ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಜದೀವ
ಅಂಜದೀವ
[ಸಂಪಾದಿಸಿ]ಗೋವ ತೀರದಾಚೆ ಇರುವ ಒಂದು ದ್ವೀಪ. ಹಿಂದೆ ಪೋರ್ಚುಗೀಸರ ವಶದಲ್ಲಿದ್ದ ಈ ದ್ವೀಪದ ಬಳಿಯಲ್ಲಿಯೇ 1961ನೆಯ ಡಿಸೆಂಬರ್ ತಿಂಗಳಲ್ಲಿ ಒಬ್ಬ ಭಾರತೀಯ ಅಂಬಿಗನು ಅವರಿಂದ ಗುಂಡು ಹಾರಿಸಿ ಕೊಲ್ಲಲ್ಪಟ್ಟ. 400 ವರ್ಷಗಳಿಗಿಂತ ಹೆಚ್ಚಾಗಿ ಗೋವೆಯಲ್ಲಿ ಭಾರತೀಯರನ್ನು ಕೆಟ್ಟ ರೀತಿಯಿಂದ ಆಳುತ್ತಿದ್ದು ಗೌರವದಿಂದ ಅದನ್ನು ಬಿಟ್ಟುಕೊಡದಿದ್ದ ಪೋರ್ಚುಗೀಸರ ವಿರುದ್ಧ ಭಾರತೀಯರಲ್ಲಿ ಉರಿಯುತ್ತಿದ್ದ ಬೆಂಕಿಯ ಕಿಡಿಯನ್ನು ಎಬ್ಬಸಿದ್ದೂ ಇದೇ ಘಟನೆ. ಭಾರತೀಯ ಬಾಂಧವರನ್ನು ಮತ್ತು ಪೋರ್ಚುಗೀಸರ ವಶದಲ್ಲಿದ್ದ ಇನ್ನುಳಿದ ವಸಾಹತುಗಳನ್ನು ಭಾರತ ಹೇಗೆ ಮುಕ್ತಗೊಳಿಸಿತೆಂಬುದು ಇಂದಿನ ಇತಿಹಾಸಕ್ಕೆ ಸೇರಿಕೊಂಡಿರುವ ವಿಷಯ. ಅಂಜದೀವ್ನ ಬಳಿ ಭಾರತದ ಜಲನೌಕೆಗಳು ಹೋದಾಗ ಪೋರ್ಚುಗೀಸ್ ಪಡೆಗಳು ಶರಣಾಗತವಾದವು. ಆದರೆ ಜಲಸೈನಿಕರು ತೀರದಲ್ಲಿ ಇಳಿಯುವಾಗ ಪೋರ್ಚುಗೀಸರು ಇವರ ಮೇಲೆ ಗುಂಡುಹಾರಿಸಿ ಕೆಲವರನ್ನು ಕೊಂದರು. ಅಂಜದೀವ್ನಲ್ಲಿ ನಡೆದ ಅಂಬಿಗನ ಕೊಲೆಯೇ ಗೋವೆಯನ್ನು ಪೋರ್ಚುಗೀಸರಿಂದ ಮುಕ್ತಗೊಳಿಸಲು ಭಾರತ ಕೈಗೊಂಡ ನಿರ್ಧಾರಕ್ಕೆ ತತ್ಕ್ಷಣದ ಕಾರಣವಾಯಿತೆಂದು ಹೇಳಬಹುದು (ನೋಡಿ- ಗೋವ).