ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರಿಕ್ಷೀಯ ಟ್ರಾಂವೇ
ಅಂತರಿಕ್ಷೀಯ ಟ್ರಾಂವೇ
[ಸಂಪಾದಿಸಿ]ವಸ್ತುಗಳನ್ನು ಪೀಪಾಯಿಗಳಲ್ಲಿ (ಬಕೆಟ್ಟು) ತುಂಬಿ ಉಕ್ಕಿನಿಂದ ಮಾಡಿದ ದಪ್ಪ ಹಗ್ಗಗಳ ಮೇಲೆ ಜೋತುಹಾಕಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಭೂಮಿಯ ಆಧಾರವಿಲ್ಲದೆ ಯಂತ್ರದ ಸಹಾಯದಿಂದ ಸಾಗಿಸುವ ವಿಧಾನಕ್ಕೆ ಅಂತರಿಕ್ಷೀಯ ಸೂತ್ರಪಥ ಅಥವಾ ಅಂತರಿಕ್ಷೀಯ ಟ್ರಾಂವೇ ಎನ್ನಬಹುದು. ಭೂಮಿ ಹಳ್ಳತಿಟ್ಟು, ಬೆಟ್ಟಗುಡ್ಡ, ನದಿ ಕೊಳದಿಂದ ಕೂಡಿರುವಾಗ ಅತಿ ಸುಲಭವಾಗಿ ಲೋಹಗಳ ಅದಿರು ಅಥವಾ ಕಲ್ಲುಗಳನ್ನು ಅವು ಸಿಗುವ ಸ್ಥಳದಿಂದ ಗಣಿಗಳ ಅಥವಾ ಅಣೆಕಟ್ಟಿನ ಸ್ಥಳಗಳಿಗೆ ಟ್ರಾಂವೇಗಳ ಮೂಲಕ ಸಾಗಿಸುತ್ತಾರೆ. ದುಂಡಗೆ ದಪ್ಪನಾಗಿರುವ ಉಕ್ಕಿನ ಹಗ್ಗಗಳನ್ನು ವರ್ತುಳಾಕಾರದಲ್ಲಿ ಮನುಷ್ಯಶಕ್ತಿ ಅಥವಾ ವಿದ್ಯುತ್ಶಕ್ತಿಯಿಂದ ಸುತ್ತುವಂತೆ ಮಾಡುತ್ತಾರೆ. ಗಾಲಿಗಳನ್ನೊಳಗೊಂಡ ದೊಡ್ಡ ದೊಡ್ಡ ಪೀಪಾಯಿಗಳನ್ನು ಇಂಥ ಉಕ್ಕಿನ ಹಗ್ಗಗಳ ಮೇಲೆ ಜೋತುಹಾಕಿ ಅದಿರುಗಳನ್ನು ತುಂಬಿ ಸಾಗಿಸಬಹುದು. ಇಂಥ ಪೀಪಾಯಿಗಳು ಒಂದಕ್ಕಿಂತ ಜಾಸ್ತಿ ಇದ್ದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುತ್ತಿರುತ್ತವೆ. ವರ್ತುಳಾಕಾರದಲ್ಲಿ ಸುತ್ತುವುದರಿಂದ ಒಂದು ಕಡೆಯಲ್ಲಿ ಅದಿರುಗಳನ್ನು ಪೀಪಾಯಿಗಳಲ್ಲಿ ತುಂಬುವುದಕ್ಕೂ ಅದೇ ಸಂದರ್ಭದಲ್ಲಿ ಇನ್ನೊಂದು ಕಡೆಯಲ್ಲಿ ಅದಿರುಗಳನ್ನು ಖಾಲಿ ಮಾಡುವುದಕ್ಕೂ ಸಾಧ್ಯವಾಗುತ್ತದೆ.
ಸಾಮಾನ್ಯವಾಗಿ ಅಂತರಿಕ್ಷೀಯ ಟ್ರಾಂವೇಗಳನ್ನು ಗಣಿಗಳ ಪ್ರದೇಶದಲ್ಲಿ ಕಾಣಬಹುದು. ಭದ್ರಾವತಿಯ ಹತ್ತಿರವಿರುವ ಕೆಮ್ಮಣ್ಣುಗುಂಡಿಯ ಮೇಲಿನ ಕಬ್ಬಿಣದ ಅದಿರನ್ನು ಪೀಪಾಯಿಗಳಲ್ಲಿ ತುಂಬಿ ಹಗ್ಗಗಳ ಮೇಲೆ ಜೋತುಹಾಕಿ ವಿದ್ಯುತ್ ಶಕ್ತಿಯಿಂದ ತಿರುಗಿಸಿದಾಗ ಪೀಪಾಯಿಗಳು ವೇಗದಿಂದ ಚಲಿಸಿ ಕೆಮ್ಮಣ್ಣುಗುಂಡಿ ಗುಡ್ಡದ ಕೆಳಭಾಗಕ್ಕೆ ತಂದುಹಾಕುತ್ತವೆ.
ಭಾಕ್ರಾ ಅಣೆಕಟ್ಟಿನ ಪ್ರದೇಶದಲ್ಲಿ ಕಲ್ಲನ್ನು ಸಾಕಷ್ಟು ದೂರದಿಂದ ಅಣೆಕಟ್ಟಿನ ಪ್ರದೇಶಕ್ಕೆ ಸಾಗಿಸಲು, ಮೂರು ಅಥವಾ ನಾಲ್ಕು ಅಡಿ ಅಗಲದ ಚರ್ಮದ ಪಟ್ಟಿಯನ್ನು ಸುತ್ತುತ್ತಿರುವ ದುಂಡುಗಾಲಿಗಳ ಮೇಲೆ ಇರಿಸಿ ಚರ್ಮದ ಪಟ್ಟಿ ಚಲಿಸುವಂತೆ ಮಾಡಿ, ಅದರ ಮೇಲೆ ಕಲ್ಲುಗಳನ್ನಿಟ್ಟು, ಕೆಲಸದ ನಿವೇಶನದಲ್ಲಿ ಸುರಿದಿದ್ದಾರೆ. ಈ ತರದ ಏರ್ಪಾಡಿಗೆ ಚರ್ಮದ ಪಟ್ಟಿಯ ಮೇಲೆ ಸಾಗಿಸುವ ವಿಧಾನವೆನ್ನಬಹುದು (ಬೆಲ್ಟ್ ಕನ್ವೇಯರ್ಸ್).
ಇನ್ನು ಕೆಲವು ಸಂದರ್ಭಗಳಲ್ಲಿ ಪೀಪಾಯಿಗಳನ್ನು ಉಕ್ಕಿನ ದಪ್ಪ ಹಗ್ಗಗಳಿಂದ ಕಟ್ಟಿ ಯಂತ್ರಗಳ ಮೂಲಕ ಎತ್ತಿಹಿಡಿದು ಸುತ್ತಲೂ ತಿರುಗಿಸಲು ಸಾಧ್ಯವಾಗುವಂತೆ ಮಾಡಿ ನಿರ್ದಿಷ್ಟವಾದ ಸ್ಥಳಗಳಿಗೆ ಕೊಂಡೊಯ್ಯುತ್ತಾರೆ. ಈ ರೀತಿ ಏರ್ಪಾಡಿಗೆ ಸುತ್ತುವ ಟ್ರಾಂವೇ (ರೊಟೇಟಿಂಗ್ ಟ್ರಾಂವೇ) ಎನ್ನಬಹುದು.
ಕಂದರಗಳಿದ್ದಾಗ ವಸ್ತುಗಳನ್ನು ಸಾಗಿಸಲು ಗುಡ್ಡದಿಂದ ಗುಡ್ಡಕ್ಕೆ ರೈಲು ಕಂಬಿಗಳನ್ನು ಹಾಯಿಸಿ ಅದರ ಮೇಲೆ ಸಾಗಣೆ ಮಾಡುವುದುಂಟು.