ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ

ವಿಕಿಸೋರ್ಸ್ದಿಂದ

ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ

 ಪ್ರಥಮ ಮಹಾಯುದ್ಧವಾದ ಮೇಲೆ 1919ರಲ್ಲಿ ಆದ ವರ್ಸೇಲ್ಸ್‍ನ ಶಾಂತಿಕೌಲಿನ ಫಲವಾಗಿ ರಚಿತವಾದ ಸ್ವಯಮಧಿಕಾರವುಳ್ಳ ಕಾರ್ಮಿಕಸಂಸ್ಥೆ ಇದು. 1945ರ ವರೆಗೂ ರಾಷ್ಟ್ರಗಳ ಒಕ್ಕೂಟದೊಡನೆ (ಲೀಗ್ ಆಫ್ ನೇಷನ್ಸ್) ಸಂಯೋಜನೆ ಹೊಂದಿದ್ದು 1946ರಲ್ಲಿ ವಿಶ್ವಸಂಸ್ಥೆಯ ಒಂದು ಅಂಗ ಸಂಸ್ಥೆಯಾಯಿತು. ಪ್ರಾರಂಭದಲ್ಲಿ ರಾಷ್ಟ್ರಗಳ ಒಕ್ಕೂಟದ ಸದಸ್ಯರೇ ಇದರ ಸದಸ್ಯರಾಗಿದ್ದು ಕ್ರಮೇಣ ಅದರ ಸದಸ್ಯರಲ್ಲದವರೂ ಇದರ ಸದಸ್ಯರಾಗಲು ಅವಕಾಶವಾಯಿತು. ಕೇವಲ ರಾಷ್ಟ್ರಸರ್ಕಾರಗಳು ಇದರ ಸದಸ್ಯತ್ವವನ್ನು ಪಡೆಯುವುದು ಮಾತ್ರವಲ್ಲದೆ ಆ ಸರ್ಕಾರಗಳ ಕಾರ್ಮಿಕರ ಹಾಗೂ ಉದ್ದಿಮೆಗಾರರ ಸಂಘಗಳ ಪ್ರತಿನಿಧಿಗಳು ಸಹ ಸದಸ್ಯತ್ವವನ್ನು ಪಡೆಯಲವಕಾಶವಿದೆ. ಈ ತ್ರಿಪಕ್ಷ ದೋಷಗಳನ್ನು ನಿವಾರಿಸುವ ಹಾಗೂ ಕಾರ್ಮಿಕರ ಸ್ಥಾನಮಾನಗಳನ್ನು ಕಾಪಾಡುವುದರ ಅಗತ್ಯವನ್ನು ಜಗತ್ತು ಕಂಡುಕೊಂಡದ್ದು ನೂರೈವತ್ತು ವರ್ಷಗಳ ಹಿಂದೆಯೇ. ಆದಕಾರಣ 1905ರಲ್ಲಿ ಸ್ವಿಟ್ಜರ್ಲೆಂಡಿನ ಬಾಸೆಲ್‍ನಲ್ಲಿ ಹಲವು ಸರ್ಕಾರಗಳ ಸಹಕಾರದಿಂದ ಕಾರ್ಮಿಕರಿಗಾಗಿಯೇ ಸ್ಥಾಪಿತವಾದ ಅಂತರರಾಷ್ಟ್ರೀಯ ಸಂಘವನ್ನು ಈ ಕಾರ್ಮಿಕ ಸಂಘಕ್ಕೆ ಮಾತೃಸಂಸ್ಥೆಯೆನ್ನಬಹುದು. ಕಾರ್ಮಿಕರ ಕೆಲಸದ ವೇಳೆಯ ನಿಯಂತ್ರಣ, ಸಾಕಾದಷ್ಟು ವೇತನ ನೀಡಿಕೆ, ಕಾರ್ಯನಿಮಿತ್ತ ಕಾರ್ಮಿಕರಿಗೆ ಬರಬಹುದಾದ ಕಾಯಿಲೆಗಳು ಹಾಗೂ ಒದಗಬಹುದಾದ ಅಪಘಾತಗಳಿಂದ ರಕ್ಷಣೆ, ನಿವೃತ್ತಿ ವೇತನ, ಕಾರ್ಮಿಕರಿಗೆ ಆಂತರಿಕ ಸೌಲಭ್ಯಗಳನ್ನು ದೊರಕಿಸಿಕೊಡುವುದರ ಮೂಲಕ ಸಾಮಾಜಿಕ ನ್ಯಾಯವನ್ನು ಸ್ಥಾಪಿಸಿ ಸಾರ್ವತ್ರಿಕ ಶಾಂತಿ ಸಾಧಿಸುವುದು, ಎಲ್ಲ ರಾಷ್ಟ್ರಗಳು ಕಾರ್ಮಿಕ ಸ್ಥಿತಿಗತಿಗಳ ವಿಚಾರದ ಬಗ್ಗೆ ಒಂದು ಸರ್ವಸಾಮಾನ್ಯ ಕ್ರಮವನ್ನನುಸರಿಸಿ ಅದರಂತೆ ಕಾರ್ಮಿಕರಿಗೆ ಅನುಕೂಲಗಳನ್ನು ಕಲ್ಪಿಸುವುದು - ಇತ್ಯಾದಿ ಈ ಸಂಸ್ಥೆಯ ಮುಖ್ಯ ಉದ್ದೇಶಗಳು.

 ಇವುಗಳನ್ನು ಕಾರ್ಯಗತ ಮಾಡುವುದಕ್ಕಾಗಿಯೇ ಈ ಸಂಸ್ಥೆ ಅಂತರರಾಷ್ಟ್ರೀಯ ವಾರ್ಷಿಕ ಸಮ್ಮೇಳನಗಳನ್ನು ಕರೆಯುತ್ತದೆ. ಪ್ರಥಮ ವಾರ್ಷಿಕ ಸಮ್ಮೇಳನ 1919ರಲ್ಲಿ ಅಮೆರಿಕದ ವಾಷಿಂಗ್‍ಟನ್‍ನಲ್ಲಿ ನಡೆಯಿತು. 1921-1939 ರವರೆಗೂ ಇದರ ವಾರ್ಷಿಕ ಸಮ್ಮೇಳನಗಳು ಜಿನೀವಾದಲ್ಲಿ ನಡೆಯುತ್ತಿದ್ದು 1940ರಿಂದ ಅಮೆರಿಕದ ಮಾಂಟ್ರೀಲ್‍ನಲ್ಲಿ ನಡೆಯುತ್ತಿವೆ. ಸಂಸ್ಥೆಯ ಕೇಂದ್ರ ಕಚೇರಿ ಮಾತ್ರ ಜಿನೀವಾದಲ್ಲಿದೆ.

 ಎರಡನೆಯ ಮಹಾಯುದ್ಧದ ಅನಂತರವೂ ಈ ಸಂಸ್ಥೆ ತನ್ನ ವಾರ್ಷಿಕ ಸಮ್ಮೇಳನಗಳಲ್ಲಿ ಮಹತ್ತರ ತೀರ್ಮಾನಗಳನ್ನು ಕೈಗೊಂಡು ಸೂಕ್ತ ಸಲಹೆಗಳನ್ನು ನೀಡುವುದಲ್ಲದೆ, ಅಭಿವೃದ್ಧಿಗೊಳ್ಳುತ್ತಿರುವ ರಾಷ್ಟ್ರಗಳಿಗೆ ತಾಂತ್ರಿಕ ನೆರವನ್ನೂ ನೀಡುತ್ತದೆ. ಇಂಥ ಒಂದು ಕ್ರಿಯಾಶೀಲಪ್ರವೃತ್ತಿ 1949-1954ರ ಅವಧಿಯಲ್ಲಿ ಪ್ರಥಮ ಬಾರಿಗೆ ಕಂಡುಬಂತು. ಇದಲ್ಲದೆ ಪ್ರಾದೇಶಿಕ ಚಟುವಟಿಕೆಗಳನ್ನು ಕೈಗೊಂಡು ಔದ್ಯೋಗಿಕ ಮಂಡಲಿಗಳನ್ನು ರಚಿಸಿ, ಕಾರ್ಮಿಕರಿಗೆ ಸೌಲಭ್ಯ ಒದಗಿಸುವುದರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಕಾರ್ಮಿಕ ಪ್ರತಿನಿಧಿಗಳ ನಿರ್ದೇಶಕ ಮಂಡಲಿಗಳನ್ನೂ ಈ ಸಂಸ್ಥೆ ಸ್ಥಾಪಿಸಿದೆ. ಒಟ್ಟಿನಲ್ಲಿ ಹೇಳುವುದಾದರೆ ಕಾರ್ಮಿಕರಂಗದಲ್ಲಿ ಈ ಸಂಸ್ಥೆ ಹಾಕಿಕೊಂಡಿರುವ ಯೋಜನೆಗಳು ಮತ್ತು ನೆರವೇರಿಸುತ್ತಿರುವ ಕಾರ್ಯಗಳು ಕಾರ್ಮಿಕರ ಕಲ್ಯಾಣಕ್ಕೆ ಸಹಕಾರಿಯಾಗಿವೆ.

 

(ಎಚ್.ಎಸ್.ಕೆ.)j