ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರಕೋನಮಾಪಕ

ವಿಕಿಸೋರ್ಸ್ ಇಂದ
Jump to navigation Jump to search

ಅಂತರಕೋನಮಾಪಕ : ದೂರದ ವಸ್ತುಗಳೆರಡರ ಲಂಬ ಹಾಗೂ ಕ್ಷಿತಿಜೀಯ ಕೋನಾಂತರಗಳನ್ನು ಅಳೆಯಲು ಮೋಜಣಿಯಲ್ಲಿ ಉಪಯೋಗಿಸುವ ಒಂದು ಉಪಕರಣ, ಭೂನಕ್ಷೆ ತಯಾರಿಕೆಯಲ್ಲಿ ತುಂಬ ಸಹಾಯಕವಾಗಿದೆ. ಈ ಉಪಕರಣದಲ್ಲಿ (ಚಿತ್ರದಲ್ಲಿ ತೋರಿಸಿರುವಂತೆ) ಪರಸ್ಪರ ಲಂಬವಾಗಿ ಎರಡು ವರ್ತುಳ ಅಳತೆಪಟ್ಟಿಗಳೂ ಊಧ್ರ್ವ ಮತ್ತು ಸಮತಲಗಳಲ್ಲಿ ಕೋನದ ಅಳತೆಗೆ ಸಹಾಯವಾಗುವಂತೆ ವರ್ತುಳಪಟ್ಟಿಗಳ ಕೇಂದ್ರ ನೇರದಲ್ಲೇ ತಿರುಗುವ ಒಂದು ದೂರ ದರ್ಶಕವೂ ಇವೆ. ಕೋನಗಳ ನಿಖರ ಅಳತೆಗೆ ಸಹಾಯವಾಗಲು ಪ್ರತಿ ವರ್ತುಳ ಪಟ್ಟಿಗಳಲ್ಲಿ ಎರಡು ಅಥವಾ ಹೆಚ್ಚು ವರ್ನಿಯರ್ ಪಟ್ಟಿಗಳಿರುವುವು. ಇವೆಲ್ಲವುಗಳನ್ನು ಮಟ್ಟ ತಿರುಪುಗಳ ಆಧಾರದ ಮೇಲೆ ನಿಂತಿರುವ ಭದ್ರವಾದ ಪೀಠದ ಮೇಲೆ ಅಳವಡಿಸಿದೆ.ಅಂತರಕೋನಮಾಪಕಗಳನ್ನು ಊಧ್ರ್ವತಲದ ಕೋನಗಳಿಗಿಂತ ಕ್ಷಿತಿಜೀಯ ಕೋನಗಳನ್ನು ಹೆಚ್ಚು ನಿಖರವಾಗಿ ಅಳತೆ ಮಾಡುವಂತೆ ರಚಿಸುವರು; ಏಕೆಂದರೆ ಭೂಮಿಯ ಅಳತೆಯಲ್ಲಿ ಕ್ಷಿತಿಜೀಯ ಕೋನಗಳೇ ಪ್ರಾಮುಖ್ಯ. ಊಧ್ರ್ವತಲದಲ್ಲಿ ಅಳತೆ ಮಾಡಿದ ಕೋನಗಳು ಭೂಮಿಯ ವಾತಾವರಣದಿಂದುಂಟಾಗುವ ಬೆಳಕಿನ ವಕ್ರೀಭವನದಿಂದ ಅಷ್ಟು ನಿಖರವಾಗಿರುವುದಿಲ್ಲ. ಆದ್ದರಿಂದ ದೂರದಲ್ಲಿರುವ ಭೂಮಿಯ ಮೇಲಿನ ವಸ್ತುಗಳ ಎತ್ತರ ಅಳತೆ ಮಾಡಲು ಅಂತರಕೋನಮಾಪಕ ಅಷ್ಟು ಉಪಯೋಗಕಾರಿಯಲ್ಲ. ಈ ಮಾಪಕವನ್ನುಪಯೋಗಿಸಿ ಭೂಮಿಯಮೇಲಿನ ವಸ್ತುಗಳೆರಡರ ಎತ್ತರ ಸಮತಲದಲ್ಲಿ ಅವುಗಳ ನಡುವಣ ಕೋನವನ್ನು ನಿಖರವಾಗಿ ಅಳತೆ ಮಾಡಬಹುದು. ಅಂತರಕೋನಮಾಪಕಗಳನ್ನು ರಾತ್ರಿ ವೇಳೆಯೂ ದೂರದ ಸ್ಥಳಗಳಿಂದ ಕಳುಹಿಸಿದ ಬೆಳಕಿನ ಕಿರಣಗಳ ನೇರಕ್ಕೆ ಅಳವಡಿಸಿ ಆ ಸ್ಥಳಗಳಿಗಿರುವ ಕೋನಾಂತರವನ್ನು ಕಂಡುಹಿಡಿಯಬಹುದು.ಇದನ್ನು ಇಂಗ್ಲಿಷ್ ಭಾಷೆಯಲ್ಲಿ ಥಿಯೋಡೊಲೈಟ್ ಎಂದು ಕರೆಯುವರು. ಈ ಪದೋತ್ಪತ್ತಿ ಭಾಷಾಶಬ್ದ ಶಾಸ್ತ್ರಜ್ಞರಿಗೇ ವಿಸ್ಮಯಕಾರಕ. ನೋಡುವುದು, ದಾರಿ, ನಯ ಮುಂತಾದ ಪದಗಳಿಗಿರುವ ಗ್ರೀಕ್ ಪರ್ಯಾಯ ಪದಗಳಿಂದ ಈ ಹೆಸರು ಉತ್ಪತ್ತಿಯಾಗಿದೆಯೆಂದು ಕೆಲವರೂ, ಓಡುವುದು, ದೂರ ಮುಂತಾದ ಪದಗಳಿಗಿರುವ ಗ್ರೀಕ್ ಪರ್ಯಾಯ ಪದಗಳಿಂದ ಈ ಹೆಸರು ಉತ್ಪತ್ತಿಯಾಗಿದೆಯೆಂದು ಮತ್ತೆ ಕೆಲವರೂ ವಾದಿಸುವರು. ಹಾಗೆಯೇ ಇನ್ನೂ ಅನೇಕ ವಿಚಿತ್ರ ವಿವರಣೆಗಳಿವೆ. ತಿಯೊಡಲಸ್ ಎಂಬ ಗಣಿತ ಶಾಸ್ತ್ರಜ್ಞನು ಬರೆದಿರುವ ಒ.ಎಫ್.ಆರ್ ಥಿಯೊಡೊಲೈಟ್ ಅಥವಾ ಥಿಯೊಡೆಲೆಟ್ ಎಂಬ ಗ್ರಂಥದಿಂದ ಉದ್ಭವವಾಗಿರಬಹುದೆಂದು ಕೆಲವರ ಅಭಿಪ್ರಾಯ.(ಪಿ.ವಿ.)