ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರರಾಷ್ಟ್ರೀಯ ಶಾಂತಸೌರವರ್ಷ

ವಿಕಿಸೋರ್ಸ್ದಿಂದ

ಅಂತರರಾಷ್ಟ್ರೀಯ ಶಾಂತಸೌರವರ್ಷ

1964ರ ಜನವರಿ 1 ರಿಂದ 1965ರ ಡಿಸೆಂಬರ್ 31ರ ವರೆಗಿನ 24 ತಿಂಗಳ ಅವಧಿಗೆ ಈ ಹೆಸರಿದೆ. (ಇಂಟರ್‍ನ್ಯಾಷನಲ್ ಕ್ವಯಟ್ ಸನ್ ಇಯರ್-ಐ.ಕ್ಯು.ಎಸ್.ವೈ.). 1957-58ರ ಅವಧಿಯಲ್ಲಿ ನಡೆದ ಅಂತಾರಾಷ್ಟ್ರೀಯ ಭೂಭೌತ ವರ್ಷದಲ್ಲಿ (ಐ.ಜಿ.ವೈ.) ಭೂಗ್ರಹ ಹಾಗೂ ಅದರ ಸುತ್ತಲಿರುವ ವಾತಾವರಣದ ಬಗ್ಗೆ ಭೌತಾನ್ವೇಷಣೆಗಳನ್ನು ಪ್ರಪಂಚದ ಸುಮಾರು 70 ರಾಷ್ಟ್ರಗಳು ಕೈಗೊಂಡಿದ್ದುವು. ಸೂರ್ಯನಲ್ಲಿ ನಡೆಯುವ ಘಟನಾವಳಿಗಳು ಅಧಿಕವಾಗಿದ್ದಾಗ, ಸೂರ್ಯಮಂಡಲದ ಮೇಲಿನ ಜ್ವಾಲಾಜಿಹ್ವೆಗಳು ಮತ್ತು ಉನ್ನತಿಗಳಿಗೆ ಸಂಬಂಧಪಟ್ಟಂತಿದ್ದ ಗರಿಷ್ಠ ಸೌರಕಲೆಗಳ ಆವರ್ತದ ಕಾಲ ಒದಗಿದಾಗ ಸೂರ್ಯನನ್ನು ಪರೀಕ್ಷಿಸಬೇಕೆಂಬುದೇ ಉದ್ದೇಶವಾಗಿದ್ದ ಕಾರಣ ಭೂಭೌತವರ್ಷದ ಅವಧಿಯನ್ನು ಆಯ್ಕೆ ಮಾಡಲಾಯಿತು. ಈ ಅವಧಿಯಲ್ಲಿ ಮಾಡಿದ ವೀಕ್ಷಣೆ, ಅಧ್ಯಯನ ಹಾಗೂ ಸಂಶೋಧನೆ-ಇವುಗಳ ಪರಣಾಮವಾಗಿ ಅಧಿಕ ಪ್ರಮಾಣದಲ್ಲಿ ವಿದ್ಯುತ್ಪೂರಿತ ಅನಿಲಕಣಗಳನ್ನು ಹೊಂದಿರುವ ಪ್ಲಾಸ್ಮಾ ರಾಶಿಯಾದ ಹಾಗೂ ನಿರಂತರ ಕ್ಷೋಭೆಗಳಿಂದ (ಚಟುವಟಿಕೆ) ಕೂಡಿರುವ ಸೂರ್ಯನ ಅನ್ವೇಷಣೆ ಸಾಧ್ಯವಾಯಿತು. ಹಾಗೆಯೇ ಸೂರ್ಯ ಶಾಂತವಾಗಿರುವ-ಅಂದರೆ, ಸೂರ್ಯನಲ್ಲಿ ನಡೆಯುವ ಘಟನೆಗಳ ಹಾಗೂ ಸೌರಕಲೆಗಳ ಕನಿಷ್ಠ ಆವರ್ತದ ಸಮಯವನ್ನೇ 1964-65ರ ಅವಧಿಯಲ್ಲಿ ಶಾಂತಸೌರವರ್ಷವೆಂದು ಆಯ್ಕೆ ಮಾಡಿ ಸೂರ್ಯಾನ್ವೇಷಣೆ ಮಾಡಲಾಯಿತು.

ಶಾಂತಸೌರವರ್ಷದ ಲಾಂಛನವನ್ನು ಚಿತ್ರದಲ್ಲಿ ಕಾಣಬಹುದು. ಈ ಅವಧಿಯಲ್ಲಿ ಸೂರ್ಯನ ವೀಕ್ಷಣೆ ಹಾಗೂ ಸಂಶೋಧನೆ ಎಡೆಬಿಡದೆ ದಿನದ 24 ಘಂಟೆಗಳ ಪರ್ಯಂತ ನಿರಂತರವಾಗಿ ಸಾಗಲು ಪ್ರಪಂಚದ ನಾನಾ ಕಡೆಗಳಲ್ಲಿ ವಿವಿಧ ರೀತಿಯ ವೀಕ್ಷಣಾಲಯಗಳನ್ನು ಸ್ಥಾಪಿಸಲಾಯಿತು. ಈ ಒಂದು ಕಾರ್ಯದಲ್ಲಿ ಪ್ರಪಂಚದ ನೂರಕ್ಕೂ ಹೆಚ್ಚು ರಾಷ್ಟ್ರಗಳು ಪಾಲ್ಗೊಂಡಿದ್ದುವು. ಒಂದು ಕೇಂದ್ರ ಸಂಗ್ರಹಿಸಿದ ಅಂಕಿ ಅಂಶಗಳನ್ನು ಇತರ ಎಲ್ಲ ಕೇಂದ್ರಗಳಿಗೂ ತಿಳಿಸುವ ವ್ಯವಸ್ಥೆಯೂ ಇದ್ದಿತು.

ಈ ಅವಧಿಯಲ್ಲಿ ವಿಕ್ಷಣೆಗಳನ್ನು ನಡೆಸಲು ಅನುಕೂಲವಾಗುವಂತೆ 1962ರಲ್ಲಿ ಹಾರಿಸಿದ ಆರ್ಬಿಟಿಂಗ್ ಸೋಲಾರ್ ಆಬ್ಸರ್‍ವೇಟರಿ (ಒ.ಎಸ್.ಒ.) ಯಂಥ ಕೃತಕ ಉಪಗ್ರಹಗಳ ಸಹಾಯದಿಂದ ಸೂರ್ಯಮಂಡಲದ ಮೇಲಿನ ತೇಜೋ ಪ್ರವಾಹಗಳು (ಸೋಲಾರ್ ಫ್ಲೇರ್ಸ್) ಹಾಗೂ ಅವುಗಳ ಪರಿಣಾಮದಿಂದಾಗಿ ಅಯೋನಾವರಣದಲ್ಲಿನ ಸ್ತರಗಳಲ್ಲಿನ ಬದಲಾವಣೆಗಳನ್ನೂ ಭೂಕಾಂತಕ್ಷೇತ್ರದಲ್ಲಿ ಆಗುವ ಬದಲಾವಣೆಗಳನ್ನೂ ವೀಕ್ಷಿಸಲಾಯಿತು. ಅಲ್ಲದೆ ಅಂಟಾರ್ಕ್‍ಟಿಕ್ ಮತ್ತು ಉತ್ತರ ಧ್ರುವಪ್ರದೇಶದಲ್ಲಿ ಅನೇಕ ಹವಾಮಾನ ಕೇಂದ್ರಗಳನ್ನು ಸ್ಥಾಪಿಸಿ, ಅಧ್ಯಯನ ಮಾಡಲಾಯಿತು.

ಶಾಂತಸೌರವರ್ಷದ ಅವಧಿಯಲ್ಲಿ ಮುಖ್ಯವಾಗಿ ಸೂರ್ಯನ ಬಗ್ಗೆ ನಡೆಸಿದ ವೀಕ್ಷಣೆ, ಅಧ್ಯಯನ ಹಾಗೂ ಸಂಶೋಧನೆಗಳು ಸೂರ್ಯನ ಮೇಲ್ಮೈ ಬಗ್ಗೆ, ಭೂಕಾಂತಕ್ಷೇತ್ರ ಹಾಗೂ ಅದರ ಪ್ರಭಾವದ ಬಗ್ಗೆ, ಭೂಮಿಯನ್ನಾವರಿಸಿರುವ ವಾಯುಮಂಡಲ ಮತ್ತು ಅಯಾನ್‍ಗೋಳ, ವಾನ್ ಅಲನ್ ವಿಕಿರಣ ಪಟ್ಟಿ, ಭೂಕಾಂತ ಧ್ರುವಪ್ರಭೆ-ಮುಂತಾದ ವಿಚಾರಗಳ ಮೇಲೆ ಹೆಚ್ಚಿನ ಬೆಳಕು ಚೆಲ್ಲಿವೆ. ಈ ಅವಧಿಯಲ್ಲಿ ನಡೆದ ಅಭ್ಯಾಸಗಳ ಫಲವಾಗಿ ಸೂರ್ಯನನ್ನು, ಸೂರ್ಯ-ಭೂಮಿ ಇವುಗಳ ಸಂಬಂಧವನ್ನು ಕುರಿತು ಸಂಗ್ರಹ ಮಾಡಿಕೊಂಡಿರುವ ಜ್ಞಾನ ಅಪಾರ.

(ನೋಡಿ- ಅಂತರರಾಷ್ಟ್ರೀಯ-ಭೂಭೌತ-ವರ್ಷ)

(ನೋಡಿ- ಅಂತರಿಕ್ಷ-ಸಂಶೋಧನೆ)

(ನೋಡಿ- ಉಪಗ್ರಹ,-ಕೃತಕ)