ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರಗಂಗೆ 2

ವಿಕಿಸೋರ್ಸ್ ಇಂದ
Jump to navigation Jump to search

ಅಂತರಗಂಗೆ 2: ಸಾಮಾನ್ಯವಾಗಿ ಅಂತರಗಂಗೆ ಎಂಬ ಹೆಸರು ಎರಡು ಕುಟುಂಬಗಳಿಗೆ ಸೇರಿದ ಕೆಲವು ಜಾತಿಯ ಗಿಡಗಳಿಗೆ ಅನ್ವಯವಾಗುತ್ತದೆ. ಇವುಗಳಲ್ಲೊಂದಾದ ಲೆಮ್ನೇಸೀ ಕುಟುಂಬಕ್ಕೆ ಸೇರಿದ ಲೆಮ್ನ ಮತ್ತು ವುಲ್ಫಿಯಾ ಎಂಬೆರಡು ಜಾತಿಯ ಗಿಡಗಳು ಉಷ್ಣ ಮತ್ತು ಸಮಶೀತೋಷ್ಣವಲಯಗಳಲ್ಲೂ ಸ್ಟೈರೊಡಿಲ ಮತ್ತು ವುಲ್‍ಫಿûಯ ಎಂಬೆರಡು ಜಾತಿಯ ಗಿಡಗಳು ಸಮಶೀತೋಷ್ಣ ವಲಯದಲ್ಲೂ ಬೆಳೆಯುವುವು.ಇವು ಬೀಜಧಾರಿ ಸಸ್ಯಗಳಲ್ಲಿ ಅತ್ಯಂತ ಸಣ್ಣ ಗಿಡಗಳೆಂದು ಹೆಸರಾಗಿವೆ. ಅದರ ಉದ್ದ 5-15 ಮಿ.ಮೀ; ಅಗಲ 4-10 ಮಿ.ಮೀ ಈ ಗಿಡಗಳು ನೀರಿನ ಮೇಲೆ ತೇಲುತ್ತಾ ಅನೇಕ ವರ್ಷಕಾಲ ಬೆಳೆಯುವುವು. ಇವುಗಳಲ್ಲಿ ಇತರ ಗಿಡಗಳಂತೆ ಕಾಂಡ ಬೇರು ಮತ್ತು ಎಲೆಗಳೆಂಬ ಭಾಗಗಳು ಇರುವುದಿಲ್ಲ. ಇಡೀ ಲೆಮ್ನ ಗಿಡವು ಕಡಲೇಬೇಳೆಯಷ್ಟು ಅಗಲವಾದ ಹಸಿರು ತಟ್ಟೆಯೋಪಾದಿಯಲ್ಲಿರುವುದು. ಇದೇ ಗಿಡದ ಕಾಂಡ. ಇದರ ಕೆಳಭಾಗದಿಂದ ಒಂದು ಉದ್ದವಾದ ಬೇರು (ಅಡ್ವೆಂಟಿಷಸ್ ರೂಟ್) ಹೊರಟು ಜೋಲಾಡುವುದು. ಈ ಬೇರಿನ ತುದಿಯಲ್ಲಿ ಚೆನ್ನಾಗಿ ಬೆಳೆದಿರುವ ಕುಲಾವಿ ಇರುವುದು. ಕಾಂಡ ಹಸಿರು ಬಣ್ಣದಿಂದ ಕೂಡಿರುವುದರಿಂದಲೂ ಎಲೆಗಳು ಇಲ್ಲದಿರುವುದರಿಂದಲೂ ಕಾಂಡವೇ ಎಲೆಗಳ ಕೆಲಸವನ್ನು ವಹಿಸಿಕೊಂಡಿರುವುದು. ಸಾವಿರಾರು ಸಣ್ಣಸಣ್ಣ ಗಿಡಗಳು ನೀರಿನಮೇಲೆ ತೇಲುತ್ತಿರುವಾಗ ಒಂದಕ್ಕೊಂದು ಸೇರಿಕೊಂಡು ಬೆಳೆಯುವುದು ಸ್ವಾಭಾವಿಕ. ಕಾಂಡದ ಹಿಂಭಾಗದ ತುದಿಯಲ್ಲಿ ಒಂದು ಸಣ್ಣ ಸಂದಿ ಇರುವುದು. ಈ ಸಂದಿಯಿಂದ 1-3 ರೆಂಬೆಗಳು ಹೊರಟು ಬೆಳೆಯುವುವು. ಈ ರೆಂಬೆಗಳು ತಾಯಿಕಾಂಡದಂತೆ ಇದ್ದು ಅದರ ಸಂಗಡವೇ ಇರಬಹುದು. ಅಥವಾ ಅದರಿಂದ ಬೇರ್ಪಟ್ಟು ಸ್ವತಂತ್ರವಾಗಿ ಬೆಳೆಯಬಹುದು. ಹೀಗೆ ಅನೇಕ ಹೊಸ ಗಿಡಗಳು ಉತ್ಪತ್ತಿಯಾಗಿ, ಬೆಳೆದು, ಇರುವ ಸ್ಥಳವನ್ನೆಲ್ಲ ಆಕ್ರಮಿಸಿಕೊಳ್ಳುವುವು. ಹಳೆಯ ಕಾಂಡ ಮುಳುಗಿ ನೀರಿನ ಅಡಿಯನ್ನು ಸೇರಿ ಕ್ರಮೇಣ ನಾಶವಾಗುವುದು. ರೆಂಬೆಗಳಲ್ಲಿ ಕೆಲವು ನೀರಿನೊಳಗೆ ಮುಳುಗಿದ್ದು ಚಳಿಗಾಲ ಕಳೆದ ಅನಂತರ ಮೇಲೆ ತೇಲಿಬಂದು ಹೊಸ ಗಿಡಗಳಾಗಿ ಪರಿಣಮಿಸುತ್ತವೆ.ವುಲ್‍ಫಿಯಾ ಗಿಡ ಲೆಮ್ನ ಗಿಡಕ್ಕಿಂತ ಸಣ್ಣದು. ಇದಕ್ಕೆ ಬೇರು ಕೂಡ ಇರುವುದಿಲ್ಲ. ಮೊಟ್ಟೆಯಾಕಾರದ ಈ ಸಣ್ಣ ಗಿಡ ಹಸಿರು ಬಣ್ಣದಿಂದ ಕೂಡಿ, ಎಲೆಯ ಕಾರ್ಯವನ್ನೂ ಮಾಡುವುದು. ಲೆಮ್ನ ಗಿಡದಂತೆ ರೆಂಬೆಗಳು ಬೆಳೆದು, ಬೇರ್ಪಟ್ಟು ಹೊಸ ಗಿಡಗಳು ಹೆಚ್ಚುವುವು. ಅದರಲ್ಲಿರುವಂತೆಯೇ ಹೂವು ಮತ್ತು ಅದರ ಭಾಗಗಳೂ ಇರುವುವು.ಈ ಕುಟುಂಬಕ್ಕೆ ಸೇರಿದ ಎಲ್ಲ ಗಿಡಗಳ ಹೂವು ಮತ್ತು ಹೂಗೊಂಚಲುಗಳು ತುಂಬ ಸಣ್ಣಗಿರುವುವು. ಮೇಲೆ ಹೇಳಿದಂತೆ ಕಾಂಡದ ಸಂದಿಯಲ್ಲಿ ಹೂಗೊಂಚಲು ಬಿಡುವುದು. ಪ್ರತಿ ಗೊಂಚಲಿನಲ್ಲಿಯೂ ಎರಡೇ ಎರಡು ಗಂಡು ಹೂಗಳೂ ಒಂದು ಹೆಣ್ಣು ಹೂವೂ ಇರುತ್ತವೆ. ಇವೆಲ್ಲ ಒಂದು ತಾಳಗುಚ್ಚದ ಉಪಪತ್ರದಿಂದ ಆವೃತವಾಗಿರುವುವು. ಗಂಡು ಹೂವಿನಲ್ಲಿ ಒಂದೇ ಒಂದು ಪರಾಗ ಕೇಸರವೂ ಹೆಣ್ಣು ಹೂವಿನಲ್ಲಿ ಒಂದೇ ಒಂದು ಅಂಡಕೋಶವೂ ಇರುವುವು. ಅಂಡಕೋಶ ಒಂದೇ ಒಂದು ಅಂಡಾಶಯವನ್ನು ಬೆಳೆಸಿ ಅದರಲ್ಲಿ 1-6 ಬೀಜಾಂಡಗಳನ್ನು ಪೋಷಿಸುವುದು. ಈ ವಿಧವಾದ ಹೂಗೊಂಚಲಿಗೆ ತಾಳಗುಚ್ಛ ಅಥವಾ ಸ್ಥೂಲಮಂಜರಿ ಎಂದು ಹೆಸರು.ಈ ಕುಟುಂಬಕ್ಕೂ ಕೆಸುವಿನ ದಂಟು ಅಥವಾ ಸುವರ್ಣಗೆಡ್ಡೆ ಗಿಡಗಳ ಕುಟುಂಬಕ್ಕೂ ತೀರ ಹತ್ತಿರದ ಸಂಬಂಧ ಉಂಟು. ಇಂಗ್ಲೀಷ್ ಆಡುಮಾತಿನಲ್ಲಿ ಈ ಕುಟುಂಬದ ಗಿಡಗಳನ್ನು ಡಕ್‍ವೀಡ್ ಎಂದು ಕರೆಯುತ್ತಾರೆ. ಈ ಗಿಡಗಳು ಹರಿಯವ ನೀರಿನಲ್ಲಿ ಬೆಳೆಯುವುದಿಲ್ಲ. ಸಾಧಾರಣವಾಗಿ ಕೆರೆ ಕುಂಟೆ ಮತ್ತು ಹಳ್ಳಗಳಲ್ಲಿ ಬೆಳೆಯುತ್ತವೆ.ಲೆಮ್ನ ಗಿಡದ ಕೋಶಗಳ ನಡುವಣ ಸಂದುಗಳಲ್ಲಿ ಸೇರಿಕೊಂಡು ಕ್ಲೋರೊಕೈಟ್ರಿಯಮ್ ಲೆಮ್ನಿ ಎಂಬ ಹೆಸರಿನ ಏಕಕೋಶಿ ಶೈವಾಲವು ವಾಸಮಾಡುತ್ತ ತನ್ನ ಜೀವನವನ್ನು ಸಾಗಿಸುತ್ತದೆ. ಈ ಶೈವಾಲ ಹರಿತ್ತಿನಿಂದ ಕೂಡಿರುವುದರಿಂದ ಆಹಾರವನ್ನು ತಾನೇ ತಯಾರಿಸುತ್ತದೆ: ಆಶ್ರಯದಾತ ಸಸ್ಯದಿಂದ ವಸತಿ ಹೊರತಾಗಿ ಇನ್ನಾವ ಪ್ರಯೋಜನವನ್ನು ಪಡೆಯುವುದಿಲ್ಲ; ಆದ್ದರಿಂದ ಈ ಸಂಬಂಧ ಪರತಂತ್ರ ಅಥವಾ ಪರಾವಲಂಬಿ ಜೀವನ ಎನಿಸುವುದಿಲ್ಲ. ಅದು ಒಂದು ರೀತಿಯ ಸಹಜೀವನ ಮಾತ್ರ.(ಎಲ್.ಎನ್.ಆರ್.; ಕೆ.ಬಿ.ಸದಾನಂದ)