ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಕಾರ

ವಿಕಿಸೋರ್ಸ್ದಿಂದ

ಟರ್ಕಿಯ ಹಾಗೂ ಅಂಕಾರ ಪ್ರಾಂತದ ರಾಜಧಾನಿ. ಸಮುದ್ರಮಟ್ಟಕ್ಕೆ 1020ಮೀ ಎತ್ತರದಲ್ಲಿ 150ಮೀ ಎತ್ತರವಿರುವ ಕಲ್ಲುಬಂಡೆಗಳ ಬೆಟ್ಟದ ಮೇಲಿದೆ. ಜನಸಂಖ್ಯೆ 2984,099 (1997). ಇಲ್ಲಿ ಖಂಡಾಂತರ ವಾಯುಗುಣವಿದೆ. ಸಮುದ್ರದಿಂದ ದೂರವಿರುವುದರಿಂದಲೇ ಈ ಪಟ್ಟಣವನ್ನು ಅಂದಿನ ರಾಷ್ಟ್ರಾಧ್ಯಕ್ಷ ಕೆಮಾಲ್ ಅಟಾಟರ್ಕ್ ಎಂಬುವನು ರಾಜಧಾನಿಯನ್ನಾಗಿ ಮಾಡಿಕೊಂಡು, ಹಿಂದೆ ಇದ್ದ ಅಂಗೊರಾ ಎಂಬ ಹೆಸರನ್ನು 1923 ರಲ್ಲಿ ಅಂಕಾರ ಎಂದು ಬದಲಾಯಿಸಿದನು. ಆಧುನಿಕ ಟರ್ಕಿಯ ಪ್ರಭಾವ ಪಟ್ಟಣದ ಕೆಲವು ಕಡೆ ಕಂಡುಬರುತ್ತದೆ. ಪಟ್ಟಣದ ಹಳೆಯ ಭಾಗದಲ್ಲಿ ಒಂದು ಕೋಟೆಯಿದ್ದು ಅದರೊಳಗಡೆ ಒಂದು ಒಳಕೋಟೆ ಮತ್ತು ಒಂದು ಬಿಳಿಯ ಗೋಪುರವಿದೆ. ಕೋಟೆಯ ಹೊರಭಾಗ ಪಾಳು ಬಿದ್ದಿದೆ. ಈ ಭಾಗದಲ್ಲಿ ವಾಸಮಾಡುವ ಜನರ ಸಂಖ್ಯೆ ಅಲ್ಪ. ಇಲ್ಲಿನ ಚಿಕ್ಕಚಿಕ್ಕ ಹಾಗೂ ವಕ್ರವಕ್ರವಾಗಿರುವ ಬೀದಿಗಳ ಎಡಬಲಗಳಲ್ಲಿ ಮಣ್ಣಿನ ಇಟ್ಟಿಗೆ, ಮರ ಹಾಗೂ ಹೆಂಚುಗಳನ್ನು ಉಪಯೋಗಿಸಿ ರಚಿಸಲಾದ ಹಳೆಯ ಮನೆಗಳಿವೆ. ಇಲ್ಲಿ ಒಂದು ಪೇಟೆಯೂ ಮತ್ತು ರಾಷ್ಟ್ರೀಯ ಸಮಾರಂಭಗಳು ಜರುಗುವ ಉಲಸ್ ಎಂಬ ಹೆಸರಿನ ಚೌಕವೂ ಇವೆ. ಪಟ್ಟಣದ ಉತ್ತರ ಭಾಗದ ಪ್ರದೇಶಕ್ಕೆ ಆಧುನಿಕತೆಯ ಪ್ರಭಾವ ಹೆಚ್ಚಾಗಿ ಬೀಳದಿದ್ದು, ಅಲ್ಲಿ ಅನೇಕ ಪ್ರಾಚೀನ ಅವಶೇಷಗಳು ಕಂಡುಬರುತ್ತವೆ. ಬೆಟ್ಟದ ಮೇಲಿನಿಂದ ನೋಡಿದರೆ 1953ರಲ್ಲಿ ಪುರ್ಣಗೊಂಡ ಅಟಾಟರ್ಕ್ನ ಸಮಾಧಿ ಪ್ರಧಾನವಾಗಿ ಕಾಣಿಸುತ್ತದೆ. ದೂರದಲ್ಲಿ ಕಾಣಿಸುವ ಇತರ ಸ್ಮಾರಕಗಳೆಂದರೆ-ವಿಕ್ಟರಿ ಸ್ಮಾರಕ, ಕಾನ್ಫಿಡೆನ್ಸ್ ಸ್ಮಾರಕ - ಇತ್ಯಾದಿ. ಈಗಿನ ಅಧ್ಯಕ್ಷರ ನಿವಾಸದ ಮುಂಭಾಗದಲ್ಲಿರುವ ಅಟಾಟರ್ಕ್ನ ನಿವಾಸ ಈಗ ಒಂದು ವಸ್ತು ಸಂಗ್ರಹಾಲಯವಾಗಿದೆ. ಅಂಕಾರದಲ್ಲಿ ಒಂದು ವಿಶ್ವವಿದ್ಯಾಲಯ, ಒಂದು ರಾಷ್ಟ್ರೀಯ ಪುಸ್ತಕ ಭಂಡಾರ, ರಾಜ್ಯದ ಆರ್ಥಿಕ ನೆರವಿನಿಂದ ನಡೆಯುತ್ತಿರುವ ಒಂದು ರಂಗಮಂಟಪ ಮತ್ತು ಆಧುನಿಕ ರೇಡಿಯೋ ಕೇಂದ್ರ ಇವೆ. ಇಲ್ಲಿರುವ ಕಾಲೇಜು ಬಹಳ ದೊಡ್ಡದಾಗಿದೆ. ಜೆನ್ಕ್ಲಿಕ್ ಪಾರ್ಕ್ ಎಂಬ ಉದ್ಯಾನವನ ಬಹಳ ಸುಂದರವಾಗಿದೆ. ಕುದುರೆ ಜೂಜಿನ ಮೈದಾನ ಹಾಗೂ ಎರಡು ಕ್ರೀಡಾಂಗಣಗಳಿವೆ. ಪಟ್ಟಣದ ಉತ್ತರಕ್ಕೆ 13 ಕಿಮೀ. ದೂರದಲ್ಲಿರುವ ಕ್ಯುಬೆಕ್ ಡ್ಯಾಂ ಎಂಬುದು ಒಂದು ಪ್ರವಾಸೀ ಕೇಂದ್ರವಾಗಿದೆ. ಅಂಕಾರದಿಂದ ಇಸ್ತಾನ್ಬುಲ್, ಇಜ಼್‌ಮೀರ್ ಮತ್ತು ಅದಾನ ಪಟ್ಟಣಗಳಿಗೆ ರೈಲಿನ ಸೌಲಭ್ಯವಿದೆ. ಇಲ್ಲಿಂದ 26 ಕಿ.ಮೀ ದೂರವಿರುವ ಈಸೆನ್ಬೋಗ ಎಂಬುದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಪಟ್ಟಣದ ಹೊರವಲಯದಲ್ಲಿ ಜಮಖಾನೆ, ಜೇನುತುಪ್ಪ ಮತ್ತು ಪೇರು ಜಾತಿಯ ಹಣ್ಣಿನ ಉತ್ಪನ್ನಗಳು ಮುಂತಾದ ಕೈಗಾರಿಕೆಗಳು ಕಂಡುಬರುತ್ತವೆ.