ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಟುಪದಾರ್ಥಗಳು

ವಿಕಿಸೋರ್ಸ್ದಿಂದ

ಅಂಟುಪದಾರ್ಥಗಳು - ಕಾಗದ, ಗಾಜು, ಲೋಹ ಮುಂತಾದ ಯಾವುದೇ ಪದಾರ್ಥಗಳ ಎರಡು ಅಥವಾ ಹೆಚ್ಚು ಪದರಗಳನ್ನು ಅಂಟಿಸಲು, ಬಳಸುವ ವಸ್ತುಗಳು (ಅಡ್ಹೆಸಿವ್ಸ್). ಇವುಗಳ ಉಪಯೋಗ ಪುರಾತನವಾದುದು. ಸಹಜವಾಗಿಯೇ ಮೊದಲು ಬಳಕೆಗೆ ಬಂದವುಗಳು ಗಿಡಗಳಿಂದ ದೊರೆತ ಗೋಂದು, ಜಿಗುಟು ಪದಾರ್ಥಗಳು, ರಬ್ಬರ್ ಮುಂತಾದವುಗಳು. ಸಾವಿರಾರು ವರ್ಷಗಳ ಹಿಂದೆಯೇ ಈಜಿಪ್ಟಿನವರು ಹಾಲಿನಲ್ಲಿರುವ ಕೇಸಿಯಿನ್ ಎಂಬ ಸಸಾರಜನಕ (ನೈಟ್ರಾಜಿನಸ್) ಪದಾರ್ಥದಿಂದ ಮಾಡಿದ ಅಂಟನ್ನು, ಮರದ ಪೀಠೋಪಕರಣಗಳನ್ನು ತಯಾರುಮಾಡಲೂ ಅವುಗಳನ್ನು ಅಲಂಕರಿಸಲೂ ಉಪಯೋಗಿಸುತ್ತಿದ್ದರು. ಗೋಂದು ಮುಂತಾದ ಸಸ್ಯಜನ್ಯ ಅಂಟುಪದಾರ್ಥಗಳು ನೀರಿನಿಂದ ಮೆದುವಾಗುವುದರಿಂದ ಅವುಗಳ ಅಂಟಿಸುವ ಶಕ್ತಿ ಕಡಿಮೆಯಾಗಿದ್ದು ಇಂಥ ಅಂಟುಗಳ ಬಳಕೆ ಕಾಗದ ಮತ್ತು ಮರದ ಉಪಯೋಗದಲ್ಲಿ ಮಾತ್ರ ಇತ್ತು. ಆದರೆ ಇತ್ತೀಚೆಗೆ ಬೇರೆ ಬೇರೆ ರೀತಿಯ ಸಂಶ್ಲೇಷಿತ ಅಂಟುಗಳು ಕಾರಿನ, ವಿಮಾನದ ತಯಾರಿಕೆ, ಎಲೆಕ್ಟ್ರಾನಿಕ್ಸ್, ಮುಂತಾದ ಕೈಗಾರಿಕೆಗಳಲ್ಲಿ ಬಳಕೆಗೆ ಬಂದಿವೆ. ಈಗ ಇರುವ ಅಂಟುಗಳು ಗಾಜು, ಲೋಹ, ಪ್ಲಾಸ್ಟಿಕ್ ಮುಂತಾದವುಗಳನ್ನು ಬಹು ಭದ್ರವಾಗಿ ಅಂಟಿಸಬಲ್ಲವು. ಹೀಗೆ ಅಂಟಿಸುವುದರಿಂದ ಬರುವ ಎರಡು ಅಥವಾ ಹೆಚ್ಚು ಪದರದ ವಸ್ತುಗಳಲ್ಲಿ ತೂಕ, ಒತ್ತಡ, ಆಘಾತ-ಇವನ್ನು ತಡೆಯುವ ವಿಶೇಷ ಶಕ್ತಿ ಮುಂತಾದ, ಮೊದಲ ವಸ್ತುಗಳಿಗಿಲ್ಲದ ಉಪಯೋಗಕರವಾದ ಗುಣಗಳು ಬರುತ್ತವೆ. ರಂಧ್ರ ಮಾಡಿದ ಜಾಗಗಳಲ್ಲಿ ದೃಢತೆ ಇರುವುದಿಲ್ಲ. ಸರಿಯಾದ ಅಂಟನ್ನು ಉಪಯೋಗಿಸಿದರೆ ಈ ನೂನ್ಯತೆ ಇರುವುದಿಲ್ಲ. ಆದುದರಿಂದಲೇ ಈ ಹೊಸರೀತಿಯ ಅಂಟುಗಳ ಬಳಕೆ, ಅವುಗಳ ಬೆಲೆ ಹೆಚ್ಚಾದರೂ ಏರೋಪ್ಲೇನ್ ತಯಾರಿಕೆಯಲ್ಲಿ ಸಾಮಾನ್ಯ.

ಅಂಟುಶಕ್ತಿಯ ಸ್ಪಷ್ಟ ಪರಿಚಯ ಅಷ್ಟಾಗಿ ಇಲ್ಲ. ಕೆಲವು ಅಂಟುಗಳು ರಾಸಾಯನಿಕ ಬದಲಾವಣೆಗೆ ಒಳಗಾಗಿ ಹೊಂದಿ ಹೊಸ ಬಂಧಗಳು ಉಂಟಾಗಿ ಅವುಗಳ ಅಂಟುಶಕ್ತಿಗೆ ಆಧಾರವಾಗಿರುತ್ತವೆ. ಹೊಸ ಬಂಧಗಳು ಈ ಅಂಟಿಗೂ ಅಂಟಿಸಿದ ಪದರಕ್ಕೂ ನಡುವೆ ಏರ್ಪಡಬಹುದು ಅಥವಾ ಇದರಲ್ಲಿ ಭೌತಶಕ್ತಿಯೂ ಸೇರಿರಬಹುದು. ಒಟ್ಟಿನಲ್ಲಿ ಎರಡು ಪದರಗಳನ್ನು ಹಿಡಿದಿಟ್ಟಿರುವ ಅಂಟುಶಕ್ತಿಯಲ್ಲಿ, ಅಂಟುಗಳ ನಡುವಣ ಶಕ್ತಿ ಮತ್ತು ಅಂಟಿಗೂ ಪದರದ ಮೇಲ್ಮೈಗೂ ಇರುವ ಬಂಧಶಕ್ತಿ-ಎರಡೂ ಸೇರಿವೆ. ಆದುದರಿಂದ ಅಂಟಿನ ಪುರ್ಣ ಪ್ರಯೋಜನ ಪಡೆಯಲು ವಸ್ತುವಿನ ಮೇಲ್ಮೈಯನ್ನು ಶುದ್ಧಮಾಡಿ, ಅದರ ಮೇಲೆ ಸಂಪುರ್ಣವಾಗಿ ಅಂಟು ಹಚ್ಚಬೇಕು. ಅಂಟು ಎಷ್ಟು ತೆಳ್ಳಗಿದ್ದರೆ ಅಷ್ಟು ಉತ್ತಮ. ಹಚ್ಚುವ ಮೊದಲು ಲೋಹಗಳ ಮೈಯನ್ನು ಉಜ್ಜಿ ಒರಟು ಮಾಡುವುದು ಒಳ್ಳೆಯದು. ಈ ಅಂಟು ಪದಾರ್ಥಗಳನ್ನು ದ್ರಾವಣಗಳ ರೂಪದಲ್ಲಿ ಬಳಸುವುದಾದರೆ ದ್ರಾವಕವನ್ನು ಆವಿಯಾಗಿಸಬೇಕು. ಸರಂಧ್ರ ವಸ್ತುಗಳನ್ನು ಅಂಟಿಸಲು ಈ ದ್ರಾವಣ ಆ ರಂಧ್ರಗಳ ಮೂಲಕ ಹೋಗುವಂತೆ ಮಾಡಿ ಅನಂತರ ದ್ರಾವಕವನ್ನು ಆವಿಯಾಗಿಸಿ ತೆಗೆಯಬೇಕು. ಸೋಡಿಯಂ ಸಿಲಿಕೇಟ್ ದ್ರಾವಣವನ್ನು ಈ ರೀತಿ ರಟ್ಟಿನ ರಂಧ್ರಗಳ ಮೂಲಕ ಹೋಗುವಂತೆ ಮಾಡಿ ಕಾಗದದ ಪೆಟ್ಟಿಗೆಗಳನ್ನು ತಯಾರಿಸುತ್ತಾರೆ. ಅಂಟಿಸಬೇಕೆಂದಿರುವ ವಸ್ತುವಿನ ಮೈಮೇಲೆ ಹಚ್ಚಿದ ಅಂಟು, ಅದರ ಅಣುಗಳು ಹಲವಾರು ಸೇರಿ ಬೃಹತ್ ಅಣು ಆಗುವಂತೆ ಮಾಡುವುದು ಇನ್ನೊಂದು ಮಾರ್ಗ. ಅಂಟಿಸುವ ಪದರಗಳನ್ನು ಹೆಚ್ಚು ಒತ್ತಡಕ್ಕೆ ಒಳಪಡಿಸುವುದು ಆವಶ್ಯಕ. ಹೀಗೆ ಮಾಡುವುದರಿಂದ ದುರ್ಬಲ ಸ್ಥಾನಗಳಿಲ್ಲದೆ ಮೇಲಿನ ಮೈ ಎಲ್ಲವೂ ಸರಿಯಾಗಿ ಅಂಟಿಕೊಳ್ಳುವುದು. ಸಂಶ್ಲೇಷಿತ ಅಂಟುಗಳು ಹಲವಾರು ಇರುವುದರಿಂದ ಅವುಗಳನ್ನು ಬೆರೆಸಿ, ಬಂದ ಮಿಶ್ರಣಕ್ಕೆ ಬೇಕಾದ ಗುಣಗಳು ಬರುವಂತೆ ಮಾಡಬಹುದು.

ಪ್ರಕೃತಿಯಲ್ಲಿ ದೊರಕುವ ಅಂಟು ಪದಾರ್ಥಗಳು

[ಸಂಪಾದಿಸಿ]

ಪ್ರಾಣಿಗಳ ಚರ್ಮ, ಮೂಳೆಗಳಿಂದ ತಯಾರಾದ ಪ್ರಾಣಿಜನ್ಯ ಅಂಟುಪದಾರ್ಥಗಳಲ್ಲಿ ಜೆಲಟಿನ್ ಎಂಬ ರಸಾಯನವಸ್ತು ಅಪರಿಶುದ್ಧರೂಪದಲ್ಲಿ ಇರುತ್ತದೆ. ಬಿಸಿಯಿರುವಾಗ ಹಚ್ಚಿ, ಪದರಗಳನ್ನು ಒತ್ತಿ, ಆರಿಸಿದಾಗ ಅವು ನೀರು ಕಳೆದುಕೊಂಡು ಗಟ್ಟಿಯಾಗುತ್ತವೆ. ಅವುಗಳ ಮುಖ್ಯ ಉಪಯೋಗ ಮರದ ಪೀಠೋಪಕರಣಗಳ ತಯಾರಿಕೆಯಲ್ಲಿ ಮತ್ತು ಉಪ್ಪು ಕಾಗದದ ತಯಾರಿಕೆಯಲ್ಲಿ. ಕೇಸಿಯಿನ್ ಅಂಟು ಸರಂಧ್ರವಸ್ತುಗಳನ್ನು ಅಂಟಿಸುವುದಕ್ಕೆ, ಮರಗೆಲಸಕ್ಕೆ, ಕಾಗದದ ಉತ್ಪನ್ನಗಳಲ್ಲಿ ಹೆಚ್ಚು ಉಪಯುಕ್ತವಾದುದು. ಗಿಡದ ಕಾಂಡವನ್ನು ಗಾಯಮಾಡಿದಾಗ ಜಿನುಗುವ ಗೋಂದು ಈ ಗುಂಪಿಗೆ ಸೇರಿದುದು. ಗಮ್ ಅರಾಬಿಕ್ ಇವುಗಳ ಪೈಕಿ ಒಂದು. ನೀರಿನ ಆವಿಯಿದ್ದರೆ ತನ್ನ ದೃಢತೆಯನ್ನು ಕಳೆದುಕೊಳ್ಳುವುದರಿಂದ ಅವುಗಳ ಉಪಯೋಗ ಕಾಗದಗಳನ್ನು ಅಂಟಿಸಲು ಮಾತ್ರ. ಇದೇ ಗುಂಪಿಗೆ ಸೇರಿದ ರಬ್ಬರ್ ದ್ರಾವಣ, ಅರಗು ಮುಂತಾದುವುಗಳು ನೀರನ್ನು ನಿರೋಧಿಸಬಲ್ಲವು. ಆದುದರಿಂದ ರಬ್ಬರ್ ದ್ರಾವಣವನ್ನು ಚರ್ಮ ಮುಂತಾದುವುಗಳನ್ನು ಅಂಟಿಸಲು ಉಪಯೋಗಿಸುತ್ತಾರೆ. ಬಳಕೆಯಲ್ಲಿರುವ ನಿರವಂiÀÄವ ಅಂಟುಗಳ ಪೈಕಿ ಸೋಡಿಯಂ ಸಿಲಿಕೇಟ್ ಅಥವಾ ನೀರುಗಾಜು ಒಂದೇ ಒಂದು ಅಂಟು 280º ಸೆಲ್ಸಿಯಸ್ ಗಿಂತಲೂ ಹೆಚ್ಚು ಶಾಖವನ್ನು ತಡೆಯಬಲ್ಲದು. ಇದು ಬೇರೆ ವಸ್ತುಗಳೊಂದಿಗೆ ಸೇರಿಕೊಂಡು ಶಾಖ ನಿರೋಧಕ ಸಿಮೆಂಟ್ ಆಗುತ್ತದೆ. ಈ ಸಿಮೆಂಟನ್ನು ವಿದ್ಯುದ್ದೀಪದ ಬುರುಡೆಯ ತಳಕ್ಕೆ, ಗಾಜು ಮತ್ತು ಲೋಹದ ಭಾಗವನ್ನು ಅಂಟಿಸಲು ಅಲ್ಲದೆ ಅದೇ ರೀತಿಯಲ್ಲಿ ವಿದ್ಯುದುಪಕರಣಗಳ ತಯಾರಿಕೆಗೆ ಬಳಸುತ್ತಾರೆ. ನೀರುಗಾಜನ್ನು ವಿಶೇಷವಾಗಿ ಕಾಗದಪೆಟ್ಟಿಗೆಗಳ ತಯಾರಿಕೆಗೆ ಉಪಯೋಗಿಸುತ್ತಾರೆ.

ಸಂಶ್ಲೇಷಿತ ಅಂಟುಪದಾರ್ಥಗಳು ಎರಡು ಬಗೆಯವು. ಮೊದಲನೆಯ ಗುಂಪಿಗೆ ಸೇರಿದ ಅಂಟುಗಳು ಆರಿದಾಗ ರಾಸಾಯನಿಕ ಬದಲಾವಣೆ ಹೊಂದಿ ದೃಢವಾಗುವುವು. ಇವುಗಳಿಂದ ಅಂಟಿಸಿದ ಪದಾರ್ಥಗಳನ್ನು ಮತ್ತೆ ಕಾಯಿಸಿದರೂ ಅಂಟಿನ ದೃಢತೆಗೆ ಕುಂದು ಬರುವುದಿಲ್ಲ; ಮೊದಲಿನ ಶಕ್ತಿಯನ್ನು ಉಳಿಸಿಕೊಳ್ಳುತ್ತವೆ. ಎರಡನೆಯ ಗುಂಪಿನ ಅಂಟುಗಳು ಆರಿದಾಗ ಗಟ್ಟಿಯಾದರೂ ಮತ್ತೆ ಬಿಸಿ ಮಾಡಿದಾಗ ಮೆತ್ತಗಾಗುವುವು. ಈಪಾಕ್ಸಿ ಅಂಟು, ಫೀನಾಲಿಕ್ಸ್, ಯೂರಿಯಾ ಸಿಲಿಕೋನು, ಅಲ್ಕೈಡ್ರಾಳ, ರಿಸಾರ್ಸಿನಾಲ್ ರಾಳ, ಸಂಯುಕ್ತ ತಯಾರಿಕೆಯ ರಬ್ಬರ್-ಮುಂತಾದವುಗಳು ಮೊದಲನೆಯ ಗುಂಪಿಗೂ ವೀನೈಲ್ ರಾಳ, ಸೆಲ್ಯುಲೋಸ್ ಉತ್ಪನ್ನಗಳು, ಅಕ್ರಿಲಿಕ್ ರಸಾಯನ ವಸ್ತುಗಳು ಎರಡನೆಯ ಗುಂಪಿಗೂ ಸೇರಿವೆ.

ಮೊದಲ ಗುಂಪಿಗೆ ಸೇರಿದ ಅಂಟುಗಳಲ್ಲಿ ಈಪಾಕ್ಸಿ ಅಂಟುಗಳು ಶಕ್ತಿಯುತವಾಗಿದ್ದು ತುಂಬ ಉಪಯುಕ್ತವಾಗಿವೆ. ಇವಕ್ಕೆ ದ್ರಾವಕ ಬೇಕಾಗಿಲ್ಲ. ಗಟ್ಟಿಯಾಗುವುದು ರಾಸಾಯನಿಕ ಕ್ರಿಯೆಯಿಂದ. ಆದುದರಿಂದ ಇವನ್ನು ಲೋಹಗಳನ್ನು ಅಂಟಿಸಲೂ ಸರಂಧ್ರವಸ್ತುಗಳನ್ನು ಅಂಟಿಸಲೂ ಉಪಯೋಗಿಸುತ್ತಾರೆ. ಈಪಾಕ್ಸಿ ಮಿಶ್ರಣ ದೊರೆಯುವುದು ಎರಡು ಭಾಗವಾಗಿ. ಮೊದಲನೆಯದು ಅಂಟು, ಎರಡನೆಯದು ಗಟ್ಟಿಯಾಗುವ ರಾಸಾಯನಿಕ ಕಾರ್ಯವನ್ನು ಪ್ರಚೋದಿಸುವ ವೇಗೋತ್ಕರ್ಷಕ. ಬಳಸುವ ಮುಂಚೆ ಅವೆರಡನ್ನೂ ಬೆರೆಸಬೇಕು. ಕೆಲವು ಬಗೆಯ ಈಪಾಕ್ಸಿ ಅಂಟುಗಳು ನಿಧಾನವಾಗಿಯೂ ಇನ್ನೂ ಕೆಲವು ಕಾಯಿಸಿದರೆ ತುಂಬ ಶೀಘ್ರವಾಗಿಯೂ ಹಿಡಿಯುವುವು. ಎರಡು ಲೋಹಗಳನ್ನು ಬೆಸೆದ ಈ ಅಂಟಿಗೆ ಒಂದು ಚ.ಅಂ.ಕ್ಕೆ 3000-7000 ಪೌಂಡಿನಷ್ಟು ಶಕ್ತಿ ಬರಲು ಸಾಧ್ಯ. ಬೆಲೆ ಹೆಚ್ಚು. ಆದರೂ ಏರೋಪ್ಲೇನ್ ತಯಾರಿಕೆಯಲ್ಲಿ, ಎಲೆಕ್ಟ್ರಾನಿಕ್್ಸ ಕೈಗಾರಿಕೆಗಳಲ್ಲಿ ಇವುಗಳ ಉಪಯೋಗ ಹೆಚ್ಚು.

ಫೀನಾಲಿಕ್ಸ್ ಅಂಟುಗಳು ದ್ರಾವಣರೂಪದಲ್ಲಿ ದೊರೆಯುತ್ತವೆ. ಪ್ಲೈವುಡ್, ಮರ ಮುಂತಾದ ಸರಂಧ್ರ ವಸ್ತುಗಳನ್ನು ಅಂಟಿಸಲು ಬಳಸುತ್ತಾರೆ. ಗಾಜು ಮತ್ತು ಲೋಹಗಳನ್ನು ಅಂಟಿಸಲು ಉಪಯುಕ್ತವಾದುವಲ್ಲ. ಯೂರಿಯಾಗಳ ಗುಂಪಿನ ಪಾಲಿಯೂರಿಥೇನ್ ಗಳನ್ನು ಗಾಜು, ಲೋಹ, ಮತ್ತು ಸರಂಧ್ರ ವಸ್ತುಗಳನ್ನು ಅಂಟಿಸಲು ಬಳಸಬಹುದು. ಪಾಲಿ ಎಸ್ಟರ್ ರಾಳಗಳಿಂದ ಗಾಜಿನ ಎಳೆಗಳನ್ನು ಅಂಟಿಸಿ ಶಕ್ತಿಯುತ ಕಂಬಿಗಳನ್ನು, ಪಟ್ಟಿಗಳನ್ನು ತಯಾರಿಸಿ ದೋಣಿ ಹಾಗೂ ಕಾರಿನ ಭಾಗಗಳು ಮುಂತಾದುವುಗಳಿಗೆ ಉಪಯೋಗಿಸುತ್ತಾರೆ. ಇವು ಗಟ್ಟಿಯಾದಾಗ ಸಂಕುಚಿತವಾಗುವುದಿಲ್ಲ. ದ್ರಾವಣವೂ ಬೇಕಾಗಿಲ್ಲ. ಶಾಖ ಇದನ್ನು ಬೇಗನೆ ದೃಢವಾಗಿಸುತ್ತದೆ. ಸಿಲಿಕೋನುಗಳು ದೃಢವಾದಮೇಲೆ 280º ಸೆಲ್ಸಿಯಸಿಗಿಂತ ಹೆಚ್ಚು ಶಾಖವನ್ನು ತಡೆಯಬಲ್ಲುವು. ಅಲ್ಲದೆ ನೀರನ್ನು ನಿರೋಧಿಸುವ ಶಕ್ತಿಯೂಂಟು. ವಿದ್ಯುತ್ತು ಹರಿಯದಂತೆ ಮಾಡುವ ಅವಾಹಕ ಪಟ್ಟಿಗಳ ತಯಾರಿಕೆಗೆ, ಗಾಜಿನ ಎಳೆಗಳನ್ನು ಅಂಟಿಸಲು, ಎಲೆಕ್ಟ್ರಾನಿಕ್ಸ್ ಕೈಗಾರಿಕೆಯಲ್ಲಿ ಇವುಗಳ ಉಪಯೋಗ ಹೆಚ್ಚು. ಸಂಶ್ಲೇಷಿತ ರಬ್ಬರನ್ನು ಉಪಯೋಗಿಸಿ ಅಂಟಿಸಿದ ಒಂದು ವಸ್ತುವನ್ನು ಬಗ್ಗಿಸಿದರೂ ಅಂಟುಶಕ್ತಿ ಕುಂದುವುದಿಲ್ಲ. ಆದುದರಿಂದ ಅದನ್ನು ಫೆಲ್ಟು ಬಟ್ಟೆಯನ್ನು, ರಬ್ಬರ್ ಚರ್ಮಗಳನ್ನು ಅಂಟಿಸಲು ಬಳಸುತ್ತಾರೆ. ಎರಡನೆಯ ಗುಂಪಿಗೆ ಸೇರಿದ ವೀನೈಲ್ ರಾಳವನ್ನು ಗಾಜು, ಲೋಹಗಳನ್ನು ಅಂಟಿಸಲು ಬಳಸುತ್ತಾರೆ. ಹೆಚ್ಚು ಶಾಖದಲ್ಲಿ ಶಕ್ತಿಯನ್ನು ಕಳೆದುಕೊಂಡರೂ ಬಹುಬೇಗ ಗಟ್ಟಿಯಾಗುವ ಮತ್ತು ನೀರನ್ನು ನಿರೋಧಿಸುವ ಶಕ್ತಿಯಿರುವುದರಿಂದ ಇದನ್ನು ಕಾರಿನ ಕೈಗಾರಿಕೆಯಲ್ಲಿ ಸುರಕ್ಷಿತ ಗಾಜನ್ನು ತಯಾರಿಸಲು ಉಪಯೋಗಿಸುತ್ತಾರೆ. ಗೋಂದುಗಳ ಬದಲು ವೀನೈಲ್ ರಾಳ ಬಳಕೆಯಲ್ಲಿ ಬರುತ್ತಿದೆ. ಸೆಲ್ಯುಲೋಸ್ ಅಸಿಟೇಟ್ ಮತ್ತು ನೈಟ್ರೇಟುಗಳ ದ್ರಾವಣಗಳು ಬಹು ಬೇಗ ಗಟ್ಟಿಯಾಗುವುವು; ಅಲ್ಲದೆ ನೀರನ್ನು ನಿರೋಧಿಸುವ ಶಕ್ತಿ ಹೊಂದಿದ ಈ ಅಂಟುಗಳು ಮನೆಯ ಕೆಲಸಗಳಿಗೆ, ಮರ, ಕಾಗದಗಳನ್ನು ಅಂಟಿಸಲು ಯೋಗ್ಯವಾಗಿವೆ. ಅಕ್ರಿಲಿಕ್ ಅಂಟುಗಳಿಗೆ ಅಂಟುಶಕ್ತಿ ಕಡಿಮೆಯಾದರೂ ಅವು ಪಾರದರ್ಶಕವಾಗಿರುವುದರಿಂದ ಅವುಗಳಿಂದಲೂ ಉಪಯೋಗವುಂಟು. ಇದೇ ಗುಂಪಿಗೆ ಸೇರಿದ ಸಯನೊ ಅಕ್ರಿಲೇಟ್ ಎಂಬುದು ಬೇಗ ಗಟ್ಟಿಯಾಗುವ ಗುಣ ಹೊಂದಿರುವುದರಿಂದ ಅದನ್ನು ಗಾಜು ಮತ್ತು ಲೋಹಗಳನ್ನು ಅಂಟಿಸಲು ಉಪಯೋಗಿಸುತ್ತಾರೆ.