್ನು ಮಾಡಿದುದು. ಇವನನ್ನು ‘ವಿಶ್ವರೂಪನನ್ನು ಕರದುಕೊಂಡು ಹೋಗು ಎಂದವರು ಯಾರು? ಹೀಗೆ ಅವನನ್ನು ವಧೆಮಾಡು ಎಂದೇ ನಾವು ಅವನನ್ನು ಕಳುಹಿಸಿಕೊಟ್ಟುದು? ಈಗ ವಿಶ್ವರೂಪನ ತಾಯಿಗೆ ಹುಚ್ಚು ಹಿಡಿಯುವಂತಾಗಿದೆಯಲ್ಲ? ಯಾರು ಅದನ್ನು ನೋಡಬಹುದು !’ ಈ ದ್ರೋಹವು, ಅಪರಾಧವು, ಬರಿಯ ಕಾಣಿಕೆಗಳಿಂದ ಶಾಂತವಾಗುವುದಿಲ್ಲ ಅತೀಂದ್ರನೊಬ್ಬನನ್ನು ಸೃಷ್ಟಿಸುವೆನು. ಈ ಇಂದ್ರನು ಇಲ್ಲದಂತೆ, ಸ್ಥಾನಭ್ರಷ್ಟನಾಗುವಂತೆ ಮಾಡುವೆನು. ಇಲ್ಲದಿದ್ದರೆ ದಾವಾಗ್ನಿಗಿಂತ ಹೆಚ್ಚಾಗಿ ಉರಿದು ಉರಿಸುತ್ತಿರುವ ಈ ಶೋಕಾಗ್ನಿಯು ಶಮನವಾಗುವುದೆಂತು? ನೋಡು. ನೋಡು ವಿಶ್ವರೂಪನೇ ಎದುರು ಬಂದು ನಿಂತು “ಸೇಡು! ಸೇಡು” ಎಂದು ಕೂಗುತ್ತಿರುವನು. ನೀನು ಮಾತಾಡಬೇಡ. ನೀನು ಪುಣ್ಯವಂತ! ನಿನಗೆ ಮಕ್ಕಳು ಸತ್ತು ಗೊತ್ತಿಲ್ಲ ಅಲ್ಲದೆ, ನಿನ್ನ ಸಂತಾನವು ಬೇಕಾದಷ್ಟಿದೆ. ಸುರಾಸುರರಿಬ್ಬರೂ ನಿನಗೆ ಮಕ್ಕಳಾಗಿರುವುದರಿಂದ, ನೀನು ಪರಸ್ಪರ ಅವರು ಮಾಡುವ ವಿಶ್ವಾಸ ವಿದ್ವೇಷಗಳನ್ನು ಸಹಿಸಬಲ್ಲೆ, ನನ್ನಿಂದ ಸಾಧ್ಯವಿಲ್ಲ. ಪಾಪವೆನ್ನುವೆಯೇನೋ? ಅದೇನಾದರೂ ಇರಲಿ. ಮೊದಲು ಈ ದುಃಖವನ್ನು ಕಳೆದುಕೊಂಡು ಅನಂತರ ಪಾಪ ನಿವಾರಣಕ್ಕಾಗಿ ತಪಸ್ಸನ್ನು ಆಚರಿಸುವೆನು. ನೀನು ಅಡ್ಡಬರಬೇಡ” ಎಂದು ಖಂಡಿತವಾಗಿ ನುಡಿದನು.

ಕಶ್ಯಪನು ಎಲ್ಲವನ್ನೂ ಕೇಳಿದನು. “ಸರಿ ಜಗತ್ತಿನಲ್ಲಿ ಏನೋ ಒಂದು ವಿಪ್ಲವವಾಗಬೇಕಾಗಿದೆ. ನಾನೇಕೆ ಅಡ್ಡಿ ಬರಲಿ ? ಆಗಬೇಕಾದುದು ಆಗಿಹೋಗಲಿ. ನಾನು ಅಡ್ಡಿಯಾಗಿ ಭವಿಷ್ಯತ್ತು ಮಂಗಳವಾಗುವ ಹಾಗೆ ಮಾಡಬಹುದು ಏಕೆ? ಉಪ್ಪು ತಿಂದವರು ನೀರು ಕುಡಿಯಲಿ” ಎಂದುಕೊಂಡು ತ್ವಷ್ಟೃವಿಗೆ ಏನೂ ಹೇಳದೆ ಸುಮ್ಮನೆ ಬಂದನು.

ತ್ವಷ್ಟೃವನ್ನು ನೋಡಿಕೊಂಡು ದುಃಖೋಪಶಮನವನ್ನು ಹೇಳಿ ಹೋಗಲು ದಾನವಮುಖಂಡರು ಬಂದರು. ತ್ವಷ್ಟೃವು ಅವರಿಗೂ ಅದೇ ಮಾತು ಹೇಳಿದನು- “ನೋಡಿ, ಇಂದ್ರನಿಗೆ ಅಹಂಕಾರವು ತಾನೇತಾನಾಗಿದೆ. ಇವನಿಗೆ ನಾವೆಲ್ಲರೂ ಸೇರಿಯಲ್ಲವೆ ದೇವರಾಜಾಭಿಷೇಕವನ್ನು ಮಾಡಿದುದು? ತಾನಾಗಿ ಬಂದು ನಮ್ಮ ತೇಜಸ್ಸೆಲ್ಲ ಕ್ಷೀಣವಾಗಿ ಹೋಗುತ್ತಿದೆ. ನಮ್ಮ ಶತ್ರುಗಳ ತೇಜಸ್ಸು ಪ್ರಬಲವಾಗುತ್ತಿದೆ. ಅವರ ಕೈಮೀರಿ ನಾವು ವಿನಾಶವಾಗುವ ಮುಂಚೆ ನಮ್ಮನ್ನು ಉದ್ಧರಿಸುವ ಆಚಾರ್ಯನು ಬೇಕು ಎಂದಲ್ಲವೆ ವಿಶ್ವರೂಪನನ್ನು ಕರೆದುಕೊಂಡು ಹೋದುದು? ಅವನು ಇವನಿಗೆ ನಾರಾಯಣಕವಚವನ್ನು ಅನುಗ್ರಹಿಸಿ ಕೊಟ್ಟು ಗುರುವಾದನಲ್ಲ! ಗುರುವಿಗೆ ವಿದ್ರೋಹ ಮಾಡಬಹುದೆ ? ಆಚಾರ್ಯನಾಗಿ ಧರ್ಮಕರ್ಮಗಳನ್ನು ಕೂಡಿಸುತ್ತಿದ್ದನಲ್ಲ? ಅಂತಹ ಆಚಾರ್ಯನಿಗೆ ಅಪರಾಧಮಾಡಬಹುದೆ? ಇವನಂತೆಯೇ ಅವನು ದೇವಯೋನಿಯಾಗಿರಲು ಅವನು ಇವನಿಗೆ ಸ್ವಜನನಾದನಲ್ಲ ! ಸ್ವಜನರಿಗೆ ವಿಘಾತಿಯನ್ನು ಮಾಡಿ ಕುಲಕಳಂಕಿಯಾಗಬಹುದೆ? ಎಲ್ಲದಕ್ಕಿಂತ ಹೆಚ್ಚಾಗಿ ಆತನು ವೇದಾಧ್ಯಯನ ಸಂಪನ್ನನಲ್ಲ? ಹಗಲಿರುಳೂ ವೇದಾಧ್ಯಯನ ಮಾಡುತ್ತ ವೇದಮಂತ್ರಗಳಿಗೆಲ್ಲ ವೀರ್ಯವತ್ತತೆಯನ್ನು ಸಂಪಾದಿಸಿ ಕೊಡುತ್ತಿದ್ದನಲ್ಲಾ? ಅವೂ ಅವನನ್ನು ಕಾಪಾಡಲಾರದೆ ಹೋದವಲ್ಲಾ?” ಎಂದು ಅನೇಕ ವಿಧವಾಗಿ ಪರಿಪರಿಯಾಗಿ ಗೋಳಾಡಿದನು.

ದಾನವರು “ಇಂದ್ರನ ಅಹಂಕಾರವು ಮೇರೆ ಮೀರಿದೆ ನಿಜ. ಅದನ್ನು ಏನಾದರೂ ಮಾಡಿ ಮಟ್ಟಹಾಕದಿದ್ದರೆ ಉಳಿಯುವಂತಿಲ್ಲ. ನಿಮ್ಮಂತಹವರಿಗೆ ವಿಶ್ವರೂಪನನ್ನು ಮಗನನ್ನಾಗಿ ಪಡೆಯಬಲ್ಲ ನಿಮ್ಮಂತಹವರಿಗೆ - ಇಂತಹ ಘೋರಾಪರಾಧವನ್ನು ಮಾಡಿದನೆಂದರೆ ಇತರರನ್ನು ಲಕ್ಷಿಸುವನೆ? ಮೊದಲು ಮಟ್ಟಹಾಕಬೇಕು. ತಾವು ಆ ಕೆಲಸವನ್ನು ಮಾಡುವಿರಾ? ಅಥವಾ ನಾವು ಮಾಡೋಣವೆ? ವಿಶ್ವರೂಪಾಚಾರ್ಯನು ನಮ್ಮಲ್ಲಿ ಪಕ್ಷಪಾತವನ್ನು ತೋರಿಸುತ್ತಿದ್ದನೆಂದೇ ಇಂದ್ರನು ಹೀಗೆ ಆತನನ್ನು ವಧೆ ಮಾಡಿದುದು. ಆದ್ದರಿಂದ ಈ ಸೇಡು ತೀರಿಸುವ ಭಾರವು ನಮ್ಮದು. ನೀವು ಹೇಳಿದಂತೆ ಮಾಡಲು ನಾವು ಸಿದ್ಧರಾಗಿರುವೆವು. ನಮ್ಮ ಶುಕ್ರಾಚಾರ್ಯರೂ ತಮಗೆ ಸಹಾಯಕ್ಕೆ ಬರಲು ಸಿದ್ಧರಾಗಿರುವರು” ಎಂದು ಅವರು ಉರಿಯುವ ಬೆಂಕಿಗೆ ತುಪ್ಪವನ್ನು ಸುರಿದಂತೆ ಮಾತಾಡಿದರು.

ತ್ವಷ್ಟೃವು ಪುತ್ರಶೋಕದ ಆವೇಗದಲ್ಲಿ ವಿಶ್ವರೂಪನ ತಾಯಿಯು ಅನುಭವಿಸುತ್ತಿರುವ ಅಪಾರವಾದ ದುಃಖವನ್ನು ನೋಡಲಾರದೆ, ಅವಳಿಗೆ ಸಮಾಧಾನವಾಗಲೆಂದು ಲೋಕವನ್ನು ಅನಿಂದ್ರಿತವಾಗಿ ಮಾಡುವ ಯಾಗವೊಂದನ್ನು ಸಂಕಲ್ಪಿಸಿದನು. ಇಂದ್ರಶತ್ರುವನ್ನು ಪಡೆದು ಇಂದ್ರನನ್ನು ನಿರ್ಮೂಲ ಮಾಡಬೇಕೆಂದು ಉದ್ದೇಶಿಸಿದನು. ಘೋರವಾದ ಈ ಉದ್ದೇಶದಿಂದ ಮಾಡುವ ಯಾಗಕ್ಕೆ ಬರಲು ದೇವರ್ಷಿಗಳೂ ಮಹರ್ಷಿಗಳೂ ಸಮ್ಮತಿಸದಿರಲು, ತ್ವಷ್ಟೃವು ಅಸುರಗುರುವಾದ ಶುಕ್ರಾಚಾರ್ಯರನ್ನು ಸಹಾಯಕ್ಕಿಟ್ಟುಕೊಂಡು ಯಾಗವನ್ನು ಮಾಡಿಯೇ ಮಾಡಿದನು.

ಬ್ರಹ್ಮನಿಗೂ ಈ ಸುದ್ದಿಯು ತಿಳಿಯಿತು. “ಇದೇನಿದು ಅಸಂಪ್ರದಾಯ ಕ್ರಮ? ತನಗೆ ಪ್ರಾಪ್ತವಾದ ಪುತ್ರಶೋಕವನ್ನು ಕಳೆದುಕೊಳ್ಳಲು ತ್ರಿಲೋಕಾಧಿಪತಿಯನ್ನು ನಿರ್ಮೂಲ ಮಾಡುವುದೆಂದರೇನು?” ಎಂದು ವಿಷಾದಪಟ್ಟರೂ “ಆಗಲಿ, ಇದೂ ಒಳ್ಳೆಯದೇ ಆಗುವಂತೆ ಮಾಡೋಣ. ಇಂದ್ರನಿಗೂ ಬುದ್ಧಿಬರಲಿ” ಎಂದು ಸುಮ್ಮನಾದನು. ಅದರೂ ಜಗತ್ಕಲ್ಯಾಣ ಬುದ್ಧಿಯಿಂದ ಅದನ್ನು ಮತ್ತೆ ವಿಚಾರಮಾಡಿ ನೋಡಿ “ತ್ವಷ್ಟೃವಿನ ಸಂಕಲ್ಪವೂ ಹಾನಿಯಾಗಬಾರದು. ಇಂದ್ರನೂ ಇಲ್ಲವಾಗಬಾರದು. ಹಾಗೆ ಮಾಡು” ಎಂದು ಸರಸ್ವತಿಗೆ ಹೇಳಿ ತಾನು ಸುಮ್ಮನಾದನು.

ಯಾಗವು ನಡೆಯಿತು. ಪೂರ್ಣಾಹುತಿಯನ್ನು ಕೊಡುವಾಗ ತ್ವಷ್ಟೃವಿಗೆ ಕೊಂಚ ವಿಸ್ಮೃತಿಯಾಯಿತು. “ಇಂದ್ರಶತ್ರೋ ! ವರ್ಧಸ್ವ ! ಇಂದ್ರ ಶತ್ರುವೇ ವರ್ಧಿಸು” ಎಂದು ಹೋಮಮಾಡಿದನು. ಸರಸ್ವತಿಯು ಇಂದ್ರನ ಶತ್ರುವೆ ಎಂಬ ತ್ವಷ್ಟೃವಿನ ಅಭಿಪ್ರಾಯವು ಭಿನೈಸುವಂತೆ ಮಾಡಿ, ಇಂದ್ರನು ಯಾವನಿಗೆ ಶತ್ರುವೋ ಅವನು ಎಂದು ಅಭಿಪ್ರಾಯ ಬರುವಂತೆ ಸ್ವರಭೇದ ಮಾಡಿಬಿಟ್ಟಳು. ಅದನ್ನು ಯಜಮಾನನಾದಿಯಾಗಿ ಬ್ರಹ್ಮನವರೆಗೆ ಯಾರೂ ಗಮನಿಸಲಿಲ್ಲ. ಪೂರ್ಣಾಹುತಿಯಾಗುತ್ತಲೂ ಕರಾಳಾಕೃತಿಯೊಂದು ಹುಟ್ಟಿಬಂತು : “ನನ್ನನ್ನು ಏತಕ್ಕೆ ಸೃಷ್ಟಿಸಿದಿರಿ?” ಎಂದು ಗರ್ಜಿಸಿತು. “ನೀನು ಇಂದ್ರನನ್ನು ಧ್ವಂಸಮಾಡು ಹೋಗು’' ಎಂದು ಯಜಮಾನನು ಅದಕ್ಕೆ ವಿಧಾಯಕ ಮಾಡಿದನು. ಎಲ್ಲರೂ ಸೇರಿ ಆ ಕೃತ್ಯದ ಪ್ರಭಾವವು ದಿನಕ್ಕೊಂದು ಬಾಣಪ್ರಮಾಣ ಸುತ್ತಲೂ ಬೆಳೆಯುವಂತೆ ವರವನ್ನು ಕೊಟ್ಟರು. ಅದು ಹುಟ್ಟಿ ಬಂದು, ಇವರು ವರಪ್ರದಾನ ಮಾಡುತ್ತಿದ್ದ ಹಾಗೆಯೇ ಮೂವತ್ತು ವರುಷದ ವೀರಪುರುಷನಾಯಿತು. ದಾನವೇಂದ್ರರು ಬಂದು “ಅಯ್ಯಾ, ನೀನು ನಮಗೆ ಒಂದು ವರ ಕೊಡಬೇಕು. ಈ ಯಾಗದಲ್ಲಿ ನಮ್ಮ ಗುರುಗಳು ವಹಿಸಿ ಭಾಗವನ್ನು ಗಮನಿಸಿ ನಮ್ಮ ಪ್ರಾರ್ಥನೆಯನ್ನು ಗೌರವಿಸು” ಎಂದು ಪ್ರಾರ್ಥಿಸಿದರು. ಆ ವೀರಪುರುಷನು “ಆಗಬಹುದು” ಎಂದು ವರವನ್ನು ಕೊಡಲು, “ನೀನು ನಮ್ಮ ಮುಖಂಡನಾಗಿರು. ನಮ್ಮಲ್ಲಿ ವಿಶ್ವರೂಪಾಚಾರ್ಯನು ಅನುಗ್ರಹ ಮಾಡಿರುವ ತಪಸ್ಸಿದೆ. ಅದನ್ನು ನಿನಗೆ ಒಪ್ಪಿಸುವೆವು, ನೀನು ಅದನ್ನು ಸ್ವೀಕರಿಸು. ನೀನು ಇಂದ್ರನ ಮೇಲೆ ದಾಳಿಯಿಡುವಾಗ ನಿನ್ನೊಡನೆ ಬರಲು ಅಸುರ ಸೇನೆಗೆ ಅಪ್ಪಣೆಯನ್ನು ಕೊಡು?” ಎಂದರು. ಅವನು ‘ಆಗಲಿ’ ಎಂದು ವರವನ್ನು ಕೊಟ್ಟನು. ಎಲ್ಲರೂ ಸೇರಿ ಅವನಿಗೆ ‘ವೃತ್ರ’ ಎಂದು ಹೆಸರಿಟ್ಟರು. ಆತನಿಗೆ ಶುಕ್ರನು ಆಚಾರ್ಯನಾದನು. ತಾನು ಸುರನಲ್ಲ ಸುರಪತಿಯ ವಿನಾಶಕ್ಕಾಗಿ ಹುಟ್ಟಿದವನು ಎಂದು ಅವನು ತನ್ನನ್ನು ವೃತ್ರಾಸುರನೆಂದು ಕರೆದುಕೊಂಡನು.

ಮಹೇಂದ್ರನು ತಾನು ಮಾಡಿದ ಅಡ್ಡಿಗಳು ಯಾವುವೂ ಫಲಿಸದೆ, ಯಾಗವು ನಿರ್ವಿಘ್ನವಾಗಿ ನೆರವೇರಿತು ಎಂದು ಬಹುವಾಗಿ ಹೆದರಿದನು. ತನ್ನ ಇಂದ್ರತ್ವವು ಮಾತ್ರವಲ್ಲ ತಾನೂ ವಿಶ್ವರೂಪಾಚಾರ್ಯನಂತೆ ವೃತ್ರಾಸುರನಿಗೆ ಬಲಿಯಾಗುವೆನೆಂಬ ಶಂಕೆಯು ತಾನೇತಾನಾಯಿತು. ಜೊತೆಗೆ ಶತ್ರುವು ಅಸುರನೆಂದು ಹೆಸರಿಟ್ಟು ಕೊಂಡುದೂ, ದಾನವೇಂದ್ರನು ಅವನನ್ನು ಪ್ರಾರ್ಥಿಸಿದುದೂ, ಅವನು ಒಪ್ಪಿದುದೂ, ಶುಕ್ರಾಚಾರ್ಯನನ್ನು ವರಿಸಿದುದೂ ಎಲ್ಲವೂ ತನ್ನ ವಿನಾಶಕ್ಕೆ ಕಾರಣಗಳು ಎಂದು ತಿಳಿದು ಏನು ಮಾಡಬೇಕೋ ತಿಳಿಯದೆ ಚಿಂತಾಗ್ರಸ್ಥನಾದನು.

ಸರಸ್ವತಿಯ ಸ್ವರಭೇದದಿಂದ ಅರ್ಥಭೇದವಾಗುವಂತೆ ಮಾಡಿದ ರಹಸ್ಯವು ಆತನಿಗೂ ತಿಳಿದಿರಲಿಲ್ಲ.

* * * *