ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಚೆಯ ಚೀಟಿಗಳು

ವಿಕಿಸೋರ್ಸ್ದಿಂದ

ಅಂಚೆಯ ಚೀಟಿಗಳು

ಪ್ರತಿಯೊಂದು ದೇಶದಲ್ಲಿಯೂ ಬಳಕೆಯಲ್ಲಿವೆ. ದೇಶದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೂ ಮತ್ತು ಒಂದು ದೇಶದಿಂದ ಮತ್ತೊಂದು ದೇಶಕ್ಕೂ ರವಾನಿಸುವ ಕಾರ್ಡುಗಳ ಮೇಲೂ ಲಕೋಟೆಗಳ ಮೇಲೂ ಹಚ್ಚಲು ಇವನ್ನು ಉಪಯೋಗಿಸುತ್ತಾರೆ. ಇವುಗಳ ಆಕಾರ, ಪ್ರಮಾಣ ಮತ್ತು ಬೆಲೆಯನ್ನು ಸರ್ಕಾರದ ಪರವಾಗಿ ನಿಗದಿ ಮಾಡುವುದು ಅಂಚೆ ಇಲಾಖೆಯ ಕೆಲಸ. ಖಾಲಿ ಕಾರ್ಡು ಅಥವಾ ಲಕೋಟೆಗಳ ಮೇಲೆ ಹಚ್ಚುವುದಕ್ಕೆ ಬೇಕಾಗುವ ಅಂಚೆ ಚೀಟಿಗಳನ್ನು (ಪೋಸ್ಟಲ್ ಸ್ಟ್ಯಾಂಪ್ಸ್) ಅಂಚೆ ಕಚೇರಿಗಳು ಮಾರುತ್ತವೆ. ಮುದ್ರಿತವಾಗಿರುವ ಅಂಚೆಯ ಚೀಟಿಗಳನ್ನೊಳಗೊಂಡ ಕಾರ್ಡು ಮತ್ತು ಲಕ್ಕೋಟೆಗಳು ಎಲ್ಲ ಅಂಚೆ ಕಚೇರಿಗಳಲ್ಲೂ ಮಾರಾಟಕ್ಕಿರುತ್ತವೆ. ಕಾನೂನು ರೀತ್ಯ ಅಂಚೆಯ ಮೂಲಕ ರವಾನಿಸುವ ಪ್ರತಿಯೊಂದು ಕಾಗದಕ್ಕೂ ಅಂಚೆಯ ಚೀಟಿಯನ್ನು ಅಂಟಿಸಬೇಕಾಗುತ್ತದೆ. ರವಾನಿಸುವ ಈ ಕೆಲಸದಿಂದ ಅಂಚೆಯ ಇಲಾಖೆಗೆ ಕ್ಲುಪ್ತವಾದ ಆದಾಯವಿದೆ. ಕಾಗದಗಳನ್ನು ಆಯಾ ವಿಳಾಸದವರಿಗೆ ಸಕಾಲದಲ್ಲಿ ತಲುಪಿಸುವ ಜವಾಬ್ದಾರಿ ಇಲಾಖೆಯದು. ಒಂದು ವೇಳೆ ಸಾಕಷ್ಟು ಅಂಚೆ ಚೀಟಿಗಳನ್ನು ಅಂಟಿಸದೆ ಪತ್ರಗಳನ್ನು ರವಾನಿಸಿದರೆ ಇಲಾಖೆಯವರು ಅವನ್ನು ವಿಳಾಸದವರಿಗೆ ತಲುಪಿಸಿ, ಅವರಿಂದಲೇ ಅಥವಾ ಕಳುಹಿಸಿದವರಿಂದಲೇ ನಿಗದಿ ಮಾಡಿರುವ ದಂಡವನ್ನು ವಸೂಲು ಮಾಡುತ್ತಾರೆ.

ಆಯಾ ದೇಶದ ನಾಣ್ಯದ ರೀತ್ಯ ಅಂಚೆ ಚೀಟಿಗಳು ಮುದ್ರಿತವಾಗಿರುತ್ತವೆ. ನಮ್ಮ ದೇಶದಲ್ಲಿ ಒಂದು ಪೈಸೆ ಬೆಲೆಯುಳ್ಳದ್ದರಿಂದ ಹಿಡಿದು ಒಂದು ರೂಪಾಯಿ ಮತ್ತು ಒಂದು ರೂಪಾಯಿಗಿಂತ ಅಧಿಕಮೊತ್ತದ ಅಂಚೆ ಚೀಟಿಗಳು ಮುದ್ರಿತವಾಗುತ್ತವೆ. ಚೀಟಿಗಳ ಮೇಲೆ ಆಯಾ ದೇಶದ ಅನೇಕ ಚಿತ್ರಗಳು ಅಚ್ಚಾಗಿರುತ್ತವೆ. ಉದಾಹರಣೆಗೆ ನಮ್ಮ ದೇಶದ ಚೀಟಿಗಳ ಮೇಲೆ ದೇಶದ ಭೂಪಟ, ಪ್ರೇಕ್ಷಣೀಯ ಸ್ಥಳಗಳು, ರಾಜಕಾರಣಿಗಳು, ಚಾರಿತ್ರಿಕ ವೀರರು, ಸಾಧುಸಂತರು, ವಿದ್ವಾಂಸರು ಮೊದಲಾದವರ ಭಾವಚಿತ್ರಗಳು, ಕೈಗಾರಿಕೋದ್ಯಮಗಳು, ಪ್ರಸಿದ್ಧ ಘಟನೆಗಳ ಸ್ಮಾರಕ ಚಿತ್ರಗಳು-ಹೀಗೆ ಅನೇಕ ಬಗೆಯ ಚಿತ್ರಗಳನ್ನು ಮುದ್ರಿಸಿರುತ್ತಾರೆ. ಈ ಚಿತ್ರಗಳ ಆಸೆಯಿಂದಾಗಿ ಇಂಥ ಚೀಟಿಗಳನ್ನು ಸಂಗ್ರಹಿಸುವುದೇ ಅನೇಕರ ಹವ್ಯಾಸವಾಗಿದೆ. ಆಸಕ್ತರಿಗೆ ಇಂಥ ಚೀಟಿಗಳನ್ನು ಮಾರುವುದಕ್ಕೇ ಅನೇಕ ಸಂಸ್ಥೆಗಳಿವೆ.

ಸೌಲಭ್ಯಕ್ಕಾಗಿ ಅನೇಕ ಸಂಸ್ಥೆಗಳು ವರ್ಷಕ್ಕೆ ಒಮ್ಮೆ ಗೊತ್ತುಪಡಿಸಿರುವ ಶುಲ್ಕವನ್ನು ಅಂಚೆ ಇಲಾಖೆಗೆ ಕೊಟ್ಟು ತಾವು ರವಾನಿಸುವ ಕಾಗದಪತ್ರಗಳ ಮೇಲೆ ತಮ್ಮದೇ ಆದ ಮುದ್ರೆಯೊತ್ತಿ ರವಾನಿಸುತ್ತಾರೆ. ಆ ರೀತಿ ರವಾನಿಸುವ ಕಾಗದಗಳಿಗೆ ಪ್ರತ್ಯೇಕ ಅಂಚೆ ಚೀಟಿಗಳ ಅಗತ್ಯವಿಲ್ಲ. ಸರ್ಕಾರದ ಲಕೋಟೆಗಳ ಮೇಲೆ ಸಾಧಾರಣವಾಗಿ ಸರ್ಕಾರದ ಕೆಲಸಕ್ಕಾಗಿ ಎಂದು ಬರೆಯುತ್ತಾರಲ್ಲದೆ ಸರ್ಕಾರದ ಕೆಲಸಕ್ಕಾಗಿಯೇ ಗೊತ್ತುಮಾಡಲ್ಪಟ್ಟಿರುವ ಸರ್ವಿಸ್ ಸ್ಟ್ಯಾಂಪ್ ಎಂಬ ಸರ್ಕಾರಿ ಅಂಚೆ ಚೀಟಿಗಳನ್ನು ಹಚ್ಚುತ್ತಾರೆ. ಈ ಎರಡು ವಿಧಗಳಲ್ಲದೆ ಅಂಚೆ ಚೀಟಿ ಇಲ್ಲದ, ಮುದ್ರೆ ಒತ್ತದ ಕಾಗದಗಳನ್ನು ಇಲಾಖೆಯವರು ರವಾನಿಸುವುದಿಲ್ಲ. ಯಾವ ಅಂಚೆ ಚೀಟಿಯೂ ಇಲ್ಲದ ಪತ್ರಗಳ ಮೇಲೆ ಇಲಾಖೆಯವರು ದುಪ್ಪಟ್ಟು ದಂಡ ವಸೂಲಿ ಮಾಡುತ್ತಾರೆ.

ನಾವು ರವಾನಿಸುವ ಕಾಗದ ಪತ್ರಗಳ ಮೇಲಿನ ಅಂಚೆ ಚೀಟಿಗಳ ಮೇಲೆ ಇಲಾಖೆಯವರು ತಮ್ಮ ತಾರೀಖಿನ ಮುದ್ರೆಯನ್ನು ಒತ್ತುತ್ತಾರೆ. ಹೀಗೆ ಮಾಡುವುದರಿಂದ ಹಳೆಯ ಅಂಚೆ ಚೀಟಿಗಳನ್ನೇ ಮತ್ತೊಮ್ಮೆ ಬಳಸಲು ಅವಕಾಶವಿರುವುದಿಲ್ಲ. ಒಂದು ವೇಳೆ ಉಪಯೋಗಿಸಿದಲ್ಲಿ ಅದು ಕಾನೂನಿಗೆ ವಿರುದ್ಧವಾಗಿರುತ್ತದೆ.     

(ಬಿ.ವಿ.ಬಿ.)