ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರರಾಷ್ಟ್ರೀಯ ಆರ್ಥಿಕ ಮಂಡಲಿ

ವಿಕಿಸೋರ್ಸ್ ಇಂದ
Jump to navigation Jump to search

ಅಂತರರಾಷ್ಟ್ರೀಯ ಆರ್ಥಿಕ ಮಂಡಲಿ

ಈ ಅಂತರರಾಷ್ಟ್ರೀಯ ಸಂಸ್ಥೆ (ಇಂಟರ್‍ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ - ಐ.ಎಫ್.ಸಿ) ವಿಶ್ವದ ಹಲವಾರು ರಾಷ್ಟ್ರಗಳ ಅದರಲ್ಲೂ ಹಿಂದುಳಿದ ದೇಶಗಳ, ಖಾಸಗಿ ಉದ್ಯಮಗಳಿಗೆ ಬಂಡವಾಳ ಒದಗಿಸುವ ಉದ್ದೇಶದಿಂದ 1956ರಲ್ಲಿ ಸ್ಥಾಪಿತವಾಯಿತು. ಇದು ಇತರ ಅಂತರರಾಷ್ಟ್ರೀಯ ಸಂಸ್ಥೆಗಳಂತೆ ಒಂದು ಸಾರ್ವಜನಿಕ ಸಂಸ್ಥೆ. ಅಂತರರಾಷ್ಟ್ರೀಯ ಪುನರ್‍ರಚನೆ ಮತ್ತು ಅಭಿವೃದ್ಧಿ ಬ್ಯಾಂಕಿನ ಒಂದು ಉಪಸಂಸ್ಥೆ. ಆದರೂ ಈ ಸಂಸ್ಥೆಗೆ ತನ್ನದೇ ಆದ ವೈಶಿಷ್ಟ್ಯ, ಸ್ವತಂತ್ರನೀತಿ ಇವೆ. ಆದರೆ ಈ ಸಂಸ್ಥೆಗೆ ಅಂತರರಾಷ್ಟ್ರೀಯ ಬ್ಯಾಂಕಿನ ಸದಸ್ಯರು ಮಾತ್ರ ಸದಸ್ಯರಾಗಬಹುದೆಂದೂ ಮತ್ತು ಪೂರ್ಣ ಪ್ರಯೋಜನ ಪಡೆಯಬಹುದೆಂದೂ ನಿಯಮವಿದೆ. 1957ರಲ್ಲಿ ವಿಶ್ವದ ಸುಮಾರು ಮೂವತ್ತೆರಡು ದೇಶಗಳು ಮಂಡಲಿಯ ಸದಸ್ಯರಾಗಿದ್ದುವು. ಪ್ರಮುಖಸದಸ್ಯ ರಾಷ್ಟ್ರಗಳಲ್ಲಿ ಭಾರತದೇಶ ಒಂದು. ಸಂಸ್ಥೆಯ ಅಧಿಕೃತ ಬಂಡವಾಳ ಒಂದು ಸಾವಿರ ದಶಲಕ್ಷ ಡಾಲರ್‍ಗಳು. ಈ ಪೈಕಿ ಹೂಡಿಕೆಯಾದ ಬಂಡವಾಳ 78-4 ದಶಲಕ್ಷ ಡಾಲರ್‍ಗಳು. ಈ ಸಂಸ್ಥೆಯ ನಾಲ್ಕನೆಯ ಸದಸ್ಯರಾಷ್ಟ್ರವಾದ ಭಾರತ ಸುಮಾರು 4.43 ದಶಲಕ್ಷ ಡಾಲರುಗಳಷ್ಟು ಹಣವನ್ನು ಬಂಡವಾಳವಾಗಿಕೊಟ್ಟಿದೆ. ಸದಸ್ಯರಾಷ್ಟ್ರಗಳಲ್ಲಿ ಅಗ್ರಸ್ಥಾನ ಅಮೆರಿಕದ ಸಂಯುಕ್ತ ಸಂಸ್ಥಾನಕ್ಕೆ ಸೇರಿದೆ.

ಈ ಆರ್ಥಿಕ ಸಂಸ್ಥೆ ಅಂತರರಾಷ್ಟ್ರೀಯ ವ್ಯವಹಾರ, ವಾಣಿಜ್ಯ, ವ್ಯವಸಾಯ ಮುಂತಾದ ಕ್ಷೇತ್ರಗಳಲ್ಲಿ ವ್ಯವಸ್ಥಿತವಾದ ರೀತಿಯಲ್ಲಿ ರಾಷ್ಟ್ರಗಳ ಆರ್ಥಿಕ ಬೆಳೆವಣಿಗೆ ಸಾಧಿಸಲು ಹಲವಾರು ಮಹತ್ತರವಾದ ಉದ್ದೇಶಗಳನ್ನು ಹೊಂದಿದೆ. 1. ಮುಖ್ಯವಾಗಿ ಖಾಸಗಿಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಖಾಸಗಿ ಬಂಡವಾಳಗಾರರು ಮುಂದೆ ಬರಲು ಸಾಧಾರಣವಾಗಿ ಅಡ್ಡಿ ಆತಂಕಗಳಿರುವ ಹಿಂದುಳಿದ ರಾಷ್ಟ್ರಗಳಲ್ಲಿ ಖಾಸಗಿ ಬಂಡವಾಳಗಾರರ ಜೊತೆಗೆ ತನ್ನ ಬಂಡವಾಳವನ್ನು ವಿನಿಯೋಗಿಸಲು ಈ ಸಂಸ್ಥೆ ಮುಂದೆ ಬಂದಿದೆ. 2. ಖಾಸಗಿ ಬಂಡವಾಳಗಾರರ ಜೊತೆಗೆ ತನ್ನ ಬಂಡವಾಳವನ್ನು ವಿನಿಯೋಗಿಸಿ ರಾಷ್ಟ್ರದ ಆರ್ಥಿಕ ಪ್ರಗತಿಗೆ ಅಗತ್ಯವಾದ ಕೈಗಾರಿಕಾ ಉದ್ಯಮಗಳ ಅನುಭವ, ತಾಂತ್ರಿಕಶಿಕ್ಷಣ, ಕೈಗಾರಿಕಾ ವ್ಯವಸ್ಥೆ ಮತ್ತು ಬಂಡವಾಳ-ಇವುಗಳ ಸಮನ್ವಯ ಮಾಡುವ ಒಂದು ಮಹತ್ತರವಾದ ಆಕಾಂಕ್ಷೆಯನ್ನು ಈ ಸಂಸ್ಥೆ ಹೊಂದಿದೆ. 3. ಖಾಸಗಿ ಬಂಡವಾಳ ದೇಶೀಮೂಲವಾಗಿರಲಿ ಅಥವಾ ವಿದೇಶೀ ಮೂಲವಾಗಿರಲಿ ಯಾವ ವ್ಯತ್ಯಾಸವೂ ಇಲ್ಲದೆ ಮುಖ್ಯವಾಗಿ ಬಂಡವಾಳ ಖಾಸಗಿ ವಲಯದಲ್ಲಿ ವ್ಯವಸ್ಥಿತವಾದ ರೀತಿಯಲ್ಲಿ ವಿನಿಯೋಗವಾಗಿ ರಾಷ್ಟ್ರಗಳ ಪ್ರಗತಿಗೆ ನೆರವಾಗಬೇಕೆಂಬುದೇ ಈ ಸಂಸ್ಥೆಯ ಧ್ಯೇಯ. 4. ಈ ಸಂಸ್ಥೆ ತನ್ನ ಬಂಡವಾಳ ವಿನಿಯೋಗದ ಜೊತೆಗೆ ದೇಶದ ಆರ್ಥಿಕ ಬೆಳೆವಣಿಗೆಗೆ ಅಗತ್ಯವಾದ ಎಲ್ಲ ಅಂಶಗಳನ್ನೂ ಏರ್ಪಾಟುಗಳನ್ನೂ ವಿಮರ್ಶೆಮಾಡುವ ಹೊಣೆಗಾರಿಕೆಯನ್ನು ಹೊತ್ತಿದೆ. 5. ಈ ಸಂಸ್ಥೆ ತನ್ನ ಬಂಡವಾಳವನ್ನು ವಿನಿಯೋಗಿಸಬೇಕಾದರೆ ತಾನು ನೆರವು ನೀಡುವ ಉದ್ಯಮ ದೇಶೀಯವಾಗಿರಬೇಕು ಅಥವಾ ಆ ದೇಶದ ಅಧೀನರಾಷ್ಟ್ರಕ್ಕೆ ಸೇರಿದ ಉದ್ಯಮವಾಗಿರಬೇಕು. ಈ ನೆರವು ನೀಡುವುದರಲ್ಲಿ ದೇಶೀ ಅಥವಾ ವಿದೇಶೀ ಬಂಡವಾಳಗಾರರ ಜೊತೆಗೆ ಈ ಸಂಸ್ಥೆ ಧನಸಹಾಯ, ಸಹಕಾರ ನೀಡುತ್ತದೆ. 6. ಆ ದೇಶೀಯ ಉದ್ಯಮಕ್ಕೆ ಖಾಸಗಿ ಬಂಡವಾಳ ಸಾಕಷ್ಟು ಪ್ರಮಾಣದಲ್ಲಿ ಅಂದರೆ 50% ರಷ್ಟು ಬಂದಿದ್ದರೆ ಮಾತ್ರ ಈ ಸಂಸ್ಥೆ ನೆರವು ನೀಡಲು ಸಿದ್ಧವಿರುತ್ತದೆ.

ಈ ಸಂಸ್ಥೆ ಸಾಧಾರಣವಾಗಿ ಚಿಲ್ಲರೆ ಉದ್ಯಮಗಳಿಗೆ ಸಹಾಯ ಮಾಡುವುದಿಲ್ಲ. ಇದರ ನಿಯಮಾವಳಿಯ ಪ್ರಕಾರ ನೆರವನ್ನು ಅಪೇಕ್ಷಿಸುವ ದೇಶೀಯ ಉದ್ಯಮ ಕನಿಷ್ಠವಾಗಿ 5 ಲಕ್ಷ ಡಾಲರ್ ಅಥವಾ ತತ್ಸಮವಾದ ಆಸ್ತಿಯನ್ನು ಹೊಂದಿರಬೇಕು. ತಾನು ನೆರವು ನೀಡುವ ಬಂಡವಾಳ ಒಂದು ಲಕ್ಷ ಡಾಲರುಗಳಿಗಿಂತ ಕಡಿಮೆ ಇರಬಾರದು. ಪ್ರಾರಂಭದಲ್ಲಿ ಈ ಸಂಸ್ಥೆ ಆರ್ಥಿಕ ಪ್ರಗತಿಯಲ್ಲಿ ಹಿಂದುಳಿದ ರಾಷ್ಟ್ರಗಳಿಗೆ ಅಥವಾ ಸದಸ್ಯರಾಷ್ಟ್ರಗಳ ಅಧೀನ ರಾಷ್ಟ್ರಗಳಿಗೆ ಆದ್ಯತೆ ನೀಡುತ್ತದೆ. ಸಹಾಯಧನ ಪಡೆಯುವ ಉದ್ಯಮ, ಕೈಗಾರಿಕೆ, ವ್ಯವಸಾಯ ಅಥವಾ ವ್ಯಾಪಾರ ಮುಂತಾದ ಯಾವ ಕ್ಷೇತ್ರಕ್ಕಾದರೂ ಸೇರಿರಬಹುದು. ಆದರೆ ಆ ಉದ್ಯಮ ಉಪಯುಕ್ತವಾಗಿ ಲಾಭದಾಯಕವಾಗಿರಬೇಕು. ಸಂಸ್ಥೆಯ ನಿಯಮಾವಳಿಯಂತೆ ಕೈಗಾರಿಕಾ ಉದ್ಯಮಗಳಿಗೆ ಆದ್ಯತೆ ಸಿಗುತ್ತದೆ. ಸರ್ಕಾರಿ ಕ್ಷೇತ್ರಕ್ಕೆ ಸೇರಿದ ಉದ್ಯಮಗಳಿಗೆ ಅಥವಾ ವಿಶೇಷವಾಗಿ ಸರ್ಕಾರಿ ಪ್ರಭಾವಕ್ಕೆ ಒಳಪಟ್ಟಿರುವ ಸಂಸ್ಥೆಗಳಿಗೆ ನೆರವು ಸಿಗುವುದಿಲ್ಲ.

ಧನಸಹಾಯ ನೀಡುವುದಕ್ಕೆ ಮುಂಚೆ ಈ ಸಂಸ್ಥೆ ಕೆಲವು ವಿಷಯಗಳನ್ನು ಸೂಕ್ಷ್ಮವಾಗಿ ವಿಮರ್ಶಿಸುವ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತದೆ: 1. ತಾನು ಧನಸಹಾಯ ಮಾಡಲು ಮುಂದೆ ಬಂದರೆ ಈ ಸಂಸ್ಥೆಗೆ ಖಾಸಗಿ ಬಂಡವಾಳ ಎಷ್ಟರಮಟ್ಟಿಗೆ ದೊರಕುತ್ತದೆ? 2. ಈ ನೆರವಿನಿಂದ ತನಗೂ ಮತ್ತು ನೆರವು ನೀಡಿದ ಇತರ ಖಾಸಗಿ ಬಂಡವಾಳಗಾರರಿಗೂ ಎಷ್ಟರಮಟ್ಟಿಗೆ ಲಾಭವಾಗುತ್ತದೆ? 3. ಬಂಡವಾಳ ವಿನಿಯೋಗದಿಂದ ಎಷ್ಟರಮಟ್ಟಿಗೆ ರಾಷ್ಟ್ರದ ಆರ್ಥಿಕ ಪ್ರಗತಿಯಲ್ಲಿ ವೈವಿಧ್ಯ ಸಾಧಿಸಬಹುದು?

ಈ ವಿಷಯಗಳನ್ನು ಪರಿಶೀಲಿಸಿ ಮಂಡಲಿ ತನಗೆ ಸೂಕ್ತ ತೋರಿದ ಹಲವಾರು ರೀತಿಯಲ್ಲಿ ತನ್ನ ಬಂಡವಾಳವನ್ನು ವಿನಿಯೋಗಿಸುವ ಪರಮಾಧಿಕಾರವನ್ನು ಹೊಂದಿದೆ. ಇದು ತಾನು ನೆರವು ನೀಡುವ ಸಂಸ್ಥೆಯ ಷೇರು ಅಥವಾ ಬಾಂಡುಗಳನ್ನು ನೇರವಾಗಿ ಕೊಳ್ಳುವುದಿಲ್ಲ. ಸಾಲದ ರೂಪದಲ್ಲಿ ಸಹಾಯಧನ ನೀಡಲು ಸಿದ್ಧವಿದೆ; ಆದರೆ ಇತರ ಸಾಲಗಾರರಂತೆ ಕೇವಲ ಬಡ್ಡಿಗಾಗಿ ಮಾತ್ರ ಸಾಲ ಕೊಡುವುದಿಲ್ಲ. ಖಾಸಗಿ ಕ್ಷೇತ್ರದಲ್ಲಿ ಬಹು ಲಾಭದಾಯಕವಾಗಿ ಸುಲಭವಾಗಿ ಮಾರಾಟವಾಗುವ ಸೆಕ್ಯೂರಿಟಿಗಳನ್ನು ಮಾರುವ ಅಥವಾ ಕೊಳ್ಳುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳುತ್ತದೆ. ಸುಲಭವಾಗಿ ಮಾರಾಟವಾಗುವ ಷೇರುಗಳ ಮತ್ತು ಸ್ಟಾಕುಗಳ ಮೇಲೆ ಬಂಡವಾಳ ವಿನಿಯೋಗಿಸುವ ಹಕ್ಕು ಪಡೆದಿದ್ದು ಇದರಿಂದ ತನಗೆ ಲಾಭದಾಯಕವಾದ ಸೆಕ್ಯೂರಿಟಿಗಳನ್ನು ಸೂಕ್ತ ತೋರಿದಾಗ ಮಾರಿ, ಬೇರೆ ಉದ್ಯಮಗಳಲ್ಲಿ ಬಂಡವಾಳ ವಿನಿಯೋಗದಿಂದ ಸಂಭವಿಸಿರಬಹುದಾದ ತನ್ನ ನಷ್ಟವನ್ನು ಭರ್ತಿ ಮಾಡಿಕೊಳ್ಳುವ ಅವಕಾಶ ಮತ್ತು ಅಧಿಕಾರವನ್ನು ಈ ಸಂಸ್ಥೆ ಹೊಂದಿದೆ. ಈ ರೀತಿ ಸಮತೋಲನವಾದ ರೀತಿಯಲ್ಲಿ ಬಂಡವಾಳ ವಿನಿಯೋಗ ಮಾಡಿ ತನ್ನ ಹಣಕಾಸಿನ ಭದ್ರತೆಯನ್ನು ಮತ್ತು ತನ್ನ ವ್ಯವಹಾರ ಕ್ಷೇತ್ರದ ವ್ಯಾಪ್ತಿಯನ್ನು ಹೆಚ್ಚಿಸಲು ಈ ಸಂಸ್ಥೆ ಶ್ರಮಿಸುತ್ತದೆ. ಈ ಸಂಸ್ಥೆ ತಾನು ಪಡೆದಿರುವ ಅನೇಕ ಸೆಕ್ಯೂರಿಟಿಗಳನ್ನು ಇತರ ಖಾಸಗಿ ಉದ್ಯಮಿಗಳಿಗೆ ಮಾರುವ ಹಕ್ಕನ್ನು ಪಡೆದಿದ್ದರೂ ಇತರ ಬಂಡವಾಳಗಾರರಂತೆ ಬರೀ ಲಾಭಕ್ಕಾಗಿ ವ್ಯವಹಾರ ನಡೆಸುವುದಿಲ್ಲ; ತನ್ನ ಬಂಡವಾಳ ವಿನಿಯೋಗದ ನೀತಿಯನ್ನು ತನಗೆ ಸೂಕ್ತ ಕಂಡಂತೆ ಬದಲಾಯಿಸುವ ಅಧಿಕಾರವನ್ನು ಹೊಂದಿದೆ.

ಇದು ನೀಡುವ ಧನಸಹಾಯ 5 ರಿಂದ 15 ವರ್ಷಗಳ ಅವಧಿಯಲ್ಲಿ ತೀರಿಸಬಹುದಾದ ಸಾಲವಾಗಿರಬಹುದು. ಈ ಸಾಲ ಒಟ್ಟಾಗಿಯಾಗಲಿ ಅಥವಾ ಅವಶ್ಯಕವಾದ ಕಂತುಗಳ ರೂಪದಲ್ಲಾಗಲಿ ಇರಬಹುದು. ಬಡ್ಡಿ ಸಂದರ್ಭಾನುಸಾರವಾಗಿ ಹೆಚ್ಚು ಅಥವಾ ಕಡಿಮೆ ಇರಬಹುದು. ಇದು ಸಾಲ ಕೊಡಬೇಕಾದರೆ ಆ ಉದ್ಯಮದಲ್ಲಿ ಅನುಭವಪೂರ್ಣವಾದ ದಕ್ಷತೆಯಿಂದ ಕೂಡಿದ ಆಡಳಿತ ವ್ಯವಸ್ಥೆ ಕಡ್ಡಾಯವಾಗಿ ಇರಬೇಕು. ತಾನು ಸಹಾಯಧನ ನೀಡುವ ಸಂಸ್ಥೆಯ ಆಡಳಿತ ವರ್ಗದಲ್ಲಿ ತನ್ನ ಪರವಾಗಿ ಒಬ್ಬ ಡೈರೆಕ್ಟರ್ ಇರಲೇಬೇಕೆಂದು ಸೂಚಿಸಬಹುದು ಅಥವಾ ನಿಯಮಿಸಬಹುದು. ತನ್ನಿಂದ ಸಾಲ ಪಡೆದ ಯಾವ ಉದ್ಯಮದಲ್ಲಿಯಾಗಲೀ ಬಂಡವಾಳ ವೆಚ್ಚವಾಗುವ ವಿಧಾನವನ್ನು ಆಗಿಂದಾಗ್ಗೆ ಪರಿಶೀಲಿಸುವ ವಿಶೇಷ ಹಕ್ಕನ್ನು ಈ ಸಂಸ್ಥೆ ಪಡೆದಿದೆ. ಈ ರೀತಿ ಸಹಾಯಧನ ನೀಡಲು ತಾನು ಮುಂದೆ ಬಂದಾಗ ಯಾವ ಸರ್ಕಾರವಾಗಲಿ ಆಕ್ಷೇಪಿಸಿದರೆ ಕೂಡಲೆ ಸಹಾಯ ನಿಲ್ಲಿಸುವ ಸ್ವಾತಂತ್ರ್ಯ ಈ ಸಂಸ್ಥೆಗೆ ಇದೆ.

ಹೀಗೆ ಹಲವಾರು ರೀತಿಯಲ್ಲಿ ಖಾಸಗಿ ವಲಯದ ಅನೇಕ ಉದ್ಯಮಗಳಿಗೆ ಬಂಡವಾಳರೂಪದಲ್ಲಿ ಸಹಾಯಮಾಡುವ ಜವಾಬ್ದಾರಿಯನ್ನು ಹೊತ್ತಿದೆ. ತನ್ನ ವ್ಯವಹಾರದಿಂದ ಸಂಭವಿಸಬಹುದಾದ ಎಲ್ಲ ಲಾಭನಷ್ಟಗಳಿಗೂ ಈ ಸಂಸ್ಥೆಯೇ ಪೂರ್ಣವಾಗಿ ಹೊಣೆಯಾಗಿದೆ. ತಾನು ಸಹಾಯ ನೀಡುವ ಉದ್ಯಮಗಳಿಗೆ ಇದು ಸಾಧಾರಣವಾಗಿ ಇತರ ಅಂತರರಾಷ್ಟ್ರೀಯ ಧನಸಹಾಯ ಸಂಸ್ಥೆಗಳಿಗೆ ಸರ್ಕಾರದ ಖಾತರಿಯನ್ನು ಅಪೇಕ್ಷಿಸುವುದಿಲ್ಲ. ಇದರಿಂದ ಈ ಸಂಸ್ಥೆಯ ಮೂಲ ಉದ್ದೇಶ ಖಾಸಗಿ ಕ್ಷೇತ್ರದಲ್ಲಿ ಹಲವಾರು ರೀತಿಯ ಉದ್ಯಮಗಳನ್ನು ಸ್ಥಾಪಿಸಿ ತನ್ಮೂಲಕ ಆ ರಾಷ್ಟ್ರಗಳ ನಾನಾ ಮುಖವಾದ ಆರ್ಥಿಕಪ್ರಗತಿಯನ್ನು ಸಾಧಿಸುವುದಾಗಿದೆ ಎಂಬುದು ವ್ಯಕ್ತವಾಗುತ್ತದೆ. ಈ ಸಂಸ್ಥೆ ಇಂಡಿಯಾ ದೇಶದಲ್ಲಿ ಈಚೆಗೆ ಅಸ್ಸಾಂಪ್ರಾಂತ್ಯದ ಸಿಲಿಮೆನೈಟ್ ಕೈಗಾರಿಕೆಗೆ ಮತ್ತು ಕೆ.ಎಸ್.ಬಿ.ಪಂಪ್ಸ್ ಲಿಮಿಟೆಡ್ ಎಂಬ ಕೈಗಾರಿಕಾ ಸಂಸ್ಥೆಗೆ ಧನಸಹಾಯ ನೀಡಿ ಈ ಕೈಗಾರಿಕೆಗಳ ಪ್ರಗತಿಗೆ ಕಾರಣವಾಗಿದೆ. 1960ರಲ್ಲಿ ಈ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಸಂಸ್ಥೆಯ ಬಂಡವಾಳವಿನಿಯೋಗದ ರೀತಿನೀತಿಗಳಲ್ಲಿ ಸೂಕ್ತವಾದ ಬದಲಾವಣೆಗಳನ್ನು ಮಾಡಿಕೊಳ್ಳುವ ಅವಕಾಶವನ್ನು ಕಾರ್ಯನಿರ್ವಾಹಕ ಮಂಡಳಿಗೆ ಕೊಡಲಾಯಿತು. ಇದರಿಂದ ಹಿಂದುಳಿದ ರಾಷ್ಟ್ರಗಳ ಅನೇಕ ಅಭಿವೃದ್ಧಿ ಕಾರ್ಯಗಳಲ್ಲಿ ತನ್ನ ನೆರವು ಮತ್ತು ತಾಂತ್ರಿಕತಜ್ಞರ ಸಲಹೆಗಳನ್ನು ಒದಗಿಸಿ ತನ್ನ ಬಂಡವಾಳದ ಜೊತೆಗೆ ಆಯಾ ದೇಶಗಳ ಖಾಸಗಿ ಬಂಡವಾಳ ಮುಂದೆ ಬರುವಂತೆ ಅನುಕೂಲ ವಾತಾವರಣವನ್ನು ಕಲ್ಪಿಸುವುದು ಸಾಧ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸಂಸ್ಥೆ ಸುಮಾರು ಇಪ್ಪತ್ತು ರಾಷ್ಟ್ರಗಳಲ್ಲಿ 60 ದಶಲಕ್ಷ ಡಾಲರುಗಳಷ್ಟು ಬಂಡವಾಳವನ್ನು ವಿನಿಯೋಗಿಸಿದೆಯೆಂದು ತಿಳಿದುಬಂದಿದೆ.         

 

  (ಬಿ.ಆರ್.ಎಸ್.)

 j