ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಗೋರ ಆಡಿನ ತುಪ್ಪಟ

ವಿಕಿಸೋರ್ಸ್ ಇಂದ
Jump to navigation Jump to search

ಅಂಗೋರ ಆಡಿನ ತುಪ್ಪಟ : ಈಗಿನ ತುರ್ಕಿ ದೇಶದಲ್ಲಿರುವ ಅಂಗೋರ ಮತ್ತು ಅದರ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಸುಮಾರು ಎರಡು ಸಾವಿರ ವರ್ಷಗಳಿಂದಲೂ ಸಾಕುತ್ತಿರುವ ವಿಶಿಷ್ಟ ಜಾತಿಯ ಮೇಕೆಯ ತುಪ್ಪಟ (ಮೊಹೇರ್). ಎಲ್ಲ ದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ. ಎಳೆ 7-8ಉದ್ದವಿರುತ್ತದೆ. ಅಲ್ಲದೆ, ಕೆಲವು ವಿಶಿಷ್ಟಗುಣಗಳನ್ನೂ ಹೊಂದಿದೆ. ನುಣುಪು, ಗಡಸು ಮತ್ತು ಎಳೆತವನ್ನು ತಡೆಯಬಲ್ಲುದು. ಇತರ ನೂಲುಗಳೊಂದಿಗೆ ಬೆರೆತಾಗ ಅವುಗಳ ಬಣ್ಣ, ಚೆಂದ, ಮೃದುತ್ವ ಮತ್ತು ಹೊಳಪನ್ನು ಹೆಚ್ಚಿಸುತ್ತದೆ. ಕಸದ ಕಣಗಳು ಅದರ ಮೇಲೆ ನಿಲ್ಲುವುದಿಲ್ಲ. ಹಾಕಿದ ಬಣ್ಣವನ್ನು ಶಾಶ್ವತವಾಗಿ ಇಟ್ಟುಕೊಂಡಿರುತ್ತದೆ. ಆದ್ದರಿಂದ ತಯಾರಾದ ಬಟ್ಟೆಗಳ ಮೇಲೆ ಅಂದವಾಗಿ ಅಲಂಕಾರಿಕ ಚಿತ್ರಣ ಮಾಡುವುದಕ್ಕೆ ತುಂಬ ಅನುಕೂಲ.ಆದರೆ ಇಂದು ಮೊಹೇರ್ ನಿಜವಾದ ಅಂಗೋರ ಆಡಿನ ತುಪ್ಪಟವೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಹತ್ತೊಂಬತ್ತನೆಯ ಶತಮಾನದ ಪ್ರಾರಂಭದಲ್ಲೇ ಈ ಕೂದಲಿನ ಉಪಯುಕ್ತತೆಯನ್ನು ಜನ ಅರಿತಿದ್ದರು. ನಾನಾ ದೇಶಗಳಿಂದ ಅದಕ್ಕಾಗಿ ಬೇಡಿಕೆ ಬರತೊಡಗಿತು. ಇದನ್ನು ಪೂರೈಸುವುದಕ್ಕೆ ಅಂಗೋರ ಮತ್ತು ಸಾಮಾನ್ಯ ಆಡುಗಳ ಮಿಶ್ರತಳಿ ಮೇಕೆಗಳನ್ನು ಬೆಳೆಸತೊಡಗಿದರು. ಈ ಮೇಕೆಗಳ ಕೂದಲು ಶುದ್ಧ ಮೊಹೇರ್ ತುಪ್ಪಟಕ್ಕಿಂತ ಕೆಳದರ್ಜೆಯದು. ಮಿಶ್ರತಳಿ ತಯಾರಿಕೆ ಪ್ರಾರಂಭವಾದ ಮೇಲೆ ನಾನಾ ಮಟ್ಟದ ಮೊಹೇರ್ ತುಪ್ಪಟಗಳು ಬರತೊಡಗಿದುವು. ಅಮೆರಿಕದ ಸಂಯುಕ್ತಸಂಸ್ಥಾನ, ದಕ್ಷಿಣ ಆಫ್ರಿಕ, ಆಸ್ಟ್ರೇಲಿಯ, ನ್ಯೂಜಿûಲೆಂಡ್, ಮುಂತಾದ ಪ್ರಮುಖ ದೇಶಗಳಿಗೂ ಈ ಮಿಶ್ರತಳಿ ತಯಾರಿಕೆ ಹರಡಿತು.ಇತರ ತುಪ್ಪಟದಿಂದ ತಯಾರಾಗುವ ವಸ್ತುಗಳಿಗೆ ಅಂಗೋರಾ ತುಪ್ಪಟವನ್ನು ಬೆರೆಸುವುದು ಬಹಳ ಉಪಯುಕ್ತ. ಅವು ಬಹಳ ದಿನ ಬಾಳಿಕೆ ಬರುತ್ತವೆ, ಸುಕ್ಕಾಗುವುದಿಲ್ಲ. ಅವುಗಳನ್ನು ನುಸಿ ಹಿಡಿಯದಂತೆ ಮಾಡುವುದೂ ಸುಲಭ. ಉತೃಷ್ಟವಾದ ರತ್ನಗಂಬಳಿಗಳು, ಹೊದೆಯುವ ಕಂಬಳಿ, ಗವುಸುಗಳು, ನಾನಾ ವಿಧದ ಉಡುಪುಬಟ್ಟೆಗಳು ಇದರಿಂದ ತಯಾರಾಗುತ್ತವೆ.(ಎ.ಎಂ.)