ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತಪಾಲರು
ಅಂತಪಾಲರು - ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉಲ್ಲೇಖಿತವಾಗಿರುವ ಆಡಳಿತಾಧಿ ಕಾರಿಗಳು. ಮೌರ್ಯ ಸಾಮ್ರಾಜ್ಯವನ್ನು ಆಡಳಿತದ ಅನುಕೂಲದೃಷ್ಟಿಯಿಂದ ಅನೇಕ ಭಾಗಗಳನ್ನಾಗಿ ವಿಂಗಡಿಸಲಾಗಿತ್ತು. ಒಂದು ಆಡಳಿತದ ವಿಭಾಗದಲ್ಲಿ ಅಂತಪಾಲರು ತಮ್ಮ ಕಾರ್ಯಭಾರವನ್ನು ನಿರ್ವಹಿಸುತ್ತಿದ್ದರು. ಸಾಮಾನ್ಯವಾಗಿ ಗಡಿ ಪ್ರದೇಶಗಳು ಇವರ ಆಡಳಿತ ಕ್ಷೇತ್ರಗಳು. ಪ್ರತಿಯೊಂದು ಗಡಿ ಪ್ರದೇಶದಲ್ಲೂ ಒಂದೊಂದು ಮಿಲಿಟರಿ ಠಾಣ್ಯವಿರುತ್ತಿತ್ತು. ಪ್ರಾಂತಾಧಿಕಾರಿಗೆ ಇವರೆಲ್ಲರೂ ಹೊಣೆಗಾರರಾಗಿದ್ದುದರಿಂದ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಂದಾಯ ವಸೂಲಿ ಮಾಡುವುದು ಇವರ ಮುಖ್ಯ ಕೆಲಸಗಳಲ್ಲೊಂದಾಗಿತ್ತೆಂದು ತೋರುತ್ತದೆ. ಈ ವಿಷಯ ಅರ್ಥಶಾಸ್ತ್ರ ಗ್ರಂಥದ ಜನಪದನಿವೇಶ ಎಂಬ ಅಧ್ಯಾಯದಲ್ಲಿ ಬರುತ್ತದೆ. ಇಲ್ಲಿ ಹಳ್ಳಿಗಳ ರಚನೆಯ ಬಗ್ಗೆ ವಿವರಣೆ ಇದೆ. ಜನಗಳಿಂದ ಕಂದಾಯವನ್ನು ವಸೂಲಿ ಮಾಡಿ ಅದನ್ನು ರಾಜ್ಯದ ಬೊಕ್ಕಸಕ್ಕೆ ಕಳುಹಿಸುವ ಜವಾಬ್ದಾರಿ ಇವರದಾಗಿತ್ತು. ಗ್ರಾಮಾಂತರ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಸ್ಥಾಪಿಸುವ ಅಧಿಕಾರವನ್ನು ಕೇಂದ್ರಸರ್ಕಾರ ಇವರಿಗೆ ವಹಿಸಿಕೊಟ್ಟಿತ್ತು. ಅಂದರೆ ಜನಗಳಿಗೆ ಕಳ್ಳಕಾಕರಿಂದ ಯಾವ ತೊಂದರೆಯೂ ಬರದಂತೆ ನೋಡಿಕೊಳ್ಳುವುದು ಇವರ ಕರ್ತವ್ಯವಾಗಿತ್ತು. ರಾಜ್ಯ ಗಡಿದ್ವಾರಗಳಲ್ಲಿ ಇವರು ಇರುತ್ತಿದ್ದುದರಿಂದ ರಾಜ್ಯಕ್ಕೆ ಹೊರಗಿನ ಶತ್ರುಗಳಿಂದ ಯಾವ ಅಪಾಯವೂ ಬರದಂತೆ ನೋಡಿಕೊಳ್ಳುವುದು ಇವರ ಇನ್ನೊಂದು ಮುಖ್ಯ ಕರ್ತವ್ಯವಾಗಿತ್ತು. ಒಟ್ಟಿನಲ್ಲಿ ಇವರು ಪೊಲೀಸ್ ಮತ್ತು ರೆವಿನ್ಯೂ ಕಾರ್ಯಗಳೆರಡನ್ನೂ ನಿರ್ವಹಿಸುತ್ತಿದ್ದರು. ದೇಶದ ಆರ್ಥಿಕಾಭಿವೃದ್ಧಿ ವ್ಯಾಪಾರ ವಾಣಿಜ್ಯಗಳನ್ನು ಅವಲಂಬಿಸಿದ್ದುದರಿಂದ ಕೌಟಿಲ್ಯನು ಪಾಶ್ಚಾತ್ಯ ವಾಣಿಜ್ಯೋದ್ಯಮಗಳನ್ನು ದೇಶದಲ್ಲಿ ನೆಲೆಸುವಂತೆ ಪ್ರೋತ್ಸಾಹಿಸುತ್ತಿದ್ದನು. ಈ ವ್ಯಾಪಾರಿಗಳು ದೇಶದ ಮೂಲೆ ಮೂಲೆಗಳಲ್ಲಿ ಯಾವ ನಿರ್ಬಂಧವಿಲ್ಲದೆ ಸಂಚರಿಸಬಹುದಾಗಿತ್ತು. ಅಂತಪಾಲರು ಅವರಿಂದ ಮಾರ್ಗ ಸುಂಕವನ್ನು ವಸೂಲಿ ಮಾಡುವುದರಲ್ಲಿ ಅವರ ಸರಕುಗಳು ಹಾಳಾಗದಂತೆ ಎಚ್ಚರ ವಹಿಸಬೇಕಾಗಿತ್ತು. ಹೀಗೆ ಅಂತಪಾಲರು ಅನೇಕ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು.