ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರರಾಷ್ಟ್ರೀಯ ಪುನರ್ರಚನೆ ಮತ್ತು ಅಭಿವೃದ್ಧಿ ಬ್ಯಾಂಕು

ವಿಕಿಸೋರ್ಸ್ದಿಂದ

ಅಂತರರಾಷ್ಟ್ರೀಯ ಪುನರ್ರಚನೆ ಮತ್ತು ಅಭಿವೃದ್ಧಿ ಬ್ಯಾಂಕು

ವಿಶ್ವಬ್ಯಾಂಕು ಎಂದು ಪ್ರಖ್ಯಾತಿ ಪಡೆದಿರುವ ಈ ಸಂಸ್ಥೆ ಅಂತರರಾಷ್ಟ್ರೀಯ ದ್ರವ್ಯ ನಿಧಿಯೊಂದಿಗೆ ವಿಶ್ವಸಂಸ್ಥೆಯ ಒಂದು ಅಂಗವಾಗಿ ಸ್ಥಾಪಿತವಾಯಿತು. ಇದು ಅಂತರರಾಷ್ಟ್ರೀಯಮಟ್ಟದ ಬಂಡವಾಳದ ಸಮಸ್ಯೆಗಳನ್ನು ನಿರ್ವಹಿಸುತ್ತದೆ. 1946ರ ಜೂನ್ ತಿಂಗಳಿನಲ್ಲಿ ತನ್ನ ವ್ಯವಹಾರವನ್ನು ಪ್ರಾರಂಭಿಸಿ 19ಕ್ಕೂ ಹೆಚ್ಚು ವರ್ಷಗಳಿಂದ ಕೆಲಸ ಮಾಡುತ್ತಿದ್ದು 102 ರಾಷ್ಟ್ರಗಳ ಸದಸ್ಯತ್ವವನ್ನು ಹೊಂದಿದೆ. ವಾರ್ಷಿಕ ಸಾಲ ವಿತರಣೆ ಸುಮಾರು 9 ಬಿಲಿಯನ್ ಡಾಲರುಗಳು.

ಮೊದಲು ಈ ಬ್ಯಾಂಕಿನ ಆರ್ಥಿಕ ಬಂಡವಾಳ 10 ಬಿಲಿಯನ್ ಡಾಲರುಗಳಷ್ಟಿತ್ತು. ಬೇರೆ ಬೇರೆ ಘಟ್ಟಗಳಲ್ಲಿ ಬೆಳೆದು ಈಗಿನ ಬಂಡವಾಳ 24 ಬಿಲಿಯನ್ ಡಾಲರುಗಳಾಗಿದೆ.

ಪ್ರತಿಯೊಂದು ಸದಸ್ಯ ರಾಷ್ಟ್ರದ ಬಂಡವಾಳ ಈ ಕೆಳಗೆ ಕಂಡ ಅಂಶಗಳ ಆಧಾರದ ಮೇಲೆ ನಿರ್ಣಯವಾಗುತ್ತದೆ.

1. ರಾಷ್ಟ್ರೀಯ ಆದಾಯದ 2% ರಷ್ಟು. 2. ಚಿನ್ನ ಮತ್ತು ಡಾಲರ್ ಉಳಿಕೆಯ 5% ರಷ್ಟು. 3.ಸರಾಸರಿ ಆಮದಿನ 10% ರಷ್ಟು. 4. ರಫ್ತಿನ ಪರಮಾವಧಿ ವ್ಯತ್ಯಾಸದ 10%ರಷ್ಟು. 5. ಮೇಲಿನ ನಾಲ್ಕು ಅಂಶಗಳ ಮೊತ್ತಕ್ಕೆ ಸರಾಸರಿ ರಫ್ತು ವರಮಾನದ ಶೇಕಡ ಪ್ರಮಾಣದಷ್ಟನ್ನು ಕೂಡಿಸಿದಷ್ಟು. 

 ಸದಸ್ಯತ್ವ ಪಡೆಯಲು ಪ್ರತಿಯೊಂದು ರಾಷ್ಟ್ರವೂ ತನ್ನ ಭಾಗದ 20ರಷ್ಟನ್ನು (2% ರಷ್ಟು ಚಿನ್ನ, ಅಥವಾ ಅಮೆರಿಕ ಡಾಲರಿನ ರೂಪದಲ್ಲಿ, 18% ರಷ್ಟನ್ನು ತನ್ನ ರಾಷ್ಟ್ರದ ಹಣದ ರೂಪದಲ್ಲಿ ಕೊಟ್ಟು ಉಳಿದ 80% ಭಾಗವನ್ನು ಭರವಸೆಯ ನಿಧಿಗೆ ಕೊಡಬೇಕಾಗುತ್ತದೆ. ತನ್ನ ಜವಾಬ್ದಾರಿಯನ್ನು ಪೂರೈಸಲು ಅನಿವಾರ್ಯವಾದಾಗ ಮಾತ್ರ ಈ ಭರವಸೆಯ ನಿಧಿಯ ಹಣವನ್ನು ಬ್ಯಾಂಕು ಬಳಸಿಕೊಳ್ಳುವ ಅಧಿಕಾರ ಹೊಂದಿದೆ.

 ಬಂಡವಾಳದ ವಿತರಣೆಗೆ ಅನುಕೂಲವಾಗುವಂತೆ ಒಂದು ಮೂಲ ವ್ಯವಸ್ಥೆಯ ರೂಪವನ್ನು ಅಂತರರಾಷ್ಟ್ರೀಯ ದ್ರವ್ಯನಿಧಿ ಕೊಟ್ಟಿರುವ ಹಾಗೆ ಈ ಬ್ಯಾಂಕು ಯುದ್ಧದ ಪರಿಣಾಮದಿಂದ ಕುಸಿದ ಆರ್ಥಿಕ ವ್ಯವಸ್ಥೆಗೆ ಪುನರ್ರಚನೆಗೆ ಸಹಾಯ ಮಾಡಿ, ಹಿಂದುಳಿದ ರಾಷ್ಟ್ರಗಳ ಅಭಿವೃದ್ಧಿಗೆ ಉತ್ಪಾದನೆಯ ಉದ್ದೇಶಗಳಿಗೋಸ್ಕರ ಹಣವನ್ನು ಒದಗಿಸಿ, ಸಂಪನ್ಮೂಲಗಳ ಬೆಳವಣಿಗೆಗೆ ನೆರವು ಕೊಡುತ್ತದೆ; ಅಂತರರಾಷ್ಟ್ರೀಯ ವ್ಯಾಪಾರ ಸುಸಂಗತವಾದ ರೀತಿಯಲ್ಲಿ ಬೆಳೆಯುವುದಕ್ಕೆ ಅನುಕೂಲ ಮಾಡಿಕೊಡುವುದಲ್ಲದೆ ದೀರ್ಘಾವಧಿ ಬಂಡವಾಳ ಹೂಡಿಕೆಗೆ ಉತ್ತೇಜನ ಕೊಟ್ಟು ತನ್ಮೂಲಕ ಅಭಿವೃದ್ದಿ ಕಾರ್ಯಗಳನ್ನು ತ್ವರಿತಗೊಳಿಸಿ ಸಲ್ಲಬೇಕಾದ ಸಾಲವನ್ನು ನಿಧಾನವಾಗಿ ತೆಗೆದುಕೊಳ್ಳುತ್ತದೆ. ಇದರಿಂದ ಸದಸ್ಯ ರಾಷ್ಟ್ರಗಳಲ್ಲಿನ ಜೀವನಮಟ್ಟ ಏರುವುದಕ್ಕೂ ಅಲ್ಲಿನ ಕಾರ್ಮಿಕ ವರ್ಗದ ಸ್ಥಿತಿಗತಿಗಳು ಉತ್ತಮಗೊಳ್ಳುವುದಕ್ಕೂ ಸಹಾಯವಾಗಿದೆ.

 ಬ್ಯಾಂಕಿನ ಸಹಾಯ ಮೂರು ವಿಧವಾಗಿದೆ. 1. ಸಾಮಾನ್ಯ ಹೂಡಿಕೆ ವಿಧಾನಗಳ ಮೂಲಕ ಖಾಸಗಿ ಬಂಡವಾಳಗಾರರು ಮಾಡಿದ ಸಾಲಕ್ಕೆ ನೀಡುವ ಭರವಸೆ. 2. ಅದರ ನಿಧಿಯಿಂದ ನೇರವಾಗಿ ಸಾಲ ನೀಡಿಕೆ. 3. ಬ್ಯಾಂಕಿನ ಸದಸ್ಯ ರಾಷ್ಟ್ರಗಳಲ್ಲಿ ಖಾಸಗಿ ಬಂಡವಾಳಗಾರರಿಂದ ಆ ಬ್ಯಾಂಕು ಪಡೆದ ಸಾಲರೂಪದ ನಿಧಿಯಿಂದ ಸಾಲಕೊಡುವುದು.

ಸಾಲವನ್ನು ಪಡೆಯುವ ಸದಸ್ಯ ರಾಷ್ಟ್ರಗಳ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ತಾನು ತೃಪ್ತಿಗೊಂಡ ಮೇಲೆ ಮತ್ತು ಸಾಲವನ್ನು ಕೊಡಲು ನಡೆಸುವ ನಿರ್ದಿಷ್ಟ ಯೋಜನೆಗಳ ಮಹತ್ವವನ್ನು ಕಂಡುಕೊಂಡ ಅನಂತರ ಬ್ಯಾಂಕು ತನ್ನ ಸದಸ್ಯ ರಾಷ್ಟ್ರಗಳಿಗೆ ಸಾಲವನ್ನು ನೀಡುತ್ತದೆ. ಸಾಲವನ್ನು ನೀಡುವುದರಲ್ಲಿ ಬ್ಯಾಂಕ್ ನ್ಯಾಯವಾದ ಜವಾಬ್ದಾರಿಯುತ ಹೊಣೆಯನ್ನು ಹೊರುವುದಕ್ಕೆ ತಯಾರಿದೆ. ಈ ಹಣ ರಚನಾತ್ಮಕವಾಗಿ ಪ್ರಾಯೋಗಿಕ ಕೆಲಸಗಳಿಗೆ ಉಪಯೋಗವಾಗಬೇಕೆಂಬುದು ಅದರ ಅಪೇಕ್ಷೆ. ಯಾವ ಉದ್ದೇಶಕ್ಕಾಗಿ ಹಣವನ್ನು ಒದಗಿಸಲಾಗಿದೆಯೋ ಅದೇ ಉದ್ದೇಶಕ್ಕಾಗಿ ಹಣ ಬಳಸಲಾಗಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಮತ್ತು ನಿಯಂತ್ರಿಸಲು ಬ್ಯಾಂಕು ಅಧಿಕಾರವನ್ನು ಹೊಂದಿದೆ. ಈ ಬ್ಯಾಂಕು ಹಿಂದುಳಿದಿರುವ ರಾಷ್ಟ್ರಗಳಿಗೆ ಸಾಲವನ್ನು ಒದಗಿಸಲು ಒಂದು ಹೊಸ ಪ್ರಯೋಗ ತಂತ್ರವನ್ನು ರೂಪಿಸಿದೆ. ಸದಸ್ಯ ರಾಷ್ಟ್ರಗಳಲ್ಲಿ ಬ್ಯಾಂಕು ಗಳಿಸಿರುವ ಅಥವಾ ಅಂಥ ಸಂಸ್ಥೆಗಳಿಂದ ಸ್ಥಾಪಿತವಾದ ಸಂಸ್ಥೆಗಳಿಗೆ ಈ ಬ್ಯಾಂಕು ಹಣವನ್ನು ನೀಡಿ ಸಣ್ಣ ಸಣ್ಣ ಯೋಜನೆಗಳಿಗೆ ಅವಕಾಶಮಾಡಿಕೊಡುತ್ತದೆ. ಇಂಥ ಯೋಜನೆಗಳನ್ನು ಎಲ್ಲಾ ರೀತಿಯಿಂದಲೂ ಪರೀಕ್ಷೆ ಮಾಡುತ್ತ ಅವುಗಳ ಮೂಲ ಆದರ್ಶಗಳಿಗೆ ಮತ್ತು ಉದ್ದೇಶಗಳಿಗೆ ಹಣ ದೊರಕುವಂತೆ ಸಹಾಯ ಮಾಡುತ್ತದೆ. ಭಾರತದಲ್ಲಿ ಕೈಗಾರಿಕಾ ಆರ್ಥಿಕ ಕಾರ್ಪೋರೇಷನ್ನು ಸರ್ಕಾರದಿಂದ ಮೊದಲೇ ಆದೇಶವನ್ನು ಪಡೆದುಕೊಂಡು ಈ ಬ್ಯಾಂಕಿನಿಂದ ಹಣವನ್ನು ಪಡೆಯಬಹುದು. ಭಾರತದ ಕೈಗಾರಿಕಾ ಸಾಲ ಮತ್ತು ಬಂಡವಾಳ ಕಾಪೋರೇಷನ್ನಿಗೆ ಆಗಿಂದಾಗ್ಗೆ ಬೇರೆ ಬೇರೆ ರಾಜ್ಯಗಳಲ್ಲಿ ಚಲಾವಣೆಯಿರುವ ನಾಣ್ಯಗಳ ಸಾಲವನ್ನು ಕೊಡಲು ವಿಶ್ವಬ್ಯಾಂಕ್ ಒಪ್ಪಿಕೊಂಡಿದೆ. ಭಾರತ ಸರ್ಕಾರ ಪಡೆದ ಹಣವನ್ನು ಬಡ್ಡಿಯ ಸಮೇತ ಹಿಂದಿರುಗಿಸಿಕೊಡಲು ಭರವಸೆಯನ್ನಿತ್ತಿದೆ. ಈ ಬ್ಯಾಂಕು ಯಾವ ವಿಧದಲ್ಲೂ ವಿದೇಶಿ ಖಾಸಗಿ ಬಂಡವಾಳ ಸಂಸ್ಥೆಗಳಿಗೆ ಸ್ಪರ್ಧಿಯಾಗಿಲ್ಲ; ಅವುಗಳಿಗೆ ಪೂರಕವಾಗಿ ವ್ಯವಹರಿಸುತ್ತಿದೆ.

ಬ್ಯಾಂಕಿನ ಸಾಲಗಳು ಎಲ್ಲಾ ದೊಡ್ಡ ಆರ್ಥಿಕ ಕ್ಷೇತ್ರಗಳಿಗೂ ದೊರೆತಿವೆ. ಆದರೆ ಮುಖ್ಯವಾಗಿ ಸಾಗಾಣಿಕೆ, ವಿದ್ಯುಚ್ಛಕ್ತಿ, ಕೈಗಾರಿಕೆ, ವ್ಯವಸಾಯ, ದೂರಸಂಪರ್ಕ, ನೀರುಸರಬರಾಜು ಮತ್ತು ಇತ್ತೀಚೆಗೆ ವಿದ್ಯಾಭ್ಯಾಸ - ಇಂಥ ಬಾಬ್ತುಗಳಿಗೆ ಈ ಸಾಲಗಳು ಸಿಕ್ಕಿವೆ.

ಈಚೆಗೆ ಬ್ಯಾಂಕು ಬಹಳವಾಗಿ ಮುಂದುವರಿದು ಅಭಿವೃದ್ಧಿಹೊಂದಿ ಎಲ್ಲರ ಮೆಚ್ಚುಗೆ ಪಡೆದಿದೆ. ಪ್ರಾರಂಭದಲ್ಲಿ ಇದು ಯೂರೋಪಿನ ಪುನರ್ರಚನೆಯ ಸಮಸ್ಯೆಗಳಿಗೆ ಹೆಚ್ಚು ಗಮನವನ್ನು ಕೊಟ್ಟಿತ್ತಾದರೂ ಈಗ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಆರ್ಥಿಕ ಸ್ಥಿತಿಯನ್ನು ಬೇಗ ಉತ್ತಮಗೊಳಿಸುವ ವಿಷಯಕ್ಕೆ ಹೆಚ್ಚು ಹೆಚ್ಚು ಗಮನವಿತ್ತಿದೆ.

ಬ್ಯಾಂಕಿನ ಚರಿತ್ರೆಯಲ್ಲಿ ಮತ್ತೊಂದು ಮುಖ್ಯವಾದ ಪ್ರಗತಿಯನ್ನು ಇಲ್ಲಿ ಹೇಳಬೇಕಾದ್ದು ಅತ್ಯಗತ್ಯ. ಇದು ಮತ್ತು 1960ನಲ್ಲ್ಲಿ ಸ್ಥಾಪಿತವಾದ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯು (ಇಂಟರ್ ನ್ಯಾಷನಲ್ ಡೆವಲಪ್‍ಮೆಂಟ್ ಅಸೋಸಿಯೇಷನ್) (ಐ.ಡಿ.ಎ) ವಿಶ್ವಬ್ಯಾಂಕಿನ ಸದಸ್ಯ ರಾಷ್ಟ್ರಗಳ ಉತ್ಪಾದನಾ ಯೋಜನೆಗಳಿಗೆ ಬಂಡವಾಳವನ್ನು ಒದಗಿಸುವ ಉದ್ದೇಶವನ್ನು ಹೊಂದಿರುವ ವಿಚಾರ. ಈ ಅಂತರರಾಷ್ಟ್ರೀಯ ಅಭಿವೃದ್ದಿ ಸಂಸ್ಥೆಯಲ್ಲಿ ಈಗ 95 ಸದಸ್ಯ ರಾಷ್ಟ್ರಗಳಿವೆ. ಮಾಮೂಲಿನಂತೆ ಸಿಗುತ್ತಿದ್ದ ಸಾಲಕ್ಕಿಂತ ಹೆಚ್ಚಿನ ನೆರವನ್ನು ಮುಂದುವರೆಯುತ್ತಿರುವ ರಾಷ್ಟ್ರಗಳಿಗೆ ಇನ್ನೂ ಹೆಚ್ಚಿನ ರಿಯಾಯಿತಿಗಳೊಂದಿಗೆ ಒದಗಿಸುವುದೇ ಈ ಸಂಸ್ಥೆಯ ವಿಶಿಷ್ಟ ಉದ್ದೇಶ. ಈ ಸಂಸ್ಥೆ ನೀಡಿರುವ ಸಾಲದ ಮೊತ್ತ ಒಟ್ಟು 1 ಬಿಲಿಯನ್ ಡಾಲರುಗಳಿಗೂ ಹೆಚ್ಚಾಗಿದೆ.

ಬ್ರೇಟನ್‍ವುಡ್ಸ್ ನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ ಭಾರತ ಬ್ಯಾಂಕಿನ ಪ್ರವರ್ತಕ ರಾಷ್ಟ್ರಗಳಲ್ಲೊಂದು; ಅಭಿವೃದ್ಧಿಗೆ ಬ್ಯಾಂಕು ನೀಡುವ ಸಹಾಯವನ್ನು ಗಣನೀಯ ಪ್ರಮಾಣದಲ್ಲಿ ಬಳಸಿಕೊಂಡಿದೆ. ಇಂದು 97,80,80,927 ಡಾಲರುಗಳಷ್ಟು ಸಾಲವನ್ನು 34 ರಾಷ್ಟ್ರಗಳು ಪಡೆದಿವೆ. ಭಾರತ ದೇಶದಂತಹ ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿ ಕಾರ್ಯಗಳಿಗೆ ವಿಶ್ವಬ್ಯಾಂಕಿನ ಅಂಗಸಂಸ್ಥೆಗಳಾದ ಅಂತರರಾಷ್ಟ್ರೀಯ ಆರ್ಥಿಕ ಮಂಡಳಿ (ಇಂಟರ್‍ನ್ಯಾಷನಲ್ ಫಿನಾನ್ಸ್ ಕಾರ್ಪೊರೇಷನ್), ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಗಳ ನೆರವು ಅಗತ್ಯವಾಗಿದೆ.

ಅಂತರರಾಷ್ಟ್ರೀಯ ಆರ್ಥಿಕ ಮಂಡಳಿ 1956ರಲ್ಲಿ ಸ್ಥಾಪಿತವಾಯಿತು. ಸರ್ಕಾರಗಳ ಯಾವ ಭರವಸೆಯೂ ಇಲ್ಲದೆ ಖಾಸಗಿ ಉದ್ಯಮಗಳಲ್ಲಿ ಬಂಡವಾಳ ಹೂಡುವುದರ ಮೂಲಕ ಮುಂದುವರಿಯುತ್ತಿರುವ ರಾಷ್ಟ್ರಗಳ ಅಭಿವೃದ್ಧಿಕಾರ್ಯವನ್ನು ತ್ವರಿತಗೊಳಿಸುವುದೇ ಇದರ ಮುಖ್ಯ ಉದ್ದೇಶ. ವಿಶ್ವಬ್ಯಾಂಕಿನ ಎಲ್ಲಾ ಸದಸ್ಯರೂ ಈ ಸಂಸ್ಥೆಯ ಸದಸ್ಯರಾಗಲು ಅವಕಾಶವುಂಟು.1960ರ ಸುಮಾರಿನಲ್ಲಿ ಇದರ ಬಂಡವಾಳ 1000 ದಶಲಕ್ಷ ಡಾಲರುಗಳಷ್ಟಿತ್ತು. ಪ್ರಪಂಚದಾದ್ಯಂತ ಅದರಲ್ಲೂ ಮಧ್ಯ ಮತ್ತು ದಕ್ಷಿಣ ಅಮೆರಿಕ, ಏಷ್ಯ ಭಾಗಗಳಲ್ಲಿ ಈ ಸಂಸ್ಥೆ ಹೂಡಿರುವ ಬಂಡವಾಳ 25 ಯೋಜನೆಗಳನ್ನು ಬೆಳೆಸುತ್ತಿದೆ. ತಯಾರಿಕೆ, ಗಿರಣಿಗಳು, ಗಣಿ ಉದ್ಯಮ, ಖನಿಜದ ಉದ್ಯಮ, ಖನಿಜ ಶುದ್ಧೀಕರಣ - ಹೀಗೆ ಈ ಯೋಜನೆಗಳು ಬಹು ವ್ಯಾಪಕವಾಗಿವೆ.

ಉಪಖಂಡವಾಗಿರುವ ಭಾರತಕ್ಕೆ ಅಭಿವೃದ್ದಿ ಬ್ಯಾಂಕು ನೀಡಿದ ಒಂದು ಗಮನಾರ್ಹವಾದ ನೆರವೆಂದರೆ, ಭಾರತ ಮತ್ತು ಪಾಕಿಸ್ತಾನಗಳ ನಡುವಣ ನೀರಿನ ವಿವಾದವನ್ನು ಪರಿಹರಿಸಿದ್ದು. 1960ನೆಯ ಸೆಪ್ಟೆಂಬರ್ ತಿಂಗಳಿನ 6ನೆಯ ತಾರೀಖಿನಂದು ಸಿಂಧೂ ಕಣಿವೆ ಒಪ್ಪಂದ ಮಹತ್ವದ ಸಾಧನೆ.

ಅಂತೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಬ್ಯಾಂಕು ನೀಡುತ್ತಿರುವ ನೆರವು ಗಮನಾರ್ಹವಾದುದು.

(ನೋಡಿ- ಅಂತರರಾಷ್ಟ್ರೀಯ-ದ್ರವ್ಯನಿಧಿ)       

(ಸಿ.ಸಿ.ಪಿ.)