ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಗರು

ವಿಕಿಸೋರ್ಸ್ದಿಂದ

ಅಂಗರು[ಸಂಪಾದಿಸಿ]

ಅಂಗದೇಶದ ನಿವಾಸಿಗಳು. ಈ ದೇಶ ಸ್ಥೂಲವಾಗಿ ಈಗಿನ ಬಿಹಾರ ರಾಜ್ಯದಲ್ಲಿನ ಭಾಗಲಪುರ, ಮಾಂಘೀರ್ ಜಿಲ್ಲೆಗಳನ್ನೊಳಗೊಂಡಿತ್ತು.

ಅಂಗರ ಉಲ್ಲೇಖ ಮೊಟ್ಟಮೊದಲಿಗೆ ಅಥರ್ವವೇದದಲ್ಲಿ ಸಿಗುತ್ತದೆ. ಆ ಪ್ರಕಾರ ಇವರು ಆರ್ಯಜನಾಂಗಕ್ಕೆ ಸೇರದೆ, ಅಲ್ಲಿಯ ಮೂಲನಿವಾಸಿಗಳಾಗಿರಬೇಕೆಂದು ಊಹಿಸಲಾಗಿದೆ. ಸಂತಾಲ ಜನರಲ್ಲಿ ಪ್ರಚುರವಿದ್ದ ಐತಿಹ್ಯಗಳಿಂದಲೂ ಇದು ಸಮರ್ಥನೆಗೊಂಡಿದೆ. ಬೌಧಾಯನ ಧರ್ಮಸೂತ್ರದಲ್ಲಿ ಅಂಗರು ಮಿಶ್ರಜನಾಂಗ (ಸಂಕೀರ್ಣಯೋನಯಃ) ಎಂದು ಹೇಳಿರುವುದಲ್ಲದೆ ಈ ದೇಶಕ್ಕೆ ಹೋಗಿ ಬಂದವರು ಶುದ್ಧಿಗಾಗಿ ಪುನಸ್ತೋಮ ಮತ್ತು ಸರ್ವಪೃಷ್ಠಗಳೆಂಬ ಯಜ್ಞಗಳನ್ನು ಮಾಡಬೇಕೆಂದು ವಿಧಿಸಲಾಗಿದೆ. ಈ ಜನಾಂಗದಲ್ಲಿ ಮೃತದೇಹಗಳನ್ನು ತ್ಯಜಿಸುವ ಮತ್ತು ಹೆಂಡತಿ ಮಕ್ಕಳನ್ನು ಮಾರಿಕೊಳ್ಳುವ ಪದ್ಧತಿ ಪ್ರಚಲಿತವಿತ್ತೆಂದು ಮಹಾಭಾರತದಿಂದ ತಿಳಿದುಬರುತ್ತದೆ.

ಪರಶಿವನ ಕೋಪಕ್ಕೆ ಅಂಜಿ ಕಾಮ ಓಡಿಹೋಗಿ ಈ ದೇಶದಲ್ಲಿ ದೇಹ (ಅಂಗ)ವನ್ನು ವಿಸರ್ಜಿಸಿದುದರಿಂದ ಈ ದೇಶಕ್ಕೆ ಅಂಗವೆಂಬ ಹೆಸರು ಬಂದಿತೆಂಬ ಕಥೆ ರಾಮಾಯಣದಲ್ಲಿದೆ. ಆದರೆ ಯಯಾತಿಯ ವಂಶಜನಾದ ಬಲಿಗೂ ಮತ್ತು ಅವನ ಪತ್ನಿ ಸುದೇಷ್ಣೆಗೂ ಅಂಗ, ವಂಗ, ಕಳಿಂಗ, ಪುಂಡ್ರ, ಸುಹ್ಮ ಎಂಬ ಐವರು ಮಕ್ಕಳಿದ್ದು ಅವರು ತಮ್ಮ ತಮ್ಮ ಹೆಸರಿನಲ್ಲಿ ರಾಜ್ಯಗಳನ್ನು ಸ್ಥಾಪಿಸಿದರೆಂಬ ಐತಿಹ್ಯ ಮಹಾಭಾರತ ಮತ್ತು ಪುರಾಣಗಳಲ್ಲಿ ದೊರಕುತ್ತದೆ. ರೋಮಪಾದನೆಂಬುವನು ಈ ದೇಶದ ಅರಸನಾಗಿದ್ದನೆಂದು ರಾಮಾಯಣದಲ್ಲಿ ಹೇಳಿದೆ. ಮಹಾಭಾರತದ ಕಾಲಕ್ಕೆ ಇದು ಕೌರವರ ರಾಜ್ಯದಲ್ಲಿ ಸೇರಿದ್ದು, ಕರ್ಣ ಇದರ ಅಧಿಪತಿಯಾಗಿದ್ದ.

ಪ್ರ.ಶ.ಪು. 6ನೆಯ ಶತಮಾನದಲ್ಲಿ ಅಂಗವು 16 ಮಹಾರಾಷ್ಟ್ರ (ಮಹಾಜನಪದ)ಗಳಲ್ಲಿ ಒಂದಾಗಿದ್ದಿತು. ಮುಂದೆ ಇದರ ನೆರೆಯ ರಾಜ್ಯವಾದ ಮಗಧದೇಶದ ಅರಸು ಬಿಂಬಸಾರ ಇದನ್ನು ಗೆದ್ದ. ಆಮೇಲೆ ಇದು ಮೌರ್ಯಸಾಮ್ರಾಜ್ಯದ ಭಾಗವಾಯಿತು. ಬಾದಾಮಿಯ ಚಳುಕ್ಯರು, ಸೇವುಣರು, ಹೊಯ್ಸಳರು ಮುಂತಾದ ಅರಸರ ಶಾಸನಗಳಲ್ಲಿ ಇವರು ಇತರ ದೇಶಗಳ ಜೊತೆಗೆ ಅಂಗದೇಶವನ್ನು ಜಯಿಸಿದ ಉಲ್ಲೇಖಗಳು ಹೇರಳವಾಗಿ ದೊರೆಯುತ್ತವೆ. ಇದರಿಂದ ಅಂಗವು ಬಹು ಪುರ್ವಕಾಲದಿಂದ ಮಧ್ಯಯುಗದವರೆಗೂ ಪ್ರಸಿದ್ಧವಾದ ದೇಶವಾಗಿದ್ದಿತು. ಚಂಪಾನಗರ ಇದರ ರಾಜಧಾನಿ.