ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರಜಾಲ

ವಿಕಿಸೋರ್ಸ್ದಿಂದ

ಅಂತರಜಾಲ

ಅಂತರಜಾಲ ಎಂದರೆ ತುಂಬ ಸರಳವಾಗಿ ಪರಸ್ಪರ ಸಂಪರ್ಕ ಸಾಧ್ಯತೆಯನ್ನು ಇರಿಸಿಕೊಂಡಿರುವ ಗಣಕ ಜಾಲಬಂಧಗಳ ಸಮೂಹ ಎಂದು ಹೇಳಬಹುದಾಗಿದೆ. ಅಂತರಜಾಲ ಇಂದು ವ್ಯಾಪಕವಾಗಿ ಬೆಳೆದು ನಿಂತು ಕ್ರಾಂತಿ ಸದೃಶ ಪರಿಣಾಮವನ್ನು ನಮ್ಮ ಜೀವನದಲ್ಲಿ ತಂದಿದೆ. ಇಂದು ಅಂತರಜಾಲದ ಸಹಾಯ ಪಡೆಯದ ಕ್ಷೇತ್ರವಿಲ್ಲ. ಗಣಕ ತಂತ್ರಜ್ಞಾನ ಮಾಹಿತಿ ತಂತ್ರಜ್ಞಾನ ಎಂದು ನಾಮಕರಣಗೊಂಡದ್ದು ಅಂತರಜಾಲದಿಂದಾಗಿಯೇ. ಇದರ ಅನ್ವಯಗಳು ಅಪರಿಮಿತ. ಬಸ್ಸು ರೈಲು ವಿಮಾನಗಳ ಟಿಕೆಟ್ಟು ಖರೀದಿ, ದಿನಪತ್ರಿಕೆಗಳನ್ನು ಓದುವುದು ಮುಂತಾದವುಗಳಿಂದ ಹಿಡಿದು, ಪರಿಣತ ವೈದ್ಯರು ಸಹಸ್ರಾರು ಕಿಲೋಮೀಟರುಗಳಷ್ಟು ದೂರದಲ್ಲಿರುವ ರೋಗಿಯೊಬ್ಬನ ಶಸ್ತ್ರಚಿಕಿತ್ಸೆ ಮಾಡುವ ತನಕ ಸಾವಿರಾರು ನಿದರ್ಶನಗಳನ್ನು ನೀಡಬಹುದು. ಮಾನವ ಸಮಾಜದ ಮೇಲೆ ಬಹುಶಃ ಇದರಷ್ಟು ವ್ಯಾಪಕ ಪರಿಣಾಮ ಬೀರಿದ ಸಂಗತಿ ಬಹು ಅಪರೂಪದ್ದೆಂದು ಧೈರ್ಯವಾಗಿ ಹೇಳಬಹುದು.

 ಅಂತರಜಾಲದ ಇತಿಹಾಸ ಕೂಡ ತುಂಬ ರೋಚಕವಾಗಿದೆ. ಅಂತರಜಾಲದ ಕಲ್ಪನೆ ಕೂಡ ಇಲ್ಲದ 1962ರ ಸಮಯದಲ್ಲಿ ಅಮೆರಿಕದ ರಕ್ಷಣಾ ಪಡೆಯ ಕೆಲವು ವಿಜ್ಞಾನಿಗಳು ಈ ಅದ್ಭುತ ವ್ಯವಸ್ಥೆಗೆ ಬೀಜ ಬಿತ್ತಿದರು. ಗಣಕಗಳು ಆಗಿನ್ನೂ ತುಂಬ ಅಪರೂಪದ ವಸ್ತುಗಳಾಗಿದ್ದವು. ಗಣಕಗಳ ಸಾಮಥ್ರ್ಯ ಕೂಡ ಹೆಚ್ಚಿರಲಿಲ್ಲ. ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಭಾಗವಾದ ಉನ್ನತ ಸಂಶೋಧನ ಪರಿಯೋಜನಾ ಏಜನ್ಸಿಯ (ಅಡ್ವಾನ್ಸ್‍ಡ್ ರಿಸರ್ಚ್ ಪ್ರಾಜೆಕ್ಟ್ ಏಜನ್ಸಿ) ಜೆ ಸಿ ಆರ್ ಲಿಕ್ಲಿಡರ್ ಮೊತ್ತ ಮೊದಲಿಗೆ ಸಂಶೋಧಕರ ಅಂತರ ಗ್ಯಾಲಾಕ್ಟಿಕ್ ಜಾಲಬಂಧದ ಕಲ್ಪನೆಯನ್ನು ಟಿಪ್ಪಣಿಗಳ ರೂಪದಲ್ಲಿ ಮಂಡಿಸಿದ. 1964ರಲ್ಲಿ ಮೊತ್ತಮೊದಲಿಗೆ ದತ್ತಾಂಶವನ್ನು ವಿದ್ಯುನ್ಮಂಡಲಗಳ ಬದಲಿಗೆ ಪ್ರತ್ಯೇಕ ದತ್ತಕಟ್ಟುಗಳಾಗಿ ರವಾನಿಸುವ ತಂತ್ರಜ್ಞಾನ ರೂಪುಗೊಂಡಿತು. ಈ ದಿಕ್ಕಿನಲ್ಲಿ ಅಮೆರಿಕದ ಎಂಐಟಿ, ರ್ಯಾಂಡ್ ಕಾರ್ಪೊರೇಷನ್ ಮತ್ತು ಲಂಡನ್ನಿನ ರಾಷ್ಟ್ರೀಯ ಭೌತವಿಜ್ಞಾನ ಪ್ರಯೋಗಾಲಯ (ಎನ್ ಪಿ ಎಲ್)ಗಳಲ್ಲಿ ಸಮಾನಾಂತರವಾಗಿ ಸಂಶೋಧನೆಗಳು ನಡೆದವು. ಈ ವೇಳೆಗೆ ಗಣಕಗಳ ಮಾದರಿ, ಸಾಮಥ್ರ್ಯಗಳಲ್ಲೂ ಹೆಚ್ಚಿನ ಮಟ್ಟದ ಸುಧಾರಣೆ ಗೋಚರಿಸತೊಡಗಿತ್ತು. 1965ರಲ್ಲಿ ಎ ಆರ್ ಪಿ ಎ ಸಂಸ್ಥೆಯಲ್ಲಿ ಟಿಎಕ್ಸ್ -2 ಮತ್ತು ಕ್ಯು-32 ಎಂಬ ಗಣಕಗಳ ನಡುವೆ ಸಂಪರ್ಕ ಸಾಧ್ಯವಾಯಿತು. ಇದೇ ಸಂಸ್ಥೆಯ ಲಾರಿ ರಾಬಟ್ರ್ಸ್ ಮತ್ತು ಲಂಢನ್ನಿನ ಎನ್ ಪಿ ಎಲ್ ಸಂಸ್ಥೆಯ ಡೊನಾಲ್ಡ್ ಡೇವಿಸ್ 1966ರಲ್ಲಿ ಸಮಾನಾಂತರವಾಗಿ ದೂರವಾಣಿ ತಂತಿಗಳ ಮೂಲಕ ಗಣಕಗಳನ್ನು ಒಂದು ಜಾಲವಾಗಿ ಹೆಣೆದು ವಿಶಾಲ ಜಾಲಬಂಧಗಳ ನಿರ್ಮಾಣಕ್ಕೆ ಯೋಜನೆಗಳನ್ನು ರೂಪಿಸಿದರು.

 1990ರ ಕಡೆಗೆ (ಎಆರ್‍ಪಿಎ) ಆರ್ಪಾದಲ್ಲಿ ನಾಲ್ಕು ಗಣಕಗಳನ್ನು ಒಂದು ಜಾಲಬಂಧದಲ್ಲಿ ಸೇರಿಸಲಾಯಿತು ಹಾಗೂ ಇದನ್ನು ಆರ್ಪಾನೆಟ್ ಎಂದು ಕರೆಯಲಾಯಿತು. ಇದು ಅಂತರಜಾಲದ ಮೊದಲ ಅವತಾರವಾಯಿತು. ನಂತರ ಐತಿಹಾಸಿಕ ಬೆಳವಣಿಗೆ ಮಾತ್ರ. 1972ರಲ್ಲಿ ಅಂತರಜಾಲದ ಮೊದಲ ಪ್ರಮುಖ ಅನ್ವಯವಾಗಿ ವಿ-ಅಂಚೆ ರೂಪುಗೊಂಡಿತು. (ನೋಡಿ ವಿ=ಅಂಚೆ) ರೇ ಟಾಮ್ಲಿನ್‍ಸನ್ 1972ರ ಮಾರ್ಚ್‍ನಲ್ಲಿ ಅಂಚೆಯನ್ನು ಕಳಿಸಲು ಮತ್ತು ಅದನ್ನು ಸ್ವೀಕರಿಸಿದೆಡೆಯಲ್ಲಿ ಓದಲು ಅಗತ್ಯವಾದ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿದರು. ಇದು ಮುಂದೆ ಬೃಹದಾಕಾರವಾಗಿ ಬೆಳೆಯಿತು.

 ಇಲ್ಲಿಯವರೆಗೆ ಸ್ಥಳೀಯವಾಗಿದ್ದ ಜಾಲವನ್ನು ಮುಕ್ತವಾಗಿಸಿ ಬೇರೆ ಬೇರೆ ಗಣಕ ಜಾಲಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಕೆಲವು ಶಿಷ್ಟತೆಗಳನ್ನು ನಿಗದಿಗೊಳಿಸಲಾಯಿತು. (ಟ್ರಾನ್ಸ್‍ಮಿಷನ್ ಕಂಟ್ರೋಲ್ ಪ್ರೊಟೊಕಾಲ್) ಪ್ರಸರಣ ನಿಯಂತ್ರಣ ಶಿಷ್ಟತೆ ಹಾಗೂ (ಇಂಟರ್‍ನೆಟ್ ಟ್ರಾನ್ಸ್‍ಮಿಷನ್ ಪ್ರೊಟೊಕಾಲ್) ಅಂತರಜಾಲ ಶಿಷ್ಟತೆಗಳು ರೂಪುಗೊಂಡವು.

 ಅಂತರಜಾಲದ ಗಣಕಗಳಿಗೆ ಅಂಕಿರೂಪದ ವಿಳಾಸಗಳಿದ್ದವು. 1984ರಲ್ಲಿ ಹೆಸರಿನಿಂದಲೇ ಗುರುತಿಸುವ ವ್ಯವಸ್ಥೆ ರೂಪಿಸಲಾಯಿತು. (ಆದರೆ ಮೂಲದಲ್ಲಿ ಅಂಕಿರೂಪದ ವಿಳಾಸಗಳೇ ಈಗಲೂ ಇರುತ್ತವೆ.) ಈ ವ್ಯವಸ್ಥೆಯೇ ಪ್ರದೇಶನಾಮಪದ್ಧತಿ (ಡೊಮೈನ್ ನೇಮ್ ಸಿಸ್ಟಮ್). ಇಷ್ಟೆಲ್ಲ ಬೆಳವಣಿಗೆಗಳಾದರೂ ಅಂತರಜಾಲ ಇನ್ನೂ ಅಪಾಯದಲ್ಲಿಯೇ ಇದ್ದಿತು.

 1983ರಲ್ಲಿ ಆರ್ಪಾದಿಂದ ಅಂತರಜಾಲವನ್ನು ಪ್ರತ್ಯೇಕಿಸಿ ಅದರ ನಿರ್ವಹಣೆಗಾಗಿ ಒಂದು ಅಂತರಜಾಲ ಕ್ರಿಯಾ ಮಂಡಳಿಯನ್ನು ರಚಿಸಲಾಯಿತು. ಅನಂತರ ಕೆಲವು ಬೆಳವಣಿಗೆಗಳು ಜರುಗಿ ಈ ಮಂಡಳಿ ಹೋಗಿ ಅಂತರಜಾಲ ಸಂಘ (ಇಂಟರ್ನೆಟ್ ಸೊಸೈಟಿ) 1992ರಲ್ಲಿ ಅಸ್ತಿತ್ವಕ್ಕೆ ಬಂದಿತು.

 ಟಿಮ್ ಬರ್ನ್‍ಲಿ ವಿಶ್ವವ್ಯಾಪಿ ಬಲೆ (ವಲ್ಡ್‍ವೈಡ್ ವೆಬ್)ಯನ್ನು 1991ರಲ್ಲಿ ಆವಿಷ್ಕರಿಸಿದ ಮೇಲೆ ಅಂತರಜಾಲ ವಿರಾಟ್ ಸ್ವರೂಪ ಪಡೆಯಲಾರಂಭಿಸಿತು. ಜೂನ್ 2005ರ ವೇಳೆಗೆ ಮುನ್ನೂರೈವತ್ತು ಮಿಲಿಯನ್‍ಗೂ ಮೀರಿ ಗಣಕಜಾಲಗಳು ಅಂತರಜಾಲದಲ್ಲಿದ್ದವು ಎಂದರೆ ಅವರ ಅಗಾಧ ಬೆಳವಣಿಗೆಯನ್ನು ಊಹಿಸಿಕೊಳ್ಳಬಹುದು.

 ಅಂತರಜಾಲದ ನಿರ್ವಹಣೆಯಲ್ಲಿ ಮುಖ್ಯವಾಗಿ ಕೆಲವು ನೆಲೆಗಳಿವೆ. ಯಾವುದೇ ಅಂತರಜಾಲದ ಕಾರ್ಯ ನಿರ್ವಹಣೆ ಯಾವುದೇ ಗಣಕದಲ್ಲಿರುವ ವ್ಯವಸ್ಥೆಯಿಂದ ಮುಕ್ತವಾಗಿರಬೇಕು. ಅಂತರಜಾಲದ ಯಾವುದೇ ಗಣಕ ಜಾಲ ಸಕ್ರಿಯವಾಗಿರುವುದು ಅಥವಾ ನಿಷ್ಕ್ರಿಯವಾಗಿರುವುದು ಅಂತರಜಾಲದ ಮೇಲೆ ಪರಿಣಾಮ ಬೀರುವಂತಿಲ್ಲ. ಜಾಲದ ಮೂಲಕ ಚಲಿಸುವ ಮಾಹಿತಿ ತನ್ನ ದಾರಿಯನ್ನು ತಾನೇ ಕಂಡುಕೊಳ್ಳಬೇಕು. ಅಂತರಜಾಲದ ಕಾರ್ಯ ನಿರ್ವಹಣೆ ಸಹಯೋಗ ಹಾಗೂ ಸಹಕಾರದ ನೆಲೆಯಲ್ಲಿ ನಡೆಯಬೇಕು. ಅಂತರಜಾಲದಲ್ಲಿ ಮಾಹಿತಿ ಸಂವಹನ ಸಾಮಾನ್ಯವಾಗಿ ರೂಟರ್‍ಗಳು ಮತ್ತು ಮಾಹಿತಿ ದ್ವಾರಗಳ ಗೇಟ್‍ವೇ ಮೂಲಕ ನಡೆಯುತ್ತದೆ. ಈ ವ್ಯವಸ್ಥೆಗಳಲ್ಲಿ ಮಾಹಿತಿ ಸಂಗ್ರಹಣೆಗೆ ಆಸ್ಪದವಿರಬಾರದು.

 ಮೊದಮೊದಲು ಅಂತರಜಾಲದಲ್ಲಿ ಇರಿಸಿದ ಮಾಹಿತಿ ಸಂಪೂರ್ಣವಾಗಿ ಮುಕ್ತವಾಗಿರಬೇಕು ಎಂದೇ ತೀರ್ಮಾನವಾಗಿತ್ತು. ವಾಣಿಜ್ಯ ಚಟುವಟಿಕೆಗಳು ಹೆಚ್ಚಾದಂತೆಲ್ಲ ಇಚ್ಛಿಸಿದಷ್ಟು ಮಾಹಿತಿಯನ್ನು ನೀಡಲು ಸಾಧ್ಯವಿರುವ ವ್ಯವಸ್ಥೆ ರೂಢಿಗೆ ಬಂದಿತು.

ಅಂತರಜಾಲದ ಕಾರ್ಯ ನಿರ್ವಹಣೆ ತಾತ್ವಿಕವಾಗಿ ಸರಳ ಎನಿಸಿದರೂ ಸಂಕೀರ್ಣ ತಂತ್ರಜ್ಞಾನವನ್ನು ಬಳಸುತ್ತದೆ. ಅಂತರಜಾಲದ ಸುಗಮ ನಿರ್ವಹಣೆಗೆ ಒಂದೆಡೆ ಮಾಹಿತಿ ಸರಬರಾಜು ವ್ಯವಸ್ಥೆ ಮತ್ತು ಮಾಹಿತಿ ಹರಿವಿನ ವ್ಯವಸ್ಥೆ ಅಗತ್ಯ. ಇನ್ನೊಂದೆಡೆಯಲ್ಲಿ ಬಳಕೆದಾರನಲ್ಲಿ ಉತ್ತಮ ತರಂಗವಿಸ್ತಾರದ ಅಂತರಜಾಲ ಸಂಪರ್ಕ ಮತ್ತು ಉತ್ತಮ ಗುಣಮಟ್ಟದ ಗಣಕಗಳು ಇರಬೇಕು. ತಂತ್ರಜ್ಞಾನದ ದೃಷ್ಟಿಯಿಂದಲೂ ಅಂತರಜಾಲದಲ್ಲಿ ದೊರಕುವ ಮಾಹಿತಿಯ ದೃಷ್ಟಿಯಿಂದಲೂ 1990ರಿಂದ 2005ರವರೆಗೆ ಗುಣಾತ್ಮಕ ಮತ್ತು ಗಾತ್ರಾತ್ಮಕವಾಗಿ ಅಗಾಧ ಪ್ರಗತಿ ಕಂಡು ಬಂದಿತು. 2004ರ ವೇಳೆಗೆ ಚರದೂರವಾಣಿಗಳಲ್ಲಿಯೂ ಅಂತರಜಾಲ ಸೇವೆ ಲಭ್ಯವಾಗಿ ಎಲ್ಲಿದ್ದರೂ ಅಂತರಜಾಲಕ್ಕೆ ಅಂಟಿಕೊಂಡಿರುವುದು ಸಾಧ್ಯವಾಯಿತು.

ಈ ಪ್ರಗತಿಯ ಫಲವಾಗಿ ಸಾಧ್ಯತೆಗಳು ಹೆಚ್ಚಾದಂತೆಲ್ಲ ಅಂತರಜಾಲಕ್ಕೆ ಬೇಡಿಕೆ ಹೆಚ್ಚಾಯಿತು. ಅಪಾರ ಪ್ರಮಾಣದ ವೈವಿಧ್ಯಪೂರ್ಣ ಮಾಹಿತಿ ಅಂತರಜಾಲಕ್ಕೆ ಹರಿದು ಬಂದಿತು. ಪರಸ್ಪರ ಸಂಪರ್ಕಕ್ಕೆ ವಿ-ಅಂಚೆ(ನೋಡಿ ವಿ-ಅಂಚೆ), ಸಂದೇಶವಾಹಕ(ಮೆಸೆಂಜರ್) ಹರಟೆ, ಧ್ವನಿ ಚಿತ್ರ ಮತ್ತು ವಿಡಿಯೋಗಳ ರವಾನೆ ಸಾಧ್ಯವಾದಂತೆ, ಅಂತರಜಾಲ ತಾನೇ ಒಂದು ಮಾಧ್ಯಮವಾಗಿ ಬೆಳೆಯಿತು. ದಿನಪತ್ರಿಕೆಗಳು, ವ್ಯಾಪಾರೀ ಸಂಸ್ಥೆಗಳು, ದೂರದರ್ಶನ ಕೇಂದ್ರಗಳು, ಸಂಶೋಧನ ಸಂಸ್ಥೆಗಳು, ತಂತ್ರಜ್ಞಾನ ಸಂಸ್ಥೆಗಳು ದೂರವಾಣಿ ಸಂಸ್ಥೆಗಳು, ಮನೋರಂಜನಾ ಉದ್ಯಮ ಹೀಗೆ ಭೇದವಿಲ್ಲದೆ ಎಲ್ಲ ರೀತಿಯ ಉದ್ಯಮಗಳೂ ಅಂತರಜಾಲವನ್ನು ಪ್ರವೇಶಿಸಿದವು. ಅಂತರಜಾಲ ದೇಶಕಾಲಗಳ ಮಿತಿಯನ್ನು ದಾಟಿ ಎಲ್ಲರಿಗೂ ಏಕಕಾಲದಲ್ಲಿ ಲಭ್ಯವಾದದ್ದು ಮಹತ್ವದ ಪರಿಣಾಮವನ್ನೇ ಉಂಟು ಮಾಡಿತು. ಇನ್ನೊಂದೆಡೆ ಕೆಲವು ಸಾಂಸ್ಕøತಿಕ ಸಮಸ್ಯೆಗಳನ್ನೂ ಹುಟ್ಟು ಹಾಕಿತು. ಯಾರೂ ಯಾವ ಮಾಹಿತಿಯನ್ನೂ ನಿಷೇಧಿಸಲು ಸಾಧ್ಯವಿಲ್ಲವಾಯಿತು. ಮುಖ್ಯವಾಗಿ ಲೈಂಗಿಕ ಸರಕನ್ನು ಅಂತರಜಾಲದ ಮೂಲಕ ಮಾರುವವರ ಸಂಖ್ಯೆ ಹೆಚ್ಚಾಯಿತು. ಅಂತರಜಾಲದಲ್ಲಿನ ಶೇ. ಇಪ್ಪತ್ತರಷ್ಟು ತಾಣಗಳು ಈ ಬಗೆಯವೇ ಆಗಿವೆ ಎಂದು ಒಂದು ಅಭಿಪ್ರಾಯವಿದೆ. ಇದು ಇನ್ನೂ ಹೆಚ್ಚಿದೆ ಎಂದೂ ಅಂಕಿ ಅಂಶಗಳನ್ನು ಒದಗಿಸುವವರು ಇದ್ದಾರೆ. ಆದರೆ ಇದಕ್ಕೆ ಆಕ್ಷೇಪಣೆ ಇರುವುದು ಭಾರತ, ಚೀನಾದಂತಹ ಕೆಲವು ರಾಷ್ಟ್ರಗಳಲ್ಲಿ ಮಾತ್ರ. ಆದಾಗ್ಯೂ ಇಂತಹ ತಾಣಗಳಿಗೆ ಪ್ರವೇಶವನ್ನು ನಿರ್ಬಂಧಿಸುವ ಹಾಗೂ ಇಂತಹ ತಾಣದ ವ್ಯವಸ್ಥಾಪಕರು ಯಾರೊಬ್ಬರ ಗಣಕಕ್ಕೆ ದಾಳಿ ಇಟ್ಟು ತನ್ನಲ್ಲಿರುವ ಮಾಹಿತಿ ಪ್ರದರ್ಶಿಸುವುದನ್ನು ತಡೆಯಲು ಹಲವಾರು ತಂತ್ರಾಂಶಗಳನ್ನು ಸಿದ್ಧಪಡಿಸಿ ಎಲ್ಲರಿಗೂ ಅವು ದೊರೆಯುವ ಹಾಗೆ ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ಅಪ್ರಾಪ್ತ ವಯಸ್ಕರು ಇಂತಹ ತಾಣಗಳಿಗೆ ಭೇಟಿ ನೀಡದ ಹಾಗೆ ಕೆಲವು ನಿರ್ಬಂಧಗಳನ್ನು ರೂಪಿಸಲಾಗಿದೆ. ಇವೆಲ್ಲವುಗಳಿಂದ ವಿವಿಧ ಸಂಸ್ಕøತಿಗಳು ಹಿಂದೆಂದೂ ಇಲ್ಲದ ಬಗೆಯಲ್ಲಿ ಮುಖಾಮುಖಿಯಾದವು. ಇದರ ಜೊತೆಗೆ ಅಂತರಜಾಲ ತಂದ ಮತ್ತೊಂದು ತೊಂದರೆ ಎಂದರೆ ವೈರಾಣು ತಂತ್ರಾಂಶಗಳ ಹಾವಳಿ. ಯಾವುದಾದರೂ ಜಾಲತಾಣಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದರೆ ಆ ಕೂಡಲೇ ಅಲ್ಲಿರಬಹುದಾದ ವೈರಾಣು, ಬಳಕೆದಾರರ ಗಣಕ್ಕೆ ರವಾನೆಗೊಂಡು ಹಾವಳಿ ಪ್ರಾರಂಭಿಸುತ್ತವೆ. ಇಂತಹ ದಾಳಿಯಿಂದ ದೊಡ್ಡ ಉದ್ಯಮಗಳೇ ಅನೇಕಬಾರಿ ಭಾರೀ ಪ್ರಮಾಣದ ನಷ್ಟ ಅನುಭವಿಸಿವೆ. ಆದರೆ ಇದಕ್ಕೂ ಸಹ ಪ್ರತಿ ತಂತ್ರಾಂಶಗಳನ್ನು ಸಿದ್ಧಪಡಿಸಲಾಗಿದೆ. ಅಲ್ಲದೆ ಜಾಲತಾಣ ಪ್ರವೇಶಕ್ಕೆ ಮುಂಚೆಯೇ ಅಲ್ಲಿ ಆಕ್ಷೇಪಾರ್ಹ ಅಂಶಗಳಿವೆಯೇ ಎಂದು ತಿಳಿದುಕೊಳ್ಳಬಹುದಾದ ತಂತ್ರಾಂಶಗಳನ್ನು ರೂಪಿಸಲಾಗಿದೆ. ಗಣಕದಲ್ಲಿ ಭದ್ರತಾಜಾಲವನ್ನು ಏರ್ಪಡಿಸಬಹುದಾಗಿದೆ. ಅಂತರಜಾಲಕ್ಕೆ ಪ್ರವೇಶ ಒದಗಿಸುವ ವೀಕ್ಷಕ ತಂತ್ರಾಂಶಗಳೂ ಈ ಕುರಿತು ಎಚ್ಚರಿಕೆ ನೀಡುತ್ತವೆ.

ಅಂತರಜಾಲ ಒಂದು ಪ್ರಬಲ ಮಾಧ್ಯಮವಾಗಿ ರೂಪುಗೊಳ್ಳುತ್ತಿದ್ದಂತೆಯೇ ಇದೊಂದು ಪ್ರಜಾಪ್ರಭುತ್ವದ ಅತ್ಯುತ್ತಮ ಮಾದರಿ ಎನಿಸತೊಡಗಿತ್ತು. ಅನ್ಯಾಯದ ವಿರುದ್ಧ ಪ್ರಬಲವಾದ ದನಿಯೆತ್ತುವುದು ಸಾಧ್ಯ ಎನಿಸಿತು. ಪ್ರತಿ ವ್ಯಕ್ತಿ/ಸಂಸ್ಥೆ ತನ್ನ ಅಂತರಜಾಲ ತಾಣವನ್ನು ರೂಪಿಸಿಕೊಳ್ಳಲು ಇಂದು ಅವಕಾಶವಿದೆ. ನಿದರ್ಶನವಾಗಿ ವಿಶ್ವಸಂಸ್ಥೆ ಒಂದು ಅಂತರಜಾಲತಾಣವನ್ನು ಹೊಂದಿದೆ. ವಿಶ್ವಸಂಸ್ಥೆಯ ಕುರಿತಾದ ಎಲ್ಲಾ ಮಾಹಿತಿ ಇಲ್ಲಿ ದೊರೆಯುತ್ತದೆ. ಜೊತೆಗೆ ವಿಶ್ವಸಂಸ್ಥೆಯ ಎಲ್ಲಾ ಪ್ರಟಣೆಗಳೂ ಇಲ್ಲಿ ಲಭ್ಯವಿದೆ. ಯಾವುದೇ ವಿಚಾರವಾಗಿ ವಿಶ್ವಸಂಸ್ಥೆಯ ಸಿಬ್ಬಂದಿಯನ್ನು ಸಂಪರ್ಕಿಸಬೇಕಾದರೆ ಅದರ ಜಾಲತಾಣಕ್ಕೆ ಹೋಗಿ ವಿ-ಅಂಚೆಯ ವಿಳಾಸಕ್ಕೆ ಪತ್ರ ಬರೆಯಬಹುದು. ಆ ಕೂಡಲೇ ಅದು ಅವರನ್ನು ತಲಪುತ್ತದೆ. ಇಂದು ಎಲ್ಲಾ ದೇಶಗಳ ಸರಕಾರಗಳೂ ತಮ್ಮ ತಮ್ಮ ಅಂತರಜಾಲತಾಣಗಳನ್ನು ಹೊಂದಿವೆ. ಅನೇಕ ಕಲಾವಿದರು, ಸಾಹಿತಿಗಳು, ಉದ್ಯಮಿಗಳು ತಮ್ಮ ತಮ್ಮ ಅಂತರಜಾಲಗಳನ್ನು ಹೊಂದಿದ್ದಾರೆ. ಶಿಕ್ಷಣ ಸಂಸ್ಥೆಗಳು ತಮ್ಮ ಅಂತರಜಾಲತಾಣವನ್ನು ಹೊಂದಿವೆ. ಇಂದು ಮನೆಯಲ್ಲಿ ಕುಳಿತೇ ಉನ್ನತ ಶಿಕ್ಷಣವನ್ನು ಪಡೆಯುವುದು ಅಂತರಜಾಲದ ಮೂಲಕ ಸಾಧ್ಯವಾಗಿದೆ. ಮಾಹಿತಿಯ ಅಂಕೀಕರಣಕ್ಕೆ ಆನಂತರ ಅದರ ಪ್ರಸಾರಕ್ಕೆ ಅಂತರಜಾಲ ಅಪಾರ ಕೊಡುಗೆಯನ್ನಿತ್ತಿದೆ. ನಿದರ್ಶನವಾಗಿ ಕಾರ್ನಿಗಿ ಮೆಲ್ಲಾನ್ ವಿಶ್ವವಿದ್ಯಾಲಯದ ಸಹಕಾರದಲ್ಲಿ ಗುಟೆನ್‍ಬರ್ಗ್‍ಡಾಟ್ ಕಾಂ ಎಂಬ ಅಂತರಜಾಲತಾಣದಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಪಾಶ್ಚಾತ್ಯ ಅಭಿಜಾತ ಸಾಹಿತ್ಯ ಕೃತಿಗಳನ್ನು ಇಡಿಯಾಗಿ ಇರಿಸಲಾಗಿದೆ. ಇವೆಲ್ಲವನ್ನೂ ಯಾರು ಬೇಕಾದರೂ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಸಹಸ್ರ ಒಟ್ಟು ಇರುವ ಅಂತರಜಾಲತಾಣಗಳ ಸಂಖ್ಯೆಯನ್ನು ಈಗ ಊಹಿಸಿವುದೂ ಕಷ್ಟವಾಗಿದೆ. ಪ್ರತಿ ನಿಮಿಷದಲ್ಲಿಯೂ ಅನೇಕ ಹೊಸ ಜಾಲತಾಣಗಳು ರೂಪುಗೊಳ್ಳುತ್ತಿರುತ್ತವೆ.

ಇಷ್ಟೊಂದು ಸಂಖ್ಯೆಯ ಅಂತರಜಾಲತಾಣಗಳ ಪೈಕಿ ಅಗತ್ಯವಾಗಿರುವ ತಾಣವನ್ನು ಹುಡುಕುವುದು ಸಹ ಕಷ್ಟವಾದ ಕೆಲಸವಾಗಿದೆ. ಆದರೆ ಇದಕ್ಕಾಗಿ ಕೆಲವು ತಾಣಗಳು ಶೋಧಕ ವ್ಯಸ್ಥೆಯನ್ನು ಏರ್ಪಡಿಸಿವೆ. ಉದಾಹರಣೆಗೆ ಯಾಹೋ, ಆಲ್ಟಾವಿಸ್ತಾ, ಗೂಗಲ್ ಮುಂತಾದವು. ಈ ಜಾಲತಾಣಗಳಿಗೆ ಪ್ರವೇಶಿಸಿ ಅಗತ್ಯವಾಗಿರುವ ಮಾಹಿತಿಯ ವಿವರ ನಮೂದಿಸಿದರೆ ಆ ವಿಷಯಗಳನ್ನು ಹೊಂದಿರುವ ಜಾಲತಾಣಗಳ ಪಟ್ಟಿ ದೊರಕುತ್ತದೆ. ಆ ಪಟ್ಟಿಯಲ್ಲಿ ಸೂಕ್ತವಾದುದನ್ನು ಆಯ್ಕೆ ಮಾಡಿಕೊಂಡು ಅದರ ಮೇಲೆ ಒಮ್ಮೆ ಕ್ಲಿಕ್ ಮಾಡಿದರೆ ಬೇಕಾದ ಜಾಲತಾಣಕ್ಕೆ ಪ್ರವೇಶ ದೊರಕುತ್ತದೆ.

ಉದಾಹರಣೆ ಗೂಗಲ್ ತಾಣಕ್ಕೆ ಹೋಗಿ ಅಲ್ಲಿರುವ ಪಠ್ಯ ನಮೂದು ಚೌಕದಲ್ಲಿ ಕನ್ನಡ ಪತ್ರಿಕೆ ಎಂದು ನಮೂದಿಸಿದರೆ ಅಂತರಜಾಲದಲ್ಲಿ ಲಭ್ಯವಿರುವ ಎಲ್ಲ ಕನ್ನಡ ಪತ್ರಿಕೆಗಳ ಜಾಲತಾಣದ ವಿಳಾಸವಿರುವ ಹಾಗೂ ಅವುಗಳ ಬಗ್ಗೆ ಸ್ವಲ್ಪ ಮಟ್ಟಿನ ವಿವರಗಳನ್ನು ಹೊಂದಿರುವ ಪಟ್ಟಿ ದೊರಕುತ್ತದೆ. ನಮಗೆ ಬೇಕಾದ ಪತ್ರಿಕೆಯ ವಿವರವಿರುವ ಸಾಲಿನ ಮೇಲೆ ಕ್ಲಿಕ್ ಮಾಡಿದರೆ ಆ ಪತ್ರಿಕೆಯ ಜಾಲತಾಣಕ್ಕೆ ಪ್ರವೇಶ ದೊರೆಯುತ್ತದೆ. ಈ ಶೋಧ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಪಡಿಸುವ ಪ್ರಯತ್ನ ನಡೆಯುತ್ತಲೇ ಇದೆ.

ಅಂತರಜಾಲ ಇಂದು ಬಹುದೊಡ್ಡ ಉದ್ಯಮ ಮಾಧ್ಯಮವೂ ಆಗಿದೆ. ಇಲ್ಲಿ ಪ್ರತಿಷ್ಠಿತ ಸಂಸ್ಥೆಗಳ ಮಾರಾಟ ವಿಭಾಗಗಳಿವೆ. ಅಂತರಜಾಲದ ಮೂಲಕ ಎಲ್ಲಿಂದ ಯಾವ ಪದಾರ್ಥವನ್ನು ಬೇಕಾದರೂ ಖರೀದಿಸುವ, ಮಾರಾಟ ಮಾಡ ಬಯಸುವ ಪದಾರ್ಥವನ್ನು ಮಾರುವುದು ಸಾಧ್ಯವಾಗಿದೆ. ಅನೇಕ ಕೋಟಿ ರೂ.ಗಳ ಮೊತ್ತದ ವ್ಯವಹಾರ ಈ ಮಾಧ್ಯಮದ ಮೂಲಕ ನಡೆಯುತ್ತದೆ. ಉತ್ಪನ್ನದ ಕುರಿತಾದ ಸಮಗ್ರ ಮಾಹಿತಿ ಇಲ್ಲಿ ದೊರೆಯುತ್ತದೆ. ಈ ಮಾಧ್ಯಮದ ಮೂಲಕ ಖರೀದಿಸದರೆ ಹಣ ಪಾವತಿ ಮಾಡಲು ಮೂರು ಮುಖ್ಯ ವಿಧಾನಗಳಿವೆ. ಪದಾರ್ಥ ಸ್ವೀಕರಿಸಿದ ನಂತರ ಹಣವನ್ನು ಕೊರಿಯರ್‍ಗೆ ನೀಡುವುದು, ಮುಂಚೆಯೇ ಚೆಕ್/ಡ್ರಾಫ್ಟ್ ಕಳಿಸುವುದು ಅಥವಾ ಉದ್ದರಿಕಾರ್ಡುಗಳ ಮೂಲಕ ಪಾವತಿಸುವುದು. ಇದರಲ್ಲಿ ಕೊನೆಯ ವಿಧಾನದ ಕುರಿತಾಗಿ ಅನೇಕರಿಗೆ ಪ್ರಾರಂಭದಲ್ಲಿ ಅಷ್ಟೊಂದು ವಿಶ್ವಾಸವಿರಲಿಲ್ಲ. ಅದರಲ್ಲಿ ಅಪಾಯದ ಸಂಭವವಿದೆ ಎಂಬ ಸಂದೇಹವಿತ್ತು. ಆನಂತರದಲ್ಲಿ ಜಾಗತಿಕ ಸಂಸ್ಥೆಗಳು ಈ ಬಗ್ಗೆ ವಿಶೇಷ ಆಸ್ಥೆ ತಳೆದು ತಂತ್ರಾಶ ಪರಿಣತರ ನೆರವಿನಿಂದ ಹೆಚ್ಚು ಕ್ಷಮತೆಯುಳ್ಳ ಹಾಗೂ ಹೆಚ್ಚು ಸುರಕ್ಷಿತವಾದ ಪಾವತಿ ವಿಧಾನಗಳನ್ನು ರೂಪಿಸಿದವು. 2005ರ ಈ ವೇಳೆಯಲ್ಲಿ ಈ ಪಾವತಿ ವಿಧಾನಗಳು ಸ್ಥಿರಗೊಂಡಿವೆ ಎನ್ನಬಹುದು. ವಿದ್ಯುನ್ಮಾನ ವಾಣಿಜ್ಯ ಎಂಬ ಹೊಸ ಉದ್ಯಮವೇ ಅಂತರಜಾಲದಿಂದಾಗಿ ಪ್ರಾರಂಭವಾಯಿತು. ಹೀಗಾಗಿ ಇಂದು ಪ್ರಯಾಣಿಕರೇ ಮುದ್ರಿಸಿಕೊಳ್ಳಬಹುದಾದ ವಿಮಾನ, ರೈಲುಗಳ ಟಿಕೆಟ್‍ಗಳ ಖರೀದಿ, ವಿದೇಶಿ ಸಂಸ್ಥೆಗಳಿಗೆ ಹಣಪಾವತಿ ಮುಂತಾದುವು ಸುಲಭವಾದ ಕ್ರಿಯೆಗಳಾಗಿವೆ. ವೈದ್ಯಕೀಯ, ಮನರಂಜನೆ ಅಥವಾ ಇನ್ನಾವುದೇ ಕ್ಷೇತ್ರವನ್ನು ಪರಿಗಣಿಸಿದರೂ ಅಂತರಜಾಲ ಅಗಾಧ ಅವಕಾಶಗಳನ್ನು ಮುಂದಿರಿಸಿದೆ. ನಿದರ್ಶನವಾಗಿ ವೈದ್ಯರು ಬೇರೆ ದೇಶದಲ್ಲಿರುವ ರೋಗಿಯನ್ನು ಅಂತರಜಾಲದ ಮೂಲಕವೇ ನೋಡಿ, ಚರ್ಚಿಸಿ, ರೋಗಿ ಇರುವ ಆಸ್ಪತ್ರೆಯ ವೈದ್ಯರ ಜೊತೆಗೂಡಿ ಶಸ್ತ್ರಚಿಕಿತ್ಸೆಗೆ ಮಾರ್ಗದರ್ಶನ ಮಾಡಬಹುದಾಗಿದೆ. ಮನರಂಜನೆಯ ಉದ್ಯಮವಂತೂ ಜನರು ಯಾವಾಗಲೂ ಎಡತಾಕುವ ಸಾವಿರಾರು ಅಂತರಜಾಲತಾಣಗಳನ್ನು ಹೊಂದಿದೆ.

ಒಟ್ಟಾರೆಯಾಗಿ ಅಂತ್ರಜಾಲದ ಆವಿಷ್ಕಾರ ಗಣಕದ ಆವಿಷ್ಕಾರದ ಪರಿಣಾಮವನ್ನು ಮೀರಿಸಿದೆ ಎನ್ನಬಹುದು.

ಅಂತರಜಾಲದಲ್ಲಿ ಕನ್ನಡ : ಅಂತರಜಾಲ ಪ್ರಾರಂಭವಾದ ದಿನಗಳಲ್ಲಿ ಕನ್ನಡದ ತಾಣಗಳನ್ನು ರೂಪಿಸಿವುದು ಸಾಧ್ಯವಿರಲಿಲ್ಲ. ಕ್ರಮೇಣ ಪರಿಣತರು ಅದನ್ನು ಸಾಧ್ಯವಾಗಿಸಿದರು. ಪರಿಣಮವಾಗಿ ಅನೇಕ ಕನ್ನಡ ತಾಣಗಳು ಅಂತರಜಾಲದಲ್ಲಿ ಲಭ್ಯವಿವೆ. ಸಂಜೆವಾಣಿ ಅಂತರಜಾಲದಲ್ಲಿ ಲಭ್ಯವಾದ ಮೊಟ್ಟಮೊದಲ ಪತ್ರಿಕೆ. ಆನಂತರ ಕನ್ನಡದ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ಉದಯವಾಣಿ, ಕನ್ನಡ ಪ್ರಭ, ವಿಜಯ ಕರ್ನಾಟಕ ಸಂಯುಕ್ತ ಕರ್ನಾಟಕಗಳಲ್ಲದೆ, ಕ್ರಾಂತಿ ಮುಂತಾದವೂ ಸಹ ಅಂತರಜಾಲ ತಾಣ ಆವೃತ್ತಿಗಳನ್ನು ಪ್ರಾರಂಭಿಸಿವೆ. ಇಷ್ಟಲ್ಲದೆ ಅಂತರಜಾಲದಲ್ಲಿ ಮಾತ್ರವೇ ದೊರೆಯುವ ದಟ್ಸ್ ಕನ್ನಡ ಡಾಟ್‍ಕಾಂ, ಕನ್ನಡ ರತ್ನಡಾಟ್ ಕಾಂ ಮುಂತಾದ ಹಲವು ಕನ್ನಡ ಪತ್ರಿಕೆಗಳಿವೆ. ಬರಹ ತಂತ್ರಾಂಶವನ್ನು ರೂಪಿಸಿದ ಶೇಷಾದ್ರಿ ವಾಸು ಅವರ ಬರಹ ಡಾಟ್ ಕಾಂ ತಾಣದಲ್ಲಿ ಅವರ ತಂತ್ರಾಂಶವನ್ನು ಪಡೆದುಕೊಳ್ಳಬಹುದು. ವಿಶ್ವಕನ್ನಡ ಡಾಟ್‍ಕಾಂ ಎಂಬುದು ಮೊದಮೊದಲಲ್ಲಿಯೇ ರೂಪಿತವಾದ ಜಾಲತಾಣಗಳಲ್ಲಿ ಒಂದು. ಕನ್ನಡ ಗಣಕ ಪರಿಷತ್ತು ತನ್ನ ಕಗಪ ಡಾಟ್ ಒಆರ್‍ಜಿ ಎಂಬ ತಾಣವನ್ನು ಹೊಂದಿದೆ. ಇದರಲ್ಲಿ ಅವರು ಅಭಿವೃದ್ಧಿಪಡಿಸಿರುವ ಎಲ್ಲಾ ತಂತ್ರಾಂಶಗಳೂ ಸಾರ್ವಜನಿಕರಿಗೆ ಲಭ್ಯವಿವೆ. ಕನ್ನಡ ಗ್ರಂಥಸಂಪದ ಡಾಟ್ ಒಆರ್‍ಜಿ ಎಂಬ ತಾಣದಲ್ಲಿ ಕನ್ನಡದ ಕೃತಿಗಳ ಕುರಿತಾದ ಮಾಹಿತಿ ದೊರೆಯುತ್ತದೆ. ಕರ್ನಾಟಕ ಸರ್ಕಾರ ರೂಪಿಸಿರುವ ದಾಸಸಾಹಿತ್ಯ ಡಾಟ್ ಒಆರ್‍ಜಿ ಎಂಬ ತಾಣದಲ್ಲಿ ಕರ್ನಾಟಕದ ಸಮಗ್ರ ದಾಸ ಸಾಹಿತ್ಯ ಲಭ್ಯವಿದ್ದು, ಕಠಿಣಪದಗಳ ಅರ್ಥ, ಬೇಕಾದ ದಾಸರ ಬೇಕಾದ ಕೃತಿಯನ್ನು ಹುಡುಕಿಕೊಳ್ಳಲು ಸಾಧ್ಯವಿದೆ. ಅನೇಕ ಕೃತಿಗಳನ್ನು ಹಾಡಿಸಿ ಹಾಡುಗಳ ರೂಪದಲ್ಲಿಯೇ ತಾಣದಲ್ಲಿ ಇರಿಸಿರುವುದರಿಂದ ಅವನ್ನು ಕೇಳಲೂ ಸಾಧ್ಯವಿದೆ. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯವೂ ಅಂತರಜಾಲ ತಾಣವನ್ನು ಹೊಂದಿದೆ. ಮಾಧ್ಯಮ ಅಕಾಡೆಮಿ ತನ್ನ ಜಾಲತಾಣವನ್ನು ಹೊಂದಿದ್ದು ಕನ್ನಡದ ಪತ್ರಿಕೆಗಳ, ಪತ್ರಕರ್ತರ ಕುರಿತಾದ ಮಾಹಿತಿ ಇದೆ. ವಿಶ್ವವಿದ್ಯಾನಿಲಯಗಳು ತಮ್ಮ ಅಂತರಜಾಲತಾಣಗಳಲ್ಲಿ ಕನ್ನಡದ ಪುಟಗಳನ್ನು ಇರಿಸಿವೆ. ಕನ್ನಡ ಸಾಹಿತ್ಯ ಪರಿಷತ್ತು ಕೂಡ ತನ್ನ ಜಾಲತಾಣವನ್ನು ರೂಪಿಸಿಕೊಂಡಿದೆ. ಕನ್ನಡ ಸಾಹಿತ್ಯ ಡಾಟ್ ಕಾಂ ಎಂಬ ತಾಣದಲ್ಲಿ ಹಲವು ಪ್ರಮುಖ ಕನ್ನಡ ಸಾಹಿತ್ಯ ಕೃತಿಗಳನ್ನು ಇಡಿಯಾಗಿ ಇರಿಸಲಾಗಿದೆ. ಕನ್ನಡ ಕಸ್ತೂರಿ ಡಾಟ್‍ಕಾಂ ಎಂಬ ತಾಣದಲ್ಲಿ ನಿಮಗೆ ಕನ್ನಡ-ಕನ್ನಡ-ಇಂಗ್ಲಿಷ್ ತಾಕ್ಷಣಿಕ ನಿಘಂಟು ದೊರೆಯುತ್ತದೆ. ಪ್ರಪಂಚದ ಯಾವುದೇ ಮೂಲೆಯಿಂದ ಕನ್ನಡ ಪದಗಳ ಇಂಗ್ಲಿಷ್ ಅರ್ಥವನ್ನು ಹುಡುಕಿಕೊಳ್ಳಬಹುದು. ಅನೇಕ ತಾಣಗಳಲ್ಲಿ ಸಂಕೀರ್ಣ ಮಾಹಿತಿ ಲಭ್ಯವಿದೆ. ತರಳಬಾಳು ಮಠದವರು ರೂಪಿಸಿರುವ ತಾಣದಲ್ಲಿ ಆಯ್ದ ವಚನಗಳು ಮತ್ತು ಪಾಣಿನಿಯ ಅಷ್ಟಾಧ್ಯಾಯೀ ಸಂಸ್ಕøತ ಕೃತಿ ಲಭ್ಯವಿವೆ. ಕೆಲವು ಕನ್ನಡ ತಾಣಗಳಲ್ಲಿ ಸಂಕೀರ್ಣವಾದ ಮಾಹಿತಿ ಲಭ್ಯವಿದೆ. ಅವರ್ ಕನ್ನಡ ಡಾಟ್ ಕಾಂ ಎಂಬ ತಾಣದಲ್ಲಿ ಕನ್ನಡ ಗಾದೆಗಳು, ಒಗಟುಗಳು ಲಭ್ಯವಿದೆ. ಟೋಟಲ್ ಕನ್ನಡ ಡಾಟ್ ಕಾಂ ಎಂಬುುದರಲ್ಲಿ ಕನ್ನಡ ಚಲನಚಿತ್ರಗಳ, ಎಲ್ಲ ಬಗೆಯ ಸಂಗೀತದ ಅಡಕ ಮುದ್ರಿಕೆ (ಸಿಡಿ ರೋಮ್) ಮತ್ತು ಡಿವಿಡಿ ರೋಮ್‍ಗಳು ಲಭ್ಯವಿವೆ. ವಿಕಿಪೀಡಿಯ ಡಾಟ್ ಒಆರ್‍ಜಿ ಎಂಬ ತಾಣದಲ್ಲಿ ಸಾವಿರಕ್ಕೂ ಹೆಚ್ಚಿನ ಲೇಖನಗಳಿರುವ ಮುಕ್ತ ವಿಶ್ವಕೋಶ ಲಭ್ಯವಿದೆ. ದಿನೇದಿನೇ ಕನ್ನಡದ ಜಾಲತಾಣಗಳ ಸಂಖ್ಯೆ ಹೆಚ್ಚುತ್ತಿದೆ. ಕನ್ನಡದ ಮತ್ತು ಇತರ ಕೆಲವು ಉಪಯುಕ್ತ ಜಾಲತಾಣಗಳ ವಿಳಾಸಗಳನ್ನು ಈ ಮುಂದೆ ನೀಡಲಾಗಿದೆ.

 ಇಷ್ಟು ತಾಣಗಳಿದ್ದೂ ಕನ್ನಡ ತಾಣಗಳ ಸಂಖ್ಯೆ ಬೇರೆ ಭಾಷೆಗಳಿಗೆ ಹೋಲಿಸಿದರೆ ಬಹು ಕಡಿಮೆ ಎಂದೇ ಹೇಳಬೇಕು.

ಕನ್ನಡ ಜಾಲತಾಣಗಳ ವಿಳಾಸಗಳು:

 

 

 

 

 

 

 

 

 

 

 

 

 

 

 

 

 

 

 

 

 

 

ಇತರೆ ಅಂತರಜಾಲತಾಣಗಳುj