ಮಹಾಕ್ಷತ್ರಿಯ/ವಿಶ್ವಜಿದ್ಯಜ್ಞ
==೩೩.ವಿಶ್ವಜಿದ್ಯಜ್ಞ==
ನಹುಷೇಂದ್ರನು ದರ್ಶನಮಂದಿರದಲ್ಲಿ ದೇವಗುರುಗಳೋಡನೆ ಮಾತನಾಡುತ್ತಾ ಕುಳಿತಿದ್ದಾನೆ. ಅರಸನು ಕೇಳಿದನು : “ಅದೇನು, ನೀವು ದೇವತೆಗಳು ಸಪ್ತರ್ಷಿಗಳನ್ನು ಅಷ್ಟು ಗೌರವಿಸುವುದು?”
ದೇವಗುರುವು ಹೇಳಿದನು : “ಹಿಂದಿನದೊಂದು ಆಖ್ಯಾಯಿಕೆಯನ್ನು ಇಲ್ಲಿ ಹೇಳಲು ಅಪ್ಪಣೆಯಾಗಬೇಕು. ಹಿಂದೆ ಭೂಮಂಡಲದಲ್ಲಿ ಪ್ರತರ್ದನನೆಂಬ ಮಹಾರಾಜನಿದ್ದನು. ಆತನು ತನ್ನ ಶೌರ್ಯದಿಂದ ಸ್ವರ್ಗವನ್ನು ಗೆದ್ದನು. ಆಗ ಇಂದ್ರನು ಸುಪ್ರೀತನಾಗಿ `ನಿನಗೆ ವರವನ್ನು ಕೊಡುವೆನು, ಕೇಳು’ ಎಂದನು. ಶೌರ್ಯಗರ್ವಿತನಾದ ಆ ರಾಜನು “ನೀನು ಉತ್ತಮೋತ್ತಮವೆಂದುಕೊಂಡ ವರವನ್ನು ಕೊಡು” ಎಂದನು. ಆಗ ಇಂದ್ರನು ಆತನಿಗೆ ‘ಬ್ರಹ್ಮವಿದ್ಯೆಗಿಂತ ಉತ್ತಮವಾದ ವರವಿಲ್ಲ. ತೆಗೆದುಕೋ’ ಎಂದು ಬ್ರಹ್ಮವಿದ್ಯೆಯನ್ನು ಕೊಟ್ಟನು. ಮಿಕ್ಕವರು ಗುರುಮುಖದಿಂದ ಅಧ್ಯಯನ ಮಾಡಿ ತಿಳಿದುಕೊಂಡರೂ ಚಿತ್ರಾಗ್ನಿಯಂತೆ ಇರುವ ಬ್ರಹ್ಮವಿದ್ಯೆಯು ಸಪ್ತರ್ಷಿಗಳಲ್ಲಿ ಯಾವಾಗಲೂ ಜ್ವಾಲಾಮಾಲಾಸುಂದರವಾಗಿರುವುದು. ಇತರರಿಗೆ ಅಲಭ್ಯವಾದುದರಿಂದ ಖಿಲವೆನ್ನಿಸಿಕೊಂಡಿರುವ ವೇದಭಾಗವು ಅವರಿಗೆ ತಿಳಿದಿರುವುದು. ಇತರರು ತಪಸ್ಸಿನಿಂದಲೂ ಆರ್ಜಿಸಲಾರದ ಸ್ಥಿತಿಯು ಅವರಿಗೆ ಸಹಜವಾಗಿ ಸಿದ್ಧವಾಗಿರುವುದು. ಇದನ್ನು ಬಲ್ಲ ದೇವತೆಗಳು ಅವರನ್ನು ಗೌರವಿಸುವುದನ್ನು ಬಿಟ್ಟು ಇನ್ನೇನು ಮಾಡಬಲ್ಲರು?”
ನಹುಷನು ನ್ಯಾಯವೆಂಬಂತೆ ತಲೆದೂಗಿ ಹೇಳಿದನು : “ಇಂದ್ರನು ಅವರನ್ನು ಸಾಕ್ಷಾತ್ಕರಿಸಿಕೊಳ್ಳಲು ತಮ್ಮನ್ನು ಆಶ್ರಯಿಸಬೇಕಂತೆ?”
“ಅದು ಪದ್ಧತಿ. ದೇವಾಚಾರ್ಯನಿಗೆ ದೇವರಾಜನು ಸಲ್ಲಿಸುವ ಗೌರವ.”
“ಸರಿ. ನಾವೂ ಅದನ್ನು ಗೌರವಿಸೋಣ. ಅವರನ್ನು ಏನು ಕೇಳಬೇಕಾದರೂ ತಮ್ಮ ಮುಖವಾಗಿಯೇ ಕೇಳಬೇಕೋ?”
“ಇಲ್ಲ ಅಂತಹ ನಿಯಮವೇನೂ ಇಲ್ಲ. ಅಲ್ಲದೆ ತಾವು ಧರ್ಮಪರಾಯಣ ರಾದವರೆಂದು ತಮಗೆ ಎಲ್ಲೆಲ್ಲಿಯೂ ಸ್ವಾತಂತ್ರ್ಯವುಂಟು.”
ದೇವರಾಜನು ಸ್ತುತಿಗರ್ಭವಾದ ಆ ವಾಕ್ಯಗಳನ್ನು ಕೇಳಿ ಹರ್ಷಿತನಾಗಿ ನುಡಿದನು : “ದೇವಗುರುಗಳು ದಯಮಾಡಿ ನಮಗೆ ಸಪ್ತರ್ಷಿಗಳ ದರ್ಶನವನ್ನು ಮಾಡಿಸಬೇಕು. ಮತ್ತು ನಾವು ಅವರೊಡನೆ ಸ್ವಂತಕ್ಕಾಗಿ ಕೆಲವು ಮಾತುಗಳನ್ನು ಆಡಲು ಅಪ್ಪಣೆ ಕೊಡಬೇಕು.”
ಬೃಹಸ್ಪತಿಯು ‘ಆಗಬಹುದು’ ಎಂದು ಆಸನಸ್ಥನಾಗಿ ಧ್ಯಾನದಲ್ಲಿ ಕುಳಿತನು. ಸಪ್ತರ್ಷಿಗಳಿಗಾಗಿ ಆಸನಗಳೂ ಮಧುಪರ್ಕಾದಿ ಪೂಜಾಸಾಧನಗಳೂ ಸಿದ್ಧವಾದುವು. ಉತ್ತರ ಕ್ಷಣದಲ್ಲಿಯೇ ದೇವಗುರುವು ಜಗ್ಗನೆದ್ದು “ಇದೋ ಸಪ್ತರ್ಷಿಗಳು ದಯಮಾಡಿಸುತ್ತಿರುವರು” ಎಂದನು. ಅರಸನೂ ಎದ್ದನು. ಪಾದುಕೆಗಳ ಶಬ್ದವು ಕೇಳಿಸಿತು. ಸಪತ್ನಿಕರಾದ ಸಪ್ತರ್ಷಿಗಳೂ ದೃಗ್ಗೋಚರರಾದರು. ದೇವಾಚಾರ್ಯನು ಅವರಿಗೆಲ್ಲ ಇಂದ್ರನ ಪರವಾಗಿ ಮಧುಪರ್ಕಾದಿ ಪೂಜೆಯನ್ನೊಪ್ಪಿಸಿದನು. ಅವರೆಲ್ಲ ಪ್ರಸನ್ನರಾಗಿ, “ದೇವರಾಜನಿಗೆ ನಮ್ಮಿಂದ ಆಗಬೇಕಾದ ಕೆಲಸವೇನಿದೆ? ಲೋಕಲೋಕಗಳೂ ಕ್ಷೇಮವಾಗಿವೆಯಷ್ಟೇ?” ಎಂದು ಕುಶಲಪ್ರಶ್ನಪೂರ್ವಕವಾಗಿ ವಿಚಾರಿಸಿದರು.
ದೇವರಾಜನು ನಯವಿನಯ ಭಕ್ತಿಗಳಿಂದ ಆ ಪ್ರಶ್ನಕ್ಕೆ ಉತ್ತರವನ್ನು ಸಲ್ಲಿಸಿ, “ಮನಸ್ಸಿನಲ್ಲಿ ವಿಚಿತ್ರವಾದ ಕೋರಿಕೆಯೊಂದು ಮೊಳೆತಿದೆ. ಅದನ್ನು ಸನ್ನಿಧಾನದಲ್ಲಿ ವಿಜ್ಞಾಪಿಸಬೇಕೆಂದು ತೋರಿತು. ತಮ್ಮ ಅಪ್ಪಣೆಯಾದಂತೆ ನಡೆಯುವೆನು” ಎಂದನು.
ಭರದ್ವಾಜರು ವಸಿಷ್ಠರ ಅಪ್ಪಣೆಯಂತೆ ನುಡಿದರು : ``ದೇವರಾಜನು ಮನುಷ್ಯೇಂದ್ರನಾಗಿದ್ದಾಗ ಸಂಪಾದಿಸಿದ ಚ್ಯವನಾನುಗ್ರಹವು ಧರ್ಮವನ್ನು ಮಾಡಿಸಿ ಅನನ್ಯಭವ್ಯವಾದ ಇಂದ್ರಪದವಿಯನ್ನು ಕೊಟ್ಟಿತು. ಹಾಗೆ ವಿಶಿಷ್ಟವಾದ ರೀತಿಯಲ್ಲಿ ಧರ್ಮವನ್ನು ಆಚರಿಸಿದ ಮಹಾನುಭಾವ ದರ್ಶನಸಲ್ಲಾಪಗಳಿಂದ ಸಪ್ತರ್ಷಿಗಳೂ ಆನಂದಿಸುವರು. ದೇವರಾಜ, ನಿನ್ನ ಮನಸ್ಸಿನಲ್ಲಿರುವ ಕೋರಿಕೆಯನ್ನು ಹೇಳು. ನಮಗೆ ಅದು ಗೊತ್ತಿದೆ. ನಮ್ಮಲ್ಲಿ ಒಬ್ಬರೊಬ್ಬರೂ ಮುಂದಾಗುವುದನ್ನು ತಿಳಿಯಬಲ್ಲೆವು. ಆದರೂ ನಿನ್ನ ಬಾಯಿಂದ ಕೇಳಿ ಸುಖಿಸಬೇಕೆಂದಿರುವೆವು, ಹೇಳು.”
ದೇವರಾಜನು ಸಪ್ತರ್ಷಿಗಳು ತನ್ನ ಮಾತನ್ನು ಗೌರವಿಸುವರೆಂಬ ನಂಬಿಕೆಯಿಂದ ದೃಢವಾದರೂ ಸಣ್ಣಗಿರುವ ಗೌರವದ ದನಿಯಿಂದ ಹೇಳಿದನು: “ಋಷಿಸಾರ್ವಭೌಮರಿಗೆ ಸಾಷ್ಟಾಂಗ ಪ್ರಣಾಮಗಳು. ತಮ್ಮೆಲ್ಲರ ಅನುಗ್ರಹದಿಂದ ಮುಖ್ಯವಾಗಿ ಗುರುಕೃಪೆಯಿಂದ ಲಭಿಸಿದ ಧರ್ಮಾಚರದ ಫಲವಾಗಿ ಎಂದು ತಾವು ಅಪ್ಪಣೆ ಕೊಟ್ಟಂತೆ ಇಂದ್ರಪದವಿಯು ಲಭಿಸಿತು. ಈಗ ನಡೆದಿರುವ ನಡವಳಿಕೆಗಳಿಂದ ಎಂದಿದ್ದರೂ ಈ ಪದವಿಯು ನನಗೆ ತಪ್ಪಿಯೇ ತಪ್ಪಬೇಕು. ಆದರೆ ಧರ್ಮಾಯತ್ತವಾಗಿ ಬಂದುದು ದೈವಾಯತ್ತವಾಗಿ ತಪ್ಪಿತು ಎನ್ನುವುದಕ್ಕಿಂತ ನಾನೇ ಸ್ವಾಯತ್ತವಾಗಿ ಇದನ್ನು ತ್ಯಜಿಸಿ ಧರ್ಮವೃದ್ಧಿಯಾಗುವಂತೆ, ಮಾಡಿಕೊಳ್ಳಬೇಕು ಎಂದಿರುವೆನು. ಅದಕ್ಕೆ ತಮ್ಮ ಅನುಗ್ರಹವಾಗಬೇಕು.”
“ಧರ್ಮವೃದ್ಧಿಯೇ ಗುರಿಯಾದರೆ, ನೀನು ಏನು ಮಾಡಬೇಕೆಂದರೂ ನಮ್ಮ ಬೆಂಬಲವುಂಟು ಹೇಳು.”
“ಈ ಪದವಿಯನ್ನು ತ್ಯಜಿಸುವುದಕ್ಕಿಂತ ಮುಂಚೆ ಅತೀಂದ್ರವಾದ ಕಾರ್ಯವನ್ನು ಮಾಡಬೇಕೆಂದಿರುವೆನು.”
“ಸರಿ. ಹೇಳು.”
“ಸಪ್ತರ್ಷಿಶಿಬಿಕೆಯು ಇಂದ್ರನಿಗೆ ಸಲ್ಲುವ ಅತ್ಯಂತ ಗೌರವಗಳಲ್ಲಿ ಒಂದು ಎಂದು ಕೇಳಿದೆನು. ಅದನ್ನು ಆತನು ತೇಜೋಹಾನಿಯಾದೀತೆಂದು ಹೆದರಿ ಆರೋಹಿಸುವುದಿಲ್ಲವಂತೆ, ಯಾವ ಕಾರ್ಯವನ್ನು ಮಾಡಿದರೂ ಅದರಿಂದ ತೇಜೋಹಾನಿಯಾಗದೆ ವೃದ್ಧಿಯೇ ಆಗುವಂತೆ ಮಾಡಿಕೊಳ್ಳುವ ಸಾಧನವೊಂದುಂಟು ಎಂದು ಕೇಳಿರುವೆನು. ಅದನ್ನು ತಾವು ದಯವಿಟ್ಟು ಅನುಗ್ರಹಿಸಬೇಕು.”
ಭರದ್ವಾಜನು ಎಲ್ಲರ ಮುಖಗಳನ್ನು ಮತ್ತೆ ನೋಡಿ ಅವರ ಸಮ್ಮತಿಯನ್ನು ಪಡೆದು ಹೇಳಿದರು : “ದೇವರಾಜ, ಹೌದು. ಅಂತಹದೊಂದು ಕ್ರಿಯೆಯುಂಟು. ಅದನ್ನೇ ಯಜ್ಞವೆನ್ನುವರು. ನೀನು ಸಪ್ತರ್ಷಿಶಿಬಿಕಾರೋಹಣಯಜ್ಞ ಮಾಡಬೇಕೆಂದಿರುವೆ. ಅದಕ್ಕಾಗಿ ಮಾಡಬೇಕಾದ ಯಜ್ಞವೆಂದರೆ ವಿಶ್ವಜಿದ್ಯಜ್ಞ. ನೀನು ಅದನ್ನು ಮಾಡಬಲ್ಲೆಯಾ ?”
“ನಾನು ಮಾಡುವೆನು ಎನ್ನುವುದಕ್ಕಿಂತ ಅದನ್ನು ನನ್ನಿಂದ ತಾವು ಮಾಡಿಸಬೇಕೆಂದು ಪ್ರಾರ್ಥಿಸಿಕೊಳ್ಳುವೆನು.”
“ಚ್ಯವನಮಹರ್ಷಿಗಳ ಅನುಗ್ರಹವು ನಿನ್ನನ್ನು ಕಾದಿದೆ. ಅಲ್ಲದೆ, ನೀನು ಇಂದ್ರನಾಗುವಾಗ ಪಿತೃಗಳು ಕೊಟ್ಟ ವರವೂ, ನೀನು ಕೇಳಿದ ರಹಸ್ಯವೆಂಥದೇ ಆದರೂ ಅದನ್ನು ತಿಳಿಸಬೇಕೆಂದು ಪಡೆದುಕೊಂಡ ವರವೂ ನಿನ್ನ ಬೆಂಗಾವಲಿಗಿವೆ. ಅದರಿಂದ ನಿನಗೆ ಆ ವಿಶ್ವಜಿದ್ಯಜ್ಞವನ್ನು ಅದನ್ನು ಮಾಡುವ ಕ್ರಮವನ್ನೂ ಹೇಳಲೇಬೇಕು. ಕೇಳು ; ನಿನ್ನ ಸರ್ವಸ್ವವನ್ನೂ ನಿನ್ನಲ್ಲಿರುವ ಕರ್ತೃಭೋಕ್ತೃಶಕ್ತಿಯನ್ನೂ ಸರ್ವವ್ಯಾಪಕನಾದ ಮಹಾವಿಷ್ಣುವಿಗೆ ಒಪ್ಪಿಸುವುದೇ ವಿಸ್ವಜಿದ್ಯಜ್ಞ. ಇದನ್ನು ಮಾಡಲು ನೀನು ಸಿದ್ಧವಾಗಿರುವೆಯಾ ?”
“ತಮ್ಮಿಂದ ಅಪ್ಪಣೆಯಾದುದನ್ನು ಮಾಡಲು ಸಿದ್ಧನಾಗಿದ್ದೇನೆ.”
“ದೇವರಾಜ, ಮಾತು ಕೊಡುವುದಕ್ಕಿಂತ ಮುಂಚೆ ಚೆನ್ನಾಗಿ ಪರ್ಯಾಲೋಚಿಸು. ಸಪ್ತರ್ಷಿಶಿಬಿಕಾರೋಹಣ ಮಾಡುವವನು ಅಹಂಕಾರವನ್ನೂ ಆ ಅಹಂಕಾರ ಕಾರಣವಾದ ಅಭಿಮಾನವನ್ನೂ ತ್ಯಜಿಸಬೇಕು.”
“ಧರ್ಮವಾಗಿ ಏನೇನು ತ್ಯಜಿಸಬಹುದೋ ಅದೆಲ್ಲವನ್ನೂ ತ್ಯಜಿಸುವೆನು.”
“ಭಲೆ, ದೇವರಾಜ, ನೀನು ಬಹು ಜಾಗರೂಕನಾಗಿರುವೆ. ನಿಜ, ನೀನು ಗೃಹಸ್ಥನು. ಪತ್ನಿಯೊಬ್ಬಳನ್ನಲ್ಲದೆ ಮಿಕ್ಕೆಲ್ಲವನ್ನೂ ತ್ಯಜಿಸುವೆನೆಂದೆ. ಸರಿ ! ನೀನೂ ಹೇಳಿದಂತೆಯೇ ಆಗಲಿ. ನೀನು ವಿಶ್ವಜಿದ್ಯಜ್ಞ ಮಾಡಲು ಶತ್ರುಮಿತ್ರಭೇದವನ್ನು ಬಿಡಬೇಕು.”
“ಶತ್ರುಗಳನ್ನು ಗೆದ್ದು ಪದಾಕ್ರಾಂತರನ್ನಾಗಿ ಮಾಡಿ ಅವರನ್ನು ಔದಾರ್ಯದಿಂದ ಮಿತ್ರರನ್ನಾಗಿ ಮಾಡಿಕೊಂಡಿರುವೆನು. ಅದರಿಂದ ಲೋಕವೇ ನನಗೆ ಮಿತ್ರವಾಗಿರುವಾಗ ಶತ್ರುಮಿತ್ರದ ಭೇದವನ್ನು ಬಿಡುವುದು ನನಗೆ ಕಷ್ಟವಿಲ್ಲ.”
“ಆಯಿತು. ಇತರರನ್ನು ಗೆದ್ದು ಪದಾಕ್ರಾಂತರನ್ನಾಗಿ ಮಾಡಿಕೊಂಡೆ. ನಿನ್ನಲ್ಲಿಯೇ ಸೇರಿಕೊಂಡು ನಿನ್ನನ್ನು ಪದಾಕ್ರಾಂತನನ್ನಾಗಿ ಮಾಡಿಕೊಂಡ ರಾಗದ್ವೇಷಗಳನ್ನೂ ಅವುಗಳ ಫಲವಾದ ಸುಖದುಃಖಗಳನ್ನೂ ಬಿಡುವೆಯಾ?”
“ಬಿಟ್ಟೆನೆಂದು ಹೇಳಿದರೆ ಸುಳ್ಳು. ಅವುಗಳನ್ನು ನಿಯಮಿತ ಮಾಡುವೆನು.”
“ನೀನು ಸತ್ಯವಾದಿ. ದೇವರಾಜ, ಅವುಗಳನ್ನು ಬಿಡಲಾಗುವುದಿಲ್ಲವೆಂದೇ ಬಲ್ಲವರು ಅವುಗಳ ವಿಚಾರದಲ್ಲಿ ಉದಾಸೀನರಾಗಿ ಧರ್ಮವನ್ನು ಮಾತ್ರ ಆಚರಿಸುವರು. ಅವುಗಳನ್ನು ಬಿಡುವುದೆಂದರೆ ಧರ್ಮಪರಾಯಣನಾಗುವುದು. ನೀನು ಆಗಿರುವೆಯೆಂದೇ ನಾವು ಇದನ್ನು ಕುರಿತು ಪ್ರಸ್ತಾಪಿಸಿದುದು. ಇದಿಷ್ಟೂ ಶಿಬಿಕಾರೋಹಣದ ಪೂರ್ವಸಿದ್ಧತೆ, ಅಹಂಕಾರವನ್ನು ಅರ್ಥಾತ್ ರಾಗದ್ವೇಷಗಳನ್ನು ಬಿಡಲಾರದೆ ಇಂದ್ರನು ಈ ಶಿಬಿಕಾರೋಹಣವೇ ಬೇಡವೆಂದನು. ನೀನು ಪೂರ್ವ ಸಿದ್ಧತೆಯನ್ನು ಪಡೆದಿರುವೆಯಾಗಿ ನೀನು ಶೀಬಿಕಾರೋಹಣವನ್ನು ಮಾಡಬಹುದು.
“ತಾವು ಅಪ್ಪಣೆಯನ್ನು ಕೊಟ್ಟುದಕ್ಕಾಗಿ ನಾನು ಕೃತಜ್ಞನಾಗಿರುವೆನು. ಆದರೆ, ತಾವಿನ್ನೂ ಒಂದು ವಿಷಯವಾಗಿ ಅಪ್ಪಣೆ ಕೊಡಿಸಿಲ್ಲ. ಆರೋಹಿಸಿದ ಮೇಲೆ ಶಿಬಿಕೆಯಲ್ಲಿರುವಾಗ ಹೇಗೆ ಇರಬೇಕು ಎಂಬುದನ್ನು ಕುರಿತು ಹೇಳಿಲ್ಲ.”
“ಆಗಲಿ, ಕೇಳು ; ಮಹಾವಿಷ್ಣುವು ಅಣುರೇಣುತೃಣಕಾಷ್ಠಗಳನ್ನು ವ್ಯಾಪಿಸಿರುವನು. ಅಂತರ್ಬಹಿಗಳನ್ನೆಲ್ಲಾ ತುಂಬಿರುವನು. ಆತನನ್ನು ಧ್ಯಾನಮಾಡುತ್ತ ಸರ್ವವನ್ನೂ ಆತನಿಗೆ ಒಪ್ಪಿಸಿ ಇರಬೇಕು. ಆಗ ಅದು ವಿಶ್ವಜಿದ್ಯಜ್ಞವಾಗುವುದು.”
“ಆತನನ್ನು ಆ ಸರ್ವೇಶ್ವರನನ್ನು ಹೃದಯದಲ್ಲಿ ಈಗಲೂ ಧ್ಯಾನಿಸುತ್ತಲೇ ಇರುವೆನು.”
“ನೀನು ಧ್ಯಾನಿಸುತ್ತಿರುವುದು ಸಗುಣ ಮೂರ್ತಿಯನ್ನು. ಧರ್ಮದಲ್ಲಿ ಅದೇ ಸರಿ. ಅದರೆ ಈ ಶಿಬಿಕಾರೋಹಣವು ಇಂದ್ರತ್ವದ ಪರಮಾವಧಿ. ಅಲ್ಲಿ ಸಗುಣ ಮೂರ್ತಿಯು ಕರಗಿ ನಿರ್ಗುಣವಾಗಬೇಕು. ಅತನನ್ನು ನೋಡುವ ಇಂದ್ರಿಯಗಳು ಕರಗಿಹೋಗಬೇಕು. ಅಥವ ಶಾಸ್ತ್ರದ ಮಾತಿನಲ್ಲಿ ಹೇಳುವುದೆಂದರೆ, ನೀನು ತ್ರಿಪುಟೀ ರಹಿತನಾಗಿ ಸಿಬಿಕೆಯನ್ನು ಆರೋಹಣ ಮಾಡಬೇಕು. ನಾವು ಶಿಬಿವಾಹಕರಾದಾಗ ತ್ರಿಪುಟೀಸಹಿತವಾಗಿ ಶಿಬಿಕೆಯಲ್ಲಿ ಯಾರೂ ಕುಳಿತಿರುವಂತಿಲ್ಲ. ನಾವು ಶಿಬಿಕೆಯನ್ನು ಇಳಿಸಿದಾಗ ತ್ರಿಪುಟಿಯು ಮತ್ತೆ ಜಾಗ್ರತವಾಗುವುದು.”
“ಶಿಬಿಕಾರೋಹಣವಾಗುತ್ತಲೂ ತ್ರಿಪುಟಿಯಿಲ್ಲವಾಗಿ ಶಿಬಿಕಾರೋಹಣದಲ್ಲಿ ಅದು ಜಾಗ್ರತವಾಗುವುದಾದರೆ ನಾನು ಮಾಡಬೇಕಾದ ಕಾರ್ಯವೇನು?”
“ನಿಜ. ಅಲ್ಲಿ ನಿನಗೆ ಕರ್ತೃತ್ವವಿಲ್ಲ. ಆದರೂ ಶಿಬಿಕೆಯಲ್ಲಿರುವಾಗ ತ್ರಿಪುಟಿಯ ಉದಯವಾದರೆ ಆಗದರ ಫಲವನ್ನೂ ನೀನು ಅನುಭವಿಸಬೇಕಾಗುವುದು.”
“ಆಗಬಹುದು”
ಬೃಹಸ್ಪತಿಯು ಥಟ್ಟನೆ ವಂದಿಸಿ, ವಿನಯದಿಂದ ಕೈಮುಗಿದುಕೊಂಡು ಪ್ರಾರ್ಥಿಸಿದನು. “ಭಗವಾನರಿಂದು ಅನುಗ್ರಹಮುದ್ರೆಯಲ್ಲಿದ್ದಾರೆ. ದಯವಿಟ್ಟು ತಿಳಿಸಿಕೊಡಬೇಕು. ಈ ತ್ರಿಪುಟೀತ್ಯಾಗವೆಂದರೇನು? ಈ ಸಿಬಿಕೋತ್ಸವದಿಂದ ಲೋಕಕ್ಕೆ ಆಗುವ ಉಪಕಾರವೇನು?”
ಭರದ್ವಾಜರು ನಕ್ಕು, “ಸರಿ, ದೇವಗುರುಗಳು ಲೋಕಾನುಗ್ರಹಾರ್ಥವಾಗಿ ಕೇಳಬೇಕಾದುದನ್ನು ಕೇಳಿದರು, ಹೇಳೋಣ” ಎಂದು ಹೇಳಿದರು. “ದೇವಗುರುಗಳು ಆಲಿಸಬೇಕು. ಜ್ಞಾತೃ, ಜ್ಞೇಯ, ಜ್ಞಾನ ಎಂಬುದೇ ತ್ರಿಪಟಿಯು. ಇದರಲ್ಲಿ ಯಾವುದೊಂದನ್ನು ಬಿಟ್ಟರೂ ತ್ರಿಪುಟಿಯು ಇಲ್ಲವಾಗುವುದು. ಇದನ್ನು ಮನುಷ್ಯರು ನಿದ್ರಾವಸ್ಥೆಯಲ್ಲಿ ಮಾಡುತ್ತಿರುವುದನ್ನು ಸ್ವಸಂಕಲ್ಪಪೂರ್ವಕವಾಗಿ ಜಗತ್ತಿನಲ್ಲಿ ಮಾಡಿದರೆ, ಸ್ವಯಂಪ್ರಕಾಶನಾಗಿ ನಿಶ್ಯೇಷವಾಗಿ ಮಹಾವಿಷ್ಣುವಿನಲ್ಲಿ ಲಯವಾಗುವನು. ಹಾಗಾಗದಿದ್ದರೆ, ತ್ರಿಪುಟಿಸಹಿತನಾಗಿ ಸರ್ವವ್ಯಾಪಕನಾಗಿರುವ ಮಹಾವಿಷ್ಣುವನ್ನು ದೇಶಕಾಲಗಳ ಚೌಕಟ್ಟಿನಲ್ಲಿಟ್ಟು ಇಂದ್ರಿಯಗೋಚರವಾಗುವಂತೆ ಮಾಡಿಕೊಳ್ಳುವ ಪತ್ರಿಕೋಪಾಸಕನಾಗುವನು. ಅಂಥವನು ಧಾರ್ಮಿಕನಾದರೂ ನಾವು ಹೇಳುವ ಧರ್ಮಮೇಘವೆಂಬ ಸಮಾಧಿಗೂ ಆತನಿಗೂ ಬಹು ದೂರ. ಇನ್ನು ಈ ಮಾತನ್ನು ಇಲ್ಲಿ ಬಿಟ್ಟು ಮುಂದಿನದನ್ನು ಹೇಳೋಣ.
ಬೀಜವು ತಾನು ಅಂಕುರವಾದಾಗ ತನ್ನ ಪೋಷಕದ್ರವ್ಯವನ್ನು ತಾನೇ ತರುವುದು. ದೊಡ್ಡದಾದ ಮೇಲೆ ಜೀವಿಕೆಗೆ ಬೇಕಾದ ಆಹಾರವನ್ನೂ ತಾನೇ ಭೂಮಿಯಿಂದ ಸಂಗ್ರಹಿಸುವುದು. ಆದರೂ ಪೋಷಕನು ಆಗಾಗ ಅದಕ್ಕೆ ಬೇಕಾದ ಗೊಬ್ಬರ ನೀರುಗಳನ್ನು ಅದಕ್ಕೆ ಸಿಕ್ಕುವಂತೆ ಮಾಡಿ ಅದರ ವೃದ್ಧಿಗೆ ಕಾರಣನಾಗುವನು. ಅಲ್ಲವೆ? ಹಾಗೆ, ತ್ರಿಲೋಕದಲ್ಲಿರುವ ಪ್ರಾಣಿ ಪ್ರಾಣಿಗೂ, ದೇವ ಮಾನವತಿರ್ಯಕ್ಕೆಂಬ ಮೂರು ವರ್ಗಗಳಲ್ಲಿಯೂ ಅವರವರಿಗೆ ಬೇಕಾದ ಸತ್ವಾದಿಗಳನ್ನು ನಿಯತಿಯೇ ಅನುಗ್ರಹಿಸಿರುವುದು. ಆದರೆ ಶಿಬಿಕಾರೋಹಣ ಸಾಮಥರ್ಯ್‌ವುಳ್ಳ ಯಾವನಾದರೂ ಒಡಹುಟ್ಟಿ ಶಿಬಿಕೋತ್ಸವವು ನಡೆಯಿತು ಎಂದರೆ ಧರ್ಮವೃಷ್ಟಿಯಾಗಿ ಲೋಕತ್ರಯಗಳಿಗೂ ಉದ್ಯಾನದಲ್ಲಿ ಗೊಬ್ಬರ ನೀರು ಚೆಲ್ಲಿದಂತಾಗುವುದು. ಎಲ್ಲರಿಗೂ ಮನಸ್ಸು ಉಬ್ಬಿ ತಮೋಗುಣವನ್ನು ತುಳಿದು ರಜೋಗುಣವನ್ನು ಮೀರಿ ಸತ್ವದತ್ತ ನುಗ್ಗುವುದು. ತೃಪ್ತಿಯಾಯಿತೇ?”
ದೇವಗುರು ದೇವರಾಜರಿಬ್ಬರೂ ಅತಿಶಯವಾದ ಹರ್ಷದಿಂದ ಸಪ್ತರ್ಷಿಗಣಕ್ಕೆ ನಮಸ್ಕಾರ ಮಾಡಿದರು. ಭರದ್ವಾಜರು, ಆ ನಮಸ್ಕಾರವನ್ನು ಅಂಗೀಕರಿಸಿ ಸಪ್ತಿರ್ಷಿಗಳ ಪರವಾಗಿ ಹೇಳಿದರು : “ಸಪ್ತರ್ಷಿಗಣವೂ ಇಂತಹ ಧೀರನೊಬ್ಬನು ಹುಟ್ಟಿಬಂದಾನೇ ಎಂದು ಕಾದಿದ್ದಿತು. ದೇವರಾಜ, ನೀನು ನಾವು ವಿಧಿಸಿದ ನಿಯಮಗಳಿಗೆಲ್ಲ ಒಪ್ಪಿಕೊಂಡಿರುವೆಯಾಗಿ ನಾವೂ ಸಂತೋಷದಿಂದ ಸ್ವಯಂ ಒಂದು ನಿಯಮವನ್ನು ಅಂಗೀಕರಿಸುವೆವು, ಕೇಳು, ನೀನು ಶಿಬಿಕಾರೋಹಣವು ಒಂದು ದಿವಸ ನಡೆಯಬೇಕೆಂದೆ. ಇಗೋ, ಸಪ್ತರ್ಷಿಗಳು ಈ ಶಿಬಿಕೋತ್ಸವವನ್ನು ಏಳು ದಿನ, ಒಂದು ವಾರ ಪರ್ಯಂತವಾಗಿ ನಡೆಸಲು ಒಪ್ಪುವರು. ಲೋಕಲೋಕಗಳಲ್ಲಿರುವವರನ್ನೆಲ್ಲಾ ಶಿಬಿಕೋತ್ಸವ ಸಂದರ್ಶನಾರ್ಥವಾಗಿ ಬರಮಾಡು. ಹೌದು, ದೇವಾಚಾರ್ಯ ಈ ಧರ್ಮಾಭಿವೃದ್ಧಿಯಿಂದ ನಿನ್ನ ಇಂದ್ರನು ಉದ್ಧಾರವಾಗುವನು. ನೀವೆಲ್ಲರೂ ನಿಮಗೆ ಲಭಿಸುವ ಪುಣ್ಯವನ್ನು ಆತನಿಗೆ ಧಾರೆಯೆರೆಯಿರಿ. ಮಹಾವಿಷ್ಣುವಿನ ಅನುಗ್ರಹದಿಂದ ಆತನಿಗೆ ಹತ್ಯೆಯು ನಿವಾರಣವಾಗುವುದು.”
ದೇವರಾಜ ದೇವಾಚಾರ್ಯರಿಬ್ಬರಿಗೂ ಆದ ಆನಂದವು ಅಷ್ಟಿಷ್ಟಲ್ಲ. ದೇವರಾಜನಿಗೆ ಹಿಂದೆ ಶಚೀದೇವಿಗೆ ಹೇಳಿದ್ದ ; ‘ಬೇಕಾದರೆ ನಾವೂ ಸಹಾಯ ಮಾಡುವೆವು’ ಎಂದ ಮಾತು ನಿಜವಾಯಿತು ಎಂದು ಸಂತೋಷವಾದರೆ, ದೇವಾಚಾರ್ಯನಿಗೆ ಮುನ್ನಿನ ಇಂದ್ರನು ಶುದ್ಧನಾಗಿ ಹಿಂತಿರುಗಿ ಬರುವನಲ್ಲ ಎಂದು ಸಂತೋಷ.
ಇಬ್ಬರೂ ತುಂಬಿದ ಸಂತೋಷದಲ್ಲಿ ಸಪ್ತರ್ಷಿಗಳಿಗೆ ಪುನಃಪೂಜೆಯನ್ನೊಪ್ಪಿಸಿ ತಮ್ಮ ತಮ್ಮ ಇಚ್ಛೆಯಂತೆ ಪ್ರಾರ್ಥನೆ ಮಾಡಿಕೊಂಡು ಮತ್ತೆ ನಮಸ್ಕಾರ ಮಾಡಿದರು. ಸಪ್ತರ್ಷಿಗಳು ‘ಅಭಿಷ್ಠಾ ಸಿದ್ಧಿರಸ್ತು’ ಎಂದು ಆಶೀರ್ವಾದ ಮಾಡಿ ಅಂತರ್ಧಾನವನ್ನು ಹೊಂದಿದರು.
ಇಬ್ಬರಿಗೂ ತಮಗೆ ಬೇಕಾದವರಿಗೆ ಈ ಸಂತೋಷದ ವರ್ತಮಾನವನ್ನು ಹೇಳಬೇಕೆಂದು ಅವಸರ. ಆ ಅವಸರದಲ್ಲಿ ಇಬ್ಬರೂ ಪರಸ್ಪರ ಬೀಳ್ಕೊಂಡು ನಡೆದರು. ದೇವರಾಜನು ವಿರಜಾದೇವಿಗೆ ಎಲ್ಲವನ್ನೂ ಹೇಳಲು ಹೋದರೆ, ದೇವಗುರುವು ಶಚೀದೇವಿಗೆ ಎಲ್ಲವನ್ನೂ ವರದಿ ಮಾಡಲು ಮನೋವೇಗದಿಂದ ಹೋದನು.
* * * *