ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರರಾಷ್ಟ್ರೀಯ ವಿಚಾರಸಂಸ್ಥೆ

ವಿಕಿಸೋರ್ಸ್ ಇಂದ
Jump to navigation Jump to search

ಅಂತರರಾಷ್ಟ್ರೀಯ ವಿಚಾರಸಂಸ್ಥೆ

 ಪ್ಯಾರಿಸ್ಸಿನಲ್ಲಿ 1919ರಲ್ಲಿ ನಡೆದ ಶಾಂತಿ ಸಮ್ಮೇಳನದಲ್ಲಿ ನೆರೆದಿದ್ದ ಬ್ರಿಟಿಷ್‍ಚಕ್ರಾಧಿಪತ್ಯದ ಪ್ರತಿನಿಧಿಗಳಲ್ಲಿ ಮಾತುಕತೆ ನಡೆದು ಅದರ ಪರಿಣಾಮವಾಗಿ 20ನೆಯ ಜುಲೈ 1920ರಲ್ಲಿ ಬ್ರಿಟಿಷ್ ರಾಷ್ಟ್ರೀಯ ಸಂಸ್ಥೆ ಲಂಡನ್ನಿನಲ್ಲಿ ಉದಯಿಸಿತು. ಇದಕ್ಕೆ 16ನೆಯ ಜುಲೈ 1926ರಲ್ಲಿ ಬ್ರಿಟಿಷ್ ರಾಜರ ಮನ್ನಣೆ ದೊರೆತು ಅವರು ಅನುಗ್ರಹಿಸಿದ ಸನ್ನದಿಗೆ ಅನುಗುಣವಾಗಿ ಕಾರ್ಯಕಲಾಪಗಳು ಆರಂಭವಾದುವು. ಅಂದಿನಿಂದ ಇದರ ಹೆಸರು ರಾಯಲ್ ಅಂತರರಾಷ್ಟ್ರೀಯ ವಿಚಾರಸಂಸ್ಥೆ (ರಾಯಲ್ ಇನ್‍ಸ್ಟಿಟ್ಯೂಟ್ ಆಫ್ ಇಂಟರ್‍ನ್ಯಾಷನಲ್ ಅಫೇರ್ಸ್) ಎಂದಾಯಿತು. ಇದರ ಧ್ಯೇಯ ಅಂತರರಾಷ್ಟ್ರೀಯ ವ್ಯವಹಾರಗಳನ್ನು ರಾಜಕೀಯ, ಆರ್ಥಿಕ, ಹಾಗೂ ಸಾಮಾಜಿಕ, ಮೊದಲಾದ ದೃಷ್ಟಿಗಳಿಂದ ನಿಷ್ಪಕ್ಷಪಾತವಾಗಿ ಸಮದೃಷ್ಟಿಯಿಂದ ಪರಿಶೀಲಿಸುವುದು. ಇದಕ್ಕೆ ಸರ್ಕಾರದ ಅಥವಾ ಯಾವ ರಾಜಕೀಯ ಪಕ್ಷದ ಸೋಂಕೂ ಇಲ್ಲ. ಸನ್ನದಿನ ನಿಯಮಗಳ ಪ್ರಕಾರ ಸಂಸ್ಥೆ ಯಾವ ಅಂತರರಾಷ್ಟ್ರೀಯ ವಿಚಾರದಲ್ಲೂ ತನ್ನ ಅಭಿಪ್ರಾಯ ಕೊಡಬಾರದು; ಇದರ ಚರ್ಚಾಗೋಷ್ಠಿಗಳಲ್ಲೂ ಪ್ರಕಾಶನಗಳಲ್ಲೂ ವ್ಯಕ್ತವಾದ ಅಭಿಪ್ರಾಯಗಳು ಸದಸ್ಯರ ವೈಯಕ್ತಿಕ ಅಭಿಪ್ರಾಯಗಳು. ಬ್ರಿಟನ್ನಿನ ರಾಜನೀತಿಜ್ಞರಲ್ಲಿ ಪ್ರಮುಖರಾದವರೇ ಇದರ ಅಧ್ಯಕ್ಷರು-ವೈಕೌಂಟ್ ಸೆಸಿಲ್, ವಿನ್ಸ್‍ಟನ್ ಚರ್ಚಿಲ್, ಮೇಜರ್ ಅಟ್ಲೀ ಮೊದಲಾದವರು. ಬ್ರಿಟನ್ನಿನ ಪ್ರಧಾನಮಂತ್ರಿ ಅಧಿಕಾರದ ಕಾರಣದಿಂದಾಗಿ ನೇಮಕಗೊಂಡ ಉಪಾಧ್ಯಕ್ಷ. ಇದರ ಆಶ್ರಿತ ಸಂಸ್ಥೆಗಳು ಕೆನಡ, ಆಸ್ಟ್ರೇಲಿಯ ಮತ್ತು ಪಾಕಿಸ್ತಾನಗಳಲ್ಲಿವೆ. ಸಂಸ್ಥೆಯ ಸದಸ್ಯತ್ವ ಕೇವಲ ನಿಮಂತ್ರಣಗಳ ಮೂಲಕ. ಆದ್ದರಿಂದ ಇದಕ್ಕೆ ವಿದ್ವಾಂಸರಲ್ಲಿ ಅಧಿಕ ಮನ್ನಣೆ, ಪುರಸ್ಕಾರ, ಸದಸ್ಯರ ಸಂಖ್ಯೆ ಸುಮಾರು 3,000. ಪುಸ್ತಕಾಲಯದಲ್ಲಿ 10 ಲಕ್ಷಕ್ಕೆ ಮೀರಿ ಗ್ರಂಥಗಳಿವೆ. ಮುಖ್ಯ ನಿಯತಕಾಲಿಕ ಪ್ರಕಾಶನಗಳು-ಸರ್ವೆ ಆಫ್ ಇಂಟನ್ರ್ಯಾಷನಲ್ ಅಫೇರ್ಸ್ (ವಾರ್ಷಿಕ); ಬ್ರಿಟಿಷ್ ಬುಕ್ ಆಫ್ ಇಂಟನ್ರ್ಯಾಷನಲ್ ಲಾ (ವಾರ್ಷಿಕ); ಇಂಟನ್ರ್ಯಾಷನಲ್ ಅಫೇರ್ಸ್ (ತ್ರೈಮಾಸಿಕ); ದಿ ವಲ್ರ್ಟ್ ಟುಡೇ (ಮಾಸಿಕ). ಇವಲ್ಲದೆ ಹಲವಾರು ಇತರ ಉತ್ತಮ ಪ್ರಕಾಶನಗಳೂ ಉಂಟು.

 

(ಎಸ್.ವಿ.ಡಿ.)