ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಕೋಲೆ

ವಿಕಿಸೋರ್ಸ್ದಿಂದ

ಅಂಕೋಲೆ[ಸಂಪಾದಿಸಿ]

ಒಂದು ಔಷಧ ಸಸ್ಯ. ಅಲಾಂಜಿಯಮ್ ಸಾಲ್ವಿಫೋಲಿಯಮ್ ಇದರ ವೈಜ್ಞಾನಿಕ ಹೆಸರು. ಇದಕ್ಕೆ ಅಂಕೋತವೆಂಬ ಹೆಸರೂ ಇದೆ. ಅಲಾಂಜಿಯೇಸೀ ಕುಟುಂಬಕ್ಕೆ ಸೇರಿದೆ. ಇದು ಒಂದು ಪೊದೆ ಸಸ್ಯ. ಎಲ್ಲ ಬಗೆಯ ಹವೆಯಲ್ಲೂ ಮಣ್ಣಿನಲ್ಲೂ ಬೆಳೆಯುತ್ತದೆ. ಗಿಡವು ಬೇಸಗೆಯಲ್ಲಿ ಎಲೆ ಉದುರುವ ಬಗೆಯದು (ಡೆಸಿಡ್ಯುವಸ್). ಆದರೆ ಸಾಮಾನ್ಯವಾಗಿ ಎಲ್ಲ ಕಾಲದಲ್ಲೂ ಎಲೆಗಳನ್ನು ಹೊಂದಿರುತ್ತದೆ. ಹಳೆ ಎಲೆಗಳು ಉದುರುವುದಕ್ಕಿಂತ ಮುಂಚಿತವಾಗಿಯೇ ಹೊಸ ಚಿಗುರು ಕಾಣಿಸಿಕೊಳ್ಳುತ್ತದೆ. ಅನೇಕ ವೇಳೆ ಎಲೆಗಳ ಕಕ್ಷಗಳಲ್ಲಿ ಮುಳ್ಳುಗಳಿರುತ್ತವೆ. ಇವು ಚೂಪು, ಮತ್ತು ಬಹು ಗಟ್ಟಿ. ಚಕ್ಕೆ ತುಂಬ ತೆಳು: ಕಾಂಡದಿಂದ ಸುಲಭವಾಗಿ ಬೇರ್ಪಡಿಸಬಹುದು. ಹೂಗಳು ಬಿಳ್ಳಿಬಣ್ಣದವು; ಸುವಾಸನಾಯುಕ್ತ, ಹಣ್ಣುಗಳು ಆಲದಹಣ್ಣಿನ ಗಾತ್ರದವಾಗಿದ್ದು ಕೆಂಪುಬಣ್ಣಕ್ಕಿರುತ್ತವೆ. ಚಳ್ಳೆಹಣ್ಣಿನಂತೆ ಒಳಗಡೆ ತಿರುಳು ಬಹು ನುಣುಪು. ಬೀಜ ಕಾಫಿ ಬೀಜದಂತೆ ಗಟ್ಟಿ.

ಬೀಜದಿಂದ ಎಣ್ಣೆಯನ್ನು ತೆಗೆದು ಔಷಧಿಗೆ ಮತ್ತು ದೀಪ ಉರಿಸುವುದಕ್ಕೆ ಉಪಯೋಗಿ ಸುತ್ತಾರೆ. ಬೇರಿನಿಂದ ಬಟ್ಟಿ ಇಳಿಸಿ ಪಡೆಯುವ ಆಸವವನ್ನು ಔಷಧಿಗೆ ಉಪಯೋಗಿಸುವುದೂ ಉಂಟು. ಗಿಡಕ್ಕೆ ಮುಳ್ಳಿರುವುದರಿಂದ ಬೇಲಿಯಲ್ಲಿ ಬೆಳೆಸಲು ಉಪಯುಕ್ತ. ಮರ ವ್ಯವಸಾಯದ ಮುಟ್ಟುಗಳನ್ನು ತಯಾರಿಸಲು ಬರುತ್ತದೆ.

ಅಂಕೋಲೆಯ ಕೋಲನ್ನು ಹಿಡಿದು ತಿರುಗಾಡಿದಲ್ಲಿ ಪೀಡೆ ಪಿಶಾಚಿಗಳ ಭಯವಿರುವು ದಿಲ್ಲವೆಂಬುದು ಹಿಂದಿನಿಂದ ಕೆಲವು ವರ್ಗದ ಜನರಲ್ಲಿರುವ ಒಂದು ನಂಬಿಕೆ.