ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರರಾಷ್ಟ್ರೀಯ ವ್ಯಾಪಾರ

ವಿಕಿಸೋರ್ಸ್ ಇಂದ
Jump to navigation Jump to search

ಅಂತರರಾಷ್ಟ್ರೀಯ ವ್ಯಾಪಾರ

ಸರಕು, ಸೇವೆಗಳನ್ನು ಇತರ ಸರಕು, ಸೇವೆಗಳಿಗೆ ವಿನಿಮಯ ಮಾಡುವುದೂ ಬೆಲೆಗೆ ಇವುಗಳನ್ನು ಮಾರುವುದೂ ಕೊಳ್ಳುವುದೂ ವ್ಯಾಪಾರವೆನ್ನಿಸುವುದು. ಬೇರೆ ಬೇರೆ ರಾಷ್ಟ್ರಗಳ ಜನ, ಸರ್ಕಾರ ಅಥವಾ ಸಂಸ್ಥೆಗಳೊಡನೆ ನಡೆಯುವ ಇಂಥ ವ್ಯವಹಾರಗಳು `ಅಂತರರಾಷ್ಟ್ರೀಯ ವ್ಯಾಪಾರವಾಗುವುದು. ಅಂದಮೇಲೆ ಪ್ರಪಂಚದಲ್ಲಿ ಇರುವ ಪ್ರತ್ಯೇಕ ರಾಷ್ಟ್ರಗಳು ಅವುಗಳೊಳಗೆ ಪರಸ್ಪರವಾಗಿ ನಡೆಸುವ ಮಾರುವ ಹಾಗೂ ಕೊಳ್ಳುವ ವ್ಯವಹಾರಗಳ ಮೊತ್ತವೇ ಪ್ರಪಂಚದ ಅಂತರರಾಷ್ಟ್ರೀಯ ವ್ಯಾಪಾರದ ಒಟ್ಟು ಮೊತ್ತವಾಗುವುದು. ವ್ಯವಹರಿಸುವ ರಾಷ್ಟ್ರ ಸ್ವತಂತ್ರ ರಾಷ್ಟ್ರವೇ ಅಧೀನ ರಾಷ್ಟ್ರವೇ ಅಥವಾ ವಸಾಹತು ರಾಷ್ಟ್ರವೇ ಎಂಬ ಪ್ರಶ್ನೆ ಅಪ್ರಕೃತ. ರಾಜಕೀಯ ಸ್ವಾತಂತ್ರ್ಯಕ್ಕೆ ಮುನ್ನ ಇಂಡಿಯ ಮತ್ತು ಇತರ ಅಧೀನ ರಾಷ್ಟ್ರಗಳು ಇತರ ರಾಷ್ಟ್ರಗಳೊಡನೆ ನಡೆಸುತ್ತಿದ್ದ ವ್ಯಾಪಾರವೆಲ್ಲವೂ ಅಂತರರಾಷ್ಟ್ರೀಯ ವ್ಯಾಪಾರವೆಂದೇ ಪರಗಣಿಸಲ್ಪಟ್ಟಿದ್ದಿತು. ಆದರೆ ರಾಷ್ಟ್ರದ ರಾಜಕೀಯ ಎಲ್ಲೆ ಬದಲಾವಣೆಯಿಂದ ಒಳ

ದೇಶದ ವ್ಯಾಪಾರ ಅಂತರರಾಷ್ಟ್ರೀಯ ವ್ಯಾಪಾರವಾಗಬಹುದು. ಬರ್ಮ ಮತ್ತು ಪಾಕಿಸ್ತಾನಗಳು ಪ್ರತ್ಯೇಕ ರಾಷ್ಟ್ರಗಳಾಗಿ ಹುಟ್ಟುವ ಮುನ್ನ ಈ ಭಾಗಗಳು ಮತ್ತು ಇಂದಿನ ಇಂಡಿಯ ಇವುಗಳೊಳಗೆ ನಡೆಯುತ್ತಿದ್ದ ವ್ಯಾಪಾರ ಒಳದೇಶ ವ್ಯಾಪಾರವಾಗಿದ್ದು ಅವು ಪ್ರತ್ಯೇಕ ರಾಷ್ಟ್ರಗಳಾದ ಮೇಲೆ ಈ ಭೌಗೋಳಿಕ ಭಾಗಗಳ ಪರಸ್ಪರ ವ್ಯಾಪಾರವು ಅಂತರರಾಷ್ಟ್ರೀಯ ವ್ಯಾಪಾರವಾಗಿ ಪರಗಣಿಸಲ್ಪಟ್ಟಿದೆ. ರಾಷ್ಟ್ರಗಳ ಎಲ್ಲೆಗಳು ಬದಲಾಯಿಸಿರುವುದರಿಂದ ವ್ಯಾಪಾರದ ಲಕ್ಷಣ ಹೀಗೆ ಬದಲಾಯಿಸಿರುವುದಕ್ಕೆ ಪ್ರಪಂಚದ ಇತಿಹಾಸದಲ್ಲಿ ಅನೇಕ ನಿದರ್ಶನಗಳಿವೆ.

ಅಂತರರಾಷ್ಟ್ರೀಯ ವ್ಯಾಪಾರ ಈಚೆಗೆ ಹುಟ್ಟಿದುದೇನೂ ಅಲ್ಲ; ಪುರಾತನ ಕಾಲದಲ್ಲಿಯೂ ದೇಶದೇಶಗಳ ವ್ಯಾಪಾರ ಸಂಬಂಧಗಳು ಇದ್ದುದನ್ನು ಇತಿಹಾಸ ತಿಳಿಸುತ್ತದೆ. ಆದರೆ, ಅಂತರರಾಷ್ಟ್ರೀಯ ವ್ಯಾಪಾರದ ತೀವ್ರ ಬೆಳೆವಣಿಗೆ ಕೈಗಾರಿಕಾ ಕ್ರಾಂತಿ ಕಾಲದಿಂದ ಈಚೆಗೆ ಸಂಭವಿಸಿರುವ ಮುಖ್ಯ ಘಟನೆ. ಯಂತ್ರ, ಹಬೆಶಕ್ತಿ, ವಿದ್ಯಚ್ಛಕ್ತಿ ಮತ್ತು ಇತರ ವೈಜ್ಞಾನಿಕ ಕಾರ್ಯವಿಧಾನಗಳ ಪ್ರಯೋಗ ಮೊದಲು ಇಂಗ್ಲೆಂಡ್ ತರುವಾಯ ಕೆಲವು ಐರೋಪ್ಯ ರಾಷ್ಟ್ರಗಳು, ಅಮೆರಿಕ, ಜಪಾನ್, ಸೋವಿಯತ್ ರಷ್ಯ ರಾಷ್ಟ್ರಗಳಲ್ಲಿ ವಿಸ್ತರಿಸಿದಂತೆ ಪ್ರಪಂಚದಲ್ಲಿ ಅಂತರರಾಷ್ಟ್ರೀಯ ವ್ಯಾಪಾರವೂ ಹೆಚ್ಚು ವೈವಿಧ್ಯ ತಾಳಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುತ್ತ ಬಂದಿತು. ಈ ಬೆಳೆವಣಿಗೆಗೆ ತಕ್ಕಂತೆ ವ್ಯವಸ್ಥಾಕ್ರಮಗಳಲ್ಲಿ ಮತ್ತು ರೀತಿನೀತಿಗಳಲ್ಲಿ ಬದಲಾವಣೆಗಳಾಗುತ್ತ ಬಂದಿವೆ. ಇಂದಿನ ಪ್ರಪಂಚದಲ್ಲಿ ಅನೇಕ ಹಿಂದುಳಿದ ರಾಷ್ಟ್ರಗಳು ಶೀಘ್ರ ಆರ್ಥಿಕಾಭಿವೃದ್ಧಿಗೆ ಹವಣಿಸುತ್ತಿರುವುದರಿಂದಲೂ ಮುಂದುವರಿದಿರುವ ರಾಷ್ಟ್ರಗಳ ರಾಷ್ಟ್ರೀಯ ಉತ್ಪಾದನೆ ಉನ್ನತಮಟ್ಟಗಳನ್ನು ತಲುಪಿರುವುದರಿಂದಲೂ ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಮುಖ್ಯ ಹೆಚ್ಚಿರುವುದೇ ಅಲ್ಲದೆ ಅದು ಹೊಸ ಸ್ವರೂಪವನ್ನೂ ತಾಳುತ್ತಿದೆ. ಇದರಿಂದ ಹೊಸ ಸಮಸ್ಯೆಗಳೂ ಉದ್ಭವಿಸುತ್ತಿವೆ. ಒಟ್ಟಿನಲ್ಲಿ ಅಂತರರಾಷ್ಟ್ರೀಯ ವ್ಯಾಪಾರ ಪ್ರಪಂಚದ ಆರ್ಥಿಕಾಭಿವೃದ್ಧಿಯ ಒಂದು ಮುಖವಾಗಿದೆ; ಅಲ್ಲದೆ ಆಧುನಿಕ ನಾಗರಿಕತೆಯ ತಳಹದಿಯ ಒಂದು ಮುಖ್ಯ ಭಾಗವೂ ಆಗಿದೆ.

ಪ್ರಪಂಚದಲ್ಲಿ ಶ್ರಮದ ಹಂಚಿಕೆ (ಡಿವಿಷನ್ ಆಫ್ ಲೇಬರ್) ತತ್ತ್ವದ ಅನುಸರಣೆಯ ಮುನ್ನಡೆಯನ್ನು ಅಂತರರಾಷ್ಟ್ರೀಯ ವ್ಯಾಪಾರ ಸೂಚಿಸುವುದು. ಪ್ರತಿ ರಾಷ್ಟ್ರವೂ ಅದರ ಪ್ರಾಕೃತಿಕ ಹಾಗೂ ಇತರ ಸಾಧನಗಳ ಬಲಕ್ಕೆ ಅನುಸಾರವಾಗಿ ಆರ್ಥಿಕ ಉತ್ಪನ್ನವನ್ನು ರೂಢಿಸಿ ಅನೇಕ ಮಾರ್ಗಗಳಲ್ಲಿ ವೈಶಿಷ್ಟ್ಯಗಳಿಸಿಕೊಂಡು ಈ ಸರಕುಗಳ ಸ್ವದೇಶದ ಬೇಡಿಕೆ ಪೂರೈಸುವುದೇ ಅಲ್ಲದೆ ಇತರ ರಾಷ್ಟ್ರಗಳ ಬೇಡಿಕೆಗಳನ್ನೂ ಪೂರೈಸುವಂತಾದಾಗ ವಿವಿಧ ರಾಷ್ಟ್ರಗಳ ಪರಸ್ಪರ ಅವಲಂಬನೆ ಹೆಚ್ಚಿದಂತೆ ಆಗುವುದಲ್ಲದೆ ಒಟ್ಟಿನಲ್ಲಿ ಶ್ರಮ ಹಂಚಿಕೆಯ ಪ್ರಯೋಗದ ವಿಶೇಷ ಫಲ ಪ್ರಪಂಚಕ್ಕೆ ಲಭಿಸುವಂತಾಗುತ್ತದೆ. ಆದುದರಿಂದಲೇ ವಿಶ್ವವ್ಯಾಪಾರಕ್ಕೆ ಹೆಚ್ಚಿನ ಪ್ರಾಮುಖ್ಯ ಸಲ್ಲುವುದು.

ಅಂತರರಾಷ್ಟ್ರೀಯಅರ್ಥಶಾಸ್ತ್ರ ಅರ್ಥಶಾಸ್ತ್ರದ ಒಂದು ಪ್ರತ್ಯೇಕ ವಿಭಾಗವಾಗಿ ಪರಿಗಣಿಸಲ್ಪಟ್ಟಿದೆ. ದೇಶದೊಳಗೆ ನಡೆಯುವ ವ್ಯಾಪಾರ ಹಾಗೂ ಇದಕ್ಕೆ ಸಂಬಂಧಪಟ್ಟ ಉತ್ಪನ್ನ, ಸಾರಿಗೆ, ವಿನಿಮಯ, ಹಣವ್ಯವಸ್ಥೆ-ಇವುಗಳಿಗೆ ಅನ್ವಯಿಸುವ ಆರ್ಥಿಕತತ್ತ್ವಗಳು ಅಷ್ಟು ನೇರವಾಗಿ ಅಂತರರಾಷ್ಟ್ರೀಯ ವ್ಯಾಪಾರ ಹಾಗೂ ಅದರೊಡಗೂಡಿದ ಆರ್ಥಿಕ ವಿಷಯಗಳ ಪ್ರತಿಪಾದನೆಗೆ ಅನ್ವಯಿಸುವುದಿಲ್ಲ ಎಂಬುದೇ ಈ ರೀತಿ ಪ್ರತ್ಯೇಕ ಶಾಸ್ತ್ರ ವಿಭಾಗ ಬೆಳೆದು ಬಂದಿರುವುದಕ್ಕೆ ಕಾರಣ. ಸಿದ್ಧಾಂತ ನಿರೂಪಣೆಯ ದೃಷ್ಟಿಯಿಂದ ಈ ರೀತಿಯ ಪ್ರತ್ಯೇಕತೆ ಎಷ್ಟರ ಮಟ್ಟಿಗೆ ವಾಸ್ತವವಾಗಿಯೂ ಆವಶ್ಯಕ ಎಂಬುದು  ವಿಚಾರಾರ್ಹವಾಗಿದೆ.

ಶ್ರಮ (ಲೇಬರ್), ಬಂಡವಾಳ ಉದ್ಯಮಶೀಲತೆ (ಎಂಟರ್‍ಪ್ರೈಸ್)-ಇಂಥ ಉತ್ಪಾದನಾಂಗಗಳು ಒಂದು ದೇಶದ ಒಳ ವ್ಯವಹಾರಕ್ಕೆ ಚೆನ್ನಾಗಿ ಒಗ್ಗುತ್ತವೆಂದೂ ರಾಷ್ಟ್ರ-ರಾಷ್ಟ್ರಗಳೊಳಗಿನ ವ್ಯವಹಾರಗಳಲ್ಲಿ ಅಷ್ಟು ಒಗ್ಗವೆಂದೂ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಆರ್ಥಿಕ ವಿಷಯಗಳ ಪರಿಶೀಲನೆಯಲ್ಲಿ ಇದೇ ಮುಖ್ಯವಾದ ವ್ಯತ್ಯಾಸವೆಂದೂ ಪ್ರಾಚೀನ ಪಂಥದ (ಕ್ಲಾಸಿಕಲ್ ಸ್ಕೂಲ್) ಅರ್ಥಶಾಸ್ತ್ರಜ್ಞರ ವಾದವಾಗಿದ್ದಿತು. ವಾಸ್ತವವಾಗಿ ನೋಡಿದರೆ ಈ ಭೇದ ಅಷ್ಟು ಸ್ಪಷ್ಟವಾಗಿಲ್ಲ. ದೇಶದ ಒಳಗಡೆ ಉತ್ಪಾದನಾಂಗಗಳು ಒಗ್ಗದೆ ಅಂತರರಾಷ್ಟ್ರೀಯವಾಗಿ ಸ್ವಲ್ಪಮಟ್ಟಿಗೆ ಒಗ್ಗಿರುವ ನಿದರ್ಶನಗಳಿವೆ. ಆದುದರಿಂದ ಆರ್ಥಿಕ ತತ್ತ್ವ ಪ್ರತಿಪಾದನೆಯ ದೃಷ್ಟಿಯಿಂದ  ಕೇವಲ ಈ ಅಂಶದ ಮೇಲೆಯೇ ಆಧಾರಗೊಂಡ ವ್ಯತ್ಯಾಸ ಅಷ್ಟು ಸಮಂಜಸವಾಗಲಾರದು. ಆದರೆ, ಇತರ ಕೆಲವು ಕಾರಣಗಳಿಂದಾಗಿ ಅಂತರರಾಷ್ಟ್ರೀಯ ವ್ಯಾಪಾರವನ್ನು ಕುರಿತ ಪ್ರತ್ಯೇಕ ತಾತ್ತ್ವಿಕ ಅಧ್ಯಯನ ಸಾಧುವಾದುದು ಎಂದು ಹೇಳಬಹುದು.

ಒಂದೊಂದು ರಾಷ್ಟ್ರವೂ ತನ್ನದೇ ಆದ ಹಣವನ್ನೂ ಹಣ ಮತ್ತು ಬ್ಯಾಂಕು ವ್ಯವಸ್ಥೆಯನ್ನೂ ಹೊಂದಿರುವುದರಿಂದ ಒಂದು ರಾಷ್ಟ್ರದ ಹಣ ಇತರ ರಾಷ್ಟ್ರಗಳ ಹಣಗಳಿಗೆ ವಿನಿಮಯವಾಗುವ ರೀತಿನೀತಿಗಳ ವಿಶೇಷ ವಿವೇಚನೆ ಅಗತ್ಯ. ಅಂತರರಾಷ್ಟ್ರೀಯ ವ್ಯಾಪಾರ, ಸಾಗಣೆಯಲ್ಲಿ ವಿದೇಶೀ ವಿನಿಮಯ ದರ ಹಾಗೂ ವ್ಯವಸ್ಥೆಯ ಪಾತ್ರ ಅತಿ ಮುಖ್ಯವಾದುದು. ಅಲ್ಲದೆ, ಆಮದು ರಫ್ತುಗಳು, ವಿದೇಶೀ ಬಂಡವಾಳ, ಸಾರಿಗೆ ವ್ಯವಸ್ಥೆ, ವಿದೇಶೀಯರು ದೇಶಕ್ಕೆ ಬರುವುದು, ನೆಲೆಸುವುದು ಮತ್ತು ಆರ್ಥಿಕೋದ್ಯಮ ನಡೆಸುವುದು, ದೇಶೀಯರು ಇತರ ದೇಶಗಳಿಗೆ ಹೋಗಿ ನೆಲೆಸುವುದು-ಇತ್ಯಾದಿ ವಿಷಯಗಳ ಬಗ್ಗೆ ಒಂದೊಂದು ರಾಷ್ಟ್ರವೂ ತನ್ನದೇ ಆದ ವಿಧಾಯಕಗಳನ್ನೂ ನಿಯಂತ್ರಣ ಕ್ರಮಗಳನ್ನೂ ನಿರ್ಮಿಸಿದೆ. ಅಂತರರಾಷ್ಟ್ರೀಯ ಆರ್ಥಿಕ ವ್ಯವಹಾರಗಳಿಗೆ ವಿಶೇಷವಾಗಿ ಸಂಬಂಧಿಸಿದ ಇಂಥ ಅಂಶಗಳು ಭಾವಗರ್ಭಿತವಾಗಿವೆ. ಆರ್ಥಿಕ ಸಿದ್ಧಾಂತಗಳ ಅನ್ವೇಷಣೆಯಲ್ಲಿ ಈ ವಿಶೇಷ ಅಂಶಗಳಿಗೆ ಪ್ರತ್ಯೇಕ ಪ್ರಾಮುಖ್ಯ ನೀಡಬೇಕಾದುದು ಅವಶ್ಯ. ಈ ಅನ್ವೇಷಣೆಯ ಫಲವಾಗಿ ಹೊರಬಿದ್ದಿರುವ ಅಂತರರಾಷ್ಟ್ರೀಯ ವ್ಯಾಪಾರಸಿದ್ಧಾಂತಗಳ ವಿಭಾಗ ಅರ್ಥಶಾಸ್ತ್ರದ ಒಂದು ಮುಖ್ಯಭಾಗ. ಆಮದು ರಫ್ತು ಪಟ್ಟಗಳೊಳಗೆ ಸೇರುವ ಸರಕುಗಳು, ಆಮದು ರಫ್ತು ವ್ಯಾಪಾರಮಾರ್ಗಗಳು, ಈ ವ್ಯಾಪಾರದ ಪ್ರಮಾಣ ಮತ್ತು ಬೆಲೆ, ಇಂಥ ವ್ಯಾಪಾರದ ಒಟ್ಟು ಲಾಭ ಮತ್ತು ಅದರ ಹಂಚಿಕೆ, ವಾಣಿಜ್ಯನೀತಿ, ಅಂತರರಾಷ್ಟ್ರೀಯ ಲೇಣೆ-ದೇಣೆ ಪಟ್ಟಿ-ಇತ್ಯಾದಿ ವಿಷಯಗಳು ಅಂತರರಾಷ್ಟ್ರೀಯ ಸಿದ್ಧಾಂತ ನಿರೂಪಣೆಯಲ್ಲಿ ಪರಿಶೀಲನೆಗೆ ಬರುವ ವಿಷಯಗಳು.

ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಸೇರುವ ಸರಕುಗಳನ್ನು ಗುರುತಿಸಲು ಡೇವಿಡ್ ರಿಕಾರ್ಡೊ ಎಂಬ ಪ್ರಾಚೀನ ಅರ್ಥಶಾಸ್ತ್ರಜ್ಞ ತೌಲನಿಕ ವೆಚ್ಚ ನಿಯಮವೊಂದನ್ನು (ಥಿಯರಿ ಆಫ್ ಕಂಪ್ಯಾರಟಿವ ಕಾಸ್ಟ್ಸ್) ನಿರೂಪಿಸಿದ. ರಾಷ್ಟ್ರ-ರಾಷ್ಟ್ರಗಳ ವ್ಯಾಪಾರ ಅನಿರ್ಬಂಧವಾಗಿರುವ ಸ್ಥಿತಿಯಲ್ಲಿ, ಪ್ರತಿರಾಷ್ಟ್ರವೂ ಯಾವ ಸರಕುಗಳ ಉತ್ಪಾದನೆಯಲ್ಲಿ ಪ್ರವೀಣತೆ ಪಡೆದು, ಆ ಸರಕುಗಳನ್ನು ಇತರ ರಾಷ್ಟ್ರಗಳಿಗೆ ರಫ್ತು ಮಾಡುವುದು, ಮತ್ತು ಇತರ ರಾಷ್ಟ್ರಗಳು ಯಾವುದನ್ನು ಹೆಚ್ಚು ಸುಲಭ ವೆಚ್ಚದಲ್ಲಿ ತಯಾರು ಮಾಡಬಲ್ಲವೋ ಅವುಗಳನ್ನು ಆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವುದು-ಎಂಬುದೇ ಈ ನಿಯಮದ ಸಾರಾಂಶ. ಡೇವಿಡ್ ರಿಕಾರ್ಡೊ ನೀಡಿರುವ ಕೆಳಗಣ ಉದಾಹರಣೆ ಈ ನಿಯಮವನ್ನು ಸ್ಪಷ್ಟಗೊಳಿಸುವುದು.  

ಇಂಗ್ಲೆಂಡಿನಲ್ಲಿ 1 ಗ್ಯಾಲನ್ ದ್ರಾಕ್ಷಾರಸದ ಉತ್ಪಾದನೆಯ ವೆಚ್ಚ 120 ಗಂಟೆಗಳ ಕೆಲಸವಾದರೆ ಪೋರ್ಚುಗಲ್ಲಿನಲ್ಲಿ ಕೇವಲ 80 ಗಂಟೆ ಕೆಲಸ. 1 ಗಜ ಬಟ್ಟೆಯನ್ನು ಮಾಡಲು ಇಂಗ್ಲೆಂಡಿನಲ್ಲಿ 100 ಗಂಟೆಗಳ ಕೆಲಸ ವ್ಯಯವಾಗುವಲ್ಲಿ ಪೋರ್ಚುಗಲ್ಲಿನಲ್ಲಿ 90 ಗಂಟೆಗಳ ಕೆಲಸ ಸಾಕು. ಪೋರ್ಚುಗಲ್ ದ್ರಾಕ್ಷಾರಸ ಮತ್ತು ಬಟ್ಟೆ ಎರಡನ್ನೂ ಇಂಗ್ಲೆಂಡಿಗಿಂತ ಸುಲಭ ವೆಚ್ಚದಲ್ಲಿ ತಯಾರಿಸಬಲ್ಲದು; ಆದರೆ ಹೋಲಿಕೆ ವೆಚ್ಚದ ಪ್ರಕಾರ ಪೋರ್ಚುಗಲ್ಲು ದ್ರಾಕ್ಷಾರಸವನ್ನೂ ಇಂಗ್ಲೆಂಡ್ ಬಟ್ಟೆಯನ್ನೂ ಹೆಚ್ಚು ಸುಲಭ ವೆಚ್ಚದಲ್ಲಿ ತಯಾರಿಸಬಲ್ಲವು. ಎರಡು ಸರಕುಗಳೂ ಆಯಾ ರಾಷ್ಟ್ರಗಳಲ್ಲಿಯೇ ತಯಾರಾಗುವುದಾದರೆ, ದ್ರಾಕ್ಷಾರಸ ಮತ್ತು ಬಟ್ಟೆಯ ಉತ್ಪಾದನಾ ವೆಚ್ಚಗಳು ಇಂಗ್ಲೆಂಡಿನಲ್ಲಿ 120:100 ಪ್ರಮಾಣದಲ್ಲಿಯೂ ಪೋರ್ಚುಗಲ್ಲಿನಲ್ಲಿ 80:90 ಇರುವುವು. ಅಂದಮೇಲೆ 1 ಘಟಕ ದ್ರಾಕ್ಷಾರಸಕ್ಕೆ ಪ್ರತಿಯಾಗಿ 0.88 ಘಟಕಕ್ಕಿಂತ ಸ್ವಲ್ಪ ಹೆಚ್ಚು ಪ್ರಮಾಣದ ಬಟ್ಟೆ ಪಡೆಯುವುದಾದರೆ  ಹಾಗೆ ವಿನಿಮಯ ಮಾಡಿಕೊಳ್ಳುವುದು ಪೋರ್ಚುಗಲ್ಲಿಗೆ ಲಾಭಕರವಾಗುವುದು. ಇಂಗ್ಲೆಂಡಿನಲ್ಲಿ 1 ಘಟಕ ದ್ರಾಕ್ಷಾರಸ 1.2 ಘಟಕ ಬಟ್ಟೆಗೆ ಸಮನಾಗುವುದರಿಂದ ಈ ರೀತಿಯ ವಿನಿಮಯಕ್ಕೆ ಇಂಗ್ಲೆಂಡು ಸಿದ್ಧವಿರುವುದು; ಹೀಗೆಯೇ ಇಂಗೆಂಡು 1.2 ಘಟಕಕ್ಕಿಂತ ಸ್ವಲ್ಪ ಕಡಿಮೆ ಬಟ್ಟೆ ಕೊಡುವುದರಿಂದ 1 ಘಟಕ ದ್ರಾಕ್ಷರಸ ಪಡೆಯುವುದಾದರೆ ಅದಕ್ಕೂ ಲಾಭವಾಗುವುದು. ಹೀಗೆ 1 ಘಟಕ ದ್ರಾಕ್ಷರಸಕ್ಕೆ ಪ್ರತಿಯಾಗಿ 0.88 ಮತ್ತು 1.2 ಘಟಕಗಳ ಒಳಗಿನ ಯಾವುದೇ ವಿನಿಮಯ ದರ ಏರುವುದಾದರೂ ಎರಡು ರಾಷ್ಟ್ರಗಳಿಗೂ ಒಟ್ಟಿನಲ್ಲಿ ಹೆಚ್ಚು ಲಾಭವಾಗುವುದು. ಪೋರ್ಚುಗಲ್ಲು ಅದರ ಉತ್ಪನ್ನಸಾಧನಗಳನ್ನು ಬಟ್ಟೆ ಉತ್ಪಾದನೆಯಲ್ಲಿಯೂ ಉಪಯೋಗಿಸುವುದರಿಂದ ಇವುಗಳನ್ನು ಪರಸ್ಪರವಾಗಿ ವಿನಿಮಯ ಮಾಡಿಕೊಳ್ಳುವುದರಿಂದಲೂ ಹೆಚ್ಚು ಪ್ರಯೋಜನ ಉಂಟಾಗುವುದು. ಇದೇ ತೌಲನಿಕ ವೆಚ್ಚ ನಿಯಮ.

ರಿಕಾರ್ಡೊ ಪ್ರತಿಪಾದಿಸಿರುವ ರೂಪದಲ್ಲಿ ಸಿದ್ಧಾಂತ ಅನೇಕ ಆಕ್ಷೇಪಣೆಗಳಿಗೆ ಒಳಗಾಗಿದೆ. ಸಿದ್ಧಾಂತವನ್ನು ಎರಡು ಸರಕು, ಎರಡು ರಾಷ್ಟ್ರಗಳಿಗೆ ಮಾತ್ರ ಅನ್ವಯಿಸಿರುವುದು, ಶ್ರಮವೆಚ್ಚದ ಆಧಾರದ ಮೇಲೆ ವೆಚ್ಚವನ್ನು ಗಳಿಸಿರುವುದು, ಸಾರಿಗೆ ವೆಚ್ಚ ನಿರ್ಲಕ್ಷಿಸಿರುವುದು. ಹೆಚ್ಚುವರಿ ಅಥವಾ ಇಳಿವರಿ ವೆಚ್ಚಗಳ ನಿಯಮಗಳ ಆಚರಣೆಯನ್ನು ಅಳವಡಿಸದುದು-ಇತ್ಯಾದಿ ಅಂಶಗಳಿಗೆ ಈ ಆಕ್ಷೇಪಗಳು ಸಂಬಂಧಿಸಿವೆ. ಇಂಥ ಆಕ್ಷೇಪಣೆಗಳಿಗೆ ಒಳಗಾಗಿರುವುದರಿಂದ ಈ ಪ್ರಾಚೀನಪಂಥದ ಮಾರ್ಗವನ್ನು ಬಿಟ್ಟು ಸಾಮಾನ್ಯ ಸಮತೋಲನ ವಿಶ್ಲೇಷಣೆಯ (ಜನರಲ್ ಈಕ್ವಿಲಿಬ್ರಿಯಂ ಅನ್ಯಾಲಿಸಿಸ್) ಅನುಸಾರವಾಗಿ ಅಂತರರಾಷ್ಟ್ರೀಯ ವ್ಯಾಪಾರದ ತಳಹದಿಯನ್ನು ಅನ್ವೇಷಿಸುವ ಬೇರೆ ಮಾರ್ಗವನ್ನು ಹಿಡಿದಿರುವವರಲ್ಲಿ ಬರ್ಟಿಲ್ ಓಹ್ಲಿನ್ ಎಂಬ ಅರ್ಥಶಾಸ್ತ್ರಜ್ಷ ಅತಿಮುಖ್ಯದವನು. ಆದರೆ, ಅನೇಕ ಇತರ ಅರ್ಥಶಾಸ್ತ್ರಜ್ಞರು ರಿಕಾರ್ಡೊನ ವಾದವನ್ನೇ ಮುಂದುವರಿಸಿರುತ್ತಾರೆ. ಅವರು ಸುಲಭ ನಿರೂಪಣೆಗಾಗಿ ಮಾಡಿರುವ ಊಹೆಗಳನ್ನು (ಅಸಮ್‍ಷನ್ಷ್) ಬಿಟ್ಟು ಇದರಿಂದ ಸಿದ್ಧಾಂತದಲ್ಲಿ ಆಗುವ ಸೂಕ್ಷ್ಮ ಬದಲಾವಣೆಗಳನ್ನು ತೋರಿಸಿಕೊಟ್ಟಿರುತ್ತಾರೆ, ಅಭಿವೃದ್ಧಿ ಅರ್ಥಶಾಸ್ತ್ರ (ಗ್ರೋತ್ಸ್ ಎಕನಾಮಿಕ್ಸ್) ಅಧ್ಯಯನದಲ್ಲಿ ಹೋಲಿಕೆ ವೆಚ್ಚ ಸಿದ್ಧಾಂತವನ್ನು ಹೆಚ್ಚು ಕ್ರಿಯಾತ್ಮಕ (ಡೈನಾಮಿಕ್ಸ್) ದೃಷ್ಟಿಯಿಂದ ನೋಡಲಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಒಂದು ರಾಷ್ಟ್ರದ ವಿವಿಧ ಸರಕುಗಳ ಹೋಲಿಕೆ ವೆಚ್ಚ ಸೂಚಿಸುವ ಪ್ರಮಾಣಗಳು ಅಭಿವೃದ್ಧಿಯ ಸಾಗಣೆಯಲ್ಲಿ ಹೇಗೆ ವ್ಯತ್ಯಾಸವಾಗುವುವು, ಇವುಗಳಿಂದ ಆಮದು-ರಫ್ತು ನಮೂನೆ ಹೇಗೆ ಬದಲಾಯಿಸುವುದು ಎಂಬಂಥ ಅಂಶಗಳು ಸ್ವಾರಸ್ಯವಾದ ವಿಷಯಗಳಾಗಿವೆ. ಒಟ್ಟಿನಲ್ಲಿ ಹೇಳುವುದಾದರೆ ಅಂತರರಾಷ್ಟ್ರೀಯ ವ್ಯಾಪಾರಸಿದ್ಧಾಂತ ನಿರೂಪಣೆ ವಿಶ್ವವ್ಯಾಪಾರದ ಸ್ವರೂಪವನ್ನು ತಿಳಿಯಲು ಸಹಾಯಕವಾಗಿದೆ.

ಹೋಲಿಕೆ ವೆಚ್ಚದ ಸೂಕ್ಷ್ಮಸ್ವರೂಪದ ಸಿದ್ಧಾಂತಕ್ಕೆ ಅನುಸಾರವಾಗಿ ನಡೆಯುವ ಉತ್ಪಾದನಾಕ್ರಮದಿಂದ ಪ್ರಪಂಚದ ಆರ್ಥಿಕಸಾಧನಗಳನ್ನು ಹೆಚ್ಚು ಮಿತವ್ಯಯದಿಂದ ಉಪಯೋಗಿಸಿದಂತೆ ಆಗುವುದು. ಈ ಮಿತವ್ಯಯದ ಲಾಭ ಅಂತರರಾಷ್ಟ್ರೀಯ ವ್ಯಾಪಾರದ ಫಲವಾಗಿರುತ್ತದೆ. ಈ ಒಟ್ಟು ಲಾಭ ಆಮದು-ರಫ್ತು ರಾಷ್ಟ್ರಗಳಲ್ಲಿ ಹೇಗೆ ಹಂಚಿಕೆಯಾಗುವುದು ಎಂಬುದು ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಸಂಬಂಧಿಸಿದ ಇನ್ನೊಂದು ಮುಖ್ಯ ಪ್ರಶ್ನೆ. ಈ ಲಾಭಹಂಚಿಕೆ ಆಮದು-ರಫ್ತು ವಿನಿಮಯ ಸಂಬಂಧಗಳನ್ನು ಅವಲಂಬಿಸಿದೆ. ಆಮದು-ರಫ್ತು ಸಂಬಂಧ ರಫ್ತು ಮಾಡಲಾಗುವ ಒಂದು ಘಟಕಕ್ಕೆ ಪ್ರತಿಯಾಗಿ ಲಭಿಸುವ ಆಮದು ಪ್ರಮಾಣವನ್ನು ಸೂಚಿಸುವುದು. ಅಂದಮೇಲೆ ಆಮದು-ರಫ್ತು ಸಂಬಂಧ ವ್ಯತ್ಯಾಸವಾದಂತೆ ಅಂತರರಾಷ್ಟ್ರೀಯ ವ್ಯಾಪಾರದ ಲಾಭಹಂಚಿಕೆಯಲ್ಲಿಯೂ ವ್ಯತ್ಯಾಸವಾಗುವುದು. ರಫ್ತುಮಾಡುವ ಸರಕುಗಳ ಬೇಡಿಕೆ ಹೆಚ್ಚು ಸ್ಥಿತಿಸ್ಥಾಪಕತ್ವ ಹೊಂದಿ ಆಮದು ಮಾಡಿಕೊಳ್ಳುವ ಸರಕುಗಳ ಬೇಡಿಕೆ ಸ್ಥಿತಿಸ್ಥಾಪಕತ್ವರಹಿತವಾಗಿರುವ ಪರಿಸ್ಥಿಯಲ್ಲಿ ಆಮದು-ರಫ್ತು ಸಂಬಂಧ ನಮಗೆ ಪ್ರತಿಕೂಲವಾಗುವುದು; ಅಂದರೆ, ಅಂತರರಾಷ್ಟ್ರೀಯ ವ್ಯಾಪಾರ ಲಾಭದಲ್ಲಿ ಸಿಗುವ ಭಾಗ ಕಡಿಮೆಯಾಗುವುದು. ದೀರ್ಘಕಾಲಾವಧಿಯ ಆಮದು-ರಫ್ತು ಸಂಬಂಧ ಹಚ್ಚಾ ಸರಕುಗಳನ್ನು ರಫ್ತುಮಾಡುವ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಪ್ರತಿಕೂಲವಾಗಿರುವುದು, ವಾದ ವಿವಾದಗಳಿಗೆ ಎಡಕೊಟ್ಟಿರುವ ಒಂದು ಅಂತರರಾಷ್ಟ್ರೀಯ ವ್ಯಾಪಾರ ಸಮಸ್ಯೆಯಾಗಿದೆ. ಆಮದು-ರಫ್ತು ಸಂಬಂಧದ ಸಮಸ್ಯೆ ಕ್ಲಿಷ್ಟವಾದುದು. ಇದರ ಸೂಕ್ಷ್ಮ ಪರಿಶೀಲನೆಯಲ್ಲಿ ಆಮದು-ರಫ್ತು ಸರಕು ಸಂಬಂಧಗಳೂ. ಆಮದು-ರಫ್ತು ಮೊತ್ತಗಳ ಮೌಲ್ಯ ಸಂಬಂಧಗಳು, ಆಮದು-ರಫ್ತು ಉತ್ಪಾದನಾಂಗ ಸಂಬಂಧಗಳು ಎಂಬ ವಿವಿಧ ರೂಪದ ಆಮದು-ರಫ್ತು ಸಂಬಂಧಗಳನ್ನೂ ಇವುಗಳನ್ನು ನಿರ್ಣಯಿಸುವ ವಿವಿಧ ಅಂಶಗಳನ್ನೂ ಇವುಗಳು ಸೂಚಿಸುವ ಅರ್ಥವನ್ನೂ ಪರಿಶೀಲಿಸಬೇಕಾಗುವುದು.

ಅಂತರರಾಷ್ಟ್ರೀಯ ವ್ಯಾಪಾರದಿಂದ ಉದ್ಭವವಾಗುವ ಲೇಣೆ-ದೇಣೆಗಳು ರಾಷ್ಟ್ರವೊಂದರ ಒಟ್ಟು ವಿದೇಶೀ ಲೇಣೆ-ದೇಣೆಗಳಲ್ಲಿ ಮುಖ್ಯಭಾಗವಾಗಿರುವುವು. ಆದುದರಿಂದ ಅಂತರರಾಷ್ಟ್ರೀಯ ಲೇಣೆ-ದೇಣೆ ಪಟ್ಟಿ ಸರಿತೂಗಿಸುವುದರಲ್ಲಿ ರಫ್ತು ಆಮದುಗಳು ಹೆಚ್ಚಿನ ಪರಿಣಾಮ ಹೊಂದಿರುತ್ತವೆ. ದೇಶದ ರಫ್ತಿನ ಬೆಲೆ ಆಮದಿನ ಬೆಲೆಗಿಂತಲೂ ಹೆಚ್ಚಾಗಿರುವ ಸ್ಥಿತಿಯನ್ನು ರಫ್ತು ಹೆಚ್ಚಳವಿರುವ ವ್ಯಾಪಾರಸ್ಥಿತಿ ಅಥವಾ ಅನುಕೂಲ ವ್ಯಾಪಾರಸ್ಥಿತಿ ಎಂದೂ ಆಮದಿನ ಬೆಲೆ ರಫ್ತಿನ ಬೆಲೆಗಿಂತಲೂ ಹೆಚ್ಚಾಗಿರುವುದನ್ನು ಆಮದು ಹೆಚ್ಚಳವಿರುವ ವ್ಯಾಪಾರಸ್ಥಿತಿ ಅಥವಾ ಪ್ರತಿಕೂಲ ವಿದೇಶ ವ್ಯಾಪಾರಸ್ಥಿತಿ ಎಂದೂ ಹೇಳಲಾಗಿದೆ. ಆಮದಿಗಿಂತ ರಫ್ತು ಹೆಚ್ಚಾಗಿರುವಾಗ ನಮ್ಮ ದೇಶದ ವಿದೇಶೀ ಹಣದ ಲೆಕ್ಕಕ್ಕೆ  ವಿದೇಶೀಹಣಗಳು ಜಮಾ ಆಗುವುವು; ಆದರೆ, ಆಮದು ಹೆಚ್ಚಳವಿರುವಾಗ ನಮ್ಮ ವಿದೇಶೀ ಹಣದ ಶುಲ್ಕ ಇಳುವರಿಯಾಗುವುದು.

ಇಂದಿನ ಪ್ರಪಂಚದಲ್ಲಿ ಆರ್ಥಿಕವಾಗಿ ಮುಂದುವರಿದಿರುವ ಕೆಲವು ರಾಷ್ಟ್ರಗಳೂ ಹಿಂದುಳಿದಿರುವ ಅನೇಕ ರಾಷ್ಟ್ರಗಳೂ ಬೇರೆಬೇರೆ ಕಾರಣಗಳಿಂದಾಗಿ ರಫ್ತು ಹೆಚ್ಚಳ ಹೊಂದಲೂ ಬಯಸುತ್ತವೆ. ಅಮೆರಿಕ ಮತ್ತು ಬ್ರಿಟಿನ್‍ಗಳಿಗೆ ಅವುಗಳ ಹಣವಾದ ಡಾಲರ್ ಮತ್ತು ಪೌಂಡುಗಳ ಅಂತರರಾಷ್ಟ್ರೀಯ ಅಂತಸ್ಥನ್ನು ಕಾಪಾಡಿಕೊಳ್ಳುವ ಸಮಸ್ಯೆ ಇದೆ. ಕಡಿಮೆ ಪ್ರಮಾಣದಲ್ಲಿ ಆದರೂ ಫ್ರಾನ್ಸ್ ಜರ್ಮನಿಗಳಂಥ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಿಗೂ ಇಂಥದೇ ಯೋಜನೆ ಇದೆ. ಅನೇಕ ರಾಷ್ಟ್ರಗಳು ಈ ಕೆಲವು ರಾಷ್ಟ್ರೀಯ ಹಣಗಳನ್ನು ಅಂತರರಾಷ್ಟ್ರೀಯ ವ್ಯವಹಾರ ತೀರುವೆಗೆ ಒಪ್ಪಿವೆ. ಈ ಒಪ್ಪಿಗೆ ಈ ಹಣಗಳ ಭದ್ರತೆಗೆ ಮೇಲೆ ನಿಂತಿದೆ. ಈ ಭದ್ರತೆಯ ಸಾಕಷ್ಟು ಚಿನ್ನ ಮತ್ತು ವಿದೇಶೀವಿನಿಯಮ ಶಿಲ್ಕುಗಳ ಬೆಂಬಲ ಅವಶ್ಯ. ಇದನ್ನು ಗಳಿಸಲು ಆ ರಾಷ್ಟ್ರಗಳು ರಫ್ತು ಹೆಚ್ಚಳವನ್ನು ಬಯಸುವುವು. ಅಲ್ಲದೆ, ಈ ಮುಂದುವರಿದಿರುವ ರಾಷ್ಟ್ರಗಳಲ್ಲಿ ಉತ್ಪಾದನಾಶಕ್ತಿಯ ತೀವ್ರ ಬೆಳೆವಣಿಗೆಯಿಂದ ಅನೇಕ ಸರಕುಗಳ ಹೇರಳ ಉತ್ಪಾದನೆಗೆ ಅವಕಾಶವಿರುವುದು. ಈ ಸಂದರ್ಭದಲ್ಲಿ ವಿದೇಶೀ ಮಾರುಕಟ್ಟೆಯನ್ನು ಸಾಕಷ್ಟು ವಿಸ್ತರಿಸದಿದ್ದರೆ ನಿರುದ್ಯೋಗದ ಸಮಸ್ಯೆ ಉಂಟಾಗುವ ಸಂಭವವುಂಟು.

ಹಿಂದುಳಿದಿರುವ ರಾಷ್ಟ್ರಗಳು 2ನೆಯ ಮಹಾಯುದ್ಧದ ತರುವಾಯ ತೀವ್ರ ಆರ್ಥಿಕಾಭಿವೃದ್ಧಿ ಸಾಧಿಸಲು ಹವಣಿಸುತ್ತಿವೆ. ಈ ಪ್ರಯತ್ನದಲ್ಲಿ ಅವುಗಳು ಮುಂದುವರಿದಿರುವ ರಾಷ್ಟ್ರಗಳಿಂದ ಯಂತ್ರ, ಯಂತ್ರೋಪಕರಣಗಳು ಇತ್ಯಾದಿ ಸರಕುಳನ್ನೂ ಅನೇಕ ವಿಧದ ನಿಪುಣರ ಸೇವೆಗಳನ್ನೂ ಪಡೆಯಬೇಕಾಗಿದೆ. ಹೀಗೆ ನೋಡುವುದಾದರೆ ಆಮದುಗಳು ಆರ್ಥಿಕಾಭಿವೃದ್ಧಿಯಲ್ಲಿ ಮುಖ್ಯ ಪಾತ್ರ ಹೊಂದಿರುವುದು ವ್ಯಕ್ತವಾಗುವುದು. ಈ ಆಮದುಗಳಿಗೆ ಬೆಲೆ ನೀಡಲು ಸಾಕಾಗುವಷ್ಟು ವಿದೇಶೀ ಹಣವನ್ನು ರಫ್ತುಗಳ ಮೂಲಕ ಗಳಿಸುವುದು ಈ ರಾಷ್ಟ್ರಗಳಿಗೆ ಕಷ್ಟವಾಗುವುದು. ಏಕೆಂದರೆ, ಅವುಗಳು ಆಗಲೇ ರಫ್ತುಮಾಡುತ್ತಿರುವ ಕಚ್ಚಾ ಸರಕುಗಳಿಗೂ ಆಹಾರ ಪದಾರ್ಥಗಳಿಗೂ ವಿದೇಶೀ ಬೇಡಿಕೆ ತೀವ್ರವಾಗಿ ಹೆಚ್ಚುವುದೆಂದು ನಿರೀಕ್ಷಿಸಲಾಗುವುದಿಲ್ಲ. ಹೊಸ ರಫ್ತುಗಳನ್ನು ಬೆಳೆಸುವ ಕಾರ್ಯದಲ್ಲಿ ಪಟ್ಟಭದ್ರ ಹಿತಗಳ ತೀವ್ರ ಪೈಪೋಟಿ ಎದುರಿಸಬೇಕಾಗುವುದು. ಮುಂದುವರಿದಿರುವ ರಾಷ್ಟ್ರಗಳು ಸಾಧಿಸಿರುವ ಉತ್ಪಾದನಾವೆಚ್ಚದ ಮಿತವ್ಯಯವನ್ನು ಈ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಕೈಗಾರಿಕಾಭಿವೃದ್ಧಿಯ ಪ್ರಥಮ ಹಂತಗಳಲ್ಲಿ ಸಾಧಿಸಲು ಆಗದಿರುವುದರಿಂದ ರಫ್ತು ಮಾರುಕಟ್ಟೆಗಳನ್ನು ಹಿಡಿಯುವುದು ಬಹಳ ಕಷ್ಟವಾಗುವುದು. ತಾತ್ಕಾಲಿಕವಾಗಿ ವಿದೇಶೀ ಸಾಲಗಳ ಮೂಲಕ ಆಮದು ಹೆಚ್ಚಳಕ್ಕೆ ನೀಡಬೇಕಾದ ಹಣವನ್ನು ಪಾವತಿ ಮಾಡುವುದು ಅಭಿವೃದ್ಧಿಪಥದಲ್ಲಿರುವ ರಾಷ್ಟ್ರಗಳು ಸಾರ್ವತ್ರಿಕವಾಗಿ ಅನುಸರಿಸುತ್ತಿರುವ ಮಾರ್ಗವಾಗಿದೆ. ಆದರೆ, ಈ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳುವುದರಲ್ಲಿಯೂ ಆಗಲೇ ತೆಗೆದಿರುವ ಸಾಲಗಳ ತೀರುವೆಗೂ ರಫ್ತುವ್ಯಾಪಾರವನ್ನು ತೀವ್ರವಾಗಿ ಹೆಚ್ಚಿಸುವುದು ಈ ರಾಷ್ಟ್ರಗಳ ನೀತಿಯಾಗಿದೆ. ಹೀಗೆ ರಫ್ತುಗಳನ್ನು ಹೆಚ್ಚಿಸಿ ಆಮದುಗಳ ಹೆಚ್ಚುವರಿಯನ್ನು ತಡೆಹಿಡಿದು ಅಭಿವೃದ್ಧಿಗೆ ತೊಂದರೆಯಾಗದಂತೆ ಕಾಲಕ್ರಮೇಣ ರಫ್ತು ಹೆಚ್ಚಳ ಹೊಂದುವುದು ಈ ರಾಷ್ಟ್ರಗಳ ಗುರಿ ಆಗಿದೆ.

ಹೀಗೆ ರಫ್ತು ಹೆಚ್ಚಳ ವಿದೇಶೀ ವಿನಿಮಯ ವ್ಯವಸ್ಥೆಯ ಮತ್ತು ಆರ್ಥಿಕಾಭಿವೃದ್ಧಿಯ ದೃಷ್ಟಿಯಿಂದ ಮುಂದುವರಿದಿರುವ ಮತ್ತು ಹಿಂದುಳಿದಿರುವ ರಾಷ್ಟ್ರಗಳಿಗೆ ಅಂತರರಾಷ್ಟ್ರೀಯ ವ್ಯಾಪಾರದ ಮುಖ್ಯ ಸಮಸ್ಯೆಯಾಗಿದೆ. ಆಯಾ ರಾಷ್ಟ್ರಗಳು ಕೇವಲ ರಾಷ್ಟ್ರೀಯತಾದೃಷ್ಟಿಯಿಂದ ಈ ಸಮಸ್ಯೆಯನ್ನು ಪರಿಹರಿಸಲು ಬಿಡುವುದು ಪ್ರಪಂಚದಲ್ಲಿ ಆರ್ಥಿಕ ಅಶಾಂತಿ ಹಾಗೂ ಗೊಂದಲಕ್ಕೆ ಕಾರಣವಾಗುವುದು. ಅದೃಷ್ಟ ವಶದಿಂದ ಈ ಬಗ್ಗೆ ಸ್ವಲ್ಪಮಟ್ಟಿಗಾದರೂ ಅಂತರರಾಷ್ಟ್ರೀಯ ದೃಷ್ಟಿಯನ್ನು ಪೋಷಿಸುತ್ತಿರುವ ಕೆಲವು ಸಂಸ್ಥೆಗಳು ಏರ್ಪಟ್ಟಿವೆ. ಇದರಲ್ಲಿ ಸುಂಕಗಳ ಹಾಗೂ ವ್ಯಾಪಾರದ ಸಾರ್ವತ್ರಿಕ ಒಪ್ಪಂದ ಮತ್ತು ವ್ಯಾಪಾರ ಹಾಗೂ ಅಭಿವೃದ್ಧಿಯನ್ನು ಕುರಿತ ಇರ್ಶವಸಂಸ್ಥೆಯ ಸಮ್ಮೇಳನ (ಅಂಕ್‍ಟಾಡ್ Uಓಅಖಿಂಆ)-ಇವುಗಳು ಮುಖ್ಯ ಸಂಸ್ಥೆಗಳಾಗಿವೆ.

19ನೆಯ ಶತಮಾನದಲ್ಲಿ ಸಾಮಾನ್ಯವಾಗಿ ಅಂತರರಾಷ್ಟ್ರೀಯ ವ್ಯಾಪಾರ ಅನಿರ್ಬಂಧ ವ್ಯಾಪಾರನೀತಿಯ (ಫ್ರೀ ಟ್ರೇಡ್ ಪಾಲಿಸಿ) ಆಧಾರದ ಮೇಲೆ ರೂಪುಗೊಂಡಿದ್ದಿತು. ಆದರೆ ಶತಮಾನದ ಆದಿ ಭಾಗದಲ್ಲಿ ಬೆಳೆದು ಬರುತ್ತಿದ್ದ ರಕ್ಷಣಾ ಸುಂಕ ನೀತಿಯ (ಪ್ರೊಟೆಕ್ಷನಿಸ್ಟ್ ಪಾಲಿಸಿ) ಜೊತೆಗೆ 1930ರ ದಶಕದಲ್ಲಿ ಆಮದು ರಫ್ತು ವ್ಯಾಪಾರಗಳು ಕೇವಲ ನೀಡಿಕೆ-ಬೇಡಿಕೆ ಶಕ್ತಿಗಳ ಅನುಸಾರವಾಗಿ ನಡೆಯದಂತೆ ಮಾಡಿದ ಅನೇಕ ರೀತಿಯ ನಿಯಂತ್ರಣ ಕ್ರಮಗಳು ಜಾರಿಗೆ ಬಂದುವು. ರಕ್ಷಣಾ ಸುಂಕ, ಪಾಲುಪದ್ಧತಿ (ಕೋಟ ಸಿಸ್ಟಮ್), ಆಮದು ಅಥವಾ ರಫ್ತು ಪ್ರತಿಬಂಧನ, ಸುಂಕ ತಾರತಮ್ಯಗಳು, ವಿದೇಶೀ ವಿನಿಮಯ ನಿಯಂತ್ರಣಗಳು ದ್ವಿಪಕ್ಷೀಯ (ಬೈಲ್ಯಾಟರಲ್) ವ್ಯಾಪರ ಒಪ್ಪಂದಗಳು, ಮಾರುಕಟ್ಟೆ ಕೆಡಿಸುವ ಉದ್ಯೋಗ-ಇತ್ಯಾದಿ ಅನೇಕ ರೂಪಗಳಲ್ಲಿ ಅಂತರರಾಷ್ಟ್ರೀಯ ವ್ಯಾಪಾರ ನಿರಾತಂಕವಾಗಿ ಬೆಳೆಯಲಾಗಲಿಲ್ಲ. ತಾತ್ಕಾಲಿಕವಾಗಿ ಈ ಕ್ರಮಗಳು ಕೆಲವು ವೇಳೆ ಅವಶ್ಯವಾಗಿದ್ದರೂ ಒಟ್ಟಿನಲ್ಲಿ ಈ ಕ್ರಮಗಳು ಮಿತಿಮೀರಿದುದರಿಂದ ಸಾರ್ವತ್ರಿಕ ಹಾನಿಯುಂಟಾಗಿದೆ. ಇಂಥ ಕ್ರಮಗಳನ್ನು ಕೂಲಂಕಷವಾಗಿ ವಿಮರ್ಶಿಸಿ, ಉಪಯುಕ್ತ ಬದಲಾವಣೆಗಳನ್ನು ಸೂಚಿಸಿ ಅಂತರರಾಷ್ಟ್ರೀಯ ವ್ಯಾಪಾರವನ್ನು ಅನಿರ್ಬಂಧ ಹಾಗೂ ಸರ್ವತೋಮುಖ ವ್ಯಾಪಾರ ಪದ್ಧತಿಯ (ಮಲ್ಟಿಲ್ಯಾಟರಲ್) ಅನುಸಾರವಾಗಿಯೂ ಆರ್ಥಿಕಾಭಿವೃದ್ಧಿಯ ವಿವಿಧ, ಹಂತಗಳಲ್ಲಿ ಇರುವ ಎಲ್ಲ ರಾಷ್ಟ್ರಗಳ ಸಾರ್ವತ್ರಿಕಹಿತಕ್ಕೆ ಅನುಸಾರವಾಗಿಯೂ ನಡೆಯುವಂತೆ ಮಾಡುವುದೇ ಎರಡನೆಯ ಮಹಾಯುದ್ಧದ ತರುವಾಯದ ಅಂತರರಾಷ್ಟ್ರೀಯ ವ್ಯಾಪಾರ ನೀತಿಯ ಹೆಗ್ಗುರಿಯಾಗಿದೆ.

ಉದಾರವಾಣಿಜ್ಯ ನೀತಿಯ ಆಧಾರದ ಮೇಲೆ ಪ್ರಪಂಚದ ವ್ಯಾಪಾರವನ್ನು ವಿಸ್ತರಿಸುವುದರ ಮೂಲಕ ಎಲ್ಲ ಜನಾಂಗಗಳ ಆರ್ಥಿಕ ಕ್ಷೇಮಾಭಿವೃದ್ಧಿ ಆಗುವಂತೆ ಮಾಡುವ ಉದ್ದೇಶದಿಂದ 1948ರಲ್ಲಿ ಅಂತರರಾಷ್ಟ್ರೀಯ ವ್ಯಾಪಾರ ಸಂಸ್ಥೆಯೊಂದನ್ನು ಸ್ಥಾಪಿಸಲು ಹವಾನಾ ಪ್ರಣಾಳಿಕೆ ಎಂಬ ಕರುಡು ಒಪ್ಪಂದವನ್ನು ತಯಾರಿಸಲಾಯಿತು. ಆದರೆ ಈ ಹಿರಿಯ ಸಂಸ್ಥೆಯ ಸ್ಥಾಪನೆಗೆ ಪ್ರಮುಖ ವ್ಯಾಪಾರೀ ರಾಷ್ಟ್ರಗಳ ಸಮ್ಮತಿ ದೊರೆಯದೆ ಅದು ಅಸ್ತಿತ್ವಕ್ಕೆ ಬರಲಿಲ್ಲ. ಇದಕ್ಕೆ ಪ್ರತಿಯಾಗಿ ಅದರಷ್ಟು ವ್ಯಾಪಕವಲ್ಲದ ಸುಂಕ ಹಾಗೂ ವ್ಯಾಪಾರದ ಸಾರ್ವತ್ರಿಕ ಒಪ್ಪಂದವೊಂದು (ಜಿ.ಎ.ಟಿ.ಟಿ.) 1948ರಲ್ಲಿ ಜಾರಿಗೆ ಬಂದಿತು. ಅಂದಿನಿಂದಲೂ ಅಂತರರಾಷ್ಟ್ರೀಯ ವ್ಯಾಪಾರಕ್ಷೇತ್ರದಲ್ಲಿ ಇದು ಆರ್ಥಿಕ ಸಹಕಾರದ ಅತಿ ಮುಖ್ಯಯಂತ್ರವಾಗಿ ಅನೇಕ ವಿಧದಲ್ಲಿ ಅಂತರರಾಷ್ಟ್ರೀಯ ವ್ಯಾಪಾರಾಭಿವೃದ್ಧಿಗೆ ಅನುಕೂಲವಾಗಿದೆ. ಆದರೆ ನಿರೀಕ್ಷಿಸಿದಷ್ಟು ಯಶಸ್ವಿಯಾಗಿ ಮೂಲ ಗುರಿಗಳ ಸಾಧನೆಗೆ ಶ್ರಮಿಸಲು ಇದಕ್ಕೆ ಸಾಧ್ಯವಾಗಿಲ್ಲವೆಂಬ ಆಕ್ಷೇಪಣೆಗೆ ಒಳಗಾಗಿದೆ. ಅಭಿವೃದ್ಧಿಯಾಗುತ್ತಿರುವ ರಾಷ್ಟ್ರಗಳ ರಫ್ತು ವ್ಯಾಪಾರ ಮುಂದುವರಿದಿರುವ ರಾಷ್ಟ್ರಗಳ ರಫ್ತುವ್ಯಪಾರ ಬೆಳೆದಿರುವಂತೆ ಬೆಳೆಯದಿರುವುದು, ಪ್ರಾಥಮಿಕ (ಪ್ರೈಮರಿ) ಉತ್ಪನ್ನಗಳ ಬೆಲೆಗಳಲ್ಲಿ ಅಲ್ಪಾವಧಿ ಏರುಪೇರುಗಳು ಹೆಚ್ಚಾಗಿರುವುದು, ರಾಷ್ಟ್ರಗಳ ವ್ಯಾವಸಾಯಿಕ ರಕ್ಷಣಾನೀತಿಯನ್ನು ಹೆಚ್ಚಾಗಿ ಅನುಸರಿಸುತ್ತಿರುವುದು- ಇದು ಅತಿ ಮುಖ್ಯ ಸಮಸ್ಯೆಗಳು, ಈ ಸಮಸ್ಯೆಗಳ ಬಗ್ಗೆಯೂ ಜಿ.ಎ.ಟಿ.ಟಿ. ಪರಿಶೀಲನೆಗಳನ್ನು ಕೈಗೊಂಡು ಕಾರ್ಯಾಚರಣೆಗಳನ್ನು ರೂಪಿಸುವ ಪ್ರಯತ್ನ ಮಾಡುತ್ತಿರುವುದಾದರೂ ಕಾರ್ಯತಃ ಅನೇಕ ತಡೆಗಳನ್ನು ಅದು ಎದುರಿಸುತ್ತಿದೆ. ಒಟ್ಟಿನಲ್ಲಿ ಅಭಿವೃದ್ಧರಾಷ್ಟ್ರಗಳ ವ್ಯಾಪಾರಸಮಸ್ಯೆಗೆ ಇದರ ಮೂಲಕ ಸೂಕ್ತಪರಿಹಾರ ಲಭಿಸದಿರುವುದೇ ವ್ಯಾಪಾರ ಮತ್ತು ಅಭಿವೃದ್ಧಿಯ ವಿಶ್ವಸಂಸ್ಥೆಯ ಸಮ್ಮೇಳನ ಎಂಬ ವಿಶ್ವಸಂಸ್ಥೆಯ ಉಪಸಂಸ್ಥೆಯ ಜನನಕ್ಕೆ ಕಾರಣವಾಯಿತು. 1964ರಲ್ಲಿ ಕಾರ್ಯಾಚರಣೆ ಆರಂಭಿಸಿದ ಈ ಸಂಸ್ಥೆ ಅಂತರರಾಷ್ಟ್ರೀಯ ವಾಣಿಜ್ಯ ನೀತಿಗೆ ಒಂದು ಹೊಸ ಸ್ಫೂರ್ತಿ ನೀಡುತ್ತಿದೆ. ವ್ಯಾಪಾರ ಹಿಂದುಳಿದಿರುವ ರಾಷ್ಟ್ರಗಳ ಆರ್ಥಿಕಾಭಿವೃದ್ಧಿ ಹೆಚ್ಚು ಶೀಘ್ರವಾಗಿ ನೆರವೇರುವಂತೆ ಮಾಡುವುದರಲ್ಲಿ ಈ ಸಂಸ್ಥೆ ಮಹತ್ವದ ಪಾತ್ರವಹಿಸುವುದೆಂದು ನಿರೀಕ್ಷಿಸಲಾಗಿದೆ.

 

(ಎ.ಪಿ.ಎ¸)