ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರರಾಷ್ಟ್ರೀಯ ರಾಜಕೀಯ

ವಿಕಿಸೋರ್ಸ್ ಇಂದ
Jump to navigation Jump to search

ಅಂತರರಾಷ್ಟ್ರೀಯ ರಾಜಕೀಯ

 ರಾಜಕೀಯವಾಗಿ ಆರ್ಥಿಕವಾಗಿ ಹಾಗೂ ಸಾಂಸ್ಕøತಿಕವಾಗಿ ರಾಷ್ಟ್ರಗಳು ಇತರ ರಾಷ್ಟ್ರಗಳೊಡನೆ ಸಂಬಂಧವನ್ನು ಬೆಳೆಸುತ್ತವೆಯಷ್ಟೆ. ಅಂತರರಾಷ್ಟ್ರೀಯ ಮಟ್ಟದಲ್ಲಿನ ಅಂಥ ಸಂಬಂಧಗಳ, ವಾದವಿವಾದಗಳ ಹಾಗೂ ಅವುಗಳ ಸೂಕ್ಷ್ಮ ಪರಿಹಾರಗಳ ವಿಚಾರಗಳನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ವ್ಯವಹಾರ ಅನೇಕ ರೀತಿಯದಾಗಿರಬಹುದು. ಉದಾಹರಣೆಗೆ-ಗಡಿಗಳ ಬಗ್ಗೆ ಅಥವಾ ಅವು ತಮಗೆ ಸೇರಿದ್ದೆಂದು ಹೇಳುವ ಪ್ರದೇಶಗಳ ಬಗ್ಗೆ ಅಥವಾ ಇತರ ರಾಷ್ಟ್ರಗಳು ತಮ್ಮ ಜನರನ್ನು ಆದರಿಸುವ ರೀತಿಗಳ ಬಗ್ಗೆ- ವ್ಯವಹರಿಸಬೇಕಾಗುತ್ತದೆ. ರಾಷ್ಟ್ರಗಳು ವ್ಯಾಪಾರದ ಮೇಲೆ ಹಣ ಹೂಡುತ್ತವೆ. ಅವುಗಳ ನಾಗರೀಕರು, ವಿದ್ಯಾರ್ಥಿಗಳು, ಉಪಾಧ್ಯಾಯರು, ಚಿತ್ರಗಾರರು, ಸಂಗೀತಗಾರರು ಮತ್ತು ಧರ್ಮಪ್ರಚಾರಕರು ಅಧ್ಯಯನಕ್ಕೆ, ಬೋಧಿಸುವುದಕ್ಕೆ, ಸಮಾವೇಶಗಳಲ್ಲಿ ಚರ್ಚಿಸುವ ಸುಲವಾಗಿ, ವಿದೇಶಕ್ಕೆ ಹೋಗುತ್ತಾರೆ. ಕೈಗಾರಿಕಾ ಕ್ರಾಂತಿ ಮತ್ತು ಸಾಗಾಣಿಕೆ ಹಾಗೂ ಸಂಪರ್ಕ ವ್ಯವಸ್ಥೆಯಲ್ಲಿ ಅಭಿವೃದ್ಧಿಯಾದಾಗಿನಿಂದ ವಿಶೇಷವಾಗಿ ಇಂಥ ಸಂಬಂಧಗಳ ಮಿತಿ ಮತ್ತು ತೀವ್ರತೆಯನ್ನು ವೃದ್ಧಿ ಪಡಿಸಿಕೊಳ್ಳುತ್ತ ಪ್ರಪಂಚದ ರಾಷ್ಟ್ರಗಳು ಒಂದಕ್ಕೊಂದು ಹತ್ತಿರ ಬಂದಿವೆ. ಸಾಧಾರಣವಾಗಿ ಇಂಥ ಸಂಬಂಧಗಳು ಮೈತ್ರಿಯುತವಾಗಿ ಹಾಗೂ ಕಾಂತಿಯುತವಾಗಿರುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ ಭಿನ್ನಾಭಿಪ್ರಾಯಗಳು ತಲೆದೋರುತ್ತವೆ; ರಾಷ್ಟ್ರಗಳ ಆವಶ್ಯಕತೆ ಹಾಗೂ ಸಾಮಥ್ರ್ಯಗಳು ಭಿನ್ನವಾಗಿರುವುದೇ ಇದಕ್ಕೆ ಕಾರಣ. ಆದರೂ ಈ ಸಂಬಂಧ ಯಾವಾಗಲೂ ಮತ್ತು ಎಲ್ಲೆಡೆಗಳಲ್ಲಿಯೂ ಸಮರಸವಾಗಿ ನಡೆದುಕೊಂಡು ಹೋಗುತ್ತದೆ ಎಂದು ಭಾವಿಸುವುದು ತಪ್ಪು. ವಾದವಿವಾದಗಳು ಹಾಗೂ ನಿರ್ಧಾರಗಳೂ, ಅನೇಕ ವಿಚಾರಗಳನ್ನು ಕ್ರಮಬದ್ಧಗೊಳಿಸಲು ಒಪ್ಪಂದಗಳು, ಯುದ್ಧಗಳು ಇದ್ದೇ ಇರುತ್ತವೆ.

 ಅಂತರರಾಷ್ಟ್ರೀಯ ರಾಜಕೀಯ 1. ರಾಷ್ಟ್ರಗಳ ನಡುವೆ ಇರುವ ಚಾರಿತ್ರಿಕ ಹಾಗೂ ಸಮಕಾಲೀನ ಸಂಬಂಧಗಳನ್ನು ಯಾವ ಆಧಾರದ ಮೇಲೆ ನಡೆಸಿಕೊಂಡು ಹೋಗಬಹುದು ಎಂಬುದನ್ನು ವಿಶ್ಲೇಷಿಸಲು. 2. ಬಿಕ್ಕಟ್ಟನ್ನು ಯಾವ ಆಧಾರದ ಮೇಲೆ ತಡೆಹಿಡಿಯಬಹುದು ಅಥವಾ ಬಗೆಹರಿಸಬಹುದು ಮತ್ತು ಯಾವ ಆಧಾರದ ಮೇಲೆ ಅಂತರರಾಷ್ಟ್ರೀಯ ಶಾಂತಿ ಮತ್ತು ಪುರೋಭಿವೃದ್ಧಿಯನ್ನು ಉತ್ತಮಪಡಿಸಲು ಬೇಕಾದ ಸಹಕಾರಕ್ಕೆ ಒಂದು ರಚನಾತ್ಮಕ ರೀತಿಯನ್ನು ಕಂಡು ಹಿಡಿಯಬಹುದು ಎಂಬ ವಿಷಯಗಳಿಗೆ ಗಮನಕೊಡುತ್ತವೆ.

 ವ್ಯಾಪಕದೃಷ್ಟಿಯಿಂದ ನೊಡಿದರೆ, ಅಂತರರಾಷ್ಟ್ರೀಯ ರಾಜಕೀಯ ಮೂರು ಅಂಶಗಳನ್ನು ಒಳಗೊಂಡಿದೆ : ಅಂತರರಾಷ್ಟ್ರೀಯ ರಾಜಕೀಯ ತತ್ತ್ವ; ರಾಯಭಾರ ನಿರ್ವಹಣೆ ಇತಿಹಾಸ; ಮತ್ತು ಅಂತರರಾಷ್ಟ್ರೀಯ ವ್ಯವಹಾರಕ್ರಮ.

 ಸಾರ್ವಭೌಮತ್ವವನ್ನು ಹಾಗೂ ಸಮಾನ ಹಕ್ಕನ್ನು ಬಯಸುವ ರಾಷ್ಟ್ರಗಳಿದ್ದು, ವಿಶ್ವಸರ್ಕಾರ ಇಲ್ಲದಿರುವಾಗ, ಅಂತರರಾಷ್ಟ್ರೀಯ ರಾಜಕೀಯವೆನ್ನುವುದು ಸಹಜವಾಗಿ ಅಧಿಕಾರದ ಹೋರಾಟವೇ ಹೊರತು ಬೇರೆ ಅಲ್ಲ. ಪ್ರತಿಯೊಂದು ರಾಷ್ಟ್ರವೂ ತನ್ನ ರಾಜಕೀಯ ಭದ್ರತೆಯ ವಿಷಯವಾಗಿ ಆಸ್ಥೆ ಹೊಂದಿರುತ್ತದೆ. ಅಲ್ಲದೆ ತನ್ನ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕøತಿಕ ವಿಷಯಗಳಲ್ಲೇ ಆಸಕ್ತಿ ತಳೆದಿರುತ್ತದೆ. ಮುಖ್ಯವಾಗಿ ಪ್ರಭುತ್ವ ಎಂದರೆ ಒಂದು ರಾಷ್ಟ್ರ ಇತರ ರಾಷ್ಟ್ರಗಳನ್ನು ತನ್ನ ಹಿತಸಾಧನೆಗೆ ಅನುಕೂಲವಾಗುವ ರೀತಿಯಲ್ಲಿ ನಡೆಯುವಂತೆ ಮಾಡುವ ಸಾಮಥ್ರ್ಯ. ಈ ಪ್ರಭುತ್ವ, ಕೇವಲ ಪಶುಬಲದ ಮೇಲೆ  ನಿಂತಿರಬಹುದು; ಪರಂಪರಾಗತ ಆಚಾರವಿಚಾರಗಳ ಪ್ರಭಾವದಿಂದ ಬಂದಿರಬಹುದು; ಕಮ್ಯೂನಿಸಂ, ನಾóಸೀಇಸಂಗಳಂಥ   ಭಾವನಾ ಸಮುಚ್ಛಯಗಳನ್ನವಲಂಬಿಸಿರುವ ಕ್ರಾಂತಿಕಾರಕಶಕ್ತಿಯಾಗಿರಬಹುದು; ಆರ್ಥಿಕ ಸಂಪನ್ಮೂಲಗಳು, ಅವುಗಳ ವಿವೇಚನಾಯುತ ಬಳಕೆ-ಇವುಗಳಿಂದ ಬಂದಿರಬಹುದು; ಅಥವಾ ಸಂಪ್ರದಾಯದ ಮಾನ್ಯತೆ ಪಡೆದು ಜನಾಭಿಪ್ರಾಯದ ಮೇಲೂ ಹತೋಟಿ ಪಡೆದಿರುವ ಅಧಿಕಾರವಾಗಿರಬಹುದು. 1945ರಿಂದೀಚೆಗೆ ಬೆಳೆದಿರುವ ಔದ್ಯೋಗಿಕ ವಿಜ್ಞಾನದ ಸಹಾಯದಿಂದ, ವಿಶೇಷವಾಗಿ ಅಣುಶಕ್ತಿ ಪ್ರಯೋಗದಿಂದ, ಅಗಾಧಕಾರ್ಯಸಮರ್ಥತೆ ಪಡೆದಿರುವ ಸೈನ್ಯಬಲ, ನೌಕಾಬಲ, ವಾಯುಬಲಗಳು ಈ ಪ್ರಭುತ್ವಕ್ಕೆ ಆಧಾರ. ಅಂತರರಾಷ್ಟ್ರೀಯ ರಾಜಕೀಯದ ತತ್ತ್ವಗಳ, ಅಧಿಕಾರದ ಮೂಲಗಳನ್ನು ವೈಜ್ಞಾನಿಕ ರೀತಿಯಲ್ಲಿ ಒಳಹೊಕ್ಕು ನೋಡ ಬೇಕಾಗಿರುವುದಲ್ಲದೆ ಅಂತರರಾಷ್ಟ್ರೀಯ ನಿಯಮ, ವಿಶ್ವದ ಸಾರ್ವಜನಿಕ ಅಭಿಪ್ರಾಯ ಹಾಗೂ ಅಂತರರಾಷ್ಟ್ರೀಯ ಸಂಸ್ಥೆ ಇಂಥ ಅಂಶಗಳಿಂದ ಒದಗಿರುವ ಅಧಿಕಾರದ ಮೇಲಿನ ಇತಿಮಿತಿಗಳನ್ನೂ ಅದು ಶೋಧಿಸಬೆಕಾಗುತ್ತದೆ. ಸಾಮರಸ್ಯ ಹಾಗೂ ಶಾಂತಿಯನ್ನು ತರುವ ಮತ್ತು ವೈಮನಸ್ಯ ಮತ್ತು ಯುದ್ಧವನ್ನು ತಡೆಗಟ್ಟುವ ರೀತಿನೀತಿಗಳನ್ನು ರೂಪಿಸುವುದೇ ಇದರ ಉದ್ದೇಶ.

 ರಾಯಭಾರನಿರ್ವಹಣೆಯ ಚರಿತ್ರೆಯೆನ್ನುವುದು ಶತಮಾಗಳಿಂದಲೂ ರಾಷ್ಟ್ರ ರಾಷ್ಟ್ರಗಳ ಮಧ್ಯೆ ಇರುವ ಸಂಬಂಧಗಳ ಅಧ್ಯಯನವಾಗಿರುವುದಲ್ಲದೆ; 1. ರಾಯಭಾರಿ ಹಾಗೂ ವಿದೇಶೀಯರ ಬಗ್ಗೆ ವರ್ತನೆ, ಸುಂಕಗಳ ಬಳಕೆ, ಯುದ್ಧದ ಕ್ರಮ, ನಿಶ್ಯಸ್ತ್ರೀಕರಣ ಇತ್ಯಾದಿ ವಿಷಯಗಳಿಗೆ ಒಂದು ನಿಯಮಾವಳಿಯನ್ನು ರಚಿಸಿ ಚರ್ಚಿಸಲು ಅಂತರರಾಷ್ಟ್ರೀಯ ಸಮಾವೇಶಗಳ ಒಂದು ಚರಿತ್ರೆ; 2. ಯುದ್ಧದ ಕಾರಣಗಳು ಹಾಗೂ ಅವುಗಳನ್ನು ತಡೆಗಟ್ಟುವ ಶಾಂತಿ ನಿಬಂಧನೆಗಳು, ಮತ್ತು 3. ರಾಷ್ಟ್ರಗಳ ಭದ್ರತೆ ಹಾಗೂ ಅಂತರರಾಷ್ಟ್ರೀಯ ಶಾಂತಿಯನ್ನು ಶಾಶ್ವತವಾಗಿ ಉಳಿಸಲು ಬೇಕಾದ ಪ್ರಯತ್ನಗಳು-ಇಂಥ ವಿಷಯಗಳ ಅಧ್ಯಯನ ಕೂಡ ಆಗಿದೆ.

 ಅಂತರರಾಷ್ಟ್ರೀಯಸಂಸ್ಥೆಗಳು ರಾಜಕೀಯ ಆರ್ಥಿಕ, ಸಾಂಸ್ಕøತಿಕ ಹೀಗೆ ನಾನಾ ತೆರನಾಗಿವೆ. 1. ವಿಶ್ವಸಂಸ್ಥೆ 2. ಅಂತರರಾಷ್ಟ್ರೀಯ ಕೆಲಸಗಾರರ ಸಂಸ್ಥೆ ಮತ್ತು 3. ವಿಶ್ವಸಂಸ್ಥೆಯ ಶಿಕ್ಷಣ, ವೈಜ್ಞಾನಿಕ ಮತ್ತು ಸಾಂಸ್ಕøತಿಕ ವಿಭಾಗ, ಇವು ಮೂರು ಮುಖ್ಯ ವಿಭಾಗಗಳು. ಹೀಗೆ ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳಿರುವುದರಿಂದಲೇ ಇಂದಿನ ಬಹುಮುಖವಾದ ಅಂತರಾಷ್ಟ್ರೀಯ ರಾಯಭಾರತಂತ್ರ ಕೌಶಲಗಳ ಹಾಗೂ ಚತುರರೂ ಸಮರ್ಥರೂ ಆದ ರಾಯಭಾರಿಗಳ ಅಗತ್ಯತೆಯ ಪ್ರಾಶಸ್ತ್ಯ ಹೆಚ್ಚುತ್ತಲಿದೆ. ಆದ್ದರಿಂದ, ಹೊರದೇಶಗಳಲ್ಲಿ ರಾಯಭಾರಿಗಳ ನೇಮಕ, ಅಂತರರಾಷ್ಟ್ರೀಯ ವ್ಯವಹಾರ ನಿರ್ವಹಣೆಗೆ ಅವಶ್ಯಕವಾದ ಶಿಕ್ಷಣವನ್ನು ಅವರಿಗೆ ಕೊಡುವ ಏರ್ಪಾಡುಗಳು, ಅವರು ಹೊಂದಿರಬೇಕಾದ ವಿನಾಯಿತಿಗಳು ಮತ್ತು ವಿಶೇಷಾಧಿಕಾರ ಸೌಕರ್ಯಗಳು, ಇವೆಲ್ಲ ಹೊರದೇಶ ವ್ಯವಹಾರದ ಮುಖ್ಯ ಅಂಶಗಳಾಗುತ್ತವೆ. ರಾಷ್ಟ್ರಗಳ ನಡುವೆ ಇರುವ ದ್ವಿಮುಖ ಮಾತುಕತೆಗಳು ಈಚಿನ ವಿವಿಧಮುಖರಾಯಭಾರ ವ್ಯವಹಾರಗಳಿಂದಾಗಿ ತನ್ನ ಆವಶ್ಯಕತೆ ಅಥವಾ ಮಹತ್ವವನ್ನು ಕಳೆದುಕೊಂಡಿಲ್ಲ ಎಂಬುದನ್ನು ಗಮನಿಸಬೇಕು.

 ಇತ್ತೀಚೆಗೆ ರಚಿತವಾದ ಯೂರೋಪಿನ ಆರ್ಥಿಕ ಸಮುದಾಯ (ಯೂರೋಪಿಯನ್ ಎಕನಾಮಿಕ್ ಕಮ್ಯೂನಿಟಿ), ಯೂರೋಪಿನ ಸಲಹಾ ಮಂಡಳಿ (ಕೌನ್ಸಿಲ್ ಆಫ್ ಯೂರೋಪ್) ಮುಂತಾದ ಸಂಸ್ಥೆಗಳ ವಿಷಯವಾಗಿ ಪ್ರಸ್ತಾಪಿಸುವುದು ಆವಶ್ಯಕ. ಕೆಲವು ನಿರ್ದಿಷ್ಟ ವಿಷಯಗಳಿಗಾಗಿ ರಚಿಸಲ್ಪಟ್ಟ, ಪರಸ್ಪರ ಸಹಾಯಕ ರಾಷ್ಟ್ರಸಂಘಗಳಿವು; ಅಂತರರಾಷ್ಟ್ರೀಯ ವ್ಯವಹಾರಗಳ್ಲಿ ಯಾವುದೊಂದು ರಾಷ್ಟ್ರವೂ ಹೆಚ್ಚು ಪ್ರಭಾವ ಹೊಂದುವುದಕ್ಕೆ ಇಲ್ಲಿ ಆಸ್ಪದ ಕಡಿಮೆ. ಇದೇ ಸಂದರ್ಭದಲ್ಲಿ, ಅನೇಕ ತಜ್ಞರ ಆಲೋಚನೆಯಲ್ಲಿರುವ ವಿಶ್ವಸರ್ಕಾರಸ್ಥಾಪನೆಯ ವಿಷಯವನ್ನು ಉಲ್ಲೇಖಿಸುವುದೂ ಯುಕ್ತ; ಅದಂತೂ ರಾಷ್ಟ್ರಾತೀತವಾದ ಅಧಿಕಾರವನ್ನು ಹೊಂದಿರುತ್ತದೆ. ಸ್ವತಂತ್ರರಾಷ್ಟ್ರವ್ಯವಸ್ಥೆ ಅಂತಿಮ ರಾಜಕೀಯ ಸಂಸ್ಥೆಯಂತೂ ಅಲ್ಲ; ವ್ಯವಸ್ಥಿತ ವಿಶ್ವಸಂಸ್ಥೆಯೊಂದರ ನಿರ್ಮಾಣದ ಮಾರ್ಗದಲ್ಲಿ ಒಂದು ಮೈಲಿಗಲ್ಲು ಮಾತ್ರ. ನಮ್ಮ ಅನುಭವದಿಂದಲೇ ಈ ಅಭಿಪ್ರಾಯಕ್ಕೆ ಸಮರ್ಥನೆ ದೊರಕುತ್ತದೆ; ಹೊರವೈರಿಗಳಿಂದ ಅಪಾಯ ಸಂಭವಿಸಿದಾಗ ಅಥವಾ ಅಂತರರಾಷ್ಟ್ರೀಯ ಸಹಾಯ ಅಗತ್ಯವಾದಾಗ ಕೆಲವು ರಾಷ್ಟ್ರಗಳು ತಮ್ಮ ಸಾರ್ವಭೌಮತ್ವವನ್ನು ಇಚ್ಛೆಯಿಂದ ಬಿಟ್ಟುಕೊಟ್ಟ ಸಂಧರ್ಭಗಳನ್ನು ಇತಿಹಾಸದಲ್ಲಿ ಕಾಣುತ್ತೇವೆ. ಅಮೆರಿಕದ ಸಂಯುಕ್ತ ಸಂಸ್ಥಾನಗಳು ಸ್ವಿಟ್ಸರ್ಲೆಂಡ್ ಮುಂತಾದ ದೇಶಗಳಲ್ಲಿ ಕಾಣುವ ಸಂಯುಕ್ತರಾಜ್ಯ ವ್ಯವಸ್ಥೆ ಇದಕ್ಕೆ ನಿದರ್ಶನ. ಇಷ್ಟಾದರೂ ಅಂತರರಾಷ್ಟ್ರೀಯ ರಾಜಕೀಯ ವ್ಯವಹಾರದಲ್ಲಿ ರಾಷ್ಟ್ರಬಲಕ್ಕೇ ಪ್ರಾಧಾನ್ಯ; ಆದರೆ ಇಂದಿನ ಅಣುಶಕ್ತಿಯುಗದ ಲ್ಲಿ ರಾಷ್ಟ್ರಗಳ ಸಮಾನಬಲದ ಪ್ರಶ್ನೆ ಮಾಯವಾಗಿ, ವಿನ್‍ಸ್ಟನ್ ಚರ್ಚಿಲ್ ಹೇಳಿದಂತೆ ಸಮಾನ ಭೀಕರತೆಯ (ಬ್ಯಾಲೆನ್ಸ್ ಆಫ್ ಟೆರರ್) ಭೂತ ತಲೆಯೆತ್ತಿ ನಿಂತಿದೆ; ಮಾನವಕುಲವೇ ನಾಶವಾದೀತೆಂಬ ಭೀತಿ, ಅದನ್ನು ನಿವಾರಿಸಿ, ಬದುಕಿ ಬಾಳಬೇಕೆಂಬ ಉತ್ಕಟಾಕಾಂಕ್ಷೆ-ಇವು, ರಾಷ್ಟ್ರೀಯ ರಾಜಕೀಯ ಹೋಗಿ ಅಂತರಾಷ್ಟ್ರೀಯ ರಾಜಕೀಯ ಸ್ಥಾಪನೆಯಾದರೆ ಸಾಲದು, ಅದೂ ಹೋಗಿ ವಿಶ್ವರಾಜಕೀಯ ಬಂದಲ್ಲಿ ಮಾನವಕುಲದ ಬದುಕು ಸುಗಮವಾದೀತು ಎಂಬ ಅಂಶವನ್ನು ಪ್ರಾಜ್ಞರು ಸೂಚಿಸುವಂತೆ ಮಾಡಿವೆ.    

(ಎ.ಎ.)