ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಚನ್, ಎಲ್ ಪಿ
ಅಂಚನ್, ಎಲ್ ಪಿ 1927-97. ಸುಪ್ರಸಿದ್ಧ ಲೋಹಶಿಲ್ಪಿ. ಲಿಂಗಪ್ಪ ಅಂಚನ್ ಇವರ ಪೂರ್ಣ ಹೆಸರು. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ಬಡ ಕುಟುಂಬವೊಂದರಲ್ಲಿ ಜನಿಸಿದರು. ಮಂಗಳೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವಾಗಲೇ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡರು. ಎಸ್.ಎಸ್.ಎಲ್.ಸಿ. ಓದುತ್ತಿರುವಾಗ ತಾವೊಬ್ಬ ಕಲಾವಿದನಾಗಬೇಕೆಂದು ಬಯಸಿದರು. ಇದಕ್ಕೆ ಮನೆಯವರ ವಿರೋಧ ವ್ಯಕ್ತವಾದಾಗ ಓದನ್ನು ಬಿಟ್ಟು ಮುಂಬಯಿಗೆ ಹೋದರು.ಮುಂಬಯಿಯಲ್ಲಿ ಹೆಸರಾಂತ ಕಲಾವಿದ ಜೆ.ಎಸ್. ದಂಡಾವತಿ ಅವರ ನೂತನ ಕಲಾಮಂದಿರ ಸೇರಿದರು (1945). ಅನಂತರ ಜೆ.ಜೆ. ಕಲಾ ಶಾಲೆಯಲ್ಲಿ ಅಭ್ಯಾಸ ಮಾಡಿ ಡಿಪ್ಲೊಮಾ ಪಡೆದರು (1957). ಕೆಲಕಾಲ ಮುಂಬಯಿಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ಅನಂತರಮುಂಬಯಿಯಿಂದ ಬೆಂಗಳೂರಿಗೆ ಬಂದರು. ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಲೇ ಔಟ್ ಕಲಾವಿದರಾಗಿ ಕೆಲಸಕ್ಕೆ ಸೇರಿದರು. ಈ ವೃತ್ತಿ ಜೀವನ ಇವರಿಗೆ ತೃಪ್ತಿ ನೀಡಲಿಲ್ಲ. ಅನಂತರ ವಿಶ್ವೇಶ್ವರಯ್ಯ ತಾಂತ್ರಿಕ ವಸ್ತು ಸಂಗ್ರಸಹಾಲಯದಲ್ಲಿ ನೇಮಕಗೊಂಡರು. ಅಲ್ಲಿ ವಸ್ತು ವಿನ್ಯಾಸ ರಚನೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡರು. 1985ರಲ್ಲಿ ಈ ಹುದ್ದೆಯಿಂದ ನಿವೃತ್ತರಾದರು. ಲೋಹದ ತಗಡುಗಳಿಂದ ಶಿಲ್ಪರಚನೆ ಇವರ ಕಲಾವೈಶಿಷ್ಟ್ಯ. ಇವರು ರಚಿಸಿದ ಕಲಾಕೃತಿಗಳಲ್ಲಿ ಬಹುಪಾಲು ಮೂರ್ತಿಶಿಲ್ಪಗಳಾಗಿವೆ. ಇವರ ಕಲಾಕೃತಿಗಳು ಕ್ಯೂಬಿಸಂನಿಂದ ಹೆಚ್ಚು ಪ್ರಭಾವಿತವಾಗಿವೆ. ಮುಖವಾಡದ ಕಲಾಕೃತಿಗಳನ್ನೂ ಇವರು ರಚಿಸಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ಕಲಾ ಪ್ರದರ್ಶನಗಳಲ್ಲಿ ಇವರ ಶಿಲ್ಪಗಳು ಪ್ರದರ್ಶನಗೊಂಡಿವೆ.ಇವರಿಗೆ ಅನೇಕ ಪ್ರಶಸ್ತಿ - ಗೌರವಗಳು ಲಭಿಸಿವೆ. ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿಯ ಪ್ರಶಸ್ತಿಯನ್ನು ಎರಡು ಬಾರಿ ಪಡೆದ ಹೆಗ್ಗಳಿಕೆ ಇವರದು (1969 ಮತ್ತು 1981). ಮೈಸೂರು ದಸರ ಕಲಾ ಪ್ರದರ್ಶನ ಬಹುಮಾನ (1981), ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಶಸ್ತಿ (1984) - ಇವು ಇವರಿಗೆ ದೊರೆತ ಪ್ರಶಸ್ತಿಗಳಲ್ಲಿ ಮುಖ್ಯವಾದವು. ಇವರ ಕಲಾಕೃತಿಗಳು ದೇಶ ವಿದೇಶಗಳ ಕಲಾ ಗ್ಯಾಲರಿಗಳಲ್ಲಿ ಪ್ರದರ್ಶಿಸಲ್ಪಟ್ಟಿವೆ. ಇವರು 1997ರಲ್ಲಿ ನಿಧನರಾದರು.