ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರರಾಷ್ಟ್ರೀಯ ಭೌಗೋಳಿಕ ಒಕ್ಕೂಟ
ಅಂತರರಾಷ್ಟ್ರೀಯ ಭೌಗೋಳಿಕ ಒಕ್ಕೂಟ 1922ರಲ್ಲಿ ಸ್ಥಾಪಿತವಾಯಿತು. ಪ್ರಪಂಚದ ನಾನಾ ಭಾಗಗಳಲ್ಲಿ ನೆಲೆಸಿರುವ ಭೂಗೋಳಶಾಸ್ತ್ರಜ್ಞರಲ್ಲಿ ಸಂಪರ್ಕವನ್ನು ಬೆಳೆಸುವುದೇ ಇದರ ಮುಖ್ಯ ಗುರಿ. ಪ್ರಪಂಚಕ್ಕೆ ಅಥವಾ ಯಾವುದಾದರೂ ರಾಷ್ಟ್ರಕ್ಕೆ ಸಂಬಂಧಿಸಿದಂತೆ ಯಾವುದಾದರೊಂದು ನಿರ್ಧರಿಸಿದ ದೇಶದಲ್ಲಿ 4 ವರ್ಷಗಳಿಗೊಮ್ಮೆ ಒಟ್ಟಿಗೆ ಸೇರಿ ಭೌಗೋಳಿಕ ಸಮಸ್ಯೆಗಳನ್ನು ಚರ್ಚಿಸುತ್ತಾರೆ. ಅನಂತರ ಉಪಯುಕ್ತವಾದ ರೀತಿಯಲ್ಲಿ ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ತಿಳಿವಳಿಕೆಯನ್ನು ನೀಡುತ್ತಾರೆ. ಈ ಒಕ್ಕೂಟದ ಕಾರ್ಯಕಾರಿ ಸಮಿತಿಯನ್ನು ಮತ್ತು ಕಚೇರಿಯನ್ನು ಹೊಂದಿದೆ. ನಾಲ್ಕು ವರ್ಷಗಳ ಅವಧಿಗೆ ಒಕ್ಕೂಟದಲ್ಲಿ ಸೇವೆಯನ್ನು ಸಲ್ಲಿಸಲು ನಾನಾ ರಾಷ್ಟ್ರಗಳ ಭೂಗೋಳಶಾಸ್ತ್ರದಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿಯೂ ಏಳು ಉಪಾಧ್ಯಕ್ಷರುಗಳನ್ನೂ ಹಾಗೂ ಒಬ್ಬ ಖಜಾಂಚಿ ಚಾಲಕನನ್ನೂ ನೇಮಿಸಲಾಗುವುದು. ಸುಮಾರು 50 ರಾಷ್ಟ್ರಗಳು ಇದರ ಸದಸ್ಯತ್ವವನ್ನು ಪಡೆದಿವೆ. ಸಂಸ್ಥೆಗೆ ಮಾರ್ಗದರ್ಶನವನ್ನು ಕೊಡಲು ಒಬ್ಬ ನಿರ್ದೇಶಕನನ್ನೂ ಐದು ಸದಸ್ಯರನ್ನೊಳಗೊಂಡಿರುವ ಒಂದು ಸಮಿತಿಯನ್ನೂ ನೇಮಕ ಮಾಡಲಾಗುವುದು. ಇದು ಪ್ರಪಂಚಕ್ಕೆ ಸಂಬಂಧಿಸಿದ ಹಾಗೂ ರಾಷ್ಟ್ರೀಯ ಸಂಸ್ಥೆಗಳ ವಿಚಾರದಲ್ಲಿ ಒಕ್ಕೂಟಕ್ಕೆ ಅರಿವನ್ನುಂಟುಮಾಡುವುದು.
ಏಷ್ಯಾ ಖಂಡದಲ್ಲಿ ಪ್ರಥಮ ಬಾರಿ ಭಾರದಲ್ಲಿ 21ನೆಯ ಅಂತರರಾಷ್ಟ್ರೀಯ ಭೌಗೋಳಿಕ ಕಾಂಗ್ರೆಸ್ಸಿನ ಅಧಿವೇಶನವನ್ನು 1968ನೆಯ ಇಸವಿಯ ಡಿಸೆಂಬರ್ ಮಾಹೆಯಲ್ಲಿ ನಡೆಸಲಾಯಿತು.
(ನೋಡಿ- ಅಂತರರಾಷ್ಟ್ರೀಯ-ಭೂಪಟಶಾಸ್ತ್ರ-ಸಂಘ)
(ಎಂ.ಎಸ್.ಎಂ.)