ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಡಮಾನಿ ಭಾಷೆ

ವಿಕಿಸೋರ್ಸ್ ಇಂದ
Jump to navigation Jump to search

ಅಂಡಮಾನಿ ಭಾಷೆ - ಅಂಡಮಾನ್ ದ್ವೀಪಗಳ ಆದಿವಾಸಿಗಳ ಭಾಷೆ. ಇದುವರೆಗೂ ಬೇರೆ ಭಾಷೆಯೊಂದಿಗೆ ಇದರ ಸಂಬಂಧವನ್ನು ಕಲ್ಪಿಸುವುದು ಸಾಧ್ಯವಾಗಿಲ್ಲ. ಅಂಡಮಾನಿ ಎನ್ನುವುದು ಕನಿಷ್ಠಪಕ್ಷ ಮೂರು ಭಾಷೆಗಳನ್ನೊಳಗೊಂಡಿರುವ ಗುಂಪು: 1. ಉತ್ತರದ ಭಾಷೆ ಅಥವಾ ಹಿರಿಯ ಅಂಡಮಾನಿ. 2. ಜಾರವ, ಇದು ಕೂಡ ಹಿರಿಯ ಅಂಡಮಾನಿನಲ್ಲೇ ವ್ಯವಹಾರದಲ್ಲಿದೆ. 3. ಓಂಗೆ, ಕಿರಿಯ ಅಂಡಮಾನಿನಲ್ಲಿ ಬಳಕೆಯಲ್ಲಿದೆ.

ಜಾರವ ಮತ್ತು ಓಂಗೆಗಳ ಪದಕೋಶದಲ್ಲಿ ಹತ್ತಿರದ ಸಂಬಂಧ ಕಂಡುಬಂದರೂ ಇವುಗಳ ಆಡುಗರು ಪರಸ್ಪರ ಅರ್ಥಮಾಡಿಕೊಳ್ಳುವುದಿಲ್ಲವೆಂದು ಹೇಳಲಾಗಿದೆ. ಈ ಭಾಷೆಗಳ ನ್ನಾಡುವ ಎರಡು ಪಂಗಡಗಳು ಮೂಲತಃ ಒಂದೇ ಆಗಿದ್ದುವೆಂದು ವಿದ್ವಾಂಸರ ಮತ.

ಅಂಡಮಾನಿಯಲ್ಲಿ ಪ್ರತ್ಯಯಗಳು ಹೆಚ್ಚು ಬಳಕೆಯಲ್ಲಿದ್ದು, ರಚನೆಯ ದೃಷ್ಟಿಯಿಂದ ಇದು ಸಂಯೋಜಕ ವರ್ಗಕ್ಕೆ (ಆಗ್ಲೂಟಿನೇಟಿಂಗ್) ಸೇರಿದ್ದೆಂದು ಗ್ರಿಯರ್ಸನ್ ಅಭಿಪ್ರಾಯ ಪಡುತ್ತಾನೆ. ಆದರೆ ಈ ರಚನೆಯ ಲಕ್ಷಣ ಇದೇ ವರ್ಗದ ಇತರ ಭಾಷೆಗಳಲ್ಲಿರುವಷ್ಟು ಸ್ಪಷ್ಟವಾಗಿಲ್ಲವೆಂದು ಅನಂತರದ ಸಂಶೋಧಕರು ತೋರಿಸಿಕೊಟ್ಟಿದ್ದಾರೆ.

ಮೂರ್ತವಿಚಾರಗಳ ಸಣ್ಣ ಸಣ್ಣ ವಿವರಗಳನ್ನು ಹೇಳಲು ಅಂಡಮಾನಿಯಲ್ಲಿ ಸಾಧ್ಯ. ಆದರೆ ಅಮೂರ್ತ ಭಾವನೆಗಳನ್ನು ವ್ಯಕ್ತಪಡಿಸುವ ಪದಗಳು ತುಂಬಾ ವಿರಳ. ವಿವಿಧ ಪ್ರಮಾಣಗಳನ್ನು (ಹೆಚ್ಚು ಕಡಿಮೆ ಇತ್ಯಾದಿ) ಸೂಚಿಸಬಹುದಾದರೂ ಸಂಖ್ಯೆಗಳ ಮೂಲಕ ಎಣಿಸಲು ಬರುವುದಿಲ್ಲ.